ಸುಡು ಸುಡು ಬಿಸಿಲಿನ ಬೇಸಿಗೆಯ ಒಂದು ಮಧ್ಯಾಹ್ನ. ಸಿಮೆಂಟು ಕಾಡಿನ ಮಧ್ಯೆ ಅಪರೂಪಕ್ಕೆ ಅಲ್ಲಲ್ಲಿ ಕಾಣಿಸುವ ರಸ್ತೆ ಬದಿಯಲ್ಲಿರುವ ಒಂದೆರಡು ಮರಗಳೂ ಸಹ ತಲೆಬಾಗುವುದನ್ನು ಮರೆತು ತಟಸ್ಥ ಧ್ಯಾನಕ್ಕೆ ಶರಣಾಗಿವೆ. ಸೂರ್ಯೋದಯದ ನಂತರ ಆ ಊರಿನಲ್ಲಿ ಒಮ್ಮೆಯೂ ಗಾಳಿ ಬೀಸಿಲ್ಲ. ಒಂದೆಲೆಯೂ ಅಲುಗಿಲ್ಲ. ಮರದ ರೆಂಬೆಗಳು ಬಿಸಿಲ ಬೇಗೆಗೆ ಬೆಂದು, ಚಲನವಿಲ್ಲದೆ ನಿರ್ಜೀವ ವಸ್ತುವಿನಂತೆ (ಸತ್ತಂತೆ) ಮಲಗಿವೆ.
ಆ ಊರಿನ ಯಾವುದೋ ಒಂದು ಬೀದಿಯಲ್ಲಿನ ಒಂದು ಮೂಲೆಯಲ್ಲಿ ಆಗಷ್ಟೇ ಗೃಹ ಪ್ರವೆಶವೋ, ನಾಮಕರಣವೋ, ಅಥವಾ ಇನ್ನಾವುದೋ ಕಾರ್ಯಕ್ರಮವು ನಡೆದಿತ್ತು. ಬಂದ ಅಥಿತಿಗಳ ಔತಣಕೂಟವೂ ಮುಗಿಯಿತು. ಮನೆಕೆಲಸದಾಕೆ ಅತಿಥಿಗಳು ಉಂಡೆದ್ದು ಎಂಜಲೆಲೆಗಳನ್ನೆಲ್ಲ ಒಟ್ಟಾಗಿಸಿ ತಂದು. ಮೂಲೆಯ ತಿರುವಿನಲ್ಲಿರುವ ರಸ್ತೆಯ ಎಡಬದಿಗಿರುವ ಕಸದ ತಿಪ್ಪೆಗೆಸೆದು ಹೋದಳು.
ಆಕೆ ಅತ್ತ ಹೋಗಿದ್ದೇ ತಡ ಅಲ್ಲಿಗೆ ನಾಲ್ಕು ಗ್ರಾಮಸಿಂಹಗಳು ಹಾಜರ್. ಮಧ್ಯಾಹ್ನದ ವೇಳೆ ಯಾವೊತ್ತೂ ಬಾಗಿಲು ಹಾಕಿರುವ ಶೆಟ್ಟರಂಗಡಿಯ ಮುಂದಿನ ಕಲ್ಲುಬೆಂಚಿನ ಕೆಳಗೆ ನೆರಳಿನಲ್ಲಿ ಮಲಗಿದ್ದ ಕರಿಯನೂ ಕೂಡ ಅಲ್ಲಿಗೆ ಹಾಜರಾದ. ಒಟ್ಟು ಐದು ಗ್ರಾಮಸಿಂಹಗಳೂ ಹಸಿವಿಗೆ ಅದ್ದೂರಿ ಭೋಜನ ಸಿಕ್ಕ ಖುಷಿಯಲ್ಲಿ ನನಗಿಂತಲೂ ಮೊದಲು ಅವನು ತಿಂದು ಬಿಡ್ತಾನೆ. ಅಯ್ಯೋ ನಾನು ತಿನ್ನಬೇಕಿದ್ದ ಸಿಹಿಲಡ್ಡಿಗೆ ನೀನು ಬಾಯಿ ಹಾಕಿದೆಯಾ? ಲೋಫರ್, ಸ್ಟುಪಿಡ್ ಎಂದೆಲ್ಲ ಬೈದು ಕಚ್ಚಾಡಿಕೊಂಡೆ ಹೊಟ್ಟೆ ತುಂಬಿಸಿಕೊಳ್ಳತೊಡಗಿದವು.
ಅಷ್ಟರಲ್ಲೇ ಅನ್ನದಗುಳು ಕಣ್ಣಿಗೆ ಬಿದ್ದು ಕಾಗೆಯೊಂದು ತಿಪ್ಪೆಯ ಮೇಲೆ ಹಾರಾಡುತ್ತಾ “ಕಾಂವ್ ಕಾಂವ್” ಎಂದು ತನ್ನ ಬಳಗವನ್ನೆಲ್ಲ ಕೂಗಿ ಕರೆಯತೊಡಗಿತು. ಆ ಕೂಗು ಊರ ಹೊರಗಿನ ಎತ್ತರದ ಬೇವಿನ ಮರದವರೆಗೂ ಮುಟ್ಟಿ ತಕ್ಷಣ ಅಲ್ಲಿಗೆ ಹತ್ತಾರು ಕಾಗೆಗಳು ಒಟ್ಟಾಗಿ ಬಂದವು. ಆದರೆ ಒಂದು ಕಾಗೆಯನ್ನೂ ತಿಪ್ಪೆಯ ಮೇಲೆ ಕೂರಲು ಬಿಡದೆ “ಅಪರೂಪಕ್ಕೆ ಒಳ್ಳೆಯ ಊಟ ಸಿಕ್ಕಿದೆ. ನಮಗೇ ಸಾಲುತ್ತಿಲ್ಲ. ನಾವೇ ಕಚ್ಚಾಡಿಕೊಂಡು ತಿನ್ನುತ್ತಿದ್ದೇವೆ. ಜೊತೆಗೆ ನೀವು ಬೇರೆ. ಅದೂ ಇಡೀ ಕುಟುಂಬ ಪರಿವಾರದ ಜೊತೆಗೆ ಬಂಧು-ಬಳಗವನ್ನೆಲ್ಲ ಕರೆತಂದಿದ್ದೀರ ಹೊಗ್ರಲೋ” ಎಂದು ಕರಿಯ ಅವುಗಳನ್ನೆಲ್ಲ ಬೈಯುತ್ತಾ ದಬಾಯಿಸಿ ಓಡಿಸುತ್ತಿದ್ದ.
“ನನ್ಮಕ್ಕಳು ನೋಡು, ನಾನು ಮಾತ್ರ ಅವರನ್ನು ಓಡಿಸುತ್ತಿದ್ದೇನೆ. ನೀವು ಮಾತ್ರ ಒಳ್ಳೇ ಬೀದಿ ನಾಯಿಗಳು ತಿಂದ ಹಾಗೆ ತಿಂತಿದ್ದೀರಿ! ಓಡುಸ್ರೋ ಅವರನ್ನ” ಅಂತಂದು ತನ್ನ ಜೊತೆಗಿದ್ದ ನಾಲ್ಕು ಜನರಿಗೂ ಆಗಾಗ ಬೈಯುತ್ತ ಎಲೆಗೆ ಬಾಯಿ ಹಾಕುತ್ತಿದ್ದ. ಕೊನೆಗೆ ಆ ಐದು ಜನರು ತಮ್ಮೊಳಗೆ ಒಪ್ಪಂದವೊಂದನ್ನು ಮಾಡಿಕೊಂಡು, ಸರತಿಯಂತೆ ಕಾಗೆಗಳನ್ನು ಓಡಿಸತೊಡಗಿದರು. ಕಾಗೆಗಳು ಮಾತ್ರ ತಿಪ್ಪೆಯ ಮೇಲೆ ಹಾರಾಡುತ್ತಲೇ ಆ ಐದು ನಾಯಿಗಳು ತಿಂದು ಹೋದ ಮೇಲೆ ಉಳಿಯುವ ಅನ್ನದಗುಳುಗಳಿಗೆ ಆಸೆಗಣ್ಣಿನಿಂದ (ಹಸಿವಿನಿಂದ) ಕಾದವು.
