ಸುಮಾರು ಹತ್ತು ವರ್ಷಗಳ ಮಾತು. ಶಾರ್ಜಾದಲ್ಲಿ ನಡೆದ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಭಾರತದ ದೇವಮಾನವ ಬ್ಯಾಟ್ಸ್‌ಮನ್ ಸಚಿನ್‌ನ ಯಾವ ತಂತ್ರಕ್ಕೂ ದಾರಿ ಮಾಡಿಕೊಡದೆ ಬೇಲ್ಸ್ ಎಗರಿಸಿದ, ದ್ರಾವಿಡ್‌ನ ಗೋಡೆಗೆ ತೂತು ಹೊಡೆದ, ಬಾಲಂಗೋಚಿಗಳ ತಲೆ ಸವರಿಹಾಕಿದ ಒಲಾಂಗೋನನ್ನು ಹುಡುಕಲು ಅಲ್ಲಿನ ಸರ್ವಾಧಿಕಾರಿ ಸರ್ಕಾರ ಏಳುವರ್ಷಗಳ ಹಿಂದೆಯೇ ಗುಪ್ತಚರ ಸಂಸ್ಥೆಯೊಂದಕ್ಕೆ ಸುಪಾರಿ ನೀಡಿತ್ತು!
ಈ ಒಲಾಂಗೋ ಕಗ್ಗತ್ತಲ ಖಂಡ ಆಫ್ರಿಕಾದ ಕಾಡಿನ ಜಿಂಬಾಬ್ವೆಯ ಕುಗ್ರಾಮದವನು. ಬಡತನದ ದಿನಗಳಲ್ಲೇ ಹಾಡುಗಾರನಾಗಿ ರೂಪುಗೊಂಡು ರೋಡ್‌ಶೋಗಳನ್ನು ಕೊಡುತ್ತಲೇ, ನೀಗ್ರೋ ಜಾನಪದೀಯ ನೃತ್ಯದಿಂದ ಜನರನ್ನು ರಂಜಿಸುತ್ತಿದ್ದ. ಚಿಕ್ಕಂದಿನಿಂದ ತಾನು ಅತಿಯಾಗಿ ಪ್ರೀತಿಸುತ್ತಿದ್ದ ಕ್ರಿಕೆಟ್‌ನ ಆಕರ್ಷಣೆಯಿಂದ ಅಂತರರಾಷ್ಟ್ರೀಯ ತಂಡದಲ್ಲಿ ಪ್ರಮುಖ ಆಟಗಾರನಾಗುವ ಮಟ್ಟಕ್ಕೆ ಏರಿದ. ಅದರ ಫಲವಾಗಿ ಶಾರ್ಜಾದಲ್ಲಿ ನಡೆದ ತ್ರಿಕೋನ ಸರಣಿಯ ತಂಡದಲ್ಲಿ ಸ್ಥಾನ ಪಡೆದು, ಟೀಮ್ ಇಂಡಿಯಾದ ಮೇಲಿನ ಮತ್ತು ಕಡೇ ಕ್ರಮಾಂಕದ ಎಲ್ಲ ಆಟಗಾರರನ್ನು ಧೂಳೀಪಟ ಮಾಡಿದ. ಸಚಿನ್ ಎಷ್ಟೇ ತಿಣುಕಿದರೂ, ಒಲಾಂಗೋ ಎಸೆದ ಚೆಂಡುಮಾತ್ರ ತನ್ನದೇ ಆದ ಗತಿಯಲ್ಲಿ ಚಲಿಸಿ ತನ್ನ ಕೆಲಸ ಮುಗಿಸಿತ್ತು. ದೇವಮಾನವವನ್ನು ಔಟ್ ಮಾಡಿದ ಹಕ್ಕಿ ಮೈದಾನದಲ್ಲೆಲ್ಲಾ ಹಾರಾಡಿತು.
