ಏನು ಸೊಗಸಿದೀ ಮಧುರ ಸಂಬಂಧ: ಪೂರ್ಣಿಮಾ ಸುಧಾಕರ ಶೆಟ್ಟಿ

’ಸಂಬಂಧ’ ಈ ಪದವೇ ನನಗೆ ವಿಚಿತ್ರವಾಗಿ ಕಾಣುತ್ತದೆ. ಈ ಸಂಬಂಧ ಅನ್ನುವುದು ಪರಸ್ಪರರನ್ನು ಬೆಸೆಯುವ ಕೊಂಡಿಯಾಗಿ ಮಾನವನ ಜೀವನದಲ್ಲಿ ಮಹತ್ತರವಾದ ಪ್ರಭಾವ ಬೀರುತ್ತದೆ. ಜೀವನದಲ್ಲಿ ಭಾವ ಬಂಧಗಳ ಅನ್ಯೋನ್ಯತೆಯ ಗೂಡು ಕಟ್ಟುವಲ್ಲಿ ಸಹಕಾರಿಯಾಗುತ್ತದೆ. ಹೀಗಿರುವಾಗ ನನ್ನನ್ನು ಅನೇಕ ಸಲ ಕಾಡಿದ, ಕಾಡುತ್ತಿರುವ ಪ್ರಶ್ನೆ ಅಂದರೆ ಸಂಬಂಧ ಅಂದರೇನು? ಸಂಬಂಧಿಕರು ಯಾರು? ಇತ್ಯಾದಿ. ನಾವು ಇವರು ನಮ್ಮ ಸಂಬಂಧಿಕರೆಂದು ಕರೆಯುವುದು ನಮ್ಮ ರಕ್ತ ಸಂಬಂಧಿಗಳನ್ನು. ಹಾಗಿದ್ದರೆ ನಮ್ಮ ಜೀವನದಲ್ಲಿ ಅನೇಕ ರೀತಿಯಲ್ಲಿ ಪ್ರಾಮುಖ್ಯತೆ ಪಡೆಯುವ ಇತರರು ನಮ್ಮ ಸಂಬಂಧಿಕರಲ್ಲವೇ?. ಕೆಲವೊಮ್ಮೆ ನಮ್ಮ ಸಂಬಂಧಿಕರೆಂದು ಕರೆಯಲ್ಪಡುವವರು ನಿಜವಾಗಿ ನಮ್ಮ ಸಂಬಂಧಿಕರೇ ಎಂಬ ಸಂಶಯವೂ ಪದೇ ಪದೇ ನನ್ನನ್ನು ಕಾಡುತ್ತದೆ. ಅಪ್ಪ, ಅಮ್ಮ, ಸಹೋದರ ಸಹೋದರಿಯಿಂದ ಆರಂಭವಾಗಿ ನಮ್ಮ ಸುತ್ತ ಅನೇಕ ಸಂಬಂಧಗಳ ಸರಮಾಲೆ ಪೋಣಿಸಿರುತ್ತದೆ. ಅದರಲ್ಲಿ ಮತ್ತೆ ಅನೇಕ ವಿಭಾಗಗಳು. ತಂದೆಯ ಸಂಬಂಧ, ತಾಯಿಯ ಕಡೆಯ ಸಂಬಂಧ, ಗಂಡನ ಸಂಬಂಧಿಕರು, ಮತ್ತೆ ಅದರಲ್ಲಿ ಕೊಂಬೆ ರೆಂಬೆಗಳು ಹರಡಿ ಬಹು ದೊಡ್ಡ ’ಸಂಬಂಧ’ವೆಂಬ ವೃಕ್ಷ ಬೆಳೆದು ನಿಂತಿರುತ್ತದೆ. ಇದನ್ನು ನೋಡಿದಾಗ ಆಶ್ಚರ್ಯವೂ ಆಗುತ್ತದೆ ಅಲ್ಲವೇ? ಇಷ್ಟು ಜನರಲ್ಲಿ ಯಾರು ನಮ್ಮ ಹಿತವರು ಎಂಬ ಗೊಂದಲದಲ್ಲಿ ಪ್ರತಿಯೊಬ್ಬರೂ ಇರುತ್ತಾರೆ. ಬಹುಶ: ಕೆಲವರಲ್ಲಿ ಉತ್ತರ ಇಲ್ಲದಿರಬಹುದು. ಇನ್ನು ಕೆಲವರು ಬೆರಳೆಣಿಕೆಯ ಹೆಸರನ್ನು ಸೂಚಿಸಬಹುದು.

