ಊರಾಗ ಸಿಕ್ಕಾಪಟ್ಟಿ ಮಳೆಯಾಗಿ ಎಲ್ಲ ಮನೆ ಬಿದ್ದಾವು. ನಮ್ಮ ಮನಿನೂ ಸೊರಾಕ ಹತೈತಿ. ಈ ಸಲ ಊರಿಗೆ ಬಂದು ಹೋಗಪಾ ಎಂದು ಅವ್ವ ಹೇಳಿದ್ದು ನೆನಪಾಗಿ ಈ ಸಲ ಹಬ್ಬದ ಸೂಟಿ ಉಪಯೋಗ ಮಾಡಿಕೊಳ್ಳುವುದಕ್ಕೋಸ್ಕರವಾದರೂ ಊರಿಗೆ ಹೋಗಲೇ ಬೇಕೆನಿಸಿದ್ದರಿಂದ ರಾತ್ರಿ ಕೆಲಸ ಮುಗಿದ ಮೇಲೆ ನೇರವಾಗಿ ರೂಮಿಗೆ ಹೋಗಿ ಒಂದೆರಡು ಪ್ಯಾಂಟು-ಶರಟುಗಳನ್ನು ಬ್ಯಾಗಿಗೆ ತುರುಕಿಕೊಂಡು ಬಸ್ಸು ಹತ್ತಿದೆ.
ಬೆಳಗ್ಗೆ ಬಸ್ ಇಳಿದಾಗ ಬಸ್ ನಿಲ್ದಾಣದ ಛಾವಣಿಯೊಳಗ ಮತ್ತು ರಡ್ಡೆರ ಕಾಂಪ್ಲೆಕ್ಸ್‌ನೊಳಗ ಊರ ಜನ ಅನ್ನ ಬೇಯಿಸಿಕೊಳ್ಳುತ್ತಿದ್ದುದು ಕಂಡು ಮಳಿ ದಾಳಿಯ ಭೀಕರತೆ ನನಗೆ ಅರಿವಾಗತೊಡಗಿತು. ಅಲ್ಲಿಯೆ ಕೈಯಲ್ಲಿ ಯಾವದೊ ಕಾಗದ ಪತ್ರಗಳನ್ನು ಹಿಡಿದುಕೊಂಡು ನಿಂತಿದ್ದ ರಾಮಪ್ಪ ಕಾಕಾ ‘ನಮಸ್ಕಾರ ಸತ್ಯಣ್ಣ ಈಗ ಬಂದೇನ, ನೀನು ಅವಾಗ ಊರು ಬಿಟ್ಟು ಹೊದದ್ದ ಪಾಡಾತ ನೋಡಪಾ. ಈ ಊರಾಗ ನಮ್ಮಂತೋರ ಕಷ್ಟ ಕೆಳೋರಿಲ್ಲದಾಂಗ ಆಗೆತಿ. ಗೊನ್ನಿಹಳ್ಳ ಬಂದು ಊರೆಲ್ಲಾ ಕೆಡಿವಿ ಸ್ವಚ್ಚ ಗೂಡಿಸಿ ಹೋಗೆತಿ. ಊರಾಗ ಎಲ್ಲರೂ ಮನಿನೂ ಬಿದ್ದಾವ. ಅದಕ್ಕ ಹಿಂಗ ಬಸ್‌ಸ್ಟಾಂಡ್‌ದಾಗ, ಸಾಲಿಯೊಳಗ ಒಲಿ ಹೂಡಿ ಜನ ರೊಟ್ಟಿ ಬೇಯ್ಸಾಕ ಹತ್ಯಾರ. ನಿಮ್ಮ ಮನಿ ಬೀಡಪಾ ವಾಡೆ ಇದ್ದಾಂಗ ಐತಿ. ಆದ್ರೂ ಸೋರತೈತಿ ಅಂತ ಹೇಳತಿದ್ದ ನಿಮ್ಮಪ್ಪ, ಬಿದ್ದ ಮನಿಗೆ ರೊಕ್ಕ ಬಂದಾವಂತ. ಒಂದು ವಾರದಿಂದ ಓಡಾಡಾಕ ಹತ್ತೇನಿ. ಸಂಜಿಕ ಬರ್‍ತೇನಿ ಎಂದು ಆತ ಬಸ್ ಹತ್ತಿ ಮಾಯವಾದ.
