ಐರ್ಲೆಂಡಿನಲ್ಲಿ ಹಾವುಗಳೇ ಇಲ್ಲವಂತೆ!: ಜೆ.ವಿ.ಕಾರ್ಲೊ.


ಇಂಗ್ಲಿಶಿನಲ್ಲಿ: ಫ್ರೆಡ್ರಿಕ್ ಫೊರ್ಸೈತ್
ಸಂಗ್ರಹಾನುವಾದ: ಜೆ.ವಿ.ಕಾರ್ಲೊ.

ಕೆಲಸ ಕೇಳಿಕೊಂಡು ಬಂದಿದ್ದ ಹೊಸ ಹುಡುಗನ ಕಡೆಗೆ ಮ್ಯಾಕ್ವೀನ್ ತಲೆ ಎತ್ತಿ ಕೊಂಚ ಹೊತ್ತು ನೋಡಿದ. ಅವನಿಗೆ ಸಮಧಾನವಾಗಲಿಲ್ಲ. ತನ್ನಷ್ಟಕ್ಕೆ ತಲೆಯಲ್ಲಾಡಿಸಿದ. ಈ ಮೊದಲು ಕೆಲಸ ಕೇಳಿಕೊಂಡು ಇಂತವರು ಯಾರೂ ಅವನ ಬಳಿ ಬಂದಿರಲಿಲ್ಲ. ಹಾಗಂತ ಅವನೇನು ನಿರ್ದಯಿಯಾಗಿರಲಿಲ್ಲ. ಹುಡುಗನಿಗೆ ಕೆಲಸ ಅಷ್ಟೊಂದು ಜರೂರಿಯಾಗಿದ್ದು ಎಲ್ಲರಂತೆ ಕೆಲಸ ಮಾಡುವಂತವನಾಗಿದ್ದರೆ ಅವನದೇನು ಅಭ್ಯಂತರವಿರಲಿಲ್ಲ.
“ಇದು ಲೆಕ್ಕ-ಪತ್ರ ಬರೆದಿಡುವ ಕುರ್ಚಿ ಕೆಲಸ ಅಲ್ಲ, ಮೈಮುರಿಯುವಂತ ಕೆಲಸ ಕಣಪ್ಪ. ಯೋಚಿಸು.” ಎಂದ ತನ್ನ ಬೆಲ್ಫಾಸ್ಟ್ ಮಾತಿನ ಶೈಲಿಯಲ್ಲಿ.
“ನನಗೆ ಗೊತ್ತು ಸರ್,” ಎಂದ ಹುಡುಗ.

“ನೋಡು, ಇದು ದಿನಗೂಲಿ ಕೆಲಸ. ಅವತ್ತಿನ ಕೆಲಸಕ್ಕೆ ಅವತ್ತೇ ಕೂಲಿ. ನಗದು ವ್ಯವಹಾರ. ಲೆಕ್ಕ-ಪತ್ರ, ಟ್ಯಾಕ್ಸು ಗೀಕ್ಸು, ಆ ತೆರಿಗೆ ಈ ತೆರಿಗೆ, ಆ ವಿಮೆ ಈ ವಿಮೆ ಅಂತ ಯಾವುದೂ ಇಲ್ಲ. ಅಂದರೆ ಏನೂಂತ ಗೊತ್ತು ತಾನೆ?”
ಅಂದರೆ, ಕೂಲಿ ಏನೋ ಜಾಸ್ತಿ ಸಿಗುತ್ತಿತ್ತು. ಆದರೆ, ಯಾವುದೇ ಸಮಾಜಿಕ ಭದ್ರತೆಗಳಿರಲಿಲ್ಲ. ಕೆಲಸದ ಬಳಿ ಏನಾದರೂ ಅನಾಹುತವಾದರೆ ಅವನ ಪ್ರಾಣಕ್ಕೆ ಅವನೇ ಹೊಣೆ.
ಹುಡುಗ ಎಲ್ಲದಕ್ಕೂ ಒಪ್ಪಿಗೆ ಅನ್ನುವಂತೆ ಗೋಣು ಆಡಿಸಿದ. ಮ್ಯಾಕ್ವೀನ್ ಕುತೂಹಲದಿಂದ ಅವನನ್ನೇ ನೋಡಿದ.

“ನೀನು ರಾಯಲ್ ವಿಕ್ಟೋರಿಯ ವೈಧ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿ ಎಂದೆ ಅಲ್ಲ? ನಿನಗೀಗ ಬೇಸಿಗೆ ರಜೆ?”
ಅವನು ಮತ್ತೊಮ್ಮೆ ಗೋಣು ಆಡಿಸಿದ. ಪಾಪ. ಅವನಿಗೆ ಸಿಗುತ್ತಿರುವ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ ಎಂದು ತೋರುತ್ತದೆ. ತನ್ನ ಬಂಗೋರ್ನಲ್ಲಿನ ಗೂಡಂಗಡಿಯಂತಿದ್ದ ಆಫೀಸಿನಲ್ಲಿ ಕುಳಿತುಕೊಂಡು ಮ್ಯಾಕ್ವೀನ್ ಯೋಚಿಸಿದ. ಅವನು ಇಲ್ಲಿಂದಲೇ ಹಳೆಯ ಕಟ್ಟಡಗಳನ್ನು ಒಡೆಯುವ ಗುತ್ತಿಗೆ ಕೆಲಸಗಳನ್ನು ವಹಿಸಿಕೊಂಡು ನಿರ್ವಯಿಸುತ್ತಿದ್ದ. ಒಂದು ಹಳೆಯ ಟ್ರಕ್ಕು, ಹಾರೆ, ಛಾಣ ಮತ್ತು ದೊಡ್ಡಗಾತ್ರದ ಸುತ್ತಿಗೆಗಳಷ್ಟೇ ಅವನ ಬಂಡವಾಳ. ಪ್ರೊಟೆಸ್ಟಂಟ್ ಕಾಯಕತತ್ವದ ಅನುಯಾಯಿಯಾದ ಅವನಲ್ಲಿ ತನ್ನ ಸ್ವಂತ ಬಲದಿಂದ ಜೀವನದಲ್ಲಿ ಈ ಮಟ್ಟಕ್ಕೇರಿದ್ದೇನೆ ಎಂಬ ಹೆಮ್ಮೆ ಧಾರಾಳವಾಗಿತ್ತು. ಆದ್ದರಿಂದ ಎದುರಿನವನು ಹೊರಗಿನಿಂದ ಹೇಗೆ ಕಂಡರೂ ಅವನನ್ನು ನಿಕೃಷ್ಠವಾಗಿ ಕಾಣುವಷ್ಟು ಕೆಟ್ಟವನಾಗಿರಲಿಲ್ಲ.

“ಸರಿ ಹಾಗಾದರೆ. ನೀನು ನಿನ್ನ ವಾಸ್ತವ್ಯವನ್ನು ಇಲ್ಲಿಗೆ, ಅಂದರೆ ಬಂಗೋರಿಗೆ ಬದಲಾಯಿಸುವುದು ಒಳ್ಳೇದು. ನಿನಗೆ ಬೆಲ್ಫಾಸ್ಟ್‍ನಿಂದ ದಿನಾಲೂ ಓಡಾಡುವುದು ಅಸಾಧ್ಯ. ಬೆಳಿಗ್ಗೆ ಏಳು ಗಂಟೆಯಿಂದ ಸೂರ್ಯ ಮುಳುಗುವವರೆಗೆ ಕೆಲಸ. ಗಂಟೆ ಲೆಕ್ಕದಲ್ಲಿ ಕೂಲಿ. ಕಷ್ಟದ ಕೆಲಸ. ಆದರೆ ದುಡ್ಡೂ ಹಾಗೇ ಇದೆ. ಈ ಬಗ್ಗೆ ಅಪ್ಪಿ ತಪ್ಪಿ ಸರ್ಕಾರಿ ಅಧಿಕಾರಿಗಳ ಬಳಿ ಏನಾದ್ರೂ ಬಾಯಿ ಬಿಟ್ಟೆಯೋ ನಿನ್ನ ಕೆಲಸ ಡಮಾರ್ ಅಂತ ತಿಳಿದುಕೊ!.. ಓಕೆ?”
“ಆಯ್ತು ಸರ್. ನಾನು ಯಾವತ್ತಿನಿಂದ ಶುರು ಮಾಡಬೇಕು ಹೇಳಿ.”
“ಕೆಲಸಗಾರರನ್ನು ಹತ್ತಿಸಿಕೊಂಡು ನಮ್ಮ ಟ್ರಕ್ಕು ಬೆಳಿಗ್ಗೆ 6.30 ಕ್ಕೆ ಬಂಗೋರ್ ರೈಲ್ವೇ ಯಾರ್ಡಿನಿಂದ ಹೊರಡುತ್ತದೆ. ನೀನು ಆ ಹೊತ್ತಿಗೆ ಸೋಮವಾರ ಬೆಳಿಗ್ಗೆ ತಯಾರಾಗಿರು. ನನ್ನ ಮೇಸ್ತ್ರಿ ಧಡಿಯ ಬಿಲ್ಲ್ ಕ್ಯಾಮರೂನ್‍ಗೆ ತಿಳಿಸಿರುತ್ತೇನೆ. ನಿನ್ನ ಹೆಸರು ಏನಂದೆ?” ಪೆನ್ನು ಎತ್ತಿಕೊಳ್ಳುತ್ತಾ ಕೇಳಿದ ಮ್ಯಾಕ್ವೀನ್.
“ಹರ್ ಕಿಶನ್ ರಾಮ್ ಲಾಲ್.” ವಿದ್ಯಾರ್ಥಿ ಹೇಳಿದ.

ಮ್ಯಾಕ್ವೀನ್ ಬಹಳ ಹೊತ್ತು ಅವನನ್ನೇ ನೋಡುತ್ತಾ ಕುಳಿತುಕೊಂಡ. ಅವನ ತುಟಿಗಳ ಮೇಲೊಂದು ಮಂದಹಾಸವಿತ್ತು.
“ಅಷ್ಟುದ್ದ ಬೇಡ. ನಿನಗೆ ರ್ಯಾಮ್ ಅಂತ ಬರ್ಕೋತಿನಿ.” ಎಂದ.
ಮ್ಯಾಕ್ವಿನನ ಆಫೀಸಿನಿಂದ ರಾಮ್ ಹೊರಬಂದ. ಉತ್ತರ ಐರ್ಲೆಂಡಿನ ಬಂಗೋರ್‍ನಲ್ಲಿ ಹಿತವಾದ ಬಿಸಿಲು ಹರಡಿತ್ತು.
ಶನಿವಾರ ಸಂಜೆ ಅವನಿಗೆ ರೈಲ್ವೇ ಸ್ಟೇಶನಿಗೆ ಹತ್ತಿರದಲ್ಲಿ ಒಂದು ಕೆಳ ದರ್ಜೆಯ ವಸತಿ ಗೃಹದಲ್ಲಿ ರೂಮು ಸಿಕ್ಕಿತು. ಅದರ ಬಗ್ಗೆ ಅವನು ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ. ಅದು ಮ್ಯಾಕ್ವೀನನ ಟ್ರಕ್ಕು ಜನರನ್ನು ಕೆಲಸಕ್ಕೆ ಕರೆದೊಯ್ಯುವ ತಾಣಕ್ಕೆ ಹತ್ತಿರವಾಗಿರುವುದು ಅವನಿಗೆ ನೆಮ್ಮದಿ ತಂದಿತು. ಅವನ ರೂಮಿನ ಕೊಳಕು ಕಿಟಕಿಯಿಂದ ಬಂಗೋರಿನ ರೈಲು ನಿಲ್ದಾಣ ನಿಚ್ಚಳವಾಗಿ ಕಾಣಿಸುತ್ತಿತ್ತು.

ಅವನಿಗೆ ಉಳಿದುಕೊಳ್ಳಲು ಒಂದು ಜಾಗ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಅವನು ನೋಡಿದ ಉಪಹಾರದ ಜೊತೆಗೆ ವಸತಿ ರೂಮುಗಳೆಲ್ಲಾ ಭರ್ತಿಯಾಗಿರುತ್ತಿದ್ದವು. ಬೇಸಿಗೆಯಲ್ಲಿ ಕೆಲಸ ಹುಡುಕಿಕೊಂಡು ಎಲ್ಲೆಡೆಯಿಂದ ಬಹಳಷ್ಟು ಜನರು ಬಂಗೋರಿಗೆ ಬರುತ್ತಿದ್ದರು. ಅವನ ಅದೃಷ್ಟ. ಅವನು ಉಳಿದುಕೊಂಡಿದ್ದ ವಸತಿ ಗೃಹದಲ್ಲಿ ಮತ್ತೂ ಖಾಲಿ ರೂಮುಗಳಿದ್ದವು.
ಭಾನುವಾರದಂದು ಬೆಲ್ಫಾಸ್ಟ್‍ನಿಂದ ಅವನಿಗೆ ತನ್ನ ಸಾಮಾನುಗಳನ್ನು ಹಾಕಿಕೊಂಡು ಬರುವುದಕ್ಕೇ ಸರಿಯಾಯಿತು. ಅದರಲ್ಲಿ ಅವನ ವೈಧ್ಯಕೀಯ ಪುಸ್ತಕಗಳದ್ದೇ ದೊಡ್ಡ ಪಾಲಾಗಿತ್ತು.
ಮಂಚದ ಮೇಲೆ ಬಿದ್ದುಕೊಂಡಿದ್ದ ಅವನ ಕಣ್ಣ ಮುಂದೆ ತನ್ನ ಹುಟ್ಟೂರಾದ ಪಂಜಾಬಿನ ಕಂದು ನೆಲದ ಗುಡ್ಡಗಳು ಮೂಡತೊಡಗಿದವು. ಇನ್ನೊಂದು ವರ್ಷದಲ್ಲಿ ಅವನಿಗೆ ವೈಧ್ಯಕೀಯ ಪದವಿ ಲಭಿಸುತಿತ್ತು. ಮತ್ತೊಂದು ವರ್ಷ ಯಾವುದಾದರೂ ಆಸ್ಪತ್ರೆಯಲ್ಲಿ ಸಹಾಯಕನಾಗಿ ಕೆಲಸದ ಮಾಡಿದ ಮೇಲೆ ಅವನು ತನ್ನೂರಿನಲ್ಲಿ ಪ್ರ್ಯಾಕ್ಟಿಸ್ ಆರಂಭಿಸಬಹುದಿತ್ತು. ಈ ವರ್ಷ ಬೇಸಿಗೆ ರಜೆಯಲ್ಲಿ ದುಡಿದು ಕೊಂಚ ದುಡ್ಡು ಮಾಡಿಕೊಂಡರೆ ಅಂತಿಮ ವರ್ಷದ ಖರ್ಚು ಹೇಗೂ ನಿಭಾಯಿಸಬಹುದೆಂದು ಅವನ ಅಂದಾಜಾಗಿತ್ತು. ಮುಂದಿನ ವರ್ಷ ಹೇಗೂ ಸ್ಟೈಪಂಡ್ ಸಿಗುತ್ತದೆ.

ಸೋಮವಾರ ಬೆಳಿಗ್ಗೆ ಅವನು ಐದುಮುಕ್ಕಾಲಿಗೇ ಅಲರಾಂ ಇಟ್ಟಿದ್ದ. ಆದಷ್ಟು ಬೇಗ ದಿನ ನಿತ್ಯದ ಕರ್ಮಗಳನ್ನು ಮುಗಿಸಿ ಆರೂವರೆಯೊಳಗೆ ಅವನು ಸ್ಟೇಶನ್‍ಯಾರ್ಡಿನಲ್ಲಿದ್ದ. ಅಷ್ಟೊತ್ತಿಗೇ ತೆರೆದಿದ್ದ ಹೋಟೆಲೊಂದರಲ್ಲಿ ಎರಡು ಕಪ್ ಬ್ಮ್ಯಾಕ್ ಟೀ ಗುಟುಕರಿಸಿದ. ಅದಷ್ಟೇ ಅವನ ಉಪಹಾರವಾಗಿತ್ತು. ಅಷ್ಟರಲ್ಲಿ ಒಂದು ಲಟಾರ ಟ್ರಕ್ಕು ಯಾರ್ಡಿನೊಳಗೆ ಬಂದು ನಿಂತಿತ್ತು. ಒಂದು ಡಜನಷ್ಟು ಕೆಲಸಗಾರರು ಅದರ ಬಳಿ ಜಮಾಯಿಸಿದರು. ಅವನಿಗೆ ತಾನಾಗಿಯೇ ಹೋಗಿ ಪರಿಚಯಿಸಿಕೊಳ್ಳಲೋ ಇಲ್ಲ ಕಾಯಲೋ ಎಂಬ ಸಂದಿಗ್ಧತೆ ಎದುರಾಯಿತು. ಕೊನೆಗೆ ಕಾಯುವುದೇ ಲೇಸೆಂದು ಅವನು ನಿಶ್ಚಯಿಸಿದ.

