ಒಂಟೆ ಡುಬ್ಬ: ಡಾ. ಅಶೋಕ್. ಕೆ. ಆರ್

ಬೈಕೋಡಿಸುವಾಗ ರಶಿಕ ಕನ್ನಡ ಹಾಡುಗಳನ್ನು ಕೇಳುವುದಿಲ್ಲ.
ಬ್ಲೂಟೂಥ್ ಹೆಲ್ಮೆಟ್ಟಿನಲ್ಲಿ ಸಣ್ಣಗಿನ ದನಿಯಲ್ಲಿ ಗುನುಗುತ್ತಿದ್ದುದು ಮಲಯಾಳಂ, ತಮಿಳು ಹಾಡುಗಳು.
ಕನ್ನಡ ಹಾಡ್ ಹಾಕಂಡ್ರೆ ಪ್ರತಿ ಪದಾನೂ ಅರ್ಥವಾಗ್ತ ಆಗ್ತ ಹಾಡಿನ ಗುಂಗಲ್ಲಿ ಸುತ್ತಲಿನ ಪರಿಸರ ಮರ್ತೋಗ್ತದೆ, ಹಂಗಾಗಿ ಭಾಷೆ ಅರ್ಥವಾಗ್ದಿರೋ ಹಾಡುಗಳೇ ವಾಸಿ.
ರಾತ್ರಿಯಿಂದ ಬೋರ್ಗರೆದಿದ್ದ ಮಳೆ ಬೆಳಿಗ್ಗೆ ವಿರಮಿಸಿತ್ತು.
“ಈ ಕಡೆ ರೋಡಲ್ಲಿ ಒಂದ್ ಮೂವತ್ ಕಿಲೋಮೀಟ್ರು ಹೋದ್ರೆ ಕರ್ಮುಗಿಲು ಅನ್ನೋ ಊರು ಸಿಗ್ತದೆ. ಹೆಚ್ಚೇನಿಲ್ಲ ಅಲ್ಲಿ. ಒಳ್ಳೆ ಸನ್ ರೈಸ್ ಪಾಯಿಂಟಿದೆ ಅಲ್ಲಿ. ಮೋಡ ಇದ್ರೆ ನಿರಾಸೆಯಾಗ್ತದೆ. ನೋಡಿ. ಡಿಸೈಡ್ ಮಾಡಿ” ಅಂದಿದ್ದರು ಹೋಟೆಲ್ಲಿನವರು. ಮೂವತ್ ಕಿಲೋಮೀಟ್ರಲ್ವ, ಹೋಗೋಕ್ ಒಂದು ಬರೋಕ್ ಒಂದು ಘಂಟೆ ಅಷ್ಟೇ ಎಂದುಕೊಂಡು ಮೊಬೈಲಿನಲ್ಲಿ ಸನ್ ರೈಸ್ ಸಮಯ ನೋಡಿಕೊಂಡು ಐದೂವರೆಗೆ ಹೊರಟಿದ್ದಳು ರಶಿಕ.

ಇಪ್ಪತ್ತು ಕಿಲೋಮೀಟರು ಕ್ರಮಿಸಿದ್ದಳು. ಅಲ್ಲೆಲ್ಲೋ ದೂರದಲ್ಲಿ ನೀರು ಬೋರ್ಗರೆವ ಸದ್ದು. ಬೈಕು ನಿಲ್ಲಿಸಿದಳು. ಬ್ಲೂಟೂಥ್ನಲ್ಲಿ ಕೇಳ್ತಿರೋದಾ? ಇಲ್ಲ. ಹ್ಯಾಂಡಲ್ಲಿಗೆ ಸಿಕ್ಕಿಸಿದ್ದ ಮೊಬೈಲಿನಲ್ಲಿ ಮ್ಯೂಸಿಕ್ ಪಾಸ್ ಮಾಡಿ ಮೈಯೆಲ್ಲಾ ಕಿವಿಯಾದಳು. ಯಾವ ಸದ್ದೂ ಇಲ್ಲ. ತಲೆ ಎತ್ತಿ ನೋಡಿದಳು. ಮೋಡದ ಸುಳಿವಿರಲಿಲ್ಲ. ಹೆಲ್ಮೆಟ್ಟಿನ ಸಂದಿಗೊಂದಿಯಲ್ಲಿ ತೂರಿಬಂದ ಗಾಳಿಯ ಸದ್ದಿರಬೇಕು ಎಂದುಕೊಳ್ಳುತ್ತ ಹೊರಡಲನುವಾದಳು. ಮತ್ತೆ ಸದ್ದಾಯಿತು. ಇದು ತಲೆಯ ಮೇಲಿಂದ ಕೇಳಿಬಂದ ಸದ್ದಲ್ಲ, ಕಾಲ ಬುಡದಿಂದ ಉಕ್ಕುತ್ತಿರುವುದು. ಕೆಳಗೇನಾದರೂ ನದಿ? ಇಲ್ಲ. ಕ್ಷಣಮಾತ್ರದಲ್ಲಿ ಕಾಲ ಕೆಳಗಿನ ಭೂಮಿ ಅದುರಲಾರಂಭಿಸಿತು. ರಶಿಕಾಳಲ್ಲಿ ಜೀವ ಭಯದ ಕಂಪನ. ಮಿರರ್ರಿನ ಹತ್ತಿರ ನೇತಾಕಿದ್ದ ಹೆಲ್ಮೆಟ್ ಧರಿಸುವುದನ್ನೂ ಮರೆತು ಬೈಕನ್ನು ವೇಗವಾಗಿ ಚಲಿಸಲಾರಂಭಿಸಿದಳು. ಪಕ್ಕದ ಗುಡ್ಡ ರಸ್ತೆಯನ್ನಪ್ಪಿಕೊಳ್ಳತೊಡಗಿತು. ಗಾಬರಿಯ ಜೊತೆ ಬೈಕಿನ ವೇಗವೂ ಹೆಚ್ಚಾಯಿತು. ತಿರುವೊಂದರಲ್ಲಿ ಬಿದ್ದಿದ್ದ ಮಣ್ಣಿನ ಗುಡ್ಡೆಗೆ ಬೈಕು ಗುದ್ದಿ ಬೀಳುವಾಗ “ಛೇ ಹೆಲ್ಮೆಟ್ಟು” ಎಂದು ಗೊಣಗಿಕೊಂಡಳು.

ಅಂತ ಗಟ್ಟಿ ಟಾರು ರಸ್ತೆಯಲ್ಲದ ಕಾರಣ ಹೆಚ್ಚು ಏಟಾದಂತಿಲ್ಲ ಎಂದು ನಿಟ್ಟುಸಿರುಬಿಡುವಾಗ ಕಣ್ಣು ಕೆಂಪುಗಟ್ಟಿತು. ಎದುರಿನದ್ದೇನೂ ಕಾಣಲಿಲ್ಲ. ಅಪಾರ ಉರಿ. ಕಣ್ಣು ಮುಚ್ಚಿದಳು. ಸಮಾಧಾನವಾಯಿತು. ಒಂದು ನಿಮಿಷ ತಡೆದು ಮತ್ತೆ ಕಣ್ಣು ಬಿಟ್ಟಳು. ನೋವು ನೋವು. ಕೆಂಪು ಕೆಂಪು.
ಹಂಗೇ ತಡಕಾಡಿ ಬೈಕ್ ಆಫ್ ಮಾಡಿ ಕೀ ಎತ್ತಿಕೊಂಡು ಅಲ್ಲೇ ನೆಲದ ಮೇಲೆ ಒಂದೆಡೆ ಕಣ್ಣು ಮುಚ್ಚಿ ಕುಳಿತಳು. ಕರ್ಮುಗಿಲಿಗೆ ಹೋಗುವವರೋ ಅಲ್ಲಿಂದ ಬರುವವರಿಗ್ಯಾರಿಗಾದರೂ ಕಾಯುತ್ತ ಕುಳಿತಳು. ನೀರ ಬೋರ್ಗರತೆದ ಸದ್ದು ನಿಂತಿತ್ತು. ಪಕ್ಕದ ಗುಡ್ಡದ ಮಣ್ಣು ಪೂರ್ತಿ ಕುಸಿಯುವುದರೊಳಗೆ ಯಾರಾದರೂ ಬಂದರೆ ಸಾಕು.
ಮುಚ್ಚಿದ ಕಣ್ಣುಗಳು ಮೆದುಳಿಗೆ ಮನಿಕ್ಕೋ ಹೋಗು ಎಂದೇಳಿತೇನೋ, ನಿದ್ರೆ ಎಳೆಯುತ್ತಿತ್ತು. ಇದು ನಿಜ್ಜ ನಿದ್ರೆಯೇ ಹೌದಾ? ಅಥವಾ ತಲೆಪೆಟ್ಟಾಗಿ ಮೆದುಳಿಗೆ ಘಾಸಿಯಾಗಿದೆಯಾ? ಒಂದ್ ಕ್ಷಣ ಹೆಲ್ಮೆಟ್ ಧರಿಸದಿದ್ದಕ್ಕೆ ಇಷ್ಟೆಲ್ಲಾ ಶಿಕ್ಷೆಯಾ?

ಆಟೋದ ಸದ್ದು ಹತ್ತಿರವಾಗುತ್ತಿತ್ತು. ರಸ್ತೆಯಲ್ಲಿ ಓಡಾಡುವವರಿಗೆ ಕಾಣುವಂತೆಯೇ ಕುಳಿತಿದ್ದೀನಲ್ಲಾ? ಚಿಕ್ಕ ರಸ್ತೆ, ಕಾಣಿಸಲೇಬೇಕು. ರಶಿಕಾಳನ್ನವರು ಕಂಡರು. ಇಬ್ಬರಿದ್ದರು.
“ಏನಾಯ್ತು ಮೇಡಂ?” ಎಂದನೊಬ್ಬ.
“ಬೈಕ್ ಸ್ಕಿಡ್ ಆಯ್ತು” ರಶಿಕಾಳ ಮಾತಿಗೆ ಇನ್ನೊಬ್ಬ ನಗುತ್ತಾ “ಅದ್ ಗೊತ್ತಾಗುತ್ತಲ್ಲ! ನಿಮಗೇನಾಯ್ತು? ಯಾಕಿಂಗ್ ಕಣ್ ಮುಚ್ಚಿ ಕುಳಿತುಬಿಟ್ಟಿದ್ದೀರಾ?”
“ಏನೋ ಗೊತ್ತಿಲ್ಲ ಸರ್. ಇನ್ನೆಲ್ಲೂ ಪೆಟ್ಟಾದಂತಿಲ್ಲ. ಆದ್ರೆ ಕಣ್ ಬಿಡೋಕಾಗ್ತಿಲ್ಲ. ಬಿಟ್ರೆ ಉರಿ ನೋವು”
“ಹು. ಒಂತೊಟ್ಟು ರಕ್ತ ಹೊರಬಂದಂಗಿದೆ ಕಣ್ಣಿಂದ”
ಬಲಗಣ್ಣಿನ ರೆಪ್ಪೆಯ ಬಳಿ ಕೈಯಾಡಿಸಿದಾಗ ಬೆರಳುಗಳು ರಕ್ತದಿಂದ ತೇವವಾಯಿತು. ವಿಹ್ವಲಗೊಂಡಳು. ಅಳಬೇಕೆನಿಸಿತು. ಕಣ್ಣುಗಳು ಅನುವು ಮಾಡಿಕೊಡಲಿಲ್ಲ.
“ದಯವಿಟ್ಟು ನನ್ನ ಸಿಟೀಲ್ಯಾವುದಾದ್ರೂ ಆಸ್ಪತ್ರೆಗೆ ಸೇರಿಸ್ತೀರಾ?”