ಊರತ್ತ ಹೆಜ್ಜೆ ಹಾಕತೊಡಗಿದೆ. ಊರ ಅಗಸಿಯಲ್ಲಿಯೆ ಬರುವವರನ್ನು ಸ್ವಾಗತಿಸುತ್ತಿದ್ದ ಹನುಮದೇವರ ಗುಡಿಯ ಗೋಪುರ ಈ ಸಲ ನನಗೆ ಕಾಣಿಸುತ್ತಲೆ ಇಲ್ಲ. ಸುಣ್ಣ ಬಣ್ಣದ ಮನೆಗಳೆಲ್ಲ ತಲೆ ಒಡೆದು ರಕ್ತ ಮೈಮೇಲೆಲ್ಲಾ ಸೋರಿದ ಯೋಧರಂಗ ತಮ್ಮ ಛಾವಣಿ ಒಡೆದು ಹೋಗಿ ಮಣ್ಣಿನ ರಾಡಿಯನ್ನು ಗೋಡೆಗುಂಟ ಜಡಿಯಂಗ ಇಳಿಬಿಟ್ಟಿದ್ವು. ಕೆಲವು ಮನೆಗೊಳ ಕಿಡಕಿ ಬಾಗಿಲು, ಕುಂಬಿ, ಮಾಡು, ತೊಲೆ ಮುರಿದು ಬಿದ್ದು ಹೆಳವನಂಗ ಕಾಣತಿದ್ವು. ಇದು ನನ್ನ ಊರ ಹೌದಲ್ಲೋ ಅನ್ನೊ ಅನುಮಾನ ಹುಟ್ಟವಷ್ಟು ಇಡೀ ಊರಿಗೆ ಊರೆ ಬರಬಾದ್ ಆಗಿತ್ತು.
ಎದುರಿಗೆ ಕಾಣುವವರೆಲ್ಲರ ಮುಖದಲ್ಲಿ ಹೆಳತೀರದ ಸಿಟ್ಟು, ಅಸಹನೆ, ಮತ್ತು ಅವುಡುಗಚ್ಚಿರುವ ಹಲ್ಲು ಕಾಣತಿದ್ವು. ಕುರುಕ್ಷೇತ್ರ ಯುದ್ಧ ಮಗಿದ ಮೇಲೆ ಯುದ್ಧಭೂಮಿಯೊಳಗ ಕಂಡ ಬರೊ ದೃಶ್ಯಗಳಂಗ ಮನೆಗಳು ತಮ್ಮ ಅಂಗಾಂಗಗಳನ್ನು ಕಳೆದುಕೊಂಡು ಮಲಕ್ಕೊಂಡಿದ್ವು. ಅವುಗಳನ್ನೆಲ್ಲ ದಾಟಿಕೊಂಡು ಬರುತ್ತಿದ್ದಂತೆ ದಾಸರ ಭರಮಜ್ಜ ತನ್ನ ಮನೆಯ ಮಣ್ಣು ಅಗೆಯುತ್ತಿದ್ದ. ಆತನ ಸಲಕೆಗೆ ಮಣ್ಣೊಳಗಡಗಿರುವ ಚಂಬು, ತಾಟು, ಹೆಂಡತಿ ಕುಬುಸ, ಮೊಮ್ಮಕ್ಕಳ ಪಾಠಿಚೀಲ, ಒದೊಂದ ಸಲಕೆಗೆ ತಾಕೊಂಡು ಹೊರ ಬರುತ್ತಿದ್ವು. ಅವುಗಳನ್ನೆಲ್ಲ ಭರಮಜ್ಜನ ಹೆಂಡತಿ ರುಖಮಜ್ಜಿ ಒಂದು ಕಡೆ ಗುಂಪಿ ಹಾಕುತ್ತಿದ್ಲು.
