ಐ!!! ಇರುವೆ: ಅಖಿಲೇಶ್ ಚಿಪ್ಪಳಿ

ಎಲ್ಲಾ ಕಾಲದಲ್ಲೂ ಇರುವೆಗಳು ಮನುಷ್ಯನಿಗೆ ಉಪದ್ರವಕಾರಿಗಳೇ ಸೈ ಎಂದು ಸಾಮಾನ್ಯ ತಿಳುವಳಿಕೆ. ಸಂಜೆ ದೇವರ ಮುಂದೆ ಹಚ್ಚಿರುವ ದೀಪದ ಹಣತೆ (ಹಿತ್ತಾಳೆಯದ್ದು) ಬೆಳಿಗ್ಗೆ ನೋಡಿದರೆ ಬಣ್ಣ ಬದಲಾಯಿಸಿ ಕಪ್ಪಾಗಿದೆ, ದೀಪ ನಂದಿಹೋಗಿದೆ. ಹಣತೆಯ ಮೇಲೆ ಅಗಣಿತ ಸಂಖೈಯ ಇರುವೆಗಳು. ಬೆಳಿಗ್ಗೆ ಮತ್ತೆ ದೀಪ ಹಚ್ಚುವ ಮುಂಚೆ ಇರುವೆಗಳನ್ನೆಲ್ಲಾ ದೂರ ಓಡಿಸಬೇಕು. ಹಣತೆಯ ಒಳಗೆ ಎಣ್ಣೆಯಲ್ಲಿ ಬಿದ್ದು ಸತ್ತ ಮತ್ತಷ್ಟು ಅಸಂಖ್ಯ ಇರುವೆಗಳು. ಕೈ-ಕಾಲಿಗೆ ಕಚ್ಚುವ ಜೀವಂತ ಇರುವೆಗಳು ಇಷ್ಟಕ್ಕೇ ಮುಗಿಯಲಿಲ್ಲ, ಅಕ್ಕಿ ಡಬ್ಬದ ಬಾಯಿ ತೆಗೆದರೆ ಅಕ್ಕಿಯಲ್ಲೂ ಅಸಂಖ್ಯ ಇರುವೆಗಳು ಮತ್ತು ಗೃಹಿಣಿಯರ ಹಿಡಿಶಾಪ ಈ ಪಾಪದ ಇರುವೆಗಳಿಗೆ. ಆ ಅಕ್ಕಿ ಡಬ್ಬವನ್ನು ಎತ್ತಿಕೊಂಡು ಹೋಗಿ ಬಿಸಿಲಲ್ಲಿ ಇಡಬೇಕು, ಬೇಸಿಗೆಯಾದರೆ ಪರವಾಗಿಲ್ಲ ಮಳೆಗಾಲವಾದರೆ? ದೀಪ ಹಚ್ಚಿದ ದೇವರೇ ಗತಿ. ಅಮ್ಮನ ದಯನೀಯ ಸ್ಥಿತಿ ನೋಡಿ ಇದಕ್ಕೊಂದು ಏನಾದರೂ ಪ್ಲಾನ್ ಮಾಡಲೇ ಬೇಕು ಎಂದು ಯೋಚಿಸಿದಾಗ ಹೊಳೆದಿದ್ದು ಇರುವೆಗಳ ಗೂಡಿನ ಹತ್ತಿರವೇ ಎಣ್ಣೆ ಮತ್ತು ಅಕ್ಕಿ ಇಟ್ಟರೆ ಹೇಗೆ ಎಂದು (ಬಾಕಿ ಕಾಳುಕಡಿ ಸಾಮಾನುಗಳನ್ನು ಬೇಕಾದರೆ ಪಕ್ಕದ ಮನೆಯಿಂದ ಅವೇ ತಂದು ಕೊಂಡು ಇನ್ನೂ ಬೇಕಾದರೆ ಬೆಂಕಿ-ಕುಕ್ಕರ್‌ಗಳನ್ನು ತಂದುಕೊಂಡು ಅಡುಗೆ ಮಾಡಿಕೊಳ್ಳಲಿ). ಒಂದು ತಿಂಡಿ ತಿನ್ನುವಷ್ಟು ದೊಡ್ಡದಾದ ಬಾಳೆಎಲೆಗೆ ಅಕ್ಕಿ-ಎಣ್ಣೆಯನ್ನು ಹದವಾಗಿ ಕಲಸಿ ಇರುವೆಗಳ ಶಿಸ್ತಿನ ಸೈನ್ಯದ ಸಾಲಿನ ಪಕ್ಕಕ್ಕಿಟ್ಟೆ. ಕೆಲವು ಇರುವೆಗಳು ಬಾಳೆಎಲೆಗೆ ದಾಳಿ ಮಾಡಿದ್ದಾಯಿತು ಆದರೆ ಇರುವೆಗಳಿಗೆ ಒಂದು ಸಮಸ್ಯೆ ಎದುರಾಯಿತು ಎಣ್ಣೆಯಲ್ಲಿ ಕಲಸಿದ ಅಕ್ಕಿಯನ್ನು ಅವುಗಳಿಗೆ ಒಯ್ಯಲಾಗಲಿಲ್ಲ, ಕಚ್ಚಿದ ಹಾಗೂ ಬಾಯಿಯಿಂದ ಜಾರುತ್ತಿತ್ತು. 

