ಒಂದು ತಲ್ಲಣದ ಸಂಜೆ: ಹೃದಯಶಿವ

ಅದೊಂದು ಮಾಮೂಲಿ ದಿನ… ಆ ಸಂಜೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಎಂದೋ ಹಾಡು ಬರೆದು ಮರೆತು ಹೋಗಿದ್ದ ಸಿನಿಮಾವೊಂದರ ಆಡಿಯೋ ಸಿಡಿ ಬಿಡುಗಡೆ ಸಮಾರಂಭಕ್ಕಾಗಿ ಮೂರ್ನಾಲ್ಕು ದಿನದ ಹಿಂದೆಯಷ್ಟೇ ಆ ಚಿತ್ರದ ನಿರ್ದೇಶಕರು ಫೋನ್ ಮಾಡಿ ಆಹ್ವಾನಿಸಿದ್ದರು; ಪತ್ರಕರ್ತರ, ಟಿವಿ ಮಾಧ್ಯಮದವರ ಮುಂದೆ ನಿಂತು ಆ ಚಿತ್ರಕ್ಕಾಗಿ ನಾನು ಬರೆದಿದ್ದ ಹಾಡುಗಳ ಬಗ್ಗೆ ಒಂದೆರಡು ಮಾತಾಡಿ ವೇದಿಕೆ ಮೇಲೆ ಇರಬಹುದಾದವರ ಜೊತೆ ಸಿಡಿ ಹಿಡಿದುಕೊಂಡು ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಕೆಲಸ. ಇಷ್ಟಕ್ಕೂ ನಾನು ನೆಟ್ಟಗೆ ಸಿನಿಮಾ ಹಾಡು ಬರೆದು ನಾಲ್ಕೈದು ವರ್ಷದ ಮೇಲಾಗಿತ್ತು. ನನ್ನ ಹಣೆಗೆ ನನ್ನ ಹಳೆಯ ಹಾಡುಗಳೇ ಅಂಟಿಕೊಂಡಿದ್ದವು. ನಡುನಡುವೆ ಇತರ ಚಿತ್ರಸಾಹಿತಿಗಳ ಹಾಡುಗಳನ್ನು ಕೇಳಿದ್ದರೂ ಚಿತ್ರರಂಗದಿಂದ ದೂರ ಉಳಿದಂತೆ ಅನ್ನಿಸಲಾರಂಭಿಸಿತ್ತು. ಆ ಕಾರಣದಿಂದ ಈ ಸಮಾರಂಭಕ್ಕೆ ಹೋಗದೆಯೇ ನನ್ನ ಮೊಬೈಲ್ ಫೋನಿನಿಂದ 'ಸಾರಿ, ಬರಕಾಗ್ತಿಲ್ಲ. ಆಲ್ ದಿ ಬೆಸ್ಟ್' ಅಂತ ನಿರ್ದೇಶಕರಿಗೊಂದು ಎಸ್ಸೆಮ್ಮೆಸ್ ಕಳಿಸಲು ತೀರ್ಮಾನಿಸುವ ಐಡಿಯಾದಲ್ಲಿದ್ದೆ. 

ಆದರೂ ಹೋಗಬೇಕೆಂಬ ತುಡಿತ. ನಾನು ಇತ್ತೀಚಿನ ವರ್ಷಗಳಲ್ಲಿ ಹಾಡು ಬರೆಯಲಾಗದ್ದನ್ನು, ಚಿತ್ರರಂಗದವರಿಂದಾದ ಸಣ್ಣ ಪುಟ್ಟ ಶೋಷಣೆಯನ್ನು, ನನ್ನ ಧೈರ್ಯಗೆಡದ ಮನಸ್ಥಿತಿಯನ್ನು ಮಾಧ್ಯಮದವರೆದುರು ತೋಡಿಕೊಳ್ಳುವುದಾದರೆ, ಈ ನನ್ನ ಮುಕ್ತಮಾತುಗಳಿಂದ ನನಗೇ ಒಳಿತೆನಿಸಿತ್ತು. ಈ ಮಾತಿನಲ್ಲಿ ಸ್ವಾರ್ಥವಿದ್ದರೂ ಇರಬಹುದು, ಆದರೆ ಕೆಲವಾರು ವರ್ಷಗಳಿಂದ ಚಿತ್ರಸಾಹಿತ್ಯದ ಕುರಿತ ನನ್ನ ಅಸಡ್ಡೆಯೊಂದಿಗೆ ನನ್ನ ಬೇಡಿಕೆಯೂ ಕಡಿಮೆಯಾಗಿತ್ತು; ಅಪರೂಪಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ಹಾಡು ಬರೆದಿದ್ದರೂ ನಂಬರ್ ಒನ್ ಗೀತರಚನಾಕಾರ ಅನ್ನಿಸಿಕೊಂಡಿರಲಿಲ್ಲ. ಕನ್ನಡ ಕೇಳುಗರನ್ನು ಬೆರಗುಗೊಳಿಸುವ ಸಾಲುಗಳನ್ನು ಬರೆದಿರಲಿಲ್ಲ. ಇಲ್ಲವೇ ಈ ಮಾತೂ ಕೂಡ ನನ್ನ ವಯಕ್ತಿಕ ಅಭಿಪ್ರಾಯವಿರಬಹುದೇನೋ?