ಆದರೆ ಇದು ಕಳೆದ ಎರಡು ವರ್ಷಕ್ಕೇ ತನ್ನ ದೇಶದ ರಾಷ್ಟ್ರಾಧ್ಯಕ್ಷ ರಾಬರ್ಟ್ ಮಗಾಬೆಯ ಫ್ಯಾಸಿಸ್ಟ್ ನೀತಿಯನ್ನು ಪ್ರಶ್ನಿಸಿ, ದೇಶಭ್ರಷ್ಟನಾಗಿ ಓಡಿಹೋಗಿ ಇಂಗ್ಲೆಂಡಿನ ಯಾವುದೋ ಹಳ್ಳಿಯೊಂದರಲ್ಲಿ ಜೀವಿಸುತ್ತಿದ್ದಾನೆ. ಈ ಹೊತ್ತಿಗೆ ಆತ ತನ್ನ ಕ್ರಿಕೆಟ್ ಪ್ರೀತಿಯನ್ನು ಮರೆತಿದ್ದರೂ ಆಶ್ಚರ್ಯವಿಲ್ಲ! ೧೯೮೩ರಲ್ಲಿ ವಿಶ್ವಕಪ್‌ನಲ್ಲಿ ಸೂಪರ್ ಸಿಕ್ಸ್ ಪ್ರವೇಶಿಸಿದ್ದ ಈ ಜಿಂಬಾಬ್ವೆ ತಂಡ, ತನ್ನ ವರ್ಣ ಸಮಸ್ಯೆ, ಬಡತನ, ಸರ್ವಾಧಿಕಾರಿ ಧೋರಣೆಯ ಅಧಿಕಾರಿಗಳಿಂದ ಭೂತಕಾಲಕ್ಕೆ ಸರಿಯುವ ಲಕ್ಷಣ ಕಾಣಿಸುತ್ತಿದೆ. ವರ್ಣ ಸಮಸ್ಯೆ ಉಲ್ಭಣಗೊಂಡು ಬಿಳಿಯ ಆಟಗಾರರೆಲ್ಲಾ ಇಂಗ್ಲೆಂಡಿನ ಕೌಂಟಿ ತಂಡದಲ್ಲಿ ಸ್ಥಾನ ಪಡೆದುಕೊಂಡರು. ’ಬಿ’ ತಂಡದಲ್ಲಿದ್ದ ಅನನುಭವಿ ಆಟಗಾರರು ಸೀನಿಯರ್‌ಗಳಾದರು! ಒಂದು ಕಾಲಕ್ಕೆ ಅತ್ಯುತ್ತಮ ವಿಕೆಟ್‌ಕೀಪರ್ ಎಂದು ಹೆಸರು ಮಾಡಿದ್ದ ಆಂಡೀ ಫ್ಲವರ್, ಅಲ್ಪಸ್ವಲ್ಪ ಸಚಿನ್ ಶೈಲಿಯನ್ನೇ ಹೋಲುತ್ತಿದ್ದ ಮರ್ರೆ ಗುಡ್ವಿನ್, ಆಲ್‌ರೌಂಡರ್ ನೀಲ್ ಜಾನ್ಸನ್, ಹೀತ್ ಸ್ಟ್ರೀಕ್, ಬಲಗೈ ಬೌಲರ್ ಆಗಿದ್ದರೂ ಯಾವಾಗಲೂ ಅರೌಂಡ್ ದಿ ವಿಕೆಟ್ ಕಡೆಯಿಂದಲೇ ಬೌಲ್ ಮಾಡುತ್ತಿದ್ದ ಗ್ರಾಂಟ್ ಫ್ಲವರ್, ರಾಕೆಟ್ ವೇಗದಲ್ಲಿ ಚೆಂಡೆಸೆಯುತ್ತಿದ್ದ ಪುಮೆಲೆಲ್ಲೋ ಮುಬಾಂಗ್ವಾ, ಹೆನ್ರಿ ಒಲಾಂಗೋನಂಥ ಉತ್ತಮ ಆಟಗಾರರಿದ್ದ ತಂಡ ಇಂದು ಅವಸಾನದ ಅಂಚಿನಲ್ಲಿ ನರಳುತ್ತಿದೆ.