ಫೋಟೋಗ್ರಾಪರ್‌ಗಳಿಗೆ ಸುಗ್ಗಿಯೋ ಸುಗ್ಗಿ. ಎಷ್ಟೋ ಮಂದಿ ಪಾಳಿಯೊಳಗ ಬಿದ್ದ ಮನೆಗಳ ಹಂತ್ಯಾಕ ನಿಂತು ಚೆಕ್ಕು ತುಗೋ ಆಸೆಕ ಪೋಟ ತೆಗೆಸುತ್ತಿದ್ದರು. ಆದರೆ ಆ ಚೆಕ್ಕಿನಲ್ಲಿ ಎಷ್ಟು ಹಣ ಬರುತೈತಿ ಅಂತ ಯಾರಿಗೂ ಗೊತ್ತಿರಲಿಲ್ಲ. ಕೆಲವರ ದನದ ಕೊಟ್ಟಿಗೆಗಳು ಬಿದ್ದಿದ್ದರಿಂದ ಅಳಿದುಳಿದ ದನಗಳನ್ನು ತಂದು ತಮ್ಮ ಅಡಿಗೆ ಮನಿಯೊಳಗ ಕಟ್ಟಿಕೊಂಡಿದ್ರು. ಶಾಲಿ ಮುಂದ ಹಾಸಿ ಬರೂವಾಗ ಮನೆ ಪೂರ್ತಿ ಬಿದ್ದೋರು ತಮ್ಮ ದನಕರುಗಳ ಕುಟುಂಬ ಸೈತ ಶಾಲಿ ಗುಡಿಗೆ ಬಂದದ್ದು ಕಂಡುಬಂತು. ಮೂರು ಕಲ್ಲಿನ ಒಲಿ ಹೂಡಿ ಅದರೊಳಗ ಅವೆ ಹಸಿ ಕಟ್ಟಿಗೆಗಳನ್ನು ತುರುಕಿ ಮೇಲೊಂದು ತಳ ನೆಗ್ಗಿದ ಅಲೂಮಿನಿಯಂ ಪಾತ್ರೆಯಲ್ಲಿ ಅದ್ಯಾವ್ಯಾವೋ ಕಾಳು ಹಾಕಿ ಒಲೆ ಹೊತ್ತಿಸುವ ಕಸರತ್ತು ಮಾಡುತ್ತಿದ್ರು. ಹಸಿ ಕಟ್ಟಿಗೆಗಳು ಮತ್ತು ಬೆಂಕಿಯ ಕಾಂಬಿನೇಷನ್ನಿನಲ್ಲಿ ಉರಿ ಹತ್ತುವ ಮುಂಚೆ ಹೊಗೆ ಮೇಲೆಳುತ್ತ ಇನ್ನೆನು ಉರಿ ಹತ್ತತೈತಿ ಎಂದು ಘೋಷಿಸುತ್ತ ಸಾಲಿ ತುಂಬ ಹೊಗೆ ಅಡರಿತ್ತು.
ಕೈಯಳತೆಯ ಗೊಡಿ ಮ್ಯಾಲ ದೊಡ್ಡ ಕಟ್ಟುಗಳ ಪೋಟೋಗಳೊಳಗೆ ತೂಗಾಡುತ್ತಿದ್ದ ನಾಡಿನ ಸಾಹಿತಿ ಮಹಾನುಭವರು ಈ ಹೊಗೆಯಿಂದ ಉಸಿರು ಕಟ್ಟದಂತಾಗಿ ಎಚ್ಚೆತ್ತು ಕಣ್ಕಣ್ಣು ಬೀಡುತ್ತಿದ್ದರು. ಬೋರ್ಡ್ ಮೇಲೆ ಮೆತ್ತಿಕೊಂಡಿದ್ದ ಅಆಇಈ ಅಕ್ಷರಗಳು ಹಾಗೂ ಗ್ರಾಮಸ್ಥರ ಒಲೆ ಹೊತ್ತಿಸುವ ಬದುಕು ಏಕಕಾಲಕ್ಕೆ ಆ ಸಾಹಿತಿಗಳಿಗೆ ಕಂಡು ಬಂದು ಈ ಅಕ್ಷರಗಳನ್ನೆಲ್ಲವನ್ನು ಹೆಕ್ಕಿ ಇಲ್ಲಿಯವರೆಗೂ ನಾವು ಇಂತಹ ಕುಟುಂಬಗಳ ಬಗೆ ಇದುವರೆಗೂ ಯಾವುದೆ ಕೃತಿಗಳನ್ನು ರಚಿಸಲಿಲ್ಲವೆಂದು ಆ ಸಾಹಿತಿ ಮಹಾನುಭವರು ವ್ಯಾಕುಲಗೊಂಡಂಗ ಕಾಣುತ್ತಿದ್ರು.
ಊರೆಲ್ಲ ಬಿದ್ದಿರಬೇಕಾದರ ಇನ್ನ ನಮ್ಮ ಮನಿ ಪರಿಸ್ತಿತಿ ನೋಡೂನು ಅನಕೊಮಡು ಮನಿ ಕಡೆ ಹೆಜ್ಜೆ ಹಾಕತೊಡಗಿದೆ. ಬಾಗಿಲು ದಾಟಿ ಪಡಸಾಲೆಗೆ ಬಂದರೆ ಪಡಸಾಲಿ ಹಂತ್ಯಾಕಿನ ದಂದಕ್ಕಿಯೊಳಗಿನಿ ದನದ ಉಚ್ಚಿ ಮತ್ತು ಮಳಿನೀರು ಏಕಾಗಿ ಹುಳುಗಳು ಪಿತಿಪಿತಿ ಎನ್ನುತ್ತಿದ್ದವು. ಪಡಸಾಲೆಯೊಳಗ ನೇತು ಹಾಕಿದ್ದ ಪೋಟೋದೊಳಗಿನ ನಮ್ಮಜ್ಜನ ಮುಖದ ಮ್ಯಾಲ ಜಂತಿ ಸೋರಿ ಕರ್ರನ ನೀರು ಹರಿದಿದ್ದರಿಂದ ಅದು ನನಗೆ ನಮ್ಮ ಮನಿ ಪರಿಸ್ಥಿತಿ ನೋಡಿ ಅಜ್ಜ ಹಳಾಳಿಗೊಂಡಂತೆ ಕಾಣುತ್ತಿತ್ತು. ಅಪ್ಪ ಮೂಲೆಯಲ್ಲಿ ಮೊಣಕಾಲುಗಳ ಮದ್ಯೆ ಗೋಣು ತುರುಕಿಕೊಂಡು ಕುಳಿತಿದ್ದ. ಅವ್ವ ಹಸಿ ಕಟ್ಟಿಗೆಗಳನ್ನು ಒಲೆಯೊಳಗೆ ತುರುಕಿ ಚಹಾ ಕುದಿಸುವ ಪ್ರಹಸನಕ್ಕೆ ನಾಂದಿ ಹಾಡತಿದ್ಲು.
