ಸೂರ್ಯ ಪುತ್ರರಾಗಿ ಬಿಟ್ಟಿರುವ ನಮಗೆಲ್ಲ, ಸಿಗೋದು ಒಂದೇ ಒಂದು ದಿನ ವಾರಾಂತ್ಯ ರಜೆ. ಆ ರಜೆಯನ್ನೇ ಹೊಂದಿಸಿಕೊಂಡ ಪ್ರವಾಸಕ್ಕೆ ಸಿದ್ದವಾದರೇ, ಖಂಡಿತ ಒಂದೇ ದಿನದಲ್ಲಿ ಆರು ಸುತ್ತಾಣಗಳನ್ನ ಬೆಂಗಳೂರಿಗೆ 75 ಕಿಲೋ ಮೀಟರ್ ದೂರದ ಚಿನ್ನದ ನಾಡು ಕೋಲಾರ ಜಿಲ್ಲೆಯ ಸುತ್ತಮುತ್ತಲಿನಲ್ಲಿ ನೋಡಬಹುದು. ಧಾರ್ಮಿಕ ಸ್ಥಳಗಳಾದ ಈ ಪ್ರವಾಸಿತಾಣಗಳಿಗೆ ಭೇಟಿ ಕೊಟ್ಟು, ಭಕ್ತಿಯ ಭಾವನೆಯನ್ನ ಮನದಲ್ಲಿ ತುಂಬಿಕೊಳ್ಳುತ್ತಾ, ಸಂಭ್ರಮದಲ್ಲಿ ಒಂದೇ ಒಂದು ರಜೆಯ ಮಜೆಯನ್ನ ಅನುಭವಿಸಬಹುದು.
ಜಾಲೀ ರೈಡ್ ಮಾಡೋ ಪ್ರವಾಸ ಹೊರಟರೂ, ಸಂಸಾರ ಸಮೇತರಾಗಿ ಹೊರಟರೂ, ಪ್ರಿಯತಮೆಯ ಜೊತೆಗೆ ತೆರಳಿದರೂ, ಈ ತಾಣಗಳೂ, ಅತ್ಯಂತ ಸಂತಸವನ್ನ ನೀಡುತ್ತವೆ. ಈ ಆರು ತಾಣಗಳನ್ನ ಹೇಗೆ..? ಎಲ್ಲಿಂದ ಹೊರಟು ತೊಂದರೆಯಾಗದಂತೆ ನೋಡಬಹುದು ಅಂದರೇ, ಒಂದು ಸ್ಥಳವನ್ನೂ ಮಿಸ್ ಮಾಡದಹಾಗೇ ನೋಡಬಹುದು. ಆ ತಾಣಗಳ ಪಟ್ಟಿಯೇ ಅಂತರಗಂಗೆ ಬೆಟ್ಟ, ಕೋಟಿಲಿಂಗೇಶ್ವರ, ಬಂಗಾರ ತಿರುಪತಿ ವೆಂಕಟೇಶ್ವರ, ಮುಳುಬಾಗಿಲು ಆಂಜನೇಯ ಸ್ವಾಮಿ ಮತ್ತು ಕುರುಡುಮಲೆ ಗಣೇಶ. ಬೆಂಗಳೂರಿನಿಂದ ಓಲ್ಡ್ ಮದ್ರಾಸ್ ರಸ್ತೆಯ ಮೂಲಕ ಕೆ.ಆರ್.ಪುರಂ, ಹೊಸಕೋಟೆ ಮಾರ್ಗವಾಗಿ ಕೋಲಾರಕ್ಕೆ ತೆರಳಿದರೇ, ಈ ಎಲ್ಲಾ ಸ್ಥಳಗಳಿಗೆ ತೆರಳಬಹುದು.