ಇರುವೆಗಳಲ್ಲಿ ೧೨,೦೦೦ ಜಾತಿಗಳನ್ನು ಗುರುತಿಸಲಾಗಿದೆಯಾದರೂ ವಿಜ್ಞಾನಿಗಳ ಅಂದಾಜು ೨೨,೦೦೦ ಸಾವಿರ ಜಾತಿಗಳು, ಗುರುತಿಸುತ್ತಾ ಹೋದಂತೆ ಇವುಗಳ ಜಾತಿ ಹೆಚ್ಚೂ ಆಗಬಹುದು. ಕ್ರಿಟೇಷಿಯಸ್ ಯುಗದಲ್ಲಿ ಅಂದರೆ ೧೨೦ ಲಕ್ಷ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಸಸ್ಯಗಳು ಬೆಳೆದು ಹೂ ಬಿಡುವ ಕಾಲದಲ್ಲಿ ಜನ್ಮ ತಾಳಿದ ಇರುವೆ ಪ್ರಪಂಚ ಇಂದಿನವರೆಗೂ ಎಲ್ಲಾ ಪ್ರತಿಕೂಲ ಪರಿಸ್ಥಿತಿಯ ಎದಿರು ಸಮರ್ಥವಾಗಿ ಜೀವಿಸುತ್ತಿದ್ದಾವೆ. ಅತ್ಯಂತ ಬಿಸಿಯಾದ ಮರುಭೂಮಿಯಿಂದ ಹಿಡಿದು ಅತಿಹೆಚ್ಚು ಮಳೆಕಾಡುಗಳಲ್ಲೂ ಇವು ಕಾಣಸಿಗುತ್ತವೆ. ಪ್ರತಿಜಾತಿಯ ಇರುವೆಗಳ ನಡವಳಿಕೆಗಳನ್ನು ಬರೆಯುತ್ತಾ ಹೋದಲ್ಲಿ ಸಾವಿರಾರು ಪುಟಗಳೇ ಬೇಕಾಗಬಹುದು ಆದ್ದರಿಂದ ಕುತೂಹಲಕಾರಿಯಾದ ಕೆಲವು ಅಂಶಗಳನ್ನು ಮಾತ್ರ ಹೇಳುವುದು ಸೂಕ್ತ.

ಬಹಳ ಜಾತಿ ಇರುವೆ ಕುಟುಂಬಗಳು ಪ್ರಧಾನವಾಗಿ ತ್ರಿಕೋನ ವಿಧದ ರಚನೆ ಹೊಂದಿರುತ್ತವೆ. ರಾಣಿ ಇರುವೆ ಇತರ ಇರವೆಗಳಿಗಿಂತ ದೊಡ್ಡದು. ಸೈನಿಕ ಇರುವೆಗಳು ಮತ್ತು ಕೆಲಸಗಾರ ಇರುವೆಗಳು. ಸೈನಿಕ ಇರುವೆಗಳಲ್ಲಿ ಎರಡು ವಿಧ. ರಕ್ಷಣೆ ಮಾಡುವ ಇರುವೆ ಮತ್ತು ಹೋರಾಟ ಮಾಡುವ ಇರುವೆ. ಕೆಲಸಗಾರ ಇರುವೆಗಳಲ್ಲೂ ಎರಡು ವಿಧ. ಗೂಡು ಕಟ್ಟುವ ಇರುವೆಗಳು ಮತ್ತು ಆಹಾರ ಸಂಗ್ರಹಣೆ ಇರುವೆಗಳು.