ಅಷ್ಟರಲ್ಲಿ ಮೇಸ್ತ್ರಿ ತನ್ನ ಕಾರಿನಲ್ಲೇ ಬಂದು ರಸ್ತೆಯ ಬಳಿ ನಿಲ್ಲಿಸಿ ಟ್ರಕ್ಕಿನ ಕಡೆಗೆ ಹೆಜ್ಜೆ ಹಾಕಿದ. ಅವನ ಕೈಯಲ್ಲಿ ಮ್ಯಾಕ್ವೀನನ ಪಟ್ಟಿ ಇತ್ತು. ಅಲ್ಲಿದ್ದವರ ಮೇಲೊಮ್ಮೆ ಕಣ್ಣು ಹಾಯಿಸಿದ. ಅವರೆಲ್ಲ ಅವನಿಗೆ ಪರಿಚಿತರೇ. ದೂರದಲ್ಲಿ ನಿಂತಿದ್ದ ರಾಮ್ ಅವನೆಡೆಗೆ ನಡೆದು ಬಂದ. ಮೇಸ್ತ್ರಿ ಅವನನ್ನೇ ದುರುಗುಟ್ಟಿ ನೋಡಿದ.
“ಮ್ಯಾಕ್ವೀನನ ಪಟ್ಟಿಯಲ್ಲಿ ಹೊಸದಾಗಿ ನಮೂದಿಸಿರುವ ಕರಿಯ ನೀನೇ ಏನಯ್ಯ?” ಎಂದು ತುಚ್ಛವಾಗಿ ಕೇಳಿದ.
ಗರಬಡಿದವನಂತೆ ರಾಮ್ ಲಾಲ್ ಹಾಗೇ ನಿಂತು ಕೊಂಡ. ನಂತರ ಸಾವರಿಸಿಕೊಂಡು, ‘ನಾನೇ. ಹರ್‍ಕಿಶನ್ ರಾಮ್ ಲಾಲ್.” ಎಂದ.

ಮೇಸ್ತ್ರಿ ಬಿಲ್ಲಿ ಕ್ಯಾಮರೂನ್‍ನಿಗೆ ‘ಧಡಿಯ ಬಿಲ್ಲಿ’ ಅಂತ ಹೆಸರು ಹೇಗೆ ಬಂತು ಅಂತ ಕೇಳುವ ಅಗತ್ಯವೇ ಇರಲಿಲ್ಲ. ಬರಿಗಾಲಲ್ಲೇ ಆರು ಕಾಲು ಅಡಿ ಎತ್ತರವಿದ್ದು ಮರದ ಕಾಂಡಗಳಂತ ತೋಳುಗಳ ಅಜಾನುಬಾಹು. ಸಾಲದೆಂಬಂತೆ ದಪ್ಪನೆಯ ಸ್ಟೀಲ್ ಮೊಳೆಗಳ ಬೂಟುಗಳನ್ನೂ ಧರಿಸಿದ್ದ. ಗಡಿಗೆ ಗಾತ್ರದ ಮುಖದ ತಲೆಯ ಮೇಲೆ ದಟ್ಟ ಬೂದು ಬಣ್ಣದ ಕೂದಲ ರಾಶಿ. ಪೀಚಲು ಮೈಕಟ್ಟಿನ ರಾಮ್ ಲಾಲ್‍ನನ್ನು ನೋಡಿ ಅವನು ಕಣ್ಣುಗಳು ಹೇಸಿಗೆಯನ್ನು ಕಂಡಂತೆ ನೆರಿಗೆಗಟ್ಟಿ ಕಿರಿದಾದವು. ಅವನು ಖುಷಿಯಾದಂತೆ ಕಾಣಿಸಲಿಲ್ಲ. ಅವನು ತುಪ್ಪನೆ ನೆಲದ ಮೇಲೆ ಉಗಿದ.
“ಸರಿ. ಟ್ರಕ್ಕಿಗೆ ಹತ್ತು.” ಎಂದ ತಿರಸ್ಕಾರದಿಂದ.

ಟ್ರಕ್ಕಿನ ಎರಡು ಬದಿಯಲ್ಲೂ ಮರದ ಬೆಂಚುಗಳನ್ನು ಜೋಡಿಸಿದ್ದರು. ರಾಮ್ ಲಾಲನಿಗೆ ಎಲ್ಲರಿಗಿಂತ ಕೊನೆಯಲ್ಲಿ ಜಾಗ ಸಿಕ್ಕಿತು. ಅವನ ಪಕ್ಕದಲ್ಲಿ ಕುಳಿತವನು ಒಬ್ಬ ನೀಲಿ ಕಣ್ಣಿನ ಗಟ್ಟಿ ಮುಟ್ಟಾಗಿದ್ದ ಒಬ್ಬ ಸಣಕಲು ವ್ಯಕ್ತಿ. ಅವನ ಹೆಸರು ಟಾಮಿ ಬನ್ರ್ಸ್ ಎಂದು ರಾಮ್ ಲಾಲ್ ಕೇಳಿ ತಿಳಿದುಕೊಂಡ. ಅವನ ಮುಖ ಭಾವ ಸ್ನೇಹಪರನಾಗಿ ಕಾಣಿಸುತ್ತಿತ್ತು.
“ನೀನು ಎಲ್ಲಿಂದ?” ಅವನು ಕುತೂಹಲದಿಂದ ರಾಮ್ ಲಾಲನಿಗೆ ಕೇಳಿದ.
“ಇಂಡಿಯಾದ ಪಂಜಾಬ್‍ನಿಂದ.”
“ಇಂಡಿಯಾದ ಎಲ್ಲಿಂದ ಅಂದೆ?”
“ಪಂಜಾಬ್. ಅದು ಇಂಡಿಯಾದ ಒಂದು ರಾಜ್ಯ.”
ಅವನು ಕೆಲ ಹೊತ್ತು ಸುಮ್ಮನಿದ್ದು, “ನೀನು ಕ್ಯಾಥೊಲಿಕೋ ಪ್ರೊಟೆಸ್ಟಂಟ್ ಕ್ರಿಶ್ಚಿಯನ್?”
“ಎರಡೂ ಅಲ್ಲ. ನಾನೊಬ್ಬ ಹಿಂದು.”
“ಅಂದರೆ ನೀನು ಕ್ರಿಶ್ಚಿಯನ್ ಅಲ್ಲ?” ಅವನು ಆಶ್ಚರ್ಯದಿಂದೆಂಬಂತೆ ಕೇಳಿದ.

“ಇಲ್ಲ. ನನ್ನದು ಹಿಂದೂ ಧರ್ಮ.”
“ಹೇ, ಇವನು ಕ್ರಿಶ್ಚಿಯನ್ ಅಲ್ಲ ಅಂತೆ ಕಣ್ರೊ!” ಟಾಮಿ ಉಳಿದವರಿಗೆ ಹೇಳಿದ. ಅವನ ದನಿಯಲ್ಲಿ ಸಿಟ್ಟಿಗಿಂತ ಏನೋ ವಿಚಿತ್ರವಾದುದು ಹೊಸತು ಕಂಡ ಬಾಲಕನ ಕುತೂಹಲ ಕಾಣುತ್ತಿತ್ತು.
ಮುಂಭಾಗದಲ್ಲಿ ಕುಳಿತ್ತಿದ್ದ ಧಡಿಯ ಬಿಲ್ಲ್ ಹಿಂದಕ್ಕೆ ತಿರುಗಿ,
“ಎಲ್ಲೆಲ್ಲಿಂದ ಬರ್ತಾವೋ ಈ ವಿಧರ್ಮಿ ಬಡ್ಡಿ ಮಕ್ಕಳು!.” ಎಂದ.
ರಾಮ್ ಲಾಲನ ತುಟಿಗಳ ಮೇಲಿನಿಂದ ನಗು ಕಮರಿ ಹೋಯಿತು. ಅವನು ಯಾರನ್ನೂ ನೋಡದೆ ಟ್ರಕ್ಕಿನ ಛಾವಣಿಯನ್ನು ನೋಡುತ್ತಾ ಕುಳಿತುಕೊಂಡ. ಟ್ರಕ್ಕು ಬಂಗೋರ್‍ನಿಂದ ದಕ್ಷಿಣಕ್ಕೆ ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಬಡಾವಣೆಗಳ ಕಡೆಗೆ ಓಡುತ್ತಿತ್ತು. ಸ್ವಲ್ಪ ಸಮಯದ ನಂತರ ಟಾಮಿ ರಾಮ್ ಲಾಲನನ್ನು ಇತರರಿಗೆ ಪರಚಯಿಸಲು ಮಂದಾದ. ಕ್ರೇಗ್, ಮನ್ರೊ, ಪ್ಯಾಟರ್ಸನ್, ಬೋಯ್ಡ್, ಬ್ರೌನ್ಸ್.. ಇತ್ಯಾದಿ. ಇವೆಲ್ಲಾ ಸ್ಕಾಟಿಶ್ ಮೂಲದ ಹೆಸರುಗಳು ಎಂದು ಅರ್ಥವಾಗುವಷ್ಟು ವರ್ಷಗಳಿಂದ ರಾಮ್ ಲಾಲ್ ಬೆಲ್ಫಾಸ್ಟಿನಲ್ಲಿ ನೆಲೆಸಿದ್ದ. ಇವರೆಲ್ಲಾ ಕಟ್ಟಾ ಪ್ರಿಸ್ಬೇಟೆರಿಯನ್ ಪ್ರೊಟೆಸ್ಟಂಟ್ ಪಂಥದವರು. ಅವನೆಡೆಗೆ ಸ್ನೇಹಪೂರಿತ ಮಂದಹಾಸ ಬೀರಿದರು. ಅವರೆಲ್ಲಾ ಅವನಿಗೆ ಒಳ್ಳೆಯವರಾಗಿಯೇ ಕಾಣತೊಡಗಿದರು.
ಅವರಲ್ಲಿ ಸ್ವಲ್ಪ ವಯಸ್ಸಾದವನಂತೆ ಕಾಣಿಸುತ್ತಿದ್ದ ಪ್ಯಾಟರ್ಸನ್, “ಲಂಚ್ ಬಾಕ್ಸ್ ತರಲಿಲ್ಲವೇನೋ ಮಗ?” ಎಂದ.

“ಇಲ್ಲ. ಬೆಳಿಗ್ಗೆ ಅಷ್ಟು ಬೇಗ ಮನೆಯೊಡತಿಯನ್ನು ಕೇಳುವುದು ಸರಿಯಲ್ಲವೆಂದು ಸುಮ್ಮನೆ ಬಂದೆ.” ಎಂದ.
“ನಮ್ಮ ಕೆಲಸದಲ್ಲಿ ಉಪಹಾರ ಮತ್ತು ಲಂಚ್ ತುಂಬಾ ಅಗತ್ಯ ಕಣಾ ಮಗ. ಟೀ ಅಂತೂ ನಾವು ಇಲ್ಲೇ ಕಾಯಿಸ್ತಾ ಇರ್ತೀವಿ.”
“ನಾಳೆ ಖಂಡಿತ ಮರೆಯೊಲ್ಲ.”
ಟಾಮಿ ಅವನ ರಬ್ಬರ್ ಶೂಸುಗಳನ್ನು ನೋಡಿ, “ನೀನು ಈ ಮೊದಲು ಇಂತ ಕೆಲಸ ಮಾಡಿಲ್ಲವೆಂದು ಕಾಣಿಸುತ್ತದೆ.” ಎಂದ.
“ಇಲ್ಲ” ಎಂದ ರಾಮ್ ಲಾಲ್.
“ನಿನಗೆ ಗಟ್ಟಿ ಮುಟ್ಟಾದ ಶೂಸುಗಳು ಬೇಕಾಗುತ್ತದೆ ಕಣಪ್ಪ. ಇದು ನಡೆಯೊಲ್ಲ.” ಅದನ್ನು ಅಂದೇ ರಾತ್ರಿ ಖರೀದಿಸುವುದಾಗಿ ಹೇಳಿದ ರಾಮ್ ಲಾಲ್.
“ನೀನು ಇಲ್ಲಿವರೆಗೆ ಏನು ಮಾಡ್ತಾ ಇದ್ದೆ?” ಟಾಮಿ ಕೇಳಿದ.
“ನಾನು ಬೆಲ್‍ಫಾಸ್ಟಿನ ರಾಯಲ್ ವಿಕ್ಟೋರಿಯ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈಧ್ಯಕೀಯ ಓದುತ್ತಿದ್ದೇನೆ.”

“ಒಹ್! ಹಾಗಾದ್ರೆ ನೀನು ಹೆಚ್ಚು ಕಮ್ಮಿ ಡಾಕ್ಟರನೇ ಅನ್ನಬಹುದು!” ಟಾಮಿ ಖುಶಿಯಿಂದ ಹೇಳಿದ. “ಏಯ್, ಬಿಲ್ಲಿ, ಇನ್ನು ಮುಂದೆ ನಮ್ಮಲ್ಲಿ ಯಾರಿಗಾದ್ರೂ ಏಟಾದರೆ ಹೆದರಬೇಕಾಗಿಲ್ಲ. ರ್ಯಾಮ್ ಇದ್ದಾನೆ.”
“ಆ ಕರಿಯ ನನ್ನನ್ನು ಮುಟ್ಟೋದೇ ಬೇಡ..” ಬಿಲ್ಲಿ ಗೊಣಗಿದ.
ಅವನ ಪ್ರತಿಕ್ತಿಯೆ ಎಲ್ಲರ ಉತ್ಸಾಹಕ್ಕೆ ತಣ್ಣೀರೆರಚಿತು. ಕೆಲಸದ ಜಾಗಕ್ಕೆ ಬರುವವರೆಗೆ ಮುಂದೆ ಯಾರೂ ಮಾತನಾಡಲಿಲ್ಲ. ಅವರು ಕೆಡವಲಿಕ್ಕೆ ಬಂದಿದ್ದ ಒಂದು ಹಳೆಯ ಕಟ್ಟಡದ ಬಳಿ ಟ್ರಕ್ಕು ನಿಂತಿತು. ಅದೊಂದು ಪಾಳು ಬಿದ್ದಿದ್ದ ದೊಡ್ಡ ವಿಸ್ಕಿ ಡಿಸ್ಟಿಲರಿಯಾಗಿತ್ತು. ಅದು ಕೋಂಬರ್ ನದಿಯ ದಡದಲ್ಲಿತ್ತು. ಒಂದು ಕಾಲದಲ್ಲಿ ಶ್ರೇಷ್ಟ ಐರಿಶ್ ವಿಸ್ಕಿ ತಯಾರಿಸುತ್ತಿದ್ದ ಡಿಸ್ಟಿಲರಿ ಈಗ ಸ್ಥಳೀಯ ಮಕ್ಕಳ ಆಟದ ತಾಣವಾಗಿತ್ತು. ಯಾವುದೋ ಮಗು ಅಟ್ಟದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ತರುವಾಯ ಮುನ್ಸಿಪಾಲಿಟಿ ಅದನ್ನು ಕೆಡವಿ ಹಾಕಲು ಮಾಲಿಕರಿಗೆ ನಿರ್ದೇಶಿಸಿತ್ತು. ಹೀಗೆ, ಕಟ್ಟಡ ಕೆಡವಿ ಹಾಕುವ ಗುತ್ತಿಗೆ ಮ್ಯಾಕ್ವೀನನಿಗೆ ಸಿಕ್ಕಿತ್ತು, ಕಟ್ಟಡದ ಹಳೆ ಇಟ್ಟಿಗೆಗಳಿಗೆ ಮತ್ತು ದೊಡ್ಡ ದೊಡ್ಡ ಮರದ ತೊಲೆಗಳಿಗೆ ಅವನು ಗಿರಾಕಿಗಳನ್ನು ಹುಡುಕಿದ್ದ.
ಅವರನ್ನೆಲ್ಲಾ ಇಳಿಸಿ ಟ್ರಕ್ಕು ಬಂಗೋರಿಗೆ ವಾಪಸ್ಸು ಹೋಯಿತು.

“ಸರಿ ಹುಡುಗ್ರಾ! ಏನು ಮಾಡುವುದೆಂದು ನಿಮಗೆ ಗೊತ್ತು. ಮೊದಲು ಮೇಲತ್ತಿ ಹೆಂಚುಗಳನ್ನು ಕೀಳೊಣ.” ಎಂದ ಬಿಲ್ಲಿ.
ಅವರೆಲ್ಲಾ ತಂತಮ್ಮ ಹತ್ಯಾರಗಳೊಂದಿಗೆ ಗುಂಪುಗೂಡಿ ನಿಂತಿದ್ದರು. ಏಳು ಪೌಂಡು ಸುತ್ತಿಗೆಗಳು, ಆರಡಿ ಉದ್ದದ ಹಾರೆಗಳು, ಮೊಳೆ ಕೀಳುವ ಸಲಾಕೆಗಳು, ಗರಗಸಗಳು, ಹಗ್ಗಗಳು, ಸುರಕ್ಷಾ ಬೆಲ್ಟುಗಳು ಇತ್ಯಾದಿ. ನಾಲ್ಕು ಮಹಡಿಗಳ ಆ ಕಟ್ಟಡÀವನ್ನೊಮ್ಮೆ ನೋಡಿ ರಾಮ್ ಲಾಲ್ ಉಗುಳು ನುಂಗಿದ. ಒಬ್ಬನು ಕಟ್ಟಡದ ಮೆಟ್ಟಿಲುಗಳನ್ನು ಹತ್ತಿ ಒಂದು ಬಾಗಿಲನ್ನು ಮುರಿದು ಸೌದೆಗಳನ್ನಾಗಿಸಿ ಬೆಂಕಿ ಹೊತ್ತಿಸಿದ. ಮತ್ತೊಬ್ಬ ಪಕ್ಕದಲ್ಲೇ ಹರಿಯುತ್ತಿದ್ದ ಕೋಂಬರ್ ನದಿಯಿಂದ ಒಂದು ಕ್ಯಾನ್ ನೀರು ತಂದು ತಾವು ತಂದಿದ್ದ ಪಾತ್ರೆಯಲ್ಲಿ ಟೀ ಗೆ ನೀರು ಕಾಯಿಸತೊಡಗಿದ. ರಾಮ್ ಲಾಲನನ್ನು ಬಿಟ್ಟರೆ ಅವರೆಲ್ಲರ ಬಳಿ ಪಿಂಗಾಣಿ ಮಗ್ ಇತ್ತು. ಟಾಮಿ ಬನ್ರ್ಸ್ ಟೀ ಕುಡಿದು ಮಗ್ಗನ್ನು ರಾಮ್ ಲಾಲನಿಗೆ ಕೊಟ್ಟ.

