ಒಂಟಿ ಹೆಣ್ಣಿನ ಕಥೆ: ವರದೇಂದ್ರ ಕೆ

ಕಡು ಬಡತನದ ಬೇಗೆ. ಮನೆಯಲ್ಲಿ ತಾಯಿ ಮಗಳು ಮಾತ್ರ. ಗಾಯತ್ರಿ ಬದುಕಿಗೆ ಆದ ಹಲವು ಗಾಯಗಳಿಗೆ ನಗು ಸಹನೆಗಳನ್ನೇ ಔಷಧಿ ಆಗಿಸಿಕೊಂಡಾಕೆ. ಮದುವೆ ಆಗಿ ಒಂದು ಮಗುವಿಗೆ ತಾಯಿ ಆಗುತ್ತಾಳೆ. ಹೆರಿಗೆ ಆದ ದಿನವೇ ಗಂಡ ಆ್ಯಕ್ಸಿಡೆಂಟ್ ನಲ್ಲಿ ಸತ್ತು ಹೋಗುತ್ತಾನೆ. ಹೆರಿಗೆಗೆ ಬಂದಾಕಿ ತವರು ಮನೆಯಲ್ಲೇ ಉಳಿಯುತ್ತಾಳೆ. ಹುಟ್ಟಿ ತಂದೆಯನ್ನು ತಿಂದುಕೊಂಡ ಕೆಟ್ಟ ನಕ್ಷತ್ರದವಳೆಂಬ ಹಣೆ ಪಟ್ಟಿ ಹೊತ್ತ ಮಗಳನ್ನು ಗಂಡನ ಅಪ್ಪ ಅಮ್ಮ, ಮುಖ ನೋಡಲೂ ಬರುವುದಿಲ್ಲ. ಗಾಯತ್ರಿಗೆ ತವರು ಮನೆಯೇ ಗತಿಯಾಗುತ್ತದೆ ತವರನ್ನು ಸೇರಿದ ಹೆಣ್ಣಿಗೆ ಬೆಲೆ ಸಿಗುವುದು ತುಂಬ ಕಠಿಣ. ಅದು ವಿಧವೆ ಬೇರ. ಅಂತೆಯೇ ಮನೆಯಲ್ಲಿ ಅಣ್ಣನ ಹೆಂಡತಿಯ ಚುಚ್ಚು ಮಾತುಗಳು. ಮನೆಗೆ ಮೂಲವಾದವರೆಂಬ ಮಾತು ಕೇಳಿ ಕೇಳಿ ಒಂದು ದಿನ ಧೈರ್ಯ ಮಾಡಿ ಮನೆಯಲ್ಲಿ ಯಾರಿಗೂ ಹೇಳದೆ ಬೆಂಗಳೂರು ಸೇರುತ್ತಾಳೆ. ತನ್ನ ಊರಿನವರು ಇರುವ ಪರಿಚಯದ ಕೇರಿಯಲ್ಲಿ ಉಳಿದು ಕೂಲಿ ಕೆಲಸ ಮಾಡುತ್ತ ಜೀವನ ದೂಡುತ್ತಾಳೆ. ಮಗಳಿಗೆ ವಿದ್ಯೆ ಕಲಿಸಿ ಬದುಕು ರೂಪಿಸಬೇಕೆಂಬ ಛಲದಿಂದ ದುಡಿಯುತ್ತಾಳೆ. ಶಾಲೆಗೆ ಸೇರುವ ವಯಸ್ಸು ಆದ ಕೂಡಲೇ ಹತ್ತಿರದ ಸರಕಾರಿ ಶಾಲೆಗೆ ಹೋಗುತ್ತಾಳೆ. ಪ್ರವೇಶ ಅರ್ಜಿ ತುಂಬಬೇಕು ಮಾಸ್ಟ್ರು ಮಾಹಿತಿ ಕೇಳುತ್ತಾರೆ. ಹೆಸರು ಶ್ವೇತ ತಂದೆ ಹೆಸರು ಅಂತಾರೆ ಕೇಳಿದ ಕೂಡಲೆ ದುಃಖ ಉಮ್ಮಳಿಸಿ ಬರುತ್ತದೆ. ಯಾಕಮ್ಮ ಅಳ್ತೀರಿ ಏನಾಯ್ತು ಎಂದು ಗುರುಗಳು ಸಮಾಧಾನ ಮಾಡೋ ರೀತಿ ಕೇಳ್ತಾರೆ ಎಲ್ಲಿ ಸರ್ ಇವಳು ನನ್ನ ಮಡಿಲಿಗೆ ಬಿದ್ದ ದಿನವೇ ಅವರು ಭೂ ತಾಯಿ ಒಡಲು ಸೇರಿದ್ರು.

