ಅನಿ ಹನಿ

ಒಂದು ಬಸ್ಸಿನ ಕಥೆ: ಅನಿತಾ ನರೇಶ್ ಮಂಚಿ ಅಂಕಣ

ಆಗಷ್ಟೇ ಕಣ್ಣಿಗೆ ನಿದ್ದೆ ಹಿಡಿಯುತ್ತಿತ್ತು. 
ಹತ್ತಿರದ ಮಂಚದಲ್ಲಿ ಮಲಗಿದ್ದ ಗೆಳತಿ ’ಗಂಟೆ ಎಷ್ಟಾಯಿತೇ’ ಎಂದಳು. ಪಕ್ಕದಲ್ಲಿದ್ದ ಟಾರ್ಚನ್ನು ಹೊತ್ತಿಸಿ ’ಹತ್ತೂವರೆ’ ಎಂದೆ. 
’ನಾಳೆ ಬೇಗ ಎದ್ದು ಬಸ್ಸಿಗೆ ಹೋಗ್ಬೇಕಲ್ಲ .. ಬೇಗ ಮಲಗು’ ಎಂದಳು. 
ಸಿಟ್ಟು ಒದ್ದುಕೊಂಡು ಬಂತು. ಮಲಗಿದ್ದವಳನ್ನೇ ಏಳಿಸಿ ಬೇಗ ಮಲಗು ಅನ್ನುತ್ತಾಳಲ್ಲಾ ಇವಳು ಅಂತ.
ಮಾತಿಗೆ ಮಾತು ಬೆಳೆಸಿದರೆ ಇನ್ನೂ ಬರಬೇಕಿದ್ದ ನಿದ್ದೆಯೂ ಹಾರಿ ಹೋದರೆ ಎಂದು ಹೆದರಿ ಮತ್ತೆ ಕಣ್ಣಿಗೆ ಕಣ್ಣು ಕೂಡಿಸಿದೆ. 
ಬೇಕಾದ ಕೂಡಲೇ ಓಡಿ ಬಂದು ಆಲಂಗಿಸಲು ಅದೇನು ಪ್ರೇಮಿಯೇ? 
ಸಾಕಷ್ಟು ಕಾಡಿಸಿ ಪೀಡಿಸಿ ಸನಿಹಕ್ಕೆ ಬಂತು. 
ಇದ್ದಕ್ಕಿದ್ದಂತೇ ’ಅಯ್ಯೋ’ ಎಂಬ ಸ್ವರ ಪಕ್ಕದ ಮಂಚದಿಂದ 
ದಡಕ್ಕನೆ ಎದ್ದು ಕುಳಿತು ’ಏನಾಯ್ತೇ’ ಅಂದೆ. 

’ಅಲರಾಂ ಇಡೋದಿಕ್ಕೆ ಮರ್ತಿದ್ದೀಯಾ ನೀನು ..ಆಮೇಲೆ ನಾಳೆ  ಎಚ್ಚರ ಆಗದಿದ್ರೆ .. ಪುಣ್ಯ .. ನಂಗೆ  ಈಗಲಾದ್ರು  ನೆನಪಾಯ್ತು .. ’
 ’ಆಗ್ಲೇ ಇಟ್ಟಿದ್ದೀನಲ್ಲ ತಾಯೀ.. ಅದನ್ನು ಕೇಳೋಕೆ ಪುನಃ ಎಬ್ಬಿಸಿದೆಯಾ..’  ಕರ್ಮ ಎಂದು ತಲೆ ಚಚ್ಚಿಕೊಂಡೆ. 
’ಹೌದಾ ಸರಿ ಬಿಡು’ ಎಂದು ಏನೂ ಆಗದವಳಂತೆ ಗೋಡೆಯ ಕಡೆ ತಿರುಗಿ ಮಲಗಿದಳು. ಸ್ವಲ್ಪ ಹೊತ್ತಿನಲ್ಲೆ ನೀರು ಬಾರದ ಕೊಳಾಯಿಯ ಶಬ್ಧದಂತಹಾ ಗೊರಕೆಗಳು ನನ್ನನ್ನು ನಿದ್ರಾಹೀನೆಯಾಗುವಂತೆ ಮಾಡಿದವು. 
ಅಂತೂ ಇಂತು ನೆಟ್ಟಗೆ ಮಲಗಿ ವಾರೆ ಮಲಗಿ ಏನೆಲ್ಲಾ ಕಸರತ್ತು ಮಾಡಿ ಬಾರದ  ನಿದ್ದೆಯನ್ನು ಬರಿಸಿಕೊಂಡಿದ್ದೆ. 
ಹತ್ತಿರದಿಂದ ಯಾರೋ ನನ್ನ ಮೈ ಮುಟ್ಟಿ ಏಳಿಸುತ್ತಿರುವಂತೆ ..
ಉರಿಯುತ್ತಿದ್ದ ಕಣ್ಣುಗಳನ್ನು ಬಲವಂತವಾಗಿ ತೆರೆಯುತ್ತಾ ಅಷ್ಟು ಬೇಗ ಬೆಳಗಾಯ್ತಾ ಎಂದುಕೊಂಡೆ. 
ಇಡೀ ಕೋಣೆ ಕತ್ತಲೆಯಲ್ಲೇ ಮುಳುಗಿತ್ತು. 

