ಲಲಿತ ಪ್ರಬಂಧ

ಏಕಾದಶಿ: ಗುಂಡುರಾವ್ ದೇಸಾಯಿ


‘ಲೇ ರಂಡೆಗಂಡಾ, ಎಂತಾ ಅನಾಹುತ ಮಾಡಿಬಿಟ್ಟಿ, ನನ್ನ ಜೀವಮಾನದ ಸಾಧನೆಯಲ್ಲಾ ಇವತ್ತು ವ್ಯರ್ಥ ಮಾಡತಿದ್ದೆಲ್ಲೋ    , ಕೃಷ್ಣ ಕೃಷ್ಣ ನೀನ ಕಾಪಾಡಬೇಕ¥!À’ ಅಂತ ಬಯ್ಯಕೋತ ಗುಡಿಯಿಂದ ಬಂದ್ಲು.
‘ಏನಾಯ್ತವ್ವ ಒಮ್ಮಿದೊಮ್ಮೆಲೆ, ಯಾಕ ಸಿಟ್ಟಿಗೆದ್ದು ದಾರ್ಯಾಗಿನಿಂದ ಕೂಗಿಕೊಂತ ಬರಕತಿದಿ, ಮೆಲ್ಲಕ ಬಾರವ್ವ, ಮೆಲ್ಲಕ ಮಾತಾಡು ’
‘ನನ್ನ ಸುದ್ದಿ ಬಿಡು, ಎಂತ ಮೋಸ ಮಾಡಿಬಿಟ್ಟೆಲ್ಲೋ, ನೀನು ಬಾಳ ಶ್ಯಾಣೆ ಅಂತ ಮಾಡಿದ್ದೇ, ನಿನಗಿಂತ ನಿಮ್ಮಕ್ಕನ ವಾಸಿ. ನಿಮ್ಮಪ್ಪ ಹೋದ ಮ್ಯಾಲೆ ಪಂಚಾಂಗ ನೋಡಿ ತಿಥಿ ಲೆಕ್ಕ ಎಷ್ಟು ಕರೆಕ್ಟಾಗಿ ಹೇಳ್ತಿದ್ಲು, ನೀನು ಘಾತ ಮಾಡಿ ಬಿಟ್ಟಿ ಘಾತ ಮಾಡಿ ಬಿಟ್ಟಿ’
‘ಅಲ್ಲವ್ವಾ ಘಾತಾ ಆತು ಘಾತ ಆತು ಅಂತ ಹೇಳ್ತಿದಿ, ಆಗಿದ್ದರ ಏನು ಹೇಳಲ!’
‘ಏನ ಹೇಳಬೇಕೋ  ನಾಳೆ ಏಕಾದಶಿ  ಅಂತ ಹೇಳಿದ್ದಿ, ಇವತ್ತ ಅಂತಲ್ಲೋ ಸುಳ್ಳು ಹೇಳಿ, ಅನ್ನ ಊಣ್ಣಿಸಿ  ನರಕಕ್ಕ ಕಳಸಬೇಕು ಅನಕೊಂಡಿದ್ದಿಯೇನೊ?’
‘ನಾ ಸುಳ್ಳು ಹೇಳಿದರೆ ನೀನ್ಯಾಕೆ ನರಕಕ್ಕೆ ಹೋಗ್ತಿಯಮ್ಮಾ? ಹೋಗಬೇಕಾಗಿದ್ದು ಪಂಚಾಂಗ ಬರದವರು, ಅದರಲ್ಲಿ ಇದ್ದಾಂಗೆ ನಾ ಹೇಳಿದ್ದು’
‘ತಪ್ಪು ತಪ್ಪು ಬಿಡ್ತು ಅನ್ನು, ಹಾಂಗೆಲ್ಲ ದೊಡ್ಡವರನ್ನ ನಿಂದಿಸಬಾರದೊ?’
‘ಅವರು ಬರದದ್ದನ್ನ ಹೇಳಿದ್ರ ನೀನು ನನಗ ಹಿಗ್ಗಾ ಮುಗ್ಗ ಬಯ್ಯಾಕತಿಯಲ್ಲ’
‘ಅಲ್ಲೋ ನೋಡಕೊಂಡು ಹೇಳಬಾರದೇನೊ?’
‘ನೋಡಕೊಂಡು ಹೇಳಕೇನದಮ, ಉದ್ದ ನಾಮದವರ ನಾಲ್ಕು ತರ ಪಂಚಾಂಗ ಅವ, ಅಡ್ಡನಾಮದವರದು  ಬೇರೆ. ಎಲ್ಲಾರು ಒಗ್ಗಟ್ಟಾಗಿ ನಿರ್ಧರಿಸಾಕೇನು ಧಾಡಿಯೇ?  ಧಾರ್ಮಿಕ ಕರ್ಮಠರು, ಆಧ್ಯಾತ್ಮದಲ್ಲಿ ಅಪಾರವಾದ ನಂಬಿಕೆ ಉಳ್ಳವರಾಗಿ ಒಬ್ಬರು ಒಂದು ದಿನ ಏಕಾದಶಿ ಆಚಾರಿಸಿದರೆ, ಅದೇ ಮತ್ತೊಂದು ಪಂಥದವರು ಭರ್ಜರಿ ಪಾರಣಿ ಮಾಡತಿರತಾರೆ. ಮಠದ ಸ್ವಾಮಿಗಳ ಬುದ್ಧಿಗಂತೂ ಐಕ್ಯತೆ ತತ್ವವೇ ಇಲ್ಲ. ಸ್ವಧರ್ಮದಲ್ಲೊ ಒಗ್ಗಟ್ಟನ್ನು ಪ್ರಯತ್ನಿಸದವರು ಹೊರಗಿನವರಿಗೆ ಬುದ್ಧಿ ಹೇಳಾಕ ಹೋಗ್ತಾರ ಎಷ್ಟು ವಿಚಿತ್ರ ಅಲ್ಲಮ!’ 