ಅದು ಮುಂಗಾರುಮಳೆ, ಗಾಳಿಪಟ, ಸತ್ಯ ಇನ್ ಲವ್, ಪಲ್ಲಕ್ಕಿ, ಸವಿಸವಿನೆನಪು ಚಿತ್ರಗಳ ಭರದಲ್ಲಿ ಹಗಲು ರಾತ್ರಿಗಳ ಮರೆಯುತ್ತ, ಚಕಿತಗೊಂಡು ಬರೆಯುತ್ತಿದ್ದ, ಅಪರೂಪದ, ಅಪಾರ ಹುರುಪಿನ ಕಾಲವಾಗಿತ್ತು… ಎಂದು ನನ್ನ ಆಲ್ಬಮ್ಮಿನಲ್ಲಿದ್ದ ನನ್ನ ಫೋಟೋ ನೋಡಿದೆ. ನಾನು ತೀರಾ ನರಪೇತಲನಾಗಿರುವ ಫೋಟೋ ಅದು. ನಾನು ಗೀತಸಾಹಿತಿಯಾಗಿ ತುಂಬಾ ಬ್ಯುಸಿಯಿದ್ದ ಕಾಲದಲ್ಲಿ ತುಂಬಾ ನರಪೇತಲನೂ ಆಗಿದ್ದೆ. ಕೆಲಸಕಾರ್ಯಗಳ ಗುಂಗಿನಿಂದ ಹೊರಬಂದು ನನಗೇ ಅಯ್ಯೋ ಪಾಪ ಎನ್ನಿಸುತ್ತಿದ್ದ ಈ ನನ್ನ ಶರೀರಕ್ಕೆ ಸಮಯಕ್ಕೆ ಸರಿಯಾಗಿ ನಿಯಮಿತ ವ್ಯಾಯಾಮ, ಆಹಾರ, ನಿದ್ದೆ, ವಿಶ್ರಾಂತಿ ದೊರಕಿಸಬೇಕೆಂದಿದ್ದು, ಅದನ್ನು ಕಾರ್ಯರೂಪಕ್ಕೆ ತರಲಾಗದ ಸೋಮಾರಿತನವನ್ನು ದೂಷಿಸಿಕೊಂಡೆ. ಕನ್ನಡಿ ನೋಡಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ಈ ದೇಹಕ್ಕೆ ಶಿಸ್ತು ಕಲಿಸಿ ಪೂರೈಸಿದ್ದ ಮೇವು, ನೀರು ಈ ಪುಟ್ಟ ಅವಧಿಯಲ್ಲಿ ಇದರ ತುಂಬೆಲ್ಲ ಕಾರ್ಯಪ್ರವೃತ್ತವಾಗುವುದು ತಮಾಷೆಯ ಮಾತಲ್ಲ. ಆದರೆ ಸುಮಾರು ವರ್ಷಗಳಿಂದ ಶಿಸ್ತುಬದ್ಧವಾಗಿ ಆಹಾರ, ನಿದ್ದೆ, ವಿಶ್ರಾಂತಿ ಕಾಣದೆ ಮೂಳೆ, ಚಕ್ಕಳಗಳಿಂದ ಬಡಕಲು ಬಡಕಲಾಗಿ ಕಾಣುತ್ತಿದ್ದ ಈ ದೇಹ ನನ್ನ ಶ್ರದ್ದೆಯಿಂದಾಗಿ ಎಷ್ಟು ಆರೋಗ್ಯಪೂರ್ಣವಾಗಿ, ನಿಶ್ಚಿಂತೆಯಿಂದ ಅರಳಿಕೊಂಡಂತೆ ಗೋಚರಿಸಿತು. ಕನ್ನಡಿಯೊಳಗಿನ ದೇಹಕ್ಕೂ, ಫೋಟೋ ಒಳಗಿನ ದೇಹಕ್ಕೂ ಅಪಾರ ವ್ಯತ್ಯಾಸವಿತ್ತು. ತುಂಬುನಿದ್ದೆಯ ಪವಾಡದಿಂದ ಕಣ್ಣಿನ ಸುತ್ತಲಿನ ಕಪ್ಪು ಮಾಯವಾಗಿತ್ತೆ? ಸಮಯಕ್ಕೆ ಸರಿಯಾದ ಊಟ, ನಿದ್ದೆ ಅಷ್ಟೇನೂ ಬ್ಯುಸಿಯಿರದ ಈ ದಿನಗಳಲ್ಲಿ ದೇಹದ ಕಾಳಜಿ ವಹಿಸುತ್ತಿವೆಯೇ? ಈ ದೇಹ ಇನ್ನಷ್ಟು ಚೈತನ್ಯದೊಂದಿಗೆ, ಚುರುಕುತನದೊಂದಿಗೆ ಆರೋಗ್ಯ ಹೊಂದಲು ಇನ್ನೆಷ್ಟು ಕಾಲ ಬೇಕಾಗಬಹುದು? 

ಈ ಬಗೆಯ ಅನುಮಾನಗಳನ್ನು ಹೀರೋ ಥರ ಕಾಣುವ ಜಯಂತ ಕಾಯ್ಕಿಣಿಯವರು ಬಗೆಹರಿಸಬಲ್ಲರು ಎಂದುಕೊಳ್ಳುತ್ತಿದ್ದಂತೆಯೇ ಮತ್ತೆ ಹಾಡಿನ ಗುಂಗು. ಕಾಯ್ಕಿಣಿಯವರು ಕಳೆದ ಆರೇಳು ವರ್ಷಗಳಲ್ಲಿ ಎಷ್ಟೆಷ್ಟು ಒಳ್ಳೆಯ ಹಾಡುಗಳನ್ನು ರಚಿಸಿದ್ದಾರೆ; ಮೇಲುನೋಟಕ್ಕೆ ಯಾವುದೋ ಉರ್ದು ಗಜಲಿನಂತಹ, ವಿಶಿಷ್ಟ ಭಾವಲೋಕಕ್ಕೆ ಕರೆದೊಯ್ಯುವಂತೆ ಕಾಣುವ ಇವರ ಹಾಡುಗಳು ಎಷ್ಟು ಆಪ್ತವಾಗಿವೆ, ನಮ್ಮ ಅಂತರಂಗನ್ನೇ ಹೇಗೆ ಕಲಕಿಬಿಡುತ್ತವೆ. ಸರಳ ನಿರೂಪಣಗುಣದ ಮೂಲಕ ಗಟ್ಟಿ ಪದಗಳನ್ನು ಪೋಣಿಸುತ್ತಾ ಹೋಗುವ ಕಾಯ್ಕಿಣಿಯವರ ಭಾವಕೋಶವನ್ನು ಧ್ಯಾನಿಸುತ್ತ ನಾನು ಇತ್ತೀಚಿನ ವರ್ಷಗಳಲ್ಲಿ ಕೇಳಿದ ಸುಮನಾ ಕಿತ್ತೂರರ 'ನೀನೊಂದು ಮುಗಿಯದ ಮೌನ' ಹಾಡು ಜ್ಞಾಪಕಕ್ಕೆ ಬಂತು. ಈ ಹಾಡು ನನ್ನನ್ನು ಬಹಳ ಕಾಡಿತು. ಕೆಲವರು ಸಾಧುಕೋಕಿಲ ಧ್ವನಿ ಹಾಡಿಗೆ ಪ್ಲಸ್ಸು ಅನ್ನುತ್ತಿದ್ದರು. ಕೆಲವರು ಮೈನಸ್ಸು ಅನ್ನುತ್ತಿದ್ದರು. ನಾನಂತೂ ಈ ಹಾಡನ್ನು ಕೇಳಿ ಮೂಕವಿಸ್ಮಿತನಾದೆ- ಸಾಹಿತ್ಯ ಹೃದಯಸ್ಪರ್ಶಿಯಾಗಿತ್ತು. ಈ ಕ್ಷಣ, ಮತ್ತೊಮ್ಮೆ ಕನ್ನಡಿ ನೋಡಿಕೊಂಡು ಕಣ್ಮಿಟುಕಿಸಿದೆ. ಕಾಯ್ಕಿಣಿ, ಸುಮನಾ ಅವರ ಸಾಲುಗಳನ್ನು ಕೇಳಿದಾಗ ನನ್ನೊಳಗೆ ಆಗುತ್ತಿದ್ದ ಖುಷಿ, ಅಸೂಯೆ, ಬರೆಯುವ ಉತ್ಸಾಹ- ಇವೆಲ್ಲ ಈಗ ಏನಾದವು? 

