ಹೃದಯಶಿವ ಅಂಕಣ

ಒಂದು ಫ್ರೆಂಡ್ ರಿಕ್ವೆಸ್ಟ್: ಹೃದಯಶಿವ

ಫೇಸ್ ಬುಕ್ಕಿನಲ್ಲಿ ಅವಳು ಕಳಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಕಂಡೊಡನೆ ಇವನೊಳಗೆ ಅಚ್ಚರಿ ಹಾಗೂ ಆತಂಕದ ಭಾವನೆಗಳು ಒಟ್ಟೊಟ್ಟಿಗೇ ಉದ್ಭವಿಸಿದವು. ಮೂರು ವರ್ಷಗಳ ಸುದೀರ್ಘ ಅಂತರದ ಬಳಿಕ ಆಕೆ ಮತ್ತೆ ಹತ್ತಿರವಾಗುತ್ತಿದ್ದಾಳೆ. ಕನ್ಫ಼ರ್ಮ್ ಬಟನ್ ಒತ್ತಿಬಿಡ್ಲಾ? ಹಲವು ಜಿಜ್ಞಾಸೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಸಂಭವ ಎದುರಾಗಬಹುದು. ತಾನಿಲ್ಲದ ಜಗತ್ತಿನಾಚೆ ಬರೋಬ್ಬರಿ ಮೂರು ವರ್ಷ ಬದುಕಿ, ಮುನಿಸು, ಕೋಪ, ಹಠ ಇತ್ಯಾದಿಗಳನ್ನು ಮರೆತು ಬರುತ್ತಿದ್ದಾಳೆ. ಆಕೆಯನ್ನು ಹೇಗೆ ಸ್ವೀಕರಿಸಲಿ? ಗೊಂದಲದಿಂದಲೇ ಕನ್ಫ಼ರ್ಮ್ ಬಟನ್ ಒತ್ತಿದ.

ಒಂದು ತಣ್ಣನೆ ಸಂಜೆ ಆನ್ ಲೈನಿನಲ್ಲಿದ್ದಾಗ ವಿಸ್ಮಯವೆಂಬಂತೆ ಮಾತಿಗೆ ಎಳೆದಳು,
"ಹಾಯ್"
"ಹೇಳಿ"
"ಹೇಗಿದ್ದೀರಾ?"
"ಚೆನ್ನಾಗಿದ್ದೇನೆ. ನಿಮ್ಮ ಲೈಫ್ ಹೇಗಿದೆ?"
"ಮ್ ! ನಡೀತಾ ಇದೆ"
"ಮೊಬೈಲ್ ಕಳೆದುಹೋಯ್ತು ನಿಮ್ಮ ನಂಬರಿನೊಂದಿಗೆ. ನೀವೂ ಕೂಡ ಕಳೆದುಹೋದ್ರಿ. ನಿಮಗೆ ಇ-ಮೇಲ್ ಕಳಿಸಿದ್ದೆ. ಓದಿದ್ದೀರಿ ಅನ್ಕೋತೀನಿ"
"ನಾನು ಇ-ಮೇಲ್ ಚೆಕ್ ಮಾಡಿ ತುಂಬಾ ವರ್ಷಗಳಾಯ್ತು"

ವಾಕ್ಯದ ಕೊನೆಯಲ್ಲಿ ಆಕೆ ಕಳಿಸಿದ್ದ ಸ್ಮೈಲ್ ಸಿಂಬಲ್ ನೋಡಿ ಆಕೆ ನಿಜಕ್ಕೂ ಬದುಕಿನಲ್ಲಿ ಸುಖವಾಗಿರಬಹುದು ಅಂತ ಭಾವಿಸಿದ. ಹಾಗೇನೆ ತನ್ನ ಮೇಲಿನ ಕೋಪವೂ ಕಡಿಮೆಯಾಗಿರಬಹುದೆಂದೂ ತನಗೆ ತಾನೇ ಸಮಾಧಾನ ಮಾಡಿಕೊಂಡ. ಅವಳೊಡನೆ ಹೇಗೆ ಮಾತು ಮುಂದುವರಿಸಬೇಕೆಂದು ಯೋಚಿಸಿದ. ಮೂರು ವರ್ಷಗಳಲ್ಲಿ ಆಕೆ ತುಸು ಮಾಗಿದ್ದಳು. ತುಸು ಆರೋಗ್ಯವಂತೆಯೂ, ಸುಖಿಯೂ ಎಂಬುದನ್ನು ಅವಳ ಪ್ರೊಫೈಲ್ ಪಿಕ್ಚರ್ ಹೇಳುತ್ತಿತ್ತು. ಕಳೆದ ಮೂರು ವರ್ಷಗಳಲ್ಲಿ ಆಕೆ ಎಲ್ಲಿದ್ದಳು? ಏನು ಮಾಡುತ್ತಿದ್ದಳು? ಪ್ರಶ್ನೆಗಳು ಹಿಗ್ಗುತ್ತಾ ಹೋದಂತೆ ಹಳೆಯ ನೆನಪುಗಳು ತಲೆಯಲ್ಲಿ ಓಡಾಡತೊಡಗಿದವು.

"ನಿಮ್ಮ ಚಿತ್ರಗಳು ನ್ಯಾಚುರಲ್ಲಾಗಿರ್ತವೆ. ಇದೆಲ್ಲ ಹೇಗೆ ಸಾಧ್ಯ?" ಅವಳು ಒಮ್ಮೆ ಚಿತ್ರಸಂತೆಯಲ್ಲಿ ಕೇಳಿದ್ದಳು.

ಆ ಪರಿಚಯ ಪರಸ್ಪರ ನಂಬುರುಗಳನ್ನು ಪಡೆದುಕೊಳ್ಳುವಂತೆ ಮಾಡಿ, ಎಸ್ಸೆಮ್ಮೆಸ್ ನಿಂದ ಶುರುವಾದ ಭಾವನೆಗಳ ವಿನಿಮಯ ಗಂಟೆಗಟ್ಟಲೆ ಮೊಬೈಲಿನಲ್ಲಿ ಮಾತಾಡುವವರೆಗೆ ಸಾಗಿ, ಮಾತು ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೇಮವಾಗಿ ಮಾರ್ಪಟ್ಟು ನಡುರಾತ್ರಿಯ ಮೊಬೈಲ್ ಮಾತುಗಳು ಸಲಿಗೆಗೆ ಎಡೆಮಾಡಿಕೊಟ್ಟು ಒಂದು ಮಳೆಗಾಲದ ಸಂಜೆ ಅವರಿಬ್ಬರು ಎದುರು ಬದುರು ನಿಲ್ಲುವಂತೆ ಮಾಡಿದ್ದವು. ಅಲ್ಲಿಂದಾಚೆಗೆ ಅವರಿಬ್ಬರ ನಡುವೆ ನಡೆದ ಘಟನೆಗಳು ಹಲವಾರು. ಭೇಟಿ, ಮಾತು, ಸ್ಪರ್ಶ, ಆಲಿಂಗನ, ಚುಂಬನ, ಮಿಲನ… ಹೀಗೆ ಅವರಿಬ್ಬರ ನಡುವೆ ಏನೆಲ್ಲಾ ನಡೆದುಹೋಗಿದ್ದವು! ತಪ್ಪುಸರಿಗಳನ್ನು ತಕ್ಕಡಿಯಲ್ಲಿಟ್ಟು ತೂಗುವಲ್ಲಿ ಇಬ್ಬರೂ ಸೋತಿದ್ದರು. ಅಷ್ಟರಲ್ಲಿ ಒಂದಾಗಿದ್ದರು, ಎರಡು ದಿಕ್ಕುಗಳು ಒಂದೆಡೆ ಸಂಧಿಸುವಂತೆ.

"ಇವತ್ತು ಸಂಜೆ ಸಿಕ್ತೀರಾ?" ಅದೊಂದು ಬೆಳಗ್ಗೆ ಆಕೆ ಫೋನಿನಲ್ಲಿ ಕೇಳಿದ್ದಳು. "ಸಿಕ್ಲೇಬೇಕು, ಏನೋ ಮಾತಾಡಬೇಕಿದೆ".
"ಸಿಗೋಕೆ ಟ್ರೈ ಮಾಡ್ತೀನಿ. ಇವತ್ತು ಯಾವುದೋ ಒಂದು ಕೆಲಸದ ಒತ್ತಡದಲ್ಲಿದ್ದೀನಿ. ತುಂಬಾ ಪ್ರೆಷರ್ ಇದೆ. ಸಿಗಲಿಲ್ಲ ಅಂದ್ರೆ ಬೇಜಾರು ಮಾಡ್ಕೋಬೇಡಿ. ಪ್ರಯತ್ನವಂತೂ ಮಾಡ್ತೀನಿ".

