ಸಣ್ಣವನಿದ್ದಾಗ ಬೆಂಗಳೂರು ಎಂದರೆ ಉದ್ಯಾನನಗರಿ ಎಂಬ ಹೆಮ್ಮೆಯಿತ್ತು. ಎರಡು ಬಾರಿ ಬಂದಾಗಲೂ ಇಲ್ಲಿದ್ದ ತಣ್ಣನೆಯ ಹವೆ ಖುಷಿ ನೀಡಿತ್ತು. ಆದರೆ ಈಗ.. ಬೆಂಗಳೂರು ಅಕ್ಷರಶ: ಬೇಯುತ್ತಿದೆ. ಸುಡ್ತಿರೋ ಬಿಸಿಲಲ್ಲಿ, ಆಗಾಗ ಬಂದು ಫೂಲ್ ಮಾಡೋ ಮಳೆಯಿದ್ರೂ ಯಾಕೋ ಕಾಡೋ ಐಸ್ ಕ್ರೀಂ ನೆನಪುಗಳು.. ನೆನಪಾದಾಗೆಲ್ಲಾ ನಗಿಸೋ ಬಿಸಿ ಐಸ್ ಕ್ರೀಂ :-).. ಹೀಗೆ ಸುಡ್ತಿರೋ ಸೆಖೆಗೊಂಚೂರು ತಣ್ಣನೆ ನೆನಪುಗಳು ..
ಬಾಲ್ಯಕ್ಕೂ ಐಸಿಗೂ ಸಖತ್ ನಂಟಿದೆ 🙂 ಐಸ್ ಕ್ರೀಂ ಗಿಂತಲೂ ಮುಂಚೆ ನೆನಪಾಗೋದು ಐಸ್ ಕ್ಯಾಂಡಿ.. ಬೇಸಿಗೆ ರಜಾ, ಇತರ ರಜಾ ಅಂದ್ರೆ ಐಸ್ ಕ್ಯಾಂಡಿ ರಜಾ ತರ.. ಬಿಸಿಲಲ್ಲಿ ಕುಣಿಬೇಡ್ರೋ ಅಂತ ಮಾತಲ್ಲಿ ಎಷ್ಟೇ ಹೇಳಿದ್ರೂ ನಮ್ಮನ್ನ ಆಡೋದ್ರಿಂದ ಯಾರೂ ತಡೀತಿರ್ಲಿಲ್ಲ.. ಮೈ, ಮುಖ ಎಲ್ಲಾ ಕೆಂಪಾಗೋವಷ್ಟು ಬಿಸಿಲಲ್ಲಿ ಆಡಿದ ಮೇಲೆ ಏನಾದ್ರೂ ಬೇಕಲ್ವಾ ? 🙂 ಆ ಹೊತ್ತಿಗೆ ಅಂತ್ಲೇ ಹೇಳಿ ಮಾಡ್ಸಿದ ಹಾಗೆ ಬರ್ತಿದ್ದಿದ್ದು ಐಸ್ ಕ್ಯಾಂಡಿ ಗಾಡಿ.. ಪೊಂ ಪೊಂ ಅಂತ ಗಾಡಿ ಸೌಂಡ್ ಕೇಳ್ತು ಅಂತಂದ್ರೆ ಐಸ್ ಕ್ಯಾಂಡಿ ಬಂತು ಅಂತ್ಲೇ ನಮ್ಮ ಲೆಕ್ಕ. ಏಲಕ್ಕಿ .. ಐಸ್ ಕ್ಯಾಂಡಿ ಅಂತ ಅವ ಕೂಗ್ತಾ ಬರ್ತಾ ಇದ್ರೆ ಮನೆ ಒಳಗಿದ್ರೂನೂ ನಾವು ಅವ್ನ ಸೈಕಲ್ಲಿಗಿಂತ ಜೋರಾಗಿ ಓಡಿ ಅವನತ್ರ ಬರ್ತಿದ್ವಿ.. ಕೈಯಲ್ಲಿ ಐವತ್ತು ಪೈಸೆಯೋ, ಒಂದು ರೂಪಾಯಿಯೋ ಮನಯಿಂದ ಪಡೆದು…ಆಗ ಏಲಕ್ಕಿ ಐಸಿಗೆ ಐವತ್ತು ಪೈಸಾ, ಹಾಲೈಸಿಗೆ ಒಂದ್ರುಪಾಯಿತ್ತು. ಹಾಲೈಸು ಬೇಗ ಕರಗಿ ಹೋಗತ್ತೆ ಅಂತನೋ ಅಥವಾ ಒಂದು ಹಾಲೈಸ್ ಬದ್ಲು ಎರಡು ಏಲಕ್ಕಿ ಬರತ್ತೆ ಅಂತ್ಲೋ ಏನೋ ನಮಗೆಲ್ಲಾ ಏಲಕ್ಕಿಯೇ ಫೇವರಿಟ್ಟಾಗಿತ್ತು 🙂 ಬರೀ ಇವೆರಡೇ ಅಂತಲ್ಲ. ಕೆಲೋ ಸಲ ಮ್ಯಾಂಗೋ ಕೂಡ ಬರ್ತಿತ್ತು. ಆದ್ರೆ ಅಪರೂಪ. ಇವೆರಡು ಎಲ್ಲಾ ಐಸ್ ಗಾಡಿಗಳ ಟ್ರೇಡ್ ಮಾರ್ಕ್ಗಳಾಗಿದ್ದವು 🙂
