ನೀನ್ಯಾಕೆ ನನ್ನನ್ನು ಇಷ್ಟು ಪ್ರೀತಿಸ್ತೀಯಾ.. ನೀ ನನಗಾಗಿ ಮಾಡೋ ಒಂದೊಂದು ಪ್ರೀತಿಗೂ, ತ್ಯಾಗಕ್ಕೂ, ನಿಸ್ವಾರ್ಥದ ಮನಸಿಗೊಮ್ಮೆ ಹೀಗೆ ಕೇಳಿ ಬಿಡೋಣವೆಂದೆನಿಸುತ್ತದೆ.. ನನ್ನಗೊಂದಲ ಮನಸ್ಸಿಗೆ ನೀನು ಸಂತೈಸಿದ ದಿನಗಳು ಅದೆಷ್ಟೋ.. ನನ್ನ ಖುಷಿಯಲ್ಲಿಯೇ ನಿನ್ನ ಖುಷಿಯನ್ನು ಕಂಡ ಸಮಯಕ್ಕಂತೂ ಬಹುಶಃ ಲೆಕ್ಕವೇ ಇರಲಿಕ್ಕಿಲ್ಲ..ನಾ ಸೋತಾಗ ನನ್ನ ಕಣ್ಣೀರಲ್ಲಿಯೇ, ಹೊಸ ಭರವಸೆಯನ್ನು ಹುಟ್ಟಿಸಿದವನು ನೀನು..ಯಾವುದೇ ಒಳ್ಳೆಯ ಕೆಲಸ ಮಾಡಲಿ ಅದಕ್ಕೆಲ್ಲ ಗಟ್ಟಿಯಾದ ಸಪೋರ್ಟ್ ಕೊಡುತ್ತಾ ಬಂದಿದ್ದೀಯ..ಮಗಳೇ ಚನ್ನಾಗಿ ಓದು ಎಂಬ ಮಾತನ್ನು ನನ್ನ ಕಿವಿಯಲ್ಲಿ ಎಂದೂ ಗುನುಗುನಿಸುತ್ತಿರುವಷ್ಟು ಬಾರಿ ನೀ ಹೇಳಿದ್ದುಂಟು. ನನ್ನ ಹುಸಿಮುನಿಸಲ್ಲೆಲ್ಲ ನಗಿಸಿದ ದಿನಗಳು ಎಂದಿಗೂ ಇರುತ್ತವೆ.. ಚಿಕ್ಕಂದಿನಲ್ಲಿ ಇಡಗುಂದಿಯ ಜಾತ್ರೆಯಲ್ಲಿ ನೀ ನನಗೆ ಕೇಳಿದ್ದೆಲ್ಲವನ್ನೂ ಕೊಡಿಸುವಾಗ ಎಷ್ಟೋ ಬಾರಿ, ನನ್ನಪ್ಪನಷ್ಟು ಎಲ್ಲರ ಅಪ್ಪನೂ ಕೊಡಿಸೊಲ್ಲ ಎಂದು ನಿನ್ನ ಬಗ್ಗೆ ಖುಷಿಪಟ್ಟಿದ್ದುಂಟು.. ಚಿಕ್ಕ ಪುಟ್ಟ ಹಬ್ಬಗಳಲೆಲ್ಲ ನನ್ನ ಹೊಸ ಬಟ್ಟೆಯಲ್ಲಿ ನಿನ್ನದೇ ನಗುವಿನ ಚಿತ್ರವನ್ನು ಮೂಡಿಸಿದ ದಿನಗಳು ಬದುಕಿನ ಅಮೂರ್ತ ಕ್ಷಣಗಳು ಅಪ್ಪ..