“ಇಂಡಿಯಾದಲ್ಲಿ ಟೀ ಕುಡಿತಾರ?” ಅವನು ಕೇಳಿದ. ಆ ತೆಳ್ಳನೇ ಟೀ ಕುಡಿದು ರಾಮ್ ಲಾಲನಿಗೆ ವಾಕರಿಕೆ ಬರುವಂತಾಯಿತು.
ಬೆಳಗಿನ ಹತ್ತು ಗಂಟೆವರೆಗೆ ಅವರಿಗೆ ಹೆಂಚುಗಳನ್ನು ಕೀಳುವುದೇ ಆಯಿತು. ಅವರಿಗೆ ಹೆಂಚುಗಳನ್ನು ಇಳಿಸಲಿಕ್ಕೆ ಹೇಳಿರಲಿಲ್ಲವಾದ್ದರಿಂದ ಅವರು ಕಿತ್ತು ಕಿತ್ತು ಕೆಳಗೆ ಎಸೆಯತೊಡಗಿದರು. ಇಳಿಜಾರಿನ ಮಾಡಿನಲ್ಲಿ ನಿಯಂತ್ರಣ ಕಳೆದು ಜಾರಿ ಬೀಳದಂತೆ ಅವರೆಲ್ಲಾ ಒಬ್ಬರಿಗೊಬ್ಬರನ್ನು ಸೇರಿಸಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡಿದ್ದರು. ಈಗ ಮತ್ತೊಮ್ಮೆ ಟೀ ಸಮಾರಾಧನೆಯಾಯಿತು. ಎರಡು ಗಂಟೆಗೆ ಅವರೆಲ್ಲಾ ಊಟಕ್ಕೆಂದು ಕೆಲಸ ನಿಲ್ಲಿಸಿ ಚೀಲದಿಂದ ದಪ್ಪ ದಪ್ಪನೆಯ ಸ್ಯಾಂಡ್‍ವಿಚ್‍ಗಳನ್ನು ಹೊರತೆಗೆದರು. ರಾಮ್ ಲಾಲ್ ತನ್ನ ಕೈಗಳನ್ನೊಮ್ಮೆ ನೋಡಿದ. ಅವು ಬಹಳ ಕಡೆ ಗೀರಿಕೊಂಡು ಉರಿಯುತ್ತಿದ್ದರೆ ಕೆಲವೆಡೆ ತೆಳ್ಳಗೆ ರಕ್ತ ಒಸರಿ ಹೆಪ್ಪುಗಟ್ಟಿತ್ತು ಅವನ ಮಾಂಸಖಂಡಗಳೆಲ್ಲ ನೋಯುತ್ತಿದ್ದು ಜೋರಾಗಿ ಹಸಿವೂ ಆಗಿತ್ತು. ಇವತ್ತು ಜರೂರಾಗಿ ಕೈಗೊಳ್ಳುವ ಶಾಪಿಂಗ್ ಲಿಸ್ಟಿಗೆ ಕೈಗವಸೂ ಸೇರಿತು.

“ಏನಪ್ಪ ರ್ಯಾಮ್, ಹಸಿವಾಗ್ತಿಲ್ಲವೇ? ನನಗೆ ಸಾಕಾಯಿತು. ತಗೋ ಇಲ್ಲೊಂದು ಸ್ಯಾಂಡ್‍ವಿಚ್ ಇದೆ. ತಿನ್ನು” ಎಂದ ಟಾಮಿ.
“ಏಯ್ ಟಾಮಿ! ಏನ್ ಮಾಡ್ತಿದ್ದೀಯ ಅನ್ನೋದು ಅರಿವಿದೆಯಾ ನಿನಗೆ?” ಅವರಿಂದ ಅಣತಿ ದೂರದಲ್ಲಿ ಕುಳಿತುಕೊಂಡು ಮೆಲ್ಲುತ್ತಿದ್ದ ಧಡಿಯ ಬಿಲ್ಲಿ ಕೇಳಿದ.
“ಏನೀಗ? ಹುಡುಗನಿಗೆ ಒಂಚೂರು ಸ್ಯಾಂಡ್‍ವಿಚ್ ಕೊಟ್ಟೆ. ಅಷ್ಟೇ.”
“ನೀನು ನಿಂದು ನೋಡ್ಕೊಳೋ ಮುಠ್ಠಾಳ. ಕರಿಯ ಬೇಕೆಂದರೆ ಅವನದೇ ಸ್ಯಾಂಡ್‍ವಿಚ್ ತರ್ತಾನೆ.”
ಯಾರೂ ಏನೂ ಮಾತನಾಡಲಿಲ್ಲ. ತಲೆ ತಗ್ಗಸಿ ತಿನ್ನುವುದರಲ್ಲೇ ಮಗ್ನರಾಗಿದ್ದರು. ಧಡಿಯ ಬಿಲ್ಲನಿಗೆ ಬಾಯಿ ಕೊಡುವ ಧೈರ್ಯ ಅಲ್ಲಿ ಯಾರಿಗೂ ಇರಲಿಲ್ಲ.

“ಥ್ಯಾಂಕ್ಸ್, ಟಾಮಿ. ನನಗೆ ನಿಜವಾಗಲೂ ಹಸಿವಿಲ್ಲ.” ಎಂದ ರಾಮ್ ಲಾಲ್ ಎದ್ದು ನದಿಯ ಬಳಿಗೆ ಹೋಗಿ ಉರಿಯುತ್ತಿದ್ದ ತನ್ನ ಕೈಗಳನ್ನು ನೀರಿನಲ್ಲಿ ಅದ್ದಿದ. ಸಂಜೆ ಟ್ರಕ್ಕು ಮರಳಿ ಬಂದಾಗ ಅವರೆಲ್ಲ ಛಾವಣಿಯ ಅರ್ಧ ಭಾಗದ ಹೆಂಚುಗಳನ್ನು ಕಿತ್ತು ಎಸೆದಿದ್ದರು.
ಆ ವಾರವೆಲ್ಲಾ ಹೆಂಚು ಕೀಳುವುದು, ತೀರುಗಳನ್ನು ಇಳಿಸುವುದೇ ಕೆಲಸವಾಯಿತು. ಒಂದು ಕಾಲದಲ್ಲಿ ಗರ್ವದಿಂದ ತಲೆ ಎತ್ತಿ ಮೆರೆಯುತ್ತಿದ್ದ ಡಿಸ್ಟಿಲರಿ ಕಟ್ಟಡ ಹಲ್ಲು ಕಳೆದುಕೊಂಡ ಬೊಚ್ಚು ಬಾಯಿ ಮುದುಕನಂತೆ ಕಾಣಿಸುತ್ತಿತ್ತು. ಕಿಟಕಿ ಬಾಗಿಲುಗಳನ್ನು ಕಿತ್ತ ಗೋಡೆಗಳು ಕಣ್ಣು ಕಿತ್ತಿರುವ ಮುಖದಂತೆ ಅಸಹ್ಯವಾಗಿ ಕಾಣುತ್ತಿದ್ದವು. ಈ ಥರದ ದೈಹಿಕ ಶ್ರಮ ಬೇಡುವ ಕೆಲಸ ರಾಮ್ ಲಾಲನಿಗೆ ತೀರ ಹೊಸತು. ಅವನ ಮೈಯೆಲ್ಲಾ ನೋಯುತ್ತಿತ್ತು. ಕೈಗಳಲ್ಲೆಲ್ಲಾ ಬೊಕ್ಕೆಗಳೆದ್ದಿದ್ದವು. ಆದರೆ ಈ ಕೆಲಸ ಅವನಿಗೆ ಅನಿವಾರ್ಯವಾಗಿತ್ತು.

ಮಾರನೆಯ ದಿನವೇ ಅವನು ಒಂದು ಟಿಫನ್ ಬಾಕ್ಸ್, ಗಟ್ಟಿಮುಟ್ಟಾದ ಶೂಗಳು ಮತ್ತು ಕೈಗವಸುಗಳನ್ನು ಕೊಂಡಿದ್ದ. ಕೈಗವಸುಗಳು ಅವರ ಯಾರ ಬಳಿಯೂ ಇರಲಿಲ್ಲ. ಈ ಕೆಲಸಕ್ಕೆ ಒಗ್ಗಿ ಹೋಗಿದ್ದ ಅವರ ದಡ್ಡುಗಟ್ಟಿದ ಕೈಗಳಿಗೆ ಅವುಗಳ ಅವಶ್ಯಕತೆಯೂ ಇರಲಿಲ್ಲ. ಆ ವಾರವಿಡೀ ಧಡಿಯ ಬಿಲ್ಲಿ ರಾಮ್ ಲಾಲನಿಗೆ ಹೇಗೆಲ್ಲಾ ಕಿರುಕುಳಕೊಡಬಹುದೋ ಅದನ್ನೆಲ್ಲಾ ಹುಡುಕುಡುಕಿ ಕೊಟ್ಟಿದ್ದ. ವಿಶೇಷವಾಗಿ ರಾಮ್ ಲಾಲನ ಎತ್ತರದ ಭೀತಿಯನ್ನು (ಆಕ್ರೋಫೋಭಿಯ) ಅರಿತು ಬೇಕಂತಲೇ ಅವನಿಗೆ ಕೆಲಸ ಮಾಡಲು ಎಲ್ಲಕ್ಕಿಂತ ಎತ್ತರದ ಸ್ಥಳಗಳಲ್ಲಿ ಕೆಲಸ ಮಾಡಲು ಕಳಿಸುತ್ತಿದ್ದ. ಅವನಿಗೆ ಈ ಕೆಲಸ ಬಹಳ ಅಗತ್ಯವಾಗಿತ್ತಾದ್ದರಿಂದ ರಾಮ್ ಲಾಲ್ ತನ್ನ ಪಂಜಾಬಿ ಆಹಂ ಅದುಮಿಡುವುದು ಅನಿವಾರ್ಯವಾಗಿತ್ತು. ಯಾವುದಕ್ಕೂ ಒಂದು ಮಿತಿ ಎನ್ನುವುದು ಇರುತ್ತದೆ. ಅದು ಶನಿವಾರದಂದು ಬಂದಿತು.

ಮರಮಟ್ಟುಗಳನ್ನೆಲ್ಲಾ ಇಳಿಸಿಯಾಗಿತ್ತು. ಇನ್ನು ಗೋಡೆಗಳನ್ನೊಡೆದು ಇಟ್ಟಿಗೆಗಳನ್ನು ಬಿಡಿಸುವ ಕೆಲಸ ಉಳಿದಿತ್ತು. ಕಟ್ಟಡ ನದಿಯೊಳಗೆ ಕುಸಿದು ಬೀಳದಂತೆ ಚತುರತೆಯಿಂದ ಡೈನಮೈಟನ್ನಿಡುವುದು ಅಗತ್ಯವಾಗಿತ್ತು. ಆದರೆ ಡೈನಮೈಟ್‍ಗಳನ್ನಿಡುವುದು ಸಾಧ್ಯವಿರಲಿಲ್ಲ. ಉತ್ತರ ಐರ್ಲೆಂಡಿನಲ್ಲಿ ಇದಕ್ಕಾಗಿ ವಿಶೇಷ ಪರವಾನಿಗೆ ಹೊಂದುವುದು ಅವಶ್ಯವಾಗಿತ್ತು. ಪರವಾನಿಗೆಯ ಬೆನ್ನಲ್ಲೇ ತೆರಿಗೆ ಅಧಿಕಾರಿಗಳನ್ನೂ ಸ್ವಾಗತಿಸಬೇಕಿತ್ತು! ಅವರು ಬಂದಂತೆಯೇ ಆದಾಯ ತೆರಿಗೆಯವರು, ರಾಷ್ಟ್ರೀಯ ಜೀವವಿಮೆದಾರರು ಸರತಿ ಸಾಲಿನಲ್ಲಿ ಬರುವವರಿದ್ದರು. ಆದ್ದರಿಂದ ಮ್ಯಾಕ್ವೀನ್ ಕಟ್ಟಡವನ್ನು ಬೀಳಿಸಲು, ಇದ್ಯಾವುದರ ಅಗತ್ಯವೇ ಬೇಡದ ದಿನಗೂಲಿ ದೈಹಿಕ ಶ್ರಮಿಕರನ್ನೇ ಅವಲಂಬಿಸಿದ್ದ. ಎತ್ತರದ ಕಿರಿದಾದ ಗೋಡೆಗಳ ಮೇಲೆ ದಪ್ಪನೆಯ ಸುತ್ತಿಗೆಗಳನ್ನು ಹಿಡಿದುನಿಂತು ಗೋಡೆಗಳನ್ನು ಹೊಡೆಯುವ ಸವಾಲನ್ನು ಅವರು ಎದುರಿಸಬೇಕಿತ್ತು.

ಮಧ್ಯಾಹ್ನ ಊಟ ಮುಗಿಸಿ ಅವರೆಲ್ಲ ಹರಟುತ್ತಾ ಕುಳಿತಿದ್ದರು. ಧಡಿಯ ಬಿಲ್ಲಿ ಎದ್ದು ಕಟ್ಟಡಕ್ಕೆ ಒಂದು ಸುತ್ತು ಹೊಡೆದು ಮುಂದಿನ ಕೆಲಸವನ್ನು ಹೇಗೆ ಪ್ರಾರಂಬಿಸಬೇಕೆಂದು ಅಂದಾಜಿಸಿ ಬಂದ. ಮೂರನೆ ಮಹಡಿಯ ಗೋಡೆಯನ್ನು ಹೇಗೆ ಕೆಡವಲು ಶುರು ಮಾಡಬೇಕೆಂದು ಅವನು ತೀರ್ಮಾನಿಸಿ ಬಂದಿದ್ದ. ಅವನು ರಾಮ್ ಲಾಲನ ಕಡೆಗೆ ತಿರುಗಿ ಹೇಳಿದ:
“ನೀನು, ಅದೋ ನೋಡಲ್ಲಿ.. ಆ ಗೋಡೆಯನ್ನು ಹತ್ತಿ ಹೊಡೆಯಲು ಶುರು ಮಾಡು.. ಬಿರುಕು ಬಿಡುತ್ತಿದ್ದಂತೆ ಕಾಲಿಂದ ಒದ್ದು ಹೊರಕ್ಕೆ ನೂಕು.” ಎಂದ ಮೂರನೆ ಮಹಡಿಯ ಗೋಡೆಯನ್ನು ತೊರಿಸುತ್ತಾ. ರಾಮ್ ಲಾಲ್ ಆ ಗೋಡೆಯನ್ನೇ ದಿಟ್ಟಿಸಿ ನೋಡಿದ. ಅದು ಈಗಾಗಲೇ ಬುಡದಲ್ಲಿ ಅಡ್ಡವಾಗಿ ಬಿರುಕು ಬಿಟ್ಟಿತ್ತು.
“ಆ ಗೋಡೆ ತನ್ನಷ್ಟಕ್ಕೇ ಯಾವಾಗ ಬೇಕಾದರೂ ಬಿದ್ದು ಹೋಗಬಹುದು… ಅದರ ಮೇಲೆ ಹತ್ತಿದವನು ಗೋಡೆಯ ಜೊತೆಯೇ ಕುಸಿದು ಬೀಳುವುದರಲ್ಲಿ ಅನುಮಾನವೇ ಇಲ್ಲ!” ರಾಮ್ ಲಾಲ್ ಹೇಳಿದ.
ಬಿಲ್ಲಿಯ ಮುಖ ಸಿಟ್ಟಿನಿಂದ ಕೆಂಪುಕೆಂಪಗಾಯಿತು. “ಲೇ ಕರಿಯ… ನಾನು ಹೇಳಿದ್ದಷ್ಟು ಮಾಡು. ನನಗೇ ಕಲಿಸಲಿಕ್ಕೆ ಹೋಗಬೇಡ!” ಎಂದು ಅರಚಿ ಅಲ್ಲಿಂದ ಹೊರಟು ಹೋದ.