‘ಹಾಂ ಹಾಂ ಸಾಕು ಮಾಡು, ನೀನು ಏನು ಮಾತಾಡಕತಿಯೋ ಒಂದು ಅರ್ಥ ಆಗ್ತಾ ಇಲ್ಲ’ ಅಂತ ಏಕಾದಶಿ ಆಚರಣೆ ಮಾಡಕ ಒಳನಡದ್ಲು. ಅವ್ವಂದು ಹಿಂಗ. ಶಾಸ್ತ್ರ ಸಂಪ್ರದಾಯದಾಗಿನ ಹುಳುಕು ತೆಗೆಯಕತಿದು ಕೂಡಲೇ ಮಾತು ಬದಲಾಯಿಸ್ತಾಳೆ.
ನಿಮಗೂ ಏನು ಈ ಏಕಾದಶಿ… ಪಾರಣಿ……. ಅಂತ ಅನಿಸಿರಬೇಕಲ್ಲ?  

‘ಆಚೆ ಮನೆ ಸುಬ್ಬಮ್ಮಂಗೆ ಇವತ್ತು ಏಕಾದ್ಸಿ ಉಪ್ವಾಸ| 
ಎಲ್ಲೋ ಸ್ವಲ್ಪ ತಿಂತಾರಷ್ಟೆ ಉಪ್ಪಿಟ್ಟು ಅವ್ಲಕ್ಕಿ ಪಾಯ್ಸ|| 
ಮೂರು ನಾಲ್ಕೋ ಬಾಳೆ ಹಣ್ಣು ಸ್ವಲ್ಪ ಚಕ್ಲಿ ಕೋಡ್ಬಳೆ| 
ಗಂಟೆಗೆರಡು ಸೀಬೆಹಣ್ಣು ಆಗಾಗ ಒಂದೊಂದು ಕಿತ್ತಳೆ||
ಮಧ್ಯಾಹ್ನ್ವೆಲ್ಲಾ ರವೇ ಉಂಡೆ ಹುರ್ಳೀಕಾಳಿನ ಉಸ್ಲಿ|
ಒಂದೊಂದ್ಸಲ ಬಿಸೀಸಂಡಿಗೆ ಒಂದೋ ಎರಡೋ ಇಡ್ಲಿ||
ರಾತ್ರಿ ಪಾಪ ಉಪ್ಪಿಟ್ಟೇನೆ ಒಂದ್ಲೋಟದ ತುಂಬಾ ಹಾಲು|
ಪಕ್ಕದಮನೆ ರಾಮೇಗೌಡರ ಸೀಮೆಹಸು ಹಾಲು||

ಸುಮಾರು ವರ್ಷಗಳ ಹಿಂದೆ ಸಿ.ಆರ್ ಸತ್ಯ ಅನ್ನುವವರು ಬರೆದ ಈ ಹಾಡು ನೋಡಿ ಬಾಯಲ್ಲಿ ನಿಮಗೆ ನೀರು ಬಂದಿರಬಹುದಲ್ಲ! ಬಂದಿರಲೇಬೇಕು ಅಷ್ಟು ಸ್ವಾರಸ್ಯಕರವಾಗಿ ಚಿತ್ರಿಸಿದ್ದಾರೆ. ಇದು ನಿಜಕ್ಕೂ ವ್ಯಂಗ್ಯ ಕವನ. ಇವರು ಬರದ ಹಾಡಿನಾಂಗ ಏಕಾದಶಿ ದಿನ ಇಷ್ಟೆಲ್ಲ ಇರತ್ತ ಅಂತ ಭಾವಿಸಿದರೆ ತಪ್ಪಾಗುತ್ತೆ.

ಏಕಾದಶಿ ಅನ್ನೊ ಪದ ಕ್ಯಾಲೆಂಡ್ರನ್ನ ನೋಡತಾ ಇರೋರಿಗೆ, ಪಂಚಾಂಗ ಪಠಣ ಮಾಡಿಸುವ ಮೇಷ್ಟ್ರು ಓದೊ ಮಕ್ಕಳು ಕೇಳೆ ಕೇಳಿರತಾರೆ.  ‘ಏಕ’ ಅಂದ್ರೆ ಒಂದು, ‘ದ±’À ಅಂದ್ರೆ ಹತ್ತು, ಒಟ್ಟಾರೆ ಅರ್ಥ ಹನ್ನೊಂದು. ಪಾಡ್ಯ, ಬಿದಿಗೆ, ತದಿಗಿ ಚೌತಿ ತಿಥಿಗಳಂತೆ ಆ ಸಾಲಿನ ಹನ್ನೊಂದನೆ ದಿನಕ್ಕೆ ಏಕಾದಶಿ ಅಂತ ಹೆಸರು. ಅವತ್ತಿನ ದಿನ ವಿಶೇಷವಾಗಿ ಹುಟ್ಟಿದ ಎಲ್ಲಾ ಜೀವಿಗಳು ಉಪವಾಸ ಮಾಡಬೇಕೆಂದು ಶಾಸ್ತ್ರದ ನಿಯಮವಿದೆಯಂತೆ.  ಈಗ ಅದು ಎಲ್ಲರಿಂದಲೂ ವಿನಾಕಾರಣ ಟೀಕೆಗೆ ಗುರಿಯಾಗುತ್ತಿರುವ  ಬ್ರಾಹ್ಮಣರ ಹಕ್ಕು, ಕರ್ತವ್ಯ ಹಾಗೂ ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮ ಪಟ್ಟಿಯಲ್ಲಿದೆ. ಅದರಲ್ಲಿ, ಸ್ಮ್ಮಾರ್ತರಿಗೆ ಬೇರೆ, ವೈಷ್ಣವರಿಗೆ ಬೇರೆ, ವೈಷ್ಣವರಲ್ಲಿ ಮಠಕ್ಕೊಂದೊಂದು ಪಂಚಾಂಗ ಮಾಡತಾರೆ. ಅಲ್ಲಿಯೂ ಈ ತಿಥಿ ವ್ಯತ್ಯಾಸ. ಸದರಿ ತಿಥಿಯ ಹಿಂದು ಮುಂದೋ ತಮ್ಮ ಗಣಿತ ತತ್ವ ಸಿದ್ಧಾಂತ ಪ್ರಕಾರ ಮಾಡ್ತಾರೆ. ಸದನದಲ್ಲಿ ಹಲವಾರು ಪಕ್ಷಗಳಿದ್ದರೂ, ಏನೇ ವಿರೋಧವಿದ್ದರೂ ಒಂದು ನಿರ್ಣಯವಾದರೂ ಪಾಸ್ ಆಗುತ್ತೆ, ಆದ್ರೆ ಏಕಾದಶಿನ ಎಲ್ಲಾರೂ ಒಂದೆ ದಿನ ಆಚರಿಸಬೇಕು ಎನ್ನೊ ಸಮಸ್ಯೆಗೆ ಏಕ ನಿರ್ಣಯ ಕೈಗೊಳ್ಳದು ಶತ ಶತಮಾನಗಳಿಂದ ಬಂದ ಒಬ್ಬ ಘನ ಸ್ವಾಮಿಗಳಿಗೂ ಸಾಧ್ಯವಾಗಿಲ್ಲ! ಹೋಗಲಿ ಬಿಡ್ರಿ ಸ್ವಾಮಿಗಳನ್ನ ಸಂಪ್ರದಾಯಗಳನ್ನ ಕಟ್ಟಿಕೊಂಡು ಏನ ಮಾಡಬೇಕಾಗ್ಯಾದ. ಏಕಾದಶಿ ದಿನ ಉಪವಾಸ ಮಾಡಬೇಕು, ಮಾಡಲೇಬೇಕಾ?  ಒಂದು ಮಾತು, ವಾರನ ಗಟ್ಟಲೇ ದುಡಿದರೂ ರಜೆ ಕೊಡದಿದ್ದರೆ ಸುಮ್ಮನಿರತಿರಾ? ಹೋಗಲಿ ವಾರ ಹದಿನೈದು ದಿನಕ್ಕೊಮ್ಮೆಯಾದರೂ ಮನಿನ ಆತು, ಅಂಗಡಿನಾತು, ನಡೆಸುವ ವಾಹನನಾತು ಕೆಲಸ ನಿಲ್ಲಿಸಿ ಸ್ವಚ್ಛ ಮಾಡತಾರಲ್ರೀ, ಅದು ವಿಶೇಷವಾಗಿ ಅಂಗಡಿಗಳಲ್ಲಿ ಅಮವಾಸ್ಯೆ ದಿನ ತೊಳದು ಪೂಜೆ ಮಾಡಿದ ಮೇಲೆ ಕೆಲಸ ಆರಂಭಸ್ತಾರೇನು?.  ವಾರಕ್ಕ ರಜೆ ಕೇಳತೀವಿ, ಅಂಗಡಿಗಳನ್ನ, ಯಂತ್ರಗಳನ್ನ ಸ್ವಚ್ಛ ಮಾಡಿ ರೆಸ್ಟು ಕೊಡ್ತೀವಿ. ಈ ದೇಹಕ್ಕ ರೆಸ್ಟು ಸಿಗೋದು ಯಾವಾಗರಿ? ನಮ್ಮ ದೇಹ ಕೂಡ ಯಂತ್ರ ಅಲ್ಲವೇ, ಅದಕೂ ಆಸರಿಕಿ ಬ್ಯಾಸರಿಕಿ ಇಲ್ಲವೇ. ಅದಕ್ಕ ರೆಷ್ಟು ಕೊಡಾಕ ಇರೋ ದಿನನ ಏಕಾದಶಿ ಉಪವಾಸ. ‘ಉಪ’ ಅಂದ್ರ ಹತ್ತಿರ, ‘ವಾಸ’ ಅಂದ್ರ ಇರುವುದು. ಒಟ್ಟಾಗಿ ಆಹಾರದ ಹತ್ತಿರ ಇರೋದು ಒಳಗಾಕೋದಲ್ಲ. ಏಕಾದಶಿ ದಿನನ ಯಾಕ ಉಪವಾಸ ಮಾಡಬೇಕು…? ಕಾರಣ ಬೇಕಲ್ಲ! ಐದು ಪಂಚೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಪ್ಲಸ್ ಮನಸ್ಸು ಸೇರಿ ಎಷ್ಟಾತು? ಹನ್ನೊಂದಲ್ಲವೆ… ಪಕ್ಷದ ಹನ್ನೊಂದನೆ ತಿಥಿ ಏಕಾದಶಿ,  ಈ ಇಂದ್ರಿಯಗಳು ಹನ್ನೊಂದು. ಇವನ್ನು ಸ್ಮರಣೆಯಲ್ಲಿ, ಹತೋಟಿಯಲ್ಲಿಟ್ಟುಕೊಂಡು ಆ ದಿನ ಕಳೆಯುವುದೆ ಏಕಾದಶಿ. ‘ಅಲೆಕ್ಸಿನ್ ಕಾರೆಲ್’ ಎನ್ನುವ ಶಸ್ತ್ರಚಿಕಿತ್ಸಕ ‘ಮ್ಯಾನ್ ದ ಅನೌನ್’ ಎನ್ನುವ ಕೃತಿಯಲ್ಲಿ ಮನುಷ್ಯ ತಿಂಗಳಿಗೊಮ್ಮೆ ಎರಡು ಬಾರಿ ಉಪವಾಸ ಮಾಡುವುದ ಕಲಿತರೆ ಅನಾರೋಗ್ಯದ ನಿಮಿತ್ಯ ಆಸ್ಪತ್ರೆಗೆ ದೌಡಾಯಿಸುವುದು