ಈಗ ನಾ ನಿನಗಿಂತಲೂ ಎತ್ತರವಾಗಿ ಬೆಳೆದಿದ್ದೇನಾದರೂ, ನಾ ನಿನಗೆ ಏನೂ ಗೊತ್ತಿಲ್ದೇ ಇರೋ ಮುಗ್ಧ ಹುಡುಗಿ ಅಲ್ವಾ.. ಅಮ್ಮ ಅಪರೂಪಕ್ಕೆಲ್ಲಾದರೂ ಬೈಯ್ಯುತ್ತಿದ್ದರೆ ನೀನು ಅಯ್ಯೋ ಪಾಪ ಅದು ಸಣ್ಣ ಕೂಸು ಎಂದು ನನ್ನನ್ನೇ ವಹಿಸ್ಕೊಂಡು ಬರೋದಂತೂ ಮಾಮೂಲಿಯಾಗಿಬಿಟ್ಟಿದೆ.. ನಾನು ಅಷ್ಟೊಂದು ಮುಗ್ಧಳ ಹಾಗೆ ಕಾಣಿಸ್ತೀನಾ ಅಪ್ಪ ನಿಂಗೆ. ಚಿಕ್ಕಂದಿನಿಂದಲೂ ಅಷ್ಟೇ.. ಪಾಯಸ ಬೇಕು ಅಂದ್ರೆ ಕೇಸರಿಬಾತನ್ನೇ ಕೊಡಿಸುವಷ್ಟು ಪ್ರೀತಿಯಿಂದ ನನ್ನ ಬೆಳೆಸಿದ್ದೀರಲ್ಲ..ನಿನ್ನ ಪ್ರೀತಿಗೆ ನಾನೆಂದೂ ಮೋಸ ಮಾಡಲಾರೆ.ಅಪ್ಪ ..ನಿನ್ನ ಭರವಸೆಯನ್ನು ನಾನೆಂದೂ ಸುಳ್ಳುಮಾಡಲಾರೆನು..ನನ್ನ ಜೀವನದ ಬಗ್ಗೆ ನನಗಿಂತ ನಿನಗೇ ಚನ್ನಾಗಿಗೊತ್ತು..ಏನು ಮಾಡಿದ್ರೆ ಒಳ್ಳೇದು ಅಂತ.. ನಿನ್ನ ಜೀವನಕ್ಕಿಂತಲೂ ನನ್ನನ್ನೇ ಹೆಚ್ಚು ಪ್ರೀತಿಸುವ ನಿನ್ನ ಪ್ರೀತಿಗೆ ಯಾವ ಹೆಸರಿಡಲಿ ಅಪ್ಪ..
ನಿನ್ನಂತಹ ಅಪ್ಪನನ್ನು ಪಡೆಯಲು ಜಗತ್ತಿನ ಅದೃಷ್ಟಶಾಲಿಗಳಲ್ಲಿ ನಾನೂ ಒಬ್ಬಳು ಕಾ॒ಲೇಜಿಗೆ ಸೇರಿಸುವಾಗ, ಮನೆ ಬಿಟ್ಟು ನಾ ಹೋಗೊಲ್ಲ ಎಂದು ಅಳುತ್ತಿದ್ದರೆ, ಅದೆಷ್ಟು ಪ್ರೀತಿಯಿಂದ ನೀ ನನ್ನ ಸಂತೈಸಿದ್ದೆ ಎಂದರೆ, ಪುಟ್ಟ ಮಗುವನ್ನು ಒಂದನೇ ಕ್ಲಾಸಿಗೆ ಸೇರಿಸೋವಾಗ, ಏನೇನೋ ಹೇಳಿ ನಂಬಿಸುತ್ತಾರಲ್ಲ..ಆ ರೀತಿಯಲ್ಲಿಯೇ ನೀನನ್ನ ಪ್ರೀತಿಯಿಂದ ಈ ಕಾಲೇಜಿಗೆ ಕಳುಹಿಸಿದ್ದು..ಅದೆಷ್ಟು ಪ್ರೀತಿಯಿಂದ ಎಂದರೆ ಮಗಳೇ! ನಿನಗೆ ನಮ್ಮನ್ನು ನೋಡಬೇಕು ಅನ್ನಿಸಿದಾಗ ಫೋನ್ ಮಾಡು ನಾನು ಮಾರನೇಯ ದಿನ ಬೆಳಗಾಗೋದ್ರೊಳಗೆ ಅಲ್ಲಿ ಬಂದ್ಬಿಡ್ತೀನಿ ಅಂತ ನಂಬಿಸಿದ್ದೆ ಅಲ್ವ..ನೀನ್ಯಾಕೆ ಇಷ್ಟು ಒಳ್ಳೆಯವನು ಅಪ್ಪ..?