ಐದು ಜನ ನಾಯಕರೂ ಕಾಗೆಗಳ ಮೇಲೆ ದಬ್ಬಾಳಿಕೆಯನ್ನು ನಡೆಸಿ ಗರ್ವದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿರುವಾಗಲೇ, ಅದೇ ರಸ್ತೆಯಲ್ಲಿ ಹಸಿವಿನಿಂದ (ಬಿಸಿಲಿನಿಂದ) ಬಳಲಿ ಬಲು ಭಾರದಿಂದ ಕಾಲುಗಳನ್ನೆಳೆದುಕೊಂಡು ಅವನು ಬಂದ. ಹಳೆಯ ಹರಕು ಬಟ್ಟೆ, ತನ್ನಿಷ್ಟದಂತೆ ಬೆಳೆಯಲು ಬಿಟ್ಟ ಸಿಕ್ಕು ಸಿಕ್ಕಾದ ತಲೆಗೂದಲು. ಯಾವ ಬೇಲಿಯೂ ಇಲ್ಲದೆ ಬೆಳೆದು ಋಷಿಮುನಿಯನ್ನು ನೆನಪಿಸುವಷ್ಟು ಉದ್ದದ ದಾಡಿ. ಇದು ಅವನ ವೇಷಭೂಷಣ. ಈ ಅವತಾರದಲ್ಲಿರುವ ಆಸಾಮಿಯನ್ನು ಹುಚ್ಚನೆನ್ನುವುದೇ ಸೂಕ್ತ. ಅದು ನಿಜವೂ ಕೂಡ.
ಅವನ ಕಣ್ಣಿಗೆ ತಿಪ್ಪೆಯಲ್ಲಿನ ಮೃಷ್ಟಾನ್ನ ಭೋಜನ ಬಿದ್ದದ್ದೇ ತಡ ಕೈಗೆ ಕಲ್ಲೆತ್ತಿಕೊಂಡು “ಛೆ…ಚೂ…ಕೇ…ಕೋ…” ಎಂದು ತನಗಷ್ಟೇ ತಿಳಿಯುವ ತನ್ನದೇ ಭಾಷೆಯಲ್ಲಿ ಡೊಂಕುಬಾಲದ ನಾಯಕರ ಮೇಲೆ ದಾಳಿಯಿಟ್ಟು, ಆ ಐದು ಜನ ನಾಯಕರೂ ತೆಪ್ಪಗೆ ಬಾಲ ಮುದುರಿಕೊಂಡು ಅತ್ತಿತ್ತ ಓಡಿದರು. ಹುಚ್ಚ ತನ್ನ ಬಹಳ ದಿನದ ಹಸಿವನ್ನು ನೀಗಿಸಿಕೊಂಡ. ಇಂತಹ ಒಳ್ಳೆಯ ಊಟ ಸಿಕ್ಕಿ ತಿಂಗಳೇ ಕಳೆದಿತ್ತು. ಕೊನೆಯ ಬಾರಿ ಇಂತಹ ಊಟ ಸಿಕ್ಕಿದ್ದು ರೈಲ್ವೆನಿಲ್ದಾಣದ ಹಿಂಬದಿಯ, ಮದುವೆ ಮಂಟಪದ ಮುಂದಿನ ಕಸದ ತೊಟ್ಟಿಯಲ್ಲಿ! ಈಗ ಮತ್ತೆ ಅಂತಹದೇ ಭರ್ಜರಿ ಭೋಜನ. ಅವನು ತಿನ್ನುತ್ತಿದ್ದರೆ ಡೊಂಕು ಬಾಲದ ನಾಯಕರು ಬಾಲ ಮುದುರಿಕೊಂಡು, ದೂರದಲ್ಲಿ ನಿಂತು ನೋಡುತ್ತಾ ಮನದಲ್ಲೇ ಅವನನ್ನು ಶಪಿಸುತ್ತಿದ್ದರು.