ತಂದೆ ಮುಖ ನೋಡದ ಮಗಳು, ಮಗಳ ಮುಖ ನೋಡದೆ ಕತ್ತಲಿಗೆ ಜಾರಿದ ತಂದೆ. ಏನು ಅಂತ ಹೇಳಲಿ. ಇರ್ಲಿ ಬಿಡು ತಾಯಿ ಜೀವನ ಹಾಗೆನೆ, ದೇವರು ನಿರ್ಧರಿಸಿದ ಹಾಗೆ ನಾವು ಬಾಳಬೇಕು. ಧೈರ್ಯದಿಂದ ಇರಬೇಕು ನೀವು. ಮಗಳು ನಿಮ್ಮ ಆಸರೆಗೆ ಇರ್ತಾಳೆ. ಚೆನ್ನಗಿ ಓದ್ಸಿ. ಅವಳಪ್ಪನ ಹೆಸರು ಹೇಳಿ. ಎಂದು ದಾಖಲಾತಿಗೆ ಬೇಕಾದ ಮಾಹಿತಿ ಪಡೆದು ದಾಖಲಿಸಿಕೊಳ್ಳುತ್ತಾರೆ. ಅಂತು ಮಗಳನ್ನು ಶಾಲೆಗೆ ಸೇರಿಸುತ್ತಾಳೆ. ಪ್ರತಿ ದಿನವು ಸುಡು ಬಸಿಲಲ್ಲಿ ಮಗಳನ್ನು ಕರೆದುಕೊಂಡು ಕೂಲಿಗೆ ಹೋಗುತ್ತಿದ್ದವಳು. ಈಗ ನೆಮ್ಮದಿಯಿಂದ ಮಗಳನ್ನು ಶಾಲೆಗೆ ಕಳಿಸಿ ಕೂಲಿಗೆ ಹೊರಡುತ್ತಾಳೆ. ಎಲ್ಲವೂ ಸರಿಯಾಗಿರುತ್ತೆ ಅನ್ನುವಾಗ ಕೂಲಿಗೆ ಹೋಗಿ ಬರುವಾಗ ನಿತ್ಯವೂ ಒಬ್ಬ ಪುರುಷ ಗಾಯತ್ರಿಯನ್ನು ಮಾತನಾಡಿಸಲು ಪ್ರಯತ್ನಿಸುತ್ತಿರುತ್ತಾನೆ. ಗಾಯತ್ರಿ ಎಷ್ಟು ಬಾರಿ ತಪ್ಪಿಸಿಕೊಂಡು ಬಂದರು ಆ ದಿನ ಸಂಜೆ ಅವನು ಅವಳನ್ನು ತಡೆದು ನಿಲ್ಲಿಸಿಯೇ ಬಿಡುತ್ತಾನೆ. ಭಯದಲ್ಲಿ ನಲುಗಿದ ಅವಳು ಧೈರ್ಯದಿಂದ ಏನು ಎತ್ತ ಅಂತ ವಿಚಾರಿಸಿಯೇ ಬಿಡುತ್ತಾಳೆ. ಏನು ನಿನ್ನ ರಗಳೆ ಯಾಕೆ ಹೀಗ್ ಕಾಡ್ತಿದೀಯಾ ಎಂದು ತುಸು ಗಡಸಾಗೆ ಕೇಳ್ತಾಳೆ. ಅವನು ನೀವು ಗಾಯತ್ರಿ ಅಲ್ವ. ನಿಮಗೆ ಒಬ್ಬಳು ಮಗಳು ಇದಾಳಲ್ವ? ಅಂತ ಕೇಳುತ್ತಾನೆ.

