ಏ ಜಿಂದಗಿ ಗಲೇ ಲಗಾ ಲೇ: ಅಮರ್ ದೀಪ್ ಪಿ. ಎಸ್.

ಒಮ್ಮೊಮ್ಮೆ ಬದುಕು ಹಾಗೆ ರಿವೈಂಡ್ ಆಗಿ ನಮ್ಮನ್ನು ನಾವೇ ನೋಡಿಕೊಂಡರೆ ನಾವು ನಮ್ಮ ಸಣ್ಣ  ಭಯವನ್ನು, ಸಂಕೋಚವನ್ನು ಇನ್ಫೀರೀಯಾರಿಟಿ ಕಾಂಪ್ಲೆಕ್ಸ್ ಎಲ್ಲವನ್ನೂ ಆಗಿಂದಲೇ ದೂರ ಮಾಡಿಕೊಳ್ಳುವ ಒಂದು ಅವಕಾಶವನ್ನು ಹುಡುಕಿಕೊಳ್ಳಲು ವಿಫಲವಾಗಿದ್ದೆವು ಅನ್ನಿಸುತ್ತದೆ. ಒಂದು ವೇಳೆ ಅದಾಗಿದ್ದರೆ ? ಆ ದಿನದಿಂದಲೇ ನಾವು ಮುನ್ನಡೆಯುವ ದಾರಿಯನ್ನು ಸರಿಯಾದ ಕ್ರಮದಲ್ಲಿ ನಡೆಸಲು ಭರವಸೆ ಮೂಡುತ್ತಿತ್ತು.  ಶಾಲಾ ದಿನದಿಂದಲೇ ನಮ್ಮ ಮನಸ್ಸಿನಲ್ಲಿ ಒಂದೊಂದು ಕಲ್ಪನೆಗಳು ಮನೆ ಮಾಡಿರುತ್ತವೆ, ಮತ್ತವು ಕಲ್ಪನೆಗಳು ಮಾತ್ರವೇ ಎಂಬುದೂ ಸಹ ಗೊತ್ತಿದ್ದರೂ ಅವುಗಳು ನೀಡುವ ಬೆಚ್ಚನೆ ಖುಷಿಯಿಂದಾಗಿ  ಹೊರಹಾಕಲು ಹಿಂದೇಟು ಹಾಕುತ್ತಿರುತ್ತೇವೆ… ಒಂದನ್ನು ಮಾತ್ರವೇ ಸಧ್ಯಕ್ಕೆ ಎತ್ತಿಕೊಳ್ಳುವುದಾದರೆ, ನಮ್ಮನ್ನು ಕಷ್ಟದಿಂದ, ಬೇಸರದಿಂದ, ಜಿಗುಪ್ಸೆಯಿಂದ, ತಾತ್ಸಾರದಿಂದ, ಅವಮಾನದಿಂದ ಅನಾಮತ್ತಾಗಿ ಎತ್ತಿ ದಡ ಸೇರಿಸಲು ಯಾರಾದರೂ ಜೀವನದಲ್ಲಿ ಒಬ್ಬರಾದರೂ ಇದ್ದೇ ಇರುತ್ತಾರೆನ್ನುವ ಭರವಸೆಯಲ್ಲದ ಭರವಸೆಯೊಂದಿರುತ್ತದೆ… ಹಾಗೂ ಹೀಗೂ ನಡೆವ ಜೀವನ ನಮ್ಮನ್ನು ನಡೆಸಿಕೊಂಡೇ ಬಂದಿರುತ್ತದೆ.  ಆದರೆ, ಒದಗಿ ಬಂದಂಥ ಒಂದು ಸಣ್ಣ ಅವಕಾಶವನ್ನು ನಾವೇ ನಮ್ಮ ಕೈಯಾರೇ ಚೆಲ್ಲಿಬಿಟ್ಟಿರುತ್ತೇವೆ..  ಅದಾಗಿ ವರ್ಷಗಳ ನಂತರವಷ್ಟೇ ನಾವು ಅದನ್ನು ಫೀಲ್ ಮಾಡುವುದು…

