ಅಮ್ಮನಿಗೆ ಗೊತ್ತಾದ್ರೆ ಸತ್ತೆ ಹೋಗುತ್ತಾಳೆ ಅಂತ ಅಂಜಿ ಹನುಮ ತಾನು ಸ್ಕೂಲಲ್ಲಿ ಗಣಿತ ಪೇಲಾದ ವಿಷಯವನ್ನು ಗೌಪ್ಯವಾಗಿಯೇ ಕಾಯ್ದುಕೊಂಡಿದ್ದ. ಅಂದಿನಿಂದ ಯಾಕೋ ಅವನು ಸರಿಯಾಗಿ ಊಟಮಾಡುತಿರಲಿಲ್ಲ, ಕುಂತಲ್ಲಿ ಕೂಡುತಿರಲಿಲ್ಲ, ಪುಸ್ತಕದ ಸಹವಾಸವೇ ಸಾಕೆನಿಸದಂತಾಗಿ ಹನಿಗೆ ಕೈಹಚ್ಚಿಕೊಂಡು ಚಿಂತೆಯ ಮಡಿಲಿಗೆ ಜಾರಿದ್ದ. ಸುಳ್ಳು ಹೇಳಬಾರದೆಂದು ಶಾಲೆಯಲ್ಲಿ ಕನ್ನಡಾ ಶಿಕ್ಷಕರು ಸಾವಿರ ಸಲ ಶಂಕಾ ಊದಿದ್ದು ಅರಿವಾಗಿ, ದೇವರಂತಾ ಅಮ್ಮನಿಗೆ ಸುಳ್ಳು ಹೇಳಿದಿನಲ್ಲ ಅಂತ ಮನಸಿಗೇಕೋ ನಾಚಿಕೆ ಅನಿಸಿತು.
ವಾರ್ಷಿಕ ಪರೀಕ್ಷೆಯಲ್ಲಿ ಕಂಡಿತಾ ಪಾಸಾಗೊದಿಲ್ಲ ಎಂದು ಕ್ಲಾಸಿನಲ್ಲಿಯೇ ಎಲ್ಲ ವಿದ್ಯಾರ್ಥಿಗಳ ಮುಂದೆ ಕೆನ್ನೆಗೆ ಹೊಡೆದಂತೆ ಹೇಳದ ಗಣಿತ ಶಿಕ್ಷಕರ ಮಾತು ನೆನಪಾಗಿ ಹನುಮನ ಎದೆಗೆ ಸೂಜಿ ಚುಚ್ಚಿದಂತಾಯಿತು. ಗಣಿತ ಗುರುಗಳು ಎಲ್ಲ ವಿದ್ಯಾರ್ಥಿಗಳ ಎದುರು ಎದ್ದುನಿಲ್ಲಿಸಿ ಅವಮಾನ ಮಾಡಿ ನಕ್ಕಿದ್ದರು. ಅವರೊಟ್ಟಿಗೆ ಎಲ್ಲ ವಿದ್ಯಾರ್ಥಿಗಳೂ ಹಲ್ಲು ಕೆರಿದು ನಕ್ಕರು. ಈ ಅವಮಾನ ಅವನ ನೆಮ್ಮದಿಯನ್ನು ಕಿತ್ತು ತಿನ್ನುತಿತ್ತು. ಆಗಾಗ ಜಾತಿ ಹಿಡಿದು ಬೈಯ್ಯುವ ಗುರುಗಳ ಹೊಲಸು ಬುದ್ದಿಗೆ ಬೇಸತ್ತುಹೋಗಿದ್ದ ಹನುಮ. ಕೆಳಜಾತಿಯಲ್ಲಿ ಹುಟ್ಟಿದ ತಪ್ಪಿಗೆ ತನಗೆ ತಾನೇ ಶಾಪ ಹಾಕಿಕೊಂಡು ಎಷ್ಟೋ ಬಾರಿ ಕಣ್ಣು ವದ್ದೆಮಾಡಿಕೊಂಡಿದ್ದ.
ಅಮ್ಮನಿಗೆ ಸುಳ್ಳು ಹೇಳಿದಿನಲ್ಲ ಅನ್ನುವ ಕೊರಗು ಹನುಮನನ್ನು ಸದಾ ಕಿತ್ತು ತಿನ್ನುತಿತ್ತು. ಅದಕ್ಕೆ ಸಾವಿರ ಸಲ ಪಶ್ಚಾತ್ತಾಪ ಪಟ್ಟಿದ್ದ.
