(ಕಾಲ್ಪನಿಕ)
ರಾತ್ರಿ ಒಂದು ಘಂಟೆ. ಶನಿವಾರವಾದ್ದರಿಂದ ಲ್ಯಾಪ್-ಟಾಪ್ ನಲ್ಲಿ ಯಾವುದೋ ಫಿಲಂ ನೋಡಿಕೊಂಡು ಮಲಗಿ ಒಂದರ್ಧ ಘಂಟೆ ಆಗಿ ನಿದ್ರೆ ಕಣ್ಣಿಗೆ ಹತ್ತುತ್ತಿತ್ತಷ್ಟೆ. ಪಕ್ಕದ ಕೋಣೆಯಿಂದ 'ಢಬ್' ಅಂತ ಏನೋ ಬಿದ್ದ ಸದ್ದು. ನಾವಿದ್ದ ಮನೆ 1ಬಿ.ಹೆಚ್.ಕೆ. ಅಂದ್ರೆ ಒಂದು ಕೋಣೆ, ಇನ್ನೊಂದು ಹಾಲ್, ಅದಕ್ಕೆ ಅಂಟಿಕೊಂಡಿರುವ ಅಡುಗೆಮನೆ ಮತ್ತು ಬಾತ್ರೂಮ್. ಆ ಮನೇಲಿ ನಾನು, ಮತ್ತೆ ನನ್ನ ಫ್ರೆಂಡು ಮುರಳಿ ಅಂತ ಇಬ್ರೂ ಒಟ್ಟಿಗೆ ಇರ್ತಾ ಒಂದು ವರ್ಷದ ಮೇಲಾಗಿತ್ತು. ರಾತ್ರಿ ನಾನು ಹಾಲ್ ನಲ್ಲಿ ಮಲಗಿದ್ರೆ, ಮುರಳಿ ಇನ್ನೊಂದು ಕೋಣೇಲಿ ಮಲಗ್ತಿದ್ದ. ಈಗ 'ಢಬ್' ಅಂತ ಶಬ್ದ ಬಂದಿದ್ದು ಅವನು ಮಲಗಿದ್ದ ಕೋಣೆಯಿಂದಾನೆ.
ಇವನಿನ್ನೂ ಮಲಗೇ ಇಲ್ಲ ಅನ್ಕೊಂಡು "ಏನ್ ಬೀಳಿಸಿದ್ಯೋ?" ಅಂದೆ.
ಆದ್ರೆ ಅವನದ್ದೇನೂ ಮಾತೇ ಇಲ್ಲ, ಬದಲಿಗೆ ನೆಲದ ಮೇಲೆ ಬರಿಕೈಯಲ್ಲಿ ಹೊಡೆದ ಹಾಗೆ ಶಬ್ದ ಬರೋಕೆ ಶುರು ಆಯ್ತು. ಸುಮ್ನೆ ಕಿವಿ ಹತ್ರ ಕೂಗೋದು, ಕತ್ತಲಲ್ಲಿ ಹೆದರಿಸೋದು ಮುರಳಿಯ ಇಂಥ ಹಲವು ಕುಚೇಷ್ಟೆಗಳ ಅರಿವಿದ್ದ ನನಗೆ 'ಇವನದ್ದು ಯಾವಾಗ್ಲೂ ಇದ್ದಿದ್ದೇ' ಆನ್ಕೊಂಡು ತಿರುಗಿ ಮಲಗೋಕೆ ಹೊರಟವ್ನು ಒಂದು ಸಲ ನೋಡೇ ಬಿಡೋಣ ಅಂತ ಮೊಬೈಲ್ ಟಾರ್ಚ್ ಆನ್ ಮಾಡಿ ಅವನ ರೂಮೊಳಗೆ ನೋಡ್ದೆ. ಮುರಳಿ ಹೊಟ್ಟೆ ಹಿಡ್ಕೊಂಡು ಒದ್ದಾಡ್ತಾ ಬಿದ್ದಿದ್ದ! ಒಂದು ಸಲಕ್ಕೆ ಹೆದರಿಕೆ ಆದ್ರೂ ಹೊಸದೊಂದು ನಾಟಕ ಶುರು ಮಾಡಿದಾನೆ ಅನ್ಕೊಂಡು "ಮತ್ತೆಂತ ಮಾರಾಯ ನಿಂದು?" ಅನ್ನುತ್ತಾ ಕೋಣೆಯ ಲೈಟ್ ಆನ್ ಮಾಡಿದೆ.
