ಇತ್ತೀಚಿಗಷ್ಟೆ ಹೆಗ್ಗಡಹಳ್ಳಿಯ ಮಕ್ಕಳ “ನಿಮ್ಮ ಕಸ ನಿಮಗೆ” ಅಭಿಯಾನಕ್ಕೆ ಪ್ರತಿಕ್ರಿಯೆ ನೀಡಿ ಇದೊಂದು ಶ್ಲಾಘನೀಯ ಕೆಲಸ, ನಿಮ್ಮ ಪರಿಸರ ಕಾಳಜಿಯನ್ನು ನಾವು ಮೆಚ್ಚಿಕೊಂಡಿದ್ದೇವೆ, ನಾವೂ ಕೂಡ ಈ ಪರಿಸರವನ್ನು ಉಳಿಸಲು ಮತ್ತು ನಮ್ಮ ಕಂಪೆನಿಯಿಂದ ಈ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ ಬೆನ್ನಲ್ಲೆ ಮಕ್ಕಳು ಮತ್ತೆ ಹನ್ನೊಂದು ಕಂಪೆನಿಗಳಿಗೆ ಇಂದು ಕಸ ರವಾನೆ ಮಾಡಿದ್ದಾರೆ.
ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಮಕ್ಕಳು 2019ರ ಏಪ್ರಿಲೆ ತಿಂಗಳಿಂದ ನಿಮ್ಮ ಕಸ ನಿಮಗೆ ಎಂಬ ದೇಶದಲ್ಲೇ ವಿನೂತನ ಮಾದರಿಯ ಅಭಿಯಾನವನ್ನು ಆರಂಭಿಸಿದ್ದು ಈಗಾಗಲೇ ಎರಡು ಬಹುರಾಷ್ಟ್ರೀಯ ಕಂಪೆನಿಗಳು ಮಕ್ಕಳಿಗೆ ಪತ್ರ ಬರೆದು 2025ರ ಹೊತ್ತಿಗೆ ತಾವು ಪರಿಸರ ಸ್ನೇಹಿ ಪ್ಯಾಕಿಂಗ್ ಸಾಧನವನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಮಾತುಕೊಟ್ಟಿವೆ. ಈ ಅಭಿಯಾನವು ಪರಿಸರಪ್ರೇಮಿಗಳ ಗಮನಸೆಳೆದಿದ್ದು ಇದೀಗ ಮೈಸೂರು ಜಿಲ್ಲಾಪಂಚಾಯಿತಿಯು ರಾಜ್ಯಮಟ್ಟದ ಸ್ವಚ್ಛ ಭಾರತ ಅಭಿಯಾನಕ್ಕೆ ಮಕ್ಕಳ ವಿನೂತನ ಅಭಿಯಾನದ ಕುರಿತು ತಿಳಿಸಿದೆ.
ಮಕ್ಕಳು ‘ನಾಳೆಗಳು ನಮ್ಮದು’ ಎಂಬ ಧ್ಯೇಯದೊಂದಿಗೆ ಮತ್ತೆ ಹನ್ನೊಂದು ಕಂಪೆನಿಗಳಿಗೆ ಕಸವನ್ನು ಇಂದು ರವಾನಿಸಿದ್ದಾರೆ. ಕ್ಯಾಡ್ಬರಿ, ನಂದಿನಿ, ಎಂ.ಟಿ,ಆರ್., ಕ್ಲಿನಿಕ್ ಪ್ಲಸ್ ಶ್ಯಾಂಪು, ಪ್ಯಾಂಪರ್ಸ್, ಬಿಸ್ಕ್ ಫಾರ್ಮ್, ಐ.ಟಿ.ಸಿ., ಬ್ರಿಟಾನಿಯಾ, ನೆಸ್ಲೆ, ಮ್ಯಾಕ್ಸ್ ವಿಟಾ, ಯೂನಿಬಿಕ್ ಕಂಪೆನಿಗಳಿಗೆ ಕಸವನ್ನು ಹೆಗ್ಗಡಹಳ್ಳಿಯ ಪೋಸ್ಟ್ ಮಾಸ್ಟರ್ ಸುರೇಶ್ ಅವರ ಮೂಲಕ ರವಾನಿಸಲಾಯಿತು.
-ಸಂತೋಷ್ ಗುಡ್ಡಿಯಂಗಡಿ