ಇನ್ನು ಪೇಟೆಗೇನಾದ್ರೂ ಹೋದ್ರೆ ಅವಾಗ ಐಸ್ ಕ್ರೀಂ ಎಂಬ ವೈಭವ. ಅಪ್ಪಂಗೋ ಅಮ್ಮಂಗೋ ಸಖತ್ ಖುಷಿ ಆಗಿದೆ ಅಂದ್ರೆ ನಂಗೆ ಐಸ್ ಕ್ರೀಂ ಭಾಗ್ಯ 🙂 ಬಾರೋ ಐಸ್ ಕ್ರೀಂ ತಿನ್ನೋಕೆ ಹೋಗೋಣ ಅನ್ನೋರು 🙂 ಯಾವ ಐಸ್ ಕ್ರೀಂ ಅಂದ್ರೆ ಗಡ್ ಬಡ್.. ವೆನಿಲ್ಲಾ, ಮ್ಯಾಂಗೋಗಳೆಲ್ಲಾ ಏನದು.. ಸುಮ್ನೆ ಮೂಸಿ ನೋಡಿದಂಗೆ.. ಇವೆಲ್ಲಾ ಪ್ಲೇವರ್ಗಳೂ ಇರುವ ಐಸ್ ಕ್ರೀಂಗಳ ರಾಜ(? :-)) ಗಡ್ ಬಡ್ ತಿನ್ನಬೇಕನ್ನೋದು ನನ್ನ ಬಯಕೆ ಆಗಿತ್ತು. (ತೀರಾ ಇತ್ತೀಚಿನವರೆಗೂ ಈ "ಗಡ್ ಬಡ್" ಅನ್ನೋ ಐಸ್ ಕ್ರೀಂ ಎಲ್ಲಾ ಕಡೆ ಸಿಗತ್ತೆ ಅಂದ್ಕೊಂಡಿದ್ದೆ.. ಆದ್ರೆ ಮೊನ್ನೆ ನಮ್ಮೂರಲ್ಲಿ ಸಿಕ್ಕಿದ್ದ ಹೈದರಾಬಾದ್ ಅತ್ತೆ ಮಾವನ ಮಾತಿನಿಂದ ಆ ಕೂಪಮಂಡೂಕತನ ದೂರಾಯ್ತು 🙂 )
ಇನ್ನು ಜಾತ್ರೆ ಅಂದ್ರೆ ಕಪ್ಪಲ್ಲಿ ಬರ್ತಿದ್ದ ಕಪ್ಪೈಸು ಅಥವಾ ಬಾಲ್ ಐಸ್ ಕ್ರೀಂ. ಈಗಿನ ಮದುವೆ ಮನೆಗಳಲ್ಲಿ ಕಾಮನ್ನಾಗಿರುವಷ್ಟು ಕಾಮನ್ನಾಗಿರದಿದ್ದರೂ ಕಪ್ಪೈಸು ಎಲ್ಲಾದ್ರೂ ಸಿಗತ್ತೆ ಅಂತ ಅದಕ್ಕೆ ಎರಡನೆಯ ಆದ್ಯತೆ. ಇವೆರಡ್ರಲ್ಲಿ ಮೊದಲ ಆಯ್ಕೆ ಏನಿದ್ರೂ ಬಾಲೈಸೆ. ಕ್ರಿಕೆಟ್ ಬಾಲ್ ತರನೇ ಇರೋ ಕಪ್ಪಿನಲ್ಲಿ ಐಸ್ ಕ್ರೀಂ , ಉಮ್ 🙂 ತಿಂದಾದ ಮೇಲೆ ಆಟಕ್ಕೆ ಬಾಲೊಂದು ಸಿಗುತ್ತೆ ಅನ್ನೋದೂ ಇದ್ರ ಪ್ರೀತಿಗೆ ಕಾರಣ ಇರ್ಬೋದೇನೋ..