ಮುರಳಿ ನಾಟಕ ಮಾಡ್ತಿಲ್ಲ ಅಂತ ಗೊತ್ತಾಗೋಕೆ ಜಾಸ್ತಿ ಹೊತ್ತು ಹಿಡೀಲಿಲ್ಲ. ಅವನ ಪಕ್ಕದಲ್ಲೇ ನಮ್ಮ ಮನೇಲಿರೋ ಏನಿಲ್ಲಾ ಅಂದ್ರೂ ಐದರಿಂದ ಆರು ಕೆ.ಜಿ. ತೂಕವಿರೋ ಹಳೆಯ ಐರನ್ ಬಾಕ್ಸ್ ಬಿದ್ದಿತ್ತು. ಇವತ್ತು ರೂಮನ್ನೆಲ್ಲಾ ಕ್ಲೀನ್ ಮಾಡಿದವನು ನಾನೇ ಅದನ್ನು ತೆಗೆದು ಸ್ಲ್ಯಾಬ್ ನ ಮೇಲಿಟ್ಟಿದ್ದೆ. ತುಂಬಾ ತುದಿಯಲ್ಲಿ ಇಟ್ಟಿದ್ರಿಂದ ಅದು ಹೇಗೋ ಬ್ಯಾಲೆನ್ಸ್ ತಪ್ಪಿ ಮಲಗಿದ್ದ ಮುರಳಿಯ ಹೊಟ್ಟೆಯಮೇಲೆ ಬಿದ್ದಿತ್ತು!
ನನಗೆ ಒಂದು ಕ್ಷಣ ಏನು ಮಾಡಬೇಕು ಅಂತಾನೇ ಗೊತ್ತಾಗ್ಲಿಲ್ಲ. ಈ ರೀತಿ ಆದಾಗ ಪ್ರಥಮ ಚಿಕಿತ್ಸೆ ಏನು ಮಾಡಬೇಕು ಅಂತಾನೂ ನನಗೆ ಗೊತ್ತಿರ್ಲಿಲ್ಲ. ನಮ್ಮ ಬಿಲ್ಡಿಂಗ್ ಓನರ್ ಹತ್ತಿರ ಕಾರ್ ಇರುವುದು ನೆನಪಾಗಿ ಗ್ರೌಂಡ್ ಫ್ಲೋರಿನಲ್ಲಿರೋ ಅವರ ಮನೆಗೆ ಓಡಿದೆ. ಬಾಗಿಲು ಬಡಿದು ಅವರನ್ನು ಎಬ್ಬಿಸಿ ಕರೆದುಕೊಂಡು ಬರುವಷ್ಟರಲ್ಲಿ ಐದು ನಿಮಿಷದ ಮೇಲಾಗಿತ್ತು. ಅಷ್ಟರಲ್ಲಿ ನೋವು ತಡೆಯಲಾಗದೆಯೋ ಏನೋ ಮುರಳಿ ಮೂರ್ಛೆ ತಪ್ಪಿ ಬಿದ್ದಿದ್ದ! ಅವನನ್ನು ಎತ್ತಿಕೊಂಡು ಹೋಗಿ ಕಾರಿನಲ್ಲಿ ಕೂರಿಸಿಕೊಂಡು ಅಲ್ಲೇ ಒಂದು ಕಿ.ಮೀ. ದೂರದಲ್ಲಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಗಡಿಯಾರದ ಮುಳ್ಳುಗಳು ಇಪ್ಪತ್ತು ನಿಮಿಷ ಮುಂದೆ ಹೋಗಾಗಿತ್ತು.