ಕೆಲವು ತಿಂಗಳ ಹಿಂದೆ ಹೀಗೆ ನಡೆಯಿತು. ಕಾರವಾರದ ಬಸ್ಸ್ಟ್ಯಾಂಡಿನಲ್ಲಿ ಕುಳಿತಿದ್ದೆ; ಮಡಗಾಂವಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದೆ. ಆಗಷ್ಟೇ ಹೋಟೆಲಿನ ರೂಮು ಖಾಲಿ ಮಾಡಿ, ಬೆಳಗಿನ ಉಪಹಾರ ಸೇವಿಸಿ ಪುಟ್ಟ ಬ್ಯಾಗನ್ನು ಪಕ್ಕದಲ್ಲಿಟ್ಟುಕೊಂಡು ನ್ಯೂಸ್ ಪೇಪರಿನ ಮೇಲೆ ಕಣ್ಣಾಡಿಸುತ್ತಿದ್ದೆ; ನನ್ನನ್ನು ಗಮನಿಸಿದ ನನ್ನದೇ ವಯಸ್ಸಿನ ವ್ಯಕ್ತಿಯೊಬ್ಬರು ಹತ್ತಿರ ಬಂದು ಕಣ್ಣರಳಿಸಿದರು. ಆ ವ್ಯಕ್ತಿಯ ಕಡೆ ನಾನೂ ಕುತೂಹಲಿಯಾದೆ. ನನ್ನ ಬಗ್ಗೆ ಅಚ್ಚರಿಯಾಗಲೀ, ಅನುಮಾನವಾಗಲೀ ಇಲ್ಲದ ಆ ವ್ಯಕ್ತಿ, "ನಮಸ್ತೇ, ನಿಮ್ಮ ಕವಿತೆ ಕವಿತೆ ಹಾಡು ನನಗಿಷ್ಟ- ನಿಮ್ಮನ್ನೊಮ್ಮೆ ಟಿವಿಯಲ್ಲಿ ನೋಡಿದ್ದೆ. ಮಾತಾಡಿಸಿ ಖುಷಿಯಾಯಿತು. ನಾನು ಇಲ್ಲೇ ಶಾಲಾಮಾಸ್ತರನಾಗಿದ್ದೇನೆ. ಆಗಾಗ ಸಣ್ಣಪುಟ್ಟ ಕವಿತೆಗಳನ್ನೂ ಬರೆಯುತ್ತೇನೆ" ಎಂದು ಹೇಳಿ ತಮ್ಮ ಮೊಬೈಲನ್ನು ಅಲ್ಲೇ ಇದ್ದ ಯಾರದೋ ಕೈಗೆ ಕೊಟ್ಟು ನನ್ನೊಟ್ಟಿಗೆ ಫೋಟೋ ತೆಗೆಸಿಕೊಂಡರು. ಸಿನಿಮಾ ಸಾಹಿತ್ಯ ಎಲ್ಲೆಲ್ಲಿ, ಏನೇನೆಲ್ಲಾ ಮಾಡಿಸುತ್ತೆ ಅನ್ನುವುದಕ್ಕೆ ಆ ವ್ಯಕ್ತಿ ಪ್ರತ್ಯಕ್ಷಸಾಕ್ಷಿ.

ಆದರೆ ನಾನೇಕೆ ಚಿತ್ರಗೀತೆಗಳನ್ನು ಹೆಚ್ಚಾಗಿ ಬರೆಯಲಿಲ್ಲ? ನಮ್ಮ ನಾಗೇಂದ್ರಪ್ರಸಾದ್, ಯೋಗರಾಜಭಟ್ ಮುಂತಾದವರು ಹಿತವಾಗಿ ಬರೆದಿದ್ದಾರೆ. ನಾಗೇಂದ್ರಪ್ರಸಾದ್ ಹಂಸಲೇಖಾರ ಜಾಡು ಹಿಡಿಯಲೆತ್ನಿಸಿದರೆ, ಯೋಗರಾಜಭಟ್ ಮಾತುಗಳನ್ನು ಮೀಟರಿಗೆ ಕೂರಿಸುವಲ್ಲಿ ಗೆದ್ದಿದ್ದಾರೆ. ಹಂಸಲೇಖಾ, ಮನೋಹರ್ ಆಗಾಗ ಶಾಕ್ ಕೊಡುತ್ತಾರೆ. ಹುಡುಗ ಸಂತೋಷ್ ನಾಯಕ್ ಅಲ್ಲಲ್ಲಿ ಒಳ್ಳೊಳ್ಳೆಯ ಹಾಡು ರಚಿಸಿದ್ದಾರೆ. ಗಿರಿರಾಜ್, ಸುನಿ ತರಹದ ನಿರ್ದೇಶಕರೂ ಬರೆದಿದ್ದಾರೆ. 