ಅವಳು ಫೋನ್ ಕಟ್ ಮಾಡಿ ಸ್ವಿಚ್ ಆಫ್ ಮಾಡಿದಳು. ಹುಚ್ಚಿಯಂತೆ ಕಿರುಚಿದಳು. ಬಹಳ ಹೊತ್ತು ಒಬ್ಬಳೇ ಅತ್ತಳು. ಮತ್ತೆ ಫೋನ್ ಆನ್ ಮಾಡಿದಾಗ ಮೆಸೇಜು ಬಂದಿತ್ತು.
"ಸಾರಿ !"

ಅವಳು ಮೆಸೇಜ್ ಗೆ ರಿಪ್ಲೈ ಮಾಡುವ ಗೋಜಿಗೆ ಹೋಗಲಿಲ್ಲ. ಮತ್ತೆ ಸ್ವಿಚ್ ಆಫ್ ಮಾಡಿದಳು. ಈ ಕಡೆಯಿಂದ ಈತ ಕರೆ ಮಾಡಲು ಪ್ರಯತ್ನಿಸುತ್ತಲೇ ಇದ್ದ. ಪ್ರಯತ್ನಿಸುತ್ತಲೇ ಹೋದ. ಯಾವಾಗ ಕಾಲ್ ಮಾಡಿದರೂ ಅವಳ ನಂಬರು ಸ್ವಿಚ್ ಆಫ್ ಆಗಿರುತ್ತಿತ್ತು. ಮೆಸೇಜುಗಳ ಮೇಲೆ ಮೆಸೇಜು ಕಳಿಸಿದ. ಉತ್ತರ ಬರಲಿಲ್ಲ. ಸಿಟ್ಟು ತಡೆಯಲಾರದ ಅವಳು ಆ ಸಿಮ್ ಕಾರ್ಡನ್ನು ಬೆಂಕಿಗೆ ಹಾಕಿ ಬೇರೊಂದು ಸಿಮ್ ಕೊಂಡುಕೊಂಡಿದ್ದಳು. ಬೇರೊಂದು ಜಗತ್ತನ್ನು ಹುಡುಕಿಕೊಂಡಿದ್ದಳು. ಹುಡುಗರೆಲ್ಲ ಮೋಸಗಾರರು, ಸ್ವಾರ್ಥಿಗಳು, ದೇಹಸುಖಕ್ಕಾಗಿ ಹುಡುಗಿಯರೊಂದಿಗೆ ಸಲಿಗೆ ಬೆಳಿಸಿಕೊಳ್ಳುವ ಲಂಪಟರು ಎಂಬ ತೀರ್ಮಾನಕ್ಕೆ ಬಂದಿದ್ದಳು. ಕಾಲ ಸರಿಯುತ್ತಿದ್ದಂತೆಯೇ ನಿಧಾನವಾಗಿ ಮಾಗತೊಡಗಿದಳು. ಸಿಟ್ಟು, ಹಠಮಾರಿತನ ಒಂದೊಂದಾಗಿ ಕಳಚಿಕೊಳ್ಳತೊಡಗಿದವು. ತನ್ನ ಓದು ಮುಗಿಯುತ್ತಿದ್ದಂತೆಯೇ ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಳು. ಪ್ರತಿ ತಿಂಗಳು ಪಿ.ಜಿ.ಗೆ ಕಟ್ಟಲೆಂದು ಅಮ್ಮ ಊರಿನಿಂದ ಕಳಿಸುತ್ತಿದ್ದ ಹಣದ ಜರೂರತ್ತು ಅಷ್ಟರಲ್ಲಿ ಬೇಡವಾಗಿತ್ತು. ತಾನೇ ಅಮ್ಮನಿಗೊಂದು ಬ್ಯಾಂಕ್ ಅಕೌಂಟು ಮಾಡಿಕೊಟ್ಟು, ಅದರಲ್ಲಿ ಹಣ ಹಾಕುತ್ತಿದ್ದಳು. ಅಮ್ಮ ಬೇಕಾದಾಗ ಡ್ರಾ ಮಾಡಿಕೊಳ್ಳುವಂತೆ ಬ್ಯಾಂಕಿನಿಂದ ಎ.ಟಿ.ಎಂ ಕಾರ್ಡು ಕೊಡಿಸಿದ್ದಳು. ತನ್ನ ಬಟ್ಟೆಬರೆಗಳು ಮಾಡ್ರನ್ ಸ್ವರೂಪ ಪಡೆದುಕೊಂಡಿದ್ದವು. ವೀಕೆಂಡ್ ಬರುತ್ತಿದ್ದಂತೆಯೇ ಕಲೀಗ್ಸ್ ಜೊತೆ ಸಮುದ್ರ ತೀರ, ಕಾಡು, ಜಲಪಾತ ಹೀಗೆಲ್ಲಾ ಸುತ್ತತೊಡಗಿದಳು. ಕೆಲವೊಮ್ಮೆ ಗೆಳತಿಯರ ಒತ್ತಾಯಕ್ಕೆ ವೈನು ಕೂಡ ಕುಡಿದಿದ್ದಳು. ಯಾವುದೋ ಡಾನ್ಸ್ ಟ್ರೂಪ್ ಸೇರಿಕೊಂಡು ಒಂದೆರಡು ಟಿ.ವಿ. ಶೋಗಳಲ್ಲೂ ಕಾಣಿಸಿಕೊಂಡಳು. ತನ್ನ ಬದುಕನ್ನು ಯಥಾವತ್ತು ತೆರೆದಿಡುವ ಹಟಕ್ಕೆ ಬಿದ್ದವಳಂತೆ ಫೇಸ್ ಬುಕ್ಕಿನಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡತೊಡಗಿದಳು. ಸ್ನೇಹಿತರ ಪಟ್ಟಿಯೂ ಬೆಳೆಯತೊಡಗಿತು. ಅವಳ ಫೋಟೋಗೆ ಸಾವಿರಾರು ಲೈಕ್ ಗಳು ಬೀಳತೊಡಗಿದವು. ಮೆಸೇಜ್ ಇನ್ಬಾಕ್ಸ್ ತುಂಬ ಹುಡುಗರ ಮೊಬೈಲ್ ನಂಬರುಗಳು ತುಂಬಿಕೊಂಡವು. ಆಕೆ ಮಾತ್ರ ಹುಷಾರು ಹುಡುಗಿ. ಜಾಗ್ರತೆಯಿಂದಿದ್ದಳು. ಯಾರನ್ನು ಎಲ್ಲಿಡಬೇಕೋ ಅಲ್ಲಿಟ್ಟಿದ್ದಳು.