ಘಟನೆಯ ಬಗ್ಗೆ ಕೇಳಿದ ಡಾಕ್ಟರ್ ಎಕ್ಸ್-ರೇ, ಬಾಡಿ ಸ್ಕ್ಯಾನಿಂಗ್, ಅದಲ್ಲದೇ ಇನ್ನೂ ಏನೇನೋ ಟೆಸ್ಟ್ ಮಾಡೋಕೆ ಅಂತ ಕರ್ಕೊಂಡು ಹೋದ್ರು. ನಮ್ಮ ಓನರನ್ನು ಮನೆಗೆ ಕಳಿಸಿ ಅಲ್ಲೇ ಇದ್ದ ವಿಸಿಟರ್ಸ್ ಕುರ್ಚಿಯ ಮೇಲೆ ಕೂತೆ. ಈಗ ಯೋಚಿಸುತ್ತಾ ಕೂತಾಗ ಮುರಳಿಗೆ ಹೀಗಾಗಲು ನಾನೇ ಕಾರಣ. ಆ ಐರನ್ ಬಾಕ್ಸನ್ನು ಸ್ಲ್ಯಾಬ್ ನ ಮೇಲೆ ಇಡದೇ ಹೋಗಿದ್ರೆ ಈ ಥರ ಆಗ್ತಾನೇ ಇರ್ಲಿಲ್ಲ ಅನ್ನಿಸುತಿತ್ತು. ಅದೇ ರೀತಿ ಯೋಚಿಸ್ತಾ ಕೂತಿದ್ರೆ ಅತ್ತು ಬಿಡ್ತಿದ್ನೇನೋ ಅಷ್ಟರಲ್ಲಿ ಹಿಂದಿನ ಕುರ್ಚಿಯಲ್ಲಿ ಕೂತಿದ್ದ ಯಾರೋ ಒಬ್ಬ ೩೦-೩೫ ವರ್ಷದ ಗಂಡಸೊಬ್ಬರು ಬಂದು ನನ್ನ ಪಕ್ಕ ಕೂತರು.
"ಸರ್! ನಿಮಗೆ ಏನು ತೊಂದರೆ ಇದೆಯೋ ಗೊತ್ತಿಲ್ಲ. ಎಲ್ಲಾ ಸರಿ ಹೋಗುತ್ತೆ. ಬೇಜಾರು ಮಾಡ್ಕೋಬೇಡಿ" ಅಂದ್ರು.
ಒಂದು ಸಲ ಮುಗುಳ್ನಕ್ಕು "ಥ್ಯಾಂಕ್ಸ್ ಫಾರ್ ಯುವರ್ ಕನ್ಸರ್ನ್" ಅಂದೆ.
"ಆಗಲೇ ಯಾರೋ ಒಬ್ಬರನ್ನು ನೀವು ಕರ್ಕೊಂಡು ಬರೋದು ನೋಡಿದೆ. ಆತ ನಿಮ್ಮ ಸ್ನೇಹಿತಾನಾ? ಏನಾಗಿದ್ದು ಅಂತ ಕೇಳಬಹುದಾ?"
"ಹೌದು ಸರ್. ನನ್ನ ರೂಮ್ ಮೇಟ್. ಏನಾಗಿದ್ದು ಅಂತ ಕೇಳಿದ್ರೆ ನಿಮಗೆ ನಗು ಬರ್ಬೋದು" ಅಂತ ಆಗಿದ್ದೆಲ್ಲಾ ಹೇಳ್ದೆ.
"ನೀವೇನು ಸರ್ ಇಲ್ಲಿ?" ಅಂದೆ.
