ಒಂಟಿ ಬದುಕಿನ ದುರಂತ: ಅಖಿಲೇಶ್ ಚಿಪ್ಪಳಿ


ಆಂಡ್ಯಾಯ್ಡ್, ಲ್ಯಾಪ್‍ಟಾಪ್, ವೈಫೈ ಇವತ್ತು ಏನೆಲ್ಲಾ ಇವೆ. ಪ್ರಪಂಚವೇ ಅಂಗೈಲಿದೆ. ಕುಳಿತಲ್ಲೇ ಏನೂ ಬೇಕಾದರೂ ಮಾಡಬಹುದಾದ ಕಾಲ. ಆನ್‍ಲೈನ್‍ಲ್ಲೇ ಆರ್ಡರ್ ಮಾಡಿ ಬೇಕಾದ್ದನ್ನು ಪಡೆಯುವ ಕಾಲ. ನೆಂಟರಿಷ್ಟರಿಲ್ಲದೆ, ಬಂಧು-ಬಳಗವಿಲ್ಲದೆ, ಸ್ನೇಹಿತರ ಹಂಗಿಲ್ಲದೆ ಬದುಕಿಬಾಳಬಹುದಾದ ಕಾಲ. ಇಂತಹ ಸನ್ನಿವೇಶದಲ್ಲೇ ನಿಗೂಢ ರೀತಿಯಲ್ಲಿ ಸಾವಿಗೀಡಾಗಿ, 6 ವರ್ಷಗಳವರೆಗೂ ಯಾರ ಗಮನಕ್ಕೂ ಬಾರದೆ ಅಜ್ಞಾತವಾಗಿ ಕೊಳೆತು ಹೋದ ಒಂದು ಹೆಂಗಸಿನ ಕತೆಯಿದು.

ಪಿಯಾ ಫಾರೆನ್‍ಕೋಫ್, 45 ವರ್ಷದ ಈ ಮಹಿಳೆ ಕುಟುಂಬದಿಂದ ಪರಿತ್ಯಕ್ತ ವiಹಿಳೆಯಾಗಿದ್ದಳು,  ತಂದೆ-ತಾಯಿಯಿಂದ ಬೇರೆಯಾಗಿದ್ದ ಪಿಯಾಳಿಗೆ ಮದುವೆಯಾಗಿರಲಿಲ್ಲ. ಅದೊಂದು ತರಹದ ಒಂಟಿ ಬದುಕು ಬಾಳುತ್ತಿದ್ದಳು. ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪಿಯಾ ವಿವಿಧ ಕಾರಣಗಳಿಗಾಗಿ ಸದಾ ಸುತ್ತಾಡುತ್ತಲೇ ಇರುತ್ತಿದ್ದಳು. ಮಿಚಿಗನ್‍ನಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಳು. ನೆರೆಹೊರೆಯವರೊಂದಿಗೆ ಯಾವ ಸಂಪರ್ಕವನ್ನು ಇಟ್ಟುಕೊಳ್ಳದ ಪಿಯಾ ಸದಾ ಒಂಟಿಯಾಗಿಯೇ ಇರಲು ಇಷ್ಟಪಡುತ್ತಿದ್ದಳು. ಮೂಲತ: ಜರ್ಮನ್ ಪ್ರಜೆಯಾದ ಪಿಯಾ ಅಮೆರಿಕಾದ ಮಿಚಿಗನ್‍ನಲ್ಲಿ ವಾಸಮಾಡುತ್ತಾ, ಕೆಲಸದ ಮೇಲೆ ಹೊರಗಡೆ ತಿರುಗಾಡುತ್ತಿದ್ದಳು. 2007ರ ಕೊನೆಯಲ್ಲಿ ಅದೇಕೋ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟುಬಿಟ್ಟಳು. ಅದೇ ಸಂದರ್ಭದಲ್ಲಿ ಇವಳ ಚಿಕ್ಕಮ್ಮ ತೀರಿಕೊಂಡಳು. ಈ ವಿಷಯವನ್ನು ತಿಳಿಸುವ ಸಲುವಾಗಿ ಇವಳ ತಂಗಿ ಪಿಯಾಳಿಗೆ ಹಲವಾರು ಬಾರಿ ಕರೆ ಮಾಡಿದಳಾದರೂ, ಯಾವುದೇ ಕರೆಗೆ ಪಿಯಾ ಉತ್ತರಿಸುವ ಪ್ರಯತ್ನ ಮಾಡಲಿಲ್ಲ. 

