ಏನಿದು ಮೇಕೆದಾಟು???: ಅಖಿಲೇಶ್ ಚಿಪ್ಪಳಿ


ಕೊಡಗಿನಲ್ಲಿ ಹುಟ್ಟಿದ ಜೀವನಾಡಿ ನದಿ ಕಾವೇರಿಗೆ ಸಂಗಮ ಎಂಬಲ್ಲಿ ಅರ್ಕಾವತಿ ಎಂಬ ಮತ್ತೊಂದು ನದಿ ಸೇರುತ್ತವೆ. ಇಲ್ಲಿಂದ ಜಲಪಾತದೋಪಾದಿಯಲ್ಲಿ ಕಾವೇರಿ ದುಮ್ಮಿಕ್ಕುತ್ತಾಳೆ. ಕಡಿದಾದ ಕಣಿವೆಯಲ್ಲಿ ಸಾಗುವ ಕಾವೇರಿ ಸಂಗಮದಿಂದ ಮೂರುವರೆ ಕಿ.ಮಿ. ಸಾಗುವಷ್ಟರಲ್ಲಿ ಮೇಕೆದಾಟು ಸಿಗುತ್ತದೆ. ಹಿಂದೊಮ್ಮೆ ಹುಲಿಯೊಂದು ಮೇಕೆಯನ್ನು ಹಿಡಿಯಲು ಅಟ್ಟಿಸಿಕೊಂಡು ಬಂತಂತೆ. ಬೆದರಿದ ಮೇಕೆ ಜೋರಾಗಿ ಓಡಿ ಬಂದು ಜೀವವುಳಿಸಿಕೊಳ್ಳಲು ನದಿಯ ಈ ದಡದಿಂದ ಆ ದಡಕ್ಕೆ ಜಿಗಿಯಿತಂತೆ, ಹುಲಿಗೆ ಹಾರಲು ಸಾಧ್ಯವಾಗಲಿಲ್ಲ. ಇಲ್ಲಿ ಮೇಕೆಯ ಶೌರ್ಯವನ್ನು ಹೊಗಳಲು ಈ ಪ್ರದೇಶಕ್ಕೆ ಮೇಕೆದಾಟು ಎಂದು ಕರೆಯಲಾಯಿತು ಎಂಬುದು ಜಾನಪದ ಕತೆ. ಕತೆ ಸುಳ್ಳಿದ್ದರೂ ಇರಬಹುದು ಆದರೆ, ಈ ವಿಷಯದಲ್ಲಿ ರೈತರನ್ನು ಸರ್ಕಾರಗಳು ಮೇಕೆ-ಕುರಿಗಳನ್ನು ಮಾಡುತ್ತಿವೆಯೇ ಎಂಬುದನ್ನು ಕೊಂಚ ಆಮೇಲೆ ನೋಡೋಣ?

ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ, ಹಲವು ಉಪನದಿಗಳನ್ನು ಹೊಂದಿ, ಬಳುಕುತ್ತಾ, ಭೋರ್ಗರೆಯುತ್ತಾ, ಕೃಷಿಭೂಮಿಗೆ ನೀರೆರೆಯುತ್ತಾ ಸಾಗುವ ಕರ್ನಾಟಕದ ಗಂಗೆಯೆಂದೇ ಪ್ರಸಿದ್ಧವಾದ ಕಾವೇರಿ ನದಿ ನೀರಿಗಾಗಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಶತಮಾನಗಳಿಂದ ಜಗಳ ನಡೆಯುತ್ತಿದೆ. 1892ರ ಬ್ರಿಟೀಷ್ ಆಡಳಿತದಲ್ಲೆ ಮೈಸೂರು ಮಹಾರಾಜರ ಆಡಳಿತಕ್ಕೂ ಹಾಗೂ ಮದ್ರಾಸ್ ರೆಸಿಡೆನ್ಸಿಯ ನಡುವೆ ಶುರುವಾದ ಜಗಳ ಇಂದಿಗೂ ಬಗೆಹರಿಯುತ್ತಿಲ್ಲ. ಅದೆಷ್ಟು ನಾಯಕರು, ಮಂತ್ರಿಗಳು ಬಂದು ಹೋದರೂ, ಎಲ್ಲಾ ಪಕ್ಷಗಳು ಎರಡೂ ರಾಜ್ಯಗಳಲ್ಲಿ ಆಡಳಿತ ನಡೆಸಿವೆ. ಕಾವೇರಿ ನೀರಿಗಾಗಿ ನಡೆಯುವ ಈರ್ವರ ಜಗಳಕ್ಕೆ ಶಾಶ್ವತ ಪರಿಹಾರ ಹುಡುಕುವಲ್ಲಿ ವಿಫಲವಾಗಿವೆ. 