ರಾಮ್ ಲಾಲ್ ಎದ್ದು ನಿಂತು, “ಮಿಸ್ಟರ್ ಕ್ಯಾಮರೂನ್..” ಎಂದ. ಅವನ ದನಿ ಕರ್ಕಶಗೊಂಡಿತ್ತು.
ಹೋಗುತ್ತಿದ್ದ ಧಡಿಯ ಬಿಲ್ಲ್ ನಿಂತು ಹಿಂದಿರುಗಿ ಆಶ್ಚರ್ಯದಿಂದ ರಾಮ್ ಲಾಲನನ್ನು ದಿಟ್ಟಿಸಿ ನೋಡಿದ. ರಾಮ್ ಲಾಲ್ ನಿಧಾನಕ್ಕೆ ಅವನ ಬಳಿ ಸಾಗಿದ.
“ಒಂದು ವಿಚಾರ ಹೇಳ್ತೀನಿ ಮಿಸ್ಟರ್ ಕ್ಯಾಮರೂನ್. ನಾನು ಪಂಜಾಬಿನವನು. ಹುಟ್ಟಿನಿಂದ ಒಬ್ಬ ಕ್ಷತ್ರಿಯ. ಅಂದರೆ ಯೋಧರ ಕುಲದವನು. ನನ್ನ ಬಳಿ ಈಗ ವಿದ್ಯಾಭ್ಯಾಸಕ್ಕೆ ಅಗತ್ಯವಿದ್ದಷ್ಟು ದುಡ್ಡು ಇಲ್ಲದೆ ಇರಬಹುದು. ಆದರೆ ನನ್ನ ಪೂರ್ವಜರು ಗೌರವಾನ್ವಿತ ಕ್ಷತ್ರಿಯ ಕುಲದವರು. ನಿನ್ನವರು ಚರ್ಮವನ್ನು ಹೊದ್ದುಕೊಂಡು ಇನ್ನೂ ನಾಲ್ಕು ಕಾಲುಗಳಲ್ಲಿ ನಡೆಯುತ್ತಿರಬೇಕಾದರೆ ನನ್ನವರು ರಾಜ್ಯಗಳನ್ನಾಳುತ್ತಿದ್ದರು. ದಯವಿಟ್ಟು ನನ್ನನ್ನು ಇನ್ನು ಮುಂದೆ ಹಿಯಾಳಿಸಬೇಡ.” ಎಂದ ಎಲ್ಲರಿಗೂ ಕೇಳಿಸುವಂತೆ.
ಧಡಿಯ ಬಿಲ್ಲಿ ಅವನನ್ನೇ ನೋಡುತ್ತ ನಿಂತುಕೊಂಡ. ಅವನ ಬಿಳಿಯ ಕಣ್ಣಾಲಿಗಳು ಕೆಂಪಗಾದವು. ಉಳಿದ ಕೆಲಸಗಾರರು ಆಶ್ಚರ್ಯದಿಂದ ಮುಂದೇನಾಗುವುದೋ ಎಂದು ಕಾತರದಿಂದ ಉಸಿರು ಬಿಗಿಹಿಡಿದು ನಿಂತರು.
“ಓಹೋ, ಹಾಗೇನು!! ಹಿಂದಿನದು ಬಿಡು. ಈಗ ಸಮಯ ಬದಲಾಗಿದೆ ಕಣೊ ಕರಿ ಲೌಡಿ ಮಗನೆ, ಏನಂತಿಯಾ?” ಎಂದು ತನ್ನ ಬಲಗೈಯನ್ನು ರಾಮ್ ಲಾಲನ ಮುಖದ ಮೇಲೆ ರೊಂಯ್ಯನೆ ಬೀಸಿದ. ಅವನು ಬೀಸಿದ ಏಟಿನ ರಭಸಕ್ಕೆ ರಾಮ್ ಲಾಲ್ ಮಾರುದ್ದ ದೂರ ಹೋಗಿ ಕುಸಿದು ಬಿದ್ದ. ರಾಮ್ ಲಾಲನಿಗೆ ಉಸಿರುಗಟ್ಟಿದಂತಾಯಿತು. ಕಣ್ಣುಗಳು ಕತ್ತಲುಗಟ್ಟಿದವು.

“ಮಗಾ, ಎದ್ದೇಳ ಬೇಡ! ಎದ್ದರೆ ಅವನು ನಿನ್ನನ್ನು ಸಾಯಿಸುತ್ತಾನೆ!!” ಎಂದು ಟಾಮಿ ಬನ್ರ್ಸ್ ಕೂಗಿ ಹೇಳಿದ.
ರಾಮ್ ಲಾಲ್ ತಲೆ ಎತ್ತಿ ನೋಡಿದ. ಸೂರ್ಯನ ಬಿಸಿಲು ಅವನ ಕಣ್ಣುಗಳಿಗೇ ರಾಚುತ್ತಿತ್ತು. ಅವನ ಸನಿಹದಲ್ಲೇ ದೈತ್ಯ ಬಿಲ್ಲಿ ಅವನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದ. ಅವನ ಮುಷ್ಠಿಗಳು ಬಿಗಿದಿದ್ದವು. ಅವನ ಜೊತೆ ಗುದ್ದಾಡುವುದು ಅಸಾಧ್ಯವೆಂದು ಗೊತ್ತಾಗಲು ರಾಮ್ ಲಾಲನಿಗೆ ತಡವಾಗಲಿಲ್ಲ. ನಾಚಿಕೆÀ ಮತ್ತು ಅಪಮಾನದಿಂದ ಅವನು ಕುಗ್ಗಿ ಹೋದ. ಪಂಚ ನದಿಗಳ ತಟದ ಅವನ ಪೂರ್ವಜರು ಈ ದೇಶದ ನೂರರಷ್ಟು ವಿಶಾಲವಾದ ದೇಶಗಳ ಮೇಲೆ ಯುದ್ಧ ಹೂಡಿ ವಿಜಯಿಗಳಾಗಿದ್ದರು. ಅವರೆಲ್ಲಾ ಅವನ ಮನೋಪಟಲದಲ್ಲಿ ಮೂಡಿ ಬಂದು, ‘ಬಿಡ ಬೇಡ ಅವನ!’ ಎಂದು ಉಸುರಿ ಸಾಗಿ ಹೋದರು.
ಅವನು ಕಣ್ಣು ಮುಚ್ಚಿ ಹಾಗೇ ಬಿದ್ದುಕೊಂಡ. ಕೆಲ ಹೊತ್ತಿನ ನಂತರ ಆ ದೈತ್ಯ ಅಲ್ಲಿಂದ ಹೊರಟು ಹೋದ. ಈ ವರೆಗೂ ತುಟಿ ಪಿಟಕ್ಕೆನ್ನದೆ ಸುಮ್ಮನಿದ್ದ ಕೆಲಸಗಾರರು ಮೆಲು ದನಿಯಲ್ಲಿ ಮಾತನಾಡಲು ಶುರುವಿಟ್ಟುಕೊಂಡರು. ಕಣ್ಣೀರು ತಡೆಹಿಡಿಯಲು ರಾಮ್ ಕಣ್ಣುಗಳನ್ನು ಭದ್ರವಾಗಿ ಮುಚ್ಚಿಕೊಂಡ.

ಕೆಲ ಹೊತ್ತಿನ ನಂತರ ಅವನು ಎದ್ದು ನಿಂತ. ಯಾರ ಜೊತೆಯೂ ಮಾತನಾಡಲಿಲ್ಲ. ಅವರೂ ಇವನೊಟ್ಟಿಗೆ ಮಾತನಾಡಲಿಲ್ಲ. ಅಂದಿನ ಕೆಲಸ ಮತ್ತೆ ಏನೂ ವಿಶೇಷಗಳಿಲ್ಲದೆ ಮುಂದುವರೆಯಿತು.
ಅಂದು ಸಂಜೆ ಕೆಲಸ ಮುಗಿಸಿ ತನ್ನ ರೂಮನ್ನು ತಲುಪಿದಾಗ ಗುಡುಗು ಸಿಡಿಲಿನೊಂದಿಗೆ ಗಾಳಿ ಮಳೆಯ ಆರ್ಭಟ ಶುರುವಾಗಿತ್ತು. ತೆರೆದ ಕಿಟಕಿ ರಪರಪನೆ ಬಡಿದು ಕೊಳ್ಳುತ್ತಿತ್ತು. ಗೂಟಕ್ಕೆ ಸಿಗಿಸಿದ್ದ ಅವನ ಗೌನು ನೆಲದ ಮೇಲೆ ಬಿದ್ದುಕೊಂಡಿತ್ತು. ಅದನ್ನೆತ್ತಿ ಮತ್ತೆ ಗೂಟಕ್ಕೆ ಸಿಗಿಸಿದ. ಅದರೂ ಕಳಚಿ ಸುರುಳಿ ಬಿದ್ದಿದ್ದ ಗೌನಿನ ಲಾಡಿ ಅವನಿಗೆ ವಿಚಿತ್ರವಾಗಿ ಕಂಡಿತು. ಅದರ ಒಂದು ತುದಿ ಎದ್ದು ಕಾಣುತ್ತಿದ್ದರೆ ಮತ್ತೊಂದು ತುದಿ ಸುರುಳಿಯೊಳಗೆ ಹುದುಗಿ ಹೋಗಿತ್ತು. ಅದು ರಾಮ್ ಲಾಲನಿಗೆ ಸುರುಳಿ ಸುತ್ತಿಕೊಂಡಿರುವ ಹಾವಿನಂತೆ ಕಾಣಿಸಿತು. ಗಾಢ ಕತ್ತಲೆಯಲ್ಲಿ ಮಿಂಚೊಡೆದಂತೆ ರಾಮ್ ಲಾಲನ ಮಿದುಳು ಒಮ್ಮೆಲೆ ಚುರುಕಾಯಿತು. ಮರುದಿನ, ಅಂದರೆ ಭಾನುವಾರ, ಅವನು ತನ್ನ ಸರ್ದಾರ್ಜಿ ಸ್ನೇಹಿತನನ್ನು ಕಾಣಲು ಬೆಲ್ಫಾಸ್ಟಿಗೆ ರೈಲು ಹತ್ತಿ ಹೋದ.

ರಂಜಿತ್ ಸಿಂಗ್ ಕೂಡ ಒಬ್ಬ ವೈಧ್ಯಕೀಯ ವಿದ್ಯಾರ್ಥಿ. ಅದೃಷ್ಟಶಾಲಿ ವಿದ್ಯಾರ್ಥಿಎನ್ನಬಹುದು. ಅವನ ಅಪ್ಪ ಆಗರ್ಭ ಶ್ರೀಮಂತ. ಅವನಿಗೆ ರಾಮ್ ಲಾಲನಂತೆ ವಿದ್ಯಾರ್ಥಿವೇತನದ ಅಗತ್ಯವಿರಲಿಲ್ಲ. ಬೇಕಾದಷ್ಟು ಮನೆಯಿಂದ ಕಳಿಸುತ್ತಿದ್ದರು. ಅವನು ಆದರದಿಂದ ರಾಮ್ ಲಾಲನನ್ನು ತನ್ನ ಹಾಸ್ಟೆಲ್ ರೂಮಿನೊಳಗೆ ಬರಮಾಡಿಕೊಂಡ.
“ಮನೆಯಿಂದ ಸುದ್ಧಿ ಬಂದಿದೆ ರಂಜಿತ್. ಅಪ್ಪನಿಗೆ ಹುಶಾರಿಲ್ವಂತೆ. ಸೀರಿಯಸ್ಸೇ ಅಂತೆ. ನಾನೇ ಹಿರಿಯವನಲ್ವ. ನೋಡಲೇ ಬೇಕು ಅಂತಿದ್ದಾರಂತೆ.” ಎಂದ ರಾಮ್ ಲಾಲ್.
“ಹೌದೇನೋ? ಹಾಗಾದ್ರೆ ನೀನು ಹೋಗೋದೇ ಒಳ್ಳೆದು.”
“ಸಮಸ್ಯೆ ವಿಮಾನದ ಟಿಕೆಟಿನದು. ನಾನು ಕೆಲಸ ಮಾಡುತ್ತಾ ಇದೀನಿ. ಒಳ್ಳೆ ಸಂಬಳವೂ ಸಿಗ್ತಾ ಇದೆ. ಆದರೆ ಟಿಕೆಟಿಗೆ ಅಗತ್ಯವಿರುವಷ್ಟಿಲ್ಲ. ಟಿಕೆಟಿಗಾಗುವಷ್ಟು ಸಾಲ ಕೊಟ್ಟಿರು. ಮುಂದಿನ ವಾರ ಬಂದು ಕೆಲಸ ಮಾಡಿ ತೀರಿಸುತ್ತೇನೆÀ.” ಎಂದ.

ಸೋಮವಾರ ಬೆಳಿಗ್ಗೆ ಬ್ಯಾಂಕಿಂದ ಹಣ ತೆಗೆದು ಕೊಡುವುದಾಗಿ ರಂಜಿತ್ ಆಶ್ವಾಸನೆ ಇತ್ತ. ರಾಮ್ ಲಾಲ್ ಅಂದೇ ಸಂಜೆ ಮ್ಯಾಕ್ವಿನನ ಮನೆಗೆ ಹೋದ. ಭಾನುವಾರ ರಜೆ ಇದ್ದುದ್ದರಿಂದ ಅವನು ಮನೆಯಲ್ಲೇ ಇದ್ದ. ಟಿ.ವಿ.,ಯ ಮುಂದೆ ಬಿಯರ್ ಕುಡಿಯುತ್ತಾ ಕುಳಿತಿದ್ದ.
“ಏನಪ್ಪ ಸಮಚಾರ?” ಅವನು ಕೇಳಿದ.
“ನನ್ನ ತಂದೆಗೆ ಹುಶಾರಿಲ್ವಂತೆ ಸಾರ್. ಬದುಕುಳಿಯುವುದೇ ಕಷ್ಟವಂತೆ. ನಾನೇ ಹಿರಿಯ ಮಗನಾದ್ದರಿಂದ ಊರಿಗೆ ಹೋಗಲೇ ಬೇಕಾಗಿದೆ. ಅದು ನಮ್ಮ ಸಂಪ್ರದಾಯ.”
“ಹೌದೇನಪ್ಪ? ಛೆ…ಛೆ! ಹೋಗಿ ಬಾರಪ್ಪ.” ಅವನಿಗೆ ತನ್ನ ಮಗನ ನೆನಪು ಬಂತು. ಅವನು ಕೆನಡಾಕ್ಕೆ ಹೋಗಿ ಏಳು ವರ್ಷಗಳಾಗಿದ್ದವು.
“ಮಿಸ್ಟರ್ ಮ್ಯಾಕ್ವಿನ್, ವಿಮಾನದ ಟಿಕೆಟಿಗಾಗಿ ನಾನು ಸಾಲ ಮಾಡಿದ್ದೇನೆ. ನಾನು ಮುಂದಿನ ವಾರವೇ ವಾಪಸ್ಸು ಬಂದು ಬಿಡುತ್ತೇನೆ. ಆದ್ದರಿಂದ ನನಗೆ ಹಿಂದಿಗಿಂತಲೂ ಹೆಚ್ಚಾಗಿ ಕೆಲಸದ ಅಗತ್ಯವಿದೆ. ನನಗೆ ಮತ್ತೆ ಕೆಲಸ ಕೊಡುವಿರಲ್ಲ?”