2008ರ ಪ್ರಾರಂಭದಲ್ಲಿ ಇವಳ ಬ್ಯಾಂಕ್ ಖಾತೆಯಲ್ಲಿ 54000 ಡಾಲರ್ ಹಣವಿತ್ತು. ಕುಳಿತಲ್ಲೇ ಎಲ್ಲಾ ಕೆಲಸವನ್ನು ಮಾಡಬಹುದಾದ ಕಾಲದಲ್ಲಿ, ಇವಳ ಮನೆಬಾಡಿಗೆ, ದೂರವಾಣಿ ಶುಲ್ಕ, ವಿದ್ಯುತ್ ಬಿಲ್ ಹೀಗೆ ಪ್ರತಿಯೊಂದು ಇವಳ ಖಾತೆಯಿಂದ ನೇರವಾಗಿ ಎಲ್ಲರಿಗೂ ಜಮೆಯಾಗುತ್ತಿತ್ತು. ಮಿಚಿಗನ್‍ನ ಇವರ ನೆರೆಹೊರೆಯವರು ಇವಳ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಲೇ ಇಲ್ಲ. ಪಿಯಾ ಮನೆಗೆ ಬರುವುದು ಮತ್ತು ಮನೆಯಿಂದ ಹೊರಗೆ ಹೋಗುವುದು ಇದ್ಯಾವುದಕ್ಕೂ ನಿಗದಿತ ಸಮಯವಿರಲಿಲ್ಲ. ಮತ್ತು ಸೌಜನ್ಯಕ್ಕಾದರೂ ಒಂದು ದಿನವೂ ಇತರರೊಡನೆ ಮಾತನಾಡಿದವಳಲ್ಲ. ಎಲ್ಲಿಯವರೆಗೆ, ಬ್ಯಾಂಕ್ ಖಾತೆಯಲ್ಲಿ ಹಣವಿತ್ತೋ ಅಲ್ಲಿಯವರೆಗೆ ಬಾಡಿಗೆ ಮನೆ ಮಾಲಿಕನ ಖಾತೆಗೆ ಪ್ರತಿತಿಂಗಳೂ ನಿರ್ದಿಷ್ಟ ದಿನದಂದು ಹಣ ಜಮೆಯಾಗುತ್ತಿತ್ತು. 2010ರ ಆದಿಭಾಗದಲ್ಲಿ ಹಣ ಜಮೆಯಾಗುವುದು ನಿಂತುಹೋಯಿತು. ಹೀಗೆ ಆರು ತಿಂಗಳಾದರೂ ಹಣ ಜಮೆಯಾಗದಿದ್ದಾಗ, ಮನೆಮಾಲಿಕ ಪಿಯಾಳಿಗಾಗಿ ವಿಚಾರಿಸತೊಡಗಿದ. ಅವಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದೆ ಎಂಬ ಉತ್ತರ ಬಂತು. ಅನಿವಾರ್ಯವಾಗಿ ಮನೆಯ ಬೀಗ ಒಡೆಯುವ ಪ್ರಸಂಗ ಬಂದಿತು. ಮನೆಯಲ್ಲಿ ಎಲ್ಲಾ ವಸ್ತುಗಳು ಹಾಗೆಯೇ ಇದ್ದವು. ತನ್ಮಧ್ಯೆ ಇವಳು ಉಪಯೋಗಿಸುವ ಜೀಪಿನ ಇನ್ಸೂರೆನ್ಸ್ ಅವಧಿ ಮುಗಿದಿತ್ತು. ಈ ಬಗ್ಗೆ ಪೊಲೀಸರು ಒಂದು ಮೊಕದ್ದಮೆಯನ್ನು ಪಿಯಾಳ ಮೇಲೆ ದಾಖಲಿಸಿದ್ದರು. ನ್ಯಾಯಾಲಯದಿಂದ ಜಾರಿಯಾದ ಸಮನ್ಸ್‍ಗೆ ಪಿಯಾಳಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. 