ಕರ್ನಾಟಕದಲ್ಲಿ ಕಾವೇರಿಗೆ ಅಡ್ಡಲಾಗಿ 5 ಆಣೆಕಟ್ಟುಗಳನ್ನು ಈಗಾಗಲೇ ಕಟ್ಟಲಾಗಿದೆ. ಕಾವೇರಿಯಿಂದ ವಿದ್ಯುತ್ತನ್ನು ಪಡೆಯುತ್ತಾ 113 ವರ್ಷಗಳಾದವು. ಇದೇ ವಿವಾದ ಎರಡೂ ರಾಜ್ಯಗಳ ಸರ್ಕಾರಗಳನ್ನೇ ಅಡ್ಡಡ್ಡ ಮಲಗಿಸಿದೆ. ನೀರಿಗಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡೂ ರಾಜ್ಯಗಳು ನೀರಿನ ಹಂಚಿಕೆ ವಿಷಯದಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡಿವೆ. ಸರ್ವೋಚ್ಛ ನ್ಯಾಯಾಲಯದ ಕದವನ್ನು ಪ್ರತಿ ಬಾರಿ ತಟ್ಟುತ್ತಾರೆ. ಕಾವೇರಿ ಪಾತ್ರದಲ್ಲಿ ಏನೇ ಮಾಡುವುದಾದರೂ ತಮಿಳುನಾಡು ಕ್ಯಾತೆ ತೆಗೆಯುತ್ತದೆ. ಅಲ್ಲಿನ ಮುಖ್ಯಮಂತ್ರಿಗಳು ಯಾರೇ ಆಗಲಿ ಕಾವೇರಿ ವಿಷಯದಲ್ಲಿ ಅತಿಸ್ವಾರ್ಥ ಪ್ರದರ್ಶಿಸುತ್ತಾರೆ. ಹೀಗೆ ಮಾಡದಿದ್ದಲ್ಲಿ ಕುಳಿತ ಕುರ್ಚಿಯನ್ನು ಕಳೆದುಕೊಳ್ಳುವ ಅಪಾಯವೇ ಹೆಚ್ಚು. ಕರ್ನಾಟಕ ಮತ್ತು ಕಾವೇರಿಯನ್ನು ಮಧ್ಯ ತರದೇ ಚುನಾವಣೆ ಗೆಲ್ಲುವುದು ಸಾಧ್ಯವಾಗುವುದಿಲ್ಲ. ರಕ್ತವನ್ನಾದರೂ ನೀಡಿಯೇನು, ನೀರಿನ ವಿಷಯದಲ್ಲಿ ರಾಜಿಯಿಲ್ಲ ಎಂಬಂಥ ರೋಷದ-ಆಕ್ರೋಷದ ನುಡಿಗಳಿಗೆ ಬರವಿಲ್ಲ. ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ರಚಿಸಿದ ಕಾವೇರಿ ಟ್ರಿಬ್ಯೂನಲ್ ಆದೇಶದಂತೆ ಪ್ರತಿವರ್ಷ ಕರ್ನಾಟಕ ತಮಿಳುನಾಡಿಗೆ 192 ಟಿ.ಎಂ.