ಏಪ್ರಿಲ್ ಫೂಲ್ ಅಲ್ಲ ಏಪ್ರಿಲ್ ಕೂಲ್: ಎಂ.ಎಚ್.ಮೊಕಾಶಿ

ಏಪ್ರಿಲ್ ಒಂದು ಮೂರ್ಖರ ದಿನ ಈ ಮೂರ್ಖತನದ ಲೆಕ್ಕ ಒಂದು ದಿನಕ್ಕೆ ಮುಗಿದು ಹೋಗುವ ಹಾಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತು. ಆದರೆ ಹಾಗಿಲ್ಲ ಅದು ನಿತ್ಯೋತ್ಸವ. ಅದನ್ನು ನಿದರ್ಶಿಸಲು ಮತ್ತು ನಮ್ಮನ್ನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಲು ಮೂರ್ಖರ ದಿನದಂದು ಆರಂಭವಾಗುವ ಈ ತಿಂಗಳು ಸಕಾಲ ಎನ್ನಬಹುದು. ಇಡೀ ತಿಂಗಳು ನಾವು ಮೂರ್ಖರಾಗುವ ನಾನಾ ರೀತಿಗಳ ಬಗ್ಗೆ ಅರ್ಥಮಾಡಿಕೊಳ್ಳುವ ಸಮಯ. ಏಪ್ರಿಲ್ ಒಂದರಂದು ಕೆಲವರ ಕಾಲೆಳೆದು ಮೂರ್ಖರನ್ನಾಗಿ ಮಾಡಲು, ಕಾಲೆಳೆಸಿಕೊಂಡು ಮೂರ್ಖರಾದ ದಿನ. ನೀವೂ ಕೂಡ ಎಷ್ಟೋ ದಿನದಿಂದ ಯಾರನ್ನೋ ಬಕ್ರಾ ಮಾಡಲು, ಮಕ್ಮಲ್ ಟೋಪಿ ಹಾಕಲು ಹೊಂಚು ಹಾಕಿ ಕುಳಿತಿರುತ್ತೀರಿ. ಹೊದ ವರ್ಷ ಯಾರ್ಯಾರೋ ಹೇಗೆಲ್ಲ ಬಕ್ರಾ ಮಾಡಿದ್ದರು. ಈ ವರ್ಷ ನಾನು ಅವರಿಗೆ ಏನು ಮಾಡಬಹುದು ಅಂತೆಲ್ಲ ಬಹಳ ಯೋಚಿಸಿರಬಹುದು. ಹಿಂದಿನ ವರ್ಷ ನಾನು ಬಕ್ರಾ ಆಗಿದ್ದೆ ಅಂತ ನೆನಪಿಸಿಕೊಂಡು ಒಬ್ಬರೇ ನಕ್ಕೀರುತ್ತೀರಿ ಅಲ್ವಾ..!

ಏಪ್ರಿಲ್ ಫೂಲ್ ಎನ್ನುವ ಪದ ಎಲ್ಲರಿಗೂ ಚಿರಪರಿಚಿತ. ಆದರೆ ಏಪ್ರಿಲ್ ಫೂಲ್ ಹೇಗೆ ಹುಟ್ಟಿಕೊಂಡಿತೆಂಬುದು ನಿರ್ದಿಷ್ಟವಾದ ಇತಿಹಾಸವೇ ಇಲ್ಲಾ. ಈಗ ನಾನು ನಿಮ್ಮನ್ನು ಫೂಲ್ ಮಾಡ್ತಾ ಇಲ್ಲಾ ಇದು ನಿಜ! ಆದರೂ ಕೆಲ ಉಲ್ಲೇಖಗಳು ಈ ರೀತಿಯಾಗಿವೆ. 16 ನೇ ಶತಮಾನದಲ್ಲಿ ನಡೆದ ಪಂಚಾಂಗ ಪದ್ಧತಿಯ ಬದಲಾವಣೆಯೇ ಇದಕ್ಕೆ ಕಾರಣ, 1582 ರಲ್ಲಿ ಫ್ರಾನ್ಸ್ ದೊರೆ 9 ನೇ ಚಾಲ್ರ್ಸ್ ಹೊಸ ಗ್ರೆಗೋರಿಯನ್ ಕ್ಯಾಲೆಂಡರನ್ನು ಜಾರಿಗೆ ತಂದನು. ಆಗ ಅದು ಜನೇವರಿ 1 ಆಗಿತ್ತು. ಆದರೆ ಹಲವಾರು ಸಮುದಾಯದವರು ಹಳೆಯ ಸಂಪ್ರದಾಯ ಮುರಿಯಲು ಇಚ್ಚಿಸಲಿಲ್ಲಾ. ಕೊನೆಗೆ ಏಪ್ರಿಲ್ 1 ರಂದು ಒಪ್ಪಿದರು. ಆಗ ಅವರನ್ನು ಗೇಲಿ ಮಾಡಲು ಈ ದಿನವನ್ನು ಮೂರ್ಖರ ದಿನವನ್ನಾಗಿ ಆಚರಿಚಲು ಕಾರಣವಾಯಿತೆಂದು ಹೇಳಲಾಗಿದೆ.