ಅಗತ್ಯವೇ ಇಲ್ಲ ಎನ್ನುತ್ತಾರೆ. ವಿಶೇಷ ಅಂದ್ರೆ ಭಾರತೀಯ ಸಂಸ್ಕøತಿಯನ್ನು ಅವ ಅಧ್ಯಯನ ಮಾಡಿದವನಲ್ಲ. ಬೆಂಜಮಿನ್ ಫ್ರಾಂಕ್ಲೀನ ‘ದಿ ಬೆಸ್ಟ ಆಫ ಆಲ್ ಮೆಡಿಸಿನ್ಸ ಈಜ್ ರೆಸ್ಟಿಂಗ್ ಆಂಡ್ ಫಾಸ್ಟಿಂಗ್’ ಎನ್ನುತ್ತಾನೆ. ರೋಗಗಳು ಬರುವುದಾದರೂ ಯಾತಕ್ಕೆ! ಅತಿಯಾಗಿ ತಿನ್ನುವುದಕ್ಕಾಗಿ ತಾನೇ? ದವಾಖಾನೆಗಳು ಹುಟ್ಟಿದ್ಯಾಕೆ, ನಮಗೆ ತಿನ್ನುವ ಪದ್ದತಿನ ಗೊತ್ತಿರದಕ್ಕೆ ತಾನೇ? ‘ಅಜೀರ್ಣಾ ಪ್ರಭಾನಾ ರೋಗಾ:’ ಎಂದು ಆಯುರ್ವೇದ ಹೇಳುತ್ತೆ. ನಮ್ಮಪ್ಪ  ಯಾವತ್ತಿಗೂ ‘ಲಂಘನಂ ಪರಮೌಷುಧಂ’ ಎಂದು ಹೇಳತಾ ಇದ್ದ ಹಾಗೆ ಪಾಲಸ್ತಾ ಇದ್ದ. ಒಪ್ಪತ್ತು ಊಟ ಮಾಡಿನೆ ಯಾವ ಬಿ.ಪಿ. ಶುಗರು ಇಲ್ಲದೆ ನವ ಸಂವತ್ಸರ ಕಾಲ ಬಾಳಿದ್ರು. ‘ಒಮ್ಮೆ ಉಂಡವ ಯೋಗಿ, ಇಮ್ಮೆ ಉಂಡವ ಬೋಗಿ ಮುಮ್ಮೆ ಉಂಡವ ರೋಗಿ ನಾಲ್ಕು ಸಾರಿ ಉಣ್ಣುವವನನು ಹೊತ್ತುಕೊಂಡು ಹೋಗಿ’ ಅಂತ ಹಿರಿಯರು ಹೇಳಿದ್ದು ಸುಮ್ಮನೇನೆ? ಉಪವಾಸವಿದ್ದು ಸತ್ತವರಿಗಿಂತ ತಿಂದು ತಿಂದು ಜಡ್ಡ ಬರಿಸಿಕೊಂಡು ಸತ್ತವರೇ ಬಹುತೇಕ. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂದು ಹೇಳಿದ್ದು ಇದಕ್ಕಾಗಿಯೇ. ವೈದ್ಯ ಶಾಸ್ರ್ತ ಪ್ರತಿ ನಾಲ್ಕು ತಾಸಿಗೊಮ್ಮೆ ಊಟ ಮಾಡು ಅಂತ ಹೇಳುತ್ತಲ್ರಿ ಅಂತ ಕೇಳಬಹುದು ಅದು ಗ್ರಾಮಗಟ್ಟಲೇ ತಿನ್ನಿ ಅನ್ನುತ್ತೆ ಕೆಜಿ ಗಟ್ಟಲೇ ಅನ್ನುವುದು ವೈದ್ಯರ ಉತ್ತರ.

ಇರಲಿ ಜನೇನು ಸುಮ್ಮನೆ ಮಾಡ್ತಾರೇನು, ಒಳ್ಳೆ ಮಾತನ್ನು ಒಮ್ಮೆಲೆ ಕೇಳಿಬಿಡತಾರೇನು. ಹಾಂಗ ಕೇಳಿದ್ದರೆ ‘ಆಸೆಯೆ ದುಃಖಕ್ಕೆ ಮೂಲ, ಅಹಿಂಸಾ ಪರೋಮಧರ್ಮ’ ಮಾತುಗಳೆ ಸಾಕಿತ್ತು ‘ಉದಾರಚರಿತಾನಾಂ ವಸುದೈವ ಕುಟುಂಬಕಂ’ ನುಡಿ ಬಲಗೊಳ್ಳಲು. ಮಕ್ಕಳು ಸುಮ್ಮನೆ ಊಟ ಮಾಡಂದ್ರ ಮಾಡ್ತಾವನೂ…..? ‘ಅಗ.. ಗುಮ್ಮ ಬರುತ್ತ’ ಅಂದ್ರ ಊಟ ಮಾಡತಾವ, ಹಾಂಗ ಉಪವಾಸ ಮಾಡು ಅಂದ್ರ ಕೇಳ್ತಾರೇನು ಅದಕ್ಕ ಹಿರಿಯರು ದೈವಿಕ ಮಹತ್ವ ಕಲ್ಪಿಸಿಕೊಟ್ಟರು. ಹಿಂದಕ ಅಂಬರೀಶ ಮಹಾರಾಜ ಅಂತ ಇದ್ದ ಏಕಾದಶಿ ಬಿಡದೆ ಮಾಡುವವ. ಒಮ್ಮೆ ದ್ವಾದಶಿ ಪಾರಣಿ ಮಾಡುವ ಸಂದರ್ಭದಲ್ಲಿ ದುರ್ವಾಸ ಮುನಿಗಳು ಎಂಟ್ರಿ ಕೊಟ್ರು, ದುರ್ವಾಸ ಮುನಿಗಳ ಅಂದ್ರ ಗೊತ್ತಲ್ಲ! ಬಂದಾಗ ಕಿಮ್ಮತ್ತು ಕೊಡಲಿಲ್ಲ ಅಂತ ಶಂಕುಂತಲೆಯ ಬದುಕನ್ನ ಕಂಗೆಡಿಸಿದವರು, ಅರಮನೆಗೆ ಬಂದಾಗ ಸತ್ಕಾರ ಮಾಡಿದದಕ, ಭವಿಷ್ಯದಲ್ಲಿ ಸಂತಾನ ಹೀನಳಾಗುತ್ತಾಳೆಂದು ಕುಂತಿಗೆ ಮಂತ್ರ ಹೇಳಿಕೊಟ್ಟು ಅದು ‘ಖರೇವು ಹೌದಾ ಅಲ್ಲ’ ಅಂತ ಕನ್ಯಾ ಆಗಿದ್ದಾಗನ ಟೆಸ್ಟ ಮಾಡಕ ಹೋಗಿ ಕರ್ಣನ ಜನ್ಮಕ್ಕೆ ಕಾರಣವಾದಂತವರು, ದುರ್ಯೋಧನನ ಕುಯುಕ್ತಿಗೆ ಬಲಿಬಿದ್ದು ಅಕಾಲದಲ್ಲಿ ಬಂದು ವನವಾಸದಲ್ಲಿ ಗತಿ ಇಲ್ಲದೆ ಇದ್ದ ಪಾಂಡವರಿಗೆ ಕೂಳು ಹಾಕ್ರಿ ಅಂತ ದುಂಬಾಲು ಬಿದ್ದು ಪರಿತಪಿಸಿದವರು. ಹಾಂ! ಅವರೇ. ಅಂಬರಿಷ ಮಹಾರಾಜ ದ್ವಾದಶಿ ಪಾರಣಿ ಮಾಡ ಟೈಮಿನ್ಯಾಗ ಬಂದು ‘ನಾನು ಸ್ನಾನ ಮಾಡಿ ಬರತಿನಿ ಅಲ್ಲಿತನ ಊಟ ಮಾಡಬೇಡ’ ಅಂತ ಹೇಳಿ ನದಿ ಹೋಗ್ತಾರೆ.  ಅಂತಹ ಆಸ್ಥಾನದಾಗ ಬಚ್ಚಲ ಇರಲಿಲ್ಲೇನು? ಸ್ನಾನಕ್ಕ ಹೋದವರು ಮುಗಿಸಿಕೊಂಡು ಬರಬೇಕಪ, ಲೇಟಾಗುತ್ತೆ, ಅಂಬರೀಷನಿಗೆ ತಳಮಳ, ಅತಿಥಿಗಳನ್ನು ಬಿಟ್ಟು ಊಟ ಮಾಡಂಗಿಲ್ಲ, ಈಕಡೆ ಆ ಟೈಮಿನೊಳಗ ಊಟ ಮಾಡಲಿಕ್ರೆ ವ್ರತ ಭಂಗ ಆಗುತ್ತ ಅನ್ನೊ ಧರ್ಮ ಸಂಕಟ. ಕುಲಗುರುಗಳ ಸಲಹೆ ಮೇಲೆ ಒಂದು ಉದ್ಧರಣೆ ನೀರು ಕುಡಿದು ಪಾರಣಿ ಕ್ರಿಯೆ ಮುಗುಸ್ತಾನೆ. ದುರ್ವಾಸರು ಬಂದ್ರು. ಊಟ ಎಲ್ಲಾ ಸಿದ್ದ ಇತ್ತು ಊಟ ಮಾಡಬೇಡ್ವೇ? ನೀನು ನೀರು ಕುಡಿದು ಪಾರಣಿ ಪೂರೈಸಿ ನನಗೆ ಅಪಮಾನ ಮಾಡಿದಿ ಅಂತ ಸಿಡಿಮಿಡಿಗೊಂಡು ಶಾಪ ಕೊಡತಾರೆ. ವಿಷ್ಣು ಭಕ್ತ ಅಂಬರೀಶ ಅವನ ಮೊರೆ ಹೋಗ್ತಾನೆ, ಸೀದಾ ವಿಷ್ಣು ಮುನಿಮೇಲೆ ಮನಿಸಿಕೊಂಡು ಚಕ್ರ ಬಿಡ್ತಾನೆ. ಒಬ್ಬ ಸಾಮಾನ್ಯ ಮನುಷ್ಯನಿಂದಾದ ಆಪತ್ತಿಗೆ ಕಕ್ಕಾಬಿಕ್ಕಿಯಾದ ದೂರ್ವಾಸರು ಬ್ರಹ್ಮನತ್ತ ಹೋಗ್ತಾರೆ ಅವರು ಹೆಲ್ಪಲೆಸ್ ಅಂತಾರೆ, ಶಿವನ ಹತ್ರ ದೌಡಾಯಿಸ್ತಾನೆ ವಿಷ್ಣುಕಡೆ ಕೈ ತೋರಸ್ತಾನೆ, ವಿಷ್ಣು ಹತ್ರ ಬಂದು ನಿನ್ನ ಚಕ್ರದಿಂದ ನನ್ನನ್ನು ರಕ್ಷಿಸು ಅಂತ ಗೊಗೆರೆದಾಗ ವಿಷ್ಣು ‘ಆಯ್ ಆಮ್ ಆಲ್ಸೋ ಹೆಲ್ಪಲೆಸ್, ಆಯ್ ಇನ್ ಹ್ಯಾಂಡ್ ಆಫ್ ಪಿಲಿಗ್ರೀಮ್ಸ್, ಅವರ ಪರಾಧಿನ. ನೀನು ಏನಿದ್ದರೂ ಅಂಬರಿಷನ ಕೇಳಬೇಕು’ ಅಂದಾಗ ರಾಜನ ಹತ್ತಿರ ಬಂದು ಪ್ರಾಯಶ್ಚಿತ್ತದಿಂದ ತಲೆ ಬಾಗಿದಾಗ ಚಕ್ರ ಮರಳಿ ವಿಷ್ಣುನ ಕೈ ಸೇರುತ್ತೆ. ಇದು ಏಕಾದಶಿ ಮಹತ್ವ ಸಾರುವ ಕಥೆ. ‘ಅಲ್ರೀ ಒಬ್ಬ ರಾಜಗ ಏಕಾದಶಿ ವ್ರತಾ ಮಾಡಿದದಕ ಎಂತ ಪವರ್ ಫುಲ್ ಶಕ್ತಿ ಬಂತು, ಸಾಕ್ಷಾತ್ ನಾರಾಯಣನೇ ಅವನ ಆಧೀನನಾದ, ಅಂತಹ ಮಹತ್ವ ಇರುವ ಏಕಾದಶಿ ದಿನ ಮಾಡಿದ್ರೆ ಕೆಟ್ಟದಾಗಕ್ಕ ಸಾಧ್ಯ ಏನ್ರೀ?’ ಅಂತ ಹೇಳಿದ್ರೆ  ಆಸ್ತಿಕರು ಒಲ್ಯಾಂತರೇನ್ರೀ, ಈಗ ಒಂದು ವಾರ ಮಾಧ್ಯಮದಾಗ ಈ ಬಗ್ಗೆ ಚರ್ಚೆ ನಡಿಸಿಬಿಟ್ರ ಇಡಿ ದೇಶ ತುಂಬ ಏಕಾದಶಿ ವ್ರತಾನ ಹಿಡದಬಿಡತಾರ. ಇದು ಕೋಮವಾದಿತನ, ಮೌಢ್ಯದಲ್ಲಿ ಸಿಲುಕಿಸುವ ಪ್ರಯತ್ನ ಎಂದು ಜಾತ್ಯಾತೀತ ತತ್ವದ ಸೋಕಾಲ್ಡ ಬುದ್ಧಿಜೀವಿಗಳು ಕೂಗಾಕಬಹುದು. ಅದರ ಹಿಂದ ಎಷ್ಟು ಲಾಭೈತ್ರಿ. ವರ್ಷಕ್ಕ ಮಿಲಿಯನ್ನಗಟ್ಟಲೇ ಆಹಾರ ಧಾನ್ಯ ಉಳಿಯುತ್ತೆ. ಅದನ್ನು ಎಕ್ಸಪೋರ್ಟ ಮಾಡಿದ್ರ ನಮ್ಮ ರೂಪಾಯಿ ಮೌಲ್ಯ ಹೆಚ್ಚಸಿಕೊಳ್ಳಬಹುದು ನಮ್ಮ ಆರೋಗ್ಯಾನೂ ಉಳಿಸಿಕೊಳ್ಳಬಹುದು.  ನೆನಪು ಮಾಡಿಕೊಡ್ರಿ, ಪಾಕಿಸ್ತಾನದ ಜೊತೆ ಯುದ್ಧವಾಗುತ್ತಿರುವ ಸಂದರ್ಭದಲ್ಲಿ ಆಹಾರ ಸಾಮಗ್ರಿ ಕೊರತೆಯಾದಾಗ ಅಂದಿನ ಪ್ರಧಾನಿ ಶಾಸ್ತ್ರಿಯವರು ವಾರಕ್ಕ ಸೋಮವಾರ ದಿನ ಒಮ್ಮೆ ಉಪವಾಸ ಮಾಡಿ ಎಂದು ಕರೆ ನೀಡಿದ್ದಕ್ಕೆ ದೇಶವೇ ಕಿವಿಗೊಟ್ಟು ಕಾರ್ಯ ರೂಪಕ್ಕ ತಂತು. ಖಾನಾವಳಿಗಳು ಅಂದಿನ ದಿನ ಸ್ವಯಂ ಪ್ರೇರಿತವಾಗಿ ಮುಚ್ಚಿದವು. ಅಂದು ಹಾಗಾಗಿರಬೇಕಾದ್ರೆ 125 ಕೋಟಿ ಜನಸಂಕುಲ ಪಕ್ಷಕ್ಕೆ ಇರುವ ಈಗ ತಿಂಗಳಿಗೆ ಎರಡು ದಿನ ಉಪವಾಸ ಮಾಡಿದ್ರೆ ಎಷ್ಟು ಉಳಿಸಬಹುದಲ್ಲ, ಬೆಲೆ ತನ್ನಿಂದ ತಾನೆ ಕಡಿಮೆ ಆಗಲ್ಲ ಅಂತಿರೇನು? ಅದು ಬಿಡಿ ಹಿಂದೆ ಹೋಗ್ರಿ. ಉಪವಾಸವನ್ನು ಹೋರಾಟದ ಅಸ್ತ್ರವಾಗಿ ನಮ್ಮ ಸ್ವಾತಂತ್ರ ಹೋರಾಟಗಾರರು ಬಳಸಿಕೊಂಡಿದ್ರು. ಗಾಂಧಿಜೀ 21 ದಿವಸ ಉಪವಾಸ  ಇದ್ದು ಬ್ರಟಿಷರನ್ನೆ ನಡಗಿಸಿಬಿಡಲಿಲ್ಲವೇ? ಇತೀಚಿಗೆ ಅಣ್ಣಾ ಹಜಾರೆಯವರು ಲೋಕಪಾಲ ಮಸೂದೆಗಾಗಿ ಮಾಡಿದ ಉಪವಾಸಕ್ಕೆ ಎಂತಹ ಪ್ರತಿಕ್ರಿಯೆ ಸಿಕ್ಕಿತು. ಉಪವಾಸಕ್ಕೆ ಕ್ರಾಂತಿ ಹುಟ್ಟಿಸುವ ಶಕ್ತಿ ಇದೆ ಅನಸಲ್ವೇ? ಅಷ್ಟು ದೂರ ಯಾಕೆ ಮನೆಯಲ್ಲಿ ಹೆಂಡ್ರು ಉಪವಾಸ ಬಿದ್ದು ಶೆಟಗೊಂದ್ರ ಏನೆಲ್ಲಾ ಅಗುತ್ತಿಲ್ಲೊ!