ನನಗೆ ನಿನ್ನ ಬಗ್ಗೆ ಹೆಮ್ಮೆಯಿದೆ.. ಪುನರ್ಜನ್ಮ ಪಡೆದು ಬಂದವನು ನೀನು..ಆಕ್ಸಿಡೆಂಟ್ ಆಗಿ ಒಂದಷ್ಟು ದಿನಗಳನ್ನು ಹಾಸಿಗೆಯಲ್ಲಿ ಕಳೆದರೂ ಮತ್ತೆ, ಏನೋ ಸಾಧಿಸುತ್ತೀಯೆಂದು ಆರೋಗ್ಯವಾಗಿ ಬಂದೆಯಲ್ಲ..ಬಹುಶಃ ನೀನೆಂಬುದು ನನ್ನ ಪಾಲಿನ ಅದೃಷ್ಟವೇ ಸರಿ..ನನಗೆ ಯಾವ ಮಹಾನ್ ಪುರುಷರೂ ಸ್ಪೂರ್ತಿಯಲ್ಲ.. ನನಗೆ ನೀನೆ ಸ್ಪೂರ್ತಿ..ನೀನು ನನಗೆ ಎಲ್ಲರಿಗಿಂತ ಹೆಚ್ಚು..ನಾಲ್ಕು ಜನರ ಎದುರಿಗೆ ನಿನ್ನನ್ನು ಅಪ್ಪ ಎಂದು ಕರೆಯಲು ಖುಷಿಯಿದೆ. ನೀನು ನಿನಗಾಗಿ ಏನೂ ಮಾಡಿಕೊಳ್ಳುವುದಿಲ್ಲ..ಆದರೆ ಎಲ್ಲವನ್ನೂ ಮಕ್ಕಳಿಗಾಗಿ, ಮನೆಗಾಗಿ ಮಾಡುವ ನೀನು ಅದೆಷ್ಟು ನಿಸ್ವಾರ್ಥಿ ಎಂದೆನಿಸುತ್ತದೆ..
ಅಪ್ಪ ನಿನ್ನ ಬಗ್ಗೆ ಒಂದಷ್ಟು ಸಾಲುಗಳನ್ನು ಬರೆಯಬೇಕೆಂದು ಹೊರಟಾಗ ಕೈ ತಡವರಿಸಿತು..ಯಾಕೋ ಗೊತ್ತಿಲ್ಲ.. ನಿನ್ನ ಬಗ್ಗೆ ಬರೆಯೋಕೆ ಪದಗಳೇ ಸಿಗುತ್ತಿಲ್ಲ..ಕಣ್ಣಂಚು ಗೊತ್ತಿಲ್ಲದಂತೆಯೇ ಒದ್ದೆಯಾಗುತ್ತದೆ..ಅಪ್ಪನೆಂಬ ಅದ್ಭುತ ನೀನು.. ನಿನ್ನಂತಹ ಅಪ್ಪನನ್ನು ಪಡೆದ ನಾನೇ ಧನ್ಯ.. ಮಾತುಗಳು ಒಮ್ಮೆಮ್ಮೆ ಬರುವುದೇ ಇಲ್ಲ.. ನಿನ್ನ ಪ್ರೀತಿಯನ್ನು ನೋಡಿ.. ನನ್ನ ಜೀವನದಲ್ಲಿ ನಾನು ಅತ್ಯಂತ ಪ್ರೀತಿಸೋ ಜೀವಿ ನೀನು.. ತುಂಬಾ ಜನರ ನಡುವೆ ನನ್ನ ನಡವಳಿಕೆಯನ್ನೇ ನೋಡುತ್ತಿರುವವನು ನೀನು.. ಹೆಚ್ಚು ಮಾತನಾಡುತ್ತಿದ್ದರೆ, ಸುಮ್ನಿರೆ ಸ್ವಲ್ಪ ಎಂದು ಗದರಿಸಿ, ತಕ್ಷಣವೇ ಬಂದು ತಲೆ ಸವರುವವನು ನೀನು..
ಒಂಟಿಯಾಗಿ ಕುಳಿತಿದ್ದಾಗ, ಖುಷಿಯಲ್ಲಿದ್ದಾಗ, ದುಃಖದಲ್ಲಿದ್ದಾಗ ಒಮ್ಮೆ ನಿನ್ನ ಬಗ್ಗೆ ಯೋಚಿಸಿದರೂ ಸಾಕು, ಮನಸ್ಸೆಲ್ಲವೂ ನಿನ್ನೊಲವಿನ ಹನಿಯಲ್ಲಿ ತೋಯಿದುಬಿಡುತ್ತೆ.. ಬಹುಶಃ ದೇವರು ನನಗಾಗಿ ಕೊಟ್ಟ ಅದೃಷ್ಟ ನೀನು..ನಿನ್ನ ಪ್ರೀತಿಯನ್ನು ಏನೆಂದು ವರ್ಣಿಸಲಿ ಅಪ್ಪ?
*****
ಅಪ್ಪಾ ಅಂದ್ರೆ ಆಕಾಶ. ಚೆಂದಾಗಿದೆ ಬರಹ