ಗಾಯತ್ರಿಯ ಊರು, ತವರೂರು ಗಂಡ ಸತ್ತಿದ್ದು ಈಕೆ ತವರಿಂದ ಓಡಿ ಬಂದು ಇಲ್ಲಿ ನೆಲೆಸಿದ್ದು ಎಲ್ಲವನ್ನೂ ಸರಿಯಾಗಿಯೇ ಹೇಳುತ್ತಾನೆ. ಗಾಯತ್ರಿಗೆ ಆಶ್ಚರ್ಯವಾಗಿ ನೀವು ಯಾರು? ನನ್ನ ವಿಷಯ ನಿಮಗ್ಹೇಗೆ ಗೊತ್ತು? ನೀವ್ಯಾಕೆ ನನ್ನ ಹಿಂದೆ ಬಿದ್ದಿದ್ದೀರಿ? ಎಂದು ಸೌಜನ್ಯದಿಂದ ಕೇಳುತ್ತಾಳೆ. ಅದೆಲ್ಲ ಆಮೇಲೆ ಹೇಳ್ತೀನಿ. ಬನ್ನಿ ನಿಮ್ಮ ಮಗಳ ಶಾಲೆ ಬಿಡುವ ಹೊತ್ತಾಯ್ತು ನನ್ನ ಗಾಡಿ ಮೇಲೆ ಹೋಗೋಣ ಮನೆಗೆ ಬಿಡ್ತೀನಿ ಅಂದ. ಗಾಯತ್ರಿ ಮುಜುಗರದಿಂದ ಒಲ್ಲೆ ಎಂದರೂ ಕೇಳದೆ ಕರೆದುಕೊಂಡು ಮನೆಗೆ ಬಿಟ್ಟು ಹೋಗುತ್ತಾನೆ. ಗಾಯತ್ರಿಗೆ ಅವನ್ಯಾರೆಂದು ತಿಳಿಯದೇ ಯೋಚಿಸಿ ಯೋಚಿಸಿ ಸುಮ್ಮನಾಗುತ್ತಾಳೆ. ಮರುದಿನ ಅದೇ ಸಮಯಕ್ಕೆ ಮತ್ತೆ ಅವನು ದಾರಿ ಮಧ್ಯ ಬರುತ್ತಾನೆ. ಗಾಯತ್ರಿ ತುಟಿ ಅಂಚಲಿ ನಕ್ಕು ತನ್ನ ದಾರಿ ಹಿಡಿಯುತ್ತಾಳೆ. ಆದರೆ ಅವನು ಮತ್ತೆ ಗಾಯತ್ರಿನ ತಡೆದು ಮಾತನಾಡಿಸುತ್ತಾನೆ. ಗಾಯತ್ರಿ ನೋಡಿ ನೀವ್ಯಾರು ಅಂತ ಹೇಳ್ತಾನೆ ಇಲ್ಲ. ನನ್ನ ಬಗ್ಗೆ ನಿಮಗೆ ಹೇಗೆ ಗೊತ್ತು. ನಿಮ್ಮ ಊರು ಯಾವುದು. ನನ್ನನ್ಯಾಕೆ ಮಾತಾಡಿಸ್ತಾ ಇದೀರಿ ಎಂಬ ಪ್ರಶ್ನೆಗಳ ಸುರಿಮಳೆಯನ್ನು ಸುರಿಸುತ್ತಾಳೆ.

