ಒಂದಾನೊಂದು ಕಾಲದಲ್ಲಿ ಹೊಳಲ್ಕೆರೆ ಎಂಬ ಚಿಕ್ಕ ಹಳ್ಳಿ ಇತ್ತು : ಹೊಳಲ್ಕೆರೆ ವೆಂಕಟೇಶ್

ನಮ್ಮ ಹೊಳಲ್ಕೆರೆ ಮನೆ.

ನಾವು ಚಿಕ್ಕವರಾಗಿದ್ದಾಗ, ಅಮ್ಮ, ಮತ್ತು ನಮ್ಮಣ್ಣ ತಲೆಯ ಬಳಿ  ಕುಳಿತು ತಲೆಗೂದಲನ್ನು  ನೇವರಿಸುತ್ತಾ ಪ್ರೀತಿಯಿಂದ ನಮಗೆ ನಿದ್ದೆ ಬರುವವರೆಗೂ ಕಥೆಗಳನ್ನು ಹೇಳುತ್ತಿದ್ದರು. ಅಮ್ಮನ ಕಥೆಗಳು ಹೆಚ್ಚಾಗಿ ರಾಜಕುಮಾರ,  ರಾಜಕುಮಾರಿ ಕುದುರೆ ಸವಾರಿ, ಅರಮನೆ, ಮದುವೆ ಮೊದಲಾದವುಗಳನ್ನು ಒಳಗೊಂಡಿರುತ್ತಿತ್ತು. ನಮ್ಮಣ್ಣ ಹೇಳುತ್ತಿದ್ದ ಕಥೆಗಳು   ಕಾಡು, ಹುಲಿ ಬೇಟೆ, ರಾಜ, ನದಿ ಇತ್ಯಾದಿಗಳನ್ನು ತಿಳಿಸುವ ಪ್ರಯತ್ನದ್ದಾಗಿತ್ತು.  ನಾನು ಬೊಂಬಾಯಿಗೆ ಬಂದಮೇಲೆ ಮದುವೆಯಾಗಿ ಮಕ್ಕಳಾದಾಗ ನನ್ನ ಮಕ್ಕಳಿಗೆಕಥೆ ಹೇಳುವ ಪ್ರಮೇಯ ಬಂತು. ಆದರೆ ನನ್ನ ತಲೆ ಖಾಲಿ. ಕಥೆ ಹೇಳುವ ಇಲ್ಲವೇ ಅತ್ಯಂತ ರಸವತ್ತಾದ ವಿಷಯವನ್ನೂ ಕೇಳುವರ  ಆಸಕ್ತಿ ಕೆರಳಿಸುವಂತೆ ಹೇಳುವ ಕಲೆ ಇಲ್ಲವಲ್ಲಾ ಅನ್ನಿಸತೊಡ ತು. ಹೆಚ್ಚಾಗಿ ಕಥೆ ಕಾವ್ಯ, ಓದುವ ರೂಢಿಯನ್ನೂ  ನಾನು ಬೆಳೆಸಿಕೊಂಡಿರಲಿಲ್ಲ. ಆದರೆ ನಮ್ಮ ಮಕ್ಕಳು ಎಲ್ಲರ ಮಕ್ಕಳಂತೆ ಓಡಿ ಬಂದು ತೊಡೆಯಮೇಲೆ ಮಲಗಿ 'ಅಪ್ಪ ಕತೆ ಹೇಳಿ' ಅಂದಾಗ ಪೀಕಲಾಟ ಶುರುವಾಗುತ್ತಿತ್ತು. ನನ್ನ ಹೆಂಡತಿ ಹೇಗೋ ತನಗೆ ತಿಳಿದ ಕಥೆಗಳನ್ನು ಉಪಾಯವಾಗಿ ಅವರಿಗೆ ನಿದ್ದೆ ಬರುವಂತೆ ತಲೆ ಗೂದಲು ನೇವರಿಸುತ್ತಾ   ಹೇಳಿ ಅವರ ಮನಒಲಿಸಿಕೊಂಡಿದ್ದಳು. ಆದರೆ ನನಗೆ ಅದೆಷ್ಟೋ ಕತೆಗಳನ್ನು ಓದಿದರೂ  ನೆನಪು ಬರದೆ ನಮ್ಮ ಊರಿನ ನಾವು ಬೆಳೆದ ವಾತಾವರಣಗಳನ್ನೇ ಹೇಗೋ ಅವರಿಗೆ ವಿವರಿಸಲು ಪ್ರಯತ್ನಿಸುತ್ತಿದ್ದೆ. ಮಕ್ಕಳಿಗೆ ಏನಾದರೂ  ಕೇಳುವ ಆಸೆ. ಅದು ಇದು ಅಂತ ಭೇದವಿಲ್ಲ. ಅವರು ಮಲಗುವ ಮುನ್ನ ಕತೆ ಕೇಳಬೇಕು ಅಷ್ಟೇ  ನಾವು ಹೇಳಿದ ಶುಷ್ಕ  ಕತೆಯನ್ನೇ ಕೇಳುತ್ತಾ ನಿದ್ದೆ ಮಾಡುತ್ತಿದ್ದಾಗ ನನ್ನ ಹೆಂಡತಿ ಕೀಟಲೆಗಾಗಿ ಪಾಪ ನಿಮ್ಮ  ಕಥೆ ಕೇಳಿ ಸುಸ್ತಾಗಿ ಮಲಗಿದವು ನೋಡಿ ಎಂದಾಗ ನನಗೆ ಏನು ಪ್ರತಿಕ್ರಿಯಿಸ ಬೇಕೋ ಗೊತ್ತಾಗುತ್ತಿರಲಿಲ್ಲ. ಕೆಳಗೆ ನಮೂದಿಸಿರುವ ನಮ್ಮ ಊರಿನ ಕತೆಗಳು ನಿಜಕ್ಕೂ ಆ ಪುಟ್ಟ ಮಕ್ಕಳಿಗೆ ಬಹಳ ಮುದು ಕೊಡುತ್ತಿತ್ತು ಎಂದರೆ ನನಗೆ ಇನ್ನೂ ಅದನ್ನು ನೆನೆಸಿಕೊಂಡು ನಗು ಬರುತ್ತದೆ. ಈಗ ದೊದ್ದವರಾಗಿ ಬೆಳೆದ ಮಕ್ಕಳು  ನಮ್ಮ ಜೊತೆ ನಗುತ್ತಾರೆ.