ಅಂತೂ ಎಲ್ಲಾ ಹುಡುಗರದೂ ಬಾಲೈಸ್ ಕೊಡಿಸೆಂಬುದೊಂದೇ ಹಟ. ಈಗ ನಮ್ಮೂರ ಜಾತ್ರೆಯಲ್ಲಿ ಬಾಲೈಸಿನ ಕ್ರೇಜ್ ನನ್ನ ಬಾಲ್ಯದಲ್ಲಿದ್ದಷ್ಟು ಇಲ್ಲದಿದ್ರೂ ಸುಮಾರಿಗೆ ಕಾಣ್ತಿದೆ. ಕಂಪ್ಯೂಟರ್, ಟೀವಿ, ಟ್ಯೂಷನ್ಗಳಲ್ಲಿ ಬಿಸಿಯಾಗಿರೋ ಮಕ್ಕಳಿಗೆ ಆಟಕ್ಕೆ ಟೈಮೆಲ್ಲಿದೆ? ಆಡಿದರೂ ಟೆನ್ನಿಸ್ ಬಾಲು, ದುಬಾರಿ ಬ್ಯಾಟುಗಳೇ . ಅರ್ಧ ರಾಪರ್ ಕಿತ್ತ ಬಾಲು ಹೆಂಗೆ ಸ್ಪಿನ್ನಾಗುತ್ತಿತ್ತು, ತೆಂಗಿನ ಬೊಡ್ಡೆಯ, ಅಡಿಕೆ ದಬ್ಬೆಯ ಬ್ಯಾಟಲ್ಲಿ ಹೆಂಗೆ ಆಡ್ತಿದ್ವಿ ಅಂದ್ರೆ ಕಾಮಿಡಿನಾ ಅಂಕಲ್ ಅಂತಾರೆ !! ಬಂಗಾರದಂತೆ ಅಣ್ಣಾ ಅನ್ನೋಕೂ ಬರಲ್ಲ, ಕಾಲೇಜಿಗೆ ಹೋಗ್ತಿದ್ದವರೂ ಅಂಕಲ್ ಅನ್ನಿಸ್ಕೊಬೇಕಾಗಿರೋದು ಐಸ್ ಕ್ರೀಂನಂತೆ ಕರಗುತ್ತಿರೋ ಭಾವನೆಗಳ, ನಂಟು/ಬಂಧಗಳ ದ್ಯೋತಕವೇ ? .. ಹೋಗ್ಲಿ ಬಿಡಿ, ಎಲ್ಲೋ ಹೋದ್ವಿ :-):-) ಎಲ್ಲರೂ ಅಣ್ಣ, ತಮ್ಮ, ಪುಟ್ಟ, ಮಾಮ ಆಗಿದ್ದ ಆ ದಿನಗಳ ಐಸ್ ಕ್ರೀಂ ನೆನಪಲ್ಲಿ ಮತ್ತೆ ಮುಳುಗೋಕೆ ಅಂತನೇ ಈ ಸಲ ನಮ್ಮೂರ ಜಾತ್ರೆಗೆ ರಜಾ ಹಾಕಿ ಹೋಗಿದ್ದೆ.. ಬಾಲೈಸು ತಿಂದು ಬಂದೆ 🙂
ನಾಲ್ಕರಿಂದ ಐದಕ್ಕೆ ಮನೆ ಹತ್ರ ಇದ್ದ ಸರ್ಕಾರಿ ಶಾಲೆಗ ಬಂದೆ. ಅಲ್ಲಿ ಫೇಮಸ್ ಆಗಿದ್ದು ಬಾದಾಮ್ ಪೆಪ್ಸಿ. ಪೆಪ್ಸಿ ಅಂದರೇ ಈಗಿನ ಏ, ಎಸ್, ಅಭಿ ಪೆಪ್ಸಿ ಅಲ್ಲ. ಬಾಲ್ಯದ ಹದಿನೈದು ಸೆಂಟಿಮೀಟರ್ ಸ್ಕೇಲ್ ನೆನ್ಪು ಮಾಡ್ಕೊಳ್ಳಿ. ಸುಮಾರು ಅಷ್ಟೇ ಉದ್ದದ, ಅದಕ್ಕಿಂದ ಸ್ವಲ್ಪ ಕಡಿಮೆ ಅಗಲದ ಗುಂಡನೆಯ ಕೋಲಿನಂತಿರುತ್ತಿದ್ದ ಕವರೊಳಗಿನ ಈ ಪೆಪ್ಸಿಯನ್ನು ತಿಂದವರಿಗಷ್ಟೇ ಅದರ ರುಚಿ ಗೊತ್ತು. ಅದ್ರ ಬಗ್ಗೆ ಬರ್ಯೋದೂ ಕಷ್ಟ. ಬರೆದರೂ ಅದರ ಕಲ್ಪನೆ ಬರೋದು ಕಷ್ಟ 🙁 ಶಾಲೆಯ ಪಕ್ಕದಲ್ಲೇ ಒಬ್ಬರ ಮನೆಯಲ್ಲಿ ಬಾದಾಮ್ ಪೆಪ್ಸಿ ಮಾರ್ತಾರೆ ಅಂತ ನಮಗೆ ಗೊತ್ತಾಯ್ತು..ಬಾದಾಮ್ ಪೆಪ್ಸಿ ಅಂದ್ರೆ ಬಾದಾಮಿ ಹಾಲ್ನ ಹಾಕಿ ಮಾಡಿರೋ ಪೆಪ್ಸಿ. ಏನ್ಮಾಡೋದು. ನನ್ನತ್ರ ಅವತ್ತು ಒಂದ್ರೂಪಾಯೂ ಇರ್ಲಿಲ್ಲ. ಶಾಲೆಗೆ ಹೋಗೋ ಮಕ್ಕಳಿಗೆ ದುಡ್ಯಾಕೆ ಅಂತ ಮನೇಲಿ. ಹೇಗಿದ್ರೂ ಬೇಕಾಗಿದ್ದೆಲ್ಲಾ ಕೊಡ್ಸೋರು. ಫೀಜಿನ ಟೈಮಲ್ಲೊಂದು ದುಡ್ಡು ಕೊಡೋರು. ಬೇರೆ ಟೈಮಲ್ಲಿ ಯಾಕೆ ಅಂತ. ಬೇಕು ಅಂತ ನಾನೂ ಕೇಳಿರ್ಲಿಲ್ಲ. ಅವ್ರೂ ಕೊಟ್ಟಿರ್ಲಿಲ್ಲ 🙂 ಅವತ್ತು ಎಲ್ಲಾ ಫ್ರೆಂಡ್ಸು ತಿನ್ನೋದ್ನ ನೋಡ್ತಾ ನಿಂತಿದ್ದಷ್ಟೇ ಬಂತು.ಮಾರ್ನೇ ದಿನವೂ ಪೆಪ್ಸಿ ಮಾಡಿದ್ರು. ಆದ್ರೆ ಅವತ್ತೂ ದುಡ್ಡಿರಲಿಲ್ಲ. ಪ್ರೆಂಡ್ಸತ್ರ ಕೇಳ್ಬಹುದಿತ್ತೇನೋ.. ಆದ್ರೆ ಸಾಲ ಮಾಡ್ಬಾರ್ದು ಅನ್ನೋದು ಅವಾಗಿನಿಂದನೇ ಅದೇಗೋ ಮನೆಯಿಂದನೇ ಮೈಗೂಡಿದ್ದ ಮೌಲ್ಯವಾಗಿತ್ತು ಅನ್ಸುತ್ತೆ.. ನಾಲಿಗೆಯವರೆಗೆ ಬಂದ ಮಾತು ಬಾಯಿಯಿಂದ ಆಚೆ ಬರ್ತಿರ್ಲಿಲ್ಲ. ಎರಡನೇ ದಿನ ಮನೆಗೆ ಬಂದಾಗ ಎರಡು ದಿನದ ಕತೆ ಹೇಳಿದೆ ಮನೇಲಿ. ನಕ್ಕ ಮನೆ ಅವ್ರು ಎರಡು ರೂಪಾಯಿ ಕೊಟ್ಟಿದ್ರು. ದುಡ್ಯೋದೆಲ್ಲಾ ತಿನ್ನೋಕೆ, ಖುಷಿಯಾಗಿರೋಕೆ ಮಗನೇ ಎಂಬ ಅಪ್ಪ-ಅಮ್ಮನ ಮಾತುಗಳು ನೆನ್ಪಾಗಿ ಈಗ್ಲೂ ಕಣ್ಣಂಚಲ್ಲಿ ನೀರು.. ಸರಿ, ಮೂರ್ನೇ ದಿನ ಜ್ಯಾಮಿಟ್ರಿ ಬಾಕ್ಸಲ್ಲಿ ಜೋಪಾನವಾಗಿ ಎರಡು ರೂಪಾಯಿ ಇಟ್ಟು ತಂದಿದ್ದೆ. ಆದ್ರೆ ಅವತ್ತು ಬಾದಾಮ್ ಪೆಪ್ಸಿ ಮಾಡ್ಲೇ ಇಲ್ಲ.. ಅವ್ರಿಗೆ ಏನಾಯ್ತೋ ಗೊತ್ತಾಗ್ಲಿಲ್ಲ. ನಾನು ಆ ಸ್ಕೂಲು ಮುಗ್ಸಿ ಹೈಸ್ಕೂಲಿಗೆ ಹೋಗೋವರ್ಗೂ ದಿನಾ ಒಂದೋ ಎರ್ಡೋ ರೂಪಾಯಿ ತಂದು ಕಾಯ್ತಾನೆ ಇದ್ದೆ. ಬಾದಾಮ್ ಪೆಪ್ಸೆ ಸಿಗ್ಲೇ ಇಲ್ಲ 🙁
