ಒಂದಾನೊಂದು ಕಾಲದಲ್ಲಿ:ವಾಸುಕಿ ರಾಘವನ್ ಅಂಕಣ


ಸಾಕಷ್ಟು ಸಿನೆಮಾ ಶುರುವಿನಲ್ಲಿ  ಶೀರ್ಷಿಕೆ ತೋರಿಸುವಾಗ ಯಾವುದಾದರೊಂದು ಹಾಡನ್ನು ಹಾಕುತ್ತಾರೆ. ಬಹಳಷ್ಟು ಸಲ ಸಿನಿಮಾದ ಪಾಪ್ಯುಲರ್ ಹಾಡಿರುತ್ತೆ, ಅಥವಾ ಸಿನಿಮಾದಲ್ಲಿ ಎಲ್ಲೂ ಬಳಸಲು ಸಾಧ್ಯವಾಗಿಲ್ಲದ ಹಾಡಿರುತ್ತೆ. ಇದಕ್ಕೆ ಅಪವಾದ ಗಿರೀಶ್ ಕಾರ್ನಾಡ್ ನಿರ್ದೇಶನದ “ಒಂದಾನೊಂದು ಕಾಲದಲ್ಲಿ”. ಚಿತ್ರದ ಆರಂಭದಲ್ಲಿ ಕವಿತಾ ಕೃಷ್ಣಮೂರ್ತಿ ಹಾಡಿರುವ “ಬಿಚ್ಚುಗತ್ತಿಯ ಬಂಟನ ಕಥೆಯ” ಅನ್ನೋ ಹಾಡು ಬರುತ್ತೆ. ಕೇಳಿದ ತಕ್ಷಣ ಹಿಡಿಸಿದ ಹಾಡು ಇದು, ಯಾಕೆ ಇಷ್ಟ ಆಯ್ತು ಗೊತ್ತಾಗಿದ್ದು ಸಿನಿಮಾ ಮುಗಿದ ಮೇಲೆ. ಆ ಹಾಡು ಈ ಚಿತ್ರ ನೋಡಲು ಬೇಕಾದ ‘ಮೂಡ್’ ಗೆ ನಮ್ಮನ್ನು ಕರೆದೊಯ್ಯುವಲ್ಲಿ ಪರಿಣಾಮಕಾರಿಯಾಗಿದೆ! ಈ ಚಿತ್ರಕ್ಕೆ ಸಂಗೀತ ನೀಡಿರುವವರು ಭಾಸ್ಕರ್ ಚಂದಾವರ್ಕರ್. ಇದಕ್ಕೆ ಮುಂಚೆ ಅವರ ಹೆಸರನ್ನ ಕೇಳಿರಲಿಲ್ಲ, ನಂತರ ತಿಳಿದು ಬಂದಿದ್ದು ಅವರು ಪ್ರಖ್ಯಾತ ಸಿತಾರ್ ವಾದಕರು, ಹಾಗು ಕೆಲವೇ ಕೆಲವು ‘ಆರ್ಟ್’ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಎಂದು. ಅಂದ ಹಾಗೆ, ಈ ಹಾಡು ಬರೆದಿರುವವರು ಯಾರು ಗೊತ್ತಾ? ಚಂದ್ರಶೇಖರ ಕಂಬಾರ. ಬಹುಷಃ ಒಂದು ಸಿನೆಮಾದಲ್ಲಿ ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತರು ಕೆಲಸ ಮಾಡಿರೋ ಇನ್ನೊಂದು ನಿದರ್ಶನ ಸಿಗಲಾರದು!