******
ಹನುಮನ ಅಮ್ಮ ಅವರಿವರ ಮನೆಯ ಮುಸರಿ ತಿಕ್ಕಿ, ಕಸಗೂಡಿಸಿ ಯಾರೋ ಕೊಟ್ಟ ತಂಗಳನ್ನವನ್ನು ಸೀರೆ ಸೆರಗಿನಲ್ಲಿ ಜೋಪಾನವಾಗಿ ಕಟ್ಟಿಕೊಂಡು, ಅಂದು ಯಾಕೋ ತಡವಾಗಿ ಮನೆಗೆ ಬಂದಳು. ಅವಳ ಸಂಪಿಗೆಯಂತ ಮುಖವೇಕೋ ಬಾಡಿತ್ತು, ಯಾವತ್ತೂ ಚೈತನ್ಯದಿಂದ ತುಂಬಿಕೊಂಡಿರುವ ಅವಳ ಕಣ್ಣುಗಳೂ ಹೀನವಾಗಿದ್ದವು. ಅಮ್ಮನಿಗೆ ಏನಾಯಿತೆಂದು ಗಾಬರಿಯಿಂದಲೇ ಹೋಗಿ ತಬ್ಬಿ ಕೊಂಡ. ಅಮ್ಮನ ದೇಹ ಬೆಂಕಿಯಾಗಿತ್ತು. ಅಯ್ಯೋ! ಜ್ವರಾ.. ಎಂದು ಜೋರಾಗಿ ಕಿರುಚಿದ. ಸುಮ್ಕಿರೋ ಆಕಾಶ ತಲೆ ಮ್ಯಾಲೆ ಬಿದ್ದವ್ರ ತರಾ ಯಾಕ ಆಡ್ತಿಯಾ? ಇಂತಾ ಜ್ವರಾ ನಾನೆಷ್ಟು ಕಂಡಿಲ್ಲಾ, ಹನಿಗೆ ತಣ್ಣೀರ ಪಟ್ಟಿ ಹಕ್ಕೊಂಡ ಒಂದ ತಾಸ ಗಡದಬಾರ ಮಲಗಿದ್ರ ಬಿಟ್ಟ ಹೊಕ್ಕಾವ ಅಂತ ಸೀರಿ ಸೇರಗನ್ಯಾಗಿದ್ದ ತಂಗಳ ಅನ್ನಾ ಹನುಮನ ಕೈಮ್ಯಾಗ ಇಟ್ಟ ’ಇದನ ತಿಂದ ನೀ ಓದಕೊಂತ ಕುಂದ್ರ. ನಾ ಸ್ವಲ್ಪ ಮಲಗ್ತಿನಿ. ನಿನ್ನ ಸಾಲಿ ಫೀ ಕಟ್ಟಾಕಂತ ಮತ್ತ ನಾಕಾರ ಮನಿಗೋಳ ಕೆಲಸಾ ಹಿಡದಿನಿ, ಅದಕ್ಕ ಬರೂದ ಸ್ವಲ್ಪ ತಡಾ ಆತ, ಅನಕೋತ ಅಮ್ಮ ಜ್ವರದ ಹೊಡಿತ ತಾಳಲಾರದೇ ನಿದ್ದೆಗೆ ಜಾರಿದ್ದಳು.