"ಒಂದಾನೊಂದು ಕಾಲದಲ್ಲಿ ಹೊಳಲ್ಕೆರೆ ಎಂಬ ಹಳ್ಳಿ ಇತ್ತು". ಅಲ್ಲಿ ಒಂದು ಶ್ಯಾನು ಭೋಗರ ಮನೆ, ಇತ್ಯಾದಿಗಳು ಸೆರಿದ್ದವು.  ನಮ್ಮ ಅಮ್ಮ ಹೇಳುತ್ತಿದ್ದ ಅಯ್ಯೋ ಆಗ್ಲೇ ಬಿಸಿಲಕೋಲು ಗೋಡೆ ಮೇಲೆ ಬಂತು ಕಣೋ ಇನ್ನು ಎಸರಿಗೆ ಇಟ್ಟಿಲ್ಲ ನಾನು ಎನ್ನುವ ಮಾತಿನ ಅರ್ಥವನ್ನು ವಿವರಿಸಲು ನಾನು ಪಟ್ಟ ಕಷ್ಟ ಅಷ್ಟಿ ಸ್ಥಲ್ಲ ! ಬಾವಿ, ನೀರು ಸೇದುವುದು, ದನ ಕರ, ಹಾಲು ಕರೆಯುವುದು. ನೆತ್ತಿಯಮೇಲೆ, ಸೊಂಟದ ಮೇಲೆ  ಬಿಂದಿಗೆ ಇಟ್ಟುಕೊಂಡು ಭಾವಿಯ ನೀರು ಸೇದಿ ಹೊತ್ತುಕೊಂಡು ಬರುವುದು ಇತ್ಯಾದಿಗಳನ್ನೂ ತದೇಕ ಚಿತ್ತದಿಂದ ಕೇಳಿ  ಕೇಳಿ ಸುಸ್ತಾಗಿ ಮಲಗುತ್ತಿದ್ದ ಮಕ್ಕಳನ್ನು ಕಂಡು ನನಗೆ ಮರುಕ ಬರುತ್ತಿತ್ತು. ಮತ್ತೆ ಮಾರನೆ ದಿನ ಅದೇ ತಲೆಯಮೇಲೆ ಕೊಡ ಹೊತ್ತು ತರುತ್ತಿದ್ದ ನೀರಿನ ಕತೆ ಹೇಳಿ ಅಂದಾಗ ನಗು ತಡೆಯಲಾಗುತ್ತಿರಲಿಲ್ಲ. ಈಗನ ಮಕ್ಕಳಾಗಿದ್ದರೆ ಜೋರುಮಾಡಿ ಅದೆಲ್ಲಾ ಬಕ್ವಾಸ್ ಕಥೆ ಬೇಡ ಹ್ಯಾರಿ ಪಾಟರ್  ಕಥೆ ಹೇಳಿ ಅನ್ನೊರು. ಇನ್ನು ಕೆಲವು ಕೆರೆಕಡೆ ಹೋಗಿ ಬರುವ ವಿಚಾರ ಚೊಂಬು ತೊಗೊಂಡು  ಹೊಗಿದಾರೆ. ನೀರ್ಕಡೆ  ಹೋಗಿದಾರೆ ಎನ್ನುವ ವಿಚಾರ ಹೇಳಿದಾಗ ಮುಜುಗುರ ಆದರೂ ಆ ಎಳೆ  ಮನಸ್ಸು ಗಳಿಗೆ ಅರ್ಥವಾಗುವಂ ತೆ ಹೇಳುವ ಶಕ್ತಿ ಕೊಡು ದೇವರೇ ಎಂದು ಪ್ರರ್ಥಿಸುತ್ತಿದೆನು. ಹಾವುಗಳ ಬಗ್ಗೆ ಇನ್ನು ನನಗೆ ಯಾರಾದರು ತಿಳುವಳಿಕೆ ಕೊಟ್ಟರೆ ಅದನ್ನು ಸ್ವೀಕರಿಸಲು ಸಿದ್ಧ. ತಮಿಳು ನಾಡಿನ ಹುಡುಗ ಹಾವುಗಳ  ಹಾರ ಹಾಕಿಕೊಂಡು ಮೆರೆಯುವ ದೃಶ್ಯ ವನ್ನು ನನ್ನ ಕೈಲಿ ಇನ್ನು ವಿವರಿಸಲು ಆಗಿಲ್ಲ. ನನಗೆ ಅರ್ಥವಾದರೆ ತಾನೇ ವಿವರಿಸುವ ಮಾತು. !

ಸರಿ ಹಾಗಾದರೆ ಕಥೆ ಹೇಳಲು ಪ್ರಾರಂಭಿಸುವ ?

ನಾನು ಬಹುಶಃ ೩ ನೇ ಕ್ಲಾಸ್ ನಲ್ಲಿದ್ದಾಗಿನಿಂದ ಸ್ವಲ್ಪ ಜ್ಞಾಪಕ ಬರೋ ವಿಚಾರಗಳನ್ನ ಅಂದರೆ ಉದಾಹರಣೆಗೆ,  ನಾನು ನೋಡಿದ್ದು,  ನಮ್ಮಮ್ಮ ಹೇಳಿದ್ದು ಅಂಥಾವ್ನ ಇಲ್ಲಿ ದಾಖಲಿಸಿದರೆ ಸರಿ ಅನ್ಸುತ್ತೆ, ಅಂತ ಈ ಬ್ಲಾಗ್ ಬರಿಯಕ್ಕೆ ಶುರುಮಾಡಿದೆ.

ಒಟ್ನಲ್ಲಿ ಅಂಥಾ ಹೇಳ್ಕೊಳ್ಳೊ ಪರಿಸರವೇನು ಅಲ್ಲ. ನಮ್ಮ ಅಪ್ಪ-ಅಮ್ಮ ಬೊಂಬಾಯ್ ಬಿಟ್ಟಮೇಲೆ ವಾಪಸ್ ಹೊಳಲ್ಕೆರೆಗೇ ಹೋದೃ. ನಮ್ಮಜ್ಜನವರ ಆಸೆಯಂತೆ. ಶ್ಯಾನುಭೋಗಿಕೆ ವಂಶಪಾರಂಪರ್ಯವಾಗಿ ನಮ್ಮ ವಂಶದವರು ನಡೆಸಿಕೊಂಡು ಬರುತ್ತಿದ್ದರು. ನಮ್ಮ ದೊಡ್ಡಪ್ಪ ಸರ್ಕಾರಿ ನೌಕರಿ-ಶಿರಸ್ತೇದಾರರಾಗಿದೃ. ನಮ್ಮ ಚಿಕ್ಕಪ್ಪ ಹೊಳಲ್ಕೆರೆಯ ಮುನಿಸಿಪಲ್ ಆಫೀಸ್ ನಲ್ಲಿ ಅಧಿಕಾರಿಯಾಗಿದ್ದರು. ಅವರಿಗೆ ಮಾನಸಿಕಸೌಖ್ಯವಿಲ್ಲದೇ ಯಾವುದರಲ್ಲೂ ಅವರು ಅಶ್ಟು ಆಸಕ್ತಿವಹಿಸುತ್ತಿರಲಿಲ್ಲ. ಹಾಗಾಗಿ ನಮ್ಮಜ್ಜ, ವೆಂಕಟನಾರಾಯಣಪ್ಪನವರು, ಬೊಂಬಾಯಿನಲ್ಲಿ ವಿದೇಶಿ ಸಂಸ್ಥೆ, ’ವಾಲ್ ಕಾಟ್ ಬ್ರದರ್ಸ್ ಕಂ. ಯಲ್ಲಿ ಕೆಲಸದಲ್ಲಿದ್ದ ನಮ್ಮಪ್ಪ ರಂಗರಾಯರನ್ನು ಊರಿಗೆ ಬರಹೇಳಿದರು. ಹಾಗಾಗಿ, ಹೊಳಲ್ಕೆರೆಯ ವಾಸ ನಮಗೆಲ್ಲಾ ಆಗಿದ್ದು. ಆಲ್ಲಿ ವಾಸವಾಗಿದ್ರು- ನಮ್ಮಜ್ಜ, ಮುತ್ತಜ್ಜ . ಅಲ್ಲಿಯೇ ಮನೆಮಾಡ್ಕೊಂಡು ಒಂದು ಉತ್ತಮ ಜೀವನವನ್ನ ಕಂಡಿದ್ರು, ಅನ್ನೊದ್ ಮಾತ್ರ ನಿಜ. ಅವರ ಹತ್ರ, ಹಣ, ಬಂಗಾರ, ಜಮೀನು-ಕಾಣಿ ಏನಿತ್ತೋ ಏನಿಲ್ವೊ ಒಂದ್ ತರ್ಹ ಯಾವುದರಲ್ಲೂ ಆಸಕ್ತರಲ್ಲದ ನಿರ್ಲಿಪ್ತರು, ಅವರೆಲ್ಲಾ. ಜಪ, ತಪ, ಧ್ಯಾನ, ಹಾಗೂ ಉತ್ತಮ ನಡವಳಿಕೆಯನ್ನು ನಾವು ಎಲ್ಲರಲ್ಲೂ ಕಾಣ್ತಿದ್ವಿ, ಅಂದ್ರೆ ಆಶ್ಚರ್ಯವೇನಿಲ್ಲ !

ಆಗಿನ ಕಾಲದ ನಮ್ಮ ಊರಿನ  ಜನಸಂಖ್ಯೆ ಸುಮಾರು ೫೦೦ ಜನವೂ ಇದ್ದರೋ ಇಲ್ಲವೋ ತಿಳಿಯದು. ನಾನು ಪ್ರೈಮರಿ ಶಾಲೆಗೆ ಹೋಗ್ತಿದ್ದಾಗ, ಕೆಲವು ಸಾವಿರಜನ ಇರ್ತಿದೃ ಅಂತ ಕೇಳಿದ ನೆನಪು !

ನನ್ನ ಬಾಲ್ಯ:

ಅಪ್ಪ ಇನ್ನೂ ಬದುಕಿದ್ದ ಕಾಲವದು. ಎಲ್ಲೋ ನನ್ನ ತಲೆಯಲ್ಲಿ ಆಗಾಗ ಮೂಡಿಬಂದ ಕೆಲವು  ನೆನಪಿನ ಕ್ಷಣಗಳನ್ನು ಆಯ್ದುಕೊಂಡ ಭಾಗಗಳನ್ನು ದಾಖಲಿಸುತ್ತಾ ಹೋಗುತ್ತೇನೆ.