ನಾನು ಮತ್ತು ಅಕ್ಕ ಬೆಳೆದದ್ದು ಅಮ್ಮನ ತವರು ಮನೆಯಾದ ಹಗರಿಬೊಮ್ಮನಹಳ್ಳಿಯ ಅಜ್ಜಿಯ ಮನೆಯಲ್ಲಿ  ಅದೂ ಅಪ್ಪನ ಆರ್ಥಿಕ ಸ್ಥಿತಿಗತಿಯ ಪರಿಣಾಮವಾಗಿ.  ಮನೆ ಹಿಂದೆ ಸರ್ಕಾರಿ ಶಾಲೆ.. ನಮ್ಮ ಸೋದರ ಮಾವರಾದ  ಶಿವೂ ಮಾವ… ಮತ್ತು ಬಸು ಮಾಮ  ಇವರಿಬ್ಬರ ಚಾಚು ಹಸ್ತ ಹಾಗೂ ಅಜ್ಜಿಯ ಅಕ್ಕರೆ ಒಂದಿರದಿದ್ದರೆ ನಾವೂ ಕೂಡ ಹೇಗಿರುತ್ತಿದ್ದೆವೋ ಏನೋ.  ಎಡ ಮತ್ತು ಬಲ ರಟ್ಟೆಯಲ್ಲಿ ನನ್ನನ್ನ, ನನ್ನಕ್ಕನನ್ನು ಹಿಡಿದು ಮನೆ ಹಿಂದಿನ ಸರ್ಕಾರಿ ಶಾಲೆವರೆಗೆ ಶುರುವಿನಲ್ಲಿ ಎತ್ತಿಕೊಂಡು ಹೋಗಿ ಬಿಟ್ಟು, ಅಲ್ಲಲ್ಲ…ಒಗೆದು ಬರುತ್ತಿದ್ದುದ್ದು  ನನಗೆ ನೆನಪಿದೆ. ನನ್ನ ಹಣೆ ಬರಹ, ಮತ್ತು ನನಗೆ ಸಿಕ್ಕ ಪೋಷಕ ಹಾಗೂ ಗುರುವೃಂದಕ್ಕೆ ನಾನು ಸಾಯುವವರೆಗೂ ಋಣಿ.   ಏಳನೇ ತರಗತಿವರೆಗೆ ನಾನು ಶಾಲೆ ಗುರುಗಳ ಇಷ್ಟಕ್ಕೆ ಒಗ್ಗಿದೆ. ಅವರು ಕಲಿಸಿದ ಅಕ್ಷರಗಳನ್ನು ಇಂದಿಗೂ ಅವರನ್ನು ನೆನೆದೇ ಬರೆಯುವ ನಾನು ಒಂದು ವರ್ಷದಲ್ಲಿ ಅಜ್ಜ ತೀರಿದ ದಿನ ಮಾತ್ರ ಒಂದು ದಿನ ವರ್ಷದಲ್ಲಿ ಗೈರು ಹಾಜರಿಯಾಗಿದ್ದೆ. ಆಗೆಲ್ಲಾ ಪ್ರಭಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಎಲ್ಲವನ್ನೂ ನಡೆಸಿದರೆ ನಾನು ಮಾತ್ರ ಪ್ರಭಂಧದಲ್ಲಿ ಮಾತ್ರ ಭಾಗವಹಿಸುತ್ತಿದ್ದೆ.  ಹಾಗೂ ಓದಿನಲ್ಲಿ ವರ್ಷದ ಕೊನೆಯಲ್ಲಿ ಆ ವರ್ಷದ ಆದರ್ಶ ವಿದ್ಯಾರ್ಥಿ ಎಂದು ಒಂದು ಜಾಮಿಟ್ರಿ ಬಾಕ್ಸ್ ಮತ್ತು ಒಂದು ಪೆನ್ನು ಕೊಟ್ಟಿದ್ದರು.. ಅದೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಕೈಯಿಂದ.. ಅಪರೂಪಕ್ಕೆ “ಕಲ್ಯಾಣ ಜ್ಯೋತಿ ಬಸವಣ್ಣ” ಎಂಬ ನಾಟಕದಲ್ಲಿ ನಮ್ಮ ಕನ್ನಡ ಗುರುಗಳು ಶ್ರೀ ಚಂದ್ರಶೇಖರಯ್ಯ ಇವರು ಒತ್ತಾಯ ಮಾಡಿ ಸೇರಿಸಿದ್ದರು…ಏನೇ ಮಾಡಿದರೂ ನನ್ನಿಂದ ಕ್ರೀಡೆಯಲ್ಲಿ, ಭಾಷಣದಲ್ಲಿ ಭಾಗವಹಿ ಸುವುದು ಸಾಧ್ಯವಾಗಲೇ ಇಲ್ಲ, ಎಷ್ಟೇ ಪ್ರೆರೇಪಿಸಿದರೂ..  ಮುಂದೆ ಹೈಸ್ಕೂಲ್ ನಲ್ಲಿ ಸಹ ಅದೇ ಪ್ರಹಸನ… ಪ್ರಭಂಧ ಸ್ಪರ್ಧೆಯಲ್ಲಿ, ಚಿತ್ರಕಲೆಯಲ್ಲಿ ಬಹುಮಾನವಾಗಿ ಇಪ್ಪತ್ತೈದು ರುಪಾಯಿಗಳನ್ನು ನೀಡಿದರು… ಹುಡುಗ ಬುದ್ದಿ ಬಂದ ದುಡ್ಡನ್ನು ಮಾಮನಿಗೆ ಹೇಳದೇ ಬಾಲ್ ಬ್ಯಾಡ್ಮಿಂಟನ್ ಬ್ಯಾಟ್ ಖರೀದಿಸಿ ಬೈಸಿಕೊಂಡಿದ್ದೆ.. ಕಾರಣ ಇಷ್ಟೇ,  ಬಹುಮಾನದ ದುಡ್ಡನ್ನು ಬಳಸದೇ ಕೋರಿದ್ದರೂ ಸಾಕಿತ್ತು ಮಾಮ ನನಗೆ ತಾನೇ ಹೊಸದನ್ನು ಕೊಡಿಸುತ್ತಿದ್ದ… ಇಷ್ಟೆಲ್ಲಾ ಆದಮೇಲೆ ಹತ್ತನೇ ತರಗತಿಯಲ್ಲಿ ನನ್ನೆಲ್ಲಾ ಗೆಳೆಯರಲ್ಲಿ ಬೇರೆ ಬೇರೆ ಶಾಲೆಯಲ್ಲಿ ಓದಿ ತೆಕ್ಕೆ ತೆಕ್ಕೆ ಮಾರ್ಕು ತೆಗೆದು ಕೊಂಡು ಸೈನ್ಸ್, ಕಾಮರ್ಸು ಎಂದೆಲ್ಲಾ ಹೇಳುತ್ತಿದ್ದರೆ ನನಗೆ ಅರ್ಥವಾಗದೇ ಉಳಿದದ್ದು ಮಾತ್ರ ಪುಟಗಟ್ಟಲೆ ಬರೆಯುತ್ತಿದ್ದವರ  ಬರವಣಿಗೆಯ ಬಗೆಗಿನ ಕೌತುಕ.  ಮತ್ತು ನಾನು ಪಾಸಾಗಿದ್ದು ಮಾತ್ರ ಎರಡನೇ ದರ್ಜೆಯಲ್ಲಿ. ನನ್ನ ಅಕ್ಷರದೆಡೆಗಿನ ಆಕರ್ಷಣೆ ಹಿಗ್ಗಿದ್ದೇ ಆಗ.  ಬಹುಶಃ  ಶಿವರಾಮ ಕಾರಂತರ “ಅಳಿದ ಮೇಲೆ” ಪುಸ್ತಕ ಡಿಗ್ರಿಯಲ್ಲಿ ಪಠ್ಯವಾಗಿದ್ದಿರಬಹುದು.. ಪಕ್ಕದ ಮನೆಯವನೊಬ್ಬನಿಂದ ಪಡೆದು ನಾನು ಓದಿದ ಮೊದಲ ಪುಸ್ತಕವದು…. ಥ್ಯಾಂಕ್ಸ್ ಟು ದಟ್ ಫೆಲೋ…