ಕಥೆ ಹೀಗಿದೆ. ಮಹಾರಾಜರ ಸೈನ್ಯದವರಿಗೆ ತರಬೇತುದಾರನಾಗಿದ್ದ ಗಂಡುಗಲಿ, ಯುದ್ಧದಲ್ಲಿ ಮಹಾರಾಜ ಮಡಿದ ನಂತರ ಊರೂರು ಅಲೆಯುತ್ತಿರುತ್ತಾನೆ. ಮಾರನಾಯಕ ಅನ್ನುವ ನಾಯಕನ ಬಂಟರಿಗೆ ಯುದ್ಧವಿದ್ಯೆ ಕಲಿಸುವ ಸಲುವಾಗಿ ಆ ಊರಲ್ಲಿ ನೆಲೆ ನಿಲ್ತಾನೆ. ಮಾರನಾಯಕನ ಹೆಚ್ಚು ಪಾಲು ಭೂಮಿಯನ್ನು ಅವನ ತಮ್ಮ ಕಪರ್ದಿ ಕಸಿದುಕೊಂಡಿರುತ್ತಾನೆ, ತನ್ನ ದಂಡನಾಯಕ ಪೆರುಮಾಡಿಯ ಸಹಾಯದಿಂದ. ಗಂಡುಗಲಿ ತನ್ನ ಚಾಣಕ್ಷತನದಿಂದ ಪೆರುಮಾಡಿಯ ಕಡೆಯವರನ್ನು ಸೋಲಿಸಿ ಅವರ ಹಸುಗಳನ್ನು, ಭೂಮಿಯನ್ನು ವಶಪಡಿಸಿಕೊಳ್ಳುವುದರಲ್ಲಿ ಸಹಾಯ ಮಾಡುತ್ತಾನೆ; ಸೆರೆಸಿಕ್ಕ ಪೆರುಮಾಡಿಗೆ ಜೀವಭಿಕ್ಷೆ ನೀಡಿ ಕಳಿಸಿಬಿಡುತ್ತಾನೆ. ಸೋತು ಬಂಡ ಪೆರುಮಾಡಿಯನ್ನು ಅವಮಾನಿಸಿ, ಹೊರದಬ್ಬಲಾಗುತ್ತದೆ; ಪೆರುಮಾಡಿಯನ್ನು ಹಿಡಿದುತರಲಿಲ್ಲ ಅಂತ ಮಾರನಾಯಕ ಗಂಡುಗಲಿಯನ್ನು ಹೊರಹಾಕುತ್ತಾರೆ. ಗಂಡುಗಲಿಯನ್ನು ಕೊಲ್ಲಲು ಹೋದ ತನ್ನ ಮಗನ ಸಾವಿನಿಂದ ಕೋಪಗೊಂಡು ಪೆರುಮಾಡಿ ಗಂಡುಗಲಿಯ ಜೊತೆ ಕಾಳಗಕ್ಕೆ ನಿಲ್ಲುತ್ತಾನೆ. ಸಮಬಲದ ಇಬ್ಬರೂ ಸುಸ್ತಾಗಿ ಬಳಲಿದಾಗ, ಪೆರುಮಾಡಿ ಇಂದಲ್ಲದಿದ್ದರೆ ಯಾವತ್ತಾದರೂ ಮಾರನಾಯಕ, ಕಪರ್ದಿ, ಅವರ ಅಣ್ಣನ ಮಗ ಜಯಕೇಶಿ ಎಲ್ಲರನ್ನೂ ಸಾಯಿಸುವುದಾಗಿ ಪಣ ತೊಡುತ್ತಾನೆ. ಜಯಕೇಶಿಯ ಮೇಲೆ ಅಕ್ಕರೆಯಿರುವ ಗಂಡುಗಲಿ ಅವನೊಬ್ಬನನ್ನು ಕೊಲ್ಲದಿರಲು ಬೇಡಿಕೊಳ್ತಾನೆ; ಬದಲಿಗೆ ಮಾರನಾಯಕ, ಕಪರ್ದಿ ಮತ್ತು ಅವರ ಎಲ್ಲಾ ಬಂಟರನ್ನು ಸೆದೆಬಡಿಯಲು ಪೆರುಮಾಡಿಯ ಜೊತೆ ಕೈಜೋಡಿಸುತ್ತಾನೆ.

ಅಕಿರೋ ಕುರಸವಾ ಅವರ ಸಮುರಾಯ್ ಸಿನೆಮಾಗಳಿಂದ ಪ್ರಭಾವಿತರಾಗಿ ಗಿರೀಶ್ ಕಾರ್ನಾಡ್ ಮಾಡಿರೋ ಸಿನಿಮಾ ಇದು. ಪ್ರಭಾವ ಏನೇ ಇದ್ದರೂ ಇದು ಸಂಪೂರ್ಣವಾಗಿ ನಮ್ಮ ಮಣ್ಣಿನ ಕಥೆಯಾಗಿ ಹೊರಬಂದಿದೆ. ಸಮುರಾಯ್ ಇಲ್ಲಿ ಕಳರಿಪಯಟ್ಟು (ಪಿ ಕೆ ಗೋಪಾಲನ್ ಗುರುಕ್ಕಳ್ ಅವರ ಯುದ್ಧ ವಿನ್ಯಾಸ) ಆಗಿದೆ. ಪೌರಾಣಿಕ ಅಥವಾ ಐತಿಹಾಸಿಕ ಅಂದ ತಕ್ಷಣ ಬೃಹತ್ ಸೆಟ್ಟುಗಳನ್ನು ನೋಡುವುದು ಸಾಮಾನ್ಯ, ಆದರೆ ಜಯೂ ನಚಿಕೇತ ಅವರ ಕಲಾವಿನ್ಯಾಸ ಎಷ್ಟು ಸರಳವೋ ಅಷ್ಟೇ ಚಂದ.