ಇನ್ನು ಹೆಚ್ಚು ನನ್ನಿಂದ ತುಂಬಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೊಟ್ಟೆಯು ಒಂದೆರಡು ಬಾರಿ “ಗಡರ್” ಎಂದು ತೇಗನ್ನು ಹೊರ ಹಾಕಿ ಎಚ್ಚರಿಸಿತು. ಆ ಸೂಚನೆಯನ್ನು ಆಲಿಸಿದ ಹುಚ್ಚ ಸಂತೃಪ್ತ ಭಾವದಿಂದ ಅಲ್ಲಿಂದೆದ್ದು ಹೊರಟ. ಅವನು ಹೋಗುವುದನ್ನೇ ಕಾಯುತ್ತಿದ್ದ್ದ ಐದು ಗ್ರಾಮಸಿಂಹಗಳೂ ಮತ್ತೆ ಎಂಜಲೆಲೆಗೆ ದಾಳಿಯಿಟ್ಟರೆ, ತಮ್ಮ ಸರದಿಗಾಗಿ ಕಾಯುತ್ತಾ ತಿಪ್ಪೆಯ ನೆತ್ತಿಯ ಮೇಲೆ ಕಾಗೆಗಳ ಗುಂಪು ಹಾರಾಡುತ್ತಲೇ ಇತ್ತು…
ಹೊಟ್ಟೆ ಬಿರಿಯುವಂತೆ ತಿಂದವನು ಮುಖ್ಯ ರಸ್ತೆಗಳನ್ನೆಲ್ಲ ಅಲೆದಾಡಿ, ಸರ್ಕಲ್ ನ ದಾಟಿ ಕೊನೆಗೆ ಬಸ್ ನಿಲ್ದಾಣದ ಹಿಂದಿನ ಬೀದಿಯ ಪುಟ್ ಪಾತ್ ನ ಮೇಲೆ ಮಲಗಿಬಿಟ್ಟ. ಮುಖವನ್ನು ಆಕಾಶಕ್ಕೆ ಮುಖಾ ಮುಖಿ ಹಾಕಿ, ಕೈ ಕಾಲು ಅತ್ತಿತ್ತೆಸೆದು ಸತ್ತವನಂತೆ ಬಿದ್ದವನ ಮೂತಿಗಂಟಿದ ಲಡ್ಡಿನ ಸಿಹಿ ವಾಸನೆಯ ಜಾಡು ಹಿಡಿದು, ನೊಣಗಳು ಗುಂಪಾಗಿ ಬಂದವು. ಒರೆಸದೆ ಮೆತ್ತಿಕೊಂಡಿದ್ದ ಸಿಹಿ ಎಂಜಲನ್ನು ನೆಕ್ಕುತ್ತಾ ತಮ್ಮ ಹಸಿವನ್ನು ನೀಗಿಸಿಕೊಂಡವು. ಸದಾ ಗಿಜಿಬಿಜಿ ಎನ್ನುತ್ತಿದ್ದ ರಸ್ತೆಯಲ್ಲಿ ಜನರು ಓಡಾಡುತ್ತಿದ್ದರು. ವಾಹನಗಳು ಓಡುತ್ತಿದ್ದವು. ಆದರೆ ಅಪರೂಪಕ್ಕೆ ಹೊಟ್ಟೆಬಿರಿಯುವಂತೆ ಗಡದ್ದಾಗಿ ತಿಂದಿದ್ದರಿಂದ ಹುಚ್ಚನು ಸವಿನಿದ್ರೆಯ ವಶನಾದ.