"ನನಗೊಬ್ಬಳು ಮಗಳು, ಈ ಸಲ ಆರನೇ ಕ್ಲಾಸು. ಅದೇನೋ ಕ್ಲಾಸಲ್ಲಿ ಮ್ಯಾತ್ಸ್ ಟೀಚರ್, ಇವಳ ಫ್ರೆಂಡ್ಸ್ ಎಲ್ಲರೂ ಇವಳಿಗೇನೋ ಅಂದ್ರು ಅಂತ ನಮ್ಮ ಅಡಿಗೆ ಮನೇಲಿರೋ ಚಾಕು ತಗೊಂಡು ಕೈ ಕುಯ್ದುಕೊಂಡುಬಿಟ್ಟಿದಾಳೆ! ಇಲ್ಲೇ ಆಸ್ಪತ್ರೇಲಿ ಇರ್ತಾ ಎರಡು ದಿನ ಆಯ್ತು. ನನ್ನ ಹೆಂಡತಿ ಮಗು ಜೊತೆ ವಾರ್ಡ್ ಅಲ್ಲಿದಾಳೆ. ವಾರ್ಡ್ ಅಲ್ಲಿ ಒಬ್ಬರಿಗೇ ಇರೋಕೆ ಬಿಡೋದ್ರಿಂದ ನಾನಿಲ್ಲಿದೀನಿ"
"ಏನು?!! ಇಷ್ಟು ಚಿಕ್ಕ ವಯಸ್ಸಲ್ಲೇ ಈ ಥರದ ಯೋಚನೆಗಳಾ? ಈಗ ಆರಾಮಾಗಿದಾಳಾ ಮಗಳು?" ಅಂದೆ.
"ಈಗ ಹುಶಾರಾಗಿದಾಳೆ. ಇನ್ನೆರಡು ದಿನದಲ್ಲಿ ಡಿಸ್ಚಾರ್ಜ್ ಮಾಡ್ತಾರಂತೆ. ಆದ್ರೆ ಅವಳಿಗೆ ಈ ಥರದ ಯೋಚನೆ ಬರೋಕೆ ಕಾರಣ ಅವಳ ಖಾಯಿಲೆ! ಒಂದು ವಾರದ ಹಿಂದೆಯಿನ್ನೂ ಟ್ರೀಟ್ ಮೆಂಟ್ ಶುರು ಮಾಡಿದ್ರು"
"ಏನು ಪ್ರಾಬ್ಲಂ ಅಂತ ಕೇಳಬಹುದಾ ಸರ್" ಅಂದೆ ಅದನ್ನು ತಿಳ್ಕೋಬಹುದೋ ಇಲ್ವೋ ಅನ್ನೋ ಮುಜುಗರದಲ್ಲಿ.
"Dyscalculia* ಅಂತ ಒಂದು ಖಾಯಿಲೆ. ಮ್ಯಾತ್ಸ್ ಅಲ್ಲಿ ಸುಲಭದ ಲೆಕ್ಕಗಳೆಲ್ಲ ಇವಳಿಗೆ ಅರ್ಥ ಆಗೋದೇ ಇಲ್ಲ. ಉದಾಹರಣೆಗೆ ಕೂಡೋದು, ಕಳೆಯೋದು, ಮುಳ್ಳಿರೋ ಗಡಿಯಾರ ನೋಡಿ ಘಂಟೆ ಸರಿಯಾಗಿ ತಿಳಿಯದೇ ಇರೋದು, ಎಡ-ಬಲ ಸರಿಯಾಗಿ ಗುರುತಿಸೋಕೆ ಆಗದೇ ಇರೋದು ಈ ಥರ. ನಮಗೂ ಇದೊಂದು ಖಾಯಿಲೆ ಅಂತ ಗೊತ್ತಿರ್ಲಿಲ್ಲ. ಬೇರೆ ಎಲ್ಲಾದ್ರಲ್ಲೂ ಚುರುಕಾಗೇ ಇದ್ದಿದ್ರಿಂದ ಹೋಗ್ತಾ ಹೋಗ್ತಾ ಎಲ್ಲಾ ಅರ್ಥ ಮಾಡ್ಕೋತಾಳೆ ಅನ್ಕೊಂಡಿದ್ವಿ. ಇತ್ತೀಚೆಗೆ ನಾನು ಜನರಲ್ ಚೆಕಪ್ಪಿಗೆ ಅಂತ ಬಂದಾಗ ಡಾಕ್ಟರ್ ಹತ್ತಿರ ಸುಮ್ನೆ ಈ ವಿಷಯ ಹೇಳಿದಾಗ ಕರ್ಕೊಂಡು ಬರೋಕೆ ಹೇಳಿ, ಚೆಕ್ ಮಾಡಿ ಈ ಖಾಯಿಲೆ ಬಗ್ಗೆ ಹೇಳಿದ್ರು" ಅನ್ನುತ್ತಾ ನಿಟ್ಟುಸಿರು ಬಿಟ್ರು.