ಹೊಳಲ್ಕೆರೆಯೇ ನಮ್ಮ ಪಾಲಿಗೆ ಸರ್ವಸ್ವ. ಅಪ್ಪ, ಅಮ್ಮ, ನನ್ನ ತಮ್ಮ ಚಂದ್ರ, ಇವರೇ ನನ್ನ ಸರ್ವಸ್ವ. ಅಣ್ಣ ನಾಗರಾಜನ ನೆನಪಿಲ್ಲ. ರಾಮಕೃಷ್ಣ ನಮ್ಮ ನೆರೆವೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನುವ ವಿಚಾರ ನಿಧಾನವಾಗಿ ತಿಳಿಯಿತು. ಆಗಾಗ ರಜಕ್ಕೆ ಬರುತ್ತಿದ್ದ ಅವನು ಮತ್ತೆ ತನ್ನ ಊರಿಗೆ ಯಾಕೆ ಹೋಗುತ್ತಿಲ್ಲ ಎಂದು ನಾನು ನನ್ನ ತಮ್ಮ ನಮ್ಮ ಅಮ್ಮ ನನ್ನು ಕೇಳಿದ ಸನ್ನಿವೇಷಗಳನ್ನು ನೆನೆಸಿಕೊಂಡು ಈಗಲೂ ನಗುತ್ತೇವೆ. ಅಮ್ಮ ನಮಗೆ,’ ಅವನು ಈ ಊರಿನವನೇ ನಿಮ್ಮ ಅಣ್ಣ ಕಣೋ, ಓದೋದಕ್ಕೆ ಬೇರೆ ಊರಿಗೆ ಹೋಗಿದಾನಷ್ಟೆ,’  ಎಂದಾಗ ಏನೋ ತಿಳಿದವರಂತೆ ಗೋಣು ಹಾಕಿದ್ದೆವು. ಅದರ ಅರ್ಥ ಆದದ್ದು ಸುಮಾರು ವರ್ಷಗಳ ನಂತರವೇ ! ಆಗಲೇ ನಮ್ಮ ಅಣ್ಣ ನಾಗರಾಜ, ಎಸ್. ಎಸ್. ಎಲ್. ಸಿ ಪರೀಕ್ಷೆ ಮುಗಿಸಿ, ಮೈಸೂರಿಗೆ ಕೊ. ಆಪರೇಟಿವ್ ಟ್ರೇನಿಂಗ್ ಗೆ ಸೇರಿದನೆಂಬ ವಿಷಯ ತಿಳಿದದ್ದು. ಅವನ ಜೊತೆ, ಭೀಮರಾಯರ ಮಗ ಗೋಪಿಗೆ ಕೆಲಸ ಸಿಕ್ಕು ನಮ್ಮಮ್ಮ ಪೇಚಾಡಿಕೊಂಡಿದ್ದು ಈಗಲೂ ನೆನಪಿದೆ.

’ಸಿಆರ್ ಬಿ ನಂಬರ್ ಬಿದ್ದದ್ದು :

ಅಬ್ಬ, ಸಿ.  ಆರ್.  ಬಿ ನಂಬರ್ ಬಗ್ಗೆ ನಮ್ಮಮ್ಮ ತಲೆಕೆಡಸಿಕೊಂಡಷ್ಟು ನಾವ್ಯಾರೂ ಒದ್ದಾಡಿರಲಿಲ್ಲ.  ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕನಾಗುವುದಕ್ಕಿ ಅರ್ಹತೆ ಉಳ್ಳ ಕೆಲವರನ್ನು ಆರಿಸಿ,  ದೈನಿಕ ಪತ್ರಿಕೆಗಳಲ್ಲಿ ನಮೂದಿಸುತ್ತಿದ್ದ ಅಂಕವೇ ಆ ಸಿ. ಆರ್.ಬಿ ನಂಬರ್. ಅದು ಹೇಗೋ ನಮ್ಮ ಚಿಕ್ಕಪ್ಪನವರ ಮಗ ಕಿಟ್ಟಣ್ಣನಿಗೆ ಒಲಿಯಿತು. ಅಲ್ಲಿನ ಜನಮಾತಾಡಿಕೊಳ್ಳುತ್ತಿದ್ದ ವಿಶಯವೆಂದರೆ, ಕಿಟ್ಟಣ್ಣ ಪದೇ ಪದೇ ಕೋದಂಡರಾಮಪ್ಪನವರನ್ನು ಭೆಟ್ಟಿಯಾಗುತ್ತಿದ್ದದ್ದು. ಕೋದಂಡರಾಮಪ್ಪ ಬೆಂಗಳೂರಿನಲ್ಲಿ ಸರ್ಕಾರದ ವಲಯದಲ್ಲಿ ಒಳ್ಳೆ ವರ್ಚಸ್ಸಿದ್ದಾತ ! ಆತ ಲಂಬಾಣಿಗರ, ನಾಯಕರ, ಸಮುದಾಯಕ್ಕೆ ಹಿತೈಶಿಯಾಗಿ ಕೆಲಸಮಾಡುತ್ತಿದ್ದ. ಹೇಗೆ ಆತನಿಗೆ ಕಿಟ್ಟಣ್ಣನ ಮೇಲೆ ಮಮತೆ ಬಂತೋ ನಾನರಿಯೆ. ಒಟ್ಟಿನಲ್ಲಿ ಆ ದಿನಗಳಲ್ಲಿ,  ಕಿಟ್ಟಣ್ಣ ಮತ್ತು ಪರಿವಾರಕ್ಕೆ ಈ ಹೊಸಬದಲಾವಣೆ ತೀರ ಅನಿವಾರ್ಯವಾಗಿತ್ತು. ಚಿಕ್ಕಪ್ಪನ ಅನಾರೋಗ್ಯದಿಂದ ಮನೆಯ ಪರಿಸ್ಥಿತಿ ಕಂಬಿಯಿಂದ ನೆಲಕ್ಕೆ ಬಿದ್ದ ರೈಲುಬಂಡಿಯತರಹ ಗತಿವಿಹೀನವಾಗಿತ್ತು. ಕಿಟ್ಟಣ್ಣ ಲೋಕಲ್  ಬಸ್ ನಲ್ಲಿ ಕೆಲವು ಕೆಲಸಗಳನ್ನು ಮಾಡಬೇಕಾದ ಪ್ರಸಂಗವಿತ್ತು.

ಅಪ್ಪ, ನಾಗರಾಜನನ್ನು ಹೊಳಲ್ಕೆರೆ ಸೊಸೈಟಿಯಲ್ಲಿ ಕೆಲಸಕ್ಕೆ ಸೇರಿಸುವ ವ್ಯವಸ್ಥೆ ಮಾಡುವವರಿದ್ದರು. ಆದರೆ ನಾಗರಾಜನಿಗೆ ಅದು ಹೊಂದಿಕೆಯಾಗಲಿಲ್ಲ. ಅವನಿಗೆ ಬೆಂಗಳೂರಿಗೆ ಹೋಗುವಾಸೆ. ಅಲ್ಲಿ ನಮ್ಮ ಅತ್ತೆ, ಮಾವ, ಅಜ್ಜಿ, ಅಕ್ಕ-ಭಾವ ಎಲ್ಲರೂ ಇದ್ದರು. ಅದು ನಮ್ಮಮ್ಮನ ತವರುಮನೆ ಸಹಿತ ! ಅಲ್ಲಿ ಏನಾದರೂ ಮಾಡಬಹುದೆಂಬ ಆಸೆ ನಾಗರಾಜನಿಗೆ. ನಮ್ಮ ಅಮ್ಮ ನ ಕಡೆಯಾರೂ ಅಂತಹ ಉನ್ನತ ಹುದ್ದೆಯಲ್ಲಿರಲಿಲ್ಲ. ವಿದ್ಯಾಭ್ಯಾಸದಲ್ಲೂ ಅಷ್ಟಕ್ಕಷ್ಟೆ. ಹಾಗಾಗಿ ವಿದ್ಯೆಯನ್ನು ಮುಂದುವರಿಸುವುದೊಂದು ಮಾರ್ಗವಿತ್ತು. ನಾಗರಾಜನಿಗೆ ಅದರಲ್ಲಿ ಆಸಕ್ತಿ ಯಿರಲಿಲ್ಲ. ನಮ್ಮ ಭಾವ ಮಂಡಿಯಲ್ಲಿ ಕೆಲಸಮಾಡುತ್ತಿದ್ದರು. ತಾವೇ ಒಂದು ಏಜೆನ್ಸಿ ಶುರುಮಾಡಿದರು. ಅವರ ಜೊತೆಗೆ ಕೆಲಸ ಮಾಡುವ  ನಂಬಿಕಸ್ತ ಯುವಕರ ಅಗತ್ಯ ಅವರಿಗಿತ್ತು. ನಾಗರಾಜ ಅವರ ಆವಶ್ಯಕತೆಗಳನ್ನು ಹೊಂದಿಸುವಲ್ಲಿ ನೆರವಾಗಿರಬಹುದು. ಹೀಗೆಯೇ ನಾಗರಾಜ್,  ಆ ಕೆಲಸದಲ್ಲಿ  ಸುಮಾರು ೫-೬ ವರ್ಷ ಇದ್ದ. ಬೇರೆಕಡೆ ಗಮನ ಕೊಡದೆ ಬೇರೆ ಎನನ್ನೂ ಕಲಿಯದೇ ಆ ಕೆಲಸದಲ್ಲಿ ಸಮಾಧಾನವನ್ನೂ ಕಾಣದೆ ಜೀವನ ಸಾಗಿಸಿದ್ದರಬಹುದು ಅಂತ ನನ್ನ ಅನ್ನಿಸಿಕೆ.