’ಸ್ವಲ್ಪ ಟ್ಯಾಕ್ಸ್ ಕಟ್ಲಿಕ್ಕೆ ಟಾಯ್ಲೆಟ್ ಗೆ ಹೋಗ್ಬೇಕು ಬಾರೇ’ ಎಂದಳು. 
ನಾಲ್ಕು ಭಾರಿಸಿಯೇ ಬಿಡಬೇಕು ಅನ್ನುವ ಸಿಟ್ಟು ಬಂದರೂ ನುಂಗಿಕೊಂಡೆ. ಮೊದಲೇ ಹೆದರು ಪುಕ್ಕಲಿ ಅವಳು. ಇನ್ನು ನಾನು ಹೋಗಲಿಲ್ಲ ಅಂದ್ರೆ ಅವಸರಕ್ಕೆ ಇಲ್ಲೇ ಒಂದು ಎರಡು ಎಲ್ಲಾ  ಮಾಡಿದರೆ ಎಂಬ ಭಯಕ್ಕೆ ಎದ್ದು ಅವಳ ಹಿಂದೆಯೇ ಹೋದೆ.
’ಹೊರಗೇ ನಿಂತಿದ್ದೀಯಾ ತಾನೇ’ ಎಂದಳು. 
ಸಿಟ್ಟು ತಣಿಯದ ಕಾರಣ ಮೌನವಾಗಿದ್ದೆ. ಬಾಗಿಲು ಸ್ವಲ್ಪ ಓರೆ ಮಾಡಿ ನಾನು ನಿಂತಿದ್ದನ್ನು ನೋಡಿ ಬಾಗಿಲು ಮುಚ್ಚಿಕೊಂಡಳು. 

 ಮಲಗಿದಾಗಲೆಲ್ಲಾ ಬಾರದೇ ಕಾಡುವ ನಿದ್ದೆ ಈಗ ನಾನು ನಿನ್ನ ಸಂಗಾತಿ ಎನ್ನುವಂತೆ  ಗೋಡೆಗೊರಗಿ ನಿಂತವಳನ್ನು ಅಲ್ಲೇ ತೂಕಡಿಸುವಂತೆ ಮಾಡುತ್ತಿತ್ತು.  
ಒಳಗಿನಿಂದ ಅವಳು ’ಏನಾದ್ರು ಮಾತಾಡೇ.. ಇಲ್ಲಾಂದ್ರೆ ನಂಗೆ ಹೆದರಿಕೆ ಆಗುತ್ತೆ’ ಅಂದಳು. 
’ನಾನು ನಾಳೆಯೇ ಈ ಹಾಸ್ಟೆಲ್ ಬಿಟ್ಟು ಬೇರೆದಕ್ಕೆ ಶಿಫ್ಟ್ ಮಾಡಿಕೊಳ್ತೀನಿ’ ಎಂದೆ ಕೋಪದಲ್ಲಿ. 
ಬೇಗನೆ ಬಾಗಿಲು ತೆರೆದು ಹೊರ ಬಂದಳು. 
ನನ್ನಿಂದ ಮೊದಲು ರೂಮ್ ಸೇರಿ ಹೊದಿಕೆ ಎಳೆದುಕೊಂಡಳು.
ಬೆಳಗಾದದ್ದೇ ತಡ. ಅವಳ ಧಿಮಾಕೇ ಬೇರೆ.
ಬೇಗ ಹೊರಡು ನಿನ್ನಿಂದಾಗಿ ತಡ ಆಗುತ್ತೆ ಅಂತೆಲ್ಲ ಹೇಳಿದರೂ ನಾಕಾರು ಬಾರಿ ಕನ್ನಡಿಯೆದುರು ಬಂದು ನಿಂತು ತನ್ನ ಹೆರಳು ಸರಿ ಪಡಿಸಿಕೊಂಡಳು. ಕಣ್ಣ ಕಾಡಿಗೆ ತುಟಿಯ ಕೆಂಪು ಎಲ್ಲದರ ಮೇಲೂ ಕಣ್ಣಾಡಿಸಿದಳು. ಸರಿ ಇದೆಯೇನೇ ಎಲ್ಲಾ ..? ಎಂದು ಹತ್ತಾರು ಬಾರಿ ನನ್ನನ್ನು ಕೇಳಿ ನನ್ನ ಹತ್ತಿರ ಬಯ್ಯಿಸಿಕೊಂಡಳು. 
 
ಬಸ್ ಬರಲು ಇನ್ನೂ ಸಮಯವಿದೆ ಎಂದು ತಿಳಿದಿದ್ದ ನನ್ನದಿನ್ನೂ ತಿಂಡಿ ತಿಂದೇ ಆಗಿರಲಿಲ್ಲ.  ’ಸ್ವಲ್ಪ ಕೂಡಾ ಟೈಮ್ ಸೆನ್ಸ್ ಇಲ್ಲ ಕಣೇ ನಿಂಗೆ.. ನಾನು ಹೋಗಿ ಬಸ್ ಸ್ಟ್ಯಾಂಡಿನಲ್ಲಿರ್ತೀನಿ .. ಬೇಗ ಬಾ.. ಮತ್ತೆ ಬಸ್ ಮಿಸ್ಸಾದ್ರೆ ನೀನೇ ಹೊಣೆ’ ಎಂದು ಕಣ್ಣು ದೊಡ್ಡದು ಮಾಡಿ ಚಪ್ಪಲಿ ಮೆಟ್ಟಿ ಹೊರಗಡಿಯಿಟ್ಟಳು. 
ಹಾಸ್ಟೆಲ್ ಬಾಗಿಲು ಎಡವಿ ಬಿದ್ದರೆ ಸಾಕು ಸಿಗುವ ಬಸ್ ಸ್ಟಾಂಡಿನಲ್ಲಿ ಕಾದು ಕೂರುವ ಶಿಕ್ಷೆ ಯಾರಿಗೆ ಬೇಕು ಎಂದು ನಾನು ’ನಿಧಾನವೇ ಪ್ರಧಾನ’ ಅಂತ ಆರಾಮವಾಗೇ ಇದ್ದೆ. ಅದೂ ಅಲ್ಲದೇ ಆ ಹೊತ್ತಿಗೆ ಬರುವ ಬಸ್ಸು ದಾರಿಯುದ್ದಕ್ಕೂ ಹಾಕುತ್ತಾ ಬರುತ್ತಿದ್ದ ಹಾರ್ನಿಗೆ ಊರಿಡೀ ಬೆಳಗಾಗುತ್ತಿತ್ತು. 
ಸ್ವಲ್ಪ ಹೊತ್ತಿನಲ್ಲಿ ಆತಂಕದ ಮುಖ ಹೊತ್ತು ಮರಳಿದಳು.
’ಅಲ್ವೇ.. ಇವತ್ಯಾಕೆ ಇನ್ನೂ ಬಸ್ ಬರ್ಲಿಲ್ಲಾ? ಎಲ್ಲೋ ಹಾಳಾಗಿದೆ ಅನ್ಸುತ್ತೆ. ನಮ್ ಕ್ಲಾಸಿನ ರೀನಾಗೆ ಫೋನ್ ಮಾಡಿ ಕೇಳೋಣ್ವಾ.. ಅವಳ ಮನೆಯೆದುರೇ ಹಾದು ಬರೋದಲ್ವಾ ಈ ಬಸ್’ ಎಂದಳು.

ಕಟ್ಟಿದ್ದ ವಾಚ್ ನೋಡಿ .. ’ಸುಮ್ನಿರು.  ಬಸ್ ಬರೋದಿಕ್ಕೆ ಇನ್ನೂ ಸಮಯ ಇದೆ. ಒಳಗೆ ಕೂತ್ಕೋ’ ಎಂದೆ. 
’ಇಲ್ಲಾಮ್ಮಾ.. ಆಮೇಲೆ ಬಸ್ ಹೋಗ್ಬಿಟ್ರೆ ಕಷ್ಟ’ ಎಂದಳು.
ಏನಾದ್ರು ಮಾಡ್ಕೋ ಎಂದು ಸುಮ್ಮನಾದೆ. 
ಮತ್ತೆ ಹೊರಗಿಳಿದವಳು ಹತ್ತು ನಿಮಿಷದಲ್ಲೇ ವಾಪಸ್ ಬಂದಳು.
’ಇನ್ನೂ ಬರ್ಲಿಲ್ಲ ಕಣೇ.. ನಿಜಕ್ಕೂ ರೀನಾಗೆ ಫೋನ್ ಮಾಡಿಕೇಳೋದೇ ವಾಸಿ’ ಎಂದು ನಂಬರ್ ಡಯಲ್ ಮಾಡಹೊರಟವಳು ’ಥತ್ ಈ ಫೋನ್ ಧರಿದ್ರದ್ದು ..ಇದಕ್ಕು ಇವತ್ತೇ ರೋಗ ಬಡೀಬೇಕಾ.. ಏನೂ ಸದ್ದೇ ಬರ್ತಿಲ್ಲ ಕಣೇ’ ಎಂದಳು. 