“ಅಯ್ಯೋ! ನಿಮಗೆ ವಿಷಯ ಗೊತ್ತಿಲ್ಲ. ಅರ್ಧ ಘಂಟೆ ಮುಂಚೆ ಜೋರು ಸದ್ದಾಯ್ತಲ್ಲಾ? ಆ ಕಂಪನಕ್ಕೆ ಸಿಟಿಗೋಗೋ ಸೇತುವೆ ಕುಸಿದುಬಿದ್ದಿದೆಯಂತೆ. ನನ್ನ ಕಸಿನ್ ಫೋನ್ ಮಾಡೇಳಿದ. ಅದುನ್ನ ನೋಡೋಕೇ ಅಂತಾನೆ ಹೊರಟಿದ್ದೋ ನಾವಿಬ್ರು”
ಕುಸಿದ ಸೇತುವೆಯನ್ನೆಂತ ನೋಡೋದು? ರಶಿಕಳಲ್ಲಿ ಮೂಡಿದ ಪ್ರಶ್ನೆ ‘ನೀನ್ಯಾಕೆ ಒಬ್ಬೊಬ್ಳೇ ಅಲೀತಿ’ ಅಂತ ಊರಲ್ಲೆಲ್ಲಾ ಕೇಳುವಂತೆಯೇ ಬಾಲಿಶವಾಗಿತ್ತು.
“ಮತ್ತೀಗ ಗತಿ? ನಿಮ್ಮೂರಲ್ಲಿ ಡಾಕ್ಟರ್ ಇದ್ದಾರಾ? ಕ್ಲಿನಿಕ್ ಏನಾದ್ರೂ ಇದೆಯಾ?”
“ಗವರ್ನ್ ಮೆಂಟ್ದಿಲ್ಲ. ಆ ಹೊಂಗಿರಣ ಟ್ರಸ್ಟ್ ಅವರದ್ದೊಂದಿದೆ. ಇವತ್ ಭಾನುವಾರ ಅಲ್ವಾ. ಯಾವ ಡಾಕ್ಟ್ರೂ ಇರಲ್ಲ”
“ಅಯ್ಯೋ” ರಶಿಕಾಳಿಗೆ ಮತ್ತೇನು ಹೇಳಲೂ ತೋಚಲಿಲ್ಲ.
“ಇವತ್ ಯಾವ ಭಾನುವಾರ ಹೇಳು?” ಒಬ್ಬ ಕೇಳಿದ.
“ಎರಡನೇ ಭಾನುವಾರ. ಯಾಕೆ?” ಮತ್ತೊಬ್ಬನ ಪ್ರಶ್ನೆ.
“ಆ ಕಣ್ಣಿನ್ ಡಾಕ್ಟ್ರು ಬರೋದು ಸೆಕೆಂಡ್ ಸಂಡೇನಾ ಮೂರ್ನೇದಾ?”

“ಎರಡನೇದೇ ಇರ್ಬೇಕು. ಬಂದಿದ್ರೆ ನಿನ್ನೆ ಸಂಜೇನೇ ಬಂದಿರ್ತಾರೆ” ಎಂದವನು ರಶಿಕಳನ್ನುದ್ದೇಶಿಸಿ “ಮೇಡಂ ನಿಮ್ಮದೃಷ್ಟ ಚೆನ್ನಾಗಿರೋ ಹಂಗಿದೆ. ಕಣ್ಣಿನ ಡಾಕ್ಟ್ರೇ ಸಿಕ್ಕರೂ ಸಿಗಬಹುದು. ನಡೀರಿ ಹೊರಡುವ” ಎಂದ.
“ಅಕಸ್ಮಾತ್ ಇಲ್ಲದೇ ಹೋದರೆ?” ರಶಿಕಳಲ್ಲಿ ಅನುಮಾನ.
“ಹಿಂಗೆಲ್ಲ ನೆಗೆಟೀವ್ ಥಾಟ್ಸ್ ಇರಬಾರದು. ಇರ್ತಾರೆ ಅಂದ್ಕಂಡೇ ಹೋಗುವ. ಇಲ್ಲ ಅಂದ್ರೆ ಆಮೇಲ್ ಯೋಚನೆ ಮಾಡುವ” ಬಯ್ಯುತ್ತಾ ರಶಿಕಾಳನ್ನ ಮೇಲೆತ್ತಿದ. ನಿಧಾನಕ್ಕೆ ನಡೆಸಿಕೊಂಡು ಬಂದು ಆಟೋದೊಳಗೆ ಕೂರಿಸಿದ. ಮತ್ತೊಬ್ಬ ಬೈಕ್ ಕೀ ಕೇಳಿದ. ಕೊಟ್ಟಳು.
“ಈ ಹೆಣಭಾರದ ಬೈಕುಗಳನ್ನು ಅದೆಂಗ್ ಓಡಿಸ್ತೀರೋ ಏನೋ” ಬಯ್ದುಕೊಂಡೇ ಮೇಲೆತ್ತಿ ಸ್ಟಾರ್ಟ್ ಮಾಡಿದ.
“ಹುಷಾರು ಬೈಕು” ಎಂದವಳ ಮಾತಿಗೆ ಇಬ್ಬರೂ ನಗಾಡಿದರು.
ಬೈಕ್ ಅಂದ್ರೆ ಅಷ್ಟು ಪ್ರೀತಿ ರಶಿಕಾಗೆ.


“ಇದೇನಮ್ಮ! ಲೆಕ್ಕ ಹಾಕ್ದಂಗೆ ಎರಡು ಕಡೇನೂ ಒಂದೇ ಜಾಗದಲ್ಲಿ ಗಾಯವಾಗಿದೆ” ಕಣ್ಣು ಪರೀಕ್ಷಿಸುತ್ತಾ ಹೇಳಿದರು ಡಾ. ಸುನಿಲ್.
“ದೃಷ್ಟಿ ಬರುತ್ತೆ ಅಲ್ವಾ ಡಾಕ್ಟ್ರೇ”
“ಅಷ್ಟೆಲ್ಲಾ ಗಾಬರಿಯಾಗೋವಷ್ಟು ಏನೂ ಏಟಾಗಿಲ್ಲ. ಕಣ್ಣಿನೊಳಗೆ ಪೆಟ್ಟು ಬಿದ್ದಿಲ್ಲ. ಕಣ್ ಸುತ್ತಾ ಮುಂಭಾಗದಲ್ಲಿ ಕಂಜಂಕ್ಟೈವಾ ಅನ್ನೋ ತೆಳು ಪರದೆ ಇರ್ತದೆ. ಅದಿಕ್ಕೆ ಪೆಟ್ಟಾಗಿದೆ, ಮಣ್ಣ ಕಣದಿಂದ. ಜೊತೆಗೆ ಬಲಗಣ್ಣಿನ ರೆಪ್ಪೆಯ ಒಳಭಾಗಕ್ಕೂ ಪೆಟ್ಟಾಗಿದೆ. ಡ್ರಾಪ್ಸ್ ಕೊಡ್ತೀನಿ. ದಿನಾ ನಾಲ್ಕು ಸಲ ಹಾಕಿಸ್ಕೋಬೇಕು. ಜೊತೆಗೊಂದು ಕೋರ್ಸು ಯಾಂಟಿಬಯಾಟಿಕ್ಕು, ಪೇನ್ ಕಿಲ್ಲರ್ರು. ಬ್ಯಾಂಡೇಜ್ ಹಾಕ್ಕೊಡ್ತೀನಿ. ಡ್ರಾಪ್ಸ್ ಹಾಕುವಾಗಷ್ಟೇ ಬ್ಯಾಂಡೇಜ್ ತೆಗೆದು ಡ್ರಾಪ್ಸ್ ಹಾಕಿಸ್ಕೋಬೇಕು. ಬೆಳಕು ಜಾಸ್ತಿ ಇದ್ದರೆ ಕಣ್ ಸ್ವಲ್ಪ ಉರಿ ಉರಿ ಅನ್ಸುತ್ತೆ ಮೊದಲೆರಡು ದಿನ. ಒಂದ್ ಮೂರ್ ದಿನ ಬ್ಯಾಂಡೇಜ್ ಇರಲಿ. ಆಮೇಲೆ ತೆಗೆದರೆ ತೊಂದ್ರೆಯಿಲ್ಲ” ಬಿಡುವು ಕೊಡದಂತೆ ಹೇಳುತ್ತಲೇ ಹೋದರು ಡಾ. ಸುನಿಲ್. ನನ್ನ ಸಮಸ್ಯೆಯನ್ನವರಿಗೆ ಅರ್ಥ ಮಾಡಿಸುವುದೇಗೆ, ರಶಿಕಾಳಿಗೆ ತೊಳಲಾಟ.
“ಡಾಕ್ಟ್ರೇ. ನನ್ನನ್ನಿಲ್ಲೇ ಮೂರು ದಿನ ಅಡ್ಮಿಟ್ ಮಾಡಿಕೊಳ್ಳಬಹುದಾ?”

“ಅಡ್ಮಿಟ್ಟಾ?! ಇದು ಬರೀ ಒಂದು ರೂಮಿನ ಕ್ಲಿನಿಕ್ಕು ಕಣಮ್ಮ. ನಾವ್ ಬಂದು ಕಸ ಗುಡಿಸಿದರಷ್ಟೇ ಇದು ಓಪನ್ನಾಗೋದು”
“ನಾನು ರೈಡಿಗೆಂದು ಬಂದವಳು. ಇಲ್ಯಾರ ಪರಿಚಯವೂ ಇಲ್ಲ. ಏನು ಮಾಡೋದು?”
“ಹೌದಾ! ಇದೊಳ್ಳೆ ಪಜೀತಿಯಾಯ್ತಲ್ಲ. ಇಲ್ಲಿನ್ಯಾವ ಹೋಟೆಲ್ಲೂ ಇಲ್ಲ. ಸಿಟಿಗೋಗೋ ರಸ್ತೆಯ ಸೇತುವೆಯೂ ಕುಸಿದು ಬಿದ್ದಿದೆ”
“ಇನ್ಯಾವ ರಸ್ತೆಯೂ ಇಲ್ಲವಾ?”
“ಇನ್ನೊಂದು ಬಳಸು ರಸ್ತೆಯಿದೆ. ಕಾಡಂಚಿನಲ್ಲಿ ಹೋಗ್ತದೆ. ಮಣ್ಣು ಕುಸಿದು ಆ ರಸ್ತೆಯೂ ಮುಚ್ಚಿಹೋಗಿದೆ. ಜಿಸಿಬಿ ಬಂದು ಮಣ್ಣು ತೆಗೆಯಲು ಎರಡು ಮೂರು ದಿನವಾದ್ರೂ ಆಗ್ತದೆ ಅಂತಿದ್ರು ನೋಡಿದವರು”
ಕೇಳುವುದೋ ಬೇಡವೋ…. ನಾಚಿಕೆಗಿಲ್ಲಿ ತಾವಿಲ್ಲ.