’ಸಂಬಂಧ’ ಎನ್ನುವುದಕ್ಕೆ ಜಾತಿ ಮತದ ಬಂಧನವಿರಬೇಕೆಂದಿಲ್ಲ. ನಮ್ಮ ಬಗ್ಗೆ ಒಂದಿಷ್ಟು ಕಾಳಜಿ ತೋರಿಸಿ, ಒಂದಷ್ಟು ಪ್ರೀತಿ ತೋರುವವರು ನಮ್ಮ ಬಂಧುಗಳು. ಅವರೊಂದಿಗೆ ಒಂದು ವಿಧದ ಮಧುರ ಸಂಬಂಧ ಆಗಲೇ ಹುಟ್ಟಿಕೊಂಡಿರುತ್ತದೆ. ಅದು ಗುರು-ಶಿಷ್ಯರ ಸಂಬಂಧವಿರಬಹುದು. ಒಬ್ಬ ವಿದ್ಯಾರ್ಥಿಯನ್ನು ಪ್ರೀತಿಯಿಂದ ಕಂಡು ಮಗುವಿನಂತೆ ಕೊಂಡಾಟ ತೋರಿಸುವ ಗುರುಗಳು ನಮ್ಮ ನಡುವೆ ಅದೆಷ್ಟೋ ಇದ್ದಾರೆ. ಮುಗ್ದ ಮಕ್ಕಳನ್ನು ಸ್ವಸ್ಥ ಸಮಾಜದ ಶಿಷ್ಟ ಪ್ರಜೆಗಳನ್ನಾಗಿ ಮಾಡುವ ಶಾಲಾ ಕಾಲೇಜಿನ ಗುರುಗಳು, ತಮ್ಮ ಅರಿವಿನ ಜ್ಞಾನವನ್ನು ತಮ್ಮ ವಿದ್ಯಾರ್ಥಿಗಳಿಗೆ ಹಂಚಿ ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿ ಹೆಸರು ಪಡೆದಿರುವ,  ಉನ್ನತ ಹುದ್ದೆಯಲ್ಲಿದ್ದು ಕೊಂಡು ಆರ್ಥಿಕವಾಗಿ ಸದೃಢವಾಗಿರುವ ವಿದ್ಯಾರ್ಥಿಗಳನ್ನು ಕಂಡು ಹೆಮ್ಮೆ, ಹರ್ಷಪಡುವ ಗುರುಗಳಿಗಿಂತ ದೊಡ್ಡ ಸಂಬಂಧ ಯಾವುದಿದೆ ಹೇಳಿ?

ಮಾಮರವೆಲ್ಲೋ ಕೋಗಿಲೆಯೆಲ್ಲೋ ಎಂಬಂತೆ ಪರಸ್ಪರ ಅರಿಯದವರು ಎಲ್ಲೋ ಒಮ್ಮೆ ಸಿಕ್ಕಿ ಮಾತನಾಡಿದವರು, ಅಂತರ್ಜಾಲದ ಗೆಳೆಯರು, ಸಭೆ-ಸಮಾರಂಭಗಳಲ್ಲಿ ಪರಿಚಿತರಾದವರು, ದಿನನಿತ್ಯದ ರೈಲು ಪ್ರಯಾಣಿಕರು ಹೀಗೆ ಒಂದೇ ಎರಡೆ ನಮ್ಮ ಜೀವನದಲ್ಲಿ ಬಂದು ಹೋಗುವವರು. ಅವರ ಒಡನಾಟದಲ್ಲಿ ದಿನಕಳೆದಂತೆ ಪರಸ್ಪರ ಆತ್ಮೀಯರಾಗಿ ಅವರಲ್ಲಿ ಮಧುರ ಸಂಬಂಧ ಏರ್ಪಡುತ್ತದೆ. ಅಲ್ಲಿ ನಿರ್ಮಲ ಪ್ರೀತಿ ಇರುತ್ತದೆ, ನಿಷ್ಕಲ್ಮಶ ಸ್ನೇಹವಿರುತ್ತದೆ. ಕೆಲವರು ಇಂತಹ ಸಂಬಂಧಗಳನ್ನು ದುರುಪಯೋಗ ಪಡಿಸುವವರೂ ಇದ್ದಾರೆ. ಅಂತಹ ವಿರಳ ಮನ:ಸ್ಥಿತಿಯವರಿಂದ ದೂರವಿದ್ದರೆ ಈ ಸಂಬಂಧ, ಸ್ನೇಹ ಅಮರವಾಗಿರುವುದರಲ್ಲಿ ಅನುಮಾನವಿಲ್ಲ. 