1708 ರಲ್ಲಿ ಬ್ರಿಟಿಷ ವರದಿಗಾರ ‘ಅಪೋಲೊ’ ಎಂಬ ಪತ್ರಿಕೆಯಲ್ಲಿ ಮೂರ್ಖರ ದಿನದ ಬಗ್ಗೆ ಪ್ರಥಮವಾಗಿ ಪ್ರಸ್ತಾಪಿಸಿದ್ದನು. ಚಿಯೋಪ್ರೆ ಚಾಸರ್ಸ್ ಬರೆದ “ದ ಕ್ಯಾಂಟರಬರಿ ಟೇಲ್ಸ್” ಕೃತಿಯಲ್ಲಿ ಇದರ ಉಲ್ಲೇಖವಿದೆ. ಸ್ಕಾಟ್ಲೆಂಡಿನಲ್ಲಿ ಏಪ್ರಿಲ್ 1 ರಂದು ‘ಗೌಕ್’ ಎಂಬ ಪಕ್ಷಿಯನ್ನು ಬೇಟೆಯಾಡಿ ನಂತರ ತಮಾಷೆ ಮಾಡುವ ದಿನವಾಗಿ ಆಚರಿಸುವರು. ‘ಗೌಕ್’ ಎಂಬುದು ಮೂರ್ಖರ ಸಂಕೇತವಾಗಿದೆ. ಅದರಂತೆಯೇ ಭಾರತದಲ್ಲಿ ಏಪ್ರಿಲ್ 1 ರಂದು ಏಪ್ರಿಲ್ ಫೂಲ್ ಮಾಡುವ ಸಂಪ್ರದಾಯಕ್ಕೆ ಯಾವುದೇ ನಿರ್ದಿಷ್ಟವಾದ ಆಧಾರವಿಲ್ಲ. ಇದು ಪಾಶ್ಚಾತ್ಯರ ಅನುಕರಣೆಯಿಂದ ಬಂದ ಸಂಸ್ಕೃತಿಯಾಗಿದೆ. ಕೆಲವೊಮ್ಮೆ ಕೆಲವು ಆಚರಣೆಗಳು ನಮಗೆ ಹಿಡಿಸದಿದ್ದರೂ ನಾವು ಅದನ್ನು ಆಚರಿಸುತ್ತೇವೆ. ವಿಶೇಷವಾಗಿ ಇಂದಿನ ಯುವಜನ ಇಂಥ ಆಚರಣೆಗಳಲ್ಲಿ ಮುಂದಿದ್ದಾರೆ.

ಏಪ್ರಿಲ್ 1 ರಂದು ವಸಂತ ಋತುವಿನ ಪ್ರಾರಂಭ ಅಥವಾ ಉತ್ತರ ಗೋಳಾರ್ಧದಲ್ಲಿ ವಸಂತ ಋತುವಿನ ಮೊದಲ ದಿನವಾಗಿದೆ. ಈ ಸಮಯದಲ್ಲಿ ಭಾರತ ಹಾಗೂ ಇತರ ಪ್ರದೇಶಗಳಲ್ಲಿ ಬರುವ ಸ್ಥಳಗಳಲ್ಲಿ ಹೆಚ್ಚಿನ ಬಿಸಿಲು ಕಂಡು ಬರುತ್ತದೆ. ಹೀಗಾಗಿ ಇಲ್ಲಿ ಜನಜೀವನ ಸ್ವಲ್ಪ ಅಸ್ತವ್ಯಸ್ತವಾಗುವುದು. ಅಲ್ಲದೇ ಈ ತಿಂಗಳಿನಲ್ಲಿ ಹಲವು ರೀತಿಯ ರೋಗ ರುಜಿನಗಳು ಕಾಣಿಸಿಕೊಂಡು ಜನಸಾಮಾನ್ಯರಿಗೆ ತೊಂದರೆಯಾಗುವುದಲ್ಲದೇ ಮಾನವ ಹಾಗೂ ಪ್ರಾಣಿಗಳಿಗೆ ನೀರು ಹಾಗೂ ಆಹಾರದ ಸ್ವಲ್ಪ ಕೊರತೆಯಾಗುವುದು. ಪಕ್ಷಿಗಳಂತೂ ಈ ಸಮಯದಲ್ಲಿ ಬೇರೆಡೆಗೆ ವಲಸೆ ಹೋಗುವವು. ಏಪ್ರಿಲ್ ತಿಂಗಳಿನಲ್ಲಿ ಹಲವಾರು ಜೀವವೈವಿಧ್ಯಗಳು ನಾಶವಾಗುವ ಸಂಭವವಿದೆ. ಆದುದರಿಂದ ಏಪ್ರಿಲ್ ತಿಂಗಳಿನಲ್ಲಿ ನಾವು ಬೇರೆಯವರಿಗೆ ಫೂಲ್ ಮಾಡುತ್ತಿರುತ್ತೇವೆ ಆದರೆ ಪರಿಸರವು ನಮ್ಮನ್ನೇ ಫೂಲ್ ಮಾಡುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿಲ್ಲ. ಹೀಗಾಗಿ ಪರಿಸರಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದು ಒಳಿತು.