“ಡಾಕ್ಟ್ರೇ ನೀವೇನು ತಿಳೀದೇ ಇದ್ರೆ ನಿಮ್ಮ ಮನೇಲೇ ಇರ್ಲಾ?”
“ಒಳ್ಳೆ ಕತೆ ಹುಡುಗಿ. ನನ್ನ ಮನೆ ಇಲ್ಲೇ ಇದ್ದಿದ್ರೆ ಇರೋಕ್ ಹೇಳ್ತಿರಲಿಲ್ಲವೇ? ನಾನೂ ಸಿಟಿಯೋನೇ. ಇಲ್ಲಿಗೆ ಬಂದಾಗ ಈ ಕ್ಲಿನಿಕ್ಕಲ್ಲೇ ಮಲಗೋದು ನಾನು. ಇವತ್ತು ರಾತ್ರಿಯಷ್ಟೊತ್ತಿಗೆ ವಾಪಸ್ಸಾಗಲೇಬೇಕು ನನಗೆ”
“ಹಂಗಾದ್ರೆ ನೀವೆಂಗೋಗ್ತೀರೋ ನಾನೂ ಹಂಗೇ ಬಂದುಬಿಡ್ತೀನಿ ನಿಮ್ಮ ಜೊತೆ”
“ಪ್ಚು ಪ್ಚು. ಬೇಡ ಬೇಡ. ಈ ಪರಿಸ್ಥಿತಿಯಲ್ಲಿ ಬೇಡವೇ ಬೇಡ. ನಾನು ಕಾಲುದಾರೀಲಿ ನಡೆದು ಹೋಗಬೇಕು. ಗುಡ್ಡ ಬೆಟ್ಟ ಹತ್ತಿಳಿದು. ಆಗಿರೋ ಕುಸಿತ ನೋಡಿದ್ರೆ ಆ ದಾರಿಗಳಾದರೂ ಇದೆಯೋ ಇಲ್ವೋ ಗೊತ್ತಿಲ್ಲ” ಇನ್ನೇನು ಪರಿಹಾರ ಈ ಸಮಸ್ಯೆಗೆ ಎಂದೋಚಿಸುತ್ತಿದ್ದವರಿಗೆ ಶಿರಾಜುದ್ದೀನನ ನೆನಪಾಯಿತು. ಇಷ್ಟೊತ್ಯಾಕಿದು ನನಗೆ ಹೊಳೆಯಲಿಲ್ಲ ಎಂದು ಪೇಚಾಡಿಕೊಳ್ಳುತ್ತಾ “ನನ್ನ ಸ್ನೇಹಿತನೊಬ್ಬನಿದ್ದಾನೆ ಶಿರಾಜು ಅಂತ. ಎಷ್ಟೋ ವರ್ಷಗಳ ಮುಂಚೆ ನರ್ಸಾಗೂ ಕೆಲಸ ಮಾಡಿದ್ದ. ಅವರ ಮನೇಲಿರೋದೆ ಅಪ್ಪ ಮಗಳು. ನಿಂಗೆ ಓಕೆ ಅಂದ್ರೆ ಮಾತಾಡ್ತೀನಿ ಅವನ ಜೊತೆ. ನಾ ಕೇಳಿದ್ರೆ ಇಲ್ಲ ಅನ್ನೋಲ್ಲ ಅವನು”
ಗುರುತು ಪರಿಚರವಿರದವರ ಮನೆಯಲ್ಲಿ ಕುರುಡಿಯಾಗಿ ಮೂರು ದಿನ ಕಳೆಯುವುದೆಂದರೆ? ಮತ್ತೊಂದು ಸುತ್ತು ಭಯವಾಯಿತು.

“ಭಯ ಪಡೋದೇನಿಲ್ಲ. ಒಂದಿಪ್ಪತ್ತು ವರ್ಷದ ಪರಿಚಯ ನನಗೆ”
“ಭಯ ಅಂತಲ್ಲ. ಸುಮ್ನೆ ಈ ಟೆಂಪರರಿ ಕುರುಡೀನ ನೋಡ್ಕೊಳ್ಳೋ ಜವಾಬ್ದಾರಿ. ಅವರಿಗ್ಯಾಕೆ ತೊಂದರೆ ಅಂತ”
“ಇದು ಬಿಟ್ಟು ಬೇರೆ ಆಯ್ಕೆ ಏನಾದ್ರೂ ತೋಚ್ತದಾ?”
ಇಲ್ಲವೆಂಬಂತೆ ತಲೆಯಾಡಿಸಿದಳು.
ಡಾಕ್ಟ್ರು ಶಿರಾಜುದ್ದೀನನಿಗೆ ಫೋನು ಮಾಡಿದರು.
“ಅವನೇ ಜೀಪು ತಗಂಡ್ ಬರ್ತಾನಂತೆ. ಅವನ ಮಗಳೂ ನಿನಗೆ ಜೊತೆಯಾಗ್ತಾಳೆ. ನಿನ್ನಷ್ಟೇ ಎತ್ತರ ಖುಶೀದು. ಅವಳ ಬಟ್ಟೆಗಳೇ ಆಗ್ತವೆ ನಿಂಗೆ” ಸಮಾಧಾನದ ಮಾತುಗಳನ್ನಾಡಿದರು ಸುನಿಲ್.
“ನನ್ ಬೈಕು?”
“ನಿನ್ ಬೈಕಿಗೇನಾಗುತ್ತಮ್ಮ? ಒಳ್ಳೆ ಹುಡುಗಿ. ಇಲ್ಲೇ ಇರುತ್ತೆ ಬಿಡು”
“ನಿಮಗೆ ನಿಮ್ ಸ್ಟೆತ್ ಹೆಂಗೋ ನನಗೆ ನನ್ನ ಬೈಕು” ನಕ್ಕಳು.

ನಗುವಿನ ಜೊತೆಗೂಡುತ್ತಾ “ನಾನ್ ಸ್ಟೆತ್ ಬಳಸಿ ಯಾವ್ದೋ ಕಾಲವೇ ಆಯ್ತು. ಕಣ್ಣಿನ ಡಾಕ್ಟರ್ ಅಲ್ವೇ”
“ಅದೇನೋ ಕಣ್ಣೊಳಗೆ ಬ್ಯಾಟರಿ ಬಿಡ್ತೀರಲ್ಲ ಅದು?”
“ಹು! ಆಫ್ತಲ್ಮಾಸ್ಕೋಪ್ ಅಂದ್ರೆ ಲವ್ವೇ”
“ನನಗೆ ನನ್ನ ಬೈಕು ಹಂಗೇ!”
“ಸರೀನಮ್ಮ. ಅವನಿಗೆ ಹೇಳ್ತೀನಿ. ಯಾರತ್ರನಾದ್ರೂ ಬೈಕು ತರಿಸಿಕೊಳ್ತಾನೆ ಮನೆ ಹತ್ತಿರಕ್ಕೆ”
“ಬೈಕಿಗೇನೂ ಪೆಟ್ಟಾಗಿಲ್ಲ ತಾನೇ?” ರಶಿಕಳ ಪ್ರಶ್ನೆಗೆ ಡಾಕ್ಟರು ಮತ್ತೊಂದು ಸುತ್ತು ನಕ್ಕರು.
ಬೈಕ್ ಅಂದ್ರೆ ಅಷ್ಟು ಪ್ರೀತಿ ರಶಿಕಾಗೆ.


ಕತ್ತಲೆಯ ಪ್ರಪಂಚ ಮನುಷ್ಯನನ್ನು ಅಸಹಾಯಕವಾಗಿಸುತ್ತದೆ, ಬದುಕನ್ನು ಅಸಹನೀಯಗೊಳಿಸಿಬಿಡುತ್ತದೆಂಬ ಅಂದಾಜಿರಲಿಲ್ಲ ರಶಿಕಾಗೆ. ಊರಲ್ಲಂತೂ ಇಪ್ಪತ್ತನಾಲ್ಕು ಘಂಟೆ ಕರೆಂಟು. ಕರೆಂಟ್ ಹೋದರೆ ಯು.ಪಿ.ಎಸ್ ಇದ್ದೇ ಇದೆ. ಅದೂ ಕೈಕೊಟ್ಟರೆ ಮೊಬೈಲಿನ ಟಾರ್ಚಿದೆ. ಕಡುಗಪ್ಪು ಕತ್ತಲನ್ನು ನೋಡಿದ್ಯಾವಾಗ? ನೆನಪಿಗೆ ಬರಲಿಲ್ಲ. ಒಂದೊಂದು ಹೆಜ್ಜೆ ಎತ್ತಿಡಲೂ ಭಯ, ಎಡವಿಬಿದ್ದರೆ? ಕೈ ಅತ್ತಿತ್ತ ಅಲುಗಾಡಿಸಲೂ ಭಯ, ತಗುಲಿಸಿಕೊಂಡರೆ?

ಇದೆಲ್ಲದರ ಜೊತೆಗೆ ಅಪರಿಚಿತರ ಮನೆಯಲ್ಲಿ ಕನಿಷ್ಠವೆಂದರೂ ಮೂರು ದಿನಗಳಿರಬೇಕೆಂಬ ಭಯ, ಈ ಭಯವನ್ನು ಮೊದಲ ಭೇಟಿಯಿಂದಲೇ ದೂರಾಗಿಸಿದ್ದು ಖುಶಿ.
ಶಿರಾಜುದ್ದೀನ್ ಹೆಚ್ಚು ಮಾತಿನ ಮನುಷ್ಯನಲ್ಲ. ಕ್ಲಿನಿಕ್ಕಿಗೆ ಬಂದವರ ಕೈಗೆ ಡ್ರಾಪ್ಸು, ಔಷಧಿಯ ಶೀಟುಗಳನ್ನೊಪ್ಪಿಸಿದ ಡಾಕ್ಟ್ರು ಯಾವ್ಯಾವಾಗ ಕೊಡಬೇಕೆಂದು ವಿವರಿಸಿದರು. “ನಡಿಯಮ್ಮ ಹೋಗುವ” ಅಂತೇಳಿದ ಶಿರಾಜುದ್ದೀನ್ ರಶಿಕಳ ಕೈಹಿಡಿದು ಜೀಪು ಹತ್ತಿಸಿದರು. ಮನೆ ತಲುಪುವವರೆಗೂ ಮಾತಿಲ್ಲ.