ಅವಳ ಮಾತನ್ನು ತಡೆದು ನಾನು ನಿಮ್ಮ ಗಂಡನ ಪ್ರಾಣ ಸ್ನೇಹಿತ. ನನ್ನ ಹೆಸರು ರಮೇಶ. ಅವನು ಸಾಯುವ ಮುನ್ನ ನಿಮ್ಮ ಯೋಗಕ್ಷೇಮ ವಿಚಾರಿಸಿಕೊಳ್ಳಲು ಹೇಳಿದ್ದಾನೆ. ನಾನು ಅವನಿಗೆ ಮಾತು ಕೊಟ್ಟಿದ್ದೇನೆ ಎಂದು ಸುಳ್ಳು ಹೇಳಿ ಗಾಯತ್ರಿ ನಂಬುವಂತೆ ಮಾಡುತ್ತಾನೆ. ಗಾಯತ್ರಿ ಅವನ ಮಾತು ನಂಬಿ ಅವನೊಂದಿಗೆ ಸಹಜವಾಗಿ ಇರತೊಡಗುತ್ತಾಳೆ. ಪ್ರತಿ ದಿನವೂ ಅವನ ಗಾಡಿಯಲ್ಲಿ ಮನೆಗೆ ಬರತೊಡಗುತ್ತಾಳೆ. ಪರಿಚಯದ ಕೇರಿ ಬಿಡಿಸಿ ರಮೇಶ ಗಾಯತ್ರಿಗೆ ಬೇರೆ ಮನೆ ಮಾಡುತ್ತಾನೆ. ಕೂಲಿ ಕೆಲಸ ಬಿಡಿಸಿ ಗಾರ್ಮೆಂಟ್ನಲ್ಲಿ ಕೆಲಸ ಕೊಡಿಸುತ್ತಾನೆ. ರಮೇಶನ ಸಹಾಯದಿಂದ ಗಾಯತ್ರಿ , ಶ್ವೇತಾಗೆ ಉತ್ತಮ ಜೀವನ ಸಿಕ್ಕಂತಾಗುತ್ತದೆ. ಪ್ರತಿ ದಿನವೂ ರಮೇಶ ಮನೆಗೆ ಬರುತ್ತಿರುತ್ತಾನೆ. ಒಂದು ದಿನ ಗಾಯತ್ರಿ ಕೆಲಸಕ್ಕೆ ಹೋದಾಗ ತಲೆ ತಿರುಗು ಬೀಳುತ್ತಾಳೆ. ತಕ್ಷಣ ರಮೇಶನಿಗೆ ಫೋನ್ ಮಾಡಿ ಕರೆಸಿ ಅವನ ಜೊತೆ ಹೊರಡುತ್ತಾಳೆ. ದಾರಿಯಲ್ಲಿನ ಆಸ್ಪತ್ರೆಗೆ ಹೋಗಿ ಚೆಕಪ್ ಮಾಡಿಸಿ ಔಷಧಿ ಕೊಡಿಸಿ ಮನೆಗೆ ಕರೆದುಕೊಂಡು ಬರುತ್ತಾನೆ. ಒಂದೆರಡು ದಿನ ಅವರ ಮನೆಯಲ್ಲೇ ಉಳಿದು ಗಾಯತ್ರಿಯ ಆರೈಕೆ ಮಾಡುತ್ತಾನೆ. ಇಬ್ಬರ ನಡುವೆ ಸ್ನೇಹ ಬೆಳೆದು ಸಲುಗೆಯೂ ಬೆಳೆಯುತ್ತದೆ.ಆಗ ಗಾಯತ್ರಿ ರಮೇಶ್ ನೀವು ಹೀಗೆ ನಮ್ಮ ಮನೆಗೆ ದಿನವೂ ಬಂದು ಹೋಗುವುದರಿಂದ ನಿಮ್ಮ ಹೆಸರು ಕೆಡುತ್ತದೆ. ನಿಮ್ಮ ಮದುವೆಗೆ ತೊಂದರೆ ಆಗುತ್ತದೆ. ನಮ್ಮ ಮೇಲೆ ಏಕೆ ನಿಮಗೆ ಇಷ್ಟು ಅಕ್ಕರೆ. ನನ್ನ ಗಂಡನಿಗೆ ಕೊಟ್ಟ ಒಂದು ಮಾತಿಗೆ ಇಷ್ಟು ನಮ್ಮ ಬಗ್ಗೆ ಕಾಳಜಿ ತೋರಿಸುತ್ತಿದ್ದೀರಿ. ಎಂದಾಗ ರಮೇಶನ ಒಳ ಮನಸ್ಸಿನಲ್ಲಿ ತಲ್ಲಣ ಉಂಟಾಗುತ್ತದೆ.