ಮ್ಯಾಕ್ವಿನ್ ಕೆಲ ಹೊತ್ತು ಯೋಚಿಸಿ ಹೇಳಿದ; “ಒಂದು ವಾರದೊಳಗೇ ವಾಪಸ್ಸು ಕೆಲಸಕ್ಕೆ ಬಂದರೆ ತೊಂದರೆಯಿಲ್ಲ. ಆದರೆ ರಜೆಯ ಕೂಲಿ ಮಾತ್ರ ಸಿಗುವುದಿಲ್ಲ, ನೆನಪಿಟ್ಟುಕೊ.”
“ಥ್ಯಾಂಕ್ಯು ಸರ್. ನಿಮ್ಮದು ಉದಾರ ಮನಸ್ಸು.” ಎಂದು ಹೇಳಿ ರಾಮ್ ಲಾಲ್ ಹೊರಟ. ಅವನು ತನ್ನ ಕೊಠಡಿಯನ್ನು ಖಾಲಿ ಮಾಡಲಿಲ್ಲ. ಆದರೆ ಅಂದಿನ ರಾತ್ರಿ ತನ್ನ ಬೆಲ್‍ಫಾಸ್ಟಿನ ಹಾಸ್ಟೆಲ್ ರೂಮಿನಲ್ಲಿ ಕಳೆದ. ಮರುದಿನ ರಂಜಿತ್ ಬ್ಯಾಂಕಿನಿಂದ ಹಣ ತೆಗೆದು ರಾಮ್ ಲಾಲನಿಗೆ ಕೊಟ್ಟ. ಅವನು ಅಲ್ಲಿಂದ ಅಲ್ಡರ್‍ಗ್ರೋವ್ ಏರ್‍ಪೋರ್ಟಿಗೆ ಹೋಗಿ ಲಂಡನಿನ ವಿಮಾನ ಹತ್ತಿ ಅಲ್ಲಿಂದ ಭಾರತಕ್ಕೆ ಟಿಕೆಟು ತೆಗೆದ. ಇಪ್ಪತ್ತನಾಲ್ಕು ಗಂಟೆಗಳ ಪ್ರಯಾಣ ಮುಗಿಸಿ ಅವನು ಧಗೆಯಿಂದ ಬೇಯುತ್ತಿದ್ದ ಬಾಂಬೆಯಲ್ಲಿ ಇಳಿದ.
ಬುಧವಾರ ಬೆಳಿಗ್ಗೆ ಅವನು ಬಾಂಬೆಯ ಗ್ರ್ಯಾಂಟ್ ರೋಡ್ ಸೇತುವೆಯ ಕೆಳಗಿರುವ ಚಟರ್ಜಿಯವರ ‘ಟ್ರಾಪಿಕಲ್ ಫಿಶ್ ಆಂಡ್ ರೆಪ್ಟೈಲ್ ಎಂಪೋರಿಯಮ್’ನಲ್ಲಿದ್ದ. ಅವನ ಕಂಕುಳದಲ್ಲಿ ಭಾರತೀಯ ಸರೀಸೃಪಗಳ ಕುರಿತಾದ ದಪ್ಪನೆಯ ಪುಸ್ತಕವಿತ್ತು. ನೋಡಿದವರಿಗೆ ಅವನೊಬ್ಬ ಆಸಕ್ತ ವಿದ್ಯಾರ್ಥಿ ಅಂತಲೇ ಕಾಣಿಸುತ್ತಿದ್ದ. ಅವನು ಹುಡುಕುತ್ತಿದ್ದದ್ದು ಸಿಗಲು ತಡವಾಗಲಿಲ್ಲ. ಆ ಹೊತ್ತಿನಲ್ಲಿ ಅಂಗಡಿ ಖಾಲಿ ಹೊಡಿತಿತ್ತು. ವಯಸ್ಸಾದ ಚಟರ್ಜಿ ಸಾಹೇಬರು ಒಂದು ಮಂದ ಬೆಳಕಿನ ಮೂಲೆಯುಲ್ಲಿ ಕುಳಿತುಕೊಂಡಿದ್ದರು. ಅವರ ಸುತ್ತ ಗಾಜಿನ ತೊಟ್ಟಿಗಳಲ್ಲಿ ಈಜುತ್ತಿದ್ದ ವಿವಿಧ ರಂಗುಗಳ, ಗಾತ್ರದ ಮೀನುಗಳಿದ್ದರೆ, ಗಾಜಿನ ಪೆಟ್ಟಿಗೆಗಳಲ್ಲಿ ವಿವಿಧ ಜಾತಿಯ ಉರಗಗಳು ಬಿಸಿಲಿನ ಝಳಕ್ಕೆ ಸುಸ್ತಾಗಿ ಬಿದ್ದುಕೊಂಡು ತೂಕಡಿಸುತ್ತಿದ್ದವು.

ಚಟರ್ಜಿ ಸಾಹೇಬರು ವಿದ್ವತ್ ಜಗತ್ತಿನಲ್ಲಿ ಒಂದು ಚಿರಪರಿಚಿತ ಹೆಸರು. ಬಹಳಷ್ಟು ವೈಧ್ಯಕೀಯ ಕಾಲೇಜುಗಳಿಗೆ ಸಂಶೋಧನೆಗಳಿಗೆ, ಡಿಸೆಕ್ಷನ್‍ಗೆಂದು ಸ್ಯಾಂಪಲ್ಲುಗಳನ್ನು ಕಳಿಸುತ್ತಿದ್ದಲೇ ಇದ್ದರು. ಕೆಲವೊಮ್ಮೆ ಹೊರದೇಶಕ್ಕೂ ಕಳಿಸುತ್ತಿದ್ದರು. ರಾಮ್ ಲಾಲ್ ತನ್ನ ಅಗತ್ಯತೆಯನ್ನು ಬಿಳಿಗಡ್ಡದ ಚಟರ್ಜಿಯವರೊಡನೆÀ ನಿವೇದಿಸಿಕೊಂಡ.
“ನೀನು ತುಂಬಾ ಅದೃಷ್ಟಶಾಲಿ. ನೀನು ಕೇಳುತ್ತಿರುವ ಒಂದೇ ಒಂದು ಹಾವು ನನ್ನ ಬಳಿ ಇದೆ. ಇತ್ತೀಚೆಗಷ್ಟೇ ರಾಜಪುಟಾನದಿಂದ ಬಂದಿದೆ.” ಎಂದು ರಾಮ್ ಲಾಲನನ್ನು ಅಂಗಡಿಯ ಒಂದು ಮೂಲೆಗೆ ಕರೆದುಕೊಂಡು ಹೋಗಿ ಒಂದು ಗಾಜಿನ ಪೆಟ್ಟಿಗೆಯ ಬಳಿ ನಿಂತ. “ಎಚಿಸ್ ಕ್ಯಾರಿನೇಟಸ್” ಅದು ಒಬ್ಬ ಇಂಗ್ಲಿಷ್ ಸಂಶೋಧಕ ಕೊಟ್ಟ ಲ್ಯಾಟಿನ್ ಹೆಸರು. ಅಂದರೆ ಗರಗಸದಂತ ಪೊರೆಯ ಮಂಡಲದ ಸಣ್ಣ ಆದರೆ ತುಂಬಾ ವಿಷಕಾರಿ ಹಾವು. ಆಫ್ರಿಕಾ ಮತ್ತು ಭಾರತದ ಉಪಖಂಡದಲ್ಲಿ ಕಾಣ ಸಿಗುತ್ತದೆ. ಯಾವುದೇ ವಾತವರಣಕ್ಕೆ ಹೊಂದಿಕೊಳ್ಳುವ ಕ್ಷಮತೆ. ಒಂಭತ್ತರಿಂದ ಹದಿಮೂರು ಇಂಚು ಉದ್ದದ ತೆಳ್ಳನೆಯ ಹಾವು ಎಂದು ಅವನ ಬಳಿ ಇದ್ದ ಪಠ್ಯಪುಸ್ತಕದಲ್ಲಿ ವಿವರವಿತ್ತು. ಗಿಡಗಳ ಪೊದೆಗಳ ಮರೆಯಲ್ಲಿ ಎದ್ದು ಕಾಣದಂತ ಬಣ್ಣ. ನಿಶಾಚರಿ. ಬಹುಶಃ ಅದರ ಗಾತ್ರದ ಕಾರಣದಿಂದಾಗಿರಬೇಕು. ನಿರುಪದ್ರವಿ ಎಂದು ಮುಟ್ಟಲು ಹೋಗಿ ಅಥವ ಗೊತ್ತಾಗದೆ ನಾಗರ ಹಾವಿಗಿಂತಲೂ ಹೆಚ್ಚು ಜನರನ್ನು ಬಲಿ ಪಡೆದ ಹಾವು. ಹೊರಗೆ ನಿಂತವರನ್ನು ಕಂಡು ಆ ಹಾವು ತನ್ನ ಪುಟ್ಟ ತಲೆಯನ್ನು ಹೊರಹಾಕಿ ತನ್ನ ಕಪ್ಪು ಸೀಳು ನಾಲಿಗೆಯನ್ನು ಗಾಳಿಯಲ್ಲಿ ಬೀಸಿತು. ಯಾವುದೇ ಮುನ್ಸೂಚನೆ ಕೊಡದೆ ಮಿಂಚಿನ ವೇಗದಲ್ಲಿ ಕುಟುಕುತ್ತದೆ ಎಂದು ರಾಮ್ ಲಾಲನ ಪುಸ್ತಕದಲ್ಲಿ ವಿವರಿಸಲಾಗಿತ್ತು. ಅದರ ವಿಷದ ಹಲ್ಲು ಎಷ್ಟೊಂದು ಪುಟ್ಟದಾಗಿರುತ್ತದೆಂದರೆ ಕುಟುಕಿದ್ದು ಗೊತ್ತೇ ಆಗುವುದಿಲ್ಲ. ಕಚ್ಚಿಸಿಕೊಂಡವನ ದೇಹ ಪ್ರಕೃತಿಗನುಗುಣವಾಗಿ ಎರಡರಿಂದ ನಾಲ್ಕು ಗಂಟೆಗೊಳಗಾಗಿ ಮಿದುಳು ನಿಷ್ಕ್ರಿಯಗೊಂಡು ಸಾಯುವುದಂತೂ ನಿಶ್ಚಯ.

“ಇದರ ಬೆಲೆ ಎಷ್ಟು?” ರಾಮ್ ಲಾಲ್ ಕೇಳಿದ.
“ಇದು ಅಪರೂಪಕ್ಕೆ ಸಿಗುವಂತದ್ದು… ಐನೂರು ರುಪಾಯಿಗಳಷ್ಟೇ..”
ನಂತರ ಸಾಕಷ್ಟು ಚೌಕಾಶಿ ನಡೆಸಿ ರಾಮ್ ಲಾಲ್ ಆ ಪುಟ್ಟ ಹಾವನ್ನು ಮುನ್ನೂರೈವತ್ತು ರುಪಾಯಿಗಳಿಗೆ ಖರೀದಿಸಿ ಒಂದು ಗಾಜಿನ ಜಾಡಿಯಲ್ಲಿ ತುಂಬಿಸಿಕೊಂಡ.
ಲಂಡನಿಗೆ ಹೊರಡುವ ದಿನ ರಾಮ್ ಲಾಲ್ ಒಂದು ಸಿಗಾರಿನ ರಟ್ಟು ಡಬ್ಬಿಯನ್ನು ಕೊಂಡುಕೊಂಡ. ಅದಕ್ಕೆ ಇಪ್ಪತ್ತಿಪ್ಪೈದು ಸಣ ್ಣತೂತುಗಳನ್ನು ಮಾಡಿ ಹಾವನ್ನು ಅದರೊಳಗೆ ವರ್ಗಾಯಿಸಿದ. ಅದು ಕನಿಷ್ಠ ಒಂದು ವಾರ ಆಹಾರವಿಲ್ಲದೆ, ಮೂರು ದಿವಸ ನೀರಿಲ್ಲದೆ ತಡೆದುಕೊಳ್ಳಬಲ್ಲದೆಂದು ಅವನು ತಿಳಿದುಕೊಂಡಿದ್ದ. ಡಬ್ಬಿಯನ್ನು ತರಗೆಲೆಗಳೊಳಗೆ ಹಾಕಿ ಟವಲ್ಲಿನಿಂದ ಚೆನ್ನಾಗಿ ಸುತ್ತಿದ್ದ. ಹಾವಿನ ಉಸಿರಾಟಕ್ಕೆ ಸಾಕಷ್ಟು ಗಾಳಿ ಒಳಗಿತ್ತು. ಕೇವಲ ಒಂದು ಕೈ ಬ್ಯಾಗನ್ನು ಹಿಡಿದುಕೊಂಡು ಬಂದಿದ್ದ ರಾಮ್ ಲಾಲ್ ಒಂದು ಅಗ್ಗದ ಫೈಬರ್ ಸೂಟುಕೇಸನ್ನು ಕೊಂಡು ಕೆಲವು ಅಗ್ಗದ ಬಟ್ಟೆಗಳನ್ನು ಖರೀದಿಸಿದ. ಅವುಗಳ ಮಧ್ಯೆ ಹಾವಿನ ಡಬ್ಬಿ ಇರಿಸಿದ. ಅವನ ಸೂಟು ಕೇಸು ಏರ್ ಇಂಡಿಯ ವಿಮಾನದ ಲಗ್ಗೇಜು ಕಕ್ಷೆಗೆ ಸೇರಿದರೆ ಅವನ ಕೈ ಬ್ಯಾಗಿನಲ್ಲಿ ಅಕ್ರಮವಾದುದು ಏನೂ ಸಿಗಲಿಲ್ಲ.

ಶುಕ್ರವಾರದಂದು ಅವನು ಬ್ರಿಟನ್ ತಲುಪಿದ. ಅವನು ವಿದ್ಯಾರ್ಥಿಯಾಗಿದ್ದರಿಂದ ಹೆಚ್ಚು ತಪಾಸಣೆಗೊಳಪಡಲಿಲ್ಲ. ಅವನ ಸೂಟು ಕೇಸು ಹೊರಬರುತ್ತಿದ್ದಂತೆ ಪಡೆದುಕೊಂಡು ರಾಮ್ ಲಾಲ್ ಟಾಯ್ಲೆಟಿಗೆ ಹೋಗಿ ಸೂಟ್ ಕೇಸಿನಲ್ಲಿದ್ದ ಸಿಗಾರ್ ಡಬ್ಬಿಯನ್ನು ತನ್ನ ಕೈ ಬ್ಯಾಗಿಗೆ ವರ್ಗಾಯಿಸಿದ. ಮರುದಿನ ಬೆಳಿಗ್ಗೆ ರಾಮ್ ಲಾಲ್ ದಪ್ಪನೆಯ ಕೈಗವಸುಗಳನ್ನು ಧರಿಸಿ ಮಂಡಲದ ಹಾವನ್ನು ಜಾಗರೂಕತೆಯಿಂದ ಗಾಜಿನ ಕಾಫಿ ಜಾಡಿಗೆ ವರ್ಗಾಯಿಸಿದ. ಸುರುಳಿ ಸುತ್ತಿಕೊಂಡು ಬಿದ್ದುಕೊಂಡಿದ್ದ ಅದನ್ನು ಬಹಳ ಹೊತ್ತು ಗಮನಿಸುತ್ತಾ ತನ್ನ ಟಿಫಿನ್ ಬಾಕ್ಸಿನೊಳಗಿರಿಸಿ ಕೆಲಸಕ್ಕೆ ಹೊರಟ.

ಧಡಿಯ ಬಿಲ್ಲ್‍ಗೆ ಒಂದು ಅಭ್ಯಾಸವಿತ್ತು. ಕೆಲಸದ ಜಾಗಕ್ಕೆ ಟ್ರಕ್ಕು ಬಂದು ನಿಂತ ಕೂಡಲೇ ಕೆಳಗಿಳಿದು ತನ್ನ ಜಾಕೆಟನ್ನು ಬಿಚ್ಚಿ ಯಾವುದೋ ಗಿಡದ ಕೊಂಬೆಗೋ, ಇಲ್ಲ ಕಟ್ಟಡದ ಯಾವುದೋ ಮೊಳೆಗೋ ಸಿಕ್ಕಿಸುತ್ತಿದ್ದ. ಮಧ್ಯಾಹ್ನದ ಊಟದ ನಂತರ ತನ್ನ ಜಾಕೆಟಿನ ಬಲಗಡೆಯ ಜೇಬಿನಿಂದ ಪೈಪು ಮತ್ತು ಹೊಗೆಸೊಪ್ಪಿನ ಚೀಲವನ್ನು ಹೊರತೆಗೆಯಲು ಅದೊಂದು ಧಾರ್ಮಿಕ ವಿಧಿಯೆಂಬಂತೆ ಹೋಗುತ್ತಿದ್ದ. ಹೊಗೆಸೊಪ್ಪಿನ ಧೂಮಪಾನದಿಂದ ಸಂತೋಷಗೊಂಡು ಕೊನೆಯಲ್ಲಿ ಪೈಪನ್ನು ಕೊಡುವುತ್ತಾ, “ಸರಿ, ಸರಿ. ಇನ್ನು ಕೆಲಸಕ್ಕೆ ಹಚ್ಕೊಳಿ..” ಎಂದು ಎದ್ದು ನಿಲ್ಲುತ್ತಿದ್ದ. ಅವನು ಮತ್ತೆ ಪೈಪನ್ನು ಜಾಕೆಟಿನ ಜೇಬಿಗೆ ಸೇರಿಸುವ ಹೊತ್ತಿಗೆ ಎಲ್ಲರೂ ಎದ್ದು ತಯಾರಾಗಿರುತ್ತಿದ್ದರು.
ರಾಮ್‍ಲಾಲನ ಪ್ಲ್ಯಾನು ಬಹಳ ಸರಳವಾಗಿತ್ತು. ಕೆಲಸದ ಮಧ್ಯೆ ಧಡಿಯ ಬಿಲ್ಲನ ಜಾಕೆಟಿನ ಬಲ ಜೇಬಿನೊಳಗೆ ಮಂಡಲದ ಹಾವನ್ನು ಬಿಡುವುದು. ಮಧ್ಯಾಹ್ನದ ಸ್ಯಾಂಡ್‍ವಿಚ್ ಮುಗಿಸಿದಂತೆಯೇ ಧಡಿಯ ಬಿಲ್ಲ್ ಜಾಕೆಟಿನ ಜೇಬಿಗೆ ಕೈ ಹಾಕುತ್ತಾನೆ!… ಮುಂದಿನದು ಹಾವಿಗೆ ಬಿಟ್ಟಿದ್ದು! ತಾನೊಂದು ನಿಮಿತ್ತ ಮಾತ್ರ!
ಜೇಬೊಳಗೆ ಕೈ ಹಾಕುತ್ತಿದ್ದಂತೆ ಧಡಿಯ ಬಿಲ್ಲ್ ಅರಚುತ್ತಾ ಕೈಯನ್ನು ಕೊಡವುತ್ತಾ ಕುಣಿದಾಡುತ್ತಿರುತ್ತಾನೆ. ಇದಕ್ಕಾಗಿಯೇ ಕಾಯುತ್ತಿರುವ ರಾಮ್ ಲಾಲ್ ಕ್ಷಣಾರ್ಧದಲ್ಲೇ ಅವನ ಬಳಿ ಜಿಗಿದು ಬಿಲ್ಲನ ಬೆರಳಿಗೆ ಬಲವಾಗಿ ಕಚ್ಚಿ ಜೋತುಬಿದ್ದಿರುವ ಮಂಡಲದ ಹಾವನ್ನು ಕಿತ್ತು ನೆಲಕ್ಕೆ ಹಾಕಿ ಕಾಲಲ್ಲಿ ಚೆನ್ನಾಗಿ ಹೊಸೆದು ಉಳಿದವರು ಏನಾಯ್ತು ಎಂದು ಆಶ್ಚರ್ಯಪಡುವ ಮೊದಲೇ ಅಪರಾಧಗೈದ ಪುರಾವೆಯನ್ನೆತ್ತಿ ಪಕ್ಕದಲ್ಲೇ ಹರಿಯುತ್ತಿರುವ ಕೋಂಬರ್ ನದಿಗೆ ಎಸೆದುಬಿಡುತ್ತಾನೆ! ಅದು ಹರಿದು ಸಮುದ್ರ ಸೇರುತ್ತದೆ! ಯಾರು ಸಂಶಯಪಟ್ಟರೂ ಏನಂತೆ?