ಮುಂದೆ ಮಾಮನವರ  ಕಷ್ಟದ ದಿನಗೂಲಿ ನೌಕರಿಯ ಬದುಕಿನ ನಡುವೆಯೂ ನನ್ನನ್ನು ಡಿಪ್ಲೋಮಾಗೆ  ಸೇರಿಸಿದರು, ನಾನು ಓದಿದೆ.  ಒಳ್ಳೆ ಫಲಿತಾಂಶವು ಬಂತು ಅದು ೧೯೯೫ರ ಮಧ್ಯೆ…. ನಾನು ಓದಿಸಿದ್ದಕ್ಕೆ ವ್ಯಯಿಸಿದ ದುಡ್ಡು ಪೋಲಾಯಿತೆಂಬ ನಿರಾಸೆ ತರದೇ ಮೆಚ್ಚುಗೆ  ಗಳಿಸಿದ್ದೆ.. ಅದೇ ವರ್ಷ ಕರೆದ ಸರ್ಕಾರಿ ನೌಕರಿಗೆ ಅರ್ಜಿ ಗುಜರಾಯಿಸಿದೆ.. ಇದ್ದದ್ದು ಬರೀ ೩೪೬ ಹುದ್ದೆ.. ಕೇಳಿದ ಸುದ್ದಿ ಪ್ರಕಾರ ಅರ್ಜಿ ಬಂದದ್ದು ಹತ್ತತ್ತಿರ ಎರಡು ಲಕ್ಷದ ಸನಿಹ… ಒಮ್ಮೆ ಬೆಂಗಳೂರು ನೆನೆಸಿಕೊಂಡೆ.. ಓಡಿ ಹೋಗಿ ನಾನು ದುಡಿಯಲಾ?  ಹಾಗಾಗಲಿಲ್ಲ..  ಬಸು ಮಾಮ ಪ್ರಾಕ್ಟಿಕಲ್ ಮನುಷ್ಯ… “ದೀಪು, ಅಲ್ಲಿಗೆ ಹೋಗಿ ನೀನು (ಆಗಿನ ದುಡಿಮೆಗೆ ಸಿಗುತ್ತಿದ್ದ ಸಂಬಳ ಲೆಕ್ಕ ಹಾಕಿ )ಮೂರರಿಂದ ಐದು  ಸಾವಿರ ದುಡಿದರೂ ಅಲ್ಲಿನ ಖರ್ಚಿಗೆ ಓಡಾಡಲು ಸರಿ ಹೋಗುತ್ತೆ… ಇಲ್ಲೇ ಏನಾದರೂ ಮಾಡು ಅಂದ. ಅಲ್ಲೇ ಎನ್. ಜಿ. ಓ .. ಒಂದರಲ್ಲಿ ಕೇವಲ ಸಾವಿರ ಸಂಬಳಕ್ಕೆ ಸೇರಿ ದುಡಿಯಲು ಆರಂಭಿಸಿದೆ… ಅದೇ ಮೊದಲ ತಿಂಗಳ  ಸಂಬಳ ಪಡೆದ ದಿನ ನನ್ನ ಕಣ್ಣಲ್ಲಿ ನೀರು ಜಿನುಗಿತ್ತು, ಮತ್ತದು ದುಡಿಮೆಯ ಬೆಲೆಯನ್ನೂ ನಿರೂಪಿಸಿತ್ತು… ಅದಾಗಿ ಒಂದು ವರ್ಷದಲ್ಲಿ ಸರ್ಕಾರದಿಂದ ನೇಮಕ ಪ್ರಕ್ರಿಯೆ ಶುರುವಾಗಿದ್ದರ ಬಗ್ಗೆ  ದಾವಣಗೆರೆಯಲ್ಲಿ  ಆಕಸ್ಮಿಕವಾಗಿ ಭೇಟಿಯಾದ ಪರಿಚಯಸ್ಥರೊಬ್ಬರು ಹೇಳುತ್ತಾ,  “ನೋಡಿ ಅಮರ್, ಒಂದೈದು ಸಾವಿರ ಕೊಟ್ಟರೆ ನಿನ್ನ ಗಳಿಕೆಯ ಅಂಕಗಳ ಆಧಾರದಲ್ಲಿ ಒಳ್ಳೆ ಡಿಪಾರ್ಟ್ಮೆಂಟ್ ಹಾಕಿಸಿಕೊಂಡು ಬರಬಹುದು, ಯೋಚಿಸು” ಅಂದರು.  ಆಗ ದಾವಣಗೆರೆಯಲ್ಲಿ “ಹಾಗೆ ಸುಮ್ಮನೆ” ಎನ್ನುವಂಥ ಜೋಶ್ ನಲ್ಲಿ “ಕಲಾವಿದ ” ಸಿನೆಮಾ ನೋಡಲು ಟಿಕೆಟ್ ತೆಗೆಸಲು ನನ್ನ ಇನ್ನೊಬ್ಬ ಗೆಳೆಯ ರಾಜಶೇಖರ ಡಗ್ಗಿ ಎನ್ನುವನೊಟ್ಟಿಗೆ ಕ್ಯೂ ನಿಂತಿದ್ದೆ, ಪದ್ಮಾಂಜಲಿ ಥೀಯೇಟರ್ ನಲ್ಲಿ.. ನನಗೆ ಏನು ಹೇಳಬೇಕೋ ತಿಳಿಯದೇ ಅವರೇನು ಅಂದುಕೊಂಡಾರು ಎನ್ನುವ ಪ್ರತಿಕ್ರಿಯೆಗೆ ಕಾಯದೇ, ” ನೋಡಿ ಸರ್, ನನ್ನ ಹತ್ರ ಈಗ ನೂರ ಇಪ್ಪತ್ತು ರೂಪಾಯಿ ಇದೆ, ಸಿನಿಮಾ ನೋಡಿ ಒಂಚೂರು ಹೊಟ್ಟೆಗೆ ಹಾಕ್ಕೊಂಡು ಸೀದಾ ಬೊಮ್ಮನಹಳ್ಳಿಗೆ ಬಸ್ ಹತ್ತುತ್ತೇನೆ… ನನ್ನ ಹಣೆಬರಹದಲ್ಲಿ, ಯೋಗ್ಯತೆ ಇದ್ರೆ ಸರ್ಕಾರಿ ನೌಕರಿ ಅನ್ನೋದು ಬರೆದಿದ್ದರೆ ಹೆಂಗಾದ್ರೂ ಬರ್ಲಿ… ತಾನಾಗೇ… ದುಡ್ಡು ಕೊಡೋ ಮಟ್ಟದಲ್ಲಿ ನಾನಿಲ್ಲ ಮತ್ತು ನನಗದು ಒಗ್ಗುವುದೂ ಇಲ್ಲ” ಅಂದುಬಿಟ್ಟಿದ್ದೆ.

