ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ: ನಾಗೇಶ್ ಪ್ರಸನ್ನ.ಎಸ್.

ಓದಿಕೊಂಡಿದ್ದನ್ನೆಲ್ಲಾ ಬರೆಯಲಾಗುವುದಿಲ್ಲ, ಅರಿತುಕೊಂಡಿದ್ದನ್ನಷ್ಟೇ ಬರೆಯಲಾಗುವುದು. ಅದಲ್ಲದೇ, ಅರಿತುಕೊಂಡ ಎಷ್ಟೋ ವಿಷಯಗಳಲ್ಲಿ ಕೆಲವು ಮರೆತು ಹೋಗುವುದೂ ಉಂಟು. ಮರೆತ ವಿಷಯಗಳನ್ನು ಜ್ಞಾಪಿಸಿಕೊಂಡು ಬರೆಯುವುದು ಮಾತ್ರ ಕೆಲವೇ ಕೆಲವು. ಅಂತಹ ಕೆಲವು ವಿಷಯಗಳನ್ನು ಬರೆಯಲೆತ್ನಿಸಿದಾಗಲೇ ತಿಳಿದುಕೊಂಡಿರುವುದು ಎಷ್ಟೆಂದು ತಿಳಿಯುವುದು. ಈ ಒಂದೆರಡು ವಿಷಯಗಳನ್ನು ತಿಳಿದ ಮೇಲೂ #ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ#

ನಾವು ಮೊದಲೇ ಸಿದ್ಧರಿರುತ್ತೇವೆ. ಯಾವ ವಿಷಯದ ಬಗ್ಗೆ ಬರೆಯಬೇಕು, ಯಾವ ಅಂಶಗಳನ್ನು ಬರೆಯಬೇಕು, ಯಾವ ಅಳತೆಯಲ್ಲಿ ಬರೆಯಬೇಕು ಮತ್ತು ಇತ್ಯಾದಿ. ಬರವಣೆಗಯಲ್ಲಿ ಶುದ್ಧತೆಯ ಜೊತೆಗೆ ಪಕ್ವತೆ ಇರಬೇಕು. ಬರೆಯುತ್ತಿರುವ ವಿಷಯದ ಬಗ್ಗೆ ಆಳವಾದ ಜ್ಞಾನ ಇಲ್ಲದಿದ್ದರೂ ಕೂಡ ಓದುಗರು ಗೊಂದಲಕ್ಕೊಳಗಾಗದಂತೆ ಬರೆಯಬೇಕು ಹಾಗೂ ಅದೇ ವಿಷಯದ ಮೂಲಕ ಅವರನ್ನು ಬೆರೆಯಬೇಕು. ಬೆರೆತಷ್ಟೂ ಅರಿಯಲು ಸಾಧ್ಯ. ಅದೇ ರೀತಿ, ಸಾಧ್ಯವಾದಷ್ಟು ಬೆರೆಯುವುದನ್ನು ಅರಿತಿರಬೇಕು. ಇದನ್ನು ಅರಿತಿದ್ದರೂ ಕೂಡ #ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ#

ಬರವಣಿಗೆಗೆ ಯಾವುದೇ ಜಾತಿ-ಮತ ಇಲ್ಲ, ಯಾವುದೇ ಭೇದಬುದ್ಧಿ ಇಲ್ಲ, ಯಾವುದೇ ಕಟ್ಟುಪಾಡುಗಳಿಲ್ಲ, ಯಾವುದೇ ರೀತಿಯ ಕ್ರಮಗಳೂ ಇಲ್ಲ. ಬರೆಯಬೇಕೆಂದುಕೊಂಡರೆ ಅದು ಒಂದು ಸಾಲಿನಲ್ಲಾಗಲೀ ಅಥವಾ ನೂರು ಸಾಲುಗಳಲ್ಲಾಗಲೀ ಬರೆಯಬಹುದು. ಪದ್ಯವೇ ಆಗಲೀ, ಗದ್ಯವೇ ಆಗಲೀ, ದ್ವಿಪದಿ, ತ್ರಿಪದಿ ಅಥವಾ ಷಟ್ಪದಿಯಾಗಲೀ ಬರೆಯಬಹುದು. ಕತೆಯೂ ಬರೆಯಬಹುದು, ಕವಿತೆಯೂ ಬರೆಯಬಹುದು. ಅಲ್ಲದೇ, ಗಜ಼ಲ್ ಗಳನ್ನೂ ಬರೆಯಬಹುದು. ಆದರೆ, ಬರಹಗಾರನಿಗೆ ವಸ್ತು ಯಾವುದು ಎಂದು ಗೊತ್ತಿರಬೇಕು. ಈ ವಿಷಯ ಗೊತ್ತಾದರೂ ಈಗಲೂ #ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ#