ಬೆಳಗಿನ ಹನ್ನೊಂದು ಗಂಟೆಯ ನಂತರ ರಾಮ್ ಲಾಲ್ ಬೇರೊಂದು ಸುತ್ತಿಗೆ ತರುವ ನೆಪ ಮಾಡಿಕೊಂಡು ಕೆಳಗಿಳಿದು ಹೋದ. ತನ್ನ ಟಿಫಿನ್ ಬಾಕ್ಸಿನ ಬ್ಯಾಗಿನಿಂದ ಕಾಫಿ ಪುಡಿಯ ಜಾಡಿಯನ್ನು ಎತ್ತಿಕೊಂಡು ಮುಚ್ಚಳವನ್ನು ತೆಗೆದು ನೇತು ಹಾಕಿದ್ದ ಧಡಿಯ ಬಿಲ್ಲನ ಜಾಕೆಟಿನ ಬಲ ಜೇಬಿಗೆ ಮಂಡಲದ ಹಾವನ್ನು ಕೊಡವಿ ತನ್ನ ಕೆಲಸದ ಜಾಗಕ್ಕೆ ಮರಳಿದ.
ಊಟದ ಹೊತ್ತಿನಲ್ಲಿ ಅವನಿಗೆ ಆತಂಕದಿಂದ ಎದೆ ಡವಗುಟ್ಟುತ್ತಿತ್ತು. ಎಂದಿನಂತೆ ಬೆಂಕಿಯ ಮೇಲೆ ಟೀ ಕ್ಯಾನು ಮರಳುತ್ತಿತ್ತು. ಎಲ್ಲರೂ ಬೆಂಕಿ ಕಾಯಿಸುತ್ತಾ, ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ಸುತ್ತ ಕುಳಿತ್ತಿದ್ದರು. ಬಿಲ್ಲಿ ಅನತಿ ದೂರದಲ್ಲಿ ಸ್ಯಾಂಡ್‍ವಿಚನ್ನು ಮೆಲ್ಲುತ್ತಾ ಒಬ್ಬನೇ ಕುಳಿತುಕೊಂಡಿದ್ದ. ರಾಮ್ ಲಾಲ್ ಬೇಕಂತಲೇ ಬಿಲ್ಲನ ಜಾಕೆಟಿನ ಸಮೀಪದಲ್ಲೇ ಕುಳಿತುಕೊಂಡಿದ್ದ.

ಕೊನೆಗೂ ಬಿಲ್ಲ್ ತನ್ನ ಸ್ಯಾಂಡ್‍ವಿಚನ್ನು ಮುಗಿಸಿ ರ್ಯಾಪರನ್ನು ಉಂಡೆಮಾಡಿ ಬೆಂಕಿಗೆ ಎಸೆದು ಜೋರಾಗಿ ತೇಗುತ್ತಾ ಎದ್ದು ನಿಂತು ತನ್ನ ಜಾಕೆಟಿನ ಕಡೆಗೆ ನಡೆಯತೊಡಗಿದ. ರಾಮ್ ಲಾಲನ ದೃಷ್ಟಿ ಅವನೆಡೆಗಿತ್ತು. ಬೇರೆ ಯಾರಿಗೂ ಅವನೆಡೆಗೆ ಗಮನವಿರಲಿಲ್ಲ. ಬಿಲ್ಲ್ ಕ್ಯಾಮರೂನ್ ಅವನ ದೈತ್ಯ ಕೈಯನ್ನು ಜಾಕೆಟಿನ ಜೇಬಿನೊಳಗೆ ಇಳಿಬಿಟ್ಟ. ರಾಮ್ ಲಾಲನ ಉಸಿರು ಗಂಟಲಲ್ಲೇ ಸಿಕ್ಕಿ ಹಾಕಿಕೊಂಡಿತು. ಬಿಲ್ಲಿ ಬಹಳ ಹೊತ್ತು ತಡಕಾಡಿ ಅವನ ಪೈಪ್ ಮತ್ತು ಹೊಗೆ ಸೊಪ್ಪಿನ ಚೀಲವನ್ನು ಹೊರತೆಗೆದು ಪೈಪಿಗೆ ತುಂಬತೊಡಗಿದ. ರಾಮ್ ಲಾಲ್ ತನ್ನನ್ನೇ ದಿಟ್ಟಿಸುತ್ತಿರುವುದು ಅವನ ಗಮನಕ್ಕೆ ಬಂತು.
“ಏನೋ ಕರಿಯ, ನನ್ನೇ ಗುರಾಯಿಸಿ ನೋಡ್ತಿದೀಯ?” ಅಂದ ದೊಡ್ಡ ದನಿಯಲ್ಲಿ.
“ಏನಿಲ್ಲ..” ಎನ್ನುತ್ತಾ ಅವನು ಬೆಂಕಿಯ ಕಡೆಗೆ ತಿರುಗಿದ. ಆದರೂ ಏನೋ ಚಡಪಡಿಕೆ. ಗಮನವೆಲ್ಲ ಬಿಲ್ಲಿ ಕ್ಯಾಮರೂನನ ಮೇಲೇ ಇತ್ತು. ಹೊಗೆ ಸೊಪ್ಪಿನ ಚೀಲವನ್ನು ಬಿಲ್ಲಿ ಮತ್ತೆ ಜೇಬಿನೊಳಗೆ ಸೇರಿಸಿ ಬೆಂಕಿಪೊಟ್ಟಣವನ್ನು ಹೊರತೆಗೆದ. ಪೈಪಿಗೆ ಬೆಂಕಿ ಹತ್ತಿಸುತ್ತಾ ಕಣ್ಣು ಮುಚ್ಚಿ ತೃಪ್ತಿಯಿಂದ ಜೋರಾಗಿ ಹೊಗೆಯನ್ನು ಪುಪ್ಪುಸದೊಳಗೆ ಎಳೆಯುತ್ತಾ ಮತ್ತೆ ಬೆಂಕಿಯ ಕಡೆಗೆ ನಡೆದು ಬರತೊಡಗಿದ.
ರಾಮ್ ಲಾ¯ನಿಗೆ ಒಂದೂ ಅರ್ಥವಾಗಲಿಲ್ಲ. ಏನಾಯ್ತು ಈ ಹಾವಿಗೆ! ಅವನು ತನ್ನ ಕಣ್ಣಂಚಿನಿಂದಲೇ ಜಾಕೆಟಿನ ಕಡೆಗೆ ನೋಡಿದ. ಜಾಕೆಟಿನ ಎಡ ಅಂಚಿನ ಲೈನಿಂಗಿನಲ್ಲಿ ಏನೋ ಸರಿದಾಡುತ್ತಿರುವಂತೆ ಕಾಣಿಸಿ ನಿಶ್ಚಲವಾಯಿತು. ರಾಮ್ ಲಾಲನಿಗೆ ಆಶ್ಚರ್ಯವಾಯಿತು. ಬಿಲ್ಲನ ಜಾಕೆಟಿನ ಬಲ ಜೇಬಿನ ಲೈನಿಂಗಿನಲ್ಲಿದ್ದ ಸಣ್ಣ ತೂತು ಅವನ ಯೋಜನೆಯನ್ನೇ ತಲೆಕೆಳಗಾಗಿಸಿತ್ತು. ಉಳಿದರ್ಧ ದಿನ ಅವನು ಒಂದು ನಮೂನೆಯ ನಿರಾಶೆ ಆತಂಕದಲ್ಲೇ ಕಳೆದ.

ಸಂಜೆ ಕೆಲಸ ಮುಗಿಸಿ ಟ್ರಕ್ಕು ಬಂಗೋರಿಗೆ ವಾಪಸ್ಸು ಹೊರಟಿತ್ತು. ಬಿಲ್ಲಿ ಕ್ಯಾಮರೂನ್ ಎಂದಿನಂತೆ ಟ್ರಕ್ಕಿನ ಮುಂಭಾಗದಲ್ಲಿ ಕುಳಿತುಕೊಂಡ. ಸ್ವಲ್ಪ ಸೆಕೆ ಇದ್ದುದ್ದರಿಂದ ಅವನು ತನ್ನ ಜಾಕೆಟನ್ನು ತೊಡೆಗಳ ಮೇಲೆ ಕವುಚಿ ಹಾಕಿದ್ದ. ಸ್ಟೇಶನ್ ತಲುಪಿದ ನಂತರವೂ ಅವನು ಜಾಕೆಟನ್ನು ತನ್ನ ಕಾರಿನ ಹಿಂಭಾಗಕ್ಕೆ ಎಸೆದು ಕಾರು ಚಾಲನೆ ಮಾಡಿ ಹೊರಟು ಹೋದದ್ದನ್ನು ರಾಮ್ ಲಾಲ್ ಗಮನಿಸಿದ. ಟಾಮಿ ಬನ್ರ್ಸ್ ಬಸ್ಸಿಗಾಗಿ ಕಾಯುತ್ತಾ ಸ್ಟೇಶನ್ ಹೊರಗಡೆ ನಿಂತಿದ್ದ. ಅವನ ಬಳಿ ಸಾಗಿ, “ಈ ಬಿಲ್ಲಿ ಕ್ಯಾಮರೂನನಿಗೆ ಮಡದಿ ಮಕ್ಕಳಿದ್ದಾರೆಯೇ?” ಎಂದು ಕೇಳಿದ.
“ಹೂಂ. ಇಬ್ಬರು ಮಕ್ಕಳು.”
“ಅವನ ಮನೆ ದೂರ ಇರಬೇಕೇನೋ? ಕಾರಲ್ಲಿ ಹೋಗುತ್ತಾನಲ್ಲ?”
“ಅಷ್ಟೇನು ದೂರವಿಲ್ಲ. ಅವನ ಮನೆಗೆ ಭೇಟಿ ಕೊಡುವ ಉದ್ದೇಶವಿದೆಯೇನು?”
“ಖಂಡಿv ಇಲ್ಲಪ್ಪ! ಸುಮ್ಮನೆ ಕೇಳಿದೆ.” ಎಂದು ತನ್ನ ರೂಮಿನ ಕಡೆ ಹೊರಟ.
“ಅವನ ಹೆಂಡತಿ ಮಕ್ಕಳಿಗೆ ಏನೂ ಆಗದಿರಲಿ ದೇವರೆ.” ಅವನು ತನ್ನಲ್ಲೇ ಬೇಡಿಕೊಂಡ.
ಆ ವಾರಾಂತ್ಯವನ್ನು ರಾಮ್ ಲಾಲ್ ದುಗುಡದಿಂದಲೇ ಕಳೆದ. ವಿಷಕಾರಿ ಮಂಡಲದ ಹಾವು ಜಾಕೆಟಿನಿಂದ ಹೊರಬಂದು ಬಿಲ್ ಕ್ಯಾಮರೂನನ ಮನೆಯೊಳಗೆ ಸೇರಿ ಅವನ ಹೆಂಡತಿ ಮಕ್ಕಳಿಗೆ ಕಚ್ಚುವ ಸಂಭವನೀಯತೆ ಅವನ ಆತಂಕಕ್ಕೆ ಕಾರಣವಾಗಿತ್ತು.

ಸೋಮವಾರ ಬೆಳಿಗ್ಗೆ ಆರು ಗಂಟೆಯಷ್ಟೊತ್ತಿಗೆ ಬಿಲ್ ಕ್ಯಾಮರೂನನ ಮನೆಯಲ್ಲಿ ಅವರು ನಾಲ್ವರೂ ಬೆಳಗಿನ ಉಪಹಾರಕ್ಕೆ ಕುಳಿತಿದ್ದರು. ಬಿಲ್ಲ್ ಕೆಲಸಕ್ಕೆ ಹೊರಡಲು ತಯಾರಾಗಿಯೇ ಕುಳಿತಿದ್ದ. ಅವನ ಕೆಲಸದ ಜಾಕೆಟು ವಾರಾಂತ್ಯವೆಲ್ಲ ನಡುಕೋಣೆಯ ಬೀರುವಿನಲ್ಲಿತ್ತು.
ಉಪಹಾರ ಮುಗಿಸಿ ಮೊದಲು ಎದ್ದವಳು ಬಿಲ್ಲಿಯ ಮಗಳು.
‘ನೀನು ಬೇರೆಲ್ಲಿಯೂ ಹೋಗುವ ಮುನ್ನ ನನ್ನ ಜಾಕೆಟ್ ತೆಗೆದು ಕೊಂಡು ಬಾ ಮಗಳೆ” ಎಂದ. ಅವಳು ಅವನ ಜಾಕೆಟಿನ ಕಾಲರನ್ನು ಹಿಡಿದುಕೊಂಡು ತಂದು ಬಿಲ್ಲಿಯ ಕಡೆಗೆ ಚಾಚಿದಳು. “ಅಲ್ಲೇ ಬಾಗಿಲ ಹಿಂದೆ ಸಿಗಿಸಮ್ಮ.” ಎಂದ ಬಿಲ್. ಜಾಕೆಟಿನ ಕಾಲರಿಗೆ ಲೂಪ್ ಇರಲಿಲ್ಲ. ಬಾಗಿಲಿನ ಕೊಂಡಿಗೆ ಸಿಗಿಸುತ್ತಿದ್ದಂತೆ ಅದು ಜಾರಿ ಕೆಳಗೆ ಬಿತ್ತು. ಅವಳು ಅದನ್ನೆತ್ತಿ ಮತ್ತೆ ಸಿಗಿಸಿದಾಗ ಜಾಕೆಟಿನೊಳಗಿಂದ ಅದೆಂತದೋ ಕಪ್ಪನೆಯ ಸಪೂರವಾದ ಕೊಂಚ ಉದ್ದನೆಯ ಹುಳ ಕೆಳಗೆ ಬಿದ್ದು ಸರಸರನೆ ಸರಿದು ಬಾಗಿಲ ಚೌಕಟ್ಟಿನ ಮೂಲೆಗೆ ಸೇರಿ ಕೊಂಡಿದ್ದನ್ನು ಬಿಲ್ಲಿಯ ಮಗಳು ಜೆನ್ನಿ ಆಶ್ಚರ್ಯಚಕಿತಳಾಗಿ ಗಮನಿಸಿದಳು.
“ಅದು ಏನು ಡ್ಯಾಡಿ ನಿನ್ನ ಜಾಕೆಟಿನಿಂದ ಬಿದ್ದಿದ್ದು?” ಅವಳು ಆತಂಕದಿಂದ ಕೇಳಿದಳು.
ಎಲ್ಲರೂ ಅವಳು ಬೆಟ್ಟು ತೋರುತ್ತಿದ್ದ ಕಡೆಗೆ ನೋಡಿದರು. ಅದು ಸಣ್ಣ ಸುರುಳಿ ಸುತ್ತಿಕೊಂಡು ಕುಳಿತಿತ್ತು. ಅದರ ಕಣ್ಣುಗಳು ಫಳಫಳನೆ ಹೊಳೆಯುತ್ತಿದ್ದು ಕಪ್ಪು ಸೀಳು ನಾಲಿಗೆ ಗಾಳಿಯಲ್ಲಿ ಹೊಯ್ದಾಡುತ್ತಿತ್ತು.
“ಓ ದೇವರೇ!! ಅದು ಹಾವು!” ಮಿಸೆಸ್ ಕ್ಯಾಮರೂನ್ ಹೌಹಾರಿದಳು.
“ಸುಮ್ಮನೆ ಬಾಯಿಗೆ ಬಂದದ್ದು ಒದರಬೇಡ ಕಣೆ. ಐರ್ಲೆಂಡಿನಲ್ಲಿ ಹಾವುಗಳಿಲ್ಲವೆಂದು ಗೊತ್ತಿಲ್ಲವೇನೆ? ಅದು ಮಕ್ಕಳಿಗೂ ಗೊತ್ತು! ಅದು ಏನು ಅಂತ ಸ್ವಲ್ಪ ನೋಡೋ ಬಾಬ್ಬಿ.” ಹೆಂಡತಿಗೆ ಗದರುತ್ತಾ ಮಗನಿಗೆ ಹೇಳಿದ ಬಿಲ್ಲ್.