ಮನೆಯಲ್ಲಿ ಅಮ್ಮ ದಿನಾ ನಾಗರಾಜ ಯೋಗಕ್ಷೇಮಕ್ಕೆ, ಕಾಗದದ ಎದುರುನೋಡುವುದು ಒಂದು ಹವ್ಯಾಸವಾಗಿತ್ತು. ಆ ಕಾಲದಲ್ಲಿ ಬೆಳಿಗ್ಯೆ ಟಪಾಲಿಗೆ ಕಾಯುವುದು ಗ್ರಾಮದ ಜನರ ಒಂದು ಪ್ರಮುಖ ಹವ್ಯಾಸವಾಗಿತ್ತು. ಪ್ರತೀ ದಿನವಿಡಿ ಅದರ ಬಗ್ಗೆ ಮಾತುಕತೆ ನಿರಂತರವಾಗಿ ನಡೆಯುತ್ತಿತ್ತು. ಉದಾ. ಯಾವತ್ತೋ ಬರೆದು ಪೋಸ್ಟ್ ಮಾಡಿದ್ದ ಕಾಗದ ತಲುಪಿದ ವಿಚಾರದ ಬಗ್ಗೆ. ಮತ್ತೆ ಅದು ತಡವಾಗಿದ್ದಕ್ಕೆ ಕಾರಣಗಳನ್ನು ಹುಡುಕಿ ಅದನ್ನು ತಮ್ಮ ನೆನಪಿನ ದಾಖಲೆಮಾಡಿಕೊಳ್ಳುವ ಮತ್ತೆ ಪ್ರಸಂಗ ಒದಗಿದಾಗ, ಎಲ್ಲರಮುಂದೆ ಗಂಟಗಟ್ಟಲೆ ವಿಶ್ಲೇಶಿಸುವ ಸಂದರ್ಭಗಳು ಅವ್ಯಾಹತವಾಗಿ ವರ್ಷಾನುಗಟ್ಟಲೆ ನಡೆದಿದ್ದವು. ಇಲ್ಲವಾದರೆ ಮಾತಾಡಲು ಯಾವ ವಿಷಯಗಳೇ ಇರುತ್ತಿರಲಿಲ್ಲ. ಹೊಳಲ್ಕೆರೆ ಬಿಟ್ಟರೆ ಬೇರೆ ಪ್ರಪಂಚವೊಂದಿದೆಯೆಂದು ಬಹಳ ಜನರಿಗೆ ಗೊತ್ತೇ ಇರಲಿಲ್ಲ, ಅಂತ ನನಗನ್ನಿಸ್ತಿತ್ತು !

ಬೈರಪ್ಪ ದೇವರ ಬಾವಿ

ಇದಕ್ಕೆ ಮೊದಲು, ಅಂದರೆ, ಜನ ಮುಂಜಾನೆ ನಸುಕಿನಲ್ಲೇ ಏಳುವ ಸ್ವಭಾವದವರು. ಎದ್ದು ನೀರುಕಡೆ ಹೋಗಿಬರಬೇಕು ! ಆಮೇಲೆ ಕುಡಿಯುವ ಸೀನೀರಿನ ವ್ವಯಸ್ಥೆ, ಹಾಗೂ ಉಪ್ಪುನೀರನ್ನು ತರಬೇಕು. ಊಪ್ಪುನೀರನ್ನು ಭಾವಿಯಲ್ಲಿ ಸೇದ ಬೇಕು. ಸೀ ನೀರನ್ನು ತರಲು, ಹೊಂಡ, ತಿಮ್ಮಪ್ಪನ ಭಾವಿ, ಅಥವಾ ಪೇಟೆಭಾವಿಗೆ ಹೋಗಬೇಕು. ಬಿಂದಿಗೆಯಲ್ಲಿ ನೀರು ಸಂಗ್ರಹಿಸಿ ಭುಜದಮೇಲೆಯೋ ಅಥವಾ ಅಡ್ಡೆಯಲ್ಲೋ ತರುವುದು ವಾಡಿಕೆ. ಇದು ಸುಮಾರು ೪-೫ ಗಂಟೆಗಳ ಕಾಲಹಿದಿಯುವಂಥಹದು. ಪೇಟೆಭಾವಿಯಲ್ಲಿ ನೀರು ಅತಿಆಳದಲ್ಲಿರುವುದರಿಂದ, ತಂಬಿಗೆಯಲ್ಲಿ ಮಗಿದು ಮಗಿದು ಆ ನೀರನ್ನು ಕೊಡಪಾನಗಳಲ್ಲಿ ತುಂಬಿ ತರಬೇಕು. ಅದಕ್ಕೂ 'ಕ್ಯೂ' ಇರುತ್ತಿತ್ತು. ಊರಿಗೆಲ್ಲಾ ಒಂದೇ ಭಾವಿ ನೀರುಮಾತ್ರ ಸಕ್ಕರೆಯ ತರಹ ಸಿಹಿ. ತಿಳಿನೀರು ಕುಡಿಯಲು ಸಂತೋಷವಾಗುತ್ತಿತ್ತು !

ಶಾಲೆಗಳು :