ಸಿ. ನೀರು ಬಿಡಬೇಕು. ಚೆನ್ನಾಗಿ ಮಳೆಯಾದ ವರ್ಷ ಅಷ್ಟೊಂದು ತೊಂದರೆಯಾಗದು ಎಂದು ಕೊಂಡರೂ, ಮಳೆಯ ಪ್ರಮಾಣ ಕಡಿಮೆಯಾದಾಗ ತಗಾದೆ ಶುರುವಾಗುತ್ತದೆ. ಕರ್ನಾಟಕದ ಪ್ರಕಾರ ಒಪ್ಪಂದದಂತೆ ನಾವು ನೀರು ಬಿಡುವಲ್ಲಿ ಯಾವಾಗಲೂ ತಪ್ಪಿಲ್ಲ, ಬದಲಿಗೆ ಹೆಚ್ಚು ನೀರನ್ನೇ ಬಿಟ್ಟಿದ್ದೇವೆ. ನಾವು ಬಿಟ್ಟ ಹೆಚ್ಚು ನೀರು ಯಾವುದೇ ಉಪಯೋಗವಾಗದೇ ಹಾಗೆಯೇ ಬಂಗಾಳಕೊಲ್ಲಿ ಸೇರುತ್ತದೆ. ತಮಿಳು ನಾಡು ಅನವಶ್ಯಕವಾಗಿ ತಕರಾರು ಹೂಡುತ್ತದೆ ಎಂದು ಹೇಳಿದರೆ, ಸಮರ್ಪಕ ನೀರು ಪೂರೈಕೆಯಿಲ್ಲದೆ ನಮ್ಮ ಸಾಂಬಾ ಬೆಳೆಗಳು ನಾಶವಾಗುತ್ತಿದೆ, ರೈತರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ತುರ್ತಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ನಮಗೆ ನ್ಯಾಯ ಒದಗಿಸಿ ಎಂದು ತಮಿಳುನಾಡು ಆಗ್ರಹಿಸುತ್ತದೆ.

ನದಿ ಹುಟ್ಟುವುದು ಕರ್ನಾಟಕದಲ್ಲಿಯೇ ಆದರೂ ತಮಿಳುನಾಡು ಕೆಳಭಾಗದಲ್ಲಿರುವುದರಿಂದ ಕಾವೇರಿಯ ನದಿಯಿಂದ ಇಂಗಲ್ಪಟ್ಟ ಅಂತರ್ಜದ ದೊಡ್ಡ ಪಾಲುದಾರ ತಮಿಳುನಾಡೇ ಆಗಿದೆ. ಆದ್ದರಿಂದ, ಹಂಚಿಕೆ ವಿಷಯದಲ್ಲಿ ಇದನ್ನು ಪರಿಗಣಿಸಬೇಕು ಎಂಬುದು ಕರ್ನಾಟಕದ ವಾದ. ನಮ್ಮ ಹಕ್ಕಿನ ನೀರನ್ನು ನಾವು ಪಡೆದೇ ತೀರುತ್ತೇವೆ, ಮಳೆಯಾಗಲಿ ಬಿಡಲಿ ನಮಗೆ ಸೇರಬೇಕಾದ ನೀರಿನ ಒಂದೊಂದು ಹನಿಯನ್ನೂ ಪಡದೇ ತೀರುತ್ತೇವೆ ಎಂಬುದು ತಮಿಳುನಾಡಿನ ಹಠ. ಜೀವಜಲವಾದ ನೀರು ಈ ಭೂಮಿಯ ಮೇಲೆ ವಾಸಿಸುವ ಎಲ್ಲಾ ಚರಾಚರಗಳ ಸ್ವತ್ತು. ನೀರಿಲ್ಲದೆ ಜೀವ-ಜೀವಿಗಳಿಲ್ಲ. ವಿವಾದ ಶುರುವಾದಾಗಿನಿಂದ ಜನಸಂಖ್ಯೆ ಏರುತ್ತಲೇ ಇದೆ. ಕೃಷಿಭೂಮಿಗಳು