1. ಅಂತಗಂಗೆ ಬೆಟ್ಟ
ಕೋಲಾರದ ಸಮೀಪ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಅಂತರಗಂಗೆ ಬೆಟ್ಟ, ಪ್ರಕೃತಿ ಸೌಂದರ್ಯದೊಂದಿಗೆ ಪ್ರವಾಸಿಗರನ್ನ ಸೆಳೆಯುವ ತಾಣ. ಶತಶೃಂಗ ಪರ್ವತವೆಂದೇ ಕರೆಯುವ ಈ ಬೆಟ್ಟದಲ್ಲಿ, ಕಾಶೀವಿಶ್ವೇಶ್ವರ ಸ್ವಾಮಿ ದೇವಸ್ಥಾನ, ಗಣೇಶನ ವಿಗ್ರಹ ಹಾಗೂ ಬಸವಣ್ಣನ ಬಾಯಿಯಿಂದ ನೀರು ಬರುವುದು ಇಲ್ಲಿನ ವಿಶೇಷ. ಈ ನೀರಿನ ಕಾರಣದಿಂದಾಗಿ ಅಂತರಗಂಗೆ ಎಂಬ ಹೆಸರು ಬಂದಿದ್ದು, ಪ್ರವಾಸಿಗರನ್ನ, ಪ್ರಕೃತಿ ಪ್ರಿಯರನ್ನ ಇತ್ತ ಬರಸೆಳೆಯುತ್ತದೆ.
ಅಂತಗಂಗೆ ಬೆಟ್ಟ
2. ಚೊಕ್ಕಹಳ್ಳಿ ಗಣೇಶ
ಅಂತರಗಂಗೆ ಬೆಟ್ಟದ ಕಾಶೀ ವಿಶ್ವೇಶ್ವರ ಸ್ವಾಮಿಗೆ ನಮಿಸಿದ ನಂತ್ರ, ಅಲ್ಲಿಂದ ಕೋಲಾರ ಬಸ್ ನಿಲ್ದಾಣಕ್ಕೆ ತೆರಳಿ, ಕೋಲಾರ-ದೇವನ ಹಳ್ಳಿ ಮಾರ್ಗವಾಗಿ ನಿಮ್ಮ ಪ್ರಯಾಣ ಆರಂಭಿಸಿದರೇ, ಸುಮಾರು 8 ಕಿಲೋ ಮೀಟರ್ ಸಾಗಿದಾಗ ಸಿಗುವುದೇ ಚೊಕ್ಕಹಳ್ಳಿ ಗಣೇಶ. ಸುಮಾರು 54 ಅಡಿ ಎತ್ತವಿರುವ ಈ ಗಣೇಶ, 1998ರಲ್ಲಿ, ಸ್ವಾಮಿ ತೇಜೋಮಯಾನಂದಜೀ ಅವರಿಂದ ನಿರ್ಮಾಣಗೊಂಡಿದ್ದು. ಇಂತಹ ಮೂರ್ತಿಯನ್ನು ಶಿವಮೊಗ್ಗದ ಖ್ಯಾತ ಶಿಲ್ಪಿ ಕಾಶೀನಾಥ ನಿರ್ಮಿಸಿದ್ದಾರೆ. ಈ ಮೂರ್ತಿಯ ಸಮೀಪ ಪಳೆಯುಳಿಕೆಯ ಮರವನ್ನ ರಕ್ಷಿಸಿಡಲಾಗಿದ್ದು, ಅದನ್ನೂ ನೋಡಿ, ಆ ಮರದ ಇತಿಹಾಸದ ಬಗ್ಗೆ ಅಲ್ಲಿಯೇ ಹಾಕಿರುವ ಸೂಚನಾ ಫಲಕದಲ್ಲಿ ಓದಿದರೇ ಖಂಡಿತಾ ಆಶ್ಚರ್ಯ ನಿಮ್ಮ ಮನದಲ್ಲಿ ಹೊಕ್ಕು ಮುಂದಿನ ಪ್ರವಾಸಿ ತಾಣದತ್ತ ಹೆಜ್ಜೆ ಹಾಕುವಂತಾಗಿತ್ತದೆ.