ಶಂಕರ್ ನಾಗ್ ಅವರ ಅಭಿನಯ ನೋಡಿದರೆ ಇದು ಅವರ ಮೊದಲ ಚಿತ್ರ ಅಂತ ನಂಬಕ್ಕೆ ಆಗಲ್ಲ. ಕಣ್ಣಲ್ಲಿ ಆ ಹೊಳಪು, ಹೊಡೆದಾಟಕ್ಕೆ ಬೇಕಾಗೋ ಲವಲವಿಕೆ, ಸೆಣೆಸಾಡುವ ಹುಮ್ಮಸ್ಸು – ಎಂತಹ ಎನರ್ಜೆಟಿಕ್ ಪರ್ಫಾರ್ಮೆನ್ಸ್! ಅಷ್ಟೇ ಸರಿಸಮವಾದ ನಟನೆ ಸುಂದರಕೃಷ್ಣ ಅರಸ್ ಅವರದು. ಆ ಕಂಚಿನ ಕಂಠ, ನೋಟದಲ್ಲಿ ಆ ತೀಕ್ಷ್ಣತೆ, ವಯಸ್ಸನ್ನೂ ಮರೆಮಾಚುವ ಆ ನಿಲುವು – ಆ ಪಾತ್ರಕ್ಕೆ ಪರ್ಫೆಕ್ಟ್ ಆಯ್ಕೆ. ಇವನು ಅರ್ಜುನನಾದರೆ ಅವರು ಭೀಷ್ಮ! ವಸ್ತುನಿಷ್ಠವಾಗಿ ಬೇರೆ ಸಿನೆಮಾಗಳಲ್ಲಿ ಇವರಿಬ್ಬರ ನಟನೆಯನ್ನು ನೋಡಿದರೆ, ಇಬ್ಬರನ್ನೂ ಅತ್ಯದ್ಭುತ ನಟರು ಅಂತ ಹೇಳಲಿಕ್ಕಾಗೋದಿಲ್ಲ (ಸುಂದರಕೃಷ್ಣ ಅರಸ್ ಅಂದರೆ ನನಗೆ ಒಂದೇ ಮುಖಭಾವ ನೆನಪಿಗೆ ಬರೋದು, ಅವರ ನಗುಮುಖ ಎಂದಾದರೂ ನೋಡಿದ್ದೀರಾ?) ಆದರೆ ಈ ಸಿನಿಮಾ ಮಾತ್ರ ಇಬ್ಬರಿಗೂ ಹೇಳಿಮಾಡಿಸಿದಂತಿದೆ. ಈ ಚಿತ್ರದಿಂದ ಇವರಿಗೆ ಇಂತಹ ಅಭಿನಯಕ್ಕೆ ಅವಕಾಶ ಸಿಕ್ಕೆದೆಯಾ, ಇವರ ಅಭಿನಯದಿಂದ ಚಿತ್ರದ ಮೆರುಗು ಹೆಚ್ಚಾಗಿದೆಯಾ ಹೇಳೋದು ಕಷ್ಟ!