ಲಕ್ಷಾಂತರ ಎಕರೆಗಳನ್ನು ಹೆಚ್ಚಿಸಿಕೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ದಣಿವರಿಯದ ಕಾವೇರಿ ಹರಿಯುತ್ತಲೇ ಇದ್ದಾಳೆ. ವಿವಾದಗಳಿಲ್ಲದಿದ್ದರೆ, ರಾಜಕಾರಣಿಗಳಿಗೆ ಕೆಲಸವವಿರುವುದಿಲ್ಲ. ಸದಾ ಏನಾದರೂ ವಿವಾದಗಳನ್ನು ಹುಟ್ಟು ಹಾಕಿ ಜನರ ಗಮನವನ್ನು ಬೇರೆಡೆ ಸೆಳೆಯುವುದು ರಾಜಕಾರಣಿಗಳ ಲಾಗಾಯ್ತಿನ ತಂತ್ರ. ಸಮಸ್ಯೆ ಇಲ್ಲದಿದ್ದರೆ, ಸಮಸ್ಯೆಯನ್ನು ಹುಟ್ಟು ಹಾಕು ಎನ್ನುವುದು ರಾಜಕೀಯಸ್ಥರ ಮಂತ್ರ. ಹಾಗಾಗಿ ಕಾವೇರಿ ನೀರಿನ ಹಂಚಿಕೆಯಲ್ಲಿ ಲಾಗಾಯ್ತಿನಿಂದ ಎಲ್ಲಾ ಸರ್ಕಾರಗಳು ವೈಪಲ್ಯ ಹೊಂದಿವೆ. ಕಾವೇರಿ ತೀರದಲ್ಲಿ ಹೆಚ್ಚಾಗಿ ನೀರು ಹೆಚ್ಚು ಬಯಸುವ ಭತ್ತ-ಕಬ್ಬು ಇತ್ಯಾದಿಗಳನ್ನು ಬೆಳೆಯಲಾಗುತ್ತದೆ. ಕೃಷಿಗೆ ನೀರು ಬೇಕು ನಿಜ. ಅಗತ್ಯಕ್ಕಿಂತ ನೀರಿನ ಪ್ರಮಾಣ ಹೆಚ್ಚಾದರೆ, ಮಣ್ಣು ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ. ಕ್ಷಾರಗೊಳ್ಳುತ್ತದೆ. ಇಂತಹ ಭೂಮಿಯಲ್ಲಿ ಬೆಳೆ ಬೆಳೆಯುವುದು ಲಾಭದಾಯಕವಲ್ಲ. ಒಳಸುರಿಗಳನ್ನು ಹೆಚ್ಚು ಬೇಡುತ್ತದೆ. ಇದರಿಂದ ಉತ್ಪಾದನ ವೆಚ್ಚ ಹೆಚ್ಚಾಗುತ್ತದೆ. ಕಡೇ ಪಕ್ಷ ಈ ಒಂದು ಅಂಶವನ್ನು ಕರ್ನಾಟಕ-ತಮಿಳುನಾಡು ರೈತರಿಗೆ ಅರ್ಥ ಮಾಡಿಸುವ ಪ್ರಯತ್ನವನ್ನು ಈರ್ವರೂ ಮಾಡಿಲ್ಲ. ಮಾಡುವುದೂ ಇಲ್ಲ. ರಾಜಸ್ಥಾನದಂತಹ ಮರುಭೂಮಿಯ ಬರದ ನಾಡಿನಲ್ಲಿ ರಾಜೇಂದ್ರ ಸಿಂಗ್‍ರಂತಹವರು ನೀರುಕ್ಕಿಸಲು ಸಾಧ್ಯವಾಗುತ್ತದೆ. 