ಏನು ಹೇಳಬೇಕೆಂದು ತೋಚದೆ. ಗಾಯತ್ರಿ ನಾನು ನಿಮ್ಮನ್ನು ತುಂಬ ಪ್ರೀತಿಸುತ್ತೇನೆ. ನಿಮ್ಮನ್ನೇ ಮದುವೆ ಆಗುತ್ತೇನೆ ಎಂದು ದುಂಬಾಲು ಬೀಳುತ್ತಾನೆ. ಕೇಳಿದ ಗಾಯತ್ರಿಯ ಮನಸಲ್ಲಿ ಕೋಲಾಹಲ ಉಂಟಾಗುತ್ತದೆ. ಏನು ನಾನು ನಿಮ್ಮನ್ನು ಮದುವೆ ಆಗುವುದೇ? ಸಾಧ್ಯವಿಲ್ಲ. ಏನ್ರೀ ರಮೇಶ್ ನಿಮ್ಮ ಪ್ರಾಣ ಸ್ನೇಹಿತನ ಹೆಂಡತಿ ಮೇಲೆ ನಿಮಗೆ ಆಸೆಯೇ! ಇದಕ್ಕೇನಾ ನೀವು ನಮಗೆ ಸಹಾಯ ಮಾಡಿದ್ದು. ಎಂದು ಜೋರು ಮಾಡುತ್ತಾಳೆ. ಹಾಗಲ್ಲ ಗಾಯತ್ರಿ ನೀವು ಒಂಟಿಗರು. ನನಗೂ ಮದುವೆ ಆಗಿಲ್ಲ. ನಮ್ಮಿಬ್ಬರ ಸ್ನೇಹ ಮದುವೆಗೆ ನಾಂದಿ ಆದರೆ ಏನು ತಪ್ಪು. ಶ್ವೇತಳನ್ನು ನೋಡಿ ತಂದೆಯ ಮುಖವೇ ನೋಡದ ಕೂಸು. ನಾನು ಅವಳಿಗೆ ತಂದೆ ಆದರೇ ಏನು ತಪ್ಪು. ಯೋಚಿಸಿ ನಾನು ನಾಳೆ ಬರುತ್ತೇನೆ ಎಂದು ಹೊರಟು ಹೋಗುತ್ತಾನೆ. ಗಾಯತ್ರಿ ತುಂಬ ಯೋಚಿಸುತ್ತಾಳೆ. ರಮೇಶ್ ಒಳ್ಳೆಯ ಮನುಷ್ಯ ನನ್ನ ಜೀವನದಲ್ಲಿನ ಘಟನೆಗಳೆಲ್ಲ ಬಲ್ಲವರು. ನನ್ನನ್ನು ಅರ್ಥಮಾಡಿಕೊಂಡಿದ್ದಾರೆ. ನನ್ನ ಗಂಡನ ಪ್ರಾಣ ಸ್ನೇಹಿತ. ಅವರನ್ನು ವರಿಸಿದರೆ ನನ್ನ ಗಂಡನ ಕೊನೆಯ ತವಕವೂ ತಣ್ಣಗಾಗುತ್ತದೆ. ಶ್ವೇತಳಿಗೂ ಒಂದು ಆಸರೆ ಆಗುತ್ತದೆ, ಎಂದು ರಮೇಶ್ ನನ್ನು ಮದುವೆ ಆಗುವುದೇ ಸೂಕ್ತ. ನಾಳೆ ರಮೇಶ್ ಬಂದ ಕೂಡಲೇ ಈ ವಿಷಯ ತಿಳಿಸಬೇಕೆಂದು; ಮರುದಿನ ಸಿಹಿ ಜಾಮೂನು ಮಾಡಿ ರಮೇಶನಿಗೆ ಸಿಹಿ ನೀಡಿ ಸಂತೋಷದ ವಿಷಯ ತಿಳಿಸಬೇಕೆಂದು ಕಾತುರದಿಂದ ರಮೇಶ ಬರುವ ದಾರಿಗೆ ಕಾಯುತ್ತಾಳೆ. ಎಷ್ಟು ಹೊತ್ತಾದರೂ ರಮೇಶ ಬರುವುದೇ ಇಲ್ಲ. ಸಂಜೆಗೆ ಬರುವವರು ರಾತ್ರಿ ಹತ್ತಾದರೂ ಪತ್ತೆ ಇಲ್ಲ. ಗಾಬರಿಯಿಂದ ರಮೇಶನಿಗೆ ಫೋನು ಮಾಡುತ್ತಾಳೆ. ಫೋನ್ ರಿಂಗಾಗುತ್ತದೆ ಅತ್ತ ಕಡೆಯಿಂದ್ ರಮೇಶ್ ನಿಂದ ಕಾಲ್ ಕಟ್ ಆಗ್ತಿದೆ. ಏನು ಮಾಡಲು ತೋಚದೆ ಗಾಯತ್ರಿ ಆ ರಾತ್ರಿ ಮಗಳನ್ನು ಪಕ್ಕದ ಪರಿಚಯಸ್ತರ ಮನೆಯಲ್ಲಿ ಮಲಗಿಸಿ ರಮೇಶನ ಮನೆಗೆ ಹೋಗತೊಡಗುತ್ತಾಳೆ. ಮಧ್ಯರಾತ್ರಿ ಆಗಿ ಬಿಡುತ್ತದೆ. ದೂರದ ಮನೆ ಒಂದು ಬಸ್ಸು, ಆಟೊ ಸಿಗದೆ ದಾರಿಯಲ್ಲಿ ದಿಕ್ಕು ತೋಚದೆ ಆಕಡೆ ಈಕಡೆ ನೋಡುತ್ತ ರಾತ್ರಿ ಬರಬಾರದಿತ್ತೇನೋ ಎಂದು ಯೋಚಿಸುತ್ತ ನಿಲ್ಲುತ್ತಾಳೆ.

ವಾಪಸ್ ಮನೆಗೆ ಹೋಗುವ ಇಚ್ಛೆಯಿಲ್ಲದೆ, ರಮೇಶ್ನ ಮನೆಕಡೆಗೆ ಹೋಗುವ ನಿರ್ಧಾರದಿಂದ ಕಾಯುತ್ತಿರುತ್ತಾಳೆ. ಅಷ್ಟರಲ್ಲಿ ಫೋನ್ ರಿಂಗಾಗುತ್ತದೆ. ನೋಡಿದ್ರೆ ರಮೇಶ್ ದು. ರಮೇಶ್ ಎಲ್ಲಿದೀರ? ಯಾಕೆ ಮನೆಗೆ ಬರ್ಲಿಲ್ಲ? ಫೋನ್ ಮಾಡಿದ್ರೆ ಯಾಕೆ ಕಟ್ ಮಾಡ್ತಿದ್ರಿ? ನಾನು ಭಯದಿಂದ ನಿಮ್ಮನ್ನ ನೋಡಲು ನಿಮ್ಮ ಮನೆಗೆ ಬರ್ತಾ ಇದೀನಿ. ಇಲ್ಲಿ ನೋಡಿದ್ರೆ ಒಂದು ಆಟೋ ಬಸ್ಸು ಗಾಡಿ ಏನು ಸಿಗ್ತಿಲ್ಲ. ಪ್ಲೀಸ್ ಬನ್ನಿ ಎಂದು ಒಂದೇ ಉಸಿರಲ್ಲಿ ಹೇಳುತ್ತಾಳೆ. ನಾನು ನಿನ್ನೆ ಮಾತಾಡಿದ್ದು ನಿಮಗೆ ಬೇಸರ ಆಯ್ತಾ? ನಾನು ನಿಮ್ಮನ್ನ ಮದುವೆ ಆಗ್ತೀನಿ. ನಂಗೆ ಒಪ್ಪಿಗೆ ಇದೆ ಪ್ಲೀಸ್ ಬನ್ರಿ ಎಂದು ಗೋಗರೆಯುತ್ತಾಳೆ.