ಅವರೂ ಈ ದಿನದವರೆಗೂ ನನ್ನನ್ನು ಮೆಚ್ಚುತ್ತಾರೆ.

ಇದೆಲ್ಲದರ ಮಧ್ಯೆ ನನಗೆ ನನ್ನ ಬಗ್ಗೆ ಬೇಜಾರು ಅನ್ನಿಸುವುದು ಯಾಕೆಂದರೆ,  ನನ್ನ ಗೆಳೆಯರಲ್ಲಿ ಕೆಲವರು ಶಾಲಾ ಮಟ್ಟದಿಂದಲೇ ಉತ್ತಮ ಮಾತುಗಾರರಾಗಿದ್ದರು.  ನಾನು ಗುಂಪಿನಲ್ಲಿ ಗೋಯಿಂದಾ ಎನ್ನುವಾಗ, ಕೆಲ ಗೆಳೆಯರೊಟ್ಟಿಗಿದ್ದಾಗ “ಚಟಾಕಿ” ಎನ್ನುವಂತಿದ್ದರೂ ಇವತ್ತಿಗೂ ನನಗೆ  ಎದ್ದು ನಿಂತು ಒಂದೆರಡು ಮಾತಾಡು ಅಂದರೆ, ನಾನು ಕುಂತ ಜಾಗ ಬಿಟ್ಟು ಕದಲಿದರೆ ಕೇಳಿ….. ಅದೊಂದು ನನಗೆ ಒಲಿಯದ ಅಥವಾ ನಾನು ಒಲಿಸಿಕೊಳ್ಳದ ಕಲೆಯಾಗುಳಿದಿದೆ.  ಮೊದಮೊದಲು ಬರೆದ ದೇಶ ಭಕ್ತಿ ಕುರಿತ “ಮೇರಾ ಭಾರತ್ ಮಹಾನ್ ” ಹೆಸರಿನ ಕವನವೊಂದು ಹೊಸಪೇಟೆಯಿಂದ ಪ್ರಕಟವಾಗುತ್ತಿದ್ದ “ನವ ಸಂದೇಶ” ದಲ್ಲಿ ಪ್ರಕಟಗೊಂಡಿತ್ತು.. ಅದನ್ನು ನೋಡಿದ ಒಬ್ಬ ವರದಿಗಾರ “ನೀನು ಬರೆಯು ವುದನ್ನು ರೂಢಿ ಮಾಡಿಕೊ” ಎಂದಿದ್ದರು. ಪತ್ರಿಕೆಗಳಿದ್ದವು, ಪ್ರಯತ್ನವನ್ನೂ ಮಾಡಬಹುದಾಗಿತ್ತು . ಹಾಳಾದ್ದು ನನ್ನ ಮನಸ್ಥಿತಿ.. ಕುಬ್ಜವಾಗಿತ್ತು.. ಆದರೆ ಅದಾಗಿ ಹದಿನೈದು ಹದಿನೆಂಟು ವರ್ಷಗಳ ನಂತರ ಬಂತು ನೋಡಿ “ಮುಖ ಪುಸ್ತಕ ” …ಹಂಚಿಕೊಳ್ಳಬಹುದಾದಂಥ ಎಂಥಹ ಅದ್ಭುತ ಅವಕಾಶಗಳನ್ನು ನೀಡಿ  ತಂದೊಡ್ಡಿತೆಂದರೆ ನಮ್ಮನ್ನು ನಾವು ಒಳ್ಳೆಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲು, ಅದರಿಂದ “ನಮ್ಮತನ”ವನ್ನು ತೋರಿಸಲು ಸಾಧ್ಯವಾಯಿತು. ಆ ಗ್ಯಾಪ್  ನಲ್ಲಿ ನಾನು ಒಬ್ಬ ಆಸಕ್ತ ಓದುಗನಾಗಿರಲು ಅನುವಾಯಿತು. ಈಗೀಗ ಅಂತರ್ಜಾಲ ಪತ್ರಿಕೆಗಳಿವೆ, ಕೈಗೆ ಸೇರುವ ಪತ್ರಿಕೆಗಳಿವೆ, ಬರೆಯಲು ಮೊದಲಿಗಿಂತ ಮುಕ್ತ ಅವಕಾಶಗಳಿವೆ, ಒಬ್ಬರ ಸ್ವಗತ ಬರವಣಿಗೆ ಇನ್ನೊಬ್ಬರ ಬದಲಾವಣೆಗೆ ಪ್ರೇರಣೆಯಾಗಬಹುದು.  ಮತ್ತೊಬ್ಬರ ಬರಹದಲ್ಲಿನ ವ್ಯಕ್ತಿತ್ವ ನಮ್ಮಲ್ಲಿನ ಸಣ್ಣತನಗಳನ್ನು ತಿದ್ದಿಕೊಳ್ಳಲು ಸಮಯ ಒದಗಿದಂತಾಗುವುದು.   ಈಗಲಾದರೂ ನಮ್ಮನ್ನು ನಾವು ತೆರೆದುಕೊಂಡು ಸದುಪಯೋಗಪಡಿಸಿಕೊಳ್ಳದಿದ್ದರೆ ಅವಕಾಶವನ್ನು ನಾವೇ ಕೈಜಾರಲು ಕಾರಣವಾಗುತ್ತೇವೆ.