ಆಮೇಲೆ ಈ ಪೆಪ್ಸಿ ಕ್ಯಾಂಡಿಗಳು ಅಂಗಡೀಲೂ ಸಿಗತ್ತೆ ಅಂತ ಗೊತ್ತಾಯ್ತು.. ನಮ್ಮನೆ ಹತ್ರ ಇದ್ದ , ನಂ ಫೇವರಿಟ್ ಪಾಪು ಅಂಗಡೀಲಿ ನನ್ನ ಫೇವರೆಟ್ ಐಟಂಗಳಲ್ಲಿ ಈ ಪೆಪ್ಸಿಯೂ ಒಂದಾಯ್ತು.. ದೊಡ್ಡಪ್ಪನ ಮನೆಗೆ ಹೋದಾಗ್ಲೂ ಅಲ್ಲೊಂದು ಅಂಗಡೀಲಿ ಪೆಪ್ಸಿ ಸಿಗುತ್ತೆ ಅಂತ ಗೊತ್ತಾದಾಗ ನಾನೂ ಮತ್ತೊಬ್ಬ ಗೆಳೆಯ ಆ ಪೆಪ್ಸಿ ತಗೊಂಡ್ ಬಂದಿದ್ವಿ.. ಆ ರೇಂಜಿನ ಕ್ರೇಜು ಆಗ ಪೆಪ್ಸಿಗೆ 🙂 ಆ ಒಂದ್ರೂಪಾಯಿಯ ಚೀಪೋ ಪೆಪ್ಸಿ ಕ್ಯಾಂಡಿಯ ಮಜಾ ಈಗಿನ ಯಾವ ಎ, ಎಸ್, ಅಭಿಯಲ್ಲೂ ದಕ್ಕಿಲ್ಲ 🙂 ಅಂದಂಗೆ ಆ ಕ್ಯಾಂಡಿಗೆ ಪೆಪ್ಸಿ ಅಂತ ಹೇಗೆ ಹೆಸ್ರು ಬಂತು ಅಂತ ಇಲ್ಲಿವರ್ಗೂ ಯೋಚ್ನೆ ಮಾಡಿರ್ಲಿಲ್ಲ:-) ಮೊನ್ನೆ ಇದೇ ಬೆಂದಕಾಳೂರ , ಕುಂದಲಳ್ಳಿಯ ಅಂಗಡಿ ಒಂದ್ರ ಹೊರಗೆ ಪೆಪ್ಸಿ ಕ್ಯಾಂಡಿ ಚೀಪ್ತಿದ್ದ ಬಾಲರನ್ನು ನೋಡಿ ಮತ್ತೆ ಬಾಲ್ಯದ ನೆನಪಾಯ್ತು. ಬೇಜಾರ್ಯಾಕೆ ಮಾಡ್ತಿ, ಪೆಪ್ಸಿ ಕುಡಿ ಅಂದಂಗೂ ಆಯ್ತು.. 🙂
ಐಸ್ ಕ್ರೀಂ ಅಂದ್ರೇ ಹಲ್ಲು ಚುಮುಗುಟ್ಟಿಸುವಂತದ್ದು ಅಂತ ಗೊತ್ತೇ ಇದೆ. ಶುರುವಿನಲ್ಲಿ ಅದೇನೋ ಬಿಸಿ ಐಸ್ ಕ್ರೀಂ ಅದಂಗಿತ್ತು ಅಂತ ಯೋಚ್ನೆ ಮಾಡ್ತಾ ಇದ್ರಾ..:-) ಅದೂ ಒಂದು ತಮಾಷೆಯೆ. ಆದ್ರೆ ಆ ಅನುಭವ ನಂದಲ್ಲ. ನಮ್ಮ ನೆಂಟರ ಮನೆಯಲ್ಲಿ ನಡೆದಿದ್ದು.. ಈಗ ಕಾಲದ ಪರಿವೆಯಿಲ್ಲದೇ ಯಾವಾಗ ಬೇಕಂದ್ರೂ ಐಸ್ ಕ್ರೀಂ ಪ್ಯಾಕ್ ತಂದು ಪ್ರಿಜ್ಜಲ್ಲಿಟ್ಟು ತಿನ್ನಬಹುದು. ಆದ್ರೆ ನನ್ನ ಬಾಲ್ಯದ ಕಾಲದಲ್ಲಿ ಹಾಗಿರಲಿಲ್ಲ. ಅಗ ಎಲ್ಲೋ ಅಪರೂಪಕ್ಕೆ, ಅಗರ್ಭ ಶ್ರೀಮಂತರ ಮನೆ ಅನ್ನುವಂತೆ ಎಲ್ಲೋ ಕೆಲವರ ಮನೆಯಲ್ಲಿ ಮಾತ್ರ ಪ್ರಿಜ್ ಇರ್ತಿತ್ತು. ಹಾಗಾಗಿ ಮನೆಯಲ್ಲಿ ಐಸ್ ಕ್ರೀಂ ಮಾಡೋದೂ ದೂರದ ಮಾತೇ ಸರಿ… ಪೇಟೆಯಲ್ಲಿದ್ದ ನನ್ನ ದೊಡ್ಡಮ್ಮನ ಮನೆಯಲ್ಲಿ ಬೇಸಿಗೆ ಅಂತ ಮಕ್ಕಳ ರಾಜ್ಯ. ಅವ್ರಿಗೆಲ್ಲಾ ಇಷ್ಟ ಅಂತ ದೊಡ್ಡಮ್ಮ ಐಸ್ ಕ್ರೀಂ ಮಾಡಿದ್ರು. ಮಕ್ಕಳಿಗೋ ಎಲ್ಲಿಲ್ಲದ ಸಂಭ್ರಮ. ಆದ್ರೆ ಅವತ್ತು ಇದ್ದಕ್ಕಿದ್ದಂಗೆ ಮಳೆ. ಮಳೆ ನೋಡಿ, ಐಸ್ ಕ್ರೀಂ ತಿನ್ನಬೇಕಂತಿದ್ದ ಮಕ್ಕಳ ಮುಖವೆಲ್ಲಾ ಸೊರಗಿ ಹೋಗಿತ್ತು. ಹಾಸ್ಯಪ್ರಿಯರಾದ ನನ್ನಪ್ಪ ಆ ಮಕ್ಕಳನ್ನ ಸಮಾಧಾನಪಡಿಸೋ ತರ.. ಮಳೆ ಬಂದ್ರೆ ಏನಾತು. ಬಿಸಿ ಐಸ್ ಕ್ರೀಂ ಮಾಡ್ಕೊಡೋಕೆ ಹೇಳಿ ದೊಡ್ಡಮ್ಮಂಗೆ ಅಂದ್ರಂತೆ ! ಆ ಮುಗ್ದ ಹುಡುಗ್ರು ಡೊಡ್ಡಮ್ಮಾ ದೊಡ್ಡಮ್ಮ, ಬಿಸಿ ಐಸ್ ಕ್ರೀಂ ಮಾಡ್ಕೊಡು ಅಂತ ಕೂತಿದ್ರಂತೆ !:-) 🙂 ಕೊನೆಗೂ ಅವ್ರಿಗೆ ಸಮಾಧಾನ ಮಾಡೋದ್ರಲ್ಲಿ ದೊಡ್ಡಮ್ಮಂಗೆ ಸಾಕು ಬೇಕಾಯ್ತಂತೆ.. ಈಗ್ಲೂ ಈ ಪ್ರಸಂಗ ನೆನಸ್ಕೊಂಡು ನಕ್ಕು ಹಗುರಾಗ್ತೀವಿ ಹಲವು ಬಾರಿ 🙂
ಕಾಲ ಕಳೀತಾ ಹೋದಂಗೆ ಐಸ್ ಕ್ರೀಂ ಬೆಲೆ ಏರ್ತಾ ಹೋಯ್ತು. ದಿನಕ್ಕೆ ಮೂರರಂತೆ ಬರ್ತಿದ್ದ ಕ್ಯಾಂಡಿ ಗಾಡಿಗಳು ಕಮ್ಮಿ ಆಗ್ತಾ ಆಗ್ತಾ ಈಗ ಏನಾದ್ರೂ ಸ್ಪರ್ಧೆ, ಜಾತ್ರೆ ನಡೆದ್ರೆ ಅಲ್ಲಿ ಮಾತ್ರ ಅನ್ನೋ ತರ ಆದ್ವು ಕ್ಯಾಂಡಿ ಗಾಡಿಗಳು 🙁 ಈ ಟೈಮಲ್ಲಿ ಎಂಟ್ರಿ ಕೊಟ್ಟೋರು ಉತ್ತರ ಭಾರತದ ಐಸ್ ಕ್ರೀಂ ವಾಲಾಗಳು.. ಭೋಲೇರಾಂ ಐಸ್ ಕ್ರೀಂ, ಶ್ರೀ ಕೃಷ್ಣ ಫಲೂದ ಅಂತೊಂದು ಬೋರ್ಡು ನೇತಾಕಿಗೊಂಡು ಪಾನಿಪೂರಿ ಗಾಡಿಗಿಂತ ಸ್ವಲ್ಪ ಸಣ್ಣ ಸಣ್ಣ ಗಾಡಿಯಲ್ಲಿ ಗಂಟೆ ಬಾರಿಸ್ತಾ ಪೇಟೆಗಳ ಬೀದಿ ಬೀದಿ ತಿರುಗೋಕೆ ಶುರು ಮಾಡಿದ್ರು ಈ ಐಸ್ ಕ್ರೀಂ ವಾಲಾಗಳು.. ಕೋನ್ ಐಸ್ ಕ್ರೀಂ, ಫಲೂದಗಳ ಸ್ವಾದ ಸವಿದಿದ್ದೇ ಇವರಿಂದ. ವಿಚಿತ್ರ ರುಚಿಯ ಐಸ್ ಕ್ರೀಂ ಮತ್ತು ಅದರ ಮೇಲಿನ ಒಣ ಹಣ್ಣುಗಳ ಹೊದಿಕೆ.. ಇವರಿಂದ ಐಸ್ ಕ್ರೀಂ ಅಂದರೆ ಹೀಗೇ ಇರುತ್ತೆ ಅನ್ನೋ ನಮ್ಮ ಕಲ್ಪನೇನೇ ಬದಲಾಯ್ತು..