ಆಗಲೇ ಹೈಸ್ಕೂಲ್ ಶಿಕ್ಷಣ ನಮ್ಮಊರಿನಲ್ಲಿ ಲಭ್ಯವಾಗುತ್ತಿತ್ತು. ಕಾಳಘಟ್ಟದ ನಾಗರಾಜ್ ಮುಂತಾದವರು, ತಮ್ಮ ವನ್ನು ಹೊಳಲ್ಕೆರೆ ಶಾಲೆಯಲ್ಲೇ ಮಾಡಿಮುಗಿಸಿದ್ದರು. ಪ್ರಾಥಮಿಕ ಶಾಲೆ, ಕೆಂಚಣ್ಣನ ಅಂಗಡಿಯಿಂದ ಹೊಂಡಕ್ಕೆ ಹೋಗುವ ರಸ್ತೆಯಲ್ಲಿತ್ತು. ಅಲ್ಲಿ ಪ್ರೈಮರಿ ೧ ರಿಂದ ೩ ರರವರೆಗೆ ಇತ್ತು. ನಮ್ಮ ಮನೆಯ ಹತ್ತಿರವಿದ್ದ ಶೇಷಾಚಲಯ್ಯ ನವರೇ ಅಲ್ಲಿ ನ ಪ್ರಾಧ್ಯಾಪಕರು. ನಾನು ನನ್ನ ತಮ್ಮ ಬೆಳಿಗ್ಯೆ ೭ ಕ್ಕೇ ಸ್ನಾನಮಾಡಿ ಅವರಮನೆಗೆ ಹೋಗುತ್ತಿದ್ದೆವು. ಅವರಿನ್ನೂ ಮಲಗಿರುತ್ತಿದ್ದರು. ಅವರ ತಲೆದಿಂಬಿನ ಹತ್ತಿರವಿದ್ದ ಗಡಿಯಾರವನ್ನು ದಿಟ್ಟಿಸುತ್ತಾ ಅವರನ್ನು ಎಬ್ಬಿಸಿ, ಅವರುಕೊಟ್ಟ ಕಾಫಿಯನ್ನು ಹೀರಿ, ಜೊತೆಗೆ ಸ್ಕೂಲ್ ಗೆ ಹೋಗುವುದು ರೂಢಿಯಾಗಿತ್ತು. ನಮ್ಮಂತಹ ಶಿಷ್ಯರನ್ನು ಅವರು ಇಷ್ಟಪಡುತ್ತಿದ್ದರು ಸಹಿತ. ಬೇರೆ ಶಿಕ್ಷಕರ ಹೆಸರು ನೆನಪಿಲ್ಲ. ಅಲ್ಲಿಂದ ಸೆಕೆಂಡರಿ ಶಾಲೆ ಫಾರೆಸ್ಟ್ ರೇಂಜ್ ಆಫೀಸರ್ ಮನೆಯ ಎದುರಿಗೆ ಇತ್ತು. ವೆಂಕೋಬರಾಯರು ಆಗತಾನೇ ನಿವೃತ್ತರಾಗಿ, ನಾರಾಯಣ ದೀಕ್ಷಿತ್ ಎಂಬುವರು ಬಂದಿದ್ದರು. ಚೆನ್ನಾಗಿ ಪಾಠ ಮಾಡುತ್ತಿದ್ದರು. ಆದರೆ ಪದೇ ಪದೇ ಅಪ್ಪ, ಮತ್ತಿತರ ಹಿರಿಯರು ಗುಣಗಾನ ಮಾಡುತ್ತಿದ್ದ ವೆಂಕೋಬರಾಯರ ಬಳಿ ಪಾಠಹೇಳಿಸಿಕೊಳ್ಳಲಿಲ್ಲವಲ್ಲ ಎಂಬ ಕೊರಗು ನನಗೆ ಬಹಳದಿನಗಳವರೆಗೂ ಕಾಡಿತ್ತು. ಗೋಪಾಲರಾವ್ ಮೇಸ್ಟ್ರು ನಮಗೆ ಚಿತ್ರಕಲೆಯ ಬಗ್ಗೆ ತಿಳಿಸಿಹೇಳಿದ್ದರು. ಅವರು ನಮ್ಮ ವಠಾರದ ಹತ್ತಿರವೇ ವಾಸವಾಗಿದ್ದರು. ಅವರ ಪರಿವಾರವೆಲ್ಲಾ ನಮಗೆ ಗೊತ್ತು. ಹಾಸ್ಯಪ್ರಿಯರಾದ ಗೋಪಾಲರಾವ್ ಮೇಸ್ಟ್ರು, ಅವರ ಹೆಂಡತಿ ಪುಟ್ಟಕ್ಕ, ಮಕ್ಕಳು ಸುಂದ್ರ, ಶಂಕರ, ಅವರ ತಾಯಿ ವೆಂಕಟಲಕ್ಷಮ್ಮನವರು ಮತ್ತು ನಾವೆಲ್ಲಾ ಒಂದೇ ಪರಿವಾರದ ತರಹ ಸ್ನೇಹಿತರಾಗಿದ್ದೆವು. ಅವರೆಲ್ಲಾ ಉಪ್ಪುನೇರಿಗೆ, ನಮ್ಮ ವಠಾರದ ಬಾವಿಯಲ್ಲೇ ನೀರುಸೇದಲು ಬರಬೇಕಾಗಿತ್ತು.

ಕೆಸರಕಟ್ಟೆ

ಗೋಪಾಲರಾಯರ ಚಿಕ್ಕಪ್ಪ ನಿವೃತ್ತ ಉಪಾಧ್ಯಾಯ, ನರಸಿಂಗರಾಯರು, ಮತ್ತು ಅವರ ಪತ್ನಿ, ಪದ್ಮಾವತಮ್ಮ ನವರು, ನಮ್ಮ ವಠಾರದಲ್ಲೇ ಬಾಡಿಗೆದಿದ್ದರು. ಊರಿಗೆ ಸುಮಾರು ಒಂದೂವರೆಮೈಲಿ ದೂರದಲ್ಲಿ ಹೊಳಲ್ಕೆರೆ ಸ್ಟೇಷನ್ ರಸ್ತೆಯಲ್ಲಿ ಎಮ್. ಎಮ್. ಎಮ್. ಹೈಸ್ಕೂಲ್ ಇತ್ತು. ಅದಕ್ಕೆ ಧನಸಹಾಯಮಾಡಿದವರು, ಶ್ರೀ. ಮಲ್ಲಾಡಿಹಳ್ಳಿ ಮಾದಣ್ಣನವರು. ಅದು ಮುನಿಸಿಪಲ್ ಸ್ಕೂಲಾಗಿತ್ತು. ಇಲ್ಲಿ ನಾನು ನನ್ನ ತಮ್ಮ ಎಸ್. ಎಸ್. ಎಲ್. ಸಿ ವಿದ್ಯಾಭ್ಯಾಸ ಮಾಡಿದೆವು. ನನ್ನ ತಮ್ಮ, ಮಾತ್ರ ರಾಜ್ಯಕ್ಕೇ ಪ್ರಪ್ರಥಮನಾಗಿ ತೇರ್ಗಡೆಯಾಗಿ [ ರ್ಯಾಂಕ್ ಬಂದಿದ್ದ] ನಮ್ಮ ತಾಲ್ಲೂಕು, ಜಿಲ್ಲೆಗೆ ಹೆಸರುತಂದಿದ್ದ. ಅದೊಂದು ಮರೆಯಲಾರದ ಘಟನೆಯಾಗಿ ನಮ್ಮ ಊರಿನ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದ ವಿಷಯವಾಗಿದೆ !

ನಮ್ಮ ಮನೆ :

ಹೊಳಲ್ಕೆರೆಯ ನಮ್ಮ ಮನೆ ತೊಟ್ಟಿಮನೆಯೆಂದ ತಿಳಿದವರು ಹೇಳುತ್ತಿದ್ದರು. ದೊಡ್ಡದಾಗಿ ಅನುಕೂಲವಾಗಿತ್ತು. ಮನೆಯ ಒಳಗೆ ಪ್ರವೇಶಿಸಿದರೆ, ತಂಪು ಗೋಚರಿಸುತ್ತಿತ್ತು. ಮುಂದೆ ನೆಲಕ್ಕೆ ಕೆಂಪು ರೆಡಾಕ್ಸೈಡ್ ಹಾಕಿಸಿದಮೇಲಂತೂ ನಮಗೆ ನೆಲದಮೇಲೆ ಮಲಗಲು ಬಹಳ ಆಸೆಯಾಗುತ್ತಿತ್ತು.