ಗೆಳೆಯ ರವೀಂದ್ರ ಅವರು ಈ ಮಾತನ್ನ ಹೇಳ್ತಾ ಇದ್ರು. ನಾವು ನಮ್ಮ ಜೀವಮಾನದಲ್ಲಿ ಒಂದು ಸ್ಲಂಗೆ ಹೋಗಿರಲ್ಲ, ನಿಜವಾದ ಗನ್ ಅನ್ನು ದೂರದಿಂದಲೂ ನೋಡಿರಲ್ಲ. ಆದರೆ “ಸತ್ಯ” ಅಂತ ಒಂದು ಸಿನೆಮಾ ನೋಡಿದಾಗ “ಅರೆ, ಹೌದಪ್ಪಾ, ಹೀಗಿರಲು ಸಾಧ್ಯ” ಅನ್ನಿಸಿರುತ್ತೆ. ನಿಜವಾಗಿರೋದಕ್ಕಿಂತಲೂ ಮುಖ್ಯ “ಅದು ಸಾಧ್ಯ” ಅನ್ನಿಸುವಂತಿರುವುದು. ಈ ಚಿತ್ರದ ಕಥೆ ನಡೆಯುವುದು  ಬಹುಷಃ ಹನ್ನೆರಡನೆ ಶತಮಾನದಲ್ಲಿರಬಹುದು. ಆ ಕಾಲದಲ್ಲಿ ಜನ ಮಾತಾಡುತ್ತಿದ್ದ ಭಾಷೆ ಹೇಗಿತ್ತು, ಅವರ ಎಂತಹ ಬಟ್ಟೆ ತೊಡುತ್ತಿದ್ದರು, ಅವರ ಹೆಸರುಗಳು, ಮನೆಗಳು ಹೇಗಿತ್ತು ಅನ್ನೋದು ನಂಗೆ ಗೊತ್ತಿಲ್ಲ, ಆದರೆ ಈ ಚಿತ್ರ ನೋಡುವಾಗ ಹೀಗಿರಲು ಸಾಧ್ಯ ಅನ್ನಿಸಿದ್ದಂತೂ ಹೌದು. ಒಂದು ಸಿನಿಮಾದ ನಿಜವಾದ ಗೆಲುವು ಇರುವುದು ಇದರಲ್ಲೇ!

ಮೇಲ್ನೋಟಕ್ಕೆ ಹಿಂದಿನ ಕಾಲದಲ್ಲಿ ನಡೆದ ಸೇಡಿನ ಕಥೆ ಅನ್ನಿಸಿದರೂ, ನನಗೆ ಮುಖ್ಯವಾಗಿ ಗೋಚರಿಸಿದ್ದು “ಮೌಲ್ಯಗಳ ಸಂಘರ್ಷಣೆ”. ಮಾರನಾಯಕ, ಕರ್ಪದಿ ಅವರ ಸೈನ್ಯಗಳದ್ದು ಅವರದೇ ಆದ ಕೆಲವು ನಿಯಮಗಳು, ಕಟ್ಟಲೆಗಳು (ಹಬ್ಬದ ದಿನ ಯುದ್ಧ ಮಾಡಬಾರದು). ಹೊರಗಿನಿಂದ ಬಂದ ಗಂಡುಗಲಿಗೆ ಈ ಯಾವುದೇ ಕಟ್ಟುಪಾಡುಗಳಿಲ್ಲ, ಅವನು ತನ್ನದೇ ವಿನೂತನ ಕ್ರಮಗಳಿಂದ ಯುದ್ಧವನ್ನು ಗೆಲ್ಲುತ್ತಾ ಹೋಗುತ್ತಾನೆ. ಮುಂದಿನ ಪೀಳಿಗೆಯ ಜಯಕೇಶಿ, ಪೆರುಮಾಡಿಯ ಮಗ ಇರಗ ಇವರುಗಳು ಯುದ್ಧವಿದ್ಯೆಯಲ್ಲಿ ಆಸಕ್ತಿ ಹೊಂದಿಲ್ಲ. ಜಯಕೇಶಿಯ ಗೆಳತಿ ಸಾವಂತ್ರಿಗೆ ಅವನು ಹೊಡೆದಾಡುವುದು ಇಷ್ಟವಿಲ್ಲ; ಕರ್ಪದಿಯ ಹೆಂಡತಿ ಇರಗನನ್ನು ತಾಯಿಯಂತೆ ನೋಡಿಕೊಳ್ಳುತ್ತಾಳೆ. ಸ್ತ್ರೀಯರ ದನಿಗೆ ಶಕ್ತಿ ಹೆಚ್ಚಾದಂತೆ ಮುಂದಿನ ಪೀಳಿಗೆಯಲ್ಲಿ ಹಿಂಸೆ, ಕದನ ಕಮ್ಮಿಯಾಯಿತೆಂದು ಹೇಳಿದ್ದಾರೆ ಅನಿಸುತ್ತೆ.

ನಮ್ಮ ಚಿತ್ರಗಳು ಎಷ್ಟು ಕೋಟಿ ಬಾಚುತ್ತಿವೆ ಅನ್ನೋದು ನಮಗೆ ಹೆಮ್ಮೆಯ ವಿಚಾರ ಆಗಬಾರದು. ಎಷ್ಟು ಸಿನಿಮಾಗಳು ಇನ್ನೂ ಮೂವತ್ತು ವರ್ಷಗಳಾದ ಮೇಲೂ ರಿಲವೆಂಟ್ ಆಗಿರುತ್ತೆ ಅನ್ನೋದರ ಮೇಲೆ ಹೆಮ್ಮೆ ಪಡೋಣ. ಅಂತಹ ಒಂದು ಚಿತ್ರ ಇದು!