ಇಷ್ಟೆಲ್ಲಾ ಏಕೆ ಹೇಳಬೇಕಾಯಿತು ಎಂದರೆ; ಕೇವಲ ಫ್ಯಾಸಿಸ್ಟ್ ನೀತಿಯನ್ನು ಖಂಡಿಸಿದ ಮಾತ್ರಕ್ಕೆ ಆ ದೇಶ ಬಂಧನದ ಮತ್ತು ಮರಣದಂಡನೆಯ ಆದೇಶ ನೀಡುತ್ತದೆ. ಆ ಸ್ಥಿತಿ ಮಾದರಿ ಪ್ರಜಾಪ್ರಭುತ್ವದ ದೇಶವೆಂದು ಹೇಳಿಕೊಳ್ಳುವ ಈ ಅತಂತ್ರ ಭಾರತದಲ್ಲಿ ಇಲ್ಲಿನ ಸಮಸ್ಯೆಗಳ ವಿರುದ್ಧ ದನಿ ಎತ್ತು ಆಟಗಾರರು ಎಷ್ಟು ಜನ ಸಿಗುತ್ತಾರೆ? ಇಡೀ ವಿಶ್ವದಲ್ಲೇ ಹೆಚ್ಚಿನ ಅಭಿಮಾನಿಗಳನ್ನೂ, ಅದಕ್ಕಿಂತಲೂ ಹೆಚ್ಚಿನ ಶ್ರೀಮಂತಿಕೆಯ ಕ್ರಿಕೆಟ್ ರಾಷ್ಟ್ರ ಭಾರತ! ಅಭಿಮಾನಿಗಳಿಗೆ ಇರುವ ಕಿಂಚಿತ್ ದೇಶಪ್ರೇಮ ಇಲ್ಲಿ ಕ್ರಿಕೆಟ್ ಆಡುವ ಯಾವೊಬ್ಬ ಆಟಗಾರನಲ್ಲಿ ಕಾಣಿಸುವುದು ಕಷ್ಟಸಾಧ್ಯ. ಎಲ್ಲ ಆಟಗಾರರೂ ಹಣಕ್ಕಾಗಿ, ಅದರ ಥೈಲಿಗೆ ಮನಸೋತವರಂತೆ ವರ್ತಿಸುತ್ತಾರೆ. ಅದೇ ಹಣಕ್ಕಾಗಿ ತಮ್ಮನ್ನು ತಾವು ಹರಾಜಿಗಿಟ್ಟುಕೊಂಡ ಕೊಬ್ಬಿದ ದನಗಳಂತೆ ವರ್ತಿಸುತ್ತಿದ್ದಾರೆ.