ಒಂದು ಕಾಲದೊಳಗ ನಮ್ಮಜ್ಜ ಇಡಿ ಊರಿಗೆ ಜಮೀನುದಾರನಂಗ ಬದುಕುತ್ತಿದ್ದ. ಅಪ್ಪನಿಗೆ ಅಜ್ಜನ ದೌಲತ್ತು ಇರದಿದ್ದರೂ ಮಕ್ಕಳು ಓದಿ ಶಾಣ್ಯಾರಾಗಲಿ ಅಂತ ಒಂದಿಷ್ಟು ಜಮೀನು ಮಾರಿದ್ದ. ಅದೆ ಅವನ ದೊಡ್ಡ ತಪ್ಪಾಗಿತ್ತು. ಅಣ್ಣ ಡಾಕ್ಟರಾಗಿ ಹುಬ್ಬಳ್ಳಿಯೊಳಗ ದೊಡ್ಡ ಹಾಸ್ಪಿಟಲ್ ಹಾಕ್ಕೊಂಡು ಅಮ್ಮಾವ್ರ ಗಂಡನಾಗಿ ಬದಲಾಗಿದ್ದ. ಇನ್ನೂ ತಾನೂ ಹಲವಾರು ಹುಚ್ಚು ಹಿಡಿಸಿಕೊಂಡು ಪತ್ರಕರ್ತನಾಗಿ ಮಾಯಾ ಹುಡುಗಿಯಂಗ ಇರೋ ಬೆಂಗಳೂರಿನೊಳಗ ನೆಲೆ ಕಂಡುಕೊಳ್ಳಲು ಹೆಣಗುತ್ತಿದ್ದೆ. ಹೀಗಾಗಿ ಅಪ್ಪ ಇದ್ದ ಜಮೀನುಗಳನ್ನು ನಿಬಾಯಿಸಲಿಕ್ಕಾಗದೆ ಪಾಲಿನಂಗ ಒಂದಿಷ್ಟು, ಬಡ್ಡಿಯಲ್ಲಿ ಒಂದಿಷ್ಟು ಹಾಕಿ ಹೆಂಗೊ ಜೀವನ ಸಾಗಿಸುತ್ತಿದ್ದ.
* * * * *
ಗೆಳೆಯ ಕೊರ್ರ ಬಸು ನನ್ನನ್ನು ಹುಡುಕಿಕೊಂಡು ಬಂದು ತಳವಾರ ಯಂಕಟೇಶಿ ಯುವಕ ಸಂಘದ ಮೀಟಿಂಗ್ ಕರೆದಿರುವನೆಂದು ನಿನ್ನನು ಕರೆದುಕೊಂಡು ಬಾ ಎಂದು ಹೇಳಿ ಕಳುಹಿಸಿರುವುದಾಗಿ ತಿಳಿಸಿದ. ಯಂಕಟೇಶಿಯ ಹುಚ್ಚು ಹೋರಾಟಗಳು ನನಗೆ ಗೊತ್ತಿದ್ದುದಿರಿಂದ, ಮತ್ತು ಅವುಗಳ ಬಗ್ಗೆ ಇನ್ನೂ ಕುತೂಹಲ ಹಾಗೂ ಅವ್ಯಕ್ತ ಆಸೆಗಳು ಜೀವಂತವಿದ್ದುದರಿಂದ ನಾನು ಉಟ್ಟ ಬಟ್ಟೆಯಲ್ಲಿಯೆ ಕೊರ್ರ ಬಸುನ ಜೊತೆ ಹೊರಬಿದ್ದೆ.