ಈ ಕಡೆಯಿಂದ ನಾನು ರಮೇಶ್ ಅಲ್ಲ ಅವನ ಗೆಳೆಯ. ಸಂಜೆ ರಮೇಶಗೆ ಆ್ಯಕ್ಸಿಡೆಂಟ್ ಆಗಿದೆ. ಆಸ್ಪತ್ರೆಗೆ ಸೇರಿಸಿದ್ವಿ. ಈಗ ಅವನಿಗೆ ಆಪರೇಶನ್ ಮಾಡ್ತಿದಾರೆ. ನಿಮ್ಮ ಮಿಸ್ ಕಾಲ್ಗಳನ್ನು ನೋಡಿ ಫೋನ್ ಮಾಡಿದಿ. ನೀವ್ ಎಲ್ಲಿದಿರಿ ನಾನು ಬರ್ತೀನಿ. ಎಂದು ಅವಳಿರುವಲ್ಲಿಗೆ ಬಂದು ಕರೆದುಕೊಂಡು ಅಸ್ಪತ್ರೆಗೆ ಹೋಗುತ್ತಾನೆ. ಆಸ್ಪತ್ರೆ ಅಲ್ಲಿ ರಮೇಶನಿಗೆ ಮುರಿದ ಕಾಲಿನ ಅಪರೇಶನ್ ನಡೀತಾ ಇರುತ್ತೆ. ರನೇಶನ ಗೆಳೆಯ ಗಾಯತ್ರಿಗೆ ನೀವೇನಾ ಗಾಯತ್ರಿ ಅಂದ್ರೆ! ಮಾಡಿದ ಒಂದು ತಪ್ಪಿಗೆ ತನ್ನ ಇಡೀ ಜೀವನವನ್ನು ನಿಮಗಾಗಿ ಮೀಸಲಿಟ್ಟಿದ್ದಾನೆ ನಮ್ಮ ರಮೇಶ ಎನ್ನುತ್ತಾನೆ. ಏನು ತಪ್ಪೆ ಅವರು ಯಾವ ತಪ್ಪು ಮಾಡಿದ್ದಾರೆ. ನನ್ನ ಗಂಡನ ಸ್ನೇಹಿತ ಅವರು. ನನ್ನ ಗಂಡ ಸಾಯುವಾಗ ನನ್ನ ಯೋಗಕ್ಷೇಮವನ್ನು ನೋಡಿಕೊಳ್ಳುವಂತೆ ತಿಳಿಸಿ ಇವರಿಂದ ಮಾತು ಪಡೆದಿದ್ದಾರಂತೆ. ಅದಕ್ಕೆ ರಮೇಶ್ ನಮ್ಮನ್ನ ಹೆಚ್ಚು ಕಾಳಜಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅವರು ನನ್ನನ್ನು ಮದುವೆ ಆಗುವುದಾಗಿ ಹೇಳಿದ್ದರು ನಿನ್ನೆ. ನಾನು ಒಪ್ಪಿರಲಿಲ್ಲ. ಇವತ್ತು ಮದುವೆಗೆ ಒಪ್ಪಿಕೊಂಡ ವಿಚಾರ ಅವರಿಗೆ ಹೇಳಿದರೆ ಸಂತೋಷಪಡುತ್ತಾರೆ ಎಂದು ಅಂದುಕೊಂಡರೆ ಇಷ್ಟೆಲ್ಲ ನಡೆದು ಹೋಯಿತು.