ಕೆಲವು ಇರುವೆಗಳು ಥೇಟ್ ನಮ್ಮ ಕೆ.ಎಸ್.ಆರ್.ಟಿ.ಸಿ ಮಾದರಿಯ ಸಾರ್ವಜನಿಕ ಸಂಚಾರಿ ವ್ಯವಸ್ಥೆಯನ್ನು ಹೊಂದಿವೆ. ದೊಡ್ಡ ಗಾತ್ರದ ಬಸ್ ಇರುವೆ ಗೂಡಿನಿಂದ ಸಾಕಷ್ಟು ಇರುವೆಗಳನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಆಹಾರವಿರುವ ಸ್ಥಳದವರೆಗೂ ಹೋಗುತ್ತದೆ. ಅಲ್ಲಿ ಸಣ್ಣ ಗಾತ್ರದ ಇರುವೆಗಳು ಆಹಾರ ಸಂಗ್ರಹಿಸಿ ಬಸ್ ಇರುವೆಯ ಮೇಲೆ ಸರತಿ ಸಾಲಾಗಿ ಹತ್ತುತ್ತವೆ, ಬಸ್ ಇರುವೆ ಇವುಗಳನ್ನು ಮತ್ತೆ ಗೂಡಿಗೆ ಕೊಂಡೊಯ್ಯುತ್ತದೆ. ನಮ್ಮ ಕೆ.ಎಸ್.ಆರ್.ಟಿ.ಸಿ ಬಸ್‌ಗಳಂತೆ ಅಪಘಾತಗಳಿಲ್ಲ, ಪ್ರಯಾಣಿಕರ ಪರಸ್ಪರ ಜಗಳ ದೊಂಬಿಗಳಿಲ್ಲ, ಕಂಡಕ್ಟರ್‌ನ ಮುಂದೆ ಹೋಗಿ- ಹಿಂದೆ ಹೋಗಿ ಕೂಗಿಲ್ಲ, ಚಿಲ್ಲರೆಗಾಗಿ ಜಗಳವೇ ಇಲ್ಲ. ವಿಜ್ಞಾನಿಗಳ ಅಭಿಮತದಂತೆ ವೈಯಕ್ತಿಕ ಶಕ್ತಿಯ ನಷ್ಟವನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಇರುವೆಗಳು ಕಂಡುಕೊಂಡಿವೆ.

ಮರದ ಮೇಲೆ ಜೀವಿಸುವ ಇರುವೆಗಳು ಗಾಳಿಯಲ್ಲಿ ತೇಲುತ್ತಾ ಇಳಿಯಬಲ್ಲವು. ಕೆಲವು ಜಾತಿಯ ಈಜಲೂ ಬಲ್ಲವು ಮತ್ತು ನೀರಿನ ಕೆಳಗೆ ಗೂಡು ಮಾಡಿ ಜೀವಿಸಬಲ್ಲವು. ಈ ಭೂಮಿಯ ಮೇಲೆ ಅಂಟಾರ್ಟಿಕ ಹೊರತು ಪಡಿಸಿ ಮತ್ತೆಲ್ಲಾ ಕಡೆ ಈ ಇರುವೆಗಳು ಕಾಣಸಿಗುತ್ತವೆ. ಪ್ರತಿನಿತ್ಯ ನಮ್ಮ ಕಾಲ ಕೆಳಗೆ ಅದಷ್ಟೋ ಇರುವೆಗಳು ಸಿಕ್ಕಿ ಸಾಯುತ್ತವೆ. ಇರುವೆಗಳ ಬಗ್ಗೆ ನಮ್ಮ ಇಂದಿನವರೆಗಿನ ತಿಳುವಳಿಕೆ ಅಲ್ಪವೆಂದೆ ಹೇಳಬಹುದು. 