ಪಿಯುಸಿ ದಿನಗಳಿಂದಲೆ ತನ್ನ ಹುಚ್ಚಾಟಗಳಿಂದ ಅಘೋಷಿತ ನಾಯಕನಂತಿದ ಯಂಕಟೇಶಿಯ ದುಸ್ಸಂಗಕ್ಕೆ ಬಿದ್ದಿದ್ದ ನಾವೆಲ್ಲ ಆ ದಿನಗಳಲ್ಲಿ ಕಾಲೇಜು ಡೆಸ್ಕುಗಳಲ್ಲಿ ಆಸೀನರಾಗಿ ಪಾಠ ಕೇಳಿದ್ದಕ್ಕಿಂತಲೂ ಹೆಚ್ಚಾಗಿ ಸಿಪಿಎಂ, ಎಸ್‌ಎಫ್‌ಐ ನಂತಹ ಕಚೇರಿಗಳ ಮುರುಕು ಖುರ್ಚಿಗಳಲ್ಲಿ ಕುಳಿತು ಹೋರಾಟ ಪ್ರತಿಭಟನೆಗಳನ್ನು ಮಾಡುವ ಕುರಿತು ಯೋಜನೆಗಳನ್ನು ರೂಪಿಸಿದ್ದೆ ಹೆಚ್ಚು. ಬಸ್ಸಿಗೆ ಕಲ್ಲು ತೂರಿ, ಬೆಂಕಿ ಹಚ್ಚುವ ಮೂಲಕ ಹಾಗೂ ನಗರದಲ್ಲೆಲ್ಲ ಬಂದ್ ಆಚರಿಸಿ ಸಾರ್ವಜನಿಕರಿಗೆ ತೊಂದರೆ ಕೊಡುವಂತಹ ಪ್ರಗತಿಪರ ಕೈಗೊಳ್ಳುವ ಮೂಲಕ ಅಭಿವೃದ್ಧಿಯನ್ನು ಹೇಗೆ ಸಾಧಿಸಬಹುದೆನ್ನುವುದರ ಕುರಿತು ಚಿಂತಿಸಿದ್ದೆ ಹೆಚ್ಚು.
ತಳವಾರ ಯಂಕಟೇಶಿ ಈ ಮೊದಲೆಲ್ಲ ದೊಡ್ಡ ಆದ್ಯಾತ್ಮಾವಾದಿಯಂತೆ ದೇವರುಗಳ ಬಗೆಗ ಬಹಳ ತಲೆ ಕೆಡಿಸಿಕೊಳ್ಳುತ್ತಿದ್ದ. ಆತ ಯಾವುದರ ಬಗ್ಗೆಯಾದರೂ ಹಿಂಗ ಒಂದು ವಿಚಾರ ತಲೆಯೊಳಗೆ ಹೊಕ್ಕರೆ ಅದರ ತಳಬುಡವನ್ನೆಲ್ಲ ಜಾಲಾಡದೆ ಬಿಡುತ್ತಿರಲಿಲ್ಲ. ಪ್ರತಿದಿನ ತಿಮ್ಮಪ್ಪ ಗುಡಿಗೆ ಹೋಗುವುದು, ಆಮಾಸಿಗೊಮ್ಮೆ ನಸುಕಿನಲ್ಲಿಯೆ ಎದ್ದು ಬರಿ ಮೈಯಲ್ಲೆ ಊರ ದೇವ್ರು ತಿಮ್ಮಪ್ಪ ದರ್ಶನ ಮಾಡಿಕೊಂಡು ಕಾಯಿ ಒಡೆಸುವುದು ಮಾಡುತ್ತಿದ್ದ.
೭ನೆತ್ತೆ ಪರೀಕ್ಷಾ ಟೈಮನ್ಯಾಗ ಒಂಕ ಮೋತಿಯ ತಿಮ್ಮಪ್ಪನ ಮುಂದ ನಿಂತುಕೊಂಡು, ತಿಮ್ಮಪ್ಪ, ನಾನು ನಿನ್ನನ್ನು ನಂಬಿಕೊಂಡು ಕಾಪಿ ಮಾಡಲಾರದ ಪರೀಕ್ಷೆ ಬರಿತಿನಿ. ಆದ್ರ ನನ್ನನ್ನು ದಯವಿಟ್ಟು ಪಸ್ಟಕ್ಲಾಸ್‌ನ್ಯಾಗ ಪಾಸು ಮಾಡು. ನೀನು ಪಸ್ಟ್ ಕ್ಲಾಸಿನಲ್ಲಿ ಪಾಸು ಮಾಡಿದರೆ ಎರಡು ಕಾಯಿ, ಸೆಕೆಂಡ್‌ಕ್ಲಾಸ್‌ನಲ್ಲಿ ಪಾಸುಮಾಡಿದರೆ ಒಂದು ಕಾಯಿ ಒಡೆಸತೇನಿ’ ಎಂದು ಭಕ್ತಿ ಪೂರ್ವಕ ಬೇಡಿಕೊಂಡಿದ್ದ. ಆದರೆ ಪಲಿತಾಂಶ ನಪಾಸು.