ಆದ್ದರಿಂದಲೇ ಅನ್ನಿಸುತ್ತದೆ; ಸಾಮಾಜಿಕ ಕಳಕಳಿಯುಳ್ಳ ಆಟಗಾರರು ಹೊರದೇಶಗಳಲ್ಲಿ ಸಿಗುವಂತೆ ನಮ್ಮಲ್ಲಿ ಸಿಗುವುದು ಕಷ್ಟ, ಅಥವಾ ಇಲ್ಲವೇನೋ! ನ್ಯೂಜಿಲೆಂಡ್‌ನ ಕ್ರಿಸ್‌ಕ್ರೇನ್ಸ್, ಇಂದಿಗೂ ಕೋಲ್ಕತ್ತಾದ ಅನಾಥ ಮಕ್ಕಳ ಕಣ್ಣಲ್ಲಿ ಬೆಳಕಾಗಿರುವ ಸ್ವೀವ್ ವಾ, ಗಿಲ್‌ಕ್ರಿಸ್ಟ್, ಜರ್ಮನಿಯ ಮಾಜಿ ಟೆನಿಸ್ ಆಟಗಾರ ಬೋರಿಸ್ ಬೆಕ್ಕರ್, ತಮ್ಮ ದೇಶಕ್ಕೆ ಭೇಟಿಕೊಡುತ್ತಿದ್ದ ಯುದ್ಧದಾಹಿ ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್‌ನನ್ನು‘go back BU卐H’ ಎಂದು ವ್ಯಂಗ್ಯದಿಂದ ಪ್ರತಿಭಟಿಸಿದ ಅರ್ಜೆಂಟೈನಾದ ಜೀವಂತ ದಂತಕಥೆ ಡೀಗೋ ಮರಡೋನಾ, ಮೇಲೆ ಹೇಳಿದ ಒಲಾಂಗೋರಂಥ ಆಟಗಾರರ ಮುಂದೆ ತೆರಿಗೆ ವಿನಾಯತಿಗಾಗಿ ಸರ್ಕಾರಕ್ಕೆ ಅರ್ಜಿಹಾಕಿದ ಸಚಿನ್, ಬೇಡದ ಕಾರಣಗಳಿಗೆ ಸುದ್ಧಿಯಲ್ಲಿರುವ, ಬೇಕೆಂದಲ್ಲಿ ಕೋತಿಯಂತೆ (ಜಾಹೀರಾತಿನಲ್ಲೂ!) ನರ್ತಿಸುವ ಶ್ರೀಶಾಂತ್, ಜಗಳಕ್ಕೆ ಕಾಲುಕೆರೆದು ನಿಲ್ಲುವ ಹರ್ಬಜನ್, ಗಂಭೀರ್, ಮುಂಗೋಪಿ ಕೊಹ್ಲಿ, ರೇವ್‌ಪಾರ್ಟಿ ಮಾಡುವ ರಾಹುಲ್ ಶರ್‍ಮಾರಂಥವರು ಕಾಣಸಿಗುತ್ತಾರೆ!
ಇದೀಗ ಕರ್ನಾಟಕವೂ ಸೇರಿದಂತೆ ಭಾರತದ ಅನೇಕ ರಾಜ್ಯಗಳು ಬರದಿಂದ ತತ್ತರಿಸುತ್ತಿವೆ, ಇನ್ನು ಮಳೆಗಾಲ ಶುರುವಾದರೆ ಒರಿಸ್ಸಾ ಮತ್ತು ಆಂಧ್ರಗಳಲ್ಲಿ ಭೀಕರ ಪ್ರವಾಹವಾಗುತ್ತದೆ. ಕೋಟ್ಯಂತರ ರೂಪಾಯಿಯ ಬೆಳೆ, ಬರದಿಂದಲೂ, ಪ್ರವಾಹದಿಂದಲೂ ನಾಶವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಈ ಕ್ರಿಕೆಟರ್‌ಗಳಿಗೆ ಕೊಪ್ಪರೆಗಟ್ಟಲೆ ಹಣ ಸುರಿದು ಕಾಡುದನಗಳ ಹಾಗೆ ಕೊಬ್ಬಲು ಬಿಟ್ಟು, ಇಡೀ ಭಾರತವನ್ನೇ ಇಬ್ಬಾಗ ಮಾಡುವ ಪ್ರಾದೇಶಿಕತೆಯ ಅಂಧಾಭಿಮಾನ ಅಮಲನ್ನು ಏರಿಸುವ ಈ ಐಪಿಎಲ್ ಕ್ರಿಕೆಟ್ ದೇಶವನ್ನು ಹುಚ್ಚಿನ ಪಿತ್ತವನ್ನು ನೆತ್ತಿಗೇರಿಸಿ ಅದಾಗಲೇ ಐದು ವರ್ಷಗಳು ಕಳೆದವು. ಬರೀ ಕ್ರಿಕೆಟ್‌ಅನ್ನು ಮಾತ್ರ ಪೋಷಿಸಿ, ಪೊರೆದಿರುವ ಸರ್ಕಾರಗಳು ನಮ್ಮ ರಾಷ್ಟ್ರೀಯ ಕ್ರೀಡೆಯಾದ ಹಾಕಿಯನ್ನು ಒಲಂಪಿಕ್ ಕ್ರೀಡಾಕೂಟದಿಂದಲೇ ಹೊರನಡೆಯುವಂತೆ ಮಾಡಿ ಸಾಧನೆ ಮೆರೆದಿದೆ.