ಇರುವೆಗಳನ್ನು ಮುಖ್ಯವಾಗಿ ನಾಲ್ಕು ವಿಧಗಳೆಂದು ವಿಂಗಡಿಸಬಹುದು. ಸುಗ್ಗಿ ಮಾಡುವ ಇರುವೆಗಳು, ಈ ಇರುವೆಗಳು ಭತ್ತ ಹಾಗೂ ಇತರ ಹುಲ್ಲಿನ ಬೀಜಗಳನ್ನು ಸಂಗ್ರಹಿಸುವುದನ್ನು ಗಮನಿಸಿರಬಹುದು. ಗೂಡಿನಲ್ಲಿ ಸಂಗ್ರಹಿಸಿದ ಬೀಜಗಳು ಮೊಳಕೆಯಾದರೆ? ಇದಕ್ಕಾಗಿ ಈ ಇರುವೆಗಳು ಬೀಜಗಳ ಮೂಲಾಂಕುರ (ಮೊಳಕೆಯಾಗಲು ಬೇಕಾದ ಪದಾರ್ಥ) ವನ್ನೇ ತೆಗೆದು ಸಂಗ್ರಹಿಸುತ್ತವೆ.

ನೇಯ್ಗೆ ಮಾಡುವ ಇರುವೆಗಳು. ಮಾವಿನ ಅಥವಾ ಲಿಂಬೆ ಗಿಡಗಳಲ್ಲಿ ಕಾಣ ಸಿಗುವ ಚಿಗಳಿಗಳು ಎಲೆಗಳನ್ನು ಒಂದಕ್ಕೊಂದು ಸೇರಿಸಿ ಬಹು ಆಕರ್ಷಕವಾಗಿ ಗೂಡು ಕಟ್ಟುತ್ತವೆ. ಬಟ್ಟೆ ಒಣಹಾಕುವ ತಂತಿಯ ಮೇಲೆ ಸಾಮಾನ್ಯವಾಗಿ ಇವು ಓಡಾಡುತ್ತಿರುತ್ತವೆ, ಕೆಲವೊಮ್ಮೆ ಬಟ್ಟೆಯ ಜೊತೆಯಲ್ಲಿ ಮನೆಯೊಳಗೂ ಬರುತ್ತವೆ, ಗೊತ್ತಾಗದೆ ಅದಕ್ಕೆ ಪೆಟ್ಟು ಮಾಡಿದಲ್ಲಿ ತಿರುಗಿ ಕಚ್ಚುತ್ತವೆ. ಉರಿಯ ಜೊತೆ ದುರ್ನಾತ ಬೇರೆ. ಒಂದು ಪಾತ್ರೆಯಲ್ಲಿ ಉಪ್ಪು ನೀರು ಮಾಡಿ ಬಲಿತ ಒಳ್ಳೆ ಒಂದು ಗೂಡನ್ನು ಬುಡಕ್ಕೆ ಕತ್ತರಿಸಿ ಆ ಉಪ್ಪುನೀರಿನ ಪಾತ್ರೆಗೆ ಹಾಕುತ್ತಾರೆ, ಇಡೀ ಗೂಡನ್ನು ಆ ನೀರಿನಲ್ಲಿ ಮುಳುಗಿಸಿದರೆ ಅರ್ಧ ಕೆಲಸ ಆದಂತೆ. ನಂತರ ಚಿಗಳಿ ಚಟ್ನಿ ರೆಡಿ. ಈ ಖಾದ್ಯವನ್ನು ನಮ್ಮಲ್ಲಿ ಕೆಲವು ಜನ ತಿನ್ನುತ್ತಾರೆ. ಇತ್ತೀಚಿನ ಸಂಶೋಧನೆಯಿಂದ ಈ ಇರುವೆಗಳು ಕೀಟನಾಶಕಗಳು ಎಂದು ತಿಳಿದು ಬಂದಿದೆ. ಯಾವ ಹಣ್ಣಿನ ಮರದಲ್ಲಿ ಈ ಚಿಗಳಿಗಳಿವೆಯೋ ಆ ಮರದಲ್ಲಿ ಫಸಲು ಜಾಸ್ತಿ.

ನಾವು ಹುಟ್ಟುವ ಬಹು ಮೊದಲೇ ಈ ಎಲೆ ಕತ್ತರಿಸುವ ಇರುವೆಗಳು ಕೃಷಿಪದ್ದತಿಯನ್ನು ಅಳವಡಿಸಿಕೊಂಡಿದ್ದವು. ಮರದ ಎಲೆಗಳನ್ನು ಕತ್ತರಿಸಿ ನೆಲದಾಳದ ವಿಸ್ತಾರವಾದ ಗೂಡಿನಲ್ಲಿ ಕಲೆ ಹಾಕುತ್ತವೆ ನಂತರ ಒಂದು ತೆರನಾದ ರಾಸಾಯನಿಕವನ್ನು ಉತ್ಪತ್ತಿ ಮಾಡಿ ಸಣ್ಣ ಎಲೆಚೂರಿನಲ್ಲಿ ಹರಡುತ್ತವೆ. ಭೂಮಿಯ ಒಳಗಡೆಯ ತೇವಾಂಶ ಸೇರಿ ಆ ಎಲೆಗಳ ಮೇಲೆ ಫಂಗಸ್ ಬೆಳೆಯುತ್ತವೆ. ಈ ಫಂಗಸ್‌ನ್ನು ತಿಂದು ಈ ಇರುವೆಗಳು ಬದುಕುತ್ತವೆ.

ಸೈನಿಕ ಇರುವೆಗಳು ಒಗ್ಗಟ್ಟಿನ ಮತ್ತು ಅತಿ ಶಿಸ್ತಿನ ಇರುವೆಗಳೇ ಸೈ. ಲಕ್ಷಾಂತರ ಇರುವೆಗಳ ಸಾಲಿನಲ್ಲಿ ಒಂದು ಇರುವೆಯೂ ಸಾಲು ತಪ್ಪಿ ಹೋಗುವುದನ್ನು ನೀವು ಕಾಣಲಾರಿರಿ. ಅತಿಭಯಂಕರವಾದ ಈ ಇರುವೆಗಳು ಸಣ್ಣಪುಟ್ಟ ಪ್ರಾಣಿಗಳನ್ನು ಹಿಡಿದು ತಿಂದು ಹಾಕುತ್ತವೆ. ಆಫ್ರಿಕಾದ ಹೊಲದಲ್ಲಿ ಕೆಲಸ ಮಾಡುವವರ ಆದಿವಾಸಿಗಳ ಕೆಲವು ಸಣ್ಣಮಕ್ಕಳು ಈ ಇರುವೆ ಸೈನ್ಯದ ಕರಾರುವಕ್ಕಾದ ದಾಳಿಗೆ ಬಲಿಯಾದ ನಿದರ್ಶನಗಳಿವೆ.

ತನಗಿಂತ ಐದು ಪಟ್ಟು ಹೆಚ್ಚು ಭಾರವನ್ನು ತನ್ನ ಇಕ್ಕಳದಂತಹ ಕೊಂಬಿನಿಂದ ಹೊರಬಲ್ಲ, ಇಪ್ಪತೈದು ಪಟ್ಟು ಹೆಚ್ಚು ಭಾರ ಎಳೆಯಬಲ್ಲ ಈ ಸಣ್ಣಜೀವಿ ತನ್ನ ಗಾತ್ರಕ್ಕೆ ಹೋಲಿಸಿದಲ್ಲಿ ಅತ್ಯಂತ ಬಲಿಷ್ಟ ಜೀವಿ ಆಗಿದೆ. ಮನುಷ್ಯನಿಗೆ ಅತ್ಯಂತ ಉಪಕಾರಿಯಾಗಿದೆ. ಒಂದೊಮ್ಮೆ ಇರುವೆಗಳು ಈ ಜಗತ್ತಿನಲ್ಲಿ ಇಲ್ಲದಿದ್ದಲ್ಲಿ ನಮ್ಮ ಬದುಕು ಈಗಿರುವಷ್ಟು ಚೆನ್ನಾಗಿ ಇರುತ್ತಿರಲಿಲ್ಲ ಎನ್ನಬಹುದು, ಪ್ರಪಂಚದಲ್ಲಿ ಪ್ರತಿದಿನ ಸಂಗ್ರಹವಾಗುವ ಲಕ್ಷಾಂತರ ಟನ್‌ಗಳಷ್ಟು ಸಾವಯವ ಅವಶೇಷಗಳನ್ನು ಸಮರ್ಥವಾಗಿ ಮಣ್ಣಿಗೆ ಸೇರಿಸುವುದರಲ್ಲಿ, ಪರಾಗಸ್ಪರ್ಶಕ್ರಿಯೆಯಲ್ಲಿ, ಜಾಡಮಾಲಿಗಳಾಗಿ, ನೈಸರ್ಗಿಕ ಕೀಟನಾಶಕಗಳಾಗಿ ಹೀಗೆ  ಇರುವೆಗಳ ಪಾತ್ರ ಬಹುಮುಖ್ಯವಾದದು. ಇನ್ನು ಮುಂದೆ ಯಾವುದಾದರೂ ಇರುವೆ ಕಾಲಿಗೆ-ಕೈಗೆ ಕಚ್ಚಿದಲ್ಲಿ ಹೊಸಕಿ ಹಾಕದಿರಿ.