ನಮ್ಮ ಯೋಚನಾ ಲಹರಿಗಳು ನಮಗೇ ಹೇಳದಂತೆ ಎಲ್ಲೆಲ್ಲಿಯೋ ಹೋಗುತ್ತವೆ, ಯಾರ್ಯಾರನ್ನೋ ಸೇರುತ್ತವೆ, ಒಮ್ಮೊಮ್ಮೆ ನಮ್ಮನ್ನೇ ಕಾಡುತ್ತವೆ ಕೂಡ. ಅವು ಹಾಗಿದ್ದರೇ ಚಂದ. ಏಕೆಂದರೆ, ನಾವು ಯಾವುದೇ ಒಂದು ವಿಷಯದ ಬಗ್ಗೆ ಯೋಚಿಸಿದಾಗಲೂ ನಮಗೆ ಅದರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತಿಳುವಳಿಕೆ ಇಲ್ಲವಾದರೂ ಅಥವಾ ಘಟಿಸಿ ಹೋದ ಒಂದು ವಿಷಯದ ಬಗ್ಗೆ ಪೂರ್ಣ ಮಾಹಿತಿ ಇದ್ದರೂ ಕೂಡ ಅವು ನಮಗೆ ಮಾತ್ರ ಚೆನ್ನಾಗಿ ತಿಳಿದಿರುತ್ತದೆ. ಅದರ ಕಾರಣ, ಆ ವಿಷಯವನ್ನು ಅರಿತುಕೊಳ್ಳುವಾಗ ನಾವು ತೋರುವ ಅಥವಾ ತೋರಿದ್ದ ಆಸಕ್ತಿಯಷ್ಟೇ. ನಾವು ಆಸಕ್ತಿಯನ್ನು ತೋರದಿದ್ದರೆ ಯಾವ ವಿಷಯವೂ ಪೂರ್ಣವಾಗಿ ತಿಳಿದುಕೊಳ್ಳಲಾಗುವುದಿಲ್ಲ. ಏನನ್ನೂ ತಿಳಿದುಕೊಳ್ಳದಿರೆ, ಯೋಚನೆ ಮಾಡುವುದೂ ಕೂಡ ಕಡಿಮೆಯಾಗುತ್ತದೆ. ಇದನ್ನೆಲ್ಲಾ ಯೋಚಿಸಿದರೂ #ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ#

ಕಲ್ಪನೆ ನಮ್ಮ ಊಹೆಗೂ ಮೀರಿದ್ದಾಗಿದೆ. ವಾಸ್ತವದಲ್ಲಿ ಹೇಳುದಾದರೆ, ಮೀರಿದ್ದಾಗಿರಬೇಕು. ಆದರೆ, ನಾವು ಕಲ್ಪನೆಯೊಳಗಡೆ ಸಿಲುಕಬಾರದು. ನಾವು ನಡೆದಷ್ಟೂ ದಾರಿಯಿದೆ, ಸವೆಸಿದಷ್ಟೂ ಬದುಕಿದೆ. ಆದರೆ ನಾವು ಅದನ್ನು ಕಲ್ಪಿಸಿಕೊಳ್ಳಬಾರದು ಬದಲಾಗಿ, ಅನುಭವಿಸಬೇಕು. ಯಾವುದೇ ಒಂದು ವಿಷಯವನ್ನು ಅನುಭವಿಸಿದರೆ ಅದು ಕಲ್ಪನೆಯಾಗಬಾರದು; ಕಲ್ಪಿಸಿಕೊಂಡ ವಿಷಯವನ್ನು ಕಲ್ಪನೆಗೂ ಮೀರಿ ಅನುಭವಿಸಬೇಕು. ಬರವಣಿಗೆಯ ಮೂಲವೂ ಇದೇ – ಕಲ್ಪಿಸಿಕೊಂಡು ಮತ್ತು ಅನುಭವಿಸಿಕೊಂಡೇ ಬರೆಯಬೇಕು. ಇಷ್ಟೆಲ್ಲಾ ಕಲ್ಪಿಸಿಕೊಂಡರೂ #ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ#

ಒಮ್ಮೊಮ್ಮೆ ಜೀವನ ವಾಸ್ತವದಲ್ಲಿದ್ದರೂ ಕೂಡ ಕೇವಲ ಕಾಲ್ಪನಿಕ ಅನ್ನಿಸುವುದೂ ಉಂಟು.
ಒಮ್ಮೊಮ್ಮೆ ಕಲ್ಪನೆ ವಾಸ್ತವವಾಗಿ ತಿರುಗಿದ್ದೂ ಇದೆ.
ಇದೆಲ್ಲಾ ತಿಳಿದರೂ,
ಹೇಗೆ ಬರೆಯಬೇಕೆಂಬುದೆಂದು ಗೊತ್ತಾಗುತ್ತಿಲ್ಲ.
ಹೀಗೇ ಬರೆಯಬೇಕೆಂಬುದೂ ಗೊತ್ತಾಗುತ್ತಿಲ್ಲ.
ಹಾಗೇ ಬರೆಯಬೇಕೆಂಬುದೂ ಗೊತ್ತಾಗುತ್ತಿಲ್ಲ.
ಹೇಗೋ ಬರೆಯಬೇಕೆಂಬುದಾಗಲೀ ಗೊತ್ತಾಗುತ್ತಿಲ್ಲ.
ಒಟ್ಟಿನಲ್ಲಿ, #ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ.#
ನಿಮಗೆ ಗೊತ್ತಾದಲ್ಲಿ ದಯಮಾಡಿ ತಿಳಿಸಿಕೊಡಿ.
ಧನ್ಯವಾದಗಳು.

-ನಾಗೇಶ್ ಪ್ರಸನ್ನ.ಎಸ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x