ಬರೀ ಸಿನಿಮಾ ಹಾಡುಗಳನ್ನು ರಚಿಸುತ್ತಿರುವವರ ಮಧ್ಯೆ ಕವಿತೆಗಳು, ಚುಟುಕುಗಳನ್ನು ಬರೆಯುವ ಆಸಕ್ತಿ ಬೆಳೆಸಿಕೊಂಡವರೂ ಇದ್ದಾರೆಯೇ? ಇದಕ್ಕೆ ಪೂರಕವಾಗಿ ನಾಗೇಂದ್ರಪ್ರಸಾದ್ ಕೆಲವೊಂದು ಕವಿತೆ ಬರೆದು ಓದಿದ್ದರು. ಕಾಯ್ಕಿಣಿ 'ಒಂದು ಜಿಲೇಬಿ' ನಂತರ ಇನ್ನೊಂದು ಕವನ ಸಂಕಲನ ತರಲಿಲ್ಲ. ಚಿತ್ರಸಾಹಿತ್ಯ ಪ್ರಾಥಮಿಕವಾಗಿ ಇನ್ನೊಬ್ಬರು ಸೃಷ್ಟಿಸುವ ಸಂದರ್ಭಕ್ಕೆ, ಇನ್ನೊಬ್ಬರು ಹಾಕಿದ ರಾಗಕ್ಕೆ ಹೊಂದಿಕೊಂಡು ಬರೆಯಬೇಕಾದ ಪ್ರಕಾರ; ಚಿತ್ರಸಾಹಿತ್ಯದ ಪ್ರಸಿದ್ದಿ ಒಮ್ಮೆಲೇ, ಅತಾರ್ಕಿಕವಾಗಿ, ಆ ಚಿತ್ರದ ಹೀರೋ, ಗಾಯಕ, ನಿರ್ದೇಶಕ, ಸಂಗೀತನಿರ್ದೇಶಕರ ಹೆಸರಿನಿಂದಾಗಿ, ಅಂದರೆ ಮೇಲ್ಮೈ ಗ್ರಹಿಕೆಯಲ್ಲಿ ಜನರನ್ನು ಮುಟ್ಟುತ್ತದೆ. ಕವಿತೆ ಹಾಗೂ ಇಂದು ಬಿಡುಗಡೆಯಾದ ಕವನ ಸಂಕಲನ ನಿಮಗೆ ದಿಢೀರನೆ ಖ್ಯಾತಿಯನ್ನೂ, ಜನಪ್ರಿಯತೆಯನ್ನೂ, ಹಣವನ್ನೂ, ಪ್ರಶಸ್ತಿಯನ್ನೂ ತಂದುಕೊಡದೆಯೂ ಇರಬಹುದು.  ಆದರೆ ಕವಿತೆ, ಕತೆ, ನಾಟಕ, ಪ್ರಬಂಧ, ಕಾದಂಬರಿಗೆ ಇರುವ ಗೌರವ ದೊಡ್ಡದು; ಆಯುಸ್ಸೂ. ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ, ಜ್ಞಾನಪೀಠದಂಥ ಪುರಸ್ಕಾರಗಳು ಎಷ್ಟೋ ಸಲ ನಿಮಗೆ ಸಿಕ್ಕುವುದು ನಿಮ್ಮ ದೇಹದ ಶಕ್ತಿಯೆಲ್ಲಾ ಉಡುಗಿ, ಹಲ್ಲು ಉದುರಿ, ಕಣ್ಣು ಮಂಜಾಗಿ, ಬೆನ್ನು ಬಾಗಿ ಕೈಗೆ ಕೋಲು ಬಂದ ನಂತರವೇ. ಆದರೂ ಅಂತಹ ಪ್ರಶಸ್ತಿಗಳಿಗೊಂದು ಶ್ರೇಷ್ಠತೆ, ಅಂತಹ ಪ್ರಶಸ್ತಿಗಳನ್ನು ಪಡೆಯುವಲ್ಲಿನ ಸಾರ್ಥಕತೆ ಇದ್ದೇ ಇದೆ.

ಕೆಲವು ಸಿನಿಮಾ ಕವಿಗಳು ಚಿತ್ರಗೀತೆಯಾಚೆಗೂ ಸ್ವತಂತ್ರ ಕವಿತೆಗಳನ್ನು ರಚಿಸುವಂತೆ ಆಸಕ್ತಿ ಹುಟ್ಟಿಸುವಲ್ಲಿ ನನ್ನ ಪಾತ್ರ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಚಿತ್ರಗೀತೆಗಳನ್ನು ಶ್ರದ್ಧೆಯಿಂದ ಬರೆಯುವುದನ್ನು ಬಿಟ್ಟು, ಸಿನಿಮಾ ನಿರ್ದೇಶನ ಮಾಡುವತ್ತಲೂ ಗಂಭೀರವಾಗಿ ಪ್ರಯತ್ನಿಸದೆ ಪತ್ರಿಕೆಗಳಿಗೆ ಬರೆಯುವುದು, ಎಡೆಬಿಡದೆ ಫೇಸ್ ಬುಕ್ಕಿನಲ್ಲಿ ಕವಿತೆ ಬರೆಯುವುದನ್ನು ಆರಂಭಿಸಿದ್ದು ನನ್ನನ್ನು ಸಿನಿಮಾ ಪರಿಸರದಿಂದ ಕೊಂಚಮಟ್ಟಿಗಾದರೂ ಆಚೆಗಿರಿಸಿತು ಎಂಬುದಂತೂ ವಾಸ್ತವ. ಈ ಪ್ರಕ್ರಿಯೆಯಿಂದ ಏನನ್ನಾದರೂ ಕಳೆದುಕೊಂಡಿದ್ದೇನೋ ಅಥವಾ ಪಡೆದುಕೊಂಡಿದ್ದೇನೋ ನನಗಿನ್ನೂ ಅರ್ಥವಾಗಲಿಲ್ಲ. 

"ಹೃದಯಶಿವಾ… ಯಾಕ್ರೀ ಇತ್ತೀಚಿಗೆ ಬರೀತಾ ಇಲ್ಲ" ಪತ್ರಕರ್ತ ಮಿತ್ರರೊಬ್ಬರು ಅಂದರು.