ಅಮ್ಮ ತಂದು ಕೈಮೇಲೆ ಇಟ್ಟ ತಂಗಳ ಅನ್ನ ಅವನ ಕಣ್ಣೀರಲ್ಲಿ ತೊಯ್ದು ಹೋಗಿತ್ತು. ದೇವರಂತ ಅಮ್ಮನಿಗೆ ನಾನು ಮೋಸ ಮಾಡುತ್ತಿದ್ದೇನೆ ಏನೋ ಅಂತ ಮನಸು ಮಂಕಾಗಿತ್ತು. ಯಾವಗಲೂ ಗಣಿತ ಗುರುಗಳ ಮೂರ್ಖತನದ ಲೆಕ್ಕಾಚಾರ ತೂಗಿನೋಡುತಿದ್ದ ಹನುಮನ ಮನಸ್ಸು ಅಂದು ಅವರಮ್ಮನ ಪರಿಶ್ರಮದ ಪಟ್ಟಿಯನ್ನು ಕಣ್ಣಮುಂದೆ ತಂದುಕೊಂಡು ಕೊರಗಿತು. ಇನ್ನು ಮುಂದೆ ಶಾಲೆಗೆ ಹೋಗೊದೆ ಬೇಡಾ, ನಾನೇ ದುಡಿದು ಅಮ್ಮನನ್ನು ಸಾಕಬೇಕು ಎಂದು ನಿರ್ದರಿಸಿದ, ಇದಕ್ಕೆ ಅಮ್ಮ ಒಪ್ಪತ್ತಾಳಾ? ಕಂಡಿತಾ ಇಲ್ಲಾ. ಅವಳಿಗೆ ನಾ ಓದಿ ದೊಡ್ಡ ನೌಕರಿ ಮಾಡಬೇಕೆಂಬ ಆಸೆ ಇದೆ, ಆ ಆಸೆಗಾಗಿಯೇ ಅಮ್ಮ ದಿನಾಲೂ ನಾಕಾರು ಮನೆಯ ಮುಸರಿ ತೊಳೆದು, ನನ್ನ ಬಾಳ ಕಷ್ಟ ಪಟ್ಟು ಸಾಕುತಿದ್ದಾಳೆ. ದಿಡೀರನೆ ನಾನು ಶಾಲೆ ಬಿಡುತ್ತೇನೆ ಅಂದರೆ ಅಮ್ಮ ಖಂಡಿತಾ ಬದುಕಿರಲಾರಳು. ಅವಳ ಕನಸು ಇಡೆರಿಸದ ಪಾಪಿ ನಾನಾಗುತ್ತೇನೆ. ಹೀಗೆಂದು ಹನುಮ ತನ್ನೊಳಗೆ ಹಲವಾರು ತರ್ಕಮಾಡಿಕೊಂಡರೂ ಗಣಿತ ಮಾಸ್ತರ ಅವನ ಬದುಕಿಗೆ ಮುಳ್ಳಾದಂತೆ ಅನಿಸಿದ.
*******
ಗಣಿತ ಮಾಸ್ತರ ತುಂಬಾ ಮಡಿವಂತ ವ್ಯಕ್ತಿ. ಜ್ಯಾತಿ ಧರ್ಮದಲ್ಲಿ ಅಪಾರ ನಂಬಿಕೆ ಇಟ್ಟವನು. ಹೀಗಾಗಿ ಶಾಲೆಯಲ್ಲಿರುವ ಕೇಳಜ್ಯಾತಿಯ ವಿದ್ಯಾರ್ಥಿಗಳ ಮೇಲೆ ಯಾಕೋ ಅವನಿಗೊಂದಿಷ್ಡು ಪುರಾತನ ಕಾಲದ ದ್ವೇಷ ಇತ್ತು. ತಮ್ಮ ಸಿಬ್ಬಂದಿಗಳಲ್ಲೂ ಅವನ ನಿಲುವು ಅದೆ ಆಗಿತ್ತು. ಪರಶುರಾಮ ರಾಠೋಡ ಅನ್ನುವ ಹಿಂದಿ ಶಿಕ್ಷಕರ ಮೇಲೆ ಯಾವಾಗಲೂ ಹರಿಹಾಯುತಿದ್ದ. ಈ ಲಂಬಾನಿ ಮಂದಿನ ನಂಬಾಕ ಹೋಗ ಬಾರ್‍ದು. ಯಾವ ಹೊತ್ತನ್ಯಾಗ ಜನ್ಮಾ ತಗೋತಾರೋ ಗೊತ್ತಿಲ್ಲ. ಅವರು ತಿನ್ನು ಆಹಾರ ಅವರಿಗೆ ಆ ಬುದ್ದಿ ಕಲಸುತ್ತೆ. ಬಟ್ಟಿ ಸರಾಯಿ ಕಾಸಿ ಎಷ್ಟ ಜನರ ಬದುಕ ನಾಶ ಮಾಡತಾರೋ ನಾ ಕಾಣೆ. ರಾಮ..ರಾಮ ..ರಾಮ.. ರಾಮ.. ಅನ್ನುತ್ತ ಇನ್ನುಳಿದ ಶಿಕ್ಷಕರ ಎದುರು ಹಿಂದಿ ಶಿಕ್ಷಕರನ್ನು ಅವಮಾನಗೊಳಿಸುತಿದ್ದರು.
ಹನುಮ ಜ್ಯಾತಿಯಿಂದ ಹೊಲೆಯ ಅನ್ನುವುದು ಅರಿತ ಮೇಲಂತೂ, ಅವನನ್ನು ಕಂಡಾಗ ಕೈ ಮೇಲೆ ಕೆಂಡ ಬಿದ್ದವರಂತೆ ಮಾಡುತಿದ್ದ. ಜ್ಯಾತಿಯ ಹಿಡಿದು ಟೀಕಿಸುತಿದ್ದ. ಒಂದೊಂದು ಸಲ ಅವನ ಬುದ್ದಿ ಶಕ್ತಿಗೆ ಮೀರಿದ ಲೆಕ್ಕ ಕೇಳಿ ಬೈಯ್ಯುತ್ತದ್ದ. ಬೆತ್ತದಿಂದ ಹೊಡೆದರೂ ಕೈತೊಳೆಯುವಾಗ ’ಹಾಳಾದ ಹೊಲೆಯಾನ ಮುಟ್ಟಿದೆ’ ಅಂತ ಅವನ ಪವಿತ್ರ ಮನ ವಟಗುಡುತ್ತಿತ್ತು. ಕೆಲವು ವಿದ್ಯಾರ್ಥಿಗಳಿಗೆ ಹನುಮನ ಕಂಡರೆ ಅಕ್ಕರೆ, ಪ್ರೀತಿ. ಅದರಲ್ಲೂ ಕನ್ನಡ ಶಿಕ್ಷಕ ಮುದ್ದಪ್ಪವರಿಗಂತು ಹನುಮನ ಬುದ್ದಿವಂತಿಕೆ, ಅವನು ಸಲಿಸಾಗಿ ಕಾವ್ಯ ಕಟ್ಟುವ ಕಲೆ, ಅವನ ನಯವಿನಯ, ಹನುಮನ ಗುರು ಭಕ್ತಿ ಮೆಚ್ಚಿ ಎಷ್ಟೋ ಬಾರಿ ಮುದ್ದಪ್ಪ ಗುರುಗಳು ಹನುಮನಿಗೆ ಪುಸ್ತಕ, ಬಟ್ಟೆ ಕೊಡಸಿದ್ದರು. ನಿನ್ನ ಪರಿಶ್ರಮ ಮುಂದೊಂದು ದಿನ ನಿನ್ನ ಕೈ ಹಿಡಿದು ನಡಿಸುತ್ತದೆ. ಎಂದು ಹಾರೈಸುತಿದ್ದರು. ಹನುಮ ತನ್ನ ತಾಯಿಗಿಂತಲೂ ಹೆಚ್ಚು ನಂಬಿಕೆಯನ್ನು ಮುದ್ದಪ್ಪ ಗುರುಗಳಲ್ಲಿ ಇಟ್ಟಿದ್ದ. ಹನುಮನಿಗೆ ಯಾವಾಗಲೂ ಸಾತು ಕೊಡುತಿದ್ದ ಮುದ್ದಪ್ಪ ಗುರುಗಳ ಮೇಲೆ ಗಣಿತ ಮಾಸ್ತರ ಇಲ್ಲಸಲ್ಲದ ಚಾಡಿ ಹೇಳಿ ಮುಖ್ಯೋಪಾಧ್ಯಾಯರಿಂದ ಬೈಸಿ ಖುಷಿಪಡುತಿದ್ದ. ಮುಖ್ಯೋಪಾಧ್ಯಾಯರೂ ಗಣಿತ ಮಾಸ್ತರನ ತಾಳಕ್ಕೆ ತಕ್ಕಂತೆ ಕುಣಿಯುತಿದ್ದರು. ಶಾಲೆಯ ಹಿರಿತನವೆಲ್ಲ ತನ್ನ ಕೈಯಲ್ಲಿಯೇ ಇದೆ. ಎಂಬ ಸೊಕ್ಕಿನಲ್ಲಿ ಮೆರೆಯುತಿದ್ದ.
ಖಾಸಗಿ ಶಾಲೆಯಲ್ಲಿ ಈ ತರಹದ ಒಂದು ವಾತಾವರಣ ಸಾಮಾನ್ಯವೆಂದು ಅರಿತಿದ್ದ ಉಳಿದ ಶಿಕ್ಷಕರು ಅಷ್ಟೊಂದು ತಲಿ ಕೆಡಸಿಕೊಂಡಿರಲಿಲ್ಲ.