ಮನೆ ಒಳಗೂ ಹೊರಗೂ ಬಿಲ್ಲ್ ಕ್ಯಾಮರೂನ್ ಪಾಳೆಗಾರನಂತಿದ್ದರೂ, ಕಲಿಕೆಯಲ್ಲಿ ಮುಂದಿದ್ದ ಮಗನ ಜ್ಞಾನಕ್ಕೆ ಗರ್ವಪಡುತ್ತಿದ್ದ. ಬಾಬ್ಬಿ ತನ್ನ ಸೋಡಾ ಗ್ಲಾಸುಗಳನ್ನು ಸರಿಪಡಿಸುತ್ತಾ ಹಾವನ್ನು ದಿಟ್ಟಿಸಿ ನೋಡಿದ.
“ಅದೊಂದು ನಮೂನೆಯ ಎರೆಹುಳು ಡ್ಯಾಡಿ. ಇಂತಾದ್ದೆ ಒಂದು ನಮ್ಮ ಬಯಾಲಜಿ ಕ್ಲಾಸಿನಲ್ಲಿ ತೋರಿಸಿದ್ದರು. ಡಿಸೆಕ್ಷನಿಗೆ ಅಂತ ತಂದಿದ್ದರು.
“ನನಗ್ಯಾಕೋ ಅದು ಹುಳು ತರ ಕಾಣಿಸ್ತಾ ಇಲ್ಲ.” ಅಂದ ಬಿಲ್ಲಿ.
“ಅದು ಹುಳುನೂ ಅಲ್ಲ.. ಕಾಲಿಲ್ಲದ ಹಲ್ಲಿ”
“ಮತ್ತೆ ಏಕೆ ಅದನ್ನು ಹುಳು ಅಂತ ಕರಿತಾರೆ?”
“ನಂಗೊತ್ತಿಲ್ಲ.”
“ನಂಗೊತ್ತಿಲ್ಲ!.. ಮತ್ತ್ಯಾಕೋ ಸ್ಕೂಲಿಗೋಗ್ತಿಯ?”
“ಅದು ಕಚ್ಚುತ್ತಾ?” ಮಿಸೆಸ್ ಕ್ಯಾಮರೂನ್ ದಿಗಿಲಿನಿಂದ ಕೇಳಿದಳು.
“ಇಲ್ಲ ಮಮ್ಮಿ. ಅದೊಂದು ನಿರುಪದ್ರವಿ ಜೀವಿ”
“ಚಚ್ಚಿ ಬಿಸಾಕೊ ಅದನ್ನ.” ಬಿಲ್ಲಿ ಹೇಳಿದ.
ಮಗ ಬಾಬ್ಬಿ ಮೇಜಿನ ಮೇಲಿಂದ ಎದ್ದು ತನ್ನ ಚಪ್ಪಲನ್ನು ಬಿಚ್ಚಿ ನೊಣ ಹೊಡೆದಂತೆ ಅದನ್ನು ಹೊಡೆಯಲು ತಯಾರಾದ. ಅಷ್ಟರಲ್ಲಿ ಬಿಲ್ಲಿ ಅವನನ್ನು ತಡೆದು, “ನಿಲ್ಲು, ನಿಲ್ಲು!” ಎಂದು ಹೆಂಡತಿಯ ಕಡೆಗೆ ತಿರುಗಿ, “ಒಂದು ಜಾಡಿಯನ್ನು ತಗೊಂಡು ಬಾರೆ.” ಎಂದ.
“ಎಂತ ಜಾಡಿ ರೀ?” ಅವಳು ಕೇಳಿದಳು.

“ಮುಚ್ಚಳ ಇರೋವಂತದ್ದು.”
ಮಿಸೆಸ್ ಕ್ಯಾಮರೂನ್ ಅವಳ ಬೀರು ತೆರೆದು ಖಾಲಿ ಜಾಡಿ ಹುಡುಕತೊಡಗಿದಳು. ಯಾವುದೂ ಸಿಗಲಿಲ್ಲ. ಕೊನೆಗೆ ಕೊಂಚವೇ ಇದ್ದ ಒಣ ಬಟಾಣಿ ಕಾಳಿನ ಜಾಮ್ ಜಾಡಿಯನ್ನು ಖಾಲಿ ಮಾಡಿ ತಂದಳು.
“ಏನು ಮಾಡ್ತಾ ಇದ್ದೀಯಾ ಡ್ಯಾಡ್?” ಮಗ ಕೇಳಿದ.
“ನಮ್ಮಲ್ಲೊಬ್ಬ ಭಾರತದ ಕರಿಯ ವಿಧರ್ಮಿ ಕೆಲಸ ಮಾಡುತ್ತಿದ್ದಾನೆ. ಅವನ ದೇಶದಲ್ಲಿ ಭಯಂಕರ ಹಾವುಗಳಿದ್ದಾವೆಂದು ಕೇಳಿದ್ದೇನೆ. ಅವನೊಂದಿಗೆ ಸ್ವಲ್ಪ ಆಟ ಆಡೋಣ ಅಂತ!” ಬಿಲ್ಲಿ ಉತ್ಸಾಹದಿಂದ ಹೇಳಿ, ಮಗಳಿಗೆ, “ಅಡುಗೆ ಮನೆಯಿಂದ ಕೈಗವಸು ಕೊಡೆ ಜೆನ್ನಿ.” ಎಂದು ಮಗಳಿಗೆ ಹೇಳಿದ.
“ಅದಕ್ಕ್ಯಾಕೆ ಡ್ಯಾಡಿ ಕೈಗವಸು? ಅದನ್ನ ಹಾಗೇ ಎತ್ಕೊ ಬಹುದು.” ಎಂದ ಬಾಬ್ಬಿ.
“ನೀನು ಎಷ್ಟು ಓದಿದ್ರೂ ಅಷ್ಟೇ ಕಣೊ ಬಾಬ್ಬಿ. ಬೈಬಲ್‍ನಲ್ಲಿ ಬರೆದದ್ದು ನೀನು ಓದಿಲ್ಲೇನು?: ‘..ಎಲ್ಲ ಪಶು ಪ್ರಾಣಿಗಳಿಗಿಂತ ಶಾಪ ಗ್ರಸ್ತನಾದೆ. ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ. ಹಗೆತನವಿರುಸುವೆನು ನಿನಗೂ ನಿನ್ನ ಸಂತಾನಕ್ಕೂ..’ ಆದ್ದರಿಂದ ನಾನದನ್ನು ಬರಿಗೈಯಿಂದ ಮುಟ್ಟೋಲಪ್ಪ!” ಎಂದ ಬಿಲ್ಲ್ ಕ್ಯಾಮರೂನ್.

ಜೆನ್ನಿ ಅವನ ಕೈಗಳಿಗೆ ಅಡುಗೆ ಮನೆಯ ಕೈಗವಸುಗಳನ್ನಿತ್ತಳು. ಎಡಗೈಯಲ್ಲಿ ಗಾಜಿನ ಜಾಡಿ, ಬಲಗೈಗೆ ಕೈಗವಸು ಹಾಕಿ ಬಿಲ್ಲಿ ಕ್ಯಾಮರೂನ್ ಮಂಡಲದ ಹಾವನ್ನು ಹಿಡಿಯಲು ಸಜ್ಜಾಗಿ ನಿಂತ. ಅವನ ಬಲಗೈ ನಿಧಾನಕ್ಕೆ ಕೆಳಗೆ ಇಳಿಯುತ್ತಾ ಒಮ್ಮೆಲೆ ಅದು ಮಿಂಚಿನಂತೆ ಎಗರಿತು. ಆದರೆ ಆ ಪುಟ್ಟ ಮಂಡಲದ ಹಾವಿನ ವೇಗ ಅವನಿಗಿಂತ ದುಪ್ಪಟ್ಟಾಗಿತ್ತು! ಅದರ ವಿಷದ ಹಲ್ಲುಗಳು ಅವನ ಕೈಗವಸಿನಿಂದ ಅವನ ಅಂಗೈಯನ್ನು ಛೇದಿಸಿದ್ದು ಅವನ ಗಮನಕ್ಕೆ ಬರಲಿಲ್ಲ. ಬಿಲ್ಲ್, ಹಾವನ್ನು ಜಾಡಿಯೊಳಗೆ ಅದೇಗೋ ಸೇರಿಸಿದ. ಅದು ಜಾಡಿಯೊಳಗೆ ರೋಷದಿಂದ ಎಗರಾಡುತ್ತಿರುವುದನ್ನು ಅವರೆಲ್ಲಾ ಕುತೂಹಲದಿಂದ ನೋಡಿದರು.
“ನಿರುಪದ್ರವಿಯೋ ಮಣ್ಣೋ, ಐ ಹೇಟ್ ದೆಮ್” ಎಂದಳು ಮಿಸೆಸ್ ಕ್ಯಾಮರೂನ್. “ಸಧ್ಯ ಪೀಡೆಯನ್ನು ಮನೆಯಿಂದ ಹೊರತೆಗೆದರಲ್ಲ!”

“ನನಗೂ ಹೊತ್ತಾಯಿತು!” ಎಂದು ಬಿಲ್ಲಿ ಟಿಫಿನ್ ಬಾಕ್ಸ್, ಪೈಪು, ಹೊಗೆ ಸೊಪ್ಪಿನ ಪೌಚು ಮತ್ತು ಜಾಮಿನ ಜಾಡಿಯನ್ನು ತನ್ನ ಜಾಕೆಟಿನ ಜೇಬುಗಳಿಗೆ ಸೇರಿಸಿದ. ಅವನು ರೈಲು ಸ್ಟೇಶನ್ ತಲುಪಿದಾಗ ಐದು ನಿಮಿಷ ತಡವಾಗಿತ್ತು. ಇಂಡಿಯನ್ ಹುಡುಗ ನೆಟ್ಟ ನೋಟದಿಂದ ತನ್ನನ್ನೇ ನೋಡುತ್ತಿರುವುದು ಅವನ ಗಮನಕ್ಕೆ ಬಂದಿತು.
ನನ್ನ ಯೋಜನೆ ಅವನಿಗೆ ಅವನ ಅರಿವಿಗೆ ಬಂದಿಲ್ಲ ತಾನೆ? ಬಿಲ್ಲ್ ನ ಅಳುಕು ಮನಸ್ಸು ಕೇಳತೊಡಗಿತು! ಇಷ್ಟರಲ್ಲಿ ಉಳಿದೆಲ್ಲರಿಗೂ ಕರಿಯ ಭಾರತೀಯನಿಗೆ ತಿಳಿಸಬಾರದೆಂದು ಬಿಲ್ಲಿ ತನ್ನ ಯೋಜನೆಯನ್ನು ಅರುಹಿದ. ಇದು ಕೇವಲ ತಮಾಶೆಗೆಂದೂ, ಆ ಎರೆಹುಳುವಿನಿಂದ ಏನೂ ಅಪಾಯವಿಲ್ಲವೆಂದು ಅವನು ಅವರೆಲ್ಲರನ್ನೂ ನಂಬಿಸಿದ. ರಾಮ್ ಲಾಲ್‍ನೊಬ್ಬನೇ ಇದಾವುದರಾ ಅರಿವಿಲ್ಲದೆ ತನ್ನ ಪಾಡಿಗೆ ತಾನು ಕೆಲಸದಲ್ಲಿ ತೊಡಗಿದ್ದ. ಮಧ್ಯಾಹ್ನ ಊಟದ ಹೊತ್ತಿಗೆ ತನ್ನ ವಿರುದ್ಧ ಏನೋ ಮಸಲತ್ತು ನಡೆಯುತ್ತಿದೆ ಎಂದು ರಾಮ್ ಲಾಲನಿಗೆ ಗೊತ್ತಾಗಬೇಕಿತ್ತು. ಎಲ್ಲಾ ಅವನನ್ನು ವಿಚಿತ್ರ ರೀತಿಯಲ್ಲಿ ಗಮನಿಸುತ್ತಿದ್ದರು. ಅವರ ಮಾತುಕತೆಯಲ್ಲಿ ಎಂದಿನ ನೈಜ್ಯತೆ ಕಾಣುತ್ತಿರಲಿಲ್ಲ. ಅದನ್ನೆಲ್ಲಾ ಗಮನಿಸುವ ಮನಸ್ಥಿತಿಯಲ್ಲಿ ಅವನು ಇರಲಿಲ್ಲ. ತನ್ನ ಟಿಫಿನ್ ಬಾಕ್ಸನ್ನು ಮಂಡಿಯ ಮೇಲಿರಿಸಿ ಅವನು ಮುಚ್ಚಳವನ್ನು ತೆರೆದ. ಬಾಕ್ಸಿನೊಳಗಿದ್ದ ಸೇಬು ಹಣ್ಣು ಮತ್ತು ಸ್ಯಾಂಡ್‍ವಿಚಿನ ಮಧ್ಯದಲ್ಲಿ ಸುರುಳಿ ಸುತ್ತಿಕೊಂಡು ಮಲಗಿದ್ದ ಮಂಡಲದ ಹಾವು ಚಂಗನೆ ತಲೆ ಎತ್ತಿ ಕುಟುಕಲು ತಯಾರಾಯಿತು!

ರಾಮ್ ಲಾಲ್ ಕಿಟಾರನೆ ಕಿರುಚಿ ಕೈಗಳನ್ನು ಆಕಾಶದ ಕಡೆಗೆ ಚಿಮ್ಮಿಸುತ್ತಾ ಧಡಾರನೇ ಎದ್ದ. ಸುತ್ತ ಕುಳಿತ್ತಿದ್ದ ಅವನ ಸಹಪಾಠಿಗಳು ಹೋ ಎಂದು ಕೇಕೆ ಹಾಕುತ್ತಾ ನಗತೊಡಗಿದರು. ಅವನ ಟಿಫನ್ ಬಾಕ್ಸ್ ಗಾಳಿಯಲ್ಲಿ ಹಾರುತ್ತಾ ಹತ್ತು ಅಡಿ ದೂರದ ಹುಲ್ಲು ರಾಶಿಯಲ್ಲಿ ಬಿದ್ದಿತು. ಅವನ ಸ್ಯಾಂಡ್‍ವಿಚ್ ಒಂದು ಕಡೆ, ಸೇಬು ಮತ್ತೊಂದು ಕಡೆ ಬಿದ್ದಿತು. ಧಡಿಯ ಬಿಲ್ಲ್ ಅಂತೂ ಎಲ್ಲರಿಗಿಂತ ಜೋರಾಗಿ ಬಿದ್ದು ಬಿದ್ದು ನಗುತ್ತಿದ್ದ. ಅವನು ಈ ವರೆಗೆ ಅಷ್ಟೊಂದು ಖುಷಿಯಾಗಿದ್ದು ಯಾರೂ ನೋಡಿರಲಿಲ್ಲ.
“ಅದು ಹಾವು. ಭಯಂಕರ ವಿಷದ ಹಾವು! ಎದ್ದೇಳಿ, ಎದ್ದೇಳಿ. ಅಲ್ಲಿ ಕೂರಬೇಡಿ!” ಅವನು ಚೀರಿದ.
ಅವರೆಲ್ಲಾ ಮತ್ತೂ ಜೋರಾಗಿ ನಗತೊಡಗಿದರು.
“ದಯವಿಟ್ಟು ನನ್ನನ್ನು ನಂಬಿ. ಅದು ಭಯಾನಕ ವಿಷದ ಹಾವು.
ನಕ್ಕೂ ನಕ್ಕೂ ಬಿಲ್ಲಿಯ ಮುಖವೆಲ್ಲ ಕೆಂಪಗಾಗಿತ್ತು. ಕಣ್ಣುಗಳಲ್ಲಿ ನೀರು ಒಸರುತ್ತಿತ್ತು. ರಾಮ್‍ಲಾಲನ ದೃಷ್ಟಿ ಹಾವು ಎಗರಿ ಬಿದ್ದಿದ್ದ ಹುಲ್ಲಿನ ಮೇಲೆ ನೆಟ್ಟಿತ್ತು.