ಎಲ್ಲಾ ಹುಚ್ಚಾಟಗಳಿಗೂ ಒಂದಲ್ಲಾ ಒಂದು ದಿನ ಅಂತ್ಯ ಇದ್ದೇ ಇರುತ್ತದಂತೆ; ಈ ಹುಚ್ಚಾಟಕ್ಕೆ ಎಂದು ಮುಕ್ತಿಯೋ?
-ವಿ.ಆರ್.ಕಾರ್ಪೆಂಟರ್
ತುಂಬಾ ಸತ್ವಪೂರ್ಣ ಬರಹ ಸರ್…..
ದೇಶಾಭಿಮಾನ,ಮಾನವೀಯತೆಗಳನ್ನು ಬಡಿದೆಬ್ಬಿಸುತ್ತದೆ…
ಆದರೆ ನಾವೂ ಕುರಿಗಳಂತೆ ಅವರ ಆಟವನ್ನೇ ಅನುಸರಿಸುತ್ತೇವೆ..ಕೇಕೆ ಹಾಕುತ್ತೇವೆ….
ನಮ್ಮದೂ ತಪ್ಪಿದೆ…..
ಉತ್ತಮ ಲೇಖನ … ಸಂಧರ್ಭಕ್ಕನುಸಾರವಾಗಿ ಬರೆದಿದ್ದೀರಿ .. ಇಷ್ಟವಾಯಿತು . ತಮಗೆ ಧನ್ಯವಾದಗಳು
ಇಷ್ಟೆಲ್ಲಾ ಏಕೆ ಹೇಳಬೇಕಾಯಿತು ಎಂದರೆ; ಕೇವಲ ಫ್ಯಾಸಿಸ್ಟ್ ನೀತಿಯನ್ನು ಖಂಡಿಸಿದ ಮಾತ್ರಕ್ಕೆ ಆ ದೇಶ ಬಂಧನದ ಮತ್ತು ಮರಣದಂಡನೆಯ ಆದೇಶ ನೀಡುತ್ತದೆ. ಆ ಸ್ಥಿತಿ ಮಾದರಿ ಪ್ರಜಾಪ್ರಭುತ್ವದ ದೇಶವೆಂದು ಹೇಳಿಕೊಳ್ಳುವ ಈ ಅತಂತ್ರ ಭಾರತದಲ್ಲಿ ಇಲ್ಲಿನ ಸಮಸ್ಯೆಗಳ ವಿರುದ್ಧ ದನಿ ಎತ್ತು ಆಟಗಾರರು ಎಷ್ಟು ಜನ ಸಿಗುತ್ತಾರೆ? ಇಡೀ ವಿಶ್ವದಲ್ಲೇ ಹೆಚ್ಚಿನ ಅಭಿಮಾನಿಗಳನ್ನೂ, ಅದಕ್ಕಿಂತಲೂ ಹೆಚ್ಚಿನ ಶ್ರೀಮಂತಿಕೆಯ ಕ್ರಿಕೆಟ್ ರಾಷ್ಟ್ರ ಭಾರತ! ಅಭಿಮಾನಿಗಳಿಗೆ ಇರುವ ಕಿಂಚಿತ್ ದೇಶಪ್ರೇಮ ಇಲ್ಲಿ ಕ್ರಿಕೆಟ್ ಆಡುವ ಯಾವೊಬ್ಬ ಆಟಗಾರನಲ್ಲಿ ಕಾಣಿಸುವುದು ಕಷ್ಟಸಾಧ್ಯ. ಎಲ್ಲ ಆಟಗಾರರೂ ಹಣಕ್ಕಾಗಿ, ಅದರ ಥೈಲಿಗೆ ಮನಸೋತವರಂತೆ ವರ್ತಿಸುತ್ತಾರೆ. ಅದೇ ಹಣಕ್ಕಾಗಿ ತಮ್ಮನ್ನು ತಾವು ಹರಾಜಿಗಿಟ್ಟುಕೊಂಡ ಕೊಬ್ಬಿದ ದನಗಳಂತೆ ವರ್ತಿಸುತ್ತಿದ್ದಾರೆ.>>>>>