ನಾವು ವಾಸಿಸುವ ಸೊಸೈಟಿ, ಅಪಾರ್ಟ್‌ಮೆಂಟ್, ಚಾಳ್‌ಗಳಲ್ಲಿ ಬೇರೆ ಬೇರೆ ಜಾತಿ ಮತದವರು ನೆಲೆಸುತ್ತಾರೆ. ಬೇರೆ ಬೇರೆ ಭಾಷೆ, ಸಂಸ್ಕೃತಿ, ಸಂಸ್ಕಾರ ಅವರದ್ದಾಗಿರುತ್ತದೆ. ಆದರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರುತ್ತಾರೆ. ಆಪತ್ಕಾಲದಲ್ಲಿ ಆಗುವ ಬಂಧುಗಳೆಂದರೆ ನೆರೆಮನೆಯವರೇ. ಕೆಲವು ನೆರೆಹೊರೆಯವರಂತೂ ಒಂದೇ ಮನೆಯವರ ಹಾಗಿರುತ್ತಾರೆ. ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ. ಅದೆಂತಹ ಮಧುರ ಸಂಬಂಧ ಆಲ್ಲವೇ? ಹಾಗಿರುವಾಗ ಅವರು ಯಾವ ಸಂಬಂಧಿಗಳಿಗಿಂತಲೂ ಕಡಿಮೆಯಿಲ್ಲ. 

ಇನ್ನು ಯುವಕ ಯುವತಿಯರಲ್ಲಿ ಇನ್ನೊಂದು ವಿಧದ ಮಧುರ ಭಾವಗಳಿರುತ್ತವೆ. ಅದು ಸ್ನೇಹ ಸಂಬಂಧ.  ಹದಿಹರೆಯದ ಹೊಳೆಯುವ ಕಣ್ಣುಗಳಲ್ಲಿ ನೂರಾರು ಆಸೆ ಕಟ್ಟುವ ಸ್ನೇಹ ॒ಆ ಸ್ನೇಹಕ್ಕಾಗಿ ಸರ್ವತ್ಯಾಗ ಮಾಡುವ ಭಂಡ ಧೈರ್ಯ…! ಎಂತಹ ಪರಿಸ್ಥಿತಿಯಲ್ಲಿಯೂ ಮಧುರ ಸ್ನೇಹ ಸಂಬಂಧದಿಂದ ಅಗಲಿರಲಾರದ ಮಾಧುರ್ಯತೆ ಆ ಸ್ನೇಹದಲ್ಲಿ. ಇತ್ತೀಚೆಗೆ ಕೆಲವರು ಅಂತಹ ಪವಿತ್ರ ಸ್ನೇಹವನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ನಿಜವಾದ ಸ್ನೇಹಿತರು ಯಾರು ಎಂಬುದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸುವವರೂ ಇದ್ದಾರೆ. ಆದರೂ ಇಲ್ಲಿ ಹೊಳೆದು ಪ್ರಕಾಶಿಸುವುದು ನಿರ್ಮಲ ಸ್ನೇಹ ಮಾತ್ರ. ಅಂತಹ ಸ್ನೇಹಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಕರುಣೆ, ಕಾಳಜಿ, ಪ್ರೀತಿಯೇ ಅದರ ಬುನಾದಿ. ಆದ್ದರಿಂದಲೇ ಆ ಸ್ನೇಹಕ್ಕೆ ಎಂದಿಗೂ ಸಾವಿಲ್ಲ.

ಹದಿಹರೆಯವೇ ಅಂತಹುದು. ಗಾಳಿಯಲ್ಲಿ ಹಾರುವ ಆಸೆ, ಮೀನಿನಂತೆ ಈಜುವ ಆಸೆ. ಪ್ರೀತಿ ಪ್ರೇಮದ ಕಡಲಲ್ಲಿ ಮುಳುಗೇಳುವ ಆಸೆ. ಪುಟಿದೆದ್ದು ಕುಣಿಯುವ ಆಸೆ. ಈ ರೀತಿ ಗೂಡು ಕಟ್ಟಿ ಕುಳಿತ ಆಸೆಗಳು ಪ್ರೇಮವೆಂಬ ಹಕ್ಕಿಯಾಗಿ ರೆಕ್ಕೆ ಬಿಚ್ಚಿ ಹಾರಲು ತವಕಿಸುತ್ತದೆ. ಇದೊಂದು ತರದ ಭ್ರಮಾಲೋಕದ ಮಧುರ ಸಂಬಂಧ. ಇಲ್ಲಿ ಕನಸುಗಳೇ ಹೆಚ್ಚು. ಅದು ನನಸಾಗದಾಗ ಅನುಭವಿಸುವ ನೋವು ತೀವೃತರವಾದುದು.  ಪ್ರೇಮವೆಂಬ ಸಾಗರದಲ್ಲಿ ಈಜಿ ದಡ ಸೇರಿದಾಗ ಅದೊಂದು ಮಧುರ ಪ್ರೇಮ ಸಂಬಂಧ. ಆ ದಡ ಸೇರಲಾರದೆ ಸೋತಾಗ ಭಗ್ನ ಪ್ರೇಮ. ಕೆಲವರು ಇವೆಲ್ಲದರ ಅರಿವಿದ್ದೂ ಆ ಪ್ರೀತಿ, ಪ್ರೇಮ ಬಂಧದಲ್ಲಿ ಸಿಲುಕುವ ಸಂಬಂಧ ಇದೆಯಲ್ಲ ಅದು ಯಾರ ಕಲ್ಪನೆಗೂ ನಿಲುಕದ ಮಧುರ ಸಂಬಂಧ. 