"ಗೌರಿಲಂಕೇಶ್, ಕರವೇ ನಲ್ನುಡಿ, ಪಂಜುಗಳಲ್ಲಿನ ಅಂಕಣಗಳು ಸೇರಿದಂತೆ ಆಗಾಗ ಇತರ ಪತ್ರಿಕೆಗಳಲ್ಲಿಯೂ ಬರೆಯುತ್ತೇನಲ್ಲಾ ಬಾಸ್. ನೀವು ನನ್ನ ಫೇಸ್ ಬುಕ್ ಪ್ರೊಫೈಲ್ ನೋಡಿಲ್ಲ ಅಂತ ಕಾಣುತ್ತೆ. ಒಂದುಸಲ ಭೇಟಿಕೊಡಿ. ಕವಿತೆ ಬರೆಯುವುದೇ ವೃತ್ತಿ ಎನ್ನುವಷ್ಟರಮಟ್ಟಿಗೆ ಬರೆಯುತ್ತೇನಲ್ಲಿ. ನನ್ನವು ಮೂರು ಕವನಸಂಕಲನಗಳೂ ಬಂದಿದ್ದಾವಲ್ಲಾ. ಮತ್ತೆರಡು ಗದ್ಯಸಂಕಲನಗಳನ್ನು ಹೊರತರಲು ಚಿಂತಿಸಿದ್ದೇನೆ… " 

"ಅಯ್ಯೋ ಅದನ್ನ ಕಟ್ಕೊಂಡು ಏನ್ರೀ ಆಗ್ಬೇಕು. ಪತ್ರಿಕೆಗಳಿಗೆ ಬರೆಯೋಕೆ ನಾವಿದೀವಲ್ಲ. ನೀವು ಬರಿಬೇಕಿರೋದು ಸಿನಿಮಾ ಹಾಡು. ನೀವೊಬ್ಬ ಒಳ್ಳೆ ಗೀತರಚನಾಕಾರ. ಇದೆಲ್ಲ ಬಿಟ್ಟುಬಿಟ್ಟು ಹಾಡು ಬರೀರಿ, ಯಾರು ಕೇಳಿಲ್ಲ ಅಂದರೂ ನನ್ನಂಥವರು ಕೇಳ್ತೀವಿ, ತಿಳೀತಾ…?"

ನನಗೆ ನಗು ತಡೆಯಲಿಕ್ಕೆ ಆಗಲಿಲ್ಲ. "ನಿಮ್ಮೊಂದಿಗೆ ಒಂದೆರಡು ಮಾತಗಳನ್ನು ಹಂಚಿಕೊಳ್ಳುತ್ತೇನೆ ತಪ್ಪು ತಿಳಿಯಲ್ಲ ತಾನೇ? ತನ್ನ ಸಹಿಯನ್ನೂ ಮಾಡಲು ಬಾರದ ಅಪ್ಪಟ ಹಳ್ಳಿಹೆಂಗಸಿನ ಹೊಟ್ಟೆಯಲ್ಲಿ ಹುಟ್ಟಿದ ನಾನು ಅ ಆ ಇ ಈ ತಿದ್ದಿದ್ದೇ ಪವಾಡ. ಔಷಧಿಯ ಕಾರ್ಖಾನೆಯಲ್ಲಿ, ಗೋಣಿಚೀಲದ ಕಾರ್ಖಾನೆಯಲ್ಲಿ, ಸೇಲ್ಸ್ ಮ್ಯಾನಾಗಿ, ಸೆಕ್ಯುರಿಟಿ ಗಾರ್ಡಾಗಿ, ಗಾರೆಕೆಲಸದವನಾಗಿ, ಪ್ಲಾಸ್ಟರ್ ಆಫ್ ಪ್ಯಾರೀಸ್ ಕಂಟ್ರ್ಯಾಕ್ಟರಾಗಿ, ಹೆಪಟೈಟಿಸ್-ಬಿ ವ್ಯಾಕ್ಸಿನೇಶನ್ ಹಾಕಿಸುವವನಾಗಿ, ರೈತನಾಗಿ, ತೋಟಗಾರನಾಗಿ, ರೇಷ್ಮೆಹುಳು ಸಾಕುವವನಾಗಿ, ದನಕರು ಮೇಯಿಸುವವನಾಗಿ, ದೇವಸ್ಥಾನದ ಪೂಜಾರಿಯಾಗಿ, ಪತ್ರಕರ್ತನಾಗಿ, ಜಾಹಿರಾತು ಜಿಂಗಲ್ಲುಗಳಿಗೆ ಬರೆಯುವವನಾಗಿ, ಸಿನಿಮಾ ಸಾಹಿತಿಯಾಗಿ ಎಲ್ಲವನ್ನೂ ಜೀವನೋಪಾಯಕ್ಕಾಗಿಯೇ ಮಾಡುತ್ತಲೇ ಬಂದಿದ್ದೇನೆ. ಇಂತಹ ಕೆಲಸಗಳಿಂದ ನಾನು ಬಾಗಿದ್ದೇನೆ, ಬೀಗಿದ್ದೇನೆ, ಮಾಗಿದ್ದೇನೆ ಇವುಗಳ ಜೊತೆಜೊತೆಗೆ ಬದುಕಿನುದ್ದಕ್ಕೂ ಹಸಿವು, ಅವಮಾನ, ಖುಷಿ, ಸಂತೋಷ, ಕಣ್ಣೀರು, ಒಂಟಿತನ, ಖಿನ್ನತೆ, ಆತ್ಮಹತ್ಯೆ ಯತ್ನ ಇತ್ಯಾದಿಗಳನ್ನು ದಾಟಿ ಹೇಗೋ ಇಲ್ಲಿಯವರೆಗೆ ಏಗಿದ್ದೇನೆ. ನನಗೆ ನನ್ನ ಕೆಲಸಗಳಿಂದ ಹಣ ಕಡಿಮೆ ಸಿಕ್ಕಿದ್ದರೂ, ಅನುಭವವಂತೂ ದಕ್ಕಿದೆ. ಈ ಮೂಲಕ ನನ್ನನ್ನು ನಾನು ಜಗತ್ತಿನೊಂದಿಗೆ ತೆರೆದುಕೊಳ್ಳಲು, ಜಗತ್ತನ್ನು ನನ್ನೊಳಕ್ಕೆ ಬಿಟ್ಟುಕೊಳ್ಳಲು ಸಾಧ್ಯವಾಯಿತು. ಗುರುಕಿರಣ್ ರಿಂದ ಕವಿರಾಜ್ ಗೆ, ಮನೋಮೂರ್ತಿಯವರಿಂದ ಜಯಂತ್ ಕಾಯ್ಕಿಣಿಯವರಿಗೆ, ಹರಿಕೃಷ್ಣರಿಂದ ನಾಗೇಂದ್ರಪ್ರಸಾದರಿಗೆ ಸಾಥ್ ಸಿಕ್ಕಂತೆ ನನಗೆ ಯಾರಿಂದಲೂ ಆ ಮಟ್ಟದಲ್ಲಿ ಈವರೆಗೆ ಪ್ರೋತ್ಸಾಹ, ಆತ್ಮಬಲ ಸಿಕ್ಕಲಿಲ್ಲ. ನನ್ನ ಗೀತರಚನೆಯ ಮೇಲೆ ಯಾರೂ ಸಂಪೂರ್ಣ ಭರವಸೆ ಇಡಲಿಲ್ಲ. ನಾನು ಸಿನಿಮಾ ನಿರ್ದೆಶಿಸುತ್ತೇನೆಂದರೆ ಬಂಡವಾಳ ಹಾಕಲು ಯಾವ ನಿರ್ಮಾಪಕರೂ ಮುಂದೆ ಬರಲಿಲ್ಲ. ಬದಲಿಗೆ ಕಥೆ ಬರೆಯುವವರೇ ಬಂಡವಾಳ ಹಾಕಿ ಸಿನಿಮಾ ನಿರ್ಮಿಸಬೇಕು ಎಂಬ ಮಾತುಗಳನ್ನು ಹೇಳಿ ನನ್ನ ಮನಸ್ಸನ್ನು ಕೆಲವರು ಮತ್ತಷ್ಟು ಘಾಸಿಗೊಳಿಸಿದರು. ನಾನೇ ಈಗ ಅಲ್ಲಿ ಇಲ್ಲಿ ಪರದಾಡಿ, ಒಂದಿಷ್ಟು ಹಣ ಹೊಂದಿಸಿ ಸಿನಿಮಾ ಮಾಡಬೇಕೆಂದಿದ್ದೇನೆ. ಈಗ ಪತ್ರಿಕೆಗಳಿಗೆ ಬರೆಯುತ್ತೇನೆ… ಅದೇನು ಲಾಭಕ್ಕಾಗಿ ಅಲ್ಲ ಎಂಬುದು ಆಯಾಯ ಪತ್ರಿಕೆಗಳ ಸಂಪಾದಕರಿಗೇ ಗೊತ್ತು. ನಾನು ಬದುಕುತ್ತಿರುವ, ನಾನು ಪ್ರೀತಿಸುವ ಜಗತ್ತು, ನಿಸರ್ಗ, ನದಿ, ಬೆಟ್ಟ, ಸಮುದ್ರ, ಆಕಾಶ, ಮೋಡ, ಮಳೆ, ಹೂವು, ಕಾಡುಮೇಡು, ಪ್ರಾಣಿ, ಪಕ್ಷಿ, ಮನುಷ್ಯ, ಹಗಲಿನ ಧಾವಂತ, ರಾತ್ರಿಯ ಏಕಾಂತ – ಅವುಗಳೊಂದಿಗಿನ ಬೆರೆಯುವಿಕೆ, ಸಂವಾದಿಸುವಿಕೆ ಬದುಕಿನ ಪ್ರೀತಿಗಾಗಿ, ಪ್ರತಿ ಕ್ಷಣದ ಕುತೂಹಲಕ್ಕಾಗಿ, ನಾನು ಬರೆಯುತ್ತಿರುವುದು ನನ್ನ ಖುಷಿಗಾಗಿ, ಓದುವವರ ಪ್ರೀತಿಗಾಗಿಯಷ್ಟೇ. ನನ್ನ ಬರಹದ ಬಗ್ಗೆ ಯಾರಾದರು ಗೇಲಿ ಮಾಡಿದರೆ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಹಿಡಿದ ಲೇಖನಿ ಪ್ರಾಮಾಣಿಕವಾಗಿ ನಡೆಯುವಂತೆ ನೋಡಿಕೊಳ್ಳುವುದಷ್ಟೇ ಬರಹಗಾರನ ಧರ್ಮ…"