ನಿಜ ಅಂತಹ ಆಟಗಾರರು ನಮ್ಮಲ್ಲಿ ಸಿಗಲಾರರು, ದೇಶಪ್ರೇಮಕ್ಕೆ ಹೊರತಾದವರು ಆಟಗಾರರಷ್ಟೆ ಅಲ್ಲ ಎಲ್ಲ ಕ್ಷೇತ್ರದಲ್ಲು ಇದ್ದಾರೆ, ರಾಜಕೀಯದಲ್ಲಿ, ಸಾಹಿತ್ಯದ ಜಗತಿನಲ್ಲಿ, ಕ್ರೀಡಾ ಕ್ಷೇತ್ರದಲ್ಲಿ, ವ್ಯಾಪಾರ ವಹಿವಾಟಿನಲ್ಲಿ, ಸರ್ಕಾರದ ನೌಕರರಲ್ಲಿ , ಎಲ್ಲಡೆಯು ಇದ್ದಾರೆ. ಏಕೆಂದರೆ ಇಂದು ಭಾರತದಲ್ಲಿ ಹಣಸಂಪಾದನೆಯೊಂದೆ ಗುರಿ ಉಳಿದಿದ್ದೆಲ್ಲ ಲೆಕ್ಕಕ್ಕಿಲ್ಲ ಅನ್ನುವಂತಾಗಿದೆ, ಹಣ ಸಂಪಾದನೆಯ ಮಾರ್ಗಯಾವುದಾದರು ಸರಿ ಎಂತ ಅಸಹ್ಯ ದಾರಿಯಾದರು ಸರಿ ಅನ್ನುವರೆ ಎಲ್ಲಡೆ ತುಂಬಿದ್ದಾರೆ. ತಾವು ತಮ್ಮ ಕುಟುಂಬದವರು ಮಾತ್ರ ಉಳಿಯಬೇಕೆಂದು ಬಯಸುವ ಈ ಮಂದಿ ಮುಂದಿನ ಪೀಳಿಗೆಗೆ ಮಾರಕರಾಗಿದ್ದಾರೆ, ಹೀಗಾಗಿ ಎಲ್ಲವು ನಾಶವಾಗುತ್ತಿದೆ, ನೆಲ ಜಲ ಕಾಡು ಎಲ್ಲವು ಸ್ವಾಹ. ಕ್ರಿಕೇಟಿಗನು ಹೇಗಾದರು ಸರಿ ತನ್ನ ಮಗನನ್ನು ಅಲ್ಲಿ ಪ್ರತಿಷ್ಟೆ ಮಾಡಲು ಪ್ರಯತ್ನಪಡುವನು ಹಾಗೆ ಎಲ್ಲ ಕ್ಷೇತ್ರದವರು ಸಿನಿಮಾದವರು ಹೀಗೆ… ಕೊನೆ ಇಲ್ಲದ
ನಿಜ ಸರ್….ಓಲಾಂಗೋನಂತಹ ನಾಡಪ್ರೇಮಿಗಳು ಇಂದು ವಿಶ್ವದ ಎಲ್ಲಾ ದೇಶಗಳಿಗೆ ಬೇಕಾಗಿದ್ದಾರೆ. ತನ್ನ career ಗೆ ಪೆಟ್ಟು ಬಿದ್ದರೂ ಅಡ್ಡಿಯಿಲ್ಲ ತನ್ನ ನಾಡ ಜನರಿಗೆ ಆಗುತ್ತಿರುವ ಅನ್ಯಾಯಕ್ಕಾಗಿ ಧನಿಯೆತ್ತಿದ ಮಹಾನ್ ಸ್ವಾಭಿಮಾನಿಯ ಕುರಿತು ಹೇಳಿರುವುದಕ್ಕೆ ಲೇಖಕರು