ನಮ್ಮ ಭಾವನೆಗಳನ್ನು ಹಂಚಿಕೊಂಡು, ಮನಸ್ಸನ್ನು ಬಿಚ್ಚಿಡುವ ನಿರ್ಮಲ ಸ್ನೇಹ ಸಂಬಂಧವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಯಾವುದೇ ಕೃತಕತೆಯಿಲ್ಲದ ಸಹಜತೆಯಿಂದ ಅರಳಿದ ಸ್ನೇಹವೆಂಬ ಹೂವು ಮಧುರವಾಗಿರುತ್ತದೆ. ಅದು ಸುವಾಸನಾಭರಿತ ಸಂಬಂಧವಾಗಿ ನಾವಿರುವವರೆಗೆ ನಮ್ಮ ಜೊತೆಗಿರುತ್ತದೆ. ಜೀವನಕ್ಕೆ ಹೊಸ ಚೈತನ್ಯ, ಮುದ ನೀಡುವ ಇಂತಹ ಸಂಬಂಧಗಳು ಅದು ಸ್ನೇಹವಾಗಿರಬಹುದು, ಪ್ರೇಮ ಸಂಬಂಧವಾಗಿರಬಹುದು, 

ರಕ್ತಸಂಬಂಧವಾಗಿರಬಹುದು ಅದು ಪುಳಕಿತ ನೀಡುತ್ತವೆ. ಮತ್ತೆ ಮತ್ತೆ ಮೊಗೆಮೊಗೆದು ಆ ಪ್ರೀತಿಯ ಧಾರೆಯನ್ನು ಹರಿಸುವ ಬಯಕೆ ನಮ್ಮದಾಗುತ್ತದೆ. ನಾವು ದು:ಖದಲ್ಲಿರುವಾಗ ನಮ್ಮ ಕಣ್ಣೀರನ್ನು ಒರೆಸುವ ಆ ಪ್ರೀತಿಯ ಕೈಗಳು ಸದಾ ನಮ್ಮೊಂದಿಗೆ ಬೆಸೆದುಕೊಂಡಿರಬೇಕೆಂಬ ಆಸೆಯಾಗುತ್ತದೆ. ಅದೇ ನಮ್ಮ ಜೀವನದ ಜೀವಾಳವಾಗಿರುತ್ತದೆ. ಈ ಸಂಬಂಧ ಮಧುರವಾಗಿ ನಮ್ಮ ಜೀವನದುದ್ದಕ್ಕೂ ಭದ್ರವಾಗಿರುತ್ತದೆ. ಅಂತಹ ಮಧುರ ಸಂಬಂಧ ಏರ್ಪಡುವುದು ಕೇವಲ ಬೆರಳೆಣಿಕೆಯ ಜನರೊಂದಿಗೆ ಮಾತ್ರ. ಎಲ್ಲರೂ ನಮ್ಮ ಆತ್ಮೀಯರಾಗಲು ಸಾಧ್ಯವಿಲ್ಲ ಅಥವಾ ನಾವು ಎಲ್ಲರ ಜೊತೆ ಬೆರೆಯಲಾಗುವುದಿಲ್ಲ. ಅಹಂ ಇಲ್ಲದ ಗಹನವಾದ ಸಂಬಂಧವೇ ಗೆಳೆತನ. ಅಂತಹ ಸ್ನೇಹದ ಬಂಧನವನ್ನು ಕಳಚಬೇಕೆಂದರೂ ಆಗಲಾರದ ಬಂಧ. ಅದೊಂದು ಸದಾ ಸುವಾಸನೆ ಬೀರುವ ನಂದನವನದಂತೆ. ಅಲ್ಲಿ ಮನ ಮನಸ್ಸಿನ ಸ್ಪಂದನವಿರುತ್ತದೆ. ದಿನ ದಿನವೂ ಹೊಸತನವಿರುತ್ತದೆ.