ಪಳೆಯುಳಿಕೆಯ ಮರ
3. ಕೋಟಿಲಿಂಗೇಶ್ವರ
ಬಂಗಾರಪೇಟೆ ತಾಲೂಕಿನ, ಬೇತಮಂಗಲ ಹೋಬಳಿಗೆ ಸೇರಿದ ಒಂದು ಪುಟ್ಟ ಗ್ರಾಮವಾದ ಕಮ್ಮಸಂದ್ರದಲ್ಲಿ ಈ ಶ್ರೀ ಕೋಟಿ ಲಿಂಗೇಶ್ವರ ಕ್ಷೇತ್ರವಿದೆ. ಸುಮಾರು 30 ವರ್ಷಗಳ ಹಿಂದೆ ಶಿವನ ಕೃಪೆಯಿಂದ ಸೃಷ್ಠಿಯಾದ ಈ ಪ್ರವಾಸಿ ತಾಣಕ್ಕೆ ಬೆಂಗಳೂರಿನಿಂದ ಸುಮಾರು 97 ಕಿಲೋಮೀಟರ್. ಸುಮಾರು 2 ತಾಸಿನ ಪ್ರಯಾಣದ ನಂತ್ರ ನೀವಿಲ್ಲಿಗೆ ತೆರಳಬಹುದು.
ಕೋಟಿಲಿಂಗೇಶ್ವರ ದೇವಸ್ಥಾನ
4. ಬಂಗಾರ ತಿರುಪತಿ
ಈ ಪ್ರವಾಸಿ ತಾಣಕ್ಕೆ ಶ್ರೀ ಕೋಟಿಲಿಂಗೇಶ್ವರ ಕ್ಷೇತ್ರದಿಂದ ಕೇವಲ 8 ಕಿಲೋಮೀಟರ್. ಬೇತಮಂಗಲಕ್ಕೆ ತೆಳಲಿ, ಅಲ್ಲಿಂದ ಮುಂದೆಸಿಗುವ ತೂಕ ಮಾಪನ ಕೇಂದ್ರದ ಹತ್ತಿರ ಎಡಗಡೆಗೆ ತೆಗೆದುಕೊಂಡರೇ, ನೀವು ಈ ವೆಂಕಟರಮಣನ ಸನ್ನಿಧಿಗೆ ತೆರಳಬಹುದು.
ಈ ಕ್ಷೇತ್ರಕ್ಕೆ ಐತಿಹ್ಯ ಕತೆಯೊಂದಿದ್ದು, ಭೃಗ ಮಹರ್ಷಿ ಅಹಂಕಾರದಿಂದ ನಾರಾಯಣನ ವಕ್ಷಸ್ಥಳಕ್ಕೆ ಒದ್ದಾಗ, ಕುಪಿತಗೊಂಡ ಲಕ್ಷ್ಮೀ, ಕರವೀಪುರಕ್ಕೆ ಹೋಗಿ ನೆಲೆಸುತ್ತಾಳೆ. ಲಕ್ಷ್ಮಿಯನ್ನು ಹುಡುಕುತ್ತಾ ಭೂಮಿಗೆ ಬಂದ ವಿಷ್ಣು, ಶ್ರೀನಿವಾಸನಾಗುತ್ತಾನೆ. ಮುಂದೆ ವೇದಾವತಿಗೆ ಕೊಟ್ಟ ಮಾತಿನ ಅನುಸಾರ ಪದ್ಮಾವತಿಯನ್ನು ವರಿಸುತ್ತಾನೆ. ಈ ನವದಂಪತಿಗಳು ಶೇಷಾಚಲದಲ್ಲಿ ವಿಹರಿಸುತ್ತಿರುವಾಗ ಲಕ್ಷ್ಮಿ-ಪದ್ಮಾವತಿಯರ ನಡುವೆ ಕಲಹ ಉಂಟಾಗಿ, ಏನೂ ಮಾತನಾಡದಾದ ವಿಷ್ಣು, ಇದೇ ಬಂಗಾರ ತಿರುಪತಿಯಲ್ಲಿ ಕಲ್ಲಾಗಿ ನಿಲ್ಲುತ್ತಾನೆ ಎಂಬ ಐತಿಹ್ಯ ಕತೆ ಈ ಬಂಗಾರ ತಿರುಪತಿಯ ಪುರಾಣದೊಂದಿಗೆ ತಳುಕು ಪಡೆಯುತ್ತದೆ.
5. ಮುಳುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ
ಹೀಗೆ ಪುರಾಣ ಪ್ರಸಿದ್ದ ಬಂಗಾರ ತಿರುಪತಿಯ ಶ್ರೀ ವೆಂಕಟರಮಣ ಸ್ವಾಮಿಯ ದರ್ಶನ ಪಡೆದ ನಂತರ ನೀವು ಇಲ್ಲಿಂದ ಸುಮಾರು 20 ಕಿಲೋಮೀಟರ್ ತೆರಳಿದರೇ, ಮುಳುಬಾಗಿಲು ತಲುಪುತ್ತೇವೆ. ಕೆಳದಿ ಶಿವಪ್ಪ ನಾಯಕ ಕಾಲಕ್ಕೆ ಸೇರಿದ್ದೆಂದು ಹೇಳಲಾಗುವ ಈ ನಗರಕ್ಕೆ ನಗರ ಸಂಸ್ಥಾನದ ಶಿವಪ್ಪನಾಯಕ ಅಗ್ನಿಕೃಷ್ಣಾನಂದ ತೀರ್ಥರಿಗೆ ಈ ತಾಣವನ್ನ ಜಹಗೀರು ನೀಡಿ ಮಠವೊಂದನ್ನ ಇಲ್ಲಿ ಕಟ್ಟಿಸಿಕೊಟ್ಟನಂತೆ. ಇವರು ನಿರ್ಮಾಣ ಮಾಡಿದ ದೇವರೇ ಈ ಆಂಜನೇಯ ಸ್ವಾಮಿ. ಈ ಸ್ವಾಮಿಗೂ ನಮಿಸಿ ನೀವು ಮುಂದೆ ಸಾಗಬಹುದು.
6. ಕುರುಡುಮಲೆ ಗಣೇಶ
ಹರಕೆ ಮಾಡಿಕೊಂಡಿದ್ದನ್ನ ಹೀಡೇರಿಸುತ್ತಾ, ರಾಜಕೀಯ ಏರಿಳಿತಗಳನ್ನ ಲೆಕ್ಕಾಚಾರ ಹಾಕುವ ರಾಜಕಾರಣಿಗಳಿಗೆ ಭವಿಷ್ಯವನ್ನ ಹೇಳುವ ದೇವರೆಂದರೇ ಕುರುಡುಮಲೆಯ ಗಣೇಶ. ರಾಜ್ಯದ ಮೂಡಣ ಬಾಗಿಲು ಎಂದೇ ಪ್ರಸಿದ್ದವಾಗಿರು ಗಡಿ ಭಾಗದ ಮುಳುಬಾಗಿಲಿನಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿದೆ. ವಿಜಯನಗರ, ಹಳೆಬೀಡು ದೇವಾಲಯ ಶೈಲಿಯನ್ನ ಹೊಂದಿ, ಮೈಸೂರು ಮಹಾರಾಜರು ಜೊತೆ ಐತಿಹಸಿಕ ಕೊಂಡಿ ಬೆಸೆದುಕೊಂಡ ದೇವಾಲಯ ಇದಾಗಿದೆ. ಶ್ರೀನಿವಾಸಪುರ-ಮುಳುಬಾಗಿಲು ಮಾರ್ಗವಾಗಿ ತೆರಳಿ, ಬಲಗಡೆಗೆ ತೆಗೆದುಕೊಂಡು 4 ಕಿಲೋ ಮೀಟರ್ ತೆರಳಿದರೇ ಈ ಸನ್ನಿಧಿಗೆ ತಲುಪಬಹುದು.