ಮಾನವನು ತಾನು ಸಕಲ ಜೀವಸಂಕುಲಗಳಲ್ಲಿ ಒಂದು ಎಂಬುದನ್ನು ಮರೆತಿದ್ದಾನೆ. ಇಡೀ ಜೀವ ಸಂಕುಲ, ಅರಣ್ಯ ಸಂಪತ್ತನ್ನು ನಾಶಮಾಡಲು ಹೊರಟಿದ್ದಾನೆ. ನೈಸರ್ಗಿಕ ಪ್ರದೇಶಗಳನ್ನು ಹಾಗೂ ಅಳಿವಿನಂಚಿನಲ್ಲಿರುವ ಜೀವ ಸಂಕುಲವನ್ನು ರಕ್ಷಿಸಿ ಬೆಳೆಸಬೇಕಾದ ಮಾನವ ಇಂದು ಅಧಿಕಾರ, ಸಂಪತ್ತಿನ ಆಸೆಗಾಗಿ ಪರಿಸರ ನಾಶಕ್ಕೆ ಮುಂದಾಗಿದ್ದಾನೆ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ದೆಸೆಯಿಂದ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇತರ ಜೀವಿಗಳಂತೆ ಮಾನವನೂ ಪ್ರಕೃತಿಯ ನಿಯಮಗಳನ್ನು ಪಾಲಿಸದಿದ್ದರೆ ಇಂದು ಬರಗಾಲವಾಗಿರಲಾರದು. ಹವಾಮಾನ ವೈಪರೀತ್ಯ, ಪರಿಸರ ಮಾಲಿನ್ಯ ಮೊದಲಾದ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಪರಿಸರ ಮಾಲಿನ್ಯದಿಂದ ಜೀವ ಸಂಕುಲ ನಾಶವಾಗುತ್ತಿವೆ. ಇದರ ಪ್ರತಿಫಲ ಮನುಷ್ಯನಿಗೂ ತಟ್ಟಿದೆ. ಮಾನವ ಈಗಾಗಲೇ ಎಚ್ಚೆತ್ತುಕೊಳ್ಳದಿದ್ದರೆ ಅವನ ಅವನತಿ ಖಂಡಿತ.