ಸರಿ ಸುಮಾರು ಇದೇ ಸಮಯಕ್ಕೆ ಪರಿಚಯ ಆಗಿದ್ದು ಕುಲ್ಪೀ. ಐಸ್ ಕ್ರೀಂ ವಾಲಾನಂತದ್ದೇ ಗಾಡಿಯಲ್ಲಿ ಬರ್ತಿದ್ದವರು ಈ ಕುಲ್ಫೀ ವಾಲಾಗಳು. ಚಾಕುವಿನಂತ ಉದ್ದನೆ ಕಬ್ಬಿಣದ ಕೋನುಗಳಲ್ಲಿ ಇಟ್ಟಿರುತ್ತಿದ್ದ ಈ ಕುಲ್ಫಿಗಳನ್ನು ಎತ್ತಿ, ಕಡ್ಡಿಗೆ ಸಿಕ್ಕಿಸಿ ಕೊಡೋದನ್ನು ನೋಡೋದೇ ಒಂದು ಖುಷಿ ಆಗಿತ್ತು ಆಗ 🙂 ಈಗಲೂ ನನಗೆ ಕುಲ್ಫಿ ಅಂದರೆ ನೆನಪಾಗೋದು ಆ ಕುಲ್ಫಿಯೇ ಹೊರತು ಈ ಮೆಕ್ಡಿ, ಕೆಎಫ್ಸಿ, ಆರ್ಡಿಗಳ ಕುಲ್ಫಿಯಲ್ಲ 🙁
ಆಮೇಲೆ ಹೊರಗಡೆ ಪ್ರವಾಸ ಹೋದಾಗೊಮ್ಮೆ ಕಂಡಿದ್ದು ಚಾಕೋಬಾರ್.. ಹೊರಗಡೆ ಚಾಕೋಲೇಟ್, ಒಳಗೆ ಐಸ್ ಕ್ರೀಂ ಇರುವ ಅದರ ಸೌಂದರ್ಯ ಬಹಳವೇ ಇಷ್ಟ ಆಗಿತ್ತು ಮೊದಲು ನನಗೆ 🙂 ಆಮೇಲೆ ಹೊರಗಡೆ ಇರಲಿ, ನಮ್ಮೂರ ಜಾತ್ರೇಲೂ ಚಾಕೋಬಾರ್ ಸಿಗೋಕೆ ಹಿಡಿದ ಮೇಲೆ ಅದ್ರ ಮೇಲಿನ ಪ್ರೀತಿ ಯಾಕೋ ಕಡಿಮೆ ಆಗಿದೆ 🙂
ಶಿವಮೊಗ್ಗದಲ್ಲಿ ಪಂಚತಾರಾ ಅಂತ ಐಸ್ ಕ್ರೀಂಮಿಗೆ ಫೇಮಸ್ಸಾದ ಪಾರ್ಲರ್ ಇದೆ. ನನ್ನ ಐಸ್ ಕ್ರೀಂ ಪ್ರೀತಿಯನ್ನು ಚೆನ್ನಾಗೇ ಅರಿತಿದ್ದ ನನ್ನ ಮಾವ ಒಮ್ಮೆ ಅಲ್ಲಿಗೆ ಕರ್ಕೊಂಡೋಗಿದ್ರು. ಯಾವಾಗ್ಲೂ ಗಡ್ ಬಡ್ ಏನು ತಿಂತೀಯ. ಇದ್ನ ತಿನ್ನು ಅಂತ ಬ್ಲಾಕ್ ಟೈಟಾನಿಕ್ ಅಂತೊಂದು ಐಸ್ ಕ್ರೀಂ ಕೊಡಿಸಿದ್ರು 🙂 ಐಸ್ ಕ್ರೀಂನ ಮೇಲೊಂದು ಮಿನಿ ಕೊಡೆ ನೆಟ್ಟಿದ್ರು ! ಆ ಐಸ್ ಕ್ರೀಂ ಸಖತ್ ದೊಡ್ಡದಿತ್ತು ಹೆಸರಿನಂತೆಯೇ.. ನಮ್ಮಾವ ನನ್ನ ನೋಡಿ ನಕ್ತಿದ್ರೆ ನಂಗೆ ತಿಂದೂ ತಿಂದೂ ಸುಸ್ತಾಗಿ ಹೋಗಿತ್ತು 🙂 ಈ toppings ಅನ್ನೋ ಪರಿಕಲ್ಪನೆ ಪೇಟೆಯವರಿಗೆ ಕಾಮನ್ ಆದ್ರೂ ಹಳ್ಳಿಯಿಂದ ಬಂದ ನನಗೆ ಹೊಸದೇ ಆಗಿತ್ತು ಅನ್ನೋದು ಬೇರೆ ಮಾತು. ಆಗ ಕುತೂಹಲದಿಂದ ಮನೆಗೆ ತಂದು ಇಟ್ಟಿದ್ದ ಆ ಮಿನಿ ಕೊಡೆ ಇನ್ನೂ ಊರಲ್ಲಿದೆ 🙂
ರೇಟು ಅಂದಾಗ ನೆನ್ಪಾಗೋದು ಈ ಬೆಂದಕಾಳೂರಲ್ಲಿ ಐಸ್ ಕ್ರೀಂ ಇಂದನೇ ಬಕ್ರಾ ಆಗಿದ್ದ ಪರಿ 🙂