ವಿಪರ್ಯಾಸವೆಂದರೆ, ಇಲ್ಲಿ ಉಕ್ಕುತ್ತಿರುವ ನೀರನ್ನೇ ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಈರ್ವರೂ ವಿಫಲವಾಗಿದ್ದಾರೆ. ಕಾವೇರಿಯ ವಿಷಯದಲ್ಲಿ ಕರ್ನಾಟಕ-ತಮಿಳುನಾಡು ಎಷ್ಟು ಹೊಲಸಾಗಿ ವರ್ತಿಸುತ್ತವೆಂದರೆ, ಒಂದೊಂದನ್ನೂ ಗೀಚುತ್ತಾ ಹೋದರೆ ಅದೇ ಒಂದು ಬೃಹತ್ ಸಂಪುಟಗಳ ಕಾದಂಬರಿಯಾದೀತು. ವಾಸ್ತವಿಕತೆಯನ್ನು ದೂರವಿಟ್ಟು ಭಾವನಾತ್ಮಕವಾದ ವಿಷಯಗಳಿಗೆ ಅಹಂಕಾರದ ಮಣೆ ಹಾಕುತ್ತಾ ಬಂದಿರುವುದೇ ಸಮಸ್ಯೆಗಳು ಮುಂದುವರೆಯುತ್ತಿರುವುದಕ್ಕೆ ಕಾರಣ. ಇಸ್ರೇಲ್‍ನಂತಹ 60% ಮರುಭೂಮಿ ದೇಶದಲ್ಲಿ ವಾರ್ಷಿಕ ಸರಾಸರಿ ಮಳೆ ಪ್ರಮಾಣ 100 ಮಿಮಿ ಗಡಿಯನ್ನು ದಾಟುವುದಿಲ್ಲ. ಇಲ್ಲಿ ಕಾವೇರಿ ಹುಟ್ಟುವ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 2000-2500 ಮಿಮಿಗಳು. ಇಸ್ರೇಲಿನ ಕೃಷಿ ತಜ್ಞರು ಕಡಿಮೆ ನೀರಿನಿಂದ ಅಧಿಕ ಬೆಳೆಯನ್ನು ಬೆಳೆದು ರಫ್ತು ಮಾಡುತ್ತಾರೆ. ಇಲ್ಲಿ ದಂಡಿಯಾದ ನೀರಿಗಾಗಿಯೇ ದೊಂಬಿಗಳಾಗಿದೆ. ಸರ್ಕಾರಿ ಆಸ್ತಿಪಾಸ್ತಿ ನಷ್ಟವಾಗಿದೆ. ಲಕ್ಷಾಂತರ-ಕೋಟ್ಯಾಂತರ ರೂಪಾಯಿಗಳ ಹಾನಿ ಸಂಭವಿಸಿದೆ. ಬಂದ್ ದಿನಗಳಲ್ಲಿ ಇಡೀ ವ್ಯವಸ್ಥೆಯೇ ಕುಸಿದು, ಲಕ್ಷಾಂತಾರ ಸಾಮಾನ್ಯರು ಕಷ್ಟ-ಕೋಟಲೆಗಳನ್ನನುಭವಿಸಿದ್ದಾರೆ. ಹಾರಂಗಿ, ಕಬಿನಿ, ಹೇಮಾವತಿ ಇತ್ಯಾದಿಗಳಿಗೆ ಆಣೆಕಟ್ಟುವಾಗಲೂ ತಮಿಳುನಾಡು ತಗಾದೆ ತೆಗೆದಿತ್ತು. 

ಈಗ ಮೇಕೆದಾಟು ಹೆಸರಿನಲ್ಲಿ ಹೊಸದಾದ ಸಮಸ್ಯೆ ಶುರುವಾಗಿದೆ. ಎಲ್ಲವನ್ನೂ ನುಂಗುತ್ತಾ ಬೆಂಗಳೂರು ಬೆಳೆಯುತ್ತಿದೆ. ಹಳ್ಳಿಗಳಿಂದ ಕೃಷಿ ತೊರೆದು ನಗರ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಎಲೆಕ್ಟ್ರಾನಿಕ್ ಸಿಟಿಯ ದಾಹ ಹೆಚ್ಚುತ್ತಿದೆ. ವಿದೇಶಿ ಕಂಪನಿಗಳ ಐಷಾರಾಮಿ ಟಾಯ್ಲೆಟ್‍ಗಳಿಗೆ ಗ್ಯಾಲನ್‍ಗಟ್ಟಲೇ ನೀರು ಬೇಕು. ಬರೀ ನೀರು ಮಾರಿಯೇ ಕೋಟ್ಯಾಂತರ ಗಳಿಸಿದವರಿದ್ದಾರೆ. ಬೆಂಗಳೂರಿನ ನೀರಿನ ಮಾಫಿಯಾದ ವಹಿವಾಟು ಕೋಟ್ಯಾಂತರ ರೂಪಾಯಿಗಳು. ಆದರೇನು