ಒಂದೊಮ್ಮೆ ತಲೆ ಓಡೆದುಕೊಂಡು ಬಂದಿದ ಅವನ ತಮ್ಮನಿಗೆ ಮೈಯಲ್ಲ ಕೆಂಡದಂತೆ ಉರಿ ಏರಿದ್ದವು. ‘ತಮ್ಮನ ಉರಿ ಕಡಿಮೆಯಾಗಲಿ. ಬರೋ ಅಮಾಸಿಗೆ ಐದ ಕಾಯಿ ಒಡಸತೇನಿ’ ಎಂದು ಅಳ್ಳುತ್ತಲೆ ಬೇಡಿಕೊಂಡಿದ್ದ. ಆದ್ರ ಅವನ ತಮ್ಮನ ಉರಿ ಕಡಿಮೆಯಾಗುದಿರಲಿ. ಮೆದುಳಿಗೆ ಏರಿದ ಉರಿ ಆ ಮಗುವನ್ನು ಕೈಲಾಸವಾಸಿ ಮಾಡಿದುದರಿಂದ ಯಂಕಟೇಶಿಗೆ ದೇವರ ಬಗ್ಗೆ ಆಗಾಧವಾದ ಸಿಟ್ಟು ಮತ್ತು ಸ್ವಲ್ಪ ಅಪನಂಬಿಕೆ ಬರತೊಡಗಿತು.
‘ಯಂಕಟೇಶಿ ಒಮ್ಮೆ ತನ್ನ ಪರ್ಸ್‌ನ್ನು ಕಳೆದುಕೊಂಡಿದ್ದ. ಆ ಪರ್ಸ್ ಸಿಕ್ಕರೆ ಅದರಲ್ಲಿನ ದುಡ್ಡೆಲ್ಲ ದೇವರೆ ನಿನ್ನ ಹುಂಡಿಗೆ ಹಾಕತಿನಿ. ಸಿಗುವಂತೆ ಮಾಡಪ್ಪ’ ಎಂದು ದೇವರಿಗೆ ಆಸೆ ತೋರಿಸಿದ. ಆ ಪರ್ಸು ಮೇವಿನ ಮಾಡಿನ್ಯಾಗ ಸಿಕ್ಕಿತು. ಆದ್ರ ದೇವರ ಬಗ್ಗೆ ರೋಸಿ ಹೋಗಿದ್ದ ಯಂಕಟೇಶಿ ದುಡ್ಡನ್ನು ಹುಂಡಿಗೆ ಹಾಕದೆ ತನ್ನ ಕಕ್ಕನ ಕೈಯಲ್ಲಿ ಅನಾಥಾಶ್ರಮಕ್ಕೆ ಮುಟ್ಟಿಸಲು ಕೊಟ್ಟು ಕಳುಹಿಸಿದ್ದ.
ಶಾಲೆಯಲ್ಲಿ ಸರ್ಕರ್ಸ ನೋಡುವುದಕ್ಕಾಗಿ ಎರಡು ರೂಪಾಯಿ ತಗೊಂಡು ಬರಲು ಅವನ ಸ್ಕೂಲು ಟೀಚರ್ ಹೇಳಿ ಕಳುಹಿಸಿದ್ದರು. ಆದರೆ ಅವನಿಗೆ ಅಪ್ಪ ಅವ್ವರ ಹತ್ರ ರೊಕ್ಕ ಇರೋದಿಲ್ಲ. ಇದ್ರೂ ಅವರ ಕೊಡುವುದಿಲ್ಲ ಎಂದು ಅವನಿಗೆ ಗೊತ್ತಿತ್ತು. ಆದರೂ ಒಮ್ಮೆ ಕೇಳಿ ನೋಡೋಣ ಎಂದು ಕೇಳಿ ಇಲ್ಲವೆನಿಸಿಕೊಂಡಿದ್ದ. ದಿಕ್ಕುಗಾಣದ ಊರ ಹೊರಗಿನ ಆಲದಮರದ ಹಂತ್ಯಾಕ ಬಂದು ಚಿಂತಿ ಮಾಡಕೋತ ಕುಂತ. ಅಲ್ಲೆ ತಿಮ್ಮಪ್ಪನ ಪಾದಗಳು ಇದ್ದು, ಅದರ ಮ್ಯಾಲಚಿಲ್ಲರೆ ರೊಕ್ಕ ಯಾರೊ ಹಾಕಿ ಹೋಗಿದ್ದರು. ಯಾವದೋ ಒಂದು ಪೌರಾಣಿಕ ಸಿನೆಮಾದಲ್ಲಿ ದೇವರು ಆಪ್ತ ರಕ್ಷಕ ಎಂಬುದು ನೆನಪಿಗೆ ಬಂತು. ತಕ್ಷಣ ಪಾದಗಟ್ಟಿ ಮುಂದ ಎದ್ದು ನಿಂತು ‘ದೇವರೆ, ನೀನು ಆಪ್ತ ರಕ್ಷಕ, ಆಪ್ತ ಸ್ನೇಹಿತ ಅಂತ ಹೇಳತಾರ. ಅದನ್ನು ನೀನು ಇವತ್ತು ಖರೆ ಮಾಡಿದಿ. ನನಗೆ ನಿನ್ನನ್ನು ಬಿಟ್ಟು ಐದು ರೂಪಾಯಿ ಕೊಡುವಷ್ಟು ಶ್ರೀಮಂತ ದೊಸ್ತರು ಯಾರು ಇಲ್ಲ. ಅದಕ್ಕ ನಾನು ಈ ಚಿಲ್ಲರದಾಗ ಐದು ರೂಪಾಯಿ ತುಗೊತಿನಿ, ತಪ್ಪು ತಿಳ್ಕೊಬ್ಯಾಡ. ನಾನು ಈ ಐತವಾರ ಕೂಲಿಗೆ ಹೊಗಿ, ಕೂಲಿಯಿಂದ ಬಂದ ಹಣದಿಂದ ಮುಟ್ಟುಸ್ತಿನಿ’ ಎಂದು ಬೇಡಿಕೊಂಡು ಆ ಚಿಲ್ಲರೆಯಲ್ಲಿನ ಐದು ರೂಪಾಯಿಗಳನ್ನು ತುಗೊಂಡಿದ್ದ್ದ ಮತ್ತು ಐತವಾರ ಕಸ ತೆಗಿಯೋ ಕೂಲಿ ಮಾಡಿ ಅಲ್ಲಿ ಐದು ರೂಪಾಯಿ ಹೊಳ್ಳಿ ಹಾಕಿದ್ದ.
ಹಿಂಗ ಬಾಳ ಸಲ ಮಾಡಿದ ಮ್ಯಾಲ ಒಳ್ಳೆಯ ಕೆಲಸಗಳೆಲ್ಲ ದೇವರು ಕೆಲಸಗಳು ಅಂತ ಮತ್ತೊಂದು ಯಾವದೋ ಪೌರಾಣಿಕ ಸಿನಿಮಾದ್ದ ಡೈಲಾಗ್ ನೆಪ್ಪಿಗೆ ಬಂತು. ‘ತಿಮ್ಮಪ್ಪ, ನಿನಗ ಹಾಕೊ ದುಡ್ಡು ಒಳ್ಳೆದಕ್ಕ ಬಳಕೆ ಆಕ್ಕೆತಿ ಅಂತ ಕೆಳೇನಿ. ನಾನು ಕೂಡ ಈ ರೊಕ್ಕ ಕೆಟ್ಟ ಕೆಲಸಕ್ಕೆ ಬಳಸುತ್ತಿಲ್ಲ ಚಲೋ ಕೆಲಸಕ್ಕ ಬಳಸತೇನಿ. ಹಿಂಗಾಗಿ ನಾ ನಿನಗ ರೊಕ್ಕ ಹೊಳ್ಳಿ ಹಾಕೊದಿಲ್ಲ ತೆಪ್ಪ ತಿಳಕೋಬ್ಯಾಡ ಎಂದು ಬೇಡಿಕೊಂಡ ಮ್ಯಾಲ ತುಗೊಂಡ ರೊಕ್ಕ ಹಾಕೋದನ್ನ ಬಿಟ್ಟು ಬಿಟ್ಟಿದ್ದ. ಆದರೂ ದೇವರು ಇವನಿಗೇನು ಶಿಕ್ಷೆ ಕೊಟ್ಟಿರಲಿಲ್ಲ. ಯಂಕಟೇಶಿ ನಾನು ಕ್ಲಾಸಮೆಟ್ ಆದುದ್ರಿಂದ ಇಂಥವೆಲ್ಲ ವಿಷಯಗಳು ನನಗೆ ಆಗಾಗ ಗೊತ್ತಾಗುತ್ತಿದ್ದವು.
