ರಿಕ್ವೀಮ್ ಫಾರ್ ಅ ಡ್ರೀಮ್
ಈ ಚಿತ್ರ ಮಾದಕ ವ್ಯಸನಕ್ಕೆ ಸಿಲುಕಿ ಛಿದ್ರಗೊಳ್ಳುವ ನಾಲ್ಕು ಜನರ ಜೀವನದ ಕಥಾನಕ. ಈ ಚಿತ್ರದ ಕೊನೆಯಲ್ಲಿ ಬರುವ ದೃಶ್ಯ ಬಹಳ ಶಕ್ತಿಶಾಲಿಯಾಗಿದೆ. ಆ ನಾಲ್ಕೂ ಜನರ ಬದುಕು ಹೇಗೆ ನರಕಸದೃಶವಾಯಿತು ಅಂತ ಒಬ್ಬೊಬ್ಬರ ಶಾಟ್ ಗಳನ್ನು ಒಂದಾದಮೇಲೊಂದು ಜೋಡಿಸಿ ತೋರಿಸಿದ್ದಾರೆ ನಿರ್ದೇಶಕ ಆರೋನಾಫ್ಸ್ಕಿ. ನಿಧಾನಗತಿಯಲ್ಲಿ ಸಾಗುವ ದೃಶ್ಯಗಳ ಜೊತೆಯಲ್ಲೇ ವಿಷಾದಭಾವದ ಸಂಗೀತ. ಬರಬರುತ್ತಾ ಸಂಕಲನ ವೇಗ ಪಡೆದುಕೊಳ್ಳುತ್ತದೆ, ಸಂಗೀತ ತಾರಕಕ್ಕೇರುತ್ತದೆ. ಅಷ್ಟೇ ಪರಿಣಾಮಕಾರಿಯಾಗಿ ಮೂಡಿರುವುದು ಇದರ ನಂತರದ ದೃಶ್ಯ. ಒಬ್ಬ ಮಾದಕ ವ್ಯಸನಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟಾದ ನಂತರ ಅವಳ ಸ್ನೇಹಿತೆಯರು ಅವಳನ್ನು ನೋಡಲು ಆಸ್ಪತ್ರೆಗೆ ಬರುತ್ತಾರೆ. ಆ ಮಾದಕ ವ್ಯಸನಿಯನ್ನು ನಮಗೆ ತೋರಿಸಿ ಬೆಚ್ಚಿಬೇಳಿಸುವುದಿಲ್ಲ. ಬದಲಿಗೆ ಅವಳ ಸ್ನೇಹಿತೆಯರ ಶಾಕ್ ಆದ ಮುಖಗಳನ್ನು ಚಿತ್ರಿಸಿ ನಮ್ಮಲ್ಲಿ ದೊಡ್ಡ ಭಾವತೀವ್ರತೆಯನ್ನು ಉಂಟುಮಾಡುತ್ತಾರೆ.
ರೆಸೆರ್ವೊಇರ್ ಡಾಗ್ಸ್
ನಿರ್ದೇಶಕ ಟೆರಂಟಿನೋ ಪ್ರತಿಭೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಚಿತ್ರ ಇದು. ಬ್ಯಾಂಕ್ ಲೂಟಿ ಮಾಡಲು ಹೋದ ತಂಡದ ಪ್ಲಾನ್ ವಿಫಲವಾದಾಗ ಆ ಗುಂಪಿನ ಸದಸ್ಯರ ನಡುವೆ ನಡೆಯುವ ಡ್ರಾಮಾ ಈ ಚಿತ್ರದ ಕಥೆ. ಚಿತ್ರಕಥೆಯ ದೃಷ್ಟಿಯಿಂದಲೂ, ಶಾಟ್ ಕಂಪೋಸಿಶನ್ ದೃಷ್ಟಿಯಿಂದಲೂ ಒಂದು ಒಳ್ಳೆಯ ಉದಾಹರಣೆ. ಮೊದಲ ದೃಶ್ಯದಲ್ಲಿ ಏಳೆಂಟು ಜನ ಒಂದು ಹೋಟೆಲಿಗೆ ತಿಂಡಿ ತಿನ್ನಲು ಬಂದಿರುತ್ತಾರೆ. ಹೋಟೆಲುಗಳಲ್ಲಿ ಸರ್ವರ್ ಗಳಿಗೆ ಟಿಪ್ ಕೊಡಬೇಕೇ ಬೇಡವೇ ಅನ್ನುವುದರಿಂದ ಹಿಡಿದು ಯಾವುದೋ ಒಂದು ಹಾಡಿನ ಅರ್ಥ ಏನು ಅನ್ನುವವರೆಗೆ ಎಲ್ಲಾ ವಿಷಯಗಳ ಬಗ್ಗೆ ಹರಟೆ ಹೊಡೆಯುತ್ತಾರೆ. ಆ ದೃಶ್ಯ ನೋಡುವಾಗ ಇವರೆಲ್ಲಾ ಯಾರು, ಯಾವುದರ ಬಗ್ಗೆ ಮಾತಾಡುತ್ತಿದ್ದಾರೆ ಅಂತ ಗೊತ್ತೇ ಆಗುವುದಿಲ್ಲ. ಚಿತ್ರ ನೋಡಿಯಾದ ಮೇಲೆ ಈ ದೃಶ್ಯವನ್ನು ಮತ್ತೊಮ್ಮೆ ನೋಡಿ. ಈ ದೃಶ್ಯ ಬಹುತೇಕ ಆ ಎಲ್ಲಾ ಪಾತ್ರಗಳ ಗುಣಾವಗುಣಗಳ ಪರಿಚಯ ಮಾಡಿಸಿದಂತಿದೆ, ಜೊತೆಗೆ ಚಿತ್ರದಲ್ಲಿ ಮುಂದೆ ಬರುವ ಸನ್ನಿವೇಶಗಳ ಸುಳಿಯನ್ನೂ ಕೊಡಲಾಗಿದೆ.
ಗಾಡ್ ಫಾದರ್
ಈ ಚಿತ್ರದ “ಬ್ಯಾಪ್ಟಿಸಮ್” ಸೀನ್ ಬಹಳ ಜನರ ಮೆಚ್ಚುಗೆಯನ್ನು ಪಡೆದಿರುವ ಸೀನ್. ನಿರ್ದೇಶಕ ಕಪೋಲ ಇದರ ಶ್ರೇಯಸ್ಸನ್ನು ಸಂಕಲನಕಾರರಿಗೆ ಸಲ್ಲಿಸಿದ್ದಾನೆ ಅಂತ ಓದಿದ ನೆನಪು. ಕಾರ್ಲಿಯೋನೆ ಮಾಫಿಯಾ ಕುಟುಂಬದ ಮೈಕಲ್ ತನ್ನ ತಂಗಿಯ ಮಗನ ಬ್ಯಾಪ್ಟಿಸಮ್ ಗೋಸ್ಕರ ಚರ್ಚಿಗೆ ಬಂದಿದ್ದಾನೆ. ಅದೇ ವೇಳೆಯಲ್ಲಿ ಅವನ ಸಹಚರರು ವಿರೋಧಿ ಗುಂಪಿನ ಪ್ರಮುಖ ಸದಸ್ಯರನ್ನು ಬೇರೆ ಬೇರೆ ಕಡೆಗಳಲ್ಲಿ ಸಾಯಿಸುತ್ತಿದ್ದಾರೆ. ಇಲ್ಲಿ “ಮಾಂಟೇಜ್” ತಂತ್ರವನ್ನು ಬಳಸಲಾಗಿದೆ. ಚರ್ಚಿನಲ್ಲಿ ಪಾದ್ರಿ ಹೇಳುತ್ತಿರುವ ಮಂತ್ರದ ಒಂದು ಸಾಲು, ತಕ್ಷಣ ಬೇರೊಂದು ಕಡೆ ನಡೆಯುತ್ತಿರುವ ಕೊಲೆಯ ದೃಶ್ಯ, ಮತ್ತೆ ಚರ್ಚ್ ಹೀಗೆ. ಚರ್ಚಿನ ಶಾಂತ ನಿಶ್ಶಬ್ದ ಮತ್ತು ಕೊಲೆಗಳ ಭೀಕರತೆಯನ್ನು ಓವರ್ ಲ್ಯಾಪ್ ಮಾಡಿರುವ ರೀತಿ ನಿಜಕ್ಕೂ ರೋಮಾಂಚಕಾರಿ ಅನುಭವ ಕೊಡುತ್ತದೆ.