ಇವಳ ಮನೆಮಾಲಿಕ ಬ್ಯಾಂಕ್‍ನಿಂದ ಹಣಪಡೆದು ಮನೆಯನ್ನು ಕಟ್ಟಿಸಿದ್ದ, ಯಾವಾಗ ಬಾಡಿಗೆ ಹಣ ಬರುವುದು ನಿಂತಿತೋ ಆಗ ಮನೆ ಮಾಲೀಕನಿಗೆ ಬ್ಯಾಂಕ್‍ಗೆ ಹಣ ಕಟ್ಟಲಾಗಲಿಲ್ಲ. ಕಡೆಗೆ ಬ್ಯಾಂಕ್ ಸದರಿ ಮನೆಯನ್ನು ತನ್ನ ಸುಪರ್ಧಿಗೆ ತೆಗೆದುಕೊಂಡು ಕೋರ್ಟಿನಲ್ಲಿ ದಾವೆ ಹೂಡಿತು. 2014ರ ಮಾರ್ಚ್‍ನಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮನೆಯನ್ನು ರಿಪೇರಿ ಕಾರ್ಯವನ್ನು ಬ್ಯಾಂಕ್ ಆರಂಭಿಸಿತು. ಕೆಲಸಗಾರರು ಇಡೀ ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆಗೆದು, ಕಾರನ್ನು ನಿಲ್ಲಿಸುವ ಗ್ಯಾರೇಜಿಗೆ ಬಂದರು. ಅಲ್ಲಿ ಅವರಿಗೆ ಅಚ್ಚರಿ ಕಾದಿತ್ತು. ಪಿಯಾಳ ಜೀಪಿನ ಹಿಂಭಾಗದ ಸೀಟಿನಲ್ಲಿ ಒರಗಿಕೊಂಡಂತೆ ಚರ್ಮದ ಜಾಕೇಟು ತೊಟ್ಟುಕೊಂಡ ಅಸ್ತಿಪಂಜರವಿತ್ತು. ಅಸ್ತಿಪಂಜರದ ಪಕ್ಕದ ಸೀಟಿನಲ್ಲಿ ಒಂದು ಮೊಬೈಲ್ ಹಾಗು ಹಣದ ಪರ್ಸ್ ಇತ್ತು. ಮೊಬೈಲ್ ಸ್ವಿಚ್ ಆಗಿತ್ತು ಮತ್ತು ಪರ್ಸ್‍ನಲ್ಲಿ 1200 ಡಾಲರ್ ಹಣವಿತ್ತು. 

ಯಥಾಪ್ರಕಾರ ಪೊಲೀಸರು ಬಂದು, ಮಹಜರು ಮಾಡಿ ಅಸ್ತಿಪಂಜರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಶವದ ಸ್ಯಾಂಪಲ್ ಕಳುಹಿಸಲಾಯಿತು. ಇದರಿಂದ, ತಿಳಿದುಬಂದುದೇನೆಂದರೆ, ಶವ 6 ವರ್ಷಗಳಷ್ಟು ಹಳೆಯದಾಗಿತ್ತು. ಅಂದರೆ ಪಿಯಾ ಫಾರೆನ್‍ಕೋಫ್ ಸತ್ತು ಆಗಲೇ 6 ವರುಷಗಳು ಕಳೆದಿದ್ದವು. ಪೊಲೀಸರಿಗೆ ತಲೆನೋವು ಶುರುವಾಗಿದ್ದೇ ಇಲ್ಲಿ. ಪಿಯಾಳ ಮರಣಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುವ ಜವಾಬ್ದಾರಿ ಪೊಲೀಸರ ಮೇಲೆ ಇದೆ. ಪಿಯಾಳ ಸಾವು, ಸಹಜ ಸಾವೋ, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತೀರ್ಮಾನವಾಗಬೇಕು. ಸಹಜ ಸಾವು ಅಥವಾ ಆತ್ಮಹತ್ಯೆಯಾಗಿದ್ದರೆ, ಪೊಲೀಸರಿಗೆ ಕಷ್ಟವಿಲ್ಲ. ಆದರೆ ಒಂದೊಮ್ಮೆ ಕೊಲೆಯೆಂದಾರೆ, ಯಾರು ಮಾಡಿದ್ದು, ಕೊಲೆಗೆ ಕಾರಣವೇನು? ಪಿಯಾಳಿಗೆ ಶತ್ರುಗಳು ಇದ್ದರೆ? ಹೀಗೆ ತನಿಖೆ ಮಾಡಬೇಕು. ಯಾವುದೇ ಸುಳಿವಿಲ್ಲದೇ ತನಿಖೆ ಮುಂದುವರೆಯುವುದಿಲ್ಲ. ಪಿಯಾಳ ಕುರಿತು ಅಕ್ಕ-ಪಕ್ಕದವರಿಗೂ ಎನೂ ಗೊತ್ತಿರಲಿಲ್ಲ. ಆದರೂ ಒಮ್ಮೆ ಪಕ್ಕದ ಮನೆಯಾಕೆ ಪಿಯಾಳ ಅಂಗಳವನ್ನು ಸ್ವಚ್ಚಗೊಳಿಸಿದ್ದಳು. ಬೇಕಾಬಿಟ್ಟಿಯಾಗಿ ಪಿಯಾಳ ಅಂಗಳದಲ್ಲಿ ಹುಲ್ಲು ಬೆಳೆದಿತ್ತು. ನಾಳೆ ತನಗೂ ಇದರಿಂದ ತೊಂದರೆಯಾಗಬಹುದು ಎಂದು ಲಾನ್ ಮೂವರ್ ತಂದು ಇಡೀ ಅಂಗಳದ ಹುಲ್ಲನ್ನು ನೀಟಾಗಿ ಸವರಿ ಇಟ್ಟಿದ್ದಳು. 