ಆ ನಿದ್ರೆಯಲ್ಲಿ ಅವನಿಗೆ ಕನಸೊಂದು ಬಿತ್ತು. ಆ ಕನಸಿನಲ್ಲಿ ಹಕ್ಕಿಗಳು ಈಜುತ್ತಿದ್ದವು, ಮೀನುಗಳು ಹಾರುತ್ತಿದ್ದವು! ನಾಯಿ ಘರ್ಜಿಸುತ್ತಿತ್ತು, ಸಿಂಹ ಬೊಗಳುತ್ತಿತ್ತು! ಕೋಗಿಲೆಗಳು ನರ್ತಿಸುತ್ತಿದ್ದವು, ನವಿಲುಗಳು ಹಾಡುತ್ತಿದ್ದವು!ಇವೆಲ್ಲದರ ನಡುವೆ ತಾನೊಂದು ಪಾರ್ಕಿನ ಕಲ್ಲುಬೆಂಚಿನ ಮೇಲೆ ಮಲಗಿರುವಂತೆ, ಅಲ್ಲಿಗೆ ಅವನ ಪ್ರೇಯಸಿ ಬಂದು ಅವನನ್ನೆಬ್ಬಿಸಿ ಉದ್ದವಾಗಿ ದಾಡಿಬಿಟ್ಟ ಕೆನ್ನೆಗೆ ಮುತ್ತಿಟ್ಟಂತ ಸಿಹಿಯಾದ ಕನಸದು! ಇಂದಿನ ಇವನ ಈ ಸ್ಥಿತಿಗೆ ಅವಳೇ ಕಾರಣ. ತುಂಬಾ ವರ್ಷಗಳು ಪ್ರಾಣದಷ್ಟು ಪ್ರೀತಿಸಿ, ಒಂದಿನ ಏನನ್ನೂ ಹೇಳದೆ ಇವನಿಂದ ದೂರ ನಡೆದುಬಿಟ್ಟಳು. ಅಂದಿನಿಂದ ಇವನು ಹೀಗೆ ಹುಚ್ಚನಾಗಿ, ಕಳೆದು ಹೋದ ತನ್ನ ಹುಡುಗಿಯನ್ನು ಹುಡುಕುತ್ತಲೇ ಇದ್ದಾನೆ. ಅವಳು ಸಿಗುತ್ತಿಲ್ಲ. ಆ ಹುಡುಗಿ ಇವನನ್ನು ಬಿಟ್ಟು ಹೋಗಲು ಕಾರಣ ನನಗೂ ಗೊತ್ತಿಲ್ಲ. ನಿಮಗೂ ಹೇಳುವುದಿಲ್ಲ! ಆ ಸತ್ಯ ಅವನಿಗಷ್ಟೇ ಗೊತ್ತಿರಲಿ!!
ಸವಿ ನಿದ್ದೆಯಲ್ಲಿದ್ದವನಿಗೆ ಎಚ್ಚರವಾಗಿದ್ದು ಚುರ್ರೆನ್ನುವಂತೆ ಮೈ ಮೇಲೊಂದು ಏಟು ಬಿದ್ದಾಗ. ಕಣ್ಣುಬಿಟ್ಟು ನೋಡಿದರೆ ದಪ್ಪ ಮೀಸೆಯ ಪೋಲಿಸ್ ಪೇದೆಯೊಬ್ಬ ನಿಂತಿದ್ದ. “ಏಯ್ ಹುಚ್ಚು ನನ್ನ ಮಗನೇ, ಯಾಕೋ ಇಲ್ಲಿ ಮಲಗಿದ್ದೀಯಾ? ಬೇರೆಲ್ಲಾದರು ಹೋಗಿ ಸಾಯಿ” ಅಂತಂದು ಜೋರು ಧನಿಯಲ್ಲಿ ಗದರಿದ.
ವಿಚಿತ್ರವಾಗಿ ಮೈ ಕೆರೆದುಕೊಳ್ಳುತ್ತಾ ಮೇಲೆದ್ದು ನಿಂತವನು ಪೇದೆಯನ್ನೊಮ್ಮೆ ದುರುಗುಟ್ಟಿ ನೋಡಿದ. “ಏಯ್ ಬೋ…ಮಗನೇ ಮತ್ತೆ ಏನೋ ಗುರಯಿಸ್ತೀಯ? ಹೋಗೋ” ಅಂತಂದು ಪೇದೆ ಮತ್ತೊಂದು ಬಿಟ್ಟ. ಹುಚ್ಚ ತನಗೆ ಬಂದ ಭಾಷೆಯಲ್ಲಿ “ಕೇ… ಕೂ….ಪ್…ಸಾ..” ಎಂದು ಪೇದೆಯನ್ನು ಶಪಿಸಿತ್ತಾ ಅಲ್ಲಿಂದ ಹೆಜ್ಜೆಗಳನ್ನು ಮುಂದಿಟ್ಟ.