ಬ್ಲೋ ಅಪ್
ಲಂಡನ್ನಿನ ಒಬ್ಬ ಫ್ಯಾಶನ್ ಫೋಟಾಗ್ರಫರ್ ಪಾರ್ಕಿನಲ್ಲಿ ತೆಗೆದಿದ್ದ ಫೋಟೋವೊಂದರಲ್ಲಿ ಕೊಲೆಯೊಂದು ದಾಖಲೆಯಾಗಿದೆಯಾ ಅಂತ ಅನುಮಾನಿಸತೊಡಗುತ್ತಾನೆ. ತಲೆ ಕೆಡಿಸಿಕೊಂಡಷ್ಟೂ ಸಮಸ್ಯೆ ಇನ್ನೂ ಜಟಿಲವಾಗುತ್ತಾ ಹೋಗುತ್ತದೆ. ನಿಜ ಯಾವುದು, ಭ್ರಮೆ ಯಾವುದು ಅಂತ ಗೊಂದಲಕ್ಕೆ ಬೀಳುತ್ತಾನೆ. ಚಿತ್ರದ ಕ್ಲೈಮ್ಯಾಕ್ಸ್ ಬಹಳ ಕಾವ್ಯಾತ್ಮಕವಾಗಿದೆ. ಮೈಮ್ ಗುಂಪೊಂದು ಟೆನ್ನಿಸ್ ಆಡುವಂತೆ ನಟಿಸುತ್ತಿರುತ್ತಾರೆ. ಖಾಲಿ ಕೈಯಲ್ಲಿ ಬ್ಯಾಟ್ ಹಿಡಿದಿರುವಂತೆ, ಗಾಳಿಯಲ್ಲಿ ಕೈ ಬೀಸಿ, ಇಲ್ಲದಿರುವ ಚೆಂಡ ಹೊಡೆಯುತ್ತಿರುತ್ತಾರೆ. ಈ ಫೋಟೋಗ್ರಾಫರ್ ಬಳಿ "ಇಲ್ಲದ" ಚೆಂಡು ಬಿದ್ದಾಗ ಅವನಿಗೆ ಅದನ್ನು ಎತ್ತಿಕೊಡುವಂತೆ ಕೇಳುತ್ತಾರೆ. ಆಗ ಅವನು ಏನು ಮಾಡಬೇಕೆಂಬ ಯೋಚನೆಗೆ ಬೀಳುತ್ತಾನೆ. ಕಡೆಯಲ್ಲಿ ನೆಲದ ಮೇಲೆ ಬಿದ್ದಿರುವ "ಇಲ್ಲದ" ಬಾಲನ್ನು ಅವರಿಗೆ ತೆಗೆದು ಕೊಡುತ್ತಾನೆ. ಭ್ರಮೆಯೋ, ವಾಸ್ತವವೋ, ತನ್ನ "ಸತ್ಯ"ವನ್ನು ತಾನೇ ನಿರ್ಧರಿಸುತ್ತಾನೆ.