ಎಷ್ಟೋ ಜನ ತಂದೆ ತಾಯಿ ಮಕ್ಕಳಿಗೆ ಕಷ್ಟ ಗೊತ್ತಾಗದಂತೆ ದುಡ್ಡು ಜೋಡಿಸಿ ಓದಿಸುತ್ತಾರೆ. ನನ್ನನ್ನು ಓದಿಸಿದಂತೆ ಓದಿಸುವವರು ಇದ್ದಾರೆ, ಅವರ ಇತರೇ ಖರ್ಚುಗಳ ಸಮೇತ… ಗಮ್ಯ ತಲುಪಲಾಗದೇ ಹೊರೆಯಾಗಿಯೂ, ಸಾರ್ಥಕಪಡಿಸಿಕೊಳ್ಳದೇ, ಅರಿವಿರದಂತೆ ಜೀವನದ ಕುರಿತು ಲಘುವಾಗಿ ವರ್ತಿಸದೇ ಯೋಚಿಸಿದರೂ ಆದೀತು…. ಅಲ್ಲಿಂದಲೇ ಶುರುವಾಗುತ್ತೆ ; ” ಏ ಜಿಂದಗಿ ಗಲೇ ಲಗಾ ಲೇ …… ….

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
Dr Vani Sundeep
Dr Vani Sundeep
10 years ago

ಬರಹ ಚೆನ್ನಾಗಿದೆ. ತಮ್ಮ ಸಾಧನೆಯ ಬಗ್ಗೆ ಹೆಮ್ಮೆಯೆನಿಸುತ್ತಿದೆ. ಕೆಲವೊಮ್ಮೆ ನಾವು ನಮ್ಮನ್ನು ಬೇರೊಬ್ಬರಿಗೆ ತುಲನೆ ಮಾಡಿಕೊಳ್ಳುತ್ತೇವೆ. ಅದರ ಅಗತ್ಯವಿಲ್ಲ. ನಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿರಬೇಕು.Excellent writeup.

pavamana aralikatti
pavamana aralikatti
10 years ago

ಬಹಳ ಸೊಗಸಾಗಿದೆ ಅಮರಜಿ.ನಿಮ್ಮ ಬದುಕಿನ ಪ್ರಸಂಗಗಳನ್ನು ಬಹಳ ಸೊಗಸಾಗಿ ಬರವಣಿಗೆ ಮೂಲಕ ಚಿತ್ರಿಸಿದ್ದೀರಿ.ಅಭಿನಂದನೆಗಳು.
…..ಪವಮಾನ

Santhoshkumar LM
10 years ago

ತುಂಬಾ ಚೆನ್ನಾಗಿದೆ ಅಮರ್ ಸರ್.

Vasant Bhakri
Vasant Bhakri
10 years ago

Uttamavada lekhana.Maathanadalu hinjariyabedi. Ondu bari mai koduvi mele eddeli. Naalku maathu prarambhisi. Mundina baari neeve swayam aagi eddu nimma baayinda nirargalavagi, nirbhayavagi bhaashana bhorgareyuttade.All the best.

P.S.Vijay kumar
P.S.Vijay kumar
10 years ago

I salute to your writing skill ..brother!

pathresh hiremath
10 years ago

good article brother

Kotraswamy M
Kotraswamy M
10 years ago

Hadavaada baraha, sulalitha niroopane oaduganannu hidididuvanthide. Ravi Belagere avara ‘Khaas Baath’ nenapaayithu. Sarani munduvareyali.