ಹಲವು ಕಡೆಗಳಲ್ಲಿ ಕುಡಿಯಲು ನೀರಿಲ್ಲ. ಮೇಲೆ ಹೇಳಿದ ಮೇಕೆದಾಟು ಪ್ರದೇಶದಲ್ಲಿ ಆಣೆಕಟ್ಟು ಕಟ್ಟಿ ಬೆಂಗಳೂರು, ಮೈಸೂರು, ಕೋಲಾರ, ತುಮಕೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆಯೇ ಮೇಕೆದಾಟು ಯೋಜನೆ. ಇದಕ್ಕೆ ತಮಿಳುನಾಡು ತಗಾದೆ ತೆಗೆದಿದೆ. ಈಗಿರುವ ಆಣೆಕಟ್ಟುಗಳಿಂದಲೇ ನಮಗೆ ಹರಿಯುವ ನೀರಿನ ಕೊರತೆಯುಂಟಾಗುತ್ತಿದೆ. ಈಗ ಹೊಸದಾಗಿ ಆಣೆಕಟ್ಟು ಕಟ್ಟುವುದರಿಂದ, ನಮ್ಮ ರೈತರಿಗೆ ತೊಂದರೆಯಾಗುತ್ತದೆ, ತೀವ್ರ ನೀರಿನ ಅಭಾವವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮೇಕೆದಾಟಿನಲ್ಲಿ ಆಣೆಕಟ್ಟು ಕಟ್ಟುವುದನ್ನು ನಾವು ವಿರೋಧಿಸುತ್ತೇವೆ. ತಕ್ಷಣ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಆಣೆಕಟ್ಟು ಕಟ್ಟುವುದನ್ನು ನಿರ್ಭಂದಿಸಬೇಕು ಎನ್ನುತ್ತದೆ.

ಯೋಜಿತ ಮೇಕೆದಾಟು ಪ್ರದೇಶ ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಬರುತ್ತದೆ. ಇಲ್ಲಿರುವ ಹುಲಿಗಳ ಸಂಖ್ಯೆ 25. ಇದರಿಂದಾಗಿ ಸುಮಾರು 2500 ಎಕರೆ ಅರಣ್ಯ ಪ್ರದೇಶ ಮುಳುಗಡೆಯಾಗಲಿದೆಯಾದ್ದರಿಂದ, ಕೇಂದ್ರ ಅರಣ್ಯ ಪರಿಸರ ಇಲಾಖೆಗೆ ಅನುಮತಿ ನೀಡುವಂತೆ ಶಿಪಾರಸ್ಸು ಮಾಡಲು ಬರುವುದಿಲ್ಲವೆಂದು ವನ್ಯಜೀವಿ ಮುಖ್ಯಸ್ಥ ವಿನಯ್ ಲೋತ್ರಾ ಹೇಳಿದ್ದಾರೆ. ಇದೊಂದು ಕುಡಿಯುವ ನೀರಿನ ಯೋಜನೆಯಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿಯೇ ಬೇಡವೆಂದು ಈ ಯೋಜನೆಯ ತಜ್ಞರ ಅಂಬೋಣ. ಹೀಗೆ ಕಾವೇರಿ ನದಿಯ ನೀರಿನ ಹಂಚಿಕೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳದೇ, ಎರಡೂ ರಾಜ್ಯಗಳ ರೈತರಿಗೆ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವೇ ಫಲ ನೀಡಬಹುದು. ದೇಶದ ಅಪ್ರತಿಮ ಜಲತಜ್ಞರನ್ನು ಬಳಸಿಕೊಂಡು, ವೈಜ್ಞಾನಿಕ ಹಂಚಿಕೆಯತ್ತ ಮುಖ ಮಾಡಬೇಕು. ಇಲ್ಲದೇ ಹೋದರೆ ಇದು ಎಂದೆಂದಿಗೂ ವಾಸಿಯಾಗದ ಗಾಯದಂತೆ ಇರುತ್ತದೆ.