ಮನೆಯಂಗಳದಲ್ಲಿ ಖುಶಿ ರಶಿಕಾಳ ಬರುವಿಕೆಗೆ ಸಡಗರದಿಂದ ಕಾಯುತ್ತಿದ್ದಳು. ಜೀಪಿನತ್ತಿರ ಬಂದವಳೇ “ಬನ್ನಿ ಅಕ್ಕ. ಏನೂ ನಾಚ್ಕೋಬೇಡಿ. ನಿಮ್ಮ ಮನೆ ಅಂತಾನೆ ತಿಳ್ಕೊಳ್ಳಿ. ನೀವ್ ನಾನ್ ವೆಜ್ ತಿಂತೀರಲ್ವ? ಅಪ್ಪ ಒಳ್ಳೆ ಚಿಕನ್ ಬಿರಿಯಾನಿ ಮಾಡ್ತಾರೆ. ಮಧ್ಯಾಹ್ನಕ್ ಮಾಡೋಕ್ ಹೇಳ್ತೀನಿ…..” ಪಟಪಟನೆ ಮಾತನಾಡುತ್ತಿದ್ದವಳಿಗೆ ತಡೆ ಹಾಕಿದ್ದು ಶಿರಾಜುದ್ದೀನ್.
“ಸುಮ್ನಿರು ಮಗಳೇ. ಅದೆಷ್ಟು ಮಾತಾಡ್ತಿ. ಅವರೊಂದ್ಸಲ್ಪ ರೆಸ್ಟ್ ಮಾಡ್ಲಿ. ರೂಮಿಗೆ ಕರ್ಕಂಡ್ ಹೋಗು”
“ನೀವ್ ಬನ್ನಿ ಅಕ್ಕ. ಅಪ್ಪ ಹಂಗೇ. ಮೂರೊತ್ತು ನನಗೆ ಬಯ್ಯೋದೇ ಕೆಲಸ” ಕೈಹಿಡಿದು ಮೂರು ಮೆಟ್ಟಿಲತ್ತಿಸಿದಳು. “ಸ್ವಲ್ಪ ತಲೆ ಬಗ್ಗಿಸಿ ಮುಂದಡಿ ಇಡಿ ಅಕ್ಕ. ಹಳೇ ಮನೆ. ಬಾಗಿಲು ಚಿಕ್ಕದು”
“ಇದು ಹಾಲ್ ಅಕ್ಕ. ಬಲಗಡೆಗೆ ಅಡುಗೆಮನೆಯಿದೆ. ಅಡುಗೆಮನೆಯಾಚೆ ಎರಡು ರೂಮಿದೆ. ಒಂದ್ ದೊಡ್ಡದು. ನನ್ನ ರೂಮು. ನೀವಲ್ಲೇ ನನ್ನ ಜೊತೆ ಇರೋರಂತೆ. ಪಕ್ಕದಲ್ಲಿ ಪುಟ್ಟ ರೂಮು. ಮುಂಚೆ ಅಪ್ಪ ಅಲ್ಲೇ ಮಲಗೋರು. ಇಲ್ ಎಡಗಡೆ ಹಿತ್ತಲ ಬಾಗಿಲಿದೆ. ಅದರ ಪಕ್ಕದಲ್ಲೇ ಮೇಲೋಗೋಕೆ ಮೆಟ್ಟಿಲು. ಮೇಲೊಂದು ರೂಮು, ಅಪ್ಪನದ್ದು. ಜೊತೆಗೊಂದು ಬಾಲ್ಕನಿಯಿದೆ. ಅಲ್ಲೊಂದು ತೂಗುಯ್ಯಾಲೆ. ಸೂಪರ್ ಬಾಲ್ಕನಿ ಗೊತ್ತಾ ನಮ್ದು. ಸಂಜೆ ಹೋಗುವ ಅಲ್ಲಿಗೆ” ದೊಡ್ಡ ರೂಮಿಗೆ ಕರೆದೊಯ್ದಳು. “ಮಲಗಿ ರೆಸ್ಟ್ ಮಾಡಿ” ಎಂದೇಳಿ ಹೊರಗೋದಳು.

ಬಿಡುಗಡೆ ಸಿಕ್ಕಂತಾಯಿತು ರಶಿಕಾಗೆ. ರಶಿಕ ವಾರಪೂರ್ತಿ ಆಡುವ ಮಾತುಗಳನ್ನು ಹತ್ತು ನಿಮಿಷದಲ್ಲಿ ಆಡಿ ಮುಗಿಸಿದ್ದಳು ಖುಶಿ.
ಹಾಸಿಗೆಯ ಮೇಲೆ ಅಡ್ಡಾಗಿ ಮೊಬೈಲ್ ಕೈಗೆತ್ತಿಕೊಂಡಳು. ಮನೆಗೆ ಫೋನ್ ಮಾಡಿ ವಿಷ್ಯಯ ತಿಳಿಸಬೇಕು. ತಿಳಿಸದಿದ್ದರೂ ನಡೀತದೆ. ತಿಳಿಸುವ. ಫಿಂಗರ್ ಪ್ರಿಂಟ್ ಬಳಸಿ ಫೋನ್ ಅನ್ಲಾಕ್ ಮಾಡಿ “ಓಕೆ ಗೂಗಲ್. ಕಾಲ್ ಹೋಂ” ಎಂದಳು. “ಕಾಲಿಂಗ್ ಹೋಂ” ಎಂದೇಳಿದ ಗೂಗಲ್ಲು ತಕ್ಷಣವೇ “ನೆಟ್ವರ್ಕ್ ಅನ್ ಅವೈಲೆಬಲ್” ಎಂದು ಸುಮ್ಮನಾಯಿತು.
“ಬಿ.ಎಸ್.ಎನ್.ಎಲ್ ಬಿಟ್ರೆ ಇನ್ಯಾವ್ದೂ ಸಿಗಲ್ಲಕ್ಕ ಇಲ್ಲಿ. ಅಪ್ಪ ಹೊರಗೆ ಹೋಗಿದ್ದಾರೆ. ಚಿಕನ್ ತರೋಕೆ. ಅವರು ಬಂದ ಮೇಲೆ ಫೋನ್ ಮಾಡೂರಂತೆ” ಎಂದಳೂ ಖುಶಿ. ಈ ಹುಡುಗಿ ಇಲ್ಲೇ ನನ್ನ ನೋಡ್ತಾ ಕೂತುಬಿಟ್ಟಿದೆಯಾ?

ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಪ್ಲೇ ಮಾಡುವಂತೆ ಫೋನಿಗೇಳಿದಳು. ಒಂದು ಹಾಡು ಮುಗಿದಿತ್ತೋ ಇಲ್ಲವೋ ನಿದ್ರೆಗೆ ಜಾರಿದಳು.
ನಿದ್ರೆಯಿಂದ ಅರೆಬರೆ ಎಚ್ಚರವಾದಾಗ ಹಾಲಿನಲ್ಲಿ ಅಪ್ಪ ಮಗಳ ಜಗಳದ ಸದ್ದು. ಜಗಳ ನನ್ನ ವಿಷಯವಾಗಿ ಎಂದರಿವಾಗಿ ರಶಿಕಳ ಕಿವಿ ಚುರುಕಾಯಿತು.
ಖುಶಿ “ಅಕ್ಕನನ್ನು ಎಬ್ಬಿಸಿ ಊಟ ಮಾಡಿಸಬೇಕು” ಎಂದು ವಾದಿಸುತ್ತಿದ್ದರೆ ಅವಳಪ್ಪ “ನಿದ್ರೆ ಮಾಡ್ತಿದ್ದಾಳಲ್ಲ, ಮಲಗಲಿ ಇನ್ನೊಂದಷ್ಟೊತ್ತು” ಎನ್ನುತ್ತಿದ್ದರು.
“ಬೆಳಿಗ್ಗೆ ಮನೆಗೆ ಬಂದಾಗಲೂ ಅಕ್ಕ ಏನೂ ತಿಂದಿಲ್ಲ. ಸುಸ್ತಾಗೋಗಲ್ವ” ಖುಶಿಯ ಗೋಳಾಟ.
ರಶಿಕಾಗೆ ನಗು ಮೂಡಿತು. ಮಂಚದಿಂದಿಳಿಯುವುದೇಗೆ? ಎಡಕ್ಕಿಳಿಯಬೇಕೋ ಬಲಕ್ಕಿಳಿಯಬೇಕೋ? ಇಳಿಯಲೋಗಿ ಎಡವಟ್ಟು ಮಾಡಿಕೊಂಡರೆ? ಮೆಲ್ಲನೆ ಕೆಮ್ಮಿದಳು.
ಖುಶಿ ಓಡೋಡಿ ಬಂದಳು!

“ಎದ್ರಾ ಅಕ್ಕ. ನಡೀರಿ ನಡೀರಿ. ಊಟ ಮಾಡೋರಂತೆ” ರಶಿಕಾಗೆ ಮಾತನಾಡಲೂ ಅವಕಾಶ ಕೊಡದೆ ಬಾಗಿಲಿನಿಂದ ಕರೆದುಕೊಂಡು ಹೋಗಿ ಕೈ ಬಾಯಿ ತೊಳೆದುಕೊಳ್ಳಲು ನೀರು ಕೊಟ್ಟಳು. ಒಳಕರೆತಂದು ಹಾಲಿನಲ್ಲಿ ಸೋಫಾದ ಮೇಲೆ ಕೂರಿಸಿದಳು. ಶಿರಾಜುದ್ದೀನ್ ಬಿರಿಯಾನಿ ಹಾಕಿಕೊಂಡು ಬಂದರು.
“ತಿನ್ನಿಸಬೇಕಾ? ನೀನೇ ತಿಂತೀಯಮ್ಮ”
“ತಿಂತೀನಿ. ನಿಮಗೊಂದ್ ಮಾತು ಹೇಳ್ಬೇಕಿತ್ತು. ನೀವ್ ಬೇಸರ ಮಾಡಬಾರದು”
“ಹೇಳಮ್ಮ”
“ಮತ್ತೇನಿಲ್ಲ. ನಾನ್ಯಾರಂತಾನೇ ಗೊತ್ತಿಲ್ಲ ನಿಮಗೆ. ಅಂದ್ರೂ ಕರೆದು ತಂದು ನೋಡ್ಕೋತಿದ್ದೀರ. ನಾನೆಷ್ಟು ದಿನ ಇರ್ತೀನೋ ಅಷ್ಟೂ ದಿನಕ್ಕೆ, ದಿನಕ್ಕಿಷ್ಟು ಅಂತ ಹಣ ತಗೋಬೇಕು ನೀವು. ಇಲ್ಲಾಂದ್ರೆ ಮುಜುಗರವಾಗ್ತದೆ ನಂಗೆ”
ಖುಶಿ ಬೇಸರದ ನಿಟ್ಟುಸಿರುಬಿಟ್ಟಿದ್ದು ಕೇಳಿಸಿತು. “ಸರೀನಮ್ಮ ನಿನ್ನಿಷ್ಟ” ಎಂದರು ಶಿರಾಜುದ್ದೀನ್.