ಹನುಮನನ್ನು ಮುದ್ದಾಮ್ ಒಂದು ಕಿರು ಪರಿಕ್ಷೆಯಲ್ಲಿ ಗಣಿತ ಮಾಸ್ತರ್ ಫೇಲು ಮಾಡಿ ಎಲ್ಲ ಶಿಕ್ಷಕರಿಗೂ ಮನದಲ್ಲೊಂದು ಅಚ್ಚರಿ ಮೂಡಿಸಿದ್ದ. ಅವನ ವಿರುದ್ದ ಪ್ರತಿಭಟಿಸುವ ಶಕ್ತಿ ಇಲ್ಲದ್ದನ್ನು ಅರಿತು ಎಲ್ಲ ಗುರುವೃಂದ ಹನುಮನಿಗೆ ಕರೆದು ಸಮಾದಾನ ಹೇಳಿದರು. ಕೆಲವು ವಿದ್ಯಾರ್ಥಿಗಳು ಹನುಮ ಪೇಲಾದ ಸುದ್ದಿ ತಿಳಿದು ಮರುಗಿದರು, ಇನ್ನು ಕೆಲವರು ಖುಷಿಪಟ್ಟರು.
ಕೆಳಜ್ಯಾತಿಯ ವಿದ್ಯಾರ್ಥಿಗಳು ಈ ಶಾಲೆಗೆ ಬರಬಾರದು ಎಂಬ ಧೋರಣೆ ಹೊತ್ತ ಗಣಿತಮಾಸ್ತರ್ ಅಪ್ಪಿ ತಪ್ಪಿ ಬಂದವರಿಗೆ ಸಾಕಷ್ಟು ತೊಂದರೆ ಕೊಡುತಿದ್ದ. ಅದರಲ್ಲೂ ತನ್ನ ವಿಷಯದಲ್ಲಿ ಅವರನ್ನು ಫೇಲು ಮಾಡಿ ಮುಖ್ಯಗುರುಗಳ ಗಮನಕ್ಕೆ ತಂದು ದೊಡ್ಡ ರಂಪಾಟ ಮಾಡಿ ಕೆಳ ಜ್ಯಾತಿಯ ಹುಡುಗರನ್ನು ಶಾಲೆಯಿಂದ ಕಳಚುವಂತೆ ಮಾಡುತಿದ್ದ. ಇದನ್ನು ಸಹಿಸಿ ಕೊಳ್ಳದ ಅನೇಕ ಶಿಕ್ಷಕರು ಗಣಿತಮಾಸ್ತರನೊಂದಿಗೆ ವಾದ ಮಾಡಿ ನೌಕರಿ ಕಳಿದು ಕೊಂಡು ಮನಿಹಾದಿ ಹಿಡದಿದ್ದರು. ಬಡತನದ ಬಾಯಿಗೆ ತುತ್ತಾದವರೇ ಅಲ್ಲಿ ಶಿಕ್ಷಕರಾದರಿಂದ ಅವನ ಎದರು ಹಾಕಿಕೊಳ್ಳುವ ಸಹಾಸಕ್ಕೆ ಯಾರೂ ಕೈ ಹಾಕುತ್ತಿರಲಿಲ್ಲ.