ಇದೀಗ ಪಿಯಾಳ ಸಂಬಂಧಿಕರು ಬಹುಷ: ಇದು ಕೊಲೆಯೇ ಇರಬೇಕು ಎಂಬು ಅಭಿಪ್ರಾಯ ಪಟ್ಟಿದ್ದಾರೆ. ಪೊಲೀಸರಿಗೆ ಎನೂ ಎಂದರೆ ಯಾವುದೇ ಸುಳಿವು ಸಿಗುತ್ತಿಲ್ಲ. ಇದರ ಬಗ್ಗೆ ಯಾರಿಗಾದರೂ ಸುಳಿವು ಸಿಕ್ಕಲ್ಲಿ ತಿಳಿಸಬಹುದು ಎಂದು “ಮಮ್ಮೀಫೈಡ್ ಎಟ್ ಮಿಚಿಗನ್” ಎಂಬ ಹೆಸರಿನಲ್ಲಿ ಫೇಸ್‍ಬುಕ್ ಕೂಡ ರಚಿಸಲಾಗಿದೆ. ಈ ತಾರೀಖಿನ ತನಕ ಈ ಘಟನೆ ನಿಗೂಢವಾಗಿಯೇ ಇದೆ.

ಈ ಕತೆಯಲ್ಲೊಂದು ಸಂದೇಶವಿದೆ. ಪಿಯಾ ಫಾರೆನ್‍ಕೋಫ್ ಎಷ್ಟೊಂದು ಯಂತ್ರದ ಮೇಲೆ ಅವಲಂಬಿತಳಾಗಿದ್ದಳೆಂದರೆ, ಯಂತ್ರಗಳ ಹೊರತಾಗಿ ಅವಳು ಯಾರೊಂದಿಗೂ ಸಂಬಂಧವಿಟ್ಟುಕೊಂಡಿರಲಿಲ್ಲ. ಒಬ್ಬ ಸ್ನೇಹಿತರೂ ಇರಲಿಲ್ಲ. ಯಾವುದೇ ಇತರೆ ಅಭಿರುಚಿಗಳಿರಲಿಲ್ಲ. ಒಳ್ಳೆಯ ಹವ್ಯಾಸಗಳೂ ಇರಲಿಲ್ಲ. ಬರೀ ಒಂಟಿತನದಿಂದ ಬದುಕಿದಳು. ಸಾವು ಹೇಗಾಯಿತು ಎನ್ನುವುದು ಪ್ರಪಂಚದ ಪಾಲಿಗೆ ನಿಗೂಢವಾಗಿದೆ. ಮನೋವಿಷ್ಲೇಕರ ಪ್ರಕಾರ ಒಂಟಿತನದಿಂದ ಬದುಕುವವರು ಸಾಮಾನ್ಯವಾಗಿ ಪ್ರಕೃತಿಯ ಆರಾಧಕರಾಗಿರುತ್ತಾರೆ. ಮರಗಿಡ-ಪ್ರಾಣಿಪಕ್ಷಿಗಳನ್ನು ಅಪಾರವಾಗಿ ಪ್ರೀತಿಸುತ್ತಾರೆ. ಜಗತ್ತಿಗೆ ಅವರು ಒಂಟಿಯೆಂದು ಕಂಡುಬಂದರೂ ವಾಸ್ತವವಾಗಿ ಅವರು ಒಂಟಿಯಾಗಿರುವುದಿಲ್ಲ. ಆದರೆ, ಪಿಯಾಳ ವಿಚಾರದಲ್ಲಿ ಇದು ಸುಳ್ಳಾಗಿದೆ ಮತ್ತು ಪಿಯಾಳ ಸಾವು ಸಾವಿರ ಪ್ರಶ್ನೆಗಳನ್ನು ಬಿಟ್ಟು ಹೋಗಿದೆ. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x