ಬಿರಿಯಾನಿಗೆ ಕೈ ಹಾಕಿದಳು. ಸುಡುವಷ್ಟು ಬಿಸಿಯಿತ್ತು. ಖುಶಿ ಹೇಳಿದಂತೆ ಚೆಂದದ ಬಿರಿಯಾನಿ ಮಾಡ್ತಾರೆ ಅವರಪ್ಪ.
“ಒಂದೊಂದು ಅನ್ನದ ಅಗುಳೂ ಬೇರೆ ಬೇರೆ ತರ ಇರ್ತದಲ್ಲ”
“ಏನಕ್ಕಾ?” ಮೂಳೆ ಕಡಿಯುತ್ತಾ ಕೇಳಿದಳು ಖುಶಿ.
“ಏನಿಲ್ಲ. ಇಷ್ಟೊಂದೆಲ್ಲ ಗಮನವಿಟ್ಟು ಊಟ ಮಾಡಿದ್ದೇ ನೆನಪಿಲ್ಲ ನನಗೆ. ಟಿವಿ ಮುಂದೆ ಕೂತ್ಕಂಡು ಗಬಗಬ ಅಂತ ತಿನ್ನೋದು. ಈಗಂತೂ ಕೈಯಲ್ಲಿನ ಮೊಬೈಲ್ ನೋಡ್ತಾ ತಿನ್ನೋದು! ಎಷ್ಟೋ ಸಲ ಏನ್ ತಿಂದ್ವಿ ಅನ್ನೋದೇ ಗೊತ್ತಿರಲ್ಲ. ಇವತ್ ಕಣ್ಣಿಲ್ವಲ್ಲ. ಕೈಬೆರಳಿಗೆ ಹೊಸ ಹೊಸ ಅನುಭವವಾಗ್ತಿದೆ ನೋಡು” ಎಂದಳು. ಖುಶಿಗೆ ಉತ್ತರ ಹೇಳಿದಳೋ ತನಗೆ ತಾನೇ ಹೇಳಿಕೊಂಡಳೋ ಗೊತ್ತಿಲ್ಲ.
“ಹಂಗೇ ಅಲ್ವ ಅದು. ಒಂದ್ ವಸ್ತು ಇಲ್ಲ ಅಂದಾಗ್ಲೇ ಅದರ ಬೆಲೆ ತಿಳಿಯೋದು, ಜೊತೆಗೆ ಒಂದ್ ವಸ್ತು ಇಲ್ಲ ಅಂದಾಗ್ಲೇ ಬೇರೆ ವಸ್ತುಗಳಿಗಿರೋ ಬೆಲೇನೂ ತಿಳಿಯೋದು”
“ಯಾವ್ ಕ್ಲಾಸೋ ನೀನು?”

“ಮೊನ್ನೆ ಮುಗಿದ ಪರೀಕ್ಷೇಲಿ ಪಾಸಾದ್ರೆ ಒಂಭತ್ತು”
“ಮತ್ತೀ ವಯಸ್ಸಿಗೇ ಒಳ್ಳೇ ಹಣ್ಣು ಹಣ್ಣು ಮುದುಕಿ ತರ ಮಾತಾಡೀಯಪ್ಪ”
“ಚಿಕ್ ವಯಸ್ಸಲ್ಲೇ ಅಮ್ಮನನ್ನು ಕಳಕೊಂಡ್ರೆ ಮೆಚ್ಯುರಿಟಿ ಬೇಗ ಬರುತ್ತಂತಕ್ಕ”
ಸರಿ ಮಾತನಾಡಲಿಲ್ಲ ನಾನು ಎಂದು ನೊಂದುಕೊಂಡಳು ರಶಿಕ.

ರಶಿಕಾಳನ್ನು ಬಾಲ್ಕನಿಗೆ ಕರೆದೊಯ್ದು ಅಲ್ಲಿಂದ ಕಾಣುವ ಪರಿಸರ ತೋರುತ್ತಾ ಹರಟುವ ಆಸೆ ಖುಶಿಗೆ. ಖುಶಿಯ ಆಸೆಗೆ ಅವಳಪ್ಪ ತಡೆಯಾದರು.
“ಇವತ್ತೆಲ್ಲೂ ಹೊರಗಿಲ್ಲ. ಡ್ರಾಪ್ಸ್ ಹಾಕ್ತೀನಿ ಈಗ. ಮಾತ್ರೆಯೆಲ್ಲ ನುಂಗಿ ಅವರು ಮಲಗಿ ರೆಸ್ಟ್ ಮಾಡಲಿ. ನಾಳೆ ಬೇಕಾದ್ರೆ ಪೂರಾ ದಿನ ಬಾಲ್ಕನೀಲೇ ಇರೂರಂತೆ….” ಕಟ್ಟುನಿಟ್ಟಾಗಿ ಹೇಳಿದರು.
ರೂಮಿನಲ್ಲಿ ಅಡ್ಡಾದ ರಶಿಕಳ ಪಕ್ಕದಲ್ಲೇ ಕುಳಿತ ಖುಶಿ ರಶಿಕಳ ಮನೆಯವರ ಬಗ್ಗೆ ವಿಚಾರಿಸಿದಳು. ಅಪ್ಪ, ಅಮ್ಮ, ಅಣ್ಣ, ಅತ್ತಿಗೆ, ಅಣ್ಣನ ಮಗಳ ಬಗ್ಗೆ ಖುಶಿ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರಿಸುವಷ್ಟರಲ್ಲಿ ನನ್ನ ಮನೆಯವರು ನನಗೆಷ್ಟು ಅಪರಿಚಿತರೆಂದು ತಿಳಿಯಿತು. ಖುಶಿಯ ಬಗ್ಗೆ ಕೇಳಿದಳು. ಅಮ್ಮ ಖುಷ್ಬು. ಮಲೇರಿಯಾ ಬಂದು ಅವರು ತೀರಿಕೊಂಡಾಗ ಖುಶಿಗೆ ಐದು ವರ್ಷವಷ್ಟೇ. ಅಪ್ಪ ಚೆಂದ ನೋಡ್ಕೋತಾರೆ, ಆದ್ರೂ ಅಮ್ಮ ಇದ್ದಂಗಾಗಲ್ಲ ಅಲ್ವಾ ಎಂದು ಖುಶಿ ಹೇಳಿದ್ದು ರಶಿಕಾಳ ತಲೆಗೋಗಲಿಲ್ಲ. ಅಪ್ಪನೊಟ್ಟಿಗಾಗಲೀ ಅಮ್ಮನ ಜೊತೆಗಾಗಲೀ ಅಪ್ಪಿ ಮುದ್ದಾಡುವಂತಹ ಬಾಂಧ್ಯವ್ಯವಿರಲಿಲ್ಲ. ಅಮ್ಮನ ಚೆಲುವಿನ ಬಗ್ಗೆ ಬಹಳಷ್ಟು ಹೇಳಿಕೊಂಡಳು ಖುಶಿ.

“ಅಮ್ಮ ಅಷ್ಟು ಚೆಂದ ಇದ್ದಿದ್ದಕ್ಕೇ ಅಪ್ಪ ಲಿಬಿಯಾದಲ್ಲಿದ್ದ ದೊಡ್ಡ ಸಂಬಳದ ಕೆಲಸ ಬಿಟ್ಟು ಇಲ್ಲಿಗೆ ಓಡಿಬಂದಿದ್ದು” ಹಾಲಿನಲ್ಲಿದ್ದ ಅಪ್ಪನಿಗೆ ಕೇಳಬಾರದೆಂಬಂತೆ ಮೆಲ್ಲಗೆ ಹೇಳಿ ನಕ್ಕಳು.
“ನೀನೂ ನಿಮ್ಮಮ್ಮನ ತರಾನೇ ಚೆಲುವೇನಾ?”
“ನಾವ್ ಚೆನ್ನಾಗಿದ್ದೀವಿ ಅಂತ ನೋಡಿದೋರ್ ಹೇಳ್ಬೇಕಪ್ಪ!”
“ನಂಗೀಗ್ ನೋಡೋಕಾಗಲ್ಲವಲ್ಲ”
“ನೋಡಿದಾಗ ಹೇಳೂರಂತೆ ಬಿಡಿ”
“ಹೋಗ್ಲಿ ನಾನ್ ಚೆನ್ನಾಗಿದ್ದೀನಾ?”
“ನನ್ ಕಣ್ಗೇನೋ ಎಲ್ರೂ ಚೆನ್ನಾಗೇ ಕಾಣ್ತಾರಪ್ಪ”
“ಆಹಾ! ಸುಮಾರಾಗಿದ್ದೀರ… ಅಷ್ಟೇನ್ ಚೆನ್ನಾಗಿಲ್ಲ ಅಂತ ಹಿಂಗೂ ಹೇಳಬಹುದು ಅಂತ ಗೊತ್ತಿರಲಿಲ್ಲ ನೋಡವ್ವ!” ನಕ್ಕಳು ರಶಿಕ.

ಇನ್ನೊಂದು ಸುತ್ತು ನಿದ್ರೆ ಮಾಡಿ ಎದ್ದವಳಿಗೆ ಒಂದು ಕೆಟ್ಟ ಟೀ ಕಾಯಿಸಿ ಕೊಟ್ಟರು ಶಿರಾಜುದ್ದೀನ್.
ಕಷ್ಟಪಟ್ಟು ಟೀ ಕುಡಿದು ಮುಗಿಸಿ “ಟಿವಿ ಏನಾದ್ರೂ ಹಾಕು” ಎಂದು ಖುಶಿಗೆ ಕೇಳಿದಳು.
“ಇಲ್ಲಕ್ಕ. ಕೇಬಲ್ ಹಾಕ್ಸಿಲ್ಲ ನಾವು”
“ಅಯ್ಯ! ಯಾಕೆ? ನಿನಗೆ ಬೇಕನ್ನಿಸಲ್ವಾ?”
“ನಂಗೇನೋ ಟಿವಿ ಬೋರು. ಅಪರೂಪಕ್ಕೆ ಅಪ್ಪ ಅವರ ಫ್ರೆಂಡ್ ಹತ್ರ ಯಾವ್ದಾದ್ರೂ ಒಳ್ಳೆ ಪಿಕ್ಚರ್ ಇದ್ರೆ ಪೆನ್ ಡ್ರೈವಿಗೆ ಹಾಕಿಸ್ಕೊಂಡ್ ಬರ್ತಾರೆ”
“ಮತ್ತೆ ಟೈಂಪಾಸ್ ಹೆಂಗ್ ಮಾಡ್ತಿ ನೀನು?”
“ಬಾಲ್ಕನೀಗ್ ಹೋಗಿ ಕೂತುಬಿಟ್ರೆ ಟೈಂಪಾಸ್ ಆಗೋಗ್ತದೆ ನಂಗೆ. ಅಮ್ಮ ಉಪಯೋಗಿಸುತ್ತಿದ್ದ ರೇಡಿಯೋ ಒಂದಿದೆ. ಹಳೇದು. ಅದರಲ್ಲಿ ಹಾಡು ನಾಟ್ಕ ಎಲ್ಲಾ ಕೇಳ್ತೀನಿ. ಮುಂಚೆ ಅದ್ರಲ್ಲೇ ಫಿಲಮ್ಮೂ ಹಾಕೋರು. ರೇಡಿಯೋ ರಿಪೇರಿಗೆ ಹೋಗಿದೆ. ಮುಂದಿನ ವಾರ ಸಿಗಬಹುದು. ಪಾಪ ನಿಮುಗ್ ಬೋರೇನೋ ಇಲ್ಲಿ ಟಿವಿ ಇಲ್ಲಾಂತ”
“ಟಿವಿ ಇಲ್ಲಾಂತ ಬೋರ್ ಅಲ್ಲ. ಕುರುಡಿಯಾಗಿದ್ದೀನಲ್ಲ ಅಂತ ಬೋರು ಅಷ್ಟೇ”
“ಬಿಡಿ ಅಕ್ಕ. ಮೂರ್ ದಿನ ಅಷ್ಟೇ ಅಂತಲ್ಲ. ಸರಿ ಹೋಗ್ತದೆ” ಸಮಾಧಾನಿಸಿದಳು ಖುಶಿ. “ರೇಡಿಯೋ ಇದ್ದಿದ್ರೆ ಏನೆಲ್ಲ ಕೇಳಿಸಬಹುದಿತ್ತು ನಿಮಗೆ” ಪೇಚಾಡಿದಳು.
ರೇಡಿಯೋ ಅಂದ್ರೆ ಅಷ್ಟು ಪ್ರೀತಿ ಖುಶಿಗೆ.