ಗುಡ್ ವಿಲ್ ಹಂಟಿಂಗ್
ವಿಲ್ ಹಂಟಿಂಗ್ ಪ್ರತಿಷ್ಠಿತ ಕಾಲೇಜಿನಲ್ಲಿ ಕೆಲಸಗಾರನಾಗಿರುತ್ತಾನೆ. ಆದರೂ ಹುಟ್ಟಿನಿಂದಲೇ ಗಣಿತದಲ್ಲಿ ಜೇನಿಯಸ್, ಯಾವುದೇ ತರಬೇತಿಯನ್ನು ಪಡೆಯದೇ. ಸದಾ ಓತ್ಲಾ ಹೊಡೆಯುವ ಗೆಳೆಯರ ಜೊತೆಯಲ್ಲೇ ಒಡನಾಟ. ಒಬ್ಬ ಗಣಿತದ ಪ್ರಾಧ್ಯಾಪಕ ಇವನ ಪ್ರತಿಭೆಯನ್ನು ಗುರುತಿಸಿ, ಕಡೆಗೆ ನ್ಯಾಶನಲ್ ಸೆಕ್ಯೂರಿಟಿ ಏಜೆನ್ಸಿಗೆ ಕೆಲಸಕ್ಕೆ ಸೇರಿಸಲು ಕರೆದೊಯ್ಯುತ್ತಾನೆ. ಅಲ್ಲಿ ಕೆಲಸ ಮಾಡಲು ಆಸಕ್ತಿ ಇರದ ವಿಲ್ ತಾನು ಯಾಕೆ ಅಲ್ಲಿ ಕೆಲಸ ಮಾಡುವುದಿಲ್ಲ ಅಂತ ಉದ್ದನೆಯ ಭಾಷಣ ಕೊಡುತ್ತಾನೆ. "ನನಗೆ ಒಂದು ಕೋಡ್ ಕೊಡುತ್ತೀರ, ಅದನ್ನು ಡೀಕೋಡ್ ಮಾಡಿದ ಮಾಹಿತಿಯಿಂದ ಇನ್ನೊಂದು ದೇಶದ ಮೇಲೆ ಧಾಳಿ ಮಾಡುತ್ತೀರ, ನಂತರ ಆ ದೇಶದ ಜನ ಕಮ್ಮಿ ದುಡ್ಡಿಗೆ ಕೆಲಸ ಮಾಡುತ್ತಾರೆ ಅಂತ ಇಲ್ಲಿಯ ಕೆಲಸಗಳೆಲ್ಲಾ ಅಲ್ಲಿಗೆ ಹೋಗುತ್ತವೆ, ಯುದ್ಧದಲ್ಲಿ ಗಾಯಗೊಂಡ ನನ್ನ ಗೆಳೆಯನ ಕೆಲಸ ಆ ದೇಶಕ್ಕೆ ಹೋಗುತ್ತದೆ….ಈಗ ಹೇಳಿ ನಾನು ಮಾಡುವ ಕೆಲಸದ ಉಪಯೋಗ ಏನು" ಅಂತ.ಕೇಳುವವರೆಲ್ಲಾ ದಂಗು!
******
ಬ್ಲೋ ಆಪ್ ನ ದೃಶ್ಯಾವಳಿ ಅದ್ಭುತ. ರಿಕ್ವಿಮ್ ಫಾರ್ ಅ ಡ್ರೀಮ್ ಕೂಡ. ಉಳಿದ ಚಿತ್ರಗಳದ್ದು ನನಗೆ ಮರೆತು ಹೋಗಿದೆ. ರಿವಿಸಿಟ್ ಮಾಡಬೇಕು. ರಷ್ಯಾದ ಆ೦ಡ್ರೀ ಟರ್ಕೊವ್ಸ್ಕಿ ಅವರ ಚಿತ್ರದ ಕೆಲವು ಶಾಟ್ ಗಳು ಅದ್ಭುತವಾಗಿರುತ್ತವೆ. ದಿ ಮಿರರ್ ನ ಒ೦ದು ಕ೦ಟಿನ್ಯೂಸ್ ಶಾಟ್, ಸೊಲಾರಿಸ್, ಸ್ಟಾಕರ್ ಹಾಗೂ ಆ೦ಡ್ರಿ ರುಬ್ಲೆವ್ ದ ಕೆಲವು ಶಾಟ್ ಗಳು ನೆನಪಾಗುತ್ತವೆ. ಕುರೋಸಾವ ನ ರಶೋಮನ್ ನ ಕಾಡೊಳಗಿನ ಸೂರ್ಯನ ನೆರಳು ಬೆಳಕು ಗಳ ಚೆಲ್ಲಾಟ, ಫೆಡ್ರಿಕೊ ಫೆಲಿನಿಯ ಎ೦ಟುವರೆ ಚಿತ್ರ ಎಲ್ಲವೂ ನೆನಪಾಗುತ್ತಿದೆ.
5oಕ್ಕೆ ಅಭಿನ೦ದನೆಗಳು 🙂
ಐದು ಚಿತ್ರಗಳ ಬಗ್ಗೆ ಉತ್ತಮ ಲೇಖನ ವಾಸುಕಿ ಭಾಯ್.. ಬ್ಲೋ ಅಪ್ನ ಕತೆ ಸಖತ್ ಇಷ್ಟವಾಯ್ತು..ನೋಡ್ಬೇಕು ಅದ್ನ..