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

18 Comments
Oldest
Newest Most Voted
Inline Feedbacks
View all comments
Pramod
11 years ago

ಸಿನಿಮಾ ಹುಚ್ಚು ಹಿಡಿಯುವ ಮು೦ಚೆ, ಕೆಲವು ವರ್ಷಗಳ ಹಿ೦ದೆ ನೋಡಿದ್ದೆ. ಮತ್ತೊಮ್ಮೆ ನೋಡಬೇಕು. ತೊಷಿರೋ ಮಿಫ್ಯೂನೆ, ಕ್ಲಿ೦ಟ್ ಈಸ್ಟ್ ವುಡ್ ನ ನಟನೆ ನೋಡಿದ ಮೇಲೆ ಶ೦ಕರ್ ನಾಗ್ ಹೇಗೆ ನೇಟಿವಿಟಿಗೆ ಅನುಗುಣವಾಗಿ ನಟಿಸಿದ್ದಾರೆ ಎ೦ಬುದನ್ನು ನೋಡಬೇಕು.
ಕನ್ನಡದಲ್ಲಿ ನಿರ್ಮಿಸಿದ ಅತ್ಯುತ್ತಮ ಚಿತ್ರಗಳಲ್ಲೊ೦ದು.

Vasuki
11 years ago
Reply to  Pramod

ಮಿಫ್ಯೂನೆ ಅವರ ಥಿಯಾಟ್ರಿಕಿಯಾಲಿಟೀ, ಈಸ್ಟ್‌ವುಡ್ ಕೂಲ್ ಸ್ಟೈಲ್ ಎರಡಕ್ಕಿಂತಲೂ ಭಿನ್ನವಾಗಿ ಮೂಡಿ ಬಂದಿದೆ ಶಂಕರ್ ಅಭಿನಯ. ಇನ್ನೊಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ!

santhoshkumar LM
santhoshkumar LM
11 years ago

Super

prashasti
11 years ago

ಸಖತ್ ಸರ್.. ಕೆಲೋ ಸಿನಿಮಾಗಳು ನೇಟಿವಿಟಿಗೆ ಎಷ್ಟು ಹೊಂದಿಕೊಂಡು ಬಿಡುತ್ತೆ ಅಂದ್ರೆ ಅದಕ್ಕೆ ಬೇರೆಯದರ ಪ್ರೇರಣೆಯಿದೆ ಎಂದು ಸ್ವತಃ ನಿರ್ದೇಶಕನೇ ಹೇಳಿದರೂ ನಂಬೋಕಾಗಲ್ಲ ಆಮೇಲೆ 🙂 ಚೆನ್ನಾಗಿ ಮೂಡಿಬಂದಿದೆ ಲೇಖನ 🙂

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
11 years ago

ಲೇಖನ ಚೆನ್ನಾಗಿದೆ….ಈ ಸಿನೇಮಾದಲ್ಲಿ ಕೆಲಸ/ಪಾತ್ರ ನಿರ್ವಹಿಸಿರುವ ಹಿರಿಯರಾದ ಶ್ರೀ ಗೋಪಾಲ ವಾಜಪೇಯಿಯವರ ಅನುಭವ ಕಥನವನ್ನು ಈಗ್ಗೆ ಕೆಲವು ತಿಂಗಳುಗಳ ಹಿಂದೆ ವೆಬ್ ಸೈಟೊಂದರಲ್ಲಿ ಓದಿದ್ದ ನನಗೆ ಅವರ ಸರಣಿ ಲೇಖನಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕೆನಿಸಿತು. ನಮ್ಮೂರ ಕಡೆ ನಡೆಯುವ ಕಥನವಾದರೂ ಬಳಸಿಕೊಂಡಿರುವ ಭಾಷಾಶೈಲಿ (ಹಳೆಯ ಧಾರವಾಡಿ/ಉತ್ತರ ಕರ್ನಾಟಕ ಶೈಲಿ) ಬೆರಗುಗೊಳಿಸುತ್ತದೆ. ಧನ್ಯವಾದಗಳು ವಾ.ರಾ. ಸರ್….