ಬೆಳಿಗ್ಗೆ ರಶಿಕ ಹಾಸಿಗೆಯಲ್ಲಿ ಮಿಸುಕಾಡುವುದನ್ನೇ ಕಾಯುತ್ತಿದ್ದಳು ಖುಶಿ. ಅಪ್ಪ ಬಯ್ಯುತ್ತಿದುದನ್ನೂ ಲೆಕ್ಕಿಸದೆ ರಶಿಕಳನ್ನು ಮೆಲ್ಲಮೆಲ್ಲನೆ ನಡೆಸಿಕೊಂಡು ಬಾಲ್ಕನಿಗೆ ಕರೆತಂದಳು. ಕಬ್ಬಿಣದ ಉಯ್ಯಾಲೆಯ ಮೇಲೆ ಇಬ್ಬರೂ ಕುಳಿತರು.
“ನಿಮ್ಮಿಬ್ಬರಿಗೆ ಟೀ ತರ್ಲಾ ಹೆಂಗೆ” ಕೆಳಗಿನಿಂದ ಕೂಗಿದರು ಶಿರಾಜುದ್ದೀನ್.
“ಟೀ ಬೇಡಪ್ಪ. ಎರಡ್ ಲೋಟ ಹಾಲೇ ಸಾಕು” ಜೋರು ದನಿಯಲ್ಲೇಳಿದ ಖುಶಿ ನಂತರ ಮೆಲ್ಲನೆ “ನಮ್ಮಪ್ಪ ಟೀ ಕೆಟ್ಟದಾಗ್ ಮಾಡ್ತಾರಲ್ವ” ಎಂದು ನಕ್ಕಳು.
“ಹೌದು. ಹಾರಿಬಲ್ ಟೀ! ನೀನೇ ಮಾಡಬಹುದಿತ್ತಪ್ಪ”
“ನಂಗೇನೋ ಎಲ್ಲಾ ಅಡುಗೆ ಕಲಿಯೋಕೆ ಇಷ್ಟ. ಅಪ್ಪ ಬಿಡಲ್ಲ. ಬಲವಂತ ಮಾಡಿದ್ರೆ ಬಯ್ತಾರೆ”

“ಮುದ್ದು ಮಾಡಿ ಹೆಚ್ಚಿಸಿಬಿಟ್ಟಿದ್ದಾರೆ ನಿನ್ನ ಅನ್ನು!”
“ಹು. ಸ್ವಲ್ಪ ಹಂಗೇ ಅನ್ನಿ”
ಮಳೆ ಹನಿ ಬೀಳುತ್ತಿದ್ದ ಸದ್ದಾಯಿತು.
“ಅಯ್ಯೋ! ಮೋಡ ಕವಿದು ಮಳೆ ಶುರುವಾಯ್ತು. ಇಲ್ಲಾಂದ್ರೆ ಒಳ್ಳೆ ಸೀನರಿ ನೋಡ್ಬೋದಿತ್ತು”
“ಅಯ್ಯ ಬಿಡು! ನನಗೆಲ್ಲಿ ನೋಡೋಕಾಗ್ತದೆ. ಹೋಗ್ಲಿ ಇಲ್ಲಿ ಕುಳಿತ್ರೆ ಏನೇನ್ ಕಾಣ್ತದೆ ನೀನೇ ಹೇಳು” ರಶಿಕಳಿಗೆ ಖುಶಿಯ ಮಾತು ಕೇಳುತ್ತಾ ಸಮಯ ಕಳೆಯುವ ಉತ್ಸುಕತೆ.

ಮೆಲ್ಲನೆ ರಶಿಕಳ ಎಡಗೈಯನ್ನು ತನ್ನ ಬಲಗೈಯಲ್ಲಿರಿಸಿಕೊಂಡ ಖುಶಿ ಎಡಭಾಗದಿಂದ ಬಲಭಾಗಕ್ಕೆ ಒಂದು ನೇರ ಗೆರೆಯನ್ನು ಗಾಳಿಯಲ್ಲಿ ಬರೆದು “ಈ ಗೆರೆಯವರೆಗೆ ತೋಟಗಳಿವೆ. ನಮ್ಮದೊಂದ್ ಐದ್ ಎಕರೆಯಿದೆ. ಅದರಲ್ಲರ್ಧ ಕಾಫಿ, ಇನ್ನರ್ಧ ಅಡಿಕೆ. ನಮ್ಮದು ದಾಟಿದ ಮೇಲೆ ಬೇರೆಯವರದೊಂದಷ್ಟಿದೆ. ಅದು ಬಿಟ್ಟರೆ ಗುಡ್ಡ – ಕಾಡು”
ರಶಿಕಳ ಎಡಗೈಯನ್ನು ನೇರ ಗೆರೆಯ ಎಡತುದಿಗೆ ತೆಗೆದುಕೊಂಡು ಹೋಗಿ ಗಾಳಿಯಲ್ಲಿ ಒಂದು ಚಿಕ್ಕ ಬೆಟ್ಟದ ಚಿತ್ರ ಬರೆದು “ಇದು ಚಿಕ್ ಬೆಟ್ಟ” ಮುಂದುವರೆಸುತ್ತಾ ಇನ್ನೊಂಚೂರು ಬೃಹತ್ ಬೆಟ್ಟದ ಚಿತ್ರ ಬರೆದು “ಇದು ದೊಡ್ಡ ಬೆಟ್ಟ” ಅದರ ಬಲಭಾಗಕ್ಕೆ ಮತ್ತೊಂದು ಸ್ವಲ್ಪ ಅಂಕುಡೊಂಕಿನಾಕಾರದ ಚಿತ್ರ ಬರೆಸಿ “ಇದು ಒಂಟೆ ಡುಬ್ಬ” ಎಂದಳು ಖುಶಿ.

“ಏನು? ಒಂಟೆ ಡುಬ್ಬಾನಾ?!”
“ಹು”
ರಶಿಕ ನಕ್ಕಳು. “ಯಾಕಕ್ಕಾ?”
“ಅಲ್ಲ ಈ ಮಲೆನಾಡಿನಲ್ಯಾರು ಆ ಬೆಟ್ಟಕ್ಕೆ ಇತ್ಲಾಗೆಲ್ಲೂ ಕಾಣಸಿಗದ ಒಂಟೆ ಡುಬ್ಬದ ಹೆಸರಿಟ್ಟಿದ್ದು?”
“ಯಾರಿಗೂ ಹೇಳ್ಬೇಡಿ ಅಕ್ಕ” ಪಿಸುಗುಟ್ಟಿದಳು “ಆ ಬೆಟ್ಟಕ್ಕೆ ಒಂಟೆ ಡುಬ್ಬ ಅಂತ ಹೆಸರಿದೆ ಅಂತ ಗೊತ್ತಿರೋದು ನನಗೆ, ನಮ್ಮಪ್ಪ ಅಮ್ಮಂಗೆ, ಆ ಒಂಟೆ ಡುಬ್ಬಕ್ಕೆ ಮತ್ತೀಗ ನಿಮಗೆ ಮಾತ್ರ”
“ಅಂದ್ರೆ?” ರಶಿಕಳಿಗೇನೂ ಅರ್ಥವಾಗಲಿಲ್ಲ.
“ಅಮ್ಮ ಒಂದು ಕತೆ ಹೇಳೋಳು. ಇಲ್ಲೇ ಕೂತ್ಕೊಂಡು ಕೇಳಿಸ್ಕೋತಿದ್ದೆ. ನೀವೂ ಕೇಳಿರ್ತೀರಾ ಆ ಕತೇನಾ….. ಮರುಭೂಮೀಲಿ ಒಂಟೆ ಜೊತೆ ಪಯಣಿಸುತ್ತಿದ್ದ ಒಂಟಿ ಮನುಷ್ಯನ ಕತೆ. ಎಲ್ಲೂ ನೀರು ಸಿಗದೆ ಮನುಷ್ಯ ಸಾಯುವಂತಾದಾಗ ಒಂಟೆ ನನ್ನ ಡುಬ್ಬ ಒಡೆದು ನೀರು ಕುಡಿದು ಬದುಕಿಕೋ ಅಂತೇಳೋ ತ್ಯಾಗದ ಕತೆ…”