ಹೀಗೆ ಅಲ್ಲಿಂದ ಹೊರಟವನು ಸಂಜೆಯ ವೇಳೆಗೆ ಖಲೀಲಿನ ಟೀ ಅಂಗಡಿಯ ಮುಂದೆ ಹೋಗಿ ನಿಂತ. ಖಲೀಲ ಅವನಿಗೆ ಟೀ ಕೊಟ್ಟ. ಸುಡುತ್ತಾ ಹಬೆಯಾಡುವ ಟೀಯನ್ನು “ಉಫ್ ಉಫ್” ಎಂದು ಗಾಳಿಯೂದುತ್ತ ಗುಟುಕರಿಸುತ್ತಿದ್ದರೆ, ಖಲೀಲನ ಮನಸ್ಸು ಅಯ್ಯೋ ಪಾಪ ಅಂತಂದು ಮಿಡಿಯಿತು. ಇದು ಪ್ರತೀದಿನದ ಆ ಹೊತ್ತಿನ ಖಲೀಲನ ದಿನಚರಿಯಲ್ಲೊಂದು. ಪ್ರತೀದಿನ ಸಂಜೆ ಇವನು ಎಲ್ಲಿದ್ದರೂ ಖಲೀಲನ ಟೀ ಅಂಗಡಿಯ ಮುಂದೆ ಹಾಜರಾಗುತ್ತಾನೆ. ಹುಚ್ಚು ನನ್ನ ಮಗಂದು ಪಾಪ ಇದಕ್ಕೂ ನನ್ನಂತೆ ಯಾರೂ ದಿಕ್ಕಿಲ್ಲವೆಂದು ಟೀ ಕೊಡುತ್ತಾನೆ.
ಖಲೀಲನ ಅಂಗಡಿಯ ಟೀ ಸಮಾರಾಧನೆಯು ಮುಗಿಯುವ ಹೊತ್ತಿಗೆ ಸೂರ್ಯನು ಪಶ್ಚಿಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಹಗಲೆಲ್ಲ ನಿಗಿನಿಗಿ ಉರಿದು ಒಂದಷ್ಟು ಜನರಿಂದ ಉಗಿಸಿಕೊಂಡವನಿಗೆ ಒಂದು ಕ್ಷಣ ಜಿಗುಪ್ಸೆ ಮೂಡಿ ಹೀಗೆಲ್ಲ ಮಾಡಿಕೊಂಡನಾ? ಗೊತ್ತಿಲ್ಲ! ಕತ್ತಲು ಸ್ವಲ್ಪ ಸ್ವಲ್ಪವೇ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿತ್ತು. ಹುಚ್ಚನು ಖಲೀಲನ ಟೀ ಅಂಗಡಿಯಿಂದ ಮುಂದೆ ನಡೆದ.
ಹುಚ್ಚನು ಪೇಟೆಯ ಸುಮಾರು ಬೀದಿಗಳನ್ನು ಅಲೆದಾಡಿದ. ಅವನ ಕಣ್ಣಿಗೆ ಮನುಷ್ಯರೆಲ್ಲರೂ ಮುಖವಾಡದ ಗೊಂಬೆಗಳಂತೆ ಕಂಡಿರಬಹುದು! ಅದಕ್ಕೆ ತಲೆಕೆಟ್ಟು ಯಾರ ಸಹವಾಸವೂ ಬೇಡವೆಂದು ಸ್ಮಶಾಣವೊಂದರ ಒಳಹೊಕ್ಕ…!
ನಿರ್ಭೀತಿಯಿಂದ ಸಾಲು ಸಾಲು ಸಮಾಧಿಗಳ ನಡುವೆ ನಡೆದು, ಕೊನೆಗೆ ನಯವಾದ ನುಣುಪು ಟೈಲ್ಸ್ ಹೊದಿಸಿ ಕಟ್ಟಿದ್ದ ಸಮಾಧಿಯೊಂದರ ಮೇಲೆ ಬಿದ್ದುಕೊಂಡ. ಬಾನಂಗಳದಲ್ಲಿ ಹಚ್ಚಿಟ್ಟ ಕೋಟ್ಯಾಂತರ ಆಕಾಶದೀಪಗಳು ಇವನ ಕಣ್ಣಿಗೆ ಬಿದ್ದವು. ಆದರಿವನಿಗೆ ಪುಳಕವಾಗಲಿಲ್ಲ! ಅಚ್ಚರಿಯೂ ಆಗಲಿಲ್ಲ. ಯಾವೊಂದು ವಿಶೇಷ ಭಾವನೆಯೂ ಅವನಲ್ಲಿ ಮೂಡಲಿಲ್ಲ. “ಅರೆ! ನಮ್ಮನ್ನು ನೋಡಿಯೂ ಪುಳಕಗೊಳ್ಳದೆ ಕೊರಡಿನಂತೆ ಬಿದ್ದಿರುವ ಈ ಮನುಷ್ಯನ್ಯಾರಪ್ಪಾ?” ಎಂದು ಬಾನಂಗಳದ ಆಕಾಶದೀಪಗಲೆಲ್ಲವೂ, ಇವನತ್ತಲೇ ಅಚ್ಚರಿಯಿಂದ ಇಣುಕಿ ನೋಡತೊಡಗಿದವು.
ಅದಕ್ಕಿವನು ತಲೆಕೆಡಿಸಿಕೊಳ್ಳಲಿಲ್ಲ. ದೊಡ್ಡದಾಗಿ ಬಾಯಿತೆರೆದು, ಆಕಳಿಸಿ ಮೈ ಕೈ ಕೆರೆದುಕೊಳ್ಳುತ್ತಾ ಕಣ್ಮುಚ್ಚಿ ನಿದ್ದೆಯ ಮೆಟ್ಟಿಲೇರಿಬಿಟ್ಟ.
ಜಗತ್ತಿಗೇ ಬೆಳಗಾಯಿತು. ನಿನ್ನೆಯಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ಸೂರ್ಯನು ಇಂದು ಮತ್ತಷ್ಟು ಉರಿಯುವ ನಿರ್ಧಾರದೊಂದಿಗೆ ಮರು ಹುಟ್ಟು ಪಡೆದು ಬಂದಿದ್ದ. ಹಕ್ಕಿಪಕ್ಷಿಗಳು ತಮ್ಮ ಗೂಡುಬಿಟ್ಟು ಆಹಾರವನ್ನರಸುತ್ತಾ ಹೊರಟವು. ಸತ್ತಂತಿದ್ದ ಊರಿಗೆ ಮರು ಜೀವ ಬಂದು ಚಟುವಟಿಕೆಗಳು ಶುರುವಾದವು. ಬೆಳಗಿನ ಎಳೆಬಿಸಿಲು ಮೈ ಮೇಲೆ ಬಿದ್ದು ಮೈ ಚುರ್ರೆನ್ದಾಗ ಹುಚ್ಚನಿಗೆ ಎಚ್ಚರವಾಯಿತು. ದೊಡ್ಡದಾಗಿ ಆಕಳಿಸಿ ಮೇಲೆದ್ದು ತನ್ನದೇ ಭಾಷೆಯಲ್ಲಿ “ಕಾ… ಸಾ.. ಪ…ಕೇ…” ಎಂದೆಲ್ಲಾ ಏನನ್ನೋ ಹೇಳಿಕೊಳ್ಳುತ್ತಾ ಸಮಾಧಿಯ ಮೇಲಿಂದೆದ್ದು ಊರ ಕಡೆಗೆ ಹೊರಟ.
