ಆ ದಿನವೇ ರಿಲೀಸ್ ಆದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಮಾರ್ನಿಂಗ್ ಷೋಗೆ ಹೋಗೋಣವೆಂದರೆ ಕೆಲಸದ ಬಾಧೆ. ಎಲ್ಲ ಹಲ್ಲಂಡೆಗಳನ್ನು ಮುಗಿಸಿಕೊಂಡು ಹೊರಟಾಗ ಗಂಟೆ ಏಳಾಗಿತ್ತು. ನಗರ ತುಂಬಾ ಆಕ್ಟೀವ್ ಆಗಿತ್ತು. ಬಿಂಕದ ಮೊರೆ ಹೋದ ಯುವಕ-ಯುವತಿಯರು, ಹಗಲೆಲ್ಲ ಬೆವರು ಸುರಿಸಿ ಬೆಂದಿದ್ದ ಕೂಲಿ ಕಾರ್ಮಿಕರು, ನಾಲಿಗೆಯ ಚಪಲಕ್ಕೆ ಶರಣಾಗಿ ಗೋಬಿ, ಪಾನಿಪೂರಿ, ಕಬಾಬ್ ಗಾಡಿಗಳ ಮುಂದೆ ಕ್ಯೂ ನಿಂತ ನನ್ನಂಥ ತಿಂಡಿ ಪೋತರು… ಒಟ್ಟಾರೆ ನಗರದ ಮುಖ್ಯರಸ್ತೆ ರಂಗು ಬಳಿದುಕೊಂಡಿತ್ತು.
ಥಿಯೇಟರ್‍ನ ಕಾಂಪೌಂಡ್ ಒಳಗೆ ಕಾಲಿಡೋಣವೆಂದರೆ ಭಾರೀ ನೂಕುನುಗ್ಗಲು. ಹೇಗೊ ಹರಸಾಹಸ ಪಟ್ಟು ಒಳ ಹೊಕ್ಕಿದೆ. ಕ್ಯೂ ರೈಲ್ವೆ ಟ್ರ್ಯಾಕ್‍ನಂತಿದ್ದರೂ ನನ್ನ ಚಾಲಾಕಿತನ ಬಳಸಿ ಮಧ್ಯದಲ್ಲೆಲ್ಲೋ ನುಸುಳಿಕೊಂಡೆ. ಅದಾಗಲೇ ನನ್ನೆಡೆಗೆ ಹೆಂಡದ ಕಂಪು ಪಸರಿಸಲಾರಂಭಿಸಿತ್ತು. ಅಂತೂ ಇಂತೂ ಟಿಕೆಟ್ ಗಿಟ್ಟಿಸಿಕೊಂಡೆ. ಮರುಕ್ಷಣವೇ ಹೌಸ್‍ಫುಲ್ ಎಂದು ಬೋರ್ಡು ನೇತಾಕಿದರು.
ಬಾಲ್ಕನಿ ತೊಂಬತ್ತು… ತೊಂಬತ್ತು… ಬಾಲ್ಕನಿ ನೂರು… ನೂರು… ಫಸ್ಟ್ ಕ್ಲಾಸ್ ಎಪ್ಪತ್ತು… ಎಪ್ಪತ್ತು… ಬ್ಲಾಕ್ ಟಿಕೆಟ್‍ಗಳ ಮಾರಾಟ ಜೋರಾಗೆ ನಡೆದಿತ್ತು. ಯಾವ ಚೌಕಾಸಿಯೂ ಇಲ್ಲದೆ ಕೇಳಿದಷ್ಟು ಕಾಸು ಕಕ್ಕಿ ಕೆಲವರು ಟಿಕೆಟ್ ಕೊಳ್ಳುತ್ತಿದ್ದರು.
ಥಿಯೇಟರ್ ಡೋರ್ ತೆಗೆದರು. ಒಳಗೆ ಕಾಲಿಟ್ಟ ಮೇಲೆ ತಿಳಿದದ್ದು, ಕೌಂಟರ್‍ನಲ್ಲಿ ಕೊಟ್ಟದ್ದು ಅರ್ಧದಷ್ಟು ಟಿಕೆಟ್‍ಗಳನ್ನು ಮಾತ್ರ. ಅರ್ಧಕ್ಕರ್ಧ ಸೀಟುಗಳು ಹಾಗೆ ಖಾಲಿ ಇದ್ದವು. ಟಿಕೆಟ್ ಕೌಂಟರ್‍ನ ಬಳಿ ಏನು ನಡೆಯುತ್ತಿದೆ ಎಂದು ನೋಡಲು ಹೋದೆ. ಅಲ್ಲಿದ್ದ ಆಸಾಮಿ ತನ್ನ ಚೇಲಾಗಳ ಮೂಲಕ ಬ್ಲಾಕ್ ಟಿಕೆಟ್ ಮಾರಿಸುತ್ತಿದ್ದ. ಎಲ್ಲರನ್ನೂ ತನ್ನ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಒಂದು ವೇಳೆ ಪೊಲೀಸು ಬಂದ್ಬಿಟ್ರೆ ಕಷ್ಟ. ಅವರಿಗೆ ಮಾಮೂಲಿ ಬೇರೆ ಕೊಡಬೇಕಾಗುತ್ತೆ ಅಂತ ಕೊಸರಾಡುತ್ತಿದ್ದ.
ಥಿಯೇಟರ್‍ನ ಪಕ್ಕದಲ್ಲೇ ಇದ್ದ ಪೊಲೀಸ್ ಸ್ಟೇಷನ್ ತನಗೆ ಏನೂ ತಿಳಿದಿಲ್ಲವೆಂದು ಮೌನವಾಗಿ ನಟಿಸುತ್ತಿತ್ತು. ಇದೆಲ್ಲ ನಿನಗ್ಯಾಕೆ ಎಂದು ನನಗೆ ನಾನೆ ಸಲಹೆ ಕೊಟ್ಟುಕೊಂಡು ಸೀಟಿನಲ್ಲಿ ಕುಳಿತುಕೊಳ್ಳುವ ಸಲುವಾಗಿ ಸೀಟ್ ನಂಬರ್ ನೋಡಿದೆ. ಸಿನಿಮಾ ಶುರುವಾಯ್ತು. ಶಿಳ್ಳೆಗಳು, ಅರಚಾಟ, ಚಪ್ಪಾಳೆಯ ಸದ್ದು ಸುತ್ತೆಲ್ಲ ಆವರಿಸಿತು. ಕುಡಿದು ಹಾಫ್ ಟೈಟ್ ಆದವರಿಂದಿಡಿದು ಮನೆ ದಾರಿ ಹಿಡಿಯಲಾರದಂಥ ಸ್ಥಿತಿ ತಲುಪಿದ್ದವರೂ ಅಲ್ಲಿದ್ದರು. ಥಿಯೇಟರ್‍ನಲ್ಲಿದ್ದದ್ದು ಒಂದೇ ಒಂದು ಹೆಣ್ಣು ಮುಖ. ಆಗಷ್ಟೇ ಮದುವೆಯಾದ ಜೋಡಿ ಸಿನಿಮಾ ನೋಡಿ(ನೋಡದೆಯೂ) ಎಂಜಾಯ್ ಮಾಡಲು ಬಂದಿತ್ತು. ಕಿಕ್ಕಿರಿದು ತುಂಬಿದ್ದ ಜನಸಂದಣಿಯಲ್ಲಿ ಅವರ ಆಸೆ ಕೈಗೂಡುವುದು ದುಸ್ತರವಾಗಿತ್ತು.
ಇಂಟರ್‍ವಲ್‍ಗೆ ಬಿಟ್ಟಾಗ ಮೂತ್ರವಿಸರ್ಜನೆ ಮಾಡೋಣವೆಂದು ಹೊರಟರೆ ಅಲ್ಲಿ ಹೊಗೆಯ ಕಾರ್ಮೋಡವೇ ಕವಿದಿತ್ತು. ಎಲ್ಲರ ಕೈಯಲ್ಲೂ ನಾನಾ ನಮೂನೆಯ ಸಿಗರೇಟುಗಳು ಪ್ರಕಾಶಮಾನವಾಗಿ ಉರಿಯುತ್ತಿದ್ದವು. ಅಲ್ಲೇ ‘ಧೂಮಪಾನ ನಿಷೇಧಿಸಿದೆ’ ಎಂಬ ಬೋರ್ಡು ದಿಕ್ಕು ದೆಸೆಯಿಲ್ಲದೆ ಅನಾಥವಾಗಿ ಬಿದ್ದಿತ್ತು.
ಪಾಪ್‍ಕಾರ್ನ್ ಕೊಂಡು ಮತ್ತೆ ಸಿನಿಮಾ ನೋಡಲು ಒಳ ಹೋದೆ. ಕಣ್ಣು ಕೆಂಪಾಯಿತು. ಆಯಾಸ ಆವರಿಸಿತು. ಪರದೆಯ ಮೇಲೆ ತೆರೆದುಕೊಳ್ಳುತ್ತಿದ್ದ ಕ್ರೌರ್ಯ ಒಳಗೂ ಕಿಡಿ ಹಚ್ಚಿತ್ತು.
ಸಿನಿಮಾ ಮುಗಿಯಿತು. ಹೊರಗಿನ ಲೋಕಕ್ಕೆ ಹೊಂದಿಕೊಳ್ಳಲು ಕಣ್ಣು ಯತ್ನಿಸಲಾರಂಭಿಸಿತು. ನಗರ ನಿದ್ರೆಗೆ ಜಾರುವ ಸನ್ನಾಹದಲ್ಲಿತ್ತು. ಎಲ್ಲೋ ಒಂದೊಂದು ವಾಹನಗಳ ಸದ್ದು ಬಿಟ್ಟರೆ ಬೇರೆಲ್ಲವೂ ಬಂದ್. ಹೋಗುವಾಗ ಇದ್ದ ರಂಗು ಈಗ ಗುರುತು ಸಿಗದಷ್ಟು ಮಾಸಿತ್ತು. ನೈಟ್ ಷೋ ನನ್ನಂಥವರಿಗಲ್ಲವೆಂದು ಮನಸ್ಸು ನಿದ್ರಿಸುತ್ತಲೆ ಎಚ್ಚರಿಸಿತು.
-ಎಚ್.ಕೆ.ಶರತ್