ಇತ್ತ, ಏಕಾಕಿತನದಿಂದ ಈತ ಖಿನ್ನನಾಗತೊಡಗಿದ. ರಾತ್ರಿ ಪೂರ್ತಿ ಕುಡಿಯುತ್ತಿದ್ದ. ದಿನಕ್ಕೆ ನಲವತ್ತಕ್ಕೂ ಹೆಚ್ಚು ಸಿಗರೇಟು ಸೇದತೊಡಗಿದ. ಊರೂರು ಅಲೆಯತೊಡಗಿದ. ಯಾವುದೋ ರಾಜ್ಯದ ಯಾವುದೋ ಊರಿನ ಯಾವುದೋ ಲಾಡ್ಜಿನ ರೂಮು ಹೊಕ್ಕಿ ಹಗಲುರಾತ್ರಿಗಳೆನ್ನದೆ ಕುಡಿಯತೊಡಗಿದ. ಆಳದ ಯಾತನೆಗಳಿಗೆ ಬಣ್ಣ ಬಳಿದು ಚಿತ್ರವಾಗಿಸಿದ. ಗಡ್ಡ ಮೀಸೆಗಳು ಬೆಳೆಯುತ್ತಾ ಹೋದಂತೆ ತನ್ನೊಳಗಿನ ಸ್ವಗತಗಳೂ ಬೆಳೆಯುತ್ತ ಹೋದವು. ಮಧ್ಯರಾತ್ರಿ ಎದ್ದು ಕೂತು ಒಬ್ಬನೇ ಮಾತಾಡತೊಡಗಿದ. ಹಾಡುಹಗಲೇ ರಸ್ತೆ ಮಧ್ಯದಲ್ಲಿ ತಲೆ ಸುತ್ತಿ, ಕಣ್ಣು ಮಂಜಾದಂತಾಗಿ ಗಕ್ಕನೆ ನಿಂತು ಬಿಡುತ್ತಿದ್ದ. ಸಮುದ್ರದೊಂದಿಗೆ ಮಾತಿಗಿಳಿಯುತ್ತಿದ್ದ. ಆಕಾಶಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದ. ಈ ನಡುವೆ ಹತ್ತಾರು ಬಾರಿ ಅವಳಿಗೆ ಇ-ಮೇಲ್ ಕಳಿಸಿದ. ಅವಳ ಕಡೆಯಿಂದ ಉತ್ತರ ಬರಲೇ ಇಲ್ಲ. ಇದೊಂದು ಪುಟ್ಟ ಫ್ಲಾಶ್ ಬ್ಯಾಕ್!