ನಮ್ಮ ನೀರು ನಮ್ಮ ಹಕ್ಕು, ನಾವು ಆಣೆಕಟ್ಟು ಕಟ್ಟಿಯೇ ಸಿದ್ಧ ಎಂದು ಕರ್ನಾಟಕ ಹೇಳುತ್ತಿದೆ. ಈಗಾಗಲೇ ವಿವರವಾದ ಅಂದಾಜುವೆಚ್ಚದ ಪಟ್ಟಿಯನ್ನು ತಯಾರಿಸಲು 2015-16 ಬಜೆಟ್ಟಿನಲ್ಲಿ 25 ಕೋಟಿ ರೂಪಾಯಿಗಳನ್ನು ಕರ್ನಾಟಕ ತೆಗೆದಿರಿಸಿದೆ. ನಮ್ಮ ನದಿಗೆ ನಾವು ಆಣೆಕಟ್ಟು ಕಟ್ಟವುದನ್ನು ವಿರೋಧಿಸಲು ಇವರ್ಯಾರು ಎಂದು ತಮಿಳುನಾಡಿನ ಕಡೆ ಕರ್ನಾಟಕ ಕೈತೋರಿಸುತ್ತದೆ. ನೈಸರ್ಗಿಕ ಸಂಪತ್ತಿನ ಲಭ್ಯತೆಯೇ ಈರ್ವ ರಾಜ್ಯಗಳಿಗೂ ಶಾಪವಾಗಿದೆ. ಬೆಂಗಳೂರಿನಲ್ಲಿರುವ ಕೋಟಿಪತಿಗಳು ತಮ್ಮ-ತಮ್ಮ ಬಂಗಲೆಗಳಲ್ಲಿ ವರ್ಷಪೂರ್ತಿ ಉಪಯೋಗಿಸಲು ಸಾಕಾಗುವಷ್ಟು ಮಳೆನೀರು ಸಂಗ್ರಹಿಸಲು ಸಾಧ್ಯವಿದೆ. ಒಬ್ಬ ಮನುಷ್ಯನಿಗೆ ದಿನಕ್ಕೆ 100 ಲೀಟರ್ ಅವಶ್ಯಕತೆ ಇದೆಯೆಂದರೂ, ಮನೆ ಕಟ್ಟುವಾಗಲೇ ನೆಲಮಾಳಿಗೆಯನ್ನು ನಿರ್ಮಿಸಿಕೊಂಡು ಛಾವಣಿ ನೀರನ್ನು ಸಂಗ್ರಹಿಸಿಟ್ಟುಕೊಂಡು ಉಪಯೋಗಿಸುವುದರಿಂದ ಸಾಕಷ್ಟು ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಹಣವಿರುವ ಬಲಾಢ್ಯರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸೂಕ್ತ ಕಾನೂನು ರೂಪಿಸಬೇಕು. ಪರವಾನಿಗೆ ನೀಡುವ ಪೂರ್ವದಲ್ಲಿ ಮಳೆನೀರು ಸಂಗ್ರಹ ಕಡ್ಡಾಯ ಎಂಬ ನಿಯಮವನ್ನು ಉಳ್ಳವರಿಗೆ ವಿಧಿಸಬೇಕು. ಒತ್ತುವರಿಗೊಂಡ ಕೆರೆಗಳನ್ನು ತೆರವುಗೊಳಿಸಿ, ಅಂತರ್ಜಲ ಹೆಚ್ಚು ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು.

ಎಲ್ಲಿಯವರೆಗೆ, ಮಿತಬಳಕೆಯ, ಮರುಬಳಕೆಯ, ಸುಸ್ಥಿರ-ಸಮರ್ಪಕ ಬಳಕೆಯ ಮಂತ್ರ ಸಿದ್ದಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟು ಆಣೆಕಟ್ಟುಗಳನ್ನು ಕಟ್ಟಿ ನೀರು ಪೂರೈಸಿದರೂ ಕಡಿಮೆಯೇ ಆಗುತ್ತದೆ. ಇದು ಸರ್ಕಾರಗಳ ಹೊಣೆ ಮಾತ್ರವಲ್ಲ ಒಂದೊಂದು ವ್ಯಕ್ತಿಯ ಜವಾಬ್ದಾರಿ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಅಖಿಲೇಶ್ ಸರ್,   ಸೂಕ್ತ ಬರಹ.. ಇಷ್ಟವಾಯ್ತು.

1
0
Would love your thoughts, please comment.x
()
x