ಏಕಾದಶಿ ಆಚರಣೆ ಅಂದ್ರ ಅದು ವೈಜ್ಞಾನಿಕ ಹಿನ್ನಲೆಯಲ್ಲೆ ಇರುವಂತಹದ್ದು. ಉಪವಾಸದಿಂದ ಶಾಂತಿ ತಾಳ್ಮೆ ಬೆಳಸಿಕೊಳ್ಳಬಹುದು ರಕ್ತದೊತ್ತಡ, ರಕ್ತ ಹೀನತೆ ನಿಯಂತ್ರಿಸಿಬಹುದು. ನಿಜಕ್ಕೂ ಈಗ ಮಾಡುವ ಏಕಾದಶಿಗೂ ಅದರ ಮೂಲ ಸ್ವರೂಪಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ದಶಮಿ ತಿಥಿಯಂದು ಮಾಡಿದ ಊಟವೆ ಕೊನೆ. ಏಕಾದಶಿ ದಿನ ನೀರಾಹಾರವಾಗಿದ್ದು ದ್ವಾದಶಿ ದಿನ ಸೂರ್ಯೋದಯದೊಳಗಾಗಿ ಊಟ ಮಾಡಿ ಪಾರಣಿ ಮುಗಿಸಬೇಕು ಮಧ್ಯಹ್ನ ರಾತ್ರಿ ಊಟಾ ಮಾಡಂಗಿಲ್ಲ. ಏನ್ರೀ ಒಂದು ಹನಿ ನೀರುಕುಡಿಯದೆ  ಇರಲು ಸಾಧ್ಯವೇ…? ಅಂತಹ ಸಾಧಕರು ಅನೇಕರಿದ್ದಾರೆ. ಕೆಲಸ ಮಾಡದೆ ಧ್ಯಾನ ಚಿಂತನೆ ಅಧ್ಯಯನದಿಂದ ನಿಗ್ರಹಿಸಲುಸಾಧ್ಯ ಇದೆ. ಅದು ಅಸಾಧ್ಯ ಅಂತ ಮನಗಂಡು ನೀರು ಸೇವಿಸಿದೆ ಓ.ಕೆ ಅಂತ ಮೌಖಿಕ ಕಾನೂನು ಬಂತು ಅದೆಂಗ ನೀರು ಕುಡಿಯದೆ ಬದುಕೊಕಾಗುತ್ತೆ ಅಂದಾಗ ಫಲಾಹಾರ ನಡಿಬಹುದು ಅಂತ ಅಲಿಖಿತ ಶಾಸನ ತಂದಾಯಿತು, ಅದಾದ ಮೇಲೆ ಅದಕ್ಕೂ ಕೊಂಕು ನುಡಿದ ಮೇಲೆ ಉಪ್ಪಿಟ್ಟು, ಅವಲಕ್ಕಿ, ಒಗ್ರಣಿ ಕೊನಿಗೆ ಸುಬ್ಬಕ್ಕ ಹಾಡಿನ ತರಹ ಆಯ್ತು. 

ವರ್ಷಕ್ಕೆ 24 ಏಕಾದಶಿಗಳು ಬರುತ್ತವೆ ಪಕ್ಷಕ್ಕೊಂದರಂತೆ, ಅಧಿಕ ವರ್ಷದಲ್ಲಿ ಅವುಗಳ ಸಂಖ್ಯೆ 26ಕ್ಕೆ ಏರಿರುತ್ತದೆ. ಶುಕ್ಲ ಪಕ್ಷದಲ್ಲಿ ಕಾಮದಾ, ಮೋಹಿನಿ, ನಿರ್ಜಲಾ, ಪುತ್ರದಾ ಮೊದಲಾದ ಹದಿಮೂರು ಕೃಷ್ಣ ಪಕ್ಷದಲ್ಲಿ ಪಾಪಮೋಚನ, ವರೋಧಿನಿ, ಕಾಮಿಕಾ ರಮಾ, ಫಲದಾ ಮೊದಲಾದ ಹದಿಮೂರು ಏಕಾದಶಿಗಳು ಬರುತ್ತವೆ.  ಏಕಾದಶಿ ದಿನ ತಿನ್ನುವ ವಿಷಯಕ್ಕ ಹೆಚ್ಚುಕಮ್ಮಿ ಸರಿಪಡಿಸಿಕೊಂಡ್ರು ವೈಕುಂಠ ಏಕಾದಶಿ ದಿನ ಬಹತೇಕರು ನಿರಾಹಾರ  ಮಾಡತಾರೆ.  ಆ ಏಕಾದಶಿ ದಿನ ಸ್ವರ್ಗದ ಬಾಗಿಲು ತೆರದಿರುತ್ತಂತೆ. ಆ ದಿನ ವಿಶೇಷ ಅನುಸಂಧಾನ ಮಾಡುವವರಿಗೆ ಸ್ವರ್ಗಪ್ರಾಪ್ತಿಯಾಗುತ್ತೆ ಅದಕ್ಕಿಂತಲೂ ಅವತ್ತಿನ ದಿನ ಸತ್ತವರಿಗೆ ಡೈರೆಕ್ಟ ವೈಕುಂಠಕ್ಕೆ ಟಿಕೇಟ್ ಸಿಗುತ್ತಂತೆ ನಂಬಿಕೆ ಇದೆ. ಟೈಮ ನೋಡಿ ಸಿಜರಿನ್ನು ಮಾಡಿಸಿಕೊಂಡು ಹಡಿಯುವಂಗೆ ತಿಥಿ ಪಕ್ಷ ನೋಡಿ ಸಾಯೋ ಟೈಮು ಬರದು ದೂರಿಲ್ಲ ಅಂತ ಕಾಣ್ತಾದೆ. ಅವತ್ತಿನ ದಿನ ವಿಶೇಷ ಏನಪಾ ಅಂದ್ರಾ. ಹಿಂದಕ ರಾವಣನ ಉಪಟಳ ತಾಳಲಾರದ ದೇವತೆಗಳು ಬ್ರಹ್ಮನೊಡಗೂಡಿ ವೈಕುಂಠಕ್ಕೆ ಹೋಗಿದ್ದು ಇದೆ ಏಕಾದಶಿ ದಿನವಂತೆ. ಅಂದು ಅವರು ಹರಿವಾಸರ ಮಾಡಿದ್ದರಂತೆ. ಬಂದ ದೇವತೆಗಳಿಗೆ ದರ್ಶನವಿತ್ತ ಹರಿ ಬಾಧೆಗಳನ್ನ ನಿವಾರಿಸುವ ಅಭಯವಿತ್ತನಂತೆ. ಮೂರು ಕೋಟಿ ದೇವತೆಗಳ ಭಯ ನಿವಾರಿಸಿದ ದಿನ ಇದೆ ಆದ್ದರಿಂದ ‘ಮುಕ್ಕೊಟಿ ಏಕಾದಶಿ’ ಅಂತಲೂ ಕರೆಯುತ್ತಾರೆ.   