“ಹು….ಗೊತ್ತು ಗೊತ್ತು….”
“ಆ ಕತೆ ಹೇಳ್ವಾಗ್ಲೇ ಒಂಟೆ ಡುಬ್ಬ ಅನ್ನೋ ಪದ ಕೇಳಿದ್ದು. ನಾನೆಲ್ಲಿ ಒಂಟೆ ನೋಡಿದ್ದೆ ಹೇಳಿ? ‘ಏನಂಗಂದ್ರೆ’ ಅಂತ ಅಮ್ಮನಿಗೆ ಕೇಳಿದೆ. ಆಗ ಅಮ್ಮ ಥೇಟ್ ನಾ ಈಗ ಮಾಡಿದಂತೆಯೇ ಬೆಟ್ಟದಾಕಾರವನ್ನು ತೋರಿಸಿ ‘ಈ ಎತ್ತಿನ ಭುಜ ಇದೆಯಲ್ಲ ಒಂಟೆ ಡುಬ್ಬ ಹೆಚ್ಚೂ ಕಮ್ಮಿ ಹಂಗೇ ಇರುತ್ತೆ ಅನ್ನಿಸುತ್ತೆ. ನಾನೂ ನೋಡಿಲ್ಲವಲ್ಲ ಒಂಟೆಯನ್ನ’ ಎಂದರು. ‘ಮತ್ಯಾಕೆ ಈ ಬೆಟ್ಟಕ್ಕೆ ಒಂಟೆ ಡುಬ್ಬ ಅಂತ ಕರೀಬಾರ್ದು’ ಅಂದೆ. ‘ಇಲ್ಲೆಲ್ಲ ಒಂಟೆ ಇಲ್ವಲ್ಲ. ನಮ್ಮಲ್ಲಿರೋದು ಎತ್ತುಗಳಲ್ವಾ. ಅದಿಕ್ಕೆ ಎತ್ತಿನ ಭುಜ’ ಎಂದರು. ‘ನಾನಿನ್ಮೇಲೆ ಇದನ್ನ ಒಂಟೆ ಡುಬ್ಬ ಅಂತಲೇ ಕರಿಯೋದು’ ಎಂದು ನಾಮಕರಣ ಮಾಡಿಬಿಟ್ಟೆ”
“ಓ! ನೀನೇ ಇಟ್ಟ ಹೆಸರು ಅನ್ನು”
“ಹು”
“ಇಲ್ಲೆಲ್ಲೋ ನಿಮ್ಮೂರತ್ರ ಒಳ್ಳೆ ಸನ್ ರೈಸ್ ಪಾಯಿಂಟ್ ಉಂಟಂತಲ್ಲ”
“ಹು. ಮುಂದೆ ಎರಡು ಕಿಲೋಮೀಟ್ರೋದ್ರೆ ಫಾರೆಸ್ಟೋರು ಒಂದ್ ಗೋಪುರ ಕಟ್ಟಿದ್ದಾರೆ. ಅದೇ ಪಾಯಿಂಟು. ಅಲ್ಲಿಂದ ಕಾಣೋದು ಇಲ್ಲಿ ನಮ್ಮ ಬಾಲ್ಕನಿಯಿಂದಲೇ ಕಾಣ್ತದೆ”

“ಹೌದಾ?”
“ಹು. ಎರಡು ಸೀಸನ್ನಲ್ಲಿ ದೊಡ್ಡ ಬೆಟ್ಟದ ಹಿಂದೆ ಹುಟ್ತಾನೆ ಸೂರ್ಯ. ಇವತ್ತಿನ ತರ ಮೋಡ ಕವಿದಿದ್ರೆ ಏನೂ ಕಾಣೋದಿಲ್ಲ. ಚಳಿಗಾಲದಲ್ಲಿ ಒಂಟೆ ಡುಬ್ಬ ಹತ್ಕೊಂಡು ಬರ್ತಾನಂತೆ ಸೂರ್ಯ. ಚಳಿಗಾಲದಲ್ಲಿ ಪೂರಾ ಮಂಜು ಬೀಳ್ತದಲ್ಲ. ಕಾಣಲ್ಲ. ಅಮ್ಮ ನೋಡಿದ್ರಂತೆ. ಎಷ್ಟು ಚೆಂದ ಅಂದರೆ ಅಷ್ಟು ಚೆಂದವಂತೆ ಅದು. ಮೂರು ಬೆಟ್ಟ, ನಮ್ಮ ತೋಟವೆಲ್ಲಾ ಅದ್ಭುತವಾಗಿ ಕಾಣ್ತದಂತೆ”
“ಸುಮ್ನಿರು ತಾಯಿ. ಹೊಟ್ಟೆ ಉರಿಸಬೇಡ. ನೋಡೋಕ್ ಕಣ್ಣಿಲ್ಲ ನನಗೆ” ನಕ್ಕಳು ರಶಿಕ.

“ಕಣ್ಣಿರೋರ್ಗೆ ಹಸಿರು ಬೆಟ್ಟದ ಸಾಲಷ್ಟೇ ಕಾಣ್ತದಕ್ಕ. ಈಗ ನೋಡಿ. ನೀವ್ ನಿಮ್ ಕಲ್ಪನೇಲಿ ಆ ಬೆಟ್ಟಗಳಿಗೆ ಹಸಿರು ಬಣ್ಣ ಬಳಿಯಬಹುದು. ಕೆಂಪು ಹಳದಿ ನೀಲಿ ಕಪ್ಪು ಕೊನೆಗೆ ಬಿಳಿ ಬಣ್ಣದಲ್ಲಾದರೂ ಕಲ್ಪಿಸಿಕೊಳ್ಳಬಹುದು”
“ಅಲ್ವಾ! ಬಲೇ ಬುದ್ವಂತೆ ಕಣೋ ಬಂಗಾರ ನೀನು. ಬಾ ಇಲ್ಲಿ ಒಂದ್ ಮುತ್ ಕೊಡ್ತೀನಿ” ಯಾರೊಡನೆಯೂ ಹೆಚ್ಚು ಬೆರೆಯದ ರಶಿಕಾಗೆ ಖುಶಿಯ ಮೇಲ್ಯಾಕಿಷ್ಟು ಮುದ್ದು ಮೂಡ್ತಿದೆಯೋ ಗೊತ್ತಾಗಲಿಲ್ಲ. ಕಣ್ಣಿಲ್ಲದವಳಿಗೆ ಆಸರೆಯಾದಳೆಂಬ ಕಾರಣಕ್ಕಾ?
ಖುಶಿ ರಶಿಕಾಳ ಪಕ್ಕಕ್ಕೆ ಸರಿದು ಒರಗಿಕೊಂಡಳು.
ರಶಿಕಾಳ ಕೈ ಖುಶಿಯ ಬೆನ್ನನ್ನು ಮೊದಲು ಕಂಡಿತು. ಹಂಗೇ ಮೇಲಕ್ಕೋದಳು. ಬಾಯ್ ಕಟ್ ಮಾಡಿಸಿಕೊಂಡಿದ್ದಳು. ಉದ್ದ ಕೂದಲನ್ನು ಕಾಪಿಡೋದೇಗೆ ಅಂತ ಅವರಪ್ಪನೇ ಕಟ್ ಮಾಡಿಸಿರಬೇಕು. ತಲೆ ಸಿಕ್ಕಿತು. ಹತ್ತಿರಕ್ಕೆಳೆದುಕೊಂಡು ಕೆನ್ನೆ ತಡುವುತ್ತಾ ಮುತ್ತು ಕೊಟ್ಟಳು. ಖುಷಿಯಾಯಿತು.

ದೂರದಲ್ಯಾರೋ ಸಿಳ್ಳೆ ಹೊಡೆದ ಸದ್ದು.
“ಯಾರೋ ಅದು ವಿಶಿಲ್ ಹಾಕಿದ್ದು? ನಿನ್ ಲವರ್ ಏನಾದ್ರೂ……”
ಖುಶಿ ನಾಚುತ್ತಾ “ಹೋಗಿ ಅಕ್ಕ. ತಮಾಷೆ ನಿಮಗೆ. ಪಕ್ಷಿ ಕೂಗ್ತಿರೋದದು”
“ಹೌದಾ! ಈ ತರ. ಥೇಟು ಮನುಷ್ಯರು ಕೂಗಿದಂಗೆ”
“ಹು. ಅದರೆಸರೆ ಸಿಳ್ಳೆ ಹಕ್ಕಿ ಅಂತ. ಮಲಬಾರ್ ವಿಸ್ಲಿಂಗ್ ಥ್ರಶ್ ಅಂತ. ಮಳೇಲ್ ನೆನಕೊಂಡ್ ಹಾಡೋದಂದ್ರೆ ಅಷ್ಟು ಖುಷಿ ಅದಕ್ಕೆ”
“ನೋಡಿದ್ದೀಯಾ ನೀನು”
“ಇಲ್ಲ. ಮುಂಚೆ ಎಲ್ಲ ಮನೆ ಹತ್ರಾನೇ ಬರ್ತಿದ್ವಂತೆ. ಈಗ ಅಡಿಕೆ ತೋಟ ದಾಟಿ ಇತ್ತ ಕಡೆ ಬರೋದಿಲ್ಲ. ಕಪ್ಪು ಪಕ್ಷಿಯಂತೆ. ಬಿಸಿಲು ಬಿದ್ದ ಜಾಗವೆಲ್ಲ ಗಾಢ ನೀಲಿ ಬಣ್ಣಕ್ಕೆ ತಿರುಗುತ್ತಂತೆ. ಅಮ್ಮ ಹೇಳೋರು”
ಅಮ್ಮ ಅಂದರೆ ಅಷ್ಟು ಪ್ರೀತಿ ಖುಶಿಗೆ.


ಖುಶಿಯ ಸಂಗಡ ಉಳಿಕೆ ಎರಡು ದಿನ ಕಳೆದಿದ್ದೇ ತಿಳಿಯಲಿಲ್ಲ ರಶಿಕಾಗೆ. ಮೂರು ದಿನಗಳ ಕಾಲ ಕಣ್ಣೂ ಕಾಣದಂತೆ ಬದುಕಿದ್ದನ್ನು ಸಹನೀಯವಾಗಿಸಿದ್ದೇ ಖುಶಿ.
ಅಂಕಲ್ ಫೋನಿನಿಂದ ಮನೆಗೆ ಫೋನು ಮಾಡಿದ್ದೇ ಮೂರನೇ ದಿನ, ಬ್ಯಾಂಡೇಜು ತೆಗೆಯುವ ಮುನ್ನ. ಕಣ್ಣಿನ ಬಗ್ಗೆ ಹೇಳಲಿಲ್ಲ. “ರಸ್ತೆ ಮುಚ್ಚಿದೆ. ತೆರವಾಗ್ತಿದ್ದಂತೆ ಹೊರಡ್ತೀನಿ” ಎಂದಳು.
“ಸರಿ” ಎಂದು ಅಮ್ಮ ಫೋನಿಟ್ಟರು. ಇನ್ನೊಂದಷ್ಟು ಮಾತನಾಡಬೇಕು ಎನ್ನಿಸಿತು. ಏನು ಮಾತಾಡಬೇಕೆಂದು ತಿಳಿಯಲಿಲ್ಲ. ಮಾತನಾಡಿ ಅಭ್ಯಾಸವಿದ್ದರಲ್ಲವೇ. ಅವರಂಗೆ ಅಂತ ನಾನಿಂಗಾ? ನಾನಿಂಗೆ ಅಂತ ಅವರಂಗಾ?
“ತೆಗೀಲೇನಮ್ಮಾ ಬ್ಯಾಂಡೇಜು” ಶಿರಾಜುದ್ದೀನ್ ಕೇಳಿದರು.