ಇಷ್ಟು ಹೇಳಿ ಕಿಟಕಿಯಾಚೆ ಕಣ್ಣು ನೆಟ್ಟೆ. ಹಕ್ಕಿಗಳ ಹಾರಾಟ, ಬೀದಿಯಲ್ಲಿ ಪುಟಾಣಿ ಮಕ್ಕಳ ಆಟ,  ನೆತ್ತಿಯ ಮೇಲಿದ್ದ ಸೂರ್ಯ ಬಿಲ್ಡಿಂಗುಗಳ ಮರೆಗೆ ಸರಿಯುತ್ತ ಸಂಜೆಯಾಗುತ್ತಿದೆಯೆಂದು ಹೇಳಿದ. ಆ ನಿರ್ದೇಶಕರಿಗೆ 'ಬರಲ್ಲ' ಅಂತ ಎಸ್ಸೆಮ್ಮೆಸ್ ಕಳಿಸಿಬಿಡೋಣ ಎಂದುಕೊಂಡೆ. ಹೃದಯ ಯಾತನೆಯನ್ನಪ್ಪುವ ಆತುರದಲ್ಲಿತ್ತು. ಸಿನಿಮಾ ಮಂದಿಯನ್ನು, ಹೀಗೇ ಹೋಗಿಬರೋಣ ಎಂದು ಅಲ್ಲಿಗೆ ಬರುವ ನನ್ನನ್ನು ಮರೆತೇ ಹೋಗಿರುವ ಗೆಳೆಯರನ್ನು ಮತ್ತು ಪತ್ರಕರ್ತಮಿತ್ರರನ್ನು ಹೋಗಿ ಮಾತಾಡಿಸಿಬರಬಹುದಲ್ಲಾ… ಅನ್ನಿಸಿತು. ಆದರೆ ಒಂದುಕಾಲದಲ್ಲಿ ಚಿತ್ರರಂಗದ ಅಂಗಳದಲ್ಲಿ ಕುಪ್ಪಳಿಸುವ ಮಗುವಿನಂತಿದ್ದ ನಾನು ಈಗ ಹೊರಗಿನಿಂದ ಬರುವ ಅತಿಥಿಯಂತೆ ಅನ್ನಿಸಿ ಒಂದು ಬಗೆಯ ಕ್ಷೋಭೆ ನನ್ನನ್ನಾವರಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ ಅಲ್ಲವೇ? ಆದರೆ ಬೆರಳೆಣಿಕೆಯಷ್ಟೇ ಸಿನಿಮಾಗಳನ್ನು ನಿರ್ದೇಶಿಸಿದ ಮಣಿರತ್ನಂ ನೂರಾರು ಸಾಧಾರಣ ಚಿತ್ರಗಳನ್ನು ನಿರ್ದೇಶಿಸಿದ ಅದೆಷ್ಟೋ ನಿರ್ದೇಶಕರಿಗಿಂತ ಮುಖ್ಯ ನಿರ್ದೇಶಕ ಅಲ್ಲವೇ? ವೀರೇಂದ್ರ ಸೆಹವಾಗ್ ನಂತೆ ಲೀಲಾಜಾಲವಾಗಿ ಸಿಕ್ಸರ್ ಎತ್ತಲು ಬಾರದಿದ್ದರೂ, ತನ್ನ ತಾಂತ್ರಿಕತೆ, ಮಾಂತ್ರಿಕತೆಯಿಂದ ಮೈದಾನದ ಮೂಲೆಮೂಲೆಗೂ ಬೌಂಡರಿ ಅಟ್ಟುತ್ತಿದ್ದ ರಾಹುಲ್ ದ್ರಾವಿಡ್ ಸೆಹವಾಗ್ ಗಿಂತ ಮುಖ್ಯ ಆಟಗಾರನಲ್ಲವೇ? ತಾನು ನೂರಾರು ಪುಸ್ತಕಗಳನ್ನು ಬರೆದಿದ್ದೇನೆ ಎಂದು ಬೀಗುವವರ ನಡುವೆ ಬೆರಳೆಣಿಕೆಯಷ್ಟೇ ಮಹತ್ವದ ಕೃತಿಗಳನ್ನು ರಚಿಸಿದ ಶ್ರೀಕೃಷ್ಣ ಆಲನಹಳ್ಳಿ, ದೇವನೂರ ಮಹಾದೇವ ಇವತ್ತಿಗೆ ಅರ್ಥಪೂರ್ಣ ಸಾಹಿತಿಗಳಲ್ಲವೇ? 