C M Srinivasa, Typist, Govt.First Grade College, Hagaribommanahalli
C M Srinivasa, Typist, Govt.First Grade College, Hagaribommanahalli
10 years ago

Deepu sir, I am reading the above aricle of your early life. you are gentlemen sir, because every person of society must remind and lead of early life, that’s a gentlemen person called.

Vihar Kumar.A
Vihar Kumar.A
10 years ago

ಅಮರದೀಪ್
ನಿನ್ನ ಕವನ ನೋಡಿದೆ, ಚೆನ್ನಾಗಿದೆ, ಮನುಷ್ಯ ತನ್ನ ಹಿಂದಿನ ಜೀವನವನ್ನು ಮರಿಯದೇ ಇದ್ದರೆ ಅದು ಅವನ ಮುಂದಿನ ಜೀವನದ ಪ್ರತಿ ಹೆಜ್ಜೆಗೂ ಉಪಯೋಗಕರ ಎಂಬುದನ್ನು ತಿಳಿಯಿತು, ಚೆನ್ನಾಗಿದೆ ಕೀಪ್ ಇಟ್ ಅಪ್,,,,,,,,
ನೂತನ ಸಂವತ್ಸರದ ಶುಭಾಶಯಗಳೊಂದಿಗೆ ( ಇನ್ ಅಡ್ವಾನ್ಸ್ )

ganesh
ganesh
10 years ago

Kelvondu bari baduku namage pata kalisuthe. Adu yavude V.V. padavigintha doddadu. Kastadalli beledare jeevanadalli yavude samasye bandru edurisabahudu embudakke nimma udaharane saku. Nanu nanna jeevanadalli kalitha ondu olle pata andre:
“Badukalli hege irabardu annodanna nanna appa helikotru, hage hege irabeku annodanna nanna amma helikotru”.
hatsoff to both.

Rajshekhar Daggi
Rajshekhar Daggi
10 years ago

ಸಾಧನೆಯ ಹಾದಿ ತುಂಬಾ ಚೆನ್ನಾಗಿ ಬಂದಿದೆ ಅಮರದೀಪ್ ಇಂದಿಗೂ ಹಾಗೆ ಇದ್ದೀಯಾ ಅಮರ್ ಏಕೋ ಇತ್ತೀಚೆಗೆ ತುಂಬಾ ಇಮೋಶನಲ್ ಆಗ್ತಿದೀಯಾ ಅನ್ಸುತ್ತೆ. ಗುಡ್

ಜೀವ್ನದ ಹಿಂದೆ ಹೋಗಿ ನೆನಹುಗಳ್ನ ಹೇಳಿಕೊಳ್ಳೋದು ತುಂಬಾ ಖುಶಿಯಾಗಿದೆ

ರಾಜ್

Ravishankar.S.B.
Ravishankar.S.B.
10 years ago

ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಹಿಂದಿಯಲ್ಲಿ ಕೆಲವೊಂದು ಕವನಗಳನ್ನು ಬರೆಯುತ್ತಿದ್ದೆ. ಶಾಯಿರಿ ಅಂತಾರಲ್ಲ ಅದು. ಆದರೆ ಕಛೇರಿ ಕೆಲಸಗಳ ಮದ್ಯೆ ನಾನು ಬರೆಯುವುದನ್ನು ಮರೆತೇ ಹೋಗಿದ್ದೆ. ಈಗ ನಿನ್ನ ಬರಹ ಓದಿದ ಮೇಲೆ ನಾನು ಬರೆಯುವುದನ್ನೇ ಮರೆತಿರುವುದು ನೆನಪಾಯಿತು. ಸುಮಾರು ೧೬ ಋತುಗಳ ನಂತರ. Excellent writing. Thank you for remembering me my old days, my old dreams, my old life.

12
0
Would love your thoughts, please comment.x
()
x