“ಹು ಅಂಕಲ್” ತಲೆಯಾಡಿಸಿದಳು. ಮೂರು ದಿನದಿಂದಲೂ ಬ್ಯಾಂಡೇಜು ತೆಗೆದು ಡ್ರಾಪ್ಸ್ ಹಾಕುತ್ತಿದ್ದರು. ರೂಮಿನ ಲೈಟ್ ಆರಿಸಿ ಕಿಟಕಿಯ ಪರದೆ ಸರಿಸಿ ಬಾಗಿಲು ಮುಂದೆ ತಳ್ಳಿರುತ್ತಿದ್ದರು. ಡ್ರಾಪ್ ಹಾಕಿಸಿಕೊಳ್ಳಲು ಕಣ್ತೆರೆದಾಗ ಕಪ್ಪು ಕಾಣುತ್ತಿತ್ತಷ್ಟೆ, ಅಂಚಿನಲ್ಲೊಂದಷ್ಟು ಬೆಳಕಿನ ನೆರಳು. ದೃಷ್ಟಿ ಬರುತ್ತೋ ಇಲ್ವೋ ಅನ್ನೋ ಭಯವಿದ್ದೇ ಇತ್ತು.
ಶಿರಾಜುದ್ದೀನ್ ಬ್ಯಾಂಡೇಜು ತೆಗೆದರು. “ನಿಧಾನ ಕಣ್ಣು ಬಿಡಮ್ಮ” ಎಂದರು.
ನಿಧಾನ ಕಣ್ಣು ಬಿಟ್ಟರೆ ಕಂಡದ್ದು ಅದೇ ಕಪ್ಪು.
“ಅಂಕಲ್ ಎಲ್ಲಾ ಕತ್ಲೆ ಕತ್ಲೆ ಕಾಣ್ತಿದೆ. ಹೋಯ್ತು ನನ್ನ ಕಣ್ಣು” ಗಾಬರಿಯಿಂದ ಕಿರುಚಿದಳು.

“ಅಯ್ಯಯ್ಯೋ! ಇಲ್ಲಮ್ಮ ಸುಮ್ನಿರು. ನಾನೇ ಕತ್ಲು ಮಾಡಿದ್ದೆ” ಎಂದು ದಡಬಡಿಸಿ ಕಿಟಕಿಯ ಪರದೆ ಸರಿಸಿದರು. ಬೆಳಕು ಕಂಡಿತು. ಕಣ್ಣೂ ಚುಚ್ಚಿತು. ನಿಧಾನಕ್ಕೆ ಬೆಳಕಿಗೆ ಕಣ್ಣುಗಳು ಹೊಂದಿಕೊಂಡವು. ಖುಶಿಯನ್ನರಸಿದಳು.
“ಅವಳಿಲ್ಲಮ್ಮ. ಮೇಲೆ ಬಾಲ್ಕನಿಯಲ್ಲಿದ್ದಾಳೆ”
“ಆಷ್ಟು ಹೇಳಿದ್ದೀನಿ ಆ ಕೋತಿಗೆ. ನಾ ಕಣ್ ಬಿಟ್ಟಾಗ ಎದುರಿಗಿರ್ಬೇಕು ಅಂತ” ಸಿಟ್ಟಿನಲ್ಲೇಳಿದಳು.

ಶಿರಾಜುದ್ದೀನ್ ನಗುತ್ತಾ “ನಾನೂ ಹೇಳಿದೆ ಬಾ ಅಂತ. ಇಲ್ಲ ಇಲ್ಲಿಗೇ ಕರೆತನ್ನಿ ಅಂದಳು”
ಇಬ್ಬರೂ ಬಾಲ್ಕನಿಗೆ ಹೋದರು. ಮುಂದೆ ಶಿರಾಜುದ್ದೀನ್, ಅವರಿಂದೆ ರಶಿಕ. ಬಾಲ್ಕನಿಯ ಗೋಡೆಗೊರಗಿ ಖುಶಿ ಮೆಟ್ಟಿಲಿಗೆ ಮುಖ ಮಾಡಿ ನಿಂತಿದ್ದಳು. ಖುಶಿಯನ್ನು ಕಂಡ ರಶಿಕ “ಅಂಕಲ್?” ಎಂದಳಷ್ಟೇ. ತಲೆಯಾಡಿಸಿದರು ಶಿರಾಜುದ್ದೀನ್.
“ಸಾರಿ ಅಕ್ಕ. ನಾನೇ ಅಪ್ಪನಿಗೆ ಹೇಳಬೇಡಿ ಅಂತ ತಾಕೀತು ಮಾಡಿದ್ದೆ” ದೈನ್ಯದಿಂದ ಕೈಮುಗಿದಳು ಖುಶಿ.
ಮೂರು ದಿನಗಳ ಕಾಲ ಕಣ್ಣಾಗಿದ್ದ ಕಣ್ಣಿಲ್ಲದುಡುಗಿ ಖುಶಿ ಕಡೆಗೋಡಿ ತಬ್ಬಿಕೊಂಡಳು ರಶಿಕ.
ಒಂದಷ್ಟು ಸಮಯ ಮಾತು ಮೌನದ ಮೊರೆ ಹೊಕ್ಕಿತು.

“ಯಾವಾಗಿಂದ?” ರಶಿಕ ಶಿರಾಜುದ್ದೀನ್ ಕಡೆಗೆ ನೋಡುತ್ತಾ ಕೇಳಿದಳು.
“ಹುಟ್ಟಿದಾಗಿನಿಂದ” ಖುಶಿ ಉತ್ತರಿಸಿದಳು.
ಖುಶಿ ಕಟ್ಟಿ ಕೊಟ್ಟ ಬೆಟ್ಟದ ಸಾಲಿನ ಕಡೆಗೆ ನೋಡಿದಳು.
ಒಂಟೆ ಡುಬ್ಬ ಇವರೆಡೆಗೇ ಕಣ್ಣು ನೆಟ್ಟಿತ್ತು.
“ಮತ್ತೆಂಗೆ ಈ ಬೆಟ್ಟಾನೆಲ್ಲ ವಿವರಿಸಿದ್ದು ನೀನು”
“ನಮ್ಮಮ್ಮ ಚಿಕ್ಕಂದಿನಲ್ಲಿ ಹೇಳಿದ್ದಿನ್ನೂ ನೆನಪಿದೆಯಕ್ಕ. ಬೆಟ್ಟ ಏನ್ ಜಾಗ ಬದಲಿಸೋದಿಲ್ಲವಲ್ಲ!”
ಮತ್ತೇನು ಮಾತನಾಡುವುದೋ ತಿಳಿಯಲಿಲ್ಲ ರಶಿಕಾಗೆ. ಆರ್ದ್ರ ಭಾವನೆಗಳನ್ನು ಮೊದಲು ಕಳಚಿಕೊಂಡಿದ್ದು ಖುಶಿ.
“ಈಗ ನನ್ನ ನೋಡಿದ್ರಲ್ಲ. ಹೇಳಿ ಚೆನ್ನಾಗಿದ್ದೀನಾ ನಾನು”

“ನನ್ ಕಣ್ಗೇನೋ ಎಲ್ರೂ ಚೆನ್ನಾಗೇ ಕಾಣ್ತಾರಪ್ಪ” ಅವಳ ಮಾತುಗಳನ್ನೇ ಹೇಳುತ್ತಾ ಮುದ್ದುಗರೆದಳು. ಶಿರಾಜುದ್ದೀನ್ ಕಣ್ಣಲ್ಲಿ ನೀರಾಡಿತು.
“ನಿಮ್ಮಮ್ಮ ಚೆಲುವೆ ಅಂತಿದ್ಯಲ್ಲ. ನಿಮ್ಮಮ್ಮನ ಫೋಟೋ ನೋಡ್ಬೇಕಲ್ಲ ನಾನು”
“ಅಪ್ಪನ ರೂಮಿನಲ್ಲಿದೆ. ಕರ್ಕೊಂಡ್ ಹೋಗಿ ತೋರ್ಸಪ್ಪ” ಎಂದವಳು ಉಯ್ಯಾಲೆಯಲ್ಲಿ ಕೂರುತ್ತಾ ಒಂಟೆ ಡುಬ್ಬದ ಕಡೆಗೆ ಮುಖ ಮಾಡಿದಳು.
ಶಿರಾಜುದ್ದೀನರ ರೂಮಿನಲ್ಲಿದ್ದ ಹಳೆಯ ಮೇಜಿನ ಮೇಲೆ ಅಂಕಲ್ಲೂ, ಖುಷ್ಬೂ ಆಂಟಿ ಇದ್ದ ಹಳೆಯ ಫೋಟೋ ಇತ್ತು. ಇಬ್ಬರ ಮುಖದ ಮೇಲೂ ಊರಗಲದ ಕಪ್ಪು ಕನ್ನಡಕ.
ಅಂಕಲ್ ಕಡೆಗೆ ನೋಡಿದವಳ ಮುಖದ ತುಂಬೆಲ್ಲಾ ಪ್ರಶ್ನೆಗಳು. ತೀರ ಅಂದರೆ ತೀರ ಪಿಸುದನಿಯಲ್ಲಿ “ಅವಳೂ ಹುಟ್ಟಿನಿಂದ ಕುರುಡಿ” ಎಂದರು.
ಮಾತನಾಡದೆ ಕಣ್ಣೀರು ತುಂಬಿಕೊಂಡು ರೂಮಿನಿಂದೊರಬರುತ್ತಿದ್ದವಳಿಗೆ “ಅವಳಿಗೆ ಗೊತ್ತಿಲ್ಲ ಈ ವಿಷಯ. ಹೇಳ್ಬೇಡ” ಎಂದರು. ತಲೆಯಾಡಿಸಿದಳು.
ಖುಶಿ ಅಂದರೆ ಅಷ್ಟು ಪ್ರೀತಿ ಶಿರಾಜುದ್ದೀನ್ಗೆ.


ಅದೇ ದಿನ ಸಂಜೆ ಬಳಸು ರಸ್ತೆ ತೆರೆದುಕೊಂಡಿತ್ತು. ಮಾರನೇ ಬೆಳಿಗ್ಗೆ ಇಬ್ಬರಿಗೂ ವಿದಾಯ ಹೇಳಿ ಹೊರಡಲನುವಾದಳು ರಶಿಕ. ಬೈಕು ಸ್ಟಾರ್ಟ್ ಮಾಡಿದಳು.
“ಅಕ್ಕಾ” ಎಂದು ಜೋರು ದನಿಯಲ್ಲಿ ಕೂಗಿದಳು ಖುಶಿ.
“ಹೇಳೋ” ಎಂದಳು ರಶಿಕ.
“ಎಷ್ಟು ದಿನ ಇರ್ತೀರೋ ಅಷ್ಟು ದಿನಕ್ಕೆ ಲೆಕ್ಕ ಹಾಕಿ ಹಣ ಕೊಡ್ತೀನಿ ಅಂದಿದ್ರಿ. ಮರೆತುಬಿಟ್ರಾ?” ಕಿಸಕ್ಕನೆ ನಕ್ಕಳು.
ರಶಿಕ ನಕ್ಕು “ಚಳಿಗಾಲದಲ್ಲಿ ಒಂಟೆ ಡುಬ್ಬ ಹತ್ಕೊಂಡ್ ಬರೋ ಸೂರ್ಯ ನೋಡೋಕ್ ಬರ್ತೀನಲ್ಲ ಆಗ ಬಡ್ಡಿ ಸಮೇತ ಕೊಡ್ತೀನಿ ಬಿಡು” ಎಂದಳು.
ಖುಶಿ ಅಂದರೆ ಅಷ್ಟು ಮುದ್ದು ರಶಿಕಾಗೆ.

-ಡಾ. ಅಶೋಕ್. ಕೆ. ಆರ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x