ರವೀಂದ್ರ
11 years ago

ಏನ್ ಚಂದ ಕನ್ನಡ ಬರೀತೀರಾ..? ಸೂಪರ್…
ಸಿನಿಮಾ ಬಗ್ಗೆ , ಮತ್ತು ಶೈಲಿ ಎರಡೂ …

Vasuki
11 years ago

ಯಾರಿಂದ ಪ್ರೇರಿತಗೊಂಡು ಬರೆಯಲು ಶುರುಮಾಡಿದೆನೋ ಅವರಿಂದಲೇ ಮೆಚ್ಚುಗೆ! ಇದಕ್ಕಿಂತ ಇನ್ನೇನ್ ಖುಷಿ ಬೇಕು ಹೇಳಿ! 🙂

narendra b k
narendra b k
11 years ago

ಇದು ಶಂಕರ್ ನಾಗ್ ಅಭಿನಯದ ಮೊದಲ ಚಿತ್ರವಾದರು  ಅಮೋಘವದ ಅಭಿನಯವನ್ನು ಪ್ರದರ್ಶಿಸಿದ್ದಾರೆ.
ಸುಂದರ್ ರಾಜ್ ಮತ್ತು ಸುಂದರ್ ಕೃಷ್ಣ ಅರಸ್ ಮುಂತಾದವ ಅದ್ಭುತವಾದ ತಾರಾಂಗಣವಿದೆ.
ಒಟ್ಟಿನಲ್ಲಿ ಇದು ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಚಿತ್ರಗಳಲ್ಲಿ ಒಂದು

Rajendra B. Shetty
11 years ago

ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂಬುದಕ್ಕೆ ಸಂದೇಹವಿಲ್ಲ. ಶಂಕರ್ ನಾಗ್ ಮತ್ತು ಸುಂದರ ಕೃಷ್ಣ ಅರಸರ ಯುದ್ಧ ಮುಂಜಾನೆಯಿಂದ ಸಾಯಂಕಾಲದ ವರೆಗೆ ನಡೆಯಿತು ಎಂದು ಮರಗಳ ನೆರಳಿನ ಮುಖಾಂತರ ತೋರಿಸುವುದು, ಅರಸ್ ಅವರು ಯುದ್ಧದಲ್ಲಿ ಸೋತಾಗ ಅವರ ಸೋಲಿನ ಮುಖ ಭಾವ ಮರೆಯಲು ಅಸಾಧ್ಯ.   ಕಾರ್ನಾಡರ ಉತ್ತಮ ನಿರ್ದೇಶನ. ನಿಮ್ಮ ಲೇಖನ ಓದುತ್ತಾ ಹೋದಂತೆ ಹಳೆಯ ನೆನಪುಗಳು ಮರುಕಳಿಸಿದವು.

Vasuki
11 years ago

"ಮರದ ನೆರಳು" ಅಷ್ಟಾಗಿ ಗಮನಿಸಿರಲಿಲ್ಲ. ತಿಳಿಸಿಕೊಟ್ಟದ್ದಕ್ಕೆ ಥ್ಯಾಂಕ್ಸ್! 🙂

Santhosh Mugoor
Santhosh Mugoor
11 years ago

ಒಂದಾನೊಂದು ಕಾಲದಲ್ಲಿ….ನೋಡಿದ ಚಿತ್ರದ ಬಗ್ಗೆ ನಿನ್ನ ಬರಹ ನೋಡಿ ಸಂತಸವಾಯ್ತು. ಕನ್ನಡದಲ್ಲಿ ಚಿತ್ರಗಳ ಬಗ್ಗೆ ವಸ್ತುನಿಷ್ಟವಾಗಿ ಬರೆಯುವವರ ಅಗತ್ಯವಿತ್ತು. ನೀನು ಬರೆಯಲು ಶುರು ಮಾಡಿದ ಮೇಲೆ ಸ್ವಲ್ಪ ಮಟ್ಟಿಗಾದರು ಆ ಕೊರತೆ ನೀಗಿದಂತಾಗಿದೆ. ನಿನ್ನ ಬರಹಗಳ ವ್ಯಾಪ್ತಿ ಅಂತರ್ಜಾಲವನ್ನ ಮೀರಿ ಪ್ರಿಂಟೆಡ್ ಮಾಧ್ಯಮಗಳಿಗು ಹರಡಲಿ ಅಂತ ಬಯಸ್ತೇನೆ. 