ನನಗೆ ಏನು ಹೇಳಬೇಕು ಅಂತ ಗೊತ್ತಾಗದೇ ಸುಮ್ಮನೇ ನೆಲವನ್ನು ನೋಡ್ತಾ ಕೂತಿದ್ದೆ.
ಅಷ್ಟರಲ್ಲಿ ಅವರೇ ಮತ್ತೆ "ಇವಳಿಗೆ ಮ್ಯಾತ್ಸ್ ಸರಿಯಾಗಿ ಬರೋಲ್ಲ ಅಂತ ಇವರ ಫ್ರೆಂಡ್ಸ್ ಅಲ್ಲಿ ಅದ್ಯಾರು, ಏನು ಹೇಳಿದ್ರೋ ಗೊತ್ತಿಲ್ಲ. ಅದನ್ನೇ ಮನಸಿಗೆ ಹಚ್ಚಿಕೊಂಡು ಈ ಥರ ಮಾಡ್ಕೊಂಡು ಬಿಟ್ಟಿದಾಳೆ ನೋಡಿ" ಅನ್ನುತ್ತಾ ಅಳೋಕೆ ಶುರು ಮಾಡಿ ಬಿಟ್ರು!
'ಗಂಡಸರು ಯಾವಾಗ್ಲೂ ಧೈರ್ಯವಾಗಿರಬೇಕು, ಏನೇ ಆದರೂ ಎದೆಗುಂದಬಾರದು, ಅಳಬಾರದು' ಅನ್ನೋ ಸಮಾಜದ ಮಧ್ಯೆ ಬೆಳೆದಿದ್ದ ನನಗೆ, ಯಾರೋ ಅಪರಿಚಿತನಾದ ನನ್ನೆದುರಿಗೆ ಅವರು ಅಳುವುದು ವಿಚಿತ್ರವಾಗಿ ಕಂಡಿದ್ದು ಆಶ್ಚರ್ಯವಲ್ಲ! ಬಹುಷಃ ಇದನ್ನೆಲ್ಲಾ ಅವರು ಯಾರೋ ಒಬ್ಬರ ಹತ್ತಿರ ಹೇಳಿಕೊಳ್ಳಬೇಕಾಗಿತ್ತೇನೋ! ಆದರೂ ಅವರ ಕಷ್ಟ ಕೇಳಿ ಅದರ ಮುಂದೆ ನನ್ನ ಕಷ್ಟ ಯಾವ ಲೆಕ್ಕ ಅನಿಸಿದ್ದು ಸುಳ್ಳಲ್ಲ!
ಅವರನ್ನು ಯಾವ ರೀತಿ ಸಮಾಧಾನ ಮಾಡಬೇಕು ಅನ್ನೋದು ಗೊತ್ತಾಗದೇ, "ಬನ್ನಿ, ಒಂದು ಲೋಟ ಕಾಫಿ ಕುಡಿದು ಬರೋಣ" ಅಂದೆ! ಅಲ್ಲೇ ಇದ್ದ ಆಸ್ಪತೆಯ ಕ್ಯಾಂಟೀನಿನಲ್ಲಿ ಕಾಫಿ ಕುಡಿದು ಬಂದು ಕುರ್ಚಿಯಲ್ಲಿ ಕೂರುತ್ತಿದ್ದೆವಷ್ಟೇ, ಅಷ್ಟರಲ್ಲಿ ಒಬ್ಬ ನರ್ಸ್ ಬಂದು "ಮುರಳಿಯವರ ಕಡೆಯವರು ಯಾರು ಇಲ್ಲಿ?" ಅಂದ್ರು.