ಹೌದು ಅವರೇನೊ ತಪ್ಪು ಮಾಡಿದ್ದಾರೆ ಅಂದಿರಲ್ಲಏನದು ಎಂದು ಗಾಯತ್ರಿ ಕೇಳುತ್ತಾಳೆ. ರಮೇಶನ ಗೆಳೆಯ ನಿನ್ನ ಗಂಡನ ಸಾವಿಗೆ ಕಾರಣವೇ ರಮೇಶ. ಸುಮ್ಮನೆ ದಾರಿಯಲ್ಲಿ ಹೋಗುತ್ತಿದ್ದವನಿಗೆ ಕುಡಿದ ಅಮಲಿನಲ್ಲಿ ಬೈಕ್ ಡಿಕ್ಕಿ ಹೊಡೆಸಿದ. ಆ ಹೊಡೆತಕ್ಕೆ ಬಿದ್ದ ನಿನ್ನ ಗಂಡನಿಗೆ ತಲಗೆ ಪೆಟ್ಟು ಬಿದ್ದಿ ಸತ್ತು ಹೋದ. ರಮೇಶ್ ನಿನ್ನ ಗಂಡನ ಸ್ನೇಹಿತನೇ ಅಲ್ಲ. ನಿನ್ನ ಗಂಡನಿಗೆ ಯಾವ ಮಾತೂ ಕೊಟ್ಟಿಲ್ಲ. ತಾನು ಮಾಡಿದ ತಪ್ಪಿನಿಂದ ನಿನ್ನ ಬಾಳು ನರಕವಾಯಿತೆಂದು ನಿನ್ನ ಪೂರ್ವಾಪರ ವಿಚಾರಿಸಿ, ನಿನಗೆ ಸಹಾಯ ಮಾಡಿ ನಿನ್ನ ಬಾಳಿಗೆ ಬೆಳಕಾಗಿ ನಿಂತಿದ್ದಾನೆ. ಎಂದು ಎಲ್ಲ ವಿಚಾರ ಹೇಳಬೇಕೆಂದುಕೊಂಡವ ಮದುವೆವರೆಗೆ ಬಂದ ಸಂಬಂಧ ಈ ವಿಚಾರದಿಂದ ಕೆಡಬಾರದೆಂದು, ತಪ್ಪಾ ನಮ್ಮ ರಮೇಶ ಅಪರಂಜಿ ಅವನಿಂದ ಯಾವ ತಪ್ಪು ಆಗುವುದಿಲ್ಲ. ಎಂದು ಮಾತು ಮರೆಸಿಬಿಡುತ್ತಾನೆ. ರಮೇಶನ ಆಪರೇಶನ್ ಸಕ್ಸಸ್ ಆಗುತ್ತದೆ. ಗಾಯತ್ರಿ ರಮೇಶನನ್ನು ತಮ್ಮ ಮನೆಗೆ ಕರೆದುಕೊಂಡು ಬರುತ್ತಾಳೆ. ತಿಂಗಳುಗಟ್ಟಲೆ ಪ್ರೀತಿಯಿಂದ ಆರೈಕೆ ಮಾಡುತ್ತಾಳೆ. ಗುಣವಾದ ನಂತರ ಮದುವೆ ಆಗಿ ಸುಖದಿಂದ ಇರುತ್ತಾರೆ. ಕೊನೆಗೂ ರಮೇಶ ತನ್ನಿಂದಾದ ತಪ್ಪಿಗೆ ವ್ಯಥೆ ಪಟ್ಟು. ಗಾಯತ್ರಿಗೆ ಜೀವನ ಕೊಟ್ಟು ಶ್ವೇತಳ ಭವಿಷ್ಯಕ್ಕೆ ರೂವಾರಿಯಾಗುತ್ತಾನೆ.

-ವರದೇಂದ್ರ ಕೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x