shashank soghal
11 years ago

ಚಿತ್ರ ನೋಡಲೇಬೇಕೆಂದು ಅನ್ನಿಸುತ್ತಿದೆ. ಅಷ್ಟು ಸಾಕಲ್ವ ಈ ಅಂಕಣಕ್ಕೆ ಸಾರ್ಥಕತೆ ಸಿಗಲು 🙂

Gopaal Wajapeyi
Gopaal Wajapeyi
11 years ago

'ಬಹುಶಃ ಒಂದು ಸಿನೆಮಾದಲ್ಲಿ ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತರು ಕೆಲಸ ಮಾಡಿರೋ ಇನ್ನೊಂದು ನಿದರ್ಶನ ಸಿಗಲಾರದು!' ಎಂದು ಬರೆದಿದ್ದೀರಿ. ನಿಜ ನಿಮ್ಮ ಮಾತು. ಆದರೆ, ಒಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತ ಬರೆದ ಕೃತಿ ಆಧಾರಿತ ಚಿತ್ರದಲ್ಲಿ ಇನ್ನೊಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತ ಕೆಲಸ ಮಾಡಿದ ಉದಾಹರಣೆಗಳಂತೂ ನಮ್ಮಲ್ಲೇ ಸಿಕ್ಕುತ್ತವೆ. 'ಸಂಸ್ಕಾರ'. ಡಾ. ಯು. ಆರ್. ಅನಂತಮೂರ್ತಿಯವರು ಬರೆದ ಈ ಕಾದಂಬರಿಯನ್ನು ಆಧರಿಸಿ ಚಿತ್ರ ತಯಾರಾಗುವಾಗ ಚಿತ್ರಕಥೆಯನ್ನು ಬರೆದು, ಅದರಲ್ಲಿ ಪ್ರಾಣೇಶಾಚಾರ್ಯರ ಪಾತ್ರ ಮಾಡಿದವರು ಗಿರೀಶ್ ಕಾರ್ನಾಡ. ಹಾಗೆಯೇ ಕುವೆಂಪು ಅವರ 'ಕಾನೂರು ಹೆಗ್ಗಡತಿ' ಕಾದಂಬರಿ ಆಧರಿಸಿ ತಯಾರಾದ ಚಿತ್ರದ ಚಿತ್ರಕಥೆ ಬರೆದು, ನಿರ್ದೇಶನದೊಂದಿಗೆ ಪಾತ್ರವನ್ನೂ ಮಾಡಿದವರು ಗಿರೀಶ ಕಾರ್ನಾಡರೇ. ಅಂತ ಇನ್ನೊಂದು ಅವಕಾಶ ತಪ್ಪಿಹೋದುದಕ್ಕೆ ಖೇದವಿದೆ. ಡಾ. ಚಂದ್ರಶೇಖರ ಕಂಬಾರ ಅವರ 'ಜೋಕುಮಾರಸ್ವಾಮಿ' ನಾಟಕವನ್ನು ಗಿರೀಶ ಕಾರ್ನಾಡರು ಚಿತ್ರವಾಗಿ ನಿರ್ದೇಶಿಸಬೇಕಿತ್ತು. ಆದರೆ, ಶಂಕರ್ ನಾಗ್ ಸಾವಿನಿಂದಾಗಿ ಅದು ಈಡೇರದೆ ಹೋಯಿತು.            

Vasuki
11 years ago

"ಇಂತಹವರ ಕಾದಂಬರಿ ಆಧರಿಸಿದ್ದು" ಅನ್ನೋದನ್ನ ನಾನು ಪರಿಗಣಿಸಿರಲಿಲ್ಲ, ಸಿನೆಮಾಗೆ ನೇರವಾಗಿ ಮಾತ್ರ ಸಂಬಂಧಿಸಿದವರು ಅಂದುಕೊಂಡು ಬರೆದಿದ್ದೆ. ಸಿನಿಮಾ ಬಗ್ಗೆ ಇನ್ನೂ ಬಹಳಷ್ಟು ಕುತೂಹಲಕಾರಿ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, ಸರ್!