ಪುರಾಣಗಳ ಪುಟ ತಿರುವಿದಾಗಲೂ ನಮಗೆ ಗೆಳೆತನಕ್ಕೆ ಉತ್ತಮ ಉದಾಹರಣೆಗಳು ದೊರೆಯುತ್ತವೆ. ಮಹಾಭಾರತದ ದುರ್ಯೋಧನ-ಕರ್ಣನ ಸ್ನೇಹವಾಗಿರಬಹುದು, ಕೃಷ್ಣ ಕುಚೇಲರ ಮಧುರ ಗೆಳೆತನಕ್ಕಿಂತ ಹೆಚ್ಚಿನ ನಿದರ್ಶನ ಬೇಕೇ? ಕೆಲವರೊಂದಿಗಿನ ಸ್ನೇಹ ಅದು ನಮ್ಮ ಮನಸ್ಸಿನ ತುಮುಲವನ್ನು ಮರೆಸಿ, ದುಗುಡವನ್ನು  ನಿವಾರಿಸುವ ಜೀವನದಿ. ನಮ್ಮ ಮನಸ್ಸಿಗೆ ಹರುಷ ತುಂಬಿಸುವ ಇಂತಹ ಮಿತ್ರರು ಎಷ್ಟು ಆತ್ಮೀಯರಾಗುತ್ತಾರೆ. ಅವರೊಂದಿಗೆ ಮಾತನಾಡಿದಷ್ಟು ವಿಷಯಗಳು ಇರುತ್ತವೆ. ಮಾತಿಗೆ ಕೊನೆಯೇ ಇರುವುದಿಲ್ಲ. ಅವರನ್ನು ಅಗಲಬೇಕಾದ ಪರಿಸ್ಥಿತಿ ಬಂದಾಗ ಕಣ್ಣೀರಿನ ಕೋಡಿ ಹರಿಯುತ್ತದೆ. ಅಂತಹ ಸ್ನೇಹ ದಕ್ಕಲು ಪುಣ್ಯ ಮಾಡಿರಬೆಕು. ಅದು ಎಲ್ಲರಿಗೂ ದೊರೆಯುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ.

ಒಟ್ಟಿನಲ್ಲಿ ಈ ’ಮಧುರ ಸಂಬಂಧ" ಎನ್ನುವುದು ಕೇವಲ  ರಕ್ತಗತವಾಗಿ ಬರಬೇಕೆಂದಿಲ್ಲ. ಮುಖ್ಯವಾಗಿ  ಅದು ಮನಸ್ಸನ್ನು ಬೆಸೆಯಬೇಕು. ಅಲ್ಲಿ ಪ್ರೀತಿಯ ಕುಸುಮ ಅರಳಬೇಕು. ಪ್ರೇಮದ ಸುವಾಸನೆ ಬೀರಬೇಕು. ದಿನಗಳೆದಂತೆ ಅಲ್ಲಿ ಸುಭದ್ರತೆಯ ಗೋಚರವಾಗಬೇಕು. ಸಣ್ಣ ಸಣ್ಣ  ದು:ಖದಲ್ಲಿಯೂ ಪಾಲ್ಗೊಳ್ಳಬೇಕು, ಪುಟ್ಟ ಪುಟ್ಟ ವಿಷಯಗಳಿಗೂ ಖುಷಿ ದೊರೆಯಬೇಕು. ಆ ಸಂಬಂಧ ತನ್ನಷ್ಟಕ್ಕೆ ಪ್ರೀತಿಗೆ ಪಾತ್ರವಾಗಬೇಕು. ಬದುಕಿನ ಭಾವಗಳನ್ನು ಮೀಟಬೇಕು. ಸ್ವಾರ್ಥವಿಲ್ಲದ, ನಿಷ್ಕಲ್ಮಶ, ನಿರ್ಮಲ ಪ್ರೀತಿಯ  ಸುಮಧುರ ಸಂಬಂಧವೆಂಬ ಬಂಧ, ಸಂಬಂಧ ಸರ್ವರ ಜೀವನದಲ್ಲಿ ಹೊಸ ಚೇತನ, ಚೈತನ್ಯ ನೀಡಿದಾಗ ಖಂಡಿತವಾಗಿಯೂ ನಮಗೆ ಅನಿಸದಿರದು " ಏನು ಸೊಗಸದೀ ಮಧುರ ಸಂಬಂಧ".

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x