*****
ಎಂದಿನಂತೆ ಹನುಮ ಮುಂಜಾನೆ ಅಮ್ಮನೊಂದಿಗೆ ನಾಕಾರು ಮನೆಯ ಕಸಕಡ್ಡಿ ಗೂಡಿಸಿ, ನಗರದ ದೊಡ್ಡ ವ್ಯಾಪಾರಿ ಅಪ್ಪಸಾಹೇಬರ ಹದಿನೈದು ಲಕ್ಷ ರೂಪಾಯಿ ಬೆಲೆಬಾಳುವ ಕಾರನ್ನು ನಯವಾಗಿ ತೊಳೆದು, ಅವರು ವಿದೇಶದಿಂದ ತಂದ ನಾಯಿ ಮರಿಯನ್ನು ಶಾಂಪೂನಿಂದ ಮೈ ತೊಳೆದು ಮನೆಗೆ ಬರು ಹೊತ್ತಿಗೆ ಶಾಲೆಯ ಸಮಯವಾಗಿರುತ್ತಿತ್ತು. ಲಗುಬಗೆಯಿಂದ ಸ್ನಾನ ಮಾಡಿ, ತಟ್ಟೆಯಲ್ಲಿದ್ದ ಅನ್ನವನ್ನು ಗಡಬಡಿಸಿ ತಿಂದು ಶಾಲೆಗೆ ಹೋಗುವಷ್ಟೋತ್ತಗೆ ಪ್ರೆಯರ್ ಬೆಲ್ಲ ಹೊಡದಿರುತ್ತಿತ್ತು. ಮಕ್ಕಳೆಲ್ಲ ಸಾಲು ಮಾಡಿಕೊಂಡು ನಿಂತಿರುತ್ತಿದ್ದರು. ಓಡೊಡಿ ಬಂದು ಹನುಮ ಸಾಲಲ್ಲಿ ನಿಲ್ಲು ಹೊತ್ತಿಗೆ, ಅವನೆದರು ಗಣಿತಮಾಸ್ತರ್ ಪ್ರತ್ಯಕ್ಷನಾಗುತ್ತಿದ್ದ. ಅಂಬೆಗಾಲು ಊರಿ ನಿಲ್ಲಿಸಿ ನಗುತ್ತಿದ್ದ. ಕನ್ನಡ ಶಿಕ್ಷಕ ಮುದ್ದಪ್ಪನವರು ದೈನಸದಿಂದ ಪರಮೇಶಿಯನ್ನು ಹೊಗ್ಲಿ ಬಿಡ್ರಿ ಅಂದದ್ದಕ್ಕೆ ನಾಯಿಯಂತೆ ಏರಗಿ ಮೇಲೆ ಹೋಗಿ ದೊಡ್ಡ ರಂಬಾಟ ಮಾಡಿದ.
ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೂ, ಗುರುಗಳಿಗೂ ಗಣಿತಮಾಸ್ತರ್ ತಲೆನೋವು ಆಗಿಬಿಟ್ಟ. ಇವನ ಕಿರಕಿರಿ ಸಹಿಸದ ಗುರುಗಳು ಸಾಮೂಹಿಕವಾಗಿ ರಾಜಿನಾಮೆ ಕೊಟ್ಟು ಹೋಗಲು ನಿರ್ಧರಿಸಿದರು. ಮುಖ್ಯೋಪಾದ್ಯಯರು ಎಲ್ಲರ ಮನವಲಿಸಿ ಹೋಗದಂತೆ ಮಾಡಿದರು. ಇದನ್ನು ಸಹಿಸದ ಗಣಿತಮಾಸ್ತರ್ ಮುಖ್ಯೋಪಾಧ್ಯಾಯರ ಹತ್ತಿರ ಹೋಗಿ ಅವರಿಗೇಕೆ ನೀವು ಜಿಯಾ ಅಂತೀರಿ..? ಅವರು ಹೋದ್ರೆ ಹೋಗ್ಲಿ ನಾಳೆನೆ ನೂರಾರು ಜನ ಶಿಕ್ಷಕರನ್ನು ನಿಮ್ಮೆದರು ತಂದು ನಿಲ್ಲಿಸುತ್ತೇನೆ ಎಂದು ಬಂಡಾಯ ಧೋರಣೆ ಮಾಡಿದ. ಹೀಗೆ ಒಮ್ಮೆಲೆ ನಿರ್ದಾರ ತಗೆದುಕೊಂಡರೆ ತಪ್ಪಾಗುತ್ತದೆ, ಅದು ಬೇರೆ ಆಡಳಿತ ಮಂಡಳಿಗೆ ಉತ್ತರ ಕೊಡುವುದು ಸ್ವಲ್ಪ ಕಷ್ಟವಾಗುತ್ತದೆ. ಸ್ವಲ್ಪ ದಿನ ಹೋದ ಮೇಲೆ ಒಬ್ಬೊಬ್ಬರನ್ನು ಕಿರುಕುಳ ಕೊಟ್ಟು ಗಂಟು ಮುಟೆ ಕಟ್ಟಿಸಿದರಾಯಿತು ಎಂದು ಮುಖ್ಯೋಪಾಧ್ಯಾಯ ಗಣಿತಮಾಸ್ತರ್‍ಗೆ ವಿಶ್ವಾಸದ ಮಾತು ಹೇಳಿದ.