"ಆರ್ ಯೂ ಬ್ಯುಸಿ?" ಅವಳು ಚಾಟ್ ಮುಂದುವರಿಸಿದ್ದಳು.
"ಇಲ್ಲ, ಹೇಳಿ"
"ಈಗಲೂ ನಿಮ್ಮ ಚಿತ್ರಗಳನ್ನು ಅಲ್ಲಲ್ಲಿ ನೋಡ್ತೀನಿ. ಈ ಮೊದಲು ನನ್ನ ಗಮನಕ್ಕೆ ಬಂದಿರದಿದ್ದ ಆಧ್ಯಾತ್ಮದ ಸೂಕ್ಷ್ಮಗಳು ನಿಮ್ಮ ಇತ್ತೀಚಿನ ಚಿತ್ರಗಳಲ್ಲಿ ಕಾಣ್ಸುತ್ತೆ. ಏನಾಯ್ತು?
"ಹಾಗೇನೂ ಇಲ್ಲ. ಕಾಲ ಉರುಳ್ತಾ ಹೋದಂತೆ ಮನುಷ್ಯನ ಭಾವನೆಗಳೂ ಮಾಗುತ್ವೆ. ವಿಶೇಷವಾಗಿ ನನ್ನಂಥ ಅಬ್ಬೇಪಾರಿ ಕಲಾವಿದರ ಮಟ್ಟಿಗೆ ಇಂಥದೆಲ್ಲಾ ಸಹಜ"
"ಓ ಹಾಗಾ? ಅದಿರ್ಲಿ, ಈಗಲೂ ಆ ಸ್ಮಶಾನಕ್ಕೆ ಹೋಗ್ತಿರ್ತಿರಾ… ಆ ಗೋರಿಗಳ ಮೇಲೆ ಕೂತು ಚಿತ್ರ ಬರೀತಿರಾ?"
"ಹೌದು, ನನ್ನ ಬದುಕಿನ ಕ್ರಮದಲ್ಲಿ ಅಷ್ಟಾಗಿ ಯಾವುದೇ ಬದಲಾವಣೆಯಾಗಿಲ್ಲ. ಒಂದಿಷ್ಟು ಹೊಸದಾಗಿ ಬದುಕಿನ ಭಾಗವಾಗಿವೆಯಷ್ಟೇ. ಕೆಲವೊಂದು ಶೂನ್ಯ ತುಂಬೋಕೆ ಕೆಲವೊಂದರಿಂದ ಮಾತ್ರ ಸಾಧ್ಯ" ಅಂತ ಹೇಳಿ ಒಂದು ಗುಟುಕು ವ್ಹಿಸ್ಕಿ ಹೀರಿ, ಸುರುಳಿ ಸುರುಳಿ ಸಿಗರೇಟು ಹೊಗೆ ಬಿಟ್ಟ.
"ಆ ಸ್ಮಶಾನ ನನಗೆ ಆಗಾಗ ನೆನಪಾಗ್ತಾ ಇರುತ್ತೆ. ಒಂದು ಸಲ ಅಲ್ಲಿಗೆ ಹೋಗಬೇಕು ಅನ್ನಿಸುತ್ತೆ. ಜೊತೆಗೆ ನೀವಿರಬೇಕು" ಅವಳ ಮೆಸೇಜು ಬಂತು.

ಆ ಸ್ಮಶಾನದಲ್ಲಿ ಪ್ರತಿಕ್ಷಣ ಸಾಯುತ್ತಾ, ತನ್ನ ಚಿತ್ರಗಳ ಮೂಲಕ ಮತ್ತೆ ಮತ್ತೆ ಹೊಸ ಮನುಷ್ಯನಾಗಿ ಹುಟ್ಟುತ್ತೇನೆಂದು ಆತ ಹೇಳಬೇಕು ಅಂದುಕೊಳ್ಳುವಷ್ಟರಲ್ಲಿ ಆಫ್ ಲೈನ್ ಗೆ ಹೋಗಿದ್ದಳು.