ನಮ್ಮ ತಂದೆಯವರು, ಒಬ್ಬ ಸಂಪನ್ನರು, ದೈವಭಕ್ತರು, ಜ್ಯೋತಿಷಿಗಳು, ಶ್ಯಾನುಭೋಗರು, ಮತ್ತು ಅತ್ಯಂತ ಸರಳ ಹಾಗೂ ದಿಟ್ಟವ್ಯಕ್ತಿ. ಅದೇ ಊರಿನ ಕೋ-ಆಪರೇಟೀವ್ ಸೊಸೈಟಿಯಲ್ಲಿ ಆಡೀಟರ್  ಆಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಅವರಬಗ್ಗೆ ಎಲ್ಲರಿಗೂ ಆದರ ಹಾಗೂ ಗೌರವ. ಆಗಿನಕಾಲದಲ್ಲಿ ಬೊಂಬಾಯಿಗೆ ಹೋಗಿ ಅಲ್ಲಿ ಬ್ರಿಟಿಷ್ ಕಂಪೆನಿಗಳಲ್ಲಿ ನೌಕರಿಯಲ್ಲಿದ್ದವರು, ಎಂಬ ವಿಚಾರದಿಂದಾಗಿ ಜನರು ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಹೊಳಲ್ಕೆರೆಯಲ್ಲಿ ಇದ್ದ ದರ್ಜಿ-ಜನರು, ಮರಾಠಿಗರು. ಉಡುಪಿ-ಹೋಟೆಲ್ ನವರು ದಕ್ಷಿಣ ಕನ್ನಡಿಗರು. ಬೊಂಬಾಯಿನಲ್ಲಿ ದಕ್ಷಿಣ ಕನ್ನಡಿಗರ  ಒಡನಾಟವಿತ್ತು. ಮರಾಠಿ ಭಾಷೆ ಬರುತ್ತಿದ್ದದ್ದರಿಂದ ದರ್ಜಿಯವರು ಅವರ ಆಪ್ತ ಮಿತ್ರರಾಗಿದ್ದರು. ಗಣೇಷನ ಪೂಜೆಯನ್ನು ಅಮ್ಮ-ಅಪ್ಪ ಮರಾಠಿ ಆರತಿಮಾಡುತ್ತಾ ಹಾಡುತ್ತಿದ್ದ ಹಾಡುಗಳು ಅವರಿಗೆ ಭಾರಿ ಇಷ್ಟವಾಗುತ್ತಿತ್ತು. ನಮ್ಮಪ್ಪ ಗೋಂದವಳಿಕರ್ ಮಹಾರಾಜರ ಭಕ್ತರಾಗಿದ್ದರು. ಯಾರನ್ನೂ ನೋಯಿಸದ, ಅತಿ ಒಳ್ಳೆಯ ಸ್ವಭಾವದವರು. ಯಾರಪಾಡಿಗೂ ಹೋಗದೆ ತಮ್ಮ ಕೆಲಸಕಾರ್ಯಗಳಿಗೆ ಗಮನಕೊಡುತ್ತಿದ್ದರು. ನಮ್ಮ ವಠಾರಕ್ಕೆ ಎರಡುಕಡೆಗೂ ಮರದ ದೊಡ್ಡಬಾಗಿಲುಗಳಿದ್ದವು. ಅವುಗಳ ಅಗಣಿಹಾಕಿದರಾಯಿತು. ಬೇರೆಯವರ ಸಂಪರ್ಕನಮಗೆ ಆಗುತ್ತಲೇ ಇರಲಿಲ್ಲ. ನಮ್ಮ ಮನೆಯ ಬಾವಿಯ ನೀರನ್ನು ಪಡೆಯಲು ಆಗಾಗ ಅನೇಕಕರು ಬರುತ್ತಿದ್ದರು. ಆಗ ಮಾತ್ರ ನಮ್ಮ ತಂದೆಯವರು, ಯಾಕೋ ವಿರೋಧವನ್ನು ಪ್ರದರ್ಶಿಸುತ್ತಿದ್ದರು. ಅದಕ್ಕೆ ಕಾರಣಗಳಿರಬಹುದು. ಒಬ್ಬರಿಗೆ ಕೊಟ್ಟರೆ ಅವರು ಅನೇಕರನ್ನು ಕರೆದುಕೊಂಡು ಬಂದು ದೊಂಬಿಮಾಡುತ್ತಿದ್ದರು. ಮೇಲಾಗಿ ಭಾವಿಯ ಜಲ ಬಹಳ ಕಡಿಮೆಯಿದ್ದು ನೀರು ಎಲ್ಲರಿಗೂ ಸಾಕಾಗುತ್ತಿರಲಿಲ್ಲ.

ಹೊಳಲ್ಕೆರೆಯಲ್ಲಿ ಬೆಳಗಿನ ಹೊತ್ತಿನಲ್ಲಿ ಮನೆಯಲ್ಲಿ ಕೆಲಸಕಾರ್ಯಗಳು ಶುರುವಾಗುತ್ತಿದ್ದುದು ಹೀಗೆ :

ಅಮ್ಮ ಮನೆಯಲ್ಲಿ ಎಲ್ಲರಿಗಿಂತ ಮೊದಲೇ ೪ ಗಂಟೆಗೆ ಏಳುವವಾಡಿಕೆಯುಳ್ಳವರು. ಮಂತ್ರಹೇಳುತ್ತಾ ಸ್ನಾನಮಾಡುತ್ತಿದ್ದರು. ನಂತರ ಪೂಜೆ. ನಾವು ಎದ್ದಮೇಲೆ ಕಾಫಿ ಆಗುತ್ತಿತ್ತು. ನಮ್ಮಪ್ಪನವರು ೭ ಗಂಟೆಗೆ ಏಳುತ್ತಿದ್ದರು. ಹಾಸಿಗೆಗಳನ್ನು ಸುತ್ತಿಟ್ಟು ಈಚಲುಚಾಪೆಯನ್ನು ಸುತ್ತಿಟ್ಟು, ನಡುಮನೆ, ಉಗ್ರಾಣ, ಪಡಸಾಲೆಗಳನ್ನು ನಾನು ಈಚಲುಪರಕೆಯಲ್ಲಿ ಗುಡಿಸುತ್ತಿದ್ದೆ. ಕಸೀತ್ತಿ ಶುಭ್ರಮಾಡಿದಮೆಲೆ, ಮುಖತೊಳೆದು, ಬರುತ್ತಿದ್ದೆ. ನಂತರ ಕಾಫಿ ಸೇವನೆ. ಅಲ್ಲಿಂದ ನಾವೆಲ್ಲಾ ಕೆರೆಅಂಗಳಕ್ಕೆ ಹೋಗುತ್ತಿದ್ದೆವು. ಸಾಮಾನ್ಯವಾಗಿ ೬ ಗಂಟೆಗೇ ನಾವು ಹೋಗುವುದು ರೂಢಿಯಾಗಿತ್ತು. ಅಲ್ಲಿ ಯಾರಮನೆಯಲ್ಲೂ ಶೌಚಾಲಯಗಳಿರುತ್ತಿರಲಿಲ್ಲ. ಮನೆಯಲ್ಲಿ ಅವನ್ನು ಜನ ಇಷ್ಟಪಡುತ್ತಲೂ ಇರಲಿಲ್ಲ. ಇದಾದ ಮೇಲೆ ಮನೆಗೆ ನೀರು ತರುವುದೇ ಒಂದು ಅತಿ ಪ್ರಮುಖ ಕೆಲಸ. ಮೊದಲು ಸಿಹಿನೀರು ತರುವುದು. ನಂತರ ಉಪ್ಪುನೀರು ಸೇದುವುದು. ಬಹುಶಃ ಊರಿನಜನರೆಲ್ಲಾ ಈಕೆಲಸದಲ್ಲಿ ಮಗ್ನರಾಗಿರುತ್ತಿದ್ದರು. ಯಾರಬಳಿಯಲ್ಲೂ ಮಾತನಾಡಲೂ ಸಮಯವಿಲ್ಲದಷ್ಟು ಜನ ಕಾರ್ಯಮಗ್ನರಾಗಿರುತ್ತಿದ್ದರು.

ಹಬ್ಬ ಹರಿದಿನಗಳು :