ನಾನು ಎದ್ದು ನಿಂತೆ.
"ಪೇಶೆಂಟನ್ನು ಸ್ಪೆಶಲ್ ವಾರ್ಡಿಗೆ ಶಿಫ್ಟ್ ಮಾಡಿದಾರೆ. ನೀವು ಬಂದು ನೋಡಬಹುದು" ಅಂದ್ರು.
ನನ್ನ ಹೊಸ ಸ್ನೇಹಿತನಿಗೆ 'ಬರ್ತೀನಿ' ಅಂದು ನರ್ಸ್ ಹಿಂದೆಯೇ ಮುರಳಿಯಿದ್ದ ಕೋಣೆಗೆ ಹೋದೆ. ಮುರಳಿ ಎಚ್ಚರವಾಗಿ ಕಣ್ಣು ತೆರೆದು ಮಲಗಿದ್ದ!
"ಹೇಗಿದ್ಯೋ?!" ಅಂದೆ.
"ನೋವಿನ್ನೂ ಇದೆ. ಆಗ ಇದ್ದಷ್ಟು ಇಲ್ಲ" ಅಂದ.
"ಸಾರಿ ಕಣಾ! ಇದಕ್ಕೆಲ್ಲಾ ನಾನೇ ಕಾರಣ. ಆ ಐರನ್ ಬಾಕ್ಸನ್ನ ನಾನು ಕರೆಕ್ಟಾಗಿ ಇಡಬೇಕಿತ್ತು, ಅದು ಹೇಗೆ ಬಿತ್ತು ಅಂತಾನೆ ಗೊತ್ತಿಲ್ಲ ಮಾರಾಯ" ಅಂದೆ.
"ನಂಗೆ ಗೊತ್ತು ಹೇಗೆ ಬಿದ್ದಿದ್ದು ಅಂತ!"
"ಹೆಂಗೆ?!!"
"ನೀನು ಇವತ್ತು ಹೊಸಾ ಶರ್ಟ್ ತಗೊಂಡು ಬಂದ್ಯಲಾ? ಅದು ಅಲ್ಲೇ ನೆಲದ ಮೇಲೆ ಬಿದ್ದಿತ್ತು. ನಿನಗೆ ಸಿಗದೇ ರೂಮೆಲ್ಲಾ ಹುಡುಕಬೇಕು ಅಂತ ಮಲ್ಕೊಂಡಲ್ಲೇ ಅದನ್ನ ತೆಗೆದು ಸ್ಲ್ಯಾಬ್ ಮೇಲೆ ಹಾಕೋಕೆ ಹೋದೆ. ವಾಪಸ್ ಬಂತು, ಬರೀ ಶರ್ಟ್ ಅನ್ಕೊಂಡೆ, ಜೊತೆಗೆ ಐರನ್ ಬಾಕ್ಸೂ ಇದೆ ಅಂತ ಯಾವನಿಗ್ ಗೊತ್ತಿತ್ತು?" ಅಂದ.
"ಲೋಪರ್! ಸುಮ್ನೇ ನನ್ನಿಂದಾ ಹಿಂಗಾಯ್ತು ಅನ್ಕೊಂಡಿದ್ನಲ್ಲೋ. ಸಾಯಿ ಮಗನೆ! ನಿಂಗೆ ಹೀಗಾಗೋಕೆ ನೀನೆ ಕಾರಣ" ಅಂದೆ.
ನಗುತ್ತಾ "ಐರನ್ ಬಾಕ್ಸ್ ಮೈ ಮೇಲೆ ಬೀಳ್ಸ್ಕೊಂಡಿದೀನಪ್ಪಾ! ಇನ್ಮೇಲೆ 'ಐರನ್ ಮ್ಯಾನ್' ಅಂತ ಕರೀ ನನ್ನನ್ನ" ಅಂದ.
******
Good On i enjoyed reading
ಚೆನ್ನಾಗಿದೆ….ಐರನ್ ಮ್ಯಾನ್ ಕತೆ……