***

ಎರಡು ದಿನಗಳ ನಂತರ ಸ್ಮಶಾನದಲ್ಲಿ ಎದುರಾದ ಈತನ ಕೈಗೆ ಒಂದು ಕಾರ್ಡ್ ಕೊಟ್ಟಳು.
"ಪ್ಲೀಸ್, ನೀವು ಬರಲೇಬೇಕು"
ಅಷ್ಟು ಹೇಳಿ ಒಂದು ಗೋರಿಯ ಮೇಲೆ ಕುಳಿತುಕೊಂಡಳು. ಆಕೆಯ ಬೆನ್ನಿಗೆ ಬೆನ್ನು ಮಾಡಿ ಈತನೂ ಕುಳಿತು ಸಿಗರೇಟು ಹಚ್ಚಿದ. ಕಾರ್ಡ್ ಓಪನ್ ಮಾಡಲಿಲ್ಲ.

"ಮದುವೆ ಎಂಬುದು ಎಷ್ಟು ಪವಿತ್ರ?" ಕೇಳಿದಳು.
"ಗೊತ್ತಿಲ್ಲ" 
"ಈ ಮೂರು ವರ್ಷ ನಾನು ಎಲ್ಲಿದ್ದೆ? ಹೇಗೆ ಬದುಕಿದ್ದೆ? ಅಂತ ನೀವು ಕೇಳಲೇ ಇಲ್ಲ. ನಿಮ್ಮಲ್ಲಿ ಪ್ರಶ್ನೆಗಳೇ ಇಲ್ವಾ?" 
"ಪ್ರಶ್ನೆಗಳು ನಮ್ಮೊಳಗೇ ಹುಟ್ಟುತ್ತವೆ. ಉತ್ತರಗಳೂ ನಮ್ಮೊಳಗೇ ಅಡಗಿರುತ್ತವೆ, ನಮಗ್ಯಾಕೆ ಅವುಗಳ ಉಸಾಬರಿ?" ತಿರುಗಿ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ. 

ಕ್ಷಣವೂ ತಡಮಾಡದೆ ತುಟಿ ಮೇಲೆ ಹಿತವಾಗಿ ತುಟಿಯೊತ್ತಿ ದುಪ್ಪಟದ ತುದಿಯಿಂದ ಕಣ್ಣೊರೆಸಿಕೊಂಡಳು. ಆತ ಬಿಗಿದಪ್ಪಿ ತಲೆಯನ್ನು ನೇವರಿಸಿದ. ಮಳೆ ನಿಧಾನವಾಗಿ ಹನಿಯಲಾರಂಭಿಸಿತು. ಓಪನ್ ಮಾಡದ ಲಗ್ನಪತ್ರಿಕೆಯೊಳಗೆ ಎರಡು ಹೆಸರುಗಳಿದ್ದವು. ಒಂದು ಇವನದು, ಒಂದು ಅವಳದು. ಮಳೆ ಹುಚ್ಚೆದ್ದು ಸುರಿಯತೊಡಗಿತು. ಕತ್ತಲು ನಿಧಾನವಾಗಿ ಆವರಿಸುತ್ತಿದ್ದಂತೆಯೇ ನಾಲ್ಕು ಕಣ್ಣುಗಳಲ್ಲೂ ಹಿಂದೆಂದೂ ಕಾಣದಂಥ ಬೆಳಕು.
-ಹೃದಯಶಿವ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “ಒಂದು ಫ್ರೆಂಡ್ ರಿಕ್ವೆಸ್ಟ್: ಹೃದಯಶಿವ

  1. ಹಿಂದೆಂದೂ ಕಾಣದ "ಬೆಳಕು" ಅದ್ಬುತ ಸಾಲುಗಳ ಗಮಕ. ಅಭಿನಂದನೆಗಳು….

     

  2. ಸರ್ ನಿಮ್ಮ ಅನುಮತಿಯಂದಿಗೆ, ಈ ಕತೆಯನ್ನು ಕಿರುಚಿತ್ರ ಮಾಡಲು ಬಯಸುತ್ತೇನೆ. ದಯವಿಟ್ಟುು ಉತ್ತರಿಸಿ

  3. ಆಹಾಹಾಹಹ! ಸಖ್ಖತ್ ಬರ್ದಿದೀರ.. ತುಂಬಾ ಚೆನ್ನಾಗಿ ಬರೆದಿದ್ದೀರಿ, ಧನ್ಯವಾದಗಳು!

Leave a Reply

Your email address will not be published. Required fields are marked *