ಕಥೆಯನ್ನು ಇನ್ನು ನಾನು ಹೆಚ್ಚು ಎಳೆಯುವುದಿಲ್ಲ ಬೇಗ ಮುಗಿಸುತ್ತೇನೆ! ಇವನು ಹುಚ್ಚನಾಗಿ ಹೀಗೆ ಬೀದಿ ಬೀದಿಗಳನ್ನು ಅಲೆಯುತ್ತಾ ತನ್ನ ಹುಡುಗಿಯನ್ನು ಹುಡುಕುತ್ತಿದ್ದಾನೆ. ಆದರೆ ಆ ಹುಡುಗಿ ಇವನು ರಾತ್ರಿಯೆಲ್ಲ ನೆಮ್ಮದಿಯಿಂದ ಮಲಗಿದ್ದ ಈ ನಯವಾದ ನುಣುಪು ಟೈಲ್ಸ್ ಹೊದ್ದ ಸಮಾಧಿಯೊಳಗೆ ಬೆಚ್ಚಗೆ ಮಲಗಿದ್ದಾಳೆ!
“ಏಯ್ ಕೋತಿ ಎಲ್ಲೋ ಹೋಗ್ತಿದ್ದೀಯಾ? ಇಲ್ನೋಡೋ ನಾನಿಲ್ಲೇ ಇದ್ದೀನಿ! ಪ್ಲೀಸ್ ಒಂದೇ ಒಂದ್ಸಲ ಹಿಂತಿರುಗಿ ನೋಡೋ…”
ಆ ಹುಡುಗಿ ಸಮಾಧಿಯೊಳಗಿಂದ ಕೂಗುತ್ತಲೇ ಇದ್ದಾಳೆ. ಆದರೆ ಆ ಕೂಗು ಈ ಹುಚ್ಚನ ಕಿವಿಗೆ ಬೀಳುತ್ತಲೇ ಇಲ್ಲ. ಸುಮ್ಮನೇ ಸ್ಮಶಾಣದ ಗೇಟಿನ ಕಡೆಗೆ ಹೆಜ್ಜೆ ಹಾಕುತ್ತಲೇ ಇದ್ದಾನೆ….!
ನೈಜತೆಯನ್ನು ಅಕ್ಷರರೂಪಕ್ಕಿಳಿಸುವ ಶೈಲಿ ಮತ್ತು ನವೀನ ನಿರೂಪಣೆಯು ಮನಕ್ಕೆ ಮದುವನ್ನು ನೀಡಿದಂತಾಯಿತು. ಎಕ್ ಲವ್ ಕಹಾನಿ ಕಾ ಬಾತ್ ಅಚ್ಚಾ ಹೈ ಭಾಯಿಸಾಬ್…..ಶುಭಕಾಮನಾ ಆಪಕೊ….
thnk u sir…
a mad lover's day out!
ನೈಜ ಮತ್ತು ಸರಾಗ ನಿರೂಪಣೆ.
ಅಚ್ಚರಿಗೊಳಿಸುವ ಕ್ಲೈಮ್ಯಾಕ್ಸ್.
ಕಹಾನಿ ಮನಮುಟ್ಟುವಂತಿದೆ.
ಧನ್ಯವಾದಗಳು…
“ಕಾ… ಸಾ.. ಪ…ಕೇ…” ಅಂದರೆ ಏನು ಸರ್ ?:-) :-):-)…………..ನಿರೂಪಣೆ ಮನೋಜ್ಞವಾಗಿದೆ
ಅದು ಯಾರಿಗೂ ಅರ್ಥವಾಗದ ಹುಚ್ಚರ ಭಾಷೆ, ನನಗೂ ಅರ್ಥವಾಗಿಲ್ಲ!!!
[…] (ಪಂಜು ಅಂತರ್ಜಾಲ ಪತ್ರಿಕೆ, 22-09-2013ರಲ್ಲಿ ಹೊಸ ದಿಗಂತ ದಿನಪತ್ರಿಕೆ , ಆಗಸ್ಟ್ 7, 2013 ಮಂಗಳ ವಾರಪತ್ರಿಕೆ ಗಳಲ್ಲಿ ಪ್ರಕಟಗೊಂಡ ಕಥೆ. ಪಂಜು ಲಿಂಕ್ ಇಲ್ಲಿದೆ – https://www.panjumagazine.com/?p=2557 ) […]