ಹತ್ತಿರ ಹೋಗಿ ನೋಡಿದರೆ ರಾತ್ರೆ ಹಾಸ್ಟೆಲ್ಲಿನ ಆಂಟಿ  ಗೋಡೆಯಿಂದ ಕಿತ್ತು ಪಕ್ಕಕ್ಕಿರಿಸಿದ್ದ ಪ್ಲಗ್ ಕಣ್ಣಿಗೆ ಬಿತ್ತು. ಅದನ್ನು ಸಿಕ್ಕಿಸಿಕೊಟ್ಟೆ.

ಮೊದಲಿಗೆ ನಿಂತು ಮಾತನಾಡಲು ಶುರು ಮಾಡಿದವಳು ಈಗ ಕುಳಿತೇ ಪಟ್ಟಾಂಗಕ್ಕೆ ಮೊದಲಿಟ್ಟಳು. ಸುದ್ದಿ ಬಸ್ಸಿನ ಸಮಯದಿಂದ ಶುರು ಆಗಿದ್ದು ಅದರ ಹಿಂದಿನ ಇತಿಹಾಸವನ್ನು, ಯಾವಾಗೆಲ್ಲ ಬಸ್ ತಡವಾಗಿ ಬಂದು ಏನೇನಾಗಿದೆ ಎಂಬುದೆಲ್ಲಾ ವಿಷದವಾಗಿಯೂ ವಿಷಾಧವಾಗಿಯೂ ವಿಸ್ತಾರವಾಗುತ್ತಲೇ ಸಾಗಿತು.
’ಬಸ್ಸು ಬಂತು ಬಾರೇ’  ಎಂದು ಅವಳ  ಹೆಗಲು ಮುಟ್ಟಿ  ಹೇಳಿದ ನನ್ನ  ಮಾತು ಅವಳ ಕಿವಿಯೊಳಗೆ ಇಳಿಯದೇ ಅವಳಿನ್ನೂ ಮಾತಿನಲ್ಲೇ ಮುಳುಗಿದ್ದರೆ ನಾನು ಬಸ್ಸೇರಿ ಸೀಟು ಹಿಡಿದಿದ್ದೆ. ಅದೃಷ್ಟವಿದ್ದರೆ ಅವಳು ಈ ಬಸ್ಸಿನಲ್ಲಿ ಅಲ್ಲದಿದ್ದರೂ ಮುಂದಿನ ಬಸ್ಸಿನಲ್ಲಾದರು ನನ್ನ ಜೊತೆ ಸೇರಿಯಾಳೆಂಬ ನಂಬಿಕೆಯಿಟ್ಟು.. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಒಂದು ಬಸ್ಸಿನ ಕಥೆ: ಅನಿತಾ ನರೇಶ್ ಮಂಚಿ ಅಂಕಣ

  1. ಎಲ್ಲರಿಗೂ ಇಂತಹ ಗೆಳತಿಯರು-ಗೆಳೆಯರು ಇರುತ್ತಾರೆ. ಎಷ್ಟು ಬೈದರೂ ಬೈಸಿಕೊಂಡು, ಕಾಟ ಕೊಡುತ್ತಾ.. ಇನ್ನು ಇವರನ್ನು ಸಹಿಸಿಕೊಳ್ಳಲೇ ಬಾರದು ಎಂದುಕೊಂಡರೂ, ಸಾಧ್ಯವಿಲ್ಲ. ಗೆಳೆತನವೆಂದರೆ ಇದೇ!!! ಚೆನ್ನಾಗಿದೆ ಮಂಚಿ ಮೇಡಂ.

  2. ಅವ್ರು ಹಿಂದ್ಲು ಬಸ್ಸಿಗೆ ಬಂದಾರು… ಬಿಡಿ.. ನೀವ್ ಮುಂದ್ ನಡೀರಿ ಮೇಡಂ..

Leave a Reply

Your email address will not be published. Required fields are marked *