Gopaal Wajapeyi
Gopaal Wajapeyi
11 years ago

ಅಂದಹಾಗೆ, ಇಲ್ಲಿ ಮಿತ್ರ ಶ್ರೀ ಸಿದ್ದರಾಮ ಹಿಪ್ಪರಿಗಿಯವರು ನಾನು ಈ ಚಿತ್ರದಲ್ಲಿ ಕೆಲಸ/ಪಾತ್ರ ನಿರ್ವಹಿಸಿರುವುದಾಗಿ ಬರೆದಿದ್ದಾರೆ. 
ಅದು ಅಪೂರ್ಣ ಮಾಹಿತಿ. 
ನಾನು ಈ ಚಿತ್ರದಲ್ಲಿ ಯಾವುದೇ ಕೆಲಸ ನಿರ್ವಹಿಸಿಲ್ಲ. ಈ ಚಿತ್ರ ತಯಾರಾಗುವ ಸಂದರ್ಭದಲ್ಲಿ ನಾನು 'ಕರ್ಮವೀರ' ಪತ್ರಿಕೆಯ ಸಿನೆಮಾ ವಿಭಾಗವನ್ನು ನೋಡಿಕೊಳ್ಳುತ್ತಿದ್ದೆ. ಹುಬ್ಬಳ್ಳಿಗೆ ತೀರ ಸಮೀಪವೇ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದುದರಿಂದ ನಾಲ್ಕಾರು ಬಾರಿ ಹೋಗಿದ್ದೆ. ಆ ಸಂದರ್ಭದಲ್ಲಿ ಕಾರ್ನಾಡರು ಒಂದು ಸಣ್ಣ ಸನ್ನಿವೇಶದಲ್ಲಿ ವೇಷ ತೊಡಿಸಿ ನನ್ನನ್ನೂ ಶಂಕರ್ ನಾಗ ಜತೆ ಕೂಡಿಸಿ ಚಿತ್ರೀಕರಿಸಿಕೊಂಡರು, ಅಷ್ಟೇ. ಆದರೆ ಈ ಚಿತ್ರದಿಂದಲೇ ನನಗೆ ಶಂಕರ್ ನಾಗ್, ನಾಗಾಭರಣ, ಸುಂದರರಾಜ್ ಹಾಗೂ ಸುಂದರ ಕೃಷ್ಣ ಅರಸ್ ಅವರ ಪರಿಚಯವಾಗಿ ಮುಂದೆ ಅವರೊಂದಿಗೆ ಒಂದಷ್ಟು ಚಿತ್ರಗಳಲ್ಲಿ ನಾನು ತೊಡಗಿಕೊಳ್ಳುವಂತಾಯಿತು ಎಂಬುದು ಮಾತ್ರ ಸತ್ಯ.           

Gaviswamy
11 years ago

ತುಂಬಾ ಚೆನ್ನಾಗಿ  ವಿಮರ್ಶಿದ್ದೀರಿ.
ಇದು ನಾನು ತುಂಬಾ ಇಷ್ಟಪಡುವ ಚಿತ್ರ .

ಎಲ್ಲೋ ಓದಿದ ನೆನಪು .
ಈ ಚಿತ್ರದಲ್ಲಿ ನಟಿಸಲು ಶಂಕರ್ ನಾಗ್ ರಿಗೆ ಒಪ್ಪಿರಲಿಲ್ಲವಂತೆ.
 ಕಾರ್ನಾಡರು ಅನಂತ್ನಾಗ್ರ  ಮೂಲಕ ಒತ್ತಡ ಹಾಕಿದ ಾಗ ಅನಂತ್ನಾಗ್ ಶಂಕರರನ್ನು ಬೈದು ಒಪ್ಪಿಸಿದರಂತೆ .
infact ಶಂಕರ್ನಾಗ್ acting ಗಿಂತ ಹೆಚ್ಚಾಗಿ ನಿರ್ದೇಶನವನ್ನು ಇಷ್ಟಪಡುತ್ತಿದ್ದರು. 

ಬಹುಶಃ ಡಾ.ರಾಜ್ ಕುಮಾರ್ ರ ನಂತರ ಕನ್ನಡಿಗರ ಮನದಲ್ಲಿ ಭಾವನಾತ್ಮಕವಾಗಿ ಬೆಸೆದುಕೊಂಡಿರುವ  ಹೆಸರು ಶಂಕರ್ ನಾಗ್.

ಧನ್ಯವಾದ ಗಳು.

 

Vasuki
11 years ago

ಲೇಖನಕ್ಕೆ ಪ್ರತಿಕ್ರಿಯಿಸಿದ ಎಲ್ಲರಿಗೂ ಥ್ಯಾಂಕ್ಸ್! ಬರವಣಿಗೆ ಏಕಮುಖವಾಗದೇ, ಚರ್ಚೆ ಮತ್ತು ವಿಚಾರ ವಿನಿಮಯಕ್ಕೆ ದಾರಿಮಾಡಿತು ಅನ್ನೋದೇ ತುಂಬಾ ಸಂತೋಷ ನಂಗೆ!

Utham Danihalli
11 years ago

Oleya lekana enastu kannada cinimagala bagge bareyiri shubhavagali

18
0
Would love your thoughts, please comment.x
()
x