ಹೇಗಾದರೂ ಅಕ್ಕಿಯನ್ನು ಗೂಡಿಗೆ ಒಯ್ಯಲಿ ಇನ್ನೂ ಅದು ಇರುವೆಗಳ ಸಮಸ್ಯೆ ಎಂದು ನಾನು ಡ್ಯೂಟಿ ನಿಮಿತ್ತ ಪೇಟೆಗೆ ಹೋದೆ. ಮಧ್ಯಾಹ್ನ ಮನೆಗೆ ಬಂದವನೆ ಇರುವೆಗಳು ಏನು ಮಾಡುತ್ತಿವೆ ಎಂದು ನೋಡಲು ಹೋದರೆ ಅತ್ಯಾಶ್ಚರ್ಯವೆಂಬಂತೆ ಬಾಳೆಎಲೆಯಲ್ಲಿ ಒಂದು ಹಿಡಿಯಷ್ಟು ಪುಡಿ ಮಣ್ಣಿತ್ತು!!! ಈಗ ತಲೆ ಕೆಡುವ ಸರದಿ ನನ್ನದು. ನಾನು ನನ್ನ ಕೈಯಲ್ಲಿ ಒಂದು ಮುಷ್ಟಿಯಾಗುವಷ್ಟು ಅಕ್ಕಿಯನ್ನು ಇಟ್ಟಿದ್ದೆ, ಇರುವೆಗಳ ಗಾತ್ರಕ್ಕೆ ಹೋಲಿಸಿದಲ್ಲಿ ಅದು ತುಂಬಾ ದೊಡ್ಡ ಗುಡ್ಡವೆ ಸರಿ. ಆದರೂ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಇರುವೆಗಳ ಸೈನ್ಯವು ಗೂಡಿನ ಒಳಗಿದ್ದ ಪುಡಿಪುಡಿಯಾದ ಮಣ್ಣನ್ನು ತಂದು ಎಣ್ಣೆ ಹಚ್ಚಿದ ಅಕ್ಕಿಯ ಮೇಲೆ ಸುರುವಿ ಅಕ್ಕಿಯಲ್ಲಿನ ಎಣ್ಣೆ ಅಂಶವನ್ನು ಚೊಕ್ಕಟಮಾಡಿ ಆಮೇಲೆ ಅಕ್ಕಿಯನ್ನು ಒಂದು ಕಾಳೂ ಬಿಡದಂತೆ ಹೊತ್ತೊಯಿದ್ದವು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
mamatha keelar
mamatha keelar
10 years ago

ಚಿಕ್ಕ ತಲೆಯಲ್ಲಿ ದೊಡ್ಡ ಬುದ್ದಿ ಈ ಇರುವೆಗಳದ್ದು…ಚನ್ನಾಗಿದೆ ನಿಮ್ಮ ಬರಹ ಎಷ್ಟೊಂದು ವಿಷಯಗಳು ಇರುವೆಗಳ ಬಗ್ಗೆ ಗೊತ್ತೇ ಇರಲಿಲ್ಲ..

Akhilesh Chipli
Akhilesh Chipli
10 years ago

ಪ್ರತಿಕ್ರಿಯೆಗೆ ಧನ್ಯವಾದಗಳು ಮಮತಾಜಿ.

ಬಿ.ಗಂಗಾಧರ ನಾಯಕ್
ಬಿ.ಗಂಗಾಧರ ನಾಯಕ್
10 years ago

ಇರುವೆಗಳ ಕುರಿತಾಗಿ ಇಷ್ಟೆಲ್ಲಾ ಮಾಹಿತಿಗಳು ತಿಳಿದಿರಲಿಲ್ಲ..ನಿಜಕ್ಕೂ ಫೇಸ್ ಬುಕ್ ನೋಡ್ತಾ ಇರೋ ಮಕ್ಕಳು ಸ್ವಲ್ಪ ಪಂಜು ಕಡೆ ಹೊರಳಿದರೆ ಪರಿಸರದ ಜ್ಞಾನ ವಾದರೂ ಬಂದೀತು…ನಿಜಕ್ಕೂ ಬರಹ ಚೆನ್ನಾಗಿದೆ…

Akhilesh Chipli
Akhilesh Chipli
10 years ago

Thanks Gangadharji

4
0
Would love your thoughts, please comment.x
()
x