ಗಾಂಧೀಜಿಯವರು ಯರವಡಾ ಜೈಲಿನಲ್ಲಿದ್ದಾಗ ತಮ್ಮ ಆಶ್ರಮವಾಸಿ ಕಾಕಾ ಕಾಲೇಲ್ಕರ್ರವರು ಒಮ್ಮೆ ಬೇವಿನ ಗಿಡದ ಕೊಂಬೆಗಳನ್ನು ಮುರಿಯುತ್ತಿದ್ದುದನ್ನು ನೋಡಿದರು. ತಮಗೆ ನಾಲ್ಕು ಎಲೆ ಸಾಕಾದರೂ ಹಾಗೆಯೇ ಕೊಂಬೆಯನ್ನು ಮುರಿಯುತ್ತಿರುವುದು ಗಾಂಧೀಜಿಯವರಿಗೆ ಸರಿ ಕಾಣಲಿಲ್ಲ. ಆಗ ಗಾಂಧೀಜಿಯವರು “ಇದು ಹಿಂಸೆಯೆಂದು ಬೇರೆಯವರು ಅರ್ಥ ಮಾಡಿಕೊಳ್ಳದಿದ್ದರೂ, ನಿನಗೂ ಅರ್ಥವಾಗುವುದಿಲ್ಲವೇ? ಕೊಂಬೆಗಳನ್ನು ಯಾಕೆ ಮುರಿಯುತ್ತೀ” ಎಂದರು. ಆಗ ಕಾಕಾರವರು “ಹೊರಗಿನಿಂದ ಟೂಥ್ ಬ್ರಷ್ ತರುವುದನ್ನು ನಿಲ್ಲಿಸಿದ್ದೇವೆ ಅದಕ್ಕೇ ನಮಗೆ ಹಲ್ಲುಜ್ಜಲು ಟೂಥ್ಬ್ರಷ್ ಬದಲಿಗೆ ಬೇವಿನ ಮರದ ಕೊಂಬೆಯ ತುದಿಗಳನ್ನು ಮುರಿದು ಒಂದು ವಾರಕ್ಕಾಗುವಷ್ಟು ಬ್ರಷ್ಗಳನ್ನು ತಯಾರಿ ಮಾಡುತ್ತಿದ್ದೇನೆ”ಎಂದರು. ಆಗ ಗಾಂಧೀಜಿಯವರು “ಕೇವಲ ಒಂದು ಕೊಂಬೆಯ ತುದಿಯನ್ನು ಮಾತ್ರ ಕಿತ್ತಿದರೆ ಸಾಕು ಅದರಿಂದ ಹಲ್ಲುಜ್ಜಿ ಆ ದಿನ ಬಳಸಿದ ಭಾಗವನ್ನು ಸ್ವಲ್ಪ ಕತ್ತರಿಸಿ ನಾಳೆಗಾಗಿ ಬಳಸಬಹುದಲ್ಲವೇ? ಗಿಡದ ಕೊಂಬೆಗಳೂ ಉಳಿಯುತ್ತವೆ ಹಾಗೂ ಗಿಡವು ಹಸಿರಾಗಿರುವುದು”ಎಂದರು. ನಂತರ ಕಾಕಾರವರು ಅವಸರದಲ್ಲಿ ಮಾಡಿದ ತಪ್ಪಿಗಾಗಿ ಪಶ್ಚಾತಾಪ ಪಟ್ಟು ಆ ಗಿಡದ ಪಕ್ಕದಲ್ಲೇ ಮತ್ತೊಂದು ಗಿಡವನ್ನು ನೆಟ್ಟು ತಾವು ಜೈಲಿನಲ್ಲಿರುವವರೆಗೆ ಅದರ ಆರೈಕೆ ಮಾಡಿದರು. ಇದಲ್ಲವೇ, ಪರಿಸರದ ನಿಜವಾದ ಕಾಳಜಿಯೆಂದರೆ.

ಇಂದು ಪರಿಸರದ ಅಸಮತೋಲನದಿಂದ ಶುದ್ಧ ನೀರು ಮತ್ತು ಶುದ್ಧ ಗಾಳಿಯ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆರೆಗಳು ಬತ್ತಿ ಹೋಗುತ್ತಿದ್ದು ಪ್ರತಿ ಹನಿ ನೀರಿಗೂ ಪರದಾಡುವಂತಾಗಿದೆ. ಹೀಗಾಗಿ ಪರಿಸರದ ಬಗ್ಗೆ ಚಿಂತಿಸಿ ಸೂಕ್ತ ಕ್ರಮ ಕೈಗೊಂಡು ಏಪ್ರಿಲ್ ತಿಂಗಳಿನಲ್ಲಿ ಬರಬಹುದಾದ ಬರ, ಬಿಸಿಲು ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸಲು ಹಲವಾರು ರೀತಿಯ ಕ್ರಮ ಕೈಗೊಂಡು ಗಿಡ, ಮರ, ಹೂವುಗಳನ್ನು ಬೆಳೆಸಿ ಏಪ್ರಿಲ್ ತಿಂಗಳನ್ನು ತಂಪಾಗಿಸಿ ಪರಿಸರದ ಸಕಲ ಜೀವ ಸಂಕುಲಗಳನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬಹುದಲ್ಲವೇ? ಆದುದರಿಂದ ಏಪ್ರಿಲ್ ತಿಂಗಳನ್ನು ಏಪ್ರಿಲ್ ಫೂಲ್ ಬದಲಾಗಿ ಹಿಂದಿಯ ಏಪ್ರಿಲ್ ಫೂಲ್(ಹೂವು) ಹಾಗೂ ಏಪ್ರಿಲ್ ಕೂಲ್ ಆಗಿ ಆಚರಿಸುವಂತೆ ಮಾಡೋಣ.

ಎಂ.ಎಚ್.ಮೊಕಾಶಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
SIRAJUDDIN M HORAGINAMANI

Dear Sir….Greetings
The article is too good and informative. And is very relevant to present context.The author wrote it in great manner.Mokashi sir’s article is too impressive.

1
0
Would love your thoughts, please comment.x
()
x