“ಲೇಯ್, ಐರ್ಲೆಂಡಿನಲ್ಲಿ ಹಾವುಗಳೇ ಇಲ್ಲ ಅಂತ ನಿನಗಿನ್ನೂ ಗೊತ್ತಿಲ್ಲವೇನೋ ಇಂಡಿಯನ್ ಮುಠ್ಠಾಳ? ಯಾರೂ ಹೇಳಿಲ್ಲವ?” ಅಂದ ಬಿಲ್ಲಿ ಕಣ್ಣುಗಳನ್ನು ಉಜ್ಜುತ್ತಾ. ನಕ್ಕೂ ನಕ್ಕೂ ಅವನ ಪಕ್ಕೆಗಳು ನೋಯುತ್ತಿದ್ದವು. ಅವನು ಕುಳಿತಲ್ಲಿಯೇ ದಟ್ಟವಾಗಿ ಬೆಳೆದಿದ್ದ ಹುಲ್ಲಿನ ಮೇಲೆ ಅಂಗಾತನಾಗಿ ಎರಡೂ ಕೈಗಳನ್ನು ತಲೆಗಾನಿಸಿ ಬಿದ್ದುಕೊಂಡ. ಅವನು ತನ್ನ ಬಲ ಅಂಗೈಯಲ್ಲಿ ಮುಳ್ಳುಗಳು ಚುಚ್ಚಿದಂತೆ ಕಾಣಿಸುತ್ತಿದ್ದ ಎರಡು ಸಣ್ಣ ಕುಟುಕುಗಳನ್ನು ಗಮನಿಸಲೇ ಇಲ್ಲ.
ಎಲ್ಲರೂ ನಕ್ಕು ಸುಸ್ತಾಗಿ ತಂತಮ್ಮ ಸ್ಯಾಂಡ್‍ವಿಚ್‍ಗಳನ್ನು ಬಾಯಿಗೆ ತುರುಕಿದರು. ಹರ್‍ಕಿಶನ್ ರಾಮ್‍ಲಾಲನ ಸ್ಯಾಂಡ್ ವಿಚ್ ಮಣ್ಣುಪಾಲಾಗಿತ್ತು. ಎಡಗೈಯಲ್ಲಿ ಸುಡು ಟೀಯನ್ನು ಹಿಡಿದು ಅವನು ಒಂದೊಂದೇ ಗುಟುಕು ಹೀರತೊಡಗಿದ. ಲಂಚ್ ವಿರಾಮ ಮುಗಿಯುತ್ತಿದ್ದಂತೆ ಅವರೆಲ್ಲಾ ಎದ್ದರು. ವಿಸ್ಕಿ ಡಿಸ್ಟಿಲರಿಯ ಕಟ್ಟಡ ಹೆಚ್ಚು ಕಮ್ಮಿ ನೆಲಸಮವಾಗಿತ್ತು. ಒಂದು ಕಡೆ ಚೂರು ಇಟ್ಟಿಗೆ, ಗಾರೆಯ ರಾಶಿ ಬಿದ್ದುಕೊಂಡಿದ್ದರೆ ಮತ್ತೊಂದು ಕಡೆ ಮರಮಟ್ಟುಗಳ ರಾಶಿ.

ಮೂರೂವರೆಯಷ್ಟೊತ್ತಿಗೆ ಬಿಲ್ಲಿ ತನ್ನ ಕೆಲಸವನ್ನು ನಿಲ್ಲಿಸಿ ಹಣೆಯ ಮೇಲೆ ತನ್ನ ಅಂಗೈಯನ್ನು ಸವರಿದ. ಅವನ ಮಣಿಕಟ್ಟು ಕೊಂಚ ಊದಿಕೊಂಡಿತ್ತು. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅವನು ಮತ್ತೆ ಕೆಲಸಕ್ಕೆ ಕೈ ಹಾಕಿದ. ಐದು ನಿಮಿಷಗಳ ನಂತರ ಮತ್ತೆ ಹಾರೆಯ ಮೇಲೆ ತನ್ನ ಭಾರವನ್ನು ಊರುತ್ತಾ ಕೆಲಸ ನಿಲ್ಲಿಸಿದ.
“ಯಾಕೋ ಮೈಗೆ ಹುಶಾರಾಗಿಲ್ಲಾಂತ ಅನಿಸ್ತಾ ಇದೆ.” ಎಂದ, ತನ್ನ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಪ್ಯಾಟರ್ಸನನಿಗೆ. “ನಾನು ಕೊಂಚ ನೆರಳಿನಲ್ಲಿ ವಿಶ್ರಮಿಸುತ್ತೇನೆ.” ಎಂದು ಅಲ್ಲೇ ಇದ್ದ ಒಂದು ಮರದ ನೆರಳಿಗೆ ಹೋದ. ಅವನು ಎರಡೂ ಕೈಗಳನ್ನು ತಲೆಗಾನಿಸಿ ಕೆಲವು ಸಮಯ ಮರದ ಕೆಳಗೆ ಕುಳಿತುಕೊಂಡ. ಅವನ ತಲೆ ಭಯಂಕರ ಸಿಡಿಯುತ್ತಿತ್ತು. ನಾಲಕ್ಕು ಕಾಲು ಗಂಟೆ ಹೊತ್ತಿನಲ್ಲಿ ಅವನ ಮೈಯೆಲ್ಲಾ ಅದುರತೊಡಗಿ ಅವನು ಅಲ್ಲೇ ವಾಲಿಕೊಂಡು ಬಿದ್ದ. ಅವನನ್ನು ಮೊದಲು ಟಾಮಿ ಬನ್ರ್ಸ್ ನೋಡಿದಾಗ ಹೊತ್ತು ಮೀರಿತ್ತು. ಅವನು ಪ್ಯಾಟರ್ಸನನಿಗೆ ಕೂಗಿದ.
ಎಲ್ಲರೂ ಬಿಲ್ಲಿ ವಾಲಿಕೊಂಡು ಬಿದ್ದಿದ್ದ ಮರದ ಬಳಿ ಓಡೋಡಿ ಬಂದರು. ಧಡಿಯ ಬಿಲ್ಲಿ ಸತ್ತು ಹೋಗಿದ್ದ.
“ರಾಮ್‍ಲಾಲ್, ನೀನು ಡಾಕ್ಟ್ರಲ್ಲವೇನಪ್ಪ? ಏನಾಯ್ತು ಬಿಲ್ಲಿಗೆ?”
ರಾಮ್‍ಲಾಲನಿಗೆ ಬಿಲ್ಲಿಯನ್ನು ಪರೀಕ್ಷಿಸುವುದು ಅನಗತ್ಯವಾಗಿತ್ತು. ಅವನಿಗೆ ಗೊತ್ತಿತ್ತು. ಅವನು ಬಿಲ್ಲಿಯ ನಾಡಿಯನ್ನು ಪರೀಕ್ಷಿಸಿ ಎದ್ದು ನಿಂತ. ಪ್ಯಾಟರ್ಸನನಿಗೆ ಅರ್ಥವಾಯಿತು.

“ನೀವು ಇಲ್ಲೇ ಇರಿ. ನಾನು ಮಿ. ಮ್ಯಾಕ್ವಿನ್‍ಗೆ ಪೋನ್ ಮಾಡಿ ಬರುತ್ತೇನೆ. ಹಾಗೆಯೇ ಅಂಬ್ಯುಲೆನ್ಸ್‍ಗೂ.” ಎನ್ನುತ್ತಾ ರಾಮ್‍ಲಾಲ್ ಮೇಯ್ನ್ ರೋಡಿನ ಕಡೆಗೆ ನಡೆದ.
ಅರ್ಧಗಂಟೆಯ ನಂತರ ಅಂಬ್ಯುಲೆನ್ಸ್ ಮೊದಲಿಗೆ ಬಂದಿತು. ಅವರೆಲ್ಲಾ ಅವನನ್ನು ಸ್ಟ್ರೆಚರಿಗೆ ಎತ್ತಿ ಹಾಕಿದರು. ಅಂಬ್ಯುಲೆನ್ಸ್ ಜನರಲ್ ಹಾಸ್ಪಿಟಲ್ ಕಡೆಗೆ ದೌಡಾಯಿಸಿತು. ಅಲ್ಲಿ ಬಿಲ್ಲಿ ಕ್ಯಾಮರೂನ್‍ನಿಗೆ, ಡೆಡ್ ಆನ್ ಅರೈವಲ್ ಎಂದು ನಮೂದಿಸಲಾಯಿತು. ಇದಾದ ಅರ್ಧ ಗಂಟೆಯ ನಂತರ ದುಗುಡ ತುಂಬಿದ ಮುಖವನ್ನೊತ್ತು ಮ್ಯಾಕ್ವಿನ್ ಅಲ್ಲಿಗೆ ಹಾಜರಾದ.
ಧಡಿಯ ಬಿಲ್ಲನದು ಅಸಹಜ ಮರಣವೆಂದು ತೀರ್ಮಾನಿಸಿ ಶವಪರೀಕ್ಷೆಗೆ ಕಳಿಸಲಾಯಿತು. ಅಂದು ಸಂಜೆಯೇ ಶವ ಪರೀಕ್ಷಾ ವರದಿಯೂ ಬಂದಿತು.
ಶವ ಪರೀಕ್ಷೆಯ ವರದಿಯಲ್ಲಿ ವಿಶೇಷವೇನೂ ಇರಲಿಲ್ಲ. ಬಿಲ್ಲಿ ಕ್ಯಾಮರೂನ್ 41 ವರ್ಷದವನಾಗಿದ್ದು ದೈಹಿಕವಾಗಿ ಸಧೃಡನಾಗಿದ್ದ. ಅವನ ದೇಹದ ಮೇಲೆ, ವಿಶೇಷವಾಗಿ ಹಸ್ತಗಳ ಮೇಲೆ ಗಾಯಗಳಾಗಿದ್ದು ಅದು ಅವನ ವೃತ್ತಿಗನುಗುಣವಾಗಿತ್ತು ಮತ್ತು ಅವನ ಸಾವಿಗೂ ಈ ಗಾಯಗಳಿಗೂ ಏನೂ ಸಂಬಂಧವಿರಲಿಲ್ಲ. ದೈಹಿಕ ಆಯಾಸ ಮತ್ತು ಬಿಸಿಲಿನ ತೀವ್ರತೆಯಿಂದಾಗಿ ಅವನಿಗೆ ಮಿದುಳಿನಲ್ಲಿ ರಕ್ತಸ್ರಾವವಾಗಿ ಸಾವುಂಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಈ ವರದಿಗನುಗುಣವಾಗಿ ಬಿಲ್ಲಿ ಕ್ಯಾಮರೂನನ ಸಾವು ಸಹಜ ಕಾರಣಗಳಿಂದಾಗಿದೆ ಎಂದು ಮರಣ ಧೃಡಿಕರಣ ಪತ್ರದಲ್ಲಿ ನಮೂದಿಸಲಾಯಿತು. ಆದ್ದರಿಂದ ಅವನ ಸಾವಿನ ಕುರಿತು ಯಾವುದೇ ತನಿಖೆಯಾಗಲಿಲ್ಲ.

ಗುರುವಾರದಂದು ಬಿಲ್ಲಿ ಕ್ಯಾಮರೂನನ ಅಂತ್ಯಕ್ರಿಯೆ ನಡೆಯಿತು. ಎಲ್ಲರೂ ಹೋಗಿದ್ದರು. ರಾಮ್‍ಲಾಲ್ ಹೋಗಲಿಲ್ಲ. ಅವನೊಂದು ಟ್ಯಾಕ್ಸಿಯನ್ನು ಹಿಡಿದು ಡ್ರೈವರನಿಗೆ ರಸ್ತೆಯಲ್ಲೇ ನಿಲ್ಲಿಸಿ ಅವರು ಕೆಲಸ ಮಾಡುತ್ತಿದ್ದ ಕೋಂಬರ್ ಡಿಸ್ಟಿಲರಿಯ ಬಳಿಗೆ ಬಂದ. ಅವರು ಟೀ ಕಾಯಿಸುತ್ತಿದ್ದ ಜಾಗದಲ್ಲಿ ನಿಂತು ಸುತ್ತ ಬೆಳೆದಿದ್ದ ಹುಲ್ಲಿನ ಕಡೆಗೆ ನೋಡಿದ. ಅವನ ಟಿಫನ್ ಬಾಕ್ಸಿನಿಂದ ಹಾರಿ ಬಿದ್ದಿದ್ದ ಹಾವು ಆ ಹುಲ್ಲಿನೊಳಗೆಲ್ಲೋ ಸೇರಿಕೊಂಡಿತ್ತು. ಅದನ್ನು ಉದ್ದೇಶಿಸಿ ರಾಮ್‍ಲಾಲ್ ತನ್ನಷ್ಟಕ್ಕೇ ಹೇಳಿಕೊಂಡ:
“ನನ್ನ ಉದ್ದೇಶವನ್ನೇನೋ ಈಡೇರಿಸಿದೆ. ಆದರೆ ನನ್ನ ಯೋಜನೆಯೇ ಬೇರೆಯಾಗಿತ್ತು. ನನ್ನ ಯೋಜನೆಯಂತೆ ನಾನು ನಿನ್ನನ್ನು ಸಾಯಿಸಿ ಕೋಂಬರ್ ನದಿಯಲ್ಲಿ ಎಸೆಯಬೇಕಾಗಿತ್ತು. ಅದಾಗಲಿಲ್ಲ. ನಿನ್ನ ಆಯಸ್ಸು ಗಟ್ಟಿಯಾಗಿತ್ತು. ಆದರೇನು? ಕೆಲವು ಸಮಯಕ್ಕಷ್ಟೇ! ನೀನು ಸಾಯುವುದಂತೂ ನಿಶ್ಚಿತ. ಇಂದಲ್ಲ, ನಾಳೆ! ಅದೂ ಒಂಟಿಯಾಗಿ! ನಿನಗೆ ಜೋಡಿ ಇಲ್ಲ! ನಿನ್ನ ಸಂತಾನ ಇಲ್ಲಿಗೇ ನಿಂತು ಹೋಯಿತು! ಐರ್ಲೆಂಡಿನಲ್ಲಿ ಹಾವುಗಳೇ ಇಲ್ಲವಂತೆ!!”

ಆದರೆ ಇದ್ಯಾವುದರ ಪರಿವೆಯೂ ಇಲ್ಲದ ರಾಜಪುಠಾನಿನ ಆ ಮಂಡಲದ ಹಾವು ತಾನು ಇಳಿದುಕೊಂಡಿದ್ದ ಬಿಲದಲ್ಲಿ ತನ್ನ ಸಹಜ ಸೃಷ್ಠಿ ಕಾರ್ಯದಲ್ಲಿ ಮಗ್ನವಾಗಿತ್ತು. ಕೋಲಿನಂತೆ ನೆಟ್ಟಗಾಗಿ ಅದರುತ್ತಿದ್ದ ಅದರ ಬಾಲದ ತುದಿಯಲ್ಲಿನ ಎರಡು ಚಿಪ್ಪುಗಳ ಮಧ್ಯೆ ಅಡಗಿದ್ದ ವಿಸರ್ಜನಾ ರಂಧ್ರ ಕಾರ್ಯೋನ್ಮುಖವಾಗಿತ್ತು. ಒಂದರ ಹಿಂದೆ ಒಂದು, ಅದರಷ್ಟೇ ವಿಷಕಾರಿಯಾಗಿದ್ದ ಡಜನ್ ಹಾವಿನ ಮರಿಗಳನ್ನು ಅದು ಹೊರಹಾಕುವ ಕಾರ್ಯದಲ್ಲಿ ತೊಡಗಿತ್ತು.

ಜೆ. ವಿ. ಕಾರ್ಲೊ

(ಕ್ರೈಮ್ ಥಿಲ್ಲರ್‍ಗಳಿಗೆ ಹೊಸ ಆಯಾಮವನ್ನು ತಂದು ಕೊಟ್ಟ ಫ್ರೆಡ್ರಿಕ್ ಫೊರ್ಸೈತ್ (1938-) ಬ್ರಿಟಿಶ್ ಲೇಖಕ. ಹತ್ತೊಂಭತ್ತನೇ ಕಿರಿಯ ವಯಸ್ಸಿಗೇ ರಾಯಲ್ ಏರ್ ಫೋರ್ಸಿನಲ್ಲಿ ಪೈಲಟ್‍ನಾಗಿ, 1958ರ ವರೆಗೆ ಸೇನೆಯಲ್ಲಿದ್ದು ಮುಂದೆ ಮೂರುವರೆ ವರ್ಷಗಳು ಭಾತ್ಮಿದಾರನಾಗಿ ಕೆಲಸ ಮಾಡಿದ. ಕೆಲವು ವರ್ಷಗಳು ಬಿಬಿಸಿಯಲ್ಲಿದ್ದು ಬಯಾಫ್ರ-ನೈಜೀರಿಯ ಯುದ್ಧ ಕುರಿತು ಬರೆದ Biafra Story ಅವನ ಮೊದಲ ಪುಸ್ತಕ. ಫ್ರಾನ್ಸ್ ಅಧ್ಯಕ್ಷ ಚಾಲ್ರ್ಸ್ ಡಿಗಾಲಾನ ಕಾಲ್ಪನಿಕ ಹತ್ಯೆಯ ಸಂಚಿನ ಕುರಿತ ಅವನ ಕಾದಂಬರಿ (ತದನಂತರ ಚಲನಚಿತ್ರ) Day of the Jackal ಅವನಿಗೆ ಅಪಾರ ಯಶಸ್ಸು, ಹಣ ಗಳಿಸಿ ಕೊಟ್ಟು ಅವನನ್ನು ಪೂರ್ಣಾವಧಿಯ ಲೇಖಕನನ್ನಾಗಿಸಿತು. ಅವನ ಮುಂದಿನ ಪುಸ್ತಕಗಳು Odessa File, The Dogs of War. ಈ ನಂತರ ಅವನ ಬಹಳಷ್ಟು ಪುಸ್ತಗಳು ಪ್ರಕಟವಾಗಿ ಅವನಿಗೆ ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿದೆ. ಪ್ರಸ್ತುತ ಕತೆಯನ್ನು ಅವನ No Come Backs ಕಥಾ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.)


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x