* * * * *
ಮುಂದೆ ನಾವಿಬ್ಬರು ನಾನು ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿರಬೇಕಾದರೆ ಯಂಕಟೇಶಿಗೆ ದೇವರನ್ನು ಒಲಿಸಿಕೊಳ್ಳುವುದರ ಬಗ್ಗೆಯೆ ಚಿಂತೆ ಹತ್ತಿತ್ತು. ದೇವರನ್ನು ಎಲ್ಲಿ ಹುಡುಕೋದು, ಹ್ಯಾಂಗ ಒಲಿಸಿಕೊಳ್ಳೋದು ಎನ್ನುವುದರ ಬಗ್ಗೆಯೆ ತಲೆ ಕೆಡಿಸಿಕೊಂಡು ಅಡ್ಡಾಡುತ್ತಿದ್ದ. ದೇವರನ್ನು ಕಂಡವರು ರಾಮಕೃಷ್ಣ ಪರಮಹಂಸರು ಮಾತ್ರ ಅಂತಾರ. ಅವರು ಈಗ ಬದುಕಿದ್ದರೆ ಅವರನ್ನೆ ನೇರವಾಗಿ ಕೇಳುತ್ತಿದ್ದೆ ಎಂದೆಲ್ಲ ನನ್ನ ಮುಂದೆ ಅಲವತ್ತುಕೊಳ್ಳುತ್ತಿದ್ದ. ಆ ಮನ್ಯಾಗ ಓಂ ಯೋಗಾ ಕೋರ್ಸ್ ಒಂದನ್ನು ಮುಗಿಸಿಕೊಂಡು ಬಂದಿದ್ದ ಹಾಸ್ಟೆಲ್ ಗೆಳೆಯನೊಬ್ಬ ‘ಓಂ ಕೋರ್ಸ್‌ನಲ್ಲಿ ಗುರುಗಳು ಗ್ಯಾರಂಟಿಯಾಗಿ ದೇವರನ್ನು ತೋರಿಸಿತ್ತಾರೆ’ ಎಂದು ಹೇಳಿ ಯಂಕಟೇಶಿಯ ಹುಚ್ಚನ್ನು ಮತ್ತಷ್ಟು ಹೆಚ್ಚಿಸಿದ.
‘ದೇವರು ಹೆಂಗದಾನ’ ಯಂಕಟೇಶಿ ಹಾಸ್ಟೆಲ್ ಗೆಳೆಯನನ್ನು ಕೇಳಿದ.
‘ಅದನ್ನು ನೋಡಿಯೇ ಅನುಭವಿಸಬೇಕು. ದೇವರು ಶಬ್ದಾತೀತ’ ಆತ ತನ್ನ ಎದೆಯನ್ನು ಮುಟ್ಟಿಕೊಂಡ. ವೆಂಕಟೇಶಿ ಸಾಕಷ್ಟು ಪ್ರಯತ್ನ ಪಟ್ಟು ಗೋಳು ಹೊಯ್ದುಕೊಂಡರೂ ದೇವರು ದರ್ಶನದ ಕುರಿತು ಗೆಳೆಯ ಬಾಯಿ ಬಿಡಲಿಲ್ಲ. ಇತನಿಗೆ ಕತೂಹಲ ತಡೆಯಲಿಕ್ಕಾಗದೆ ಎನೇನೋ ಪೂಸಿ ಬಿಟ್ಟು ನನ್ನಲ್ಲಿಯೂ ಅವನ ಕುತೂಹಲವನ್ನು ಬಿತ್ತಿದ. ಇಬ್ಬರೂ ಅದ್ಹೇಗೋ ೭೫೦ರೂಪಾಯಿಯನ್ನು ಹೊಂದಿಸಿಕೊಂಡು ೧೧ದಿನದ ಓಂ ಯೋಗಾ ಕೋರ್ಸಿಗೆ ಸೇರಿಯೇಬಿಟ್ಟೆವು. ಗೆಳೆಯ ‘ಕೋರ್ಸಿನ ಕೊನಿ ದಿನ ದೇವರ ದರ್ಶನ ಮಾಡಸತಾರ’ ಅಂತ ಹೇಳಿದ್ದ. ಆದ್ದರಿಂದ ೧೦ದಿನಗಳವರೆಗೂ ಆ ಕೊರ್ಸಿನ ಪ್ರಾಣಾಯಾಮ, ಧ್ಯಾನ, ಭಜನೆ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪಾಠಗಳು ಮುಂತಾದ ಚಟುವಟಿಕೆಗಳಲ್ಲಿ ಅಸಡ್ಡಯಾಗಿಯೆ ಭಾಗವಹಿಸಿ ಕೊನೆಯ ದಿನದ ದೇವರ ದರ್ಶನ ಸಂದರ್ಭಕ್ಕಾಗಿ ಕಾಯುತ್