ಅಭಿನಂಧನಾರ್ಹರು. ಅಂತಹ ಸ್ವಾಭಿಮಾನಿ ಕ್ರೀಡಾಪಟುಗಳು ನಮ್ಮಲ್ಲಿ ಯಾರಾದರೂ ಇದ್ದಾರೆಯೇ ಎಂದು ದೀಪದ ಬೆಳಕಿನಲ್ಲಿ ಹುಡುಕಾಡಬೇಕಾದ ದುರ್ಧರ ಪ್ರಸಂಗಕ್ಕೆ ಸಾಕ್ಷಿಯಾಗಿದ್ದೇವೆ ಎಂಬ ಹಳಹಳಿಕೆ ದುರ್ಧೈವಿಗಳಾದ ನಮ್ಮ ಪಾಲಿಗಿದೆ. ಉತ್ತಮ ಮತ್ತು ಸಾಂದರ್ಭಿಕ ಲೇಖನ…
True!!
ಹೌದು ಸರ್.. ಸಖತ್ತಾದ ಬರಹ.
ನಮ್ಮ ಕ್ರಿಕೆಟ್ಟಿಗರಲ್ಲಿ ಕಿಂಚಿತ್ತಾದರೂ ದೇಶಪ್ರೇಮ ಬಯಸಿದರೆ ಅದೇ ತಪ್ಪೇನೋ ಎಂಬತ್ತಾಗುತ್ತದೆ. ಕ್ಯಾನ್ಸರ್ ಫೌಂಡೇಶನ್ ಗಳನ್ನ ಸ್ಥಾಪಿಸೋ ಹೊರ ದೇಶದವರ ಮಾದರಿಯಿರಲಿ ಒಂದು ಆಸ್ಪತ್ರೆಯನ್ನೂ ಸ್ಥಾಪಿಸೋ ಭಾವವಿಲ್ಲ. ನನ್ನ ದುಡ್ಡು, ನಾನೇನಾದರೂ ಮಾಡ್ಕೋತೀನಿ, ತಲೆ ಒಡೆದು ಸಂಪಾದಿಸಿದ್ದೇನೂ ಅಲ್ಲ ಅನ್ನೋ ತರದ ಮಾತುಗಳಿಗೆ ಏನನ್ನುವುದು..
ಈ ತರದ ವಾದಗಳು ಮುಗಿಯುವುದೇ ಇಲ್ಲವೇನೋ 🙁
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು…
ನನ್ನ ಈ ಲೇಖನದಲ್ಲಿ ಒಂದು ತಪ್ಪಾಗಿದೆ ಅದಕ್ಕಾಗಿ ವಿಷಾದಿಸುತ್ತೇನೆ. ಆ ತಪ್ಪೇನೆಂದರೆ, 1983ರ ವಿಶ್ವಕಪ್ ನಲ್ಲಿ ಜಿಂಬಾಬ್ವೆ ತಂಡ ಸೆಮಿಫೈನಲ್ ಪ್ರವೇಶಿಸಿತ್ತು ಎಂದು ಬರೆದಿದ್ದೇನೆ. ಅದರ ಬದಲಾಗಿ ಅದು 1999 ಇಂಗ್ಲೆಂಡಿನಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾದಂತಹ ಬಲಿಷ್ಟ ತಂಡಗಳನ್ನು ಬಗ್ಗು ಬಡಿದು ಸೂಪರ್ ಸಿಕ್ಸ್ ಹಂತಕ್ಕೆ ತಲುಪಿತ್ತು.