ಸತತ ಗೊಂದಲದಿಂದ ಬಸವಳಿಸಿದಿದ್ದ ನನ್ನ ಆತ್ಮವನ್ನು ಪ್ರಶ್ನಿಸಿಕೊಂಡೆ- ಸಿನಿಮಾ ಹಾಡಿನ ಮೂಲಕ ಜನರನ್ನು ರಂಜಿಸಿ ಒಳ್ಳೆಯ ಸಂಭಾವನೆ ಪಡೆದು ಕಾರು ಕೊಳ್ಳುವುದು ಹಿರಿದೋ, ಜನರ ಬದುಕಿನೊಂದಿಗೆ ಬೆರೆತು, ಅವರ ಆಳದ ಮಿಡಿತಗಳಿಗೆ, ಹೇಳದ ಯಾತನೆಗಳಿಗೆ ಅಕ್ಷರರೂಪ ಕೊಡುವುದು ಹಿರಿದೋ, ಇಡೀ ನಾಡಿಗೆ ನಾಡೇ ಹಸಿವು, ಅವಮಾನ, ಅಪಮಾನ, ನಿಂದೆ, ಅತ್ಯಾಚಾರ, ಅನಾಚಾರ, ಉಳ್ಳವರ ದಬ್ಬಾಳಿಕೆಗೆ ಸಿಕ್ಕಿ ನಲುಗಿ ನರಳುತ್ತಿದ್ದರೆ ಅಕ್ಷರ ಬಲ್ಲ, ಹೃದಯವುಳ್ಳ ಯಾವನಾದರೂ ಸುಮ್ಮನಿರಲು ಆಗುವುದೇ? ಜನಪ್ರತಿನಿಧಿಗಳ ಸೋಗಲಾಡಿತನ, ದುರುಳತ್ವ, ಬೀಡಾಡಿತನದ ಕ್ರೆಡಿಟ್ಟು ಓಟು ಹಾಕಿ ಚೇರು ಕೊಟ್ಟ ಜನತೆಗಲ್ಲದೆ ಮತ್ತಾರಿಗೆ ಸಲ್ಲುತ್ತದೆ? ಇದರಿಂದ ನಾವು ತಿಳಿಯಬೇಕಾದುದೆಂದರೆ ಸರ್ಕಾರ ಎಸಗುವ ತಪ್ಪನ್ನು, ಸಮಾಜಕ್ಕೆ ಮಾಡುವ ಅನ್ಯಾಯವನ್ನು, ಧರ್ಮ, ಜಾತಿ ಹೆಸರಿನಲ್ಲಿ ಉಂಟುಮಾಡುವ ಅಸಮಾನತೆಯನ್ನು ಕಂಡೂ ಕೈ ಕಟ್ಟಿ ಕೂರುವ ಸಾಹಿತಿ ಲೇಖನಿ ಹಿಡಿಯಲು ಯೋಗ್ಯನಲ್ಲ ಎಂಬುದನ್ನು. 

ಇಷ್ಟಕ್ಕೂ ಯಾರೋ ಕೊಡುವ ಸನ್ನಿವೇಶಕ್ಕೆ, ಯಾರೋ ರೂಪಿಸಿದ ಟ್ಯೂನಿಗೆ ಪದ ಪೋಣಿಸುವ ಚಿತ್ರಸಾಹಿತಿಗಳಿಗೆ ಯಾವುದೇ ಸಿದ್ಧಾಂತವಾಗಲೀ, ಮನೋಧರ್ಮವಾಗಲೀ ಇರುವುದಿಲ್ಲ. ಅತ್ತ ಆಸ್ತಿಕನ ಭಾವನೆಗಳಿಗೂ ಅಕ್ಷರ ಕೊಡುವ, ಇತ್ತ ನಾಸ್ತಿಕನ ಭಾವನೆಗಳಿಗೂ ಅಕ್ಷರ ಕೊಡುವ ಚಿತ್ರಸಾಹಿತಿಯೊಬ್ಬನಿಗೆ ಧಾರ್ಮಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ತನ್ನದೇ ಆದ ಸ್ಪಷ್ಟ ನಿಲುವು, ಐಡಿಯಾಲಜಿ, ಧೋರಣೆ ಇದ್ದರೆ ಸಿನಿಮಾ ಗೀತೆಗಳಾಚೆಗೆ ಆತ ತನ್ನ ಕವಿತೆ, ಕತೆ, ನಾಟಕ, ಕಾದಂಬರಿ, ಪ್ರಬಂಧ, ಲೇಖನಗಳ ಮೂಲಕ ತನ್ನನ್ನು ತೆರೆದುಕೊಳ್ಳಬೇಕಾಗುತ್ತದೆ. ಇದರಿಂದ ನಾನೂ ಹೊರತಲ್ಲ ಎಂದರೆ ನಂಬುವಿರಾ?