ಕುರುಡುಮಲೆಯ ಗಣೇಶ ದೇವಸ್ಥಾನ
ಈ ಎಲ್ಲಾ ತಾಣಗಳನ್ನ ನೋಡಿ ಸಮಯ ಇನ್ನೂ ಉಳಿದಿದ್ದರೇ, ಕುರುಡುಮಲೆಯಿಂದ ಸುಮಾರು 56 ಕಿಲೋ ಮೀಟರ್ ದೂರ ಸಾಗಿದರೇ ಕೈವಾರ ತಲುಪಬಹುದು, ಕೈವಾರದ ತಾತಯ್ಯನಿಗೆ ನಮಿಸಿ, ಟ್ರಕ್ಕಿಂಗ್ ಮಾಡೋಕೆ ಹೊರಟರೇ, ಹತ್ತಿರದಲ್ಲೇ ಸುಂದರ ಕೈಲಾಸಗಿರಿ ಪರ್ವತವಿದೆ, ಅದನ್ನು ನೋಡಿಕೊಂಡು ಮತ್ತೆ ಮುಳುಬಾಗಿಲು ಮೂಲಕ, ಕೋಲಾರ ತಲುಪಿ, ನಮ್ಮ ಮೂಲ ಸ್ಥಳಕ್ಕೆ ರಾತ್ರಿ 8ರ ಒಳಗೆ ಬಂದು ಸೇರಬಹುದು. ಸೋ ಒಮ್ಮೆ ಪ್ಲಾನ್ ಮಾಡಿ, ಬೈಕ್‍ನಲ್ಲಿ ಆದರೇ ಜಾಲೀ ರೈಡ್ ಹೋಗಿ, ಸಂಸಾರ ಸಮೇತರಾಗಿ ತೆರಳಿದರೇ ನಿಮ್ಮ ಅನುಕೂಲ ಅನುಸಾರ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗಿ ಬನ್ನಿ. ಬಟ್ ಟೇಕ್ ಕೇರ್, ಹ್ಯಾಪಿ ಜರ್ನಿ..
-ವಸಂತ ಬಿ ಈಶ್ವರಗೆರೆ
ಪ್ರವಾಸಕ್ಕೆ ಹೊರಡುವವರಿಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ವಂದನೆಗಳು ವಸಂತರೇ..
ಆದರೆ ಮೊದಲನೆಯ ಸ್ಥಳ "ಅಂತರಗಂಗೆ" ಆಗಬೇಕಿತ್ತಲ್ವಾ ? ಮುದ್ರಣಾರಾಕ್ಷಸನ ಪ್ರಭಾವದಿಂದ "ಅಂತಗಂಗೆ" ಆಗಿದೆ ಅಂತಂದುಕೊಳ್ಳುತ್ತೇನೆ
ಹೌದು ಪ್ರಶಾಂತಿ ಮೇಡಂ ಅಕ್ಷರ ದೋಷದಿಂದ ಹಾಗೆ ಆಗಿದೆ. ಅದಕ್ಕೆ ಕ್ಷಮೆ ಕೋರುವೆ. ನಿಮ್ಮ ಪ್ರತಿಕ್ರಿಯೆಗಾಗಿ ಹೃದಯ ಪೂರ್ವಕ ವಂದನೆಗಳು.
ಪ್ರಶಸ್ತಿ.ಪಿ ಅವರೇ ಧನ್ಯವಾದಗಳು. ಇದೀಗ ನಿಮ್ಮ ಹೆಸರನ್ನು ತಪ್ಪು ಮಾಡಿದ್ದಕ್ಕೆ ಕ್ಷಮಿಸಿ.