ಇನ್ನೂ ವೈಕುಂಠ ಏಕಾದಶಿ ದಿನ ದೇವಸ್ಥಾನಗಳಿಗೆ ವಿಶೇಷ ಅಲಂಕಾರ ಮಾಡಿರತಾರೆ, ಪ್ರತ್ಯೇಕ ಮಾರ್ಗ ಮಾಡಿರತಾರೆ. ಅದೇ ದ್ವಾರದ ಮೂಲಕ ಹೋದ್ರನ ವೈಕುಂಠಕ್ಕ ರಿಜರ್ವೇಶನ್ ಸಿಗುತ್ತಾ ಅಂತ ಕೇಳಬಹುದು. ನಮ್ಮ ಹಿಂದಿನವರ ಬಗ್ಗೆ ಹೆಮ್ಮೆ  ಪಡಬೇಕಾದ ವಿಚಾರವೆಂದ್ರೆ. ಪ್ರತಿಯೊಂದು ಸಮಯಾ ಸಂದರ್ಭ, ಘಟನಾಕ್ಕ ಸ್ವಾರಸ್ಯ ಕಥೆಯನ್ನ, ದೃಷಾಂತವನ್ನು ಜೋಡಿಸಿರುವುದು. ಮೌಢ್ಯತೆಯನ್ನು ಬಿತ್ತೊದಕಂತ ಅಲ್ಲ ಸನ್ಮಾರ್ಗದಲ್ಲಿ ನಡೆಸೋದಕ್ಕ. ಹರಿಯಿಂದ ಸಂಹರಿಸಲ್ಪಟ್ಟ ಮಧುಕೈಭಟರು ಮೋಕ್ಷಹೊಂದಿ ಹರಿ ಹತ್ತಿರ ಬಂದಿದ್ದು ಇದೆ ದಿನ. ಅವನ ಬಳಿ ಬಂದಾಗ ನಿಸ್ವಾರ್ಥದ ಎಂತಾ ಮಾತು ಹೇಳ್ತಾರಿ ‘ಯಾರು ಈ ದಿನ ಉಪವಾಸಗೈದು ಉತ್ತರಮಾರ್ಗದಿಂದ ಬಂದು ದರ್ಶನ ತೆಗೆದುಕೊಳ್ಳುವವರಿಗೆ ವೈಕುಂಠ ಪ್ರಾಪ್ತಿ ಕರುಣಿಸು’ ಎಂದು. ರಾಕ್ಷಸ ಭಕ್ತರ ಮನಸ್ಸಿಗೆ ಮಾರು ಹೋದ ಹರಿ ‘ಅಸ್ತು’ ಅಂದ. ಅದಕ ಈ ಏಕಾದಶಿಗೆ ‘ಮೋಕ್ಷೋತ್ಸವ ಏಕಾದಶಿ’ ಎಂದು ಹೆಸರು.

 ಏನೆ ಇರಲಿ ಏಕಾದಶಿ ಉದ್ದೇಶ ಅರ್ಥಪೂರ್ಣವಾದದ್ದು. ಯೋಗದಂತೆ ಇದು ವೈಜ್ಞಾನಿಕವಾದದ್ದು. ಬೊಜ್ಜು ಸಮಸ್ಯೆ, ಆಹಾರ ದುಬ್ಬರ ಏರುತ್ತಿರುವ ಈ ಸಮಯದಲ್ಲಿ ಅವಶ್ಯಕವೂ ಹೌದು. ಮುಸ್ಲಿಮರು ರಂಜಾನನಲ್ಲಿ ನಡೆಸುವ ರೋಜಾ, ಕ್ರಿಶ್ಚನ್ನರು ಮಾಡುವ ಲೆಂಟ್, ಯಹೂದಿಗಳು ಮಾಡುವ ಯಾಮ್ ಕಿಪ್ಪರ್, ಜೈನರ ಪರ್ಯುಷಾನ, ಜೊತೆಗೆ ನಾವು ಮಾಡುವ ಸೋಮ, ಮಂಗಳ, ಶನಿವಾರ ಮಾಡುವ ಒಪ್ಪತ್ತು ಉಪವಾಸ,  ನವರಾತ್ರಿ, ಶಿವರಾತ್ರಿ, ಕರ್ವಾಚೌತ್ ದಿನ ಮಾಡುವ  ಉಪಾವಸೆಲ್ಲವೂ ವೈಜ್ಞಾನಿಕ ತತ್ವದಲ್ಲಿರುವವೇ. ಮನಗುಂಡಿ ಶ್ರೀಗಳು ಬಿಸಿನೀರು, ನಿಂಬೆಹಣ್ಣು, ಜೇನುತುಪ್ಪದ ಉಪವಾಸ ಥೆರಫಿಯೂ ದೇಹಶುದ್ಧಿಗಾಗಿಯೇ. ಉಪವಾಸ ಉಪವಾಸವಾಗಿದ್ದರನೇ ಚೆನ್ನ, ಸುಬ್ಬಮ್ಮನ ಉಪವಾಸದಂತಾದರೆ ಜೀವನ ಪರ್ಯಂತೆ ಮಾಡಿದರೂ ಅರ್ಥಹೀನ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಏಕಾದಶಿ: ಗುಂಡುರಾವ್ ದೇಸಾಯಿ

Leave a Reply

Your email address will not be published. Required fields are marked *