ಹಳ್ಳಿಯ ಜನರ ಮನರಂಜನೆಯ ವಿಧಿವಿಧಾನಗಳು ಅತಿ ಸರಳ. ಹಣ ಮುಖ್ಯವಲ್ಲ. ಭಾವನೆ ಮುಖ್ಯ. ಜನ ಆ ಭಾವನೆಗಳನ್ನೆ ವರ್ಷಗಳಕಾಲ ತಮ್ಮ ಮನದಾಳದಲ್ಲಿ ಇಟ್ಟುಕೊಂಡು ಮೆಲುಕುಹಾಕುವ ಸುಬುದ್ಧಿಯನ್ನು ಹೊಂದಿರುತ್ತಾರೆ. ಯುಗಾದಿ ಹಬ್ಬ, ಹಳ್ಳಿಯ ಜನರಿಗೆ ಮುದಕೊಡುವ ವರ್ಷದ ಪ್ರಥಮ ಹಬ್ಬ. ಆದಿನದ ಸಂಭ್ರಮ ವನ್ನು ನಾವು ಅನುಭವಿಸೇ ನೋಡಬೇಕು. ಆಗ ನಾವು ತುಂಬಾ ಚಿಕ್ಕವರು. ನಸುಕಿನಲ್ಲಿ ಅಮ್ಮನ ಜೊತೆಗೇ ಎದ್ದು ಬೇಗ ಕೆರೆಕಡೆಯ ಕೆಲಸ ಮುಗಿಸಿ, ಅಭ್ಯಂಜನಕ್ಕೆ ತಯಾರಾಗುತ್ತಿದ್ದೆವು. ಮೊದಲು ತೊಡೆಯಮೇಲೆ ಅಶ್ವತ್ಥಾಮ, ಬಲಿ, ವ್ಯಾಸ ಮುಂತಾದ ೭ ಚಿರಂಜೀವಿಗಳ ಹೆಸರಿನ ಎಣ್ಣೆ ಬೆರಚ್ಚುಗಳನ್ನು ತೊಡೆಯಮೇಲೆ ಮಾಡಿಕೊಂಡು ಅವನ್ನು ಭಕ್ತಿಯಿಂದ ತಲೆಗೆ ನೇವರಿಸಿಕೊಳ್ಳುತ್ತಿದ್ದೆವು. ಹಾಗೆ ಮಾಡುವುದರಿಂದ ನಮ್ಮ ಆಯಸ್ಸೂ ಹೆಚ್ಚುವುದೆಂಬ ನಂಬಿಕೆ. ಆಮೇಲೆ ಕೈಮೈಗೆಲ್ಲಾ ಅಮ್ಮ ಹರಳೆಣ್ಣೆ ಧಾರಾಳವಾಗಿ ಹಚ್ಚುತ್ತಿದ್ದರು. ಇದೇ ಕೆಲಸವನ್ನು ನಮ್ಮ ಅಣ್ಣಂದಿರು ಮದುವೆಯಾದಮೇಲೆ ಮನೆಗೆ ಬಂದ ಅತ್ತಿಗೆಯವರು ನಡೆಸಿಕೊಂಡು ಬಂದರು. ಎಣ್ಣೆಹಚ್ಚಿಕೊಂಡು ನೆನೆಯಬೇಕು. ತಕ್ಷಣ ತಲೆಸ್ನಾನ ಮಾಡುವಂತಿಲ್ಲ. ನೆರೆಹೊರೆಯ ರೈತಾಪಿ ಮನೆಯವರೂ ಈ ತರ್ಹದ ಅಬ್ಬದಾಚರಣೆಗೆ ಅವರು 'ಲಗೋರಿ ಚೆಂಡಿನಾಟ' ವನ್ನು ಆದುತ್ತಿದ್ದರು. ದಿನಪೂರ್ತಿ ಆಟಾದಲ್ಲೇ ಅವರು ನಿರತರು. ಇಲ್ಲಿ ಮಾತ್ರ ಅವರೆಲ್ಲಾ ಖಡ್ಡಾಯವಾಗಿ ಹಣವನ್ನು ಪಣವಾಗಿಟ್ಟು ಆಟ ಆಡಲೇ ಬೇಕು. ಬಿಲ್ಲೆ ಮೇಲಕ್ಕೆ ಗಾಳಿಯಲ್ಲಿ ತೂರಿ ಅದು ರಾಜನೋ ರಾಂಇಯೋ ನಿರ್ಧರಿಸುವ ಆಟ ಅತ್ಯಂತ ಮುದಕೊಡುವ ಆಟ.ರಸ್ತೆಗಳು ಯುವಜನರಿಂದ ತುಂಬಿರುತ್ತಿದ್ದವು. ಆದಿನ ಮಧ್ಯಾನ್ಹ 'ಹುಲಿವೇಶ' ಒಂದು ಪ್ರಮುಖ ಆಕರ್ಷಣೆ. ಬಹುಶಃ ಮುಸಲ್ಮಾನರು ತಮ್ಮ ಸ್ನೇಹ ಸೌಹಾರ್ದವನ್ನು ಪ್ರದರ್ಶಿಸಲು ಜೊತೆಗೂಡಿ ನಡೆಸುತ್ತಿದ್ದ ಒಂದು ರಸ. ಮನೆಯಮುಂದೆ ಮಾವಿನ ತಳಿರು ತೋರಣ, ಬೇವಿನ ಹೂವಿನ ಅಲಂಕಾರವಿರುತ್ತಿತ್ತು. ಅಭ್ಯಂಜನ್ದ ನಂತರ, ಹೆಣ್ಣುಮಕ್ಕಳು, ಹೊಸಬಟ್ಟೆ ಉಟ್ಟು ಸಡಗರದಿಂದ ಮನೆತುಂಬಾ ಓಡಾಡುವ ದೃಷ್ಯ ಮನೆಯನ್ನು ಸಾರಿಸಿ ಗುಡಿಸಿ ರಂಗೋಲಿ ಇಟ್ಟಿರುತ್ತಿದ್ದರು. ಮನೆ ಗೋಮಯವಾಗಿರುತ್ತಿತ್ತು. ಹಸು ಎಮ್ಮೆ, ರಾಸುಗಳ ಪೂಜೆ ನಡೆಯುತ್ತಿತ್ತು. ಮನೆಯ ಹಿರಿಯರು ಮಡಿಯುಟ್ಟು ದೇವರಪೂಜೆ ಮಾಡಿನ ತರುವಾಯ ಪಂಚಾಂಗ ಶ್ರವಣ. ಎಳ್ಳು-ಬೆಲ್ಲದ ಗಟ್ಟಿ ತೀರ್ಥ ವಿನಿಯೋಗ. "ಶತಾಯುರ್ ವಜ್ರದೇಹಾಯ ಸರ್ವ ಸಂಪತ್ ಕರಾಯಚ. ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳಭಕ್ಷಣಂ ", ಸಾಲುಗಳನ್ನು ಹೇಳಿ ಪಂಚಾಂಮೃತ-ತೀರ್ಥ ಪಡೆಯುವ ಸನ್ನಿವೇಶ ಅತಿ ಮುಖ್ಯ. ಹಿರಿಯರಿಗೆ ನಮಸ್ಕಾರ. ಕುಡಿಯುವ ನೀರನ್ನು ಮೊದಲೇ ಸಂಗ್ರಹಿಸುವುದರಿಂದ ಆದಿನ ನೀರಿಗಾಗಿ ಹೊರಗೆ ಪರದಾಡುವ ಸನ್ನಿವೇಶ ಕಡಿಮೆ.

ಪೂಜೆಯ ವೇಳೆಯಲ್ಲೇ ಹಸೆಗೆಕರೆದ ಹಾಡುಗಳು, ಮಂಗಳಾರತಿ ಹಾಡುಗಳು, ಆಶೀರ್ವಾದದ ಹಾಡುಗಳು, ಇತ್ಯಾದಿ ಇರುತ್ತಿದ್ದವು. ಪೂಜೆಯೂ ದಿನಕ್ಕಿಂತ ಹೆಚ್ಚು ಸಮಯ.ಊರಿಗೆಲ್ಲ ಎಲ್ಲೋ ಕೆಲವರ ಮನೆಗಳಲ್ಲಿ ಮಾತ್ರ ಗಡಿಯಾರವಿರುತ್ತಿತ್ತು. ಅಂತಹ ಅದೃಷ್ಟವಂತರಲ್ಲಿ ನಮ್ಮ ಅಪ್ಪನವರ ಬಿಗ್ ಬೆನ್ ಗಡಿಯಾರ ನಮ್ಮ ಮನೆಯಲ್ಲಿತ್ತು. ನಾವು ಅದನ್ನು ವೇಳೆಯನ್ನು ನಿರ್ಧರಿಸುವುದರ ಜೊತೆಗೆ, ಅದರ ಗಂಟಾನಾದ ( ಅಲಾರಾಂ) ಹೊಡೆಯುವುದನ್ನು ಪ್ರೀತಿಸುತ್ತಿದ್ದೆವು. ಅದೂ ಅದು ಎಷ್ಟು ದೂರಕ್ಕೆ ಕೇಳಿಸುತ್ತದೆ, ಎನ್ನುವ ವಿಚಾರ ತುಂಬಾ ಪ್ರಿಯವಾಗಿತ್ತು. ಅಮ್ಮನಂತೂ ಎಂದೂ ಗಡಿಯಾರಕ್ಕೆ ಮನ್ನಣೆ ಕೊಟ್ಟವಳಲ್ಲ. ದಿನವಿಡಿಯ ಅವಳ ಕೆಲಸಗಳು ರಥದಂತೆ ನಡೆಯುತ್ತಿದ್ದದ್ದು, ಗೋಡೆಯಮೇಲೋ ನೆಲದಮೇಲೋ ಸೂರಿನ ಹೆಂಚಿನ ಸಂದಿಯಿಂದ  ಬೀಳುತ್ತಿದ್ದ, ಸೂರ್ಯನ ಕೋಲುಬೆಳಕಿನಿಂದ ! ಅಯ್ಯೋ ಆಗ್ಲೆ ಸೂರ್ಯನೆತ್ತಿಗೆ ಬಂದಿದಾನೆ ನಾನಿನ್ನೂ ಮಡಿಉಟ್ಕೊಂಡಿಲ್ಲ. ಅಡಿಗೆಗೆ ಎಸರಿಟ್ಟಿಲ್ಲ, ಎಂದು ಗಡಿಬಿಡಿಯಾಗಿ ಓಡುತ್ತಿದ್ದರು. ಮನೆಯ ಕೆಲಸಗಳು ಒಂದೇ ಎರಡೆ ? ನೀರು ತರುವುದರಿಂದ ಹಿಡಿದು, ನೀರು ಸೇದುವುದು, ಬಟ್ಟೆಒಗೆಯುವುದು, ನೆಲ ಗುಡಿಸಿ ಸಾರಿಸುವುದು, ಕುಟ್ಟುವುದು, ಬೀಸುವುದು, ರುಬ್ಬುವುದು,  ಇತ್ಯಾದಿ ಇತ್ಯಾದಿ,