ಅಷ್ಟರೊಳಗೆ ಕತ್ತಲಿಳಿಯಲಾರಂಭಿಸಿತು. ಎದ್ದು ರೆಡಿಯಾಗಿ ಕಾರ್ಯಕ್ರಮಕ್ಕೆ ಹೊರಟೆ. ಬಾಡಿಬಿಲ್ಡರ್ ಹೀರೋ, ಗ್ಲಾಮರಸ್ ಬೆಡಗಿ ಹೀರೋಯಿನ್, ಬಿಳಿ ಬಟ್ಟೆ, ಬಂಗಾರ ಧರಿಸಿದ್ದ ಪ್ರೊಡ್ಯೂಸರ್, ಹಣೆಗೆ ಕುಂಕುಮ, ಬಲಗೈಗೆ ಕೆಂಪು ದಾರಗಳನ್ನು ಕಟ್ಟಿಸಿಕೊಂಡಿದ್ದ ಡೈರೆಕ್ಟರ್ ವೇದಿಕೆ ಮೇಲೆ ಕೂತಿದ್ದರು. ನಾನು ಮೆಲ್ಲಗೆ ಹೋಗಿ ಯಾರ ಕಣ್ಣಿಗೂ ಬೀಳದಂತೆ ಒಂದು ಮೂಲೆಯಲ್ಲಿ ಪ್ಲಾಸ್ಟಿಕ್ ಚೇರೆಳೆದುಕೊಂಡೆ. ದೂರದಿಂದಲೇ ಫೋಟೋಗ್ರಾಫ಼ರೊಬ್ಬರು ನನ್ನಡೆಗೆ ಫೋಕಸ್ ಮಾಡುತ್ತಿದ್ದುದು ಗೊತ್ತಾಗಿ ನಾನು ಮತ್ತಷ್ಟು ಗಂಭೀರವಾದೆ.

-ಹೃದಯಶಿವ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

13 Comments
Oldest
Newest Most Voted
Inline Feedbacks
View all comments
Srinidhi jois
Srinidhi jois
10 years ago

Hats off shiva…nimma manada maatu spastavagi moodibandide lekhanadalli….

hridayashiva
hridayashiva
10 years ago
Reply to  Srinidhi jois

dhanyanavadagalu

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
10 years ago

ಅಂತರಂಗವನ್ನು ತೆರೆದಿಟ್ಟು, ಹರವಿಟ್ಟು  ಹಂಚಿಕೊಂಡ ನಿಮ್ಮ ಭಾವನೆಗಳನ್ನು ಗೌರವಿಸುತ್ತೇನೆ ಕವಿಗಳೇ…..

hridayashiva
hridayashiva
10 years ago

thank you

Guruprasad Kurtkoti
10 years ago

ಹೃದಯ ಕರಗಿಸುವ ಬರಹ,… ಶಿವಾ!

hridayashiva
hridayashiva
10 years ago

🙂

 

Sushma Moodbidri
10 years ago

ಬದುಕಿನ ಒಂದೊಂದು ಮೆಟ್ಟಿಲುಗಳನ್ನು ಏರುತ್ತಿದ್ದಂತೆಯೇ ಎದುರಾಗುವ ಹಸಿವು, ಅವಮಾನ, ಪ್ರೆಸ್ಟೀಜು… ಮುಂತಾವುಗಳನ್ನು ನಿಮ್ಮ ಮಾತುಗಳಲ್ಲಿ ಓದಿ ತಲ್ಲಣಿಸಿ ಹೋದೆ..
 

ನಿಮ್ಮ ಮುಂದಿನ ಎಲ್ಲಾ ಪ್ರಾಜೆಕ್ಟ್ ಗಳಿಗೂ ಆಲ್ ದಿ ಬೆಸ್ಟ್

hridayashiva
hridayashiva
10 years ago

ನಿಮ್ಮ ಹಾರೈಕೆಗೆ ಧನ್ಯವಾದ 

prashasti.p
10 years ago

!!! ಒಂಥರಾ ವಿಪರೀತ ಮಳೆ ಹೊಯ್ದು ನಿಂತ ನಂತರ ಮೂಡೋ ನಿಶ್ಯಬ್ದದಂತೆ ಮೌನ.. ಏನನ್ನಬೇಕೋ ಗೊತ್ತಾಗ್ತಿಲ್ಲ 🙁

hridayashiva
hridayashiva
10 years ago
Reply to  prashasti.p

ವಿಮರ್ಶಾತ್ಮಕ ನೋಟ ಹಿಡಿಸಿತು…

ಪಾ.ಮು. ಸುಬ್ರಮಣ್ಯ.. ಬ.ಹಳ್ಳಿ
ಪಾ.ಮು. ಸುಬ್ರಮಣ್ಯ.. ಬ.ಹಳ್ಳಿ
10 years ago

ಆತ್ಮೀಯ ಹೃದಯ ಶಿವರವರೆ ಪ್ರಶ್ನೆ ಉತ್ತರಗಳೆರಡು ನಿಮ್ಮಲ್ಲೇ ಇರುವಾಗ ತಲ್ಲಣಗೊಳ್ಳುವ ಪ್ರಮೇಯವೇ ಬರುವುದಿಲ್ಲ.  ತಾಕತ್ತಿನ ತೊಡೆ ತಟ್ಟುವ ಶಕ್ತಿ ನಿಮ್ಮಲ್ಲಿರುವಾಗ ತರಗೆಲೆಯಂತೆ ತೇಲಿಹೋಗದೆ ಬಿರುಗಾಳಿಗೆ ಮೈಯೊಡ್ಡುವ ಹಿರಿಬಂಡೆಯ ಗಂಬೀರತೆಯಿಂದ ಸಾಹಿತ್ಯ ಶ್ರೀಯ ಸೇವೆ ಮಾಡುವ ಕಾಯಕದಲ್ಲಿ ಕಲೆತು ಹೋಗಿ, ತಲ್ಲಣವೆಲ್ಲಾ ಮಂಗಾಮಾಯ.  ಹೌದಲ್ಲವೇ? ಮತ್ತೇಕೆ ತಡ ಚಿಯರಫ್..!!

hridayashiva
hridayashiva
10 years ago

ಥ್ಯಾಕ್ಸ್ ಸಾರ್ 

Manjunath.S
Manjunath.S
10 years ago

Emotions have been well expressed. Nice narration. Every famous person to day must have gone through these sufferings at some time or the other in his life. 

13
0
Would love your thoughts, please comment.x
()
x