*****
ಎಲ್ಲ ಗುರುಗಳ ಸಹಕಾರದಿಂದ ಹನುಮ ಓದುವುದರ ಕಡೆ ಗಮನ ಹರಿಸಿದ. ವಿಜ್ಞಾನ ಶಿಕ್ಷಕ ಶಂಕರಲಿಂಗಯ್ಯನವರು ಹನುಮನಿಗೆ ಗುಟ್ಟಾಗಿ ಗಣಿತದ ಸಮಸ್ಯೆಗಳನ್ನು ಸರಳವಾಗಿ ತಿಳಿಸಿಕೊಟ್ಟರು.
ವಾರ್ಷಿಕ ಪರಿಕ್ಷೆಯಲ್ಲಿ ಹನುಮ ಇಡೀ ಸೆಂಟರ್‍ಗೆ ಮೊದಲು ಬಂದ. ಅದರಲ್ಲೂ ಗಣಿತ ವಿಷಯಕ್ಕೆ ನೂರಕ್ಕೆ ನೂರು ತಗೆದುಕೊಂಡು ಪಾಸಾಗಿದ್ದ. ಎಲ್ಲ ಗುರುಗಳು ಹನುಮನ ಸಾಧನೆ ಮೆಚ್ಚಿ ಆನಂದ ಭಾಷ್ಪಹರಿಸಿದರು. ಹನುಮನ ತಾಯಿ ಮಗಾ ಪಾಸದ ಸಂತಸಕ್ಕೆ ಕಾಲುನಡಿಗೆಯಲ್ಲಿ ’ಗುಡ್ಡದ ಯಲ್ಲಮ್ಮ’ಳಿಗೆ ಹೋದಳು. ಪ್ರತಿಷ್ಟಿತ ಪತ್ರಿಕೆಯೊಂದು ಹನುಮನ ಸಾಧನೆಯನ್ನು ಮುಖಪುಟದಲ್ಲಿ ಬರೆದು ಬೆರಗು ಮೂಡಿಸಿತ್ತು. ಗಣಿತಮಾಸ್ತರ್‍ಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ನೂರು ಚೇಳು ಕಡಿದಷ್ಟು ಸಂಕಟವಾಗಿತ್ತು. ಆಡಳಿತ ಮಂಡಳಿಯವರು ಹುಡುಗನ ಸಾಧನೆ ಮೆಚ್ಚಿ ಹರಸಿದರು.ಅವನ ಮುಂದಿನ ವ್ಯಾಸಂಗಕ್ಕೆಂದು ಹತ್ತುಸಾವಿರ ರೂಪಾಯಿ ಚೆಕ್ಕನೊಂದು ಬರೆದು ಗಣಿತಮಾಸ್ತರನ ಕೈಮೇಲಿಟ್ಟು, ನಿಮ್ಮ ವಿಷಯದಲ್ಲಿ ನೂರಕ್ಕೆ ನೂರು ತಗೆದಿದ್ದಾನೆ. ನೀವೇ ನಿಮ್ಮ ಕೈಯಾರೆ ನಿಮ್ಮ ವಿದ್ಯಾರ್ಥಿಗೆ ಕೊಟ್ಟು ಅಭಿನಂದಿಸಬೇಕು ಎಂದು ನುಡಿದಾಗ, ಮಾಸ್ತರನ ಮಡಿವಂತಿಕೆ ಹಳಸಿಹೋಯಿತು. ತನ್ನ ಗುರುಗಳು ಶಾಲು ಹೋದಸಿ, ಕೈಯಲ್ಲಿ ಹತ್ತುಸಾವಿರ ರೂಪಾಯಿ ಚಕ್ಕನ್ನಿಟ್ಟಾಗ ಹನುಮ ಪರಮೇಶಿ ಗುರುಗಳ ಕಾಲಿಗೆ ಎರಗಿ ನಮಸ್ಕಾರ ಮಾಡಿದ. ಆಗ ಮಾಸ್ತರನ ಕಣ್ಣುಗಳು ವದ್ದೆಯಾಗಿದ್ದವು. ಹನುಮನನ್ನು ತಬ್ಬಿ ಕಣ್ಣೀರಿಟ್ಟಾಗ ಎಲ್ಲ ಗುರುಗಳಿಗೂ ಗಣಿತಮಾಸ್ತರನ ಮೇಲೆ ಅಕ್ಕರೆ ಮೂಡಿತು.
*******
ಇದನ್ನು ಓದಿ ನನ್ನ ಕಣ್ಣುಗಳು ಒದ್ದೆಯಾದವು. ತುಂಬಾ ಚೆನ್ನಾಗಿದೆ
ಧನ್ಯವಾದಗಳು ಸಾರ್.