ಹಿಂಗೆ ಒಮ್ಮೆ ಮಾಲಿಗೆ ಹೋದ್ವಿ. ಅಲ್ಲಿ ಫಳ ಫಳ ಮಿನುಗೋ ಲೈಟುಗಳ ಕೆಳಗೆ ಗ್ಲಾಸುಗಳ ಗೂಡುಗಳಲ್ಲಿ ಬಗೆಬಗೆಯ ಐಸ್ ಕ್ರೀಂಗಳನ್ನ ಇಟ್ಟಿದ್ರು. ಹೋದ ಎಲ್ರಿಗೂ ಆಸೆ ಆಯ್ತು. ಸರಿ , ಇವತ್ತಿನ ಐಸ್ ಕ್ರೀಂ ಖರ್ಚು ನಾನು ಕೊಡ್ತೀನಿ ಅಂದೆ.. ಅವ್ರೆಲ್ಲಾ ಯಾವಾಗ್ಲೂ ಪಾರ್ಟಿ ಪಾರ್ಟಿ ಅಂತಿದ್ರಲ ಅಂತ 🙂 ಹೋದ ಐದು ಜನ ಎರಡು ಪ್ಲೇವರ್ಗಳ ಒಂದು ಸ್ಕೂಪ್ ಐಸ್ ಕ್ರೀಂ ಪಡೆದಿದ್ದಷ್ಟೇ.. ಬಿಲ್ಲು ನೋಡಿದ್ರೆ ಮುನ್ನೂರ ಮೂವತ್ತು ರೂಪಾಯಿ!! ಐದು ಸ್ಕೂಪ್ಗಳಿಗೆ ಅಷ್ಟೆಂದು ಕೇಳಿ ಕೈಯಲ್ಲಿದ್ದ ಐಸ್ ಕ್ರೀಂ ಕೈಯಲ್ಲೇ ಕರಗಿ ಹೋದಂತೆ ಆಯ್ತು 🙂 🙂 ಉದ್ದನೇ ಲೋಟದ ತುಂಬಾ, ಹೊಟ್ಟೆ ತುಂಬುವಷ್ಟು ಬರ್ತಿದ್ದ ೨೦-೨೫ ರ ಗಡ್ ಬಡ್ ನೆನೆದು, ಈ ಸ್ಕೂಪೈಸ್ ನೆನೆದು ಒಂದು ಕೈಯಲ್ಲಿರೋ ಐಸ್ ಕ್ರೀಮನ್ನೇ ಐದು, ಹತ್ತಾಗಿ ನೆನೆದು ತಿಂದದ್ದಾಯ್ತು 🙂
ಈಗ ಬೆಂಗ್ಳೂರಲ್ಲಿ ಆರ್ಬಿ, ಅದೂ ಇದು ಅಂತ ನೂರೆಂಟು ಪರಿ ಬಂದಿದೆಯಂತೆ. ಮೆಕ್ಡಿಯಷ್ಟೇ ಫೇಮಸ್ಸಾದ ಐಸ್ ಕ್ರೀಂ ತಾಣಗಳಿವೆಯಂತೆ. ಏನೂ ಗೊತ್ತಿಲ್ಲ, ವೇಸ್ಟು ಅಂತ ಇನ್ನೂ ಮಿಡ್ಲ್ ಸ್ಕೂಲಿಗೆ ಹೋಗದ ಮಾವನ ಮಗಳು ಅಣಕಿಸ್ತಾ ಇದ್ಲು ! 🙂 🙂 ಮಾಲಲ್ಲಿ ಬಕ್ರಾ ಆಗಿದ್ದು ನೆನಸ್ಕೊಂಡು ನಗು ಬಂದ್ರೂ ಹೌದಲ್ವಾ ಅನ್ನಿಸ್ತು.. ಬರೀತಾ ಹೋದ್ರೆ ಇನ್ನೂ ಸಾಕಷ್ಟಿದೆ. ಆದ್ರೆ ನಿಮ್ಮ ತಾಳ್ಮೆ ಐಸ್ ಕ್ರೀಂನಂತೆಯೇ ಕರಗಿ ಹೋಗೋ ಮೊದ್ಲು ನಿಲ್ಲಿಸ್ತೇನೆ. ಶುಭದಿನ 🙂
Icecream andre nenpagodu balya
Hage naviglu pepsi candy thinthivi adhe onthara kushi chenagidhe nimma lekana shubhavagali
ಇಸ್ ಕ್ಯಾಂಡಿ ,ಒಂದು ರೂಪಾಯಿ ಪೆಪ್ಸಿಯ ಬಾಲ್ಯವನ್ನ ನೆನಪಿಸಿ ಬಿಟ್ರಿ 🙂
ಚೆನ್ನಾಗಿದೆ ನಿಮ್ಮ ಇಸ್ ಕ್ರೀಮ್ ಪುರಾಣ 🙂
ಕೂಲ್ ಕೂಲ್ article!
ಹಲವು icecream ಗಳ ಹೆಸರನ್ನೇ ಕೇಳಿರಲಿಲ್ಲ.
ಚನ್ನಾಗಿದೆ article.
NICECREAM!
ನಾವು ಕೂಡ ಐಸ್ ಕ್ರೀಂ ಪ್ರಿಯರೇ. ಆಗೆಲ್ಲಾ ಮೇವಾಡ್ ಅಂತೇನೊ ಒಂದು ತರದ ಐಸ್ ಕ್ರೀಂ ಬರ್ತಿತ್ತು. ತುಂಬಾ ತಿಂತಿದ್ವಿ. 🙂 ಸೊಗಸಾದ ಲೇಖನ. ಧನ್ಯವಾದಗಳು.
ಚೆನ್ನಾಗಿದೆ ನಿಮ್ಮ ಇಸ್ ಕ್ರೀಮ್ ಪುರಾಣ
ಬಾಲ್ಯಕ್ಕೂ ಐಸಿಗೂ ಸಖತ್ ನಂಟಿದೆ ಐಸ್ ಕ್ರೀಂ ಗಿಂತಲೂ ಮುಂಚೆ ನೆನಪಾಗೋದು ಐಸ್ ಕ್ಯಾಂಡಿ..
ಖರೇ ಹೇಳಿದ್ರಿ ನೀವು
ಬರೆಯುವ ಶೈಲಿ ಚೆನ್ನಾಗಿದ್ದು ಓದಿಸುತ್ತಾ ಹೋಯಿತು.
best of luck in writing 4 u……………
Wonderful ! 🙂