ಇನ್ನೂ ಬರೆಯಲು ಬೇಕಾದಷ್ಟಿದೆ. ಆದರೆ ಇದನ್ನು ಕೇಳುವವರ್ಯಾರು ?

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
parthasarathyn
10 years ago

ವೆಂಕಟೇಶರೆ  ಎಲ್ಲವನ್ನು ಕೇಳುತ್ತಲೆ ಇದ್ದೇವಲ್ಲ, ಕಡೆಯಲ್ಲಿ ಅದೇಕೆ ಹಾಗೆ ಹೇಳ್ತಿದ್ದೀರಿ, ಕೇಳೋರು ಯಾರು ಎಂದು. 
ಚಿಕ್ಕ ವಯಸಿನ ನೆನಪುಗಳು ಹುಟ್ಟಿದ ಊರಿನ ನೆನಪು ಯಾವಾಗಲು ಸುಂದರವಲ್ಲವೆ ?
ಮನೆಯ ಚಿತ್ರಣ ಸುಂದರ ಹಾಗೆ ಊರಿನ ಸಮಗ್ರ ಚಿತ್ರಣವನ್ನು ಕೊಟ್ಟಿದ್ದರೆ ಚೆನ್ನಿತ್ತು.
ಬಹುಷಃ ಮುಂಬಯಿ ನಿಮಗೆ ಚಿಕ್ಕವಯಸಿನಿಂದಲು ಹತ್ತಿರವೆ ಅನ್ನಿಸುತ್ತೆ ಅಲ್ವೆ ?
ವಂದನೆಗಳು 

h. r. laxmivenkatesh
10 years ago

ಪಾರ್ಥಸಾರಥಿಯವರಿಗೆ ನಮಸ್ಕಾರಗಳು,
 
ನೀವು ಹೇಳುತ್ತಿರುವುದು ಅಕ್ಷರಶಃ ನಿಜ. ಪಾಪ ನೀವಂತೂ ಬಹಳ ಬೇಗ ಪ್ರತಿಕ್ರಯಿಸುವ ಒಂದು ಸಂಪ್ರದಾಯ ಇಟ್ಟುಕೊಂಡಿದ್ದೀರಿ. ತಮ್ಮ ಆಸಕ್ತಿಗಳೂ ಹಲವಾರು. ಈಗ ಸಂಪಾದಕರಾಗಿ ನಿರ್ವಹಣೆ ಮಾಡುತ್ತಿದ್ದೀರಿ. ನಿಮ್ಮ ಪತ್ರಿಕೆ ಚೆನ್ನಾಗಿದೆ. ಹಲವಾರು ವಿಶಯಗಳ ಕಣಜ. ಉದ್ಯೋನ್ಮುಖ ಪತ್ರಿಕೆ. ಶುಭವಾಗಲಿ. ಎಲ್ಲೋ ಇಂತಹ ಕಾಗಚ್ಚಿ ಗುಬ್ಬಚ್ಚಿ ಪುರಾಣಕ್ಕೆ ಸ್ಪಂದಿಸುವ ಒಬ್ಬರು ಇದ್ದಾರೆ ಎಂದರೆ ಸಮಾಧಾನ. ತಮ್ಮ ವಿಶ್ವಾಸಿ,
 
ವೆಂಕಟೇಶ್,

GAVISWAMY
10 years ago

ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿರುವ ರೀತಿ ತುಂಬಾ 
ಚೆನ್ನಾಗಿದೆ ಸರ್. ನಮ್ಮೂರ ಶ್ಯಾನುಭೋಗರು ನೆನಪಾದರು.
ಅವರ ತೀರಿಕೊಂಡು ಹದಿನೆಂಟು ವರ್ಷಗಳಾಗಿವೆ.
ಚಿಕ್ಕಂದಿನಲ್ಲಿ ನೋಡಿದ ಅವರ ಮುಖ ಇನ್ನೂ ಮನಸ್ಸಿನಲ್ಲಿ 
ಅಚ್ಚಳಿಯದೇ ಉಳಿದಿದೆ. ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದರು.
ಊರವರ ಪ್ರೀತಿ ಗೌರವಕ್ಕೆ ಪಾತ್ರವಾಗಿತ್ತು ಅವರ ಕುಟುಂಬ .
ಅವರು ತೀರಿಕೊಂಡ ಕೆಲವು ವರ್ಷಗಳ ನಂಬಿಕೆ ಅವರ ಕುಟುಂಬ ಪೇಟೆಗೆ 
ಹೋಗಿ ನೆಲೆಸಿತು. ಈಗ ಅವರ ತಮ್ಮ ಆಂಜನೇಯನ ಗುಡಿಗೆ ಪೂಜೆ 
ಸಲ್ಲಿಸಲು ವಾರಕ್ಕೊಮ್ಮೆ ಊರಿಗೆ ಬರುತ್ತಿರುತ್ತಾರೆ..

ಧನ್ಯವಾದಗಳು ಸರ್.

 

GAVISWAMY
10 years ago

'ನಂಬಿಕೆ' ಪದ ಇರುವ ಜಾಗದಲ್ಲಿ 'ನಂತರ' ಎಂದು ಓದಿಕೊಳ್ಳಿ ಸರ್.

h. r. laxmivenkatesh
10 years ago

ಶ್ಯಾನುಭೋಗರು ಲೆಕ್ಖಪತ್ರ ಅಧಿಕಾರಿ ಅಷ್ಟೆ. ಗೌಡರು ಮುಖ್ಯ. ಸುಂಕವನ್ನು ವಸೂಲಿಮಾಡುತ್ತಿದ್ದರು. ಹಳ್ಳಿಯ ಕೆಲವು ವ್ಯವಸ್ಥೆಗಳು ಇಂದಿಗೂ ಮಾದರಿಯಾಗಿವೆ. ಚಿಕ್ಕ, ತಿಪ್ಪೆಗುಂಡಿ, ಮೈದಾನ, ದನದ ಗೋಮಾಳ, ತೋಟಗಳು, ಕೆರೆ,ಮತ್ತಿತರ ಜಾಗಗಳನ್ನು ಅಷ್ಟೊಂದು ಸುವ್ಯವಸ್ಥಿತವಾಗಿ ಮಾಹಿತಿಪತ್ರದಲ್ಲಿ ದಾಖಲಿಸುವ ಅವರ ಸಾಮಾನ್ಯ ಜ್ಞಾನ ಅಸಮಾನ್ಯವಾದದ್ದು ಎನ್ನಿಸುತ್ತದೆ.

Radhatanaya
7 years ago

ಅದೇನೊ. ಹಳೆಯ ನೆನಪುಗಳೇ ಹಾಗೆ ಇವತ್ತು ಓದಿದ ನನಗೆ ಒಂಥರ ಏನೋ ಸಂತೋಷ ಆಯ್ತು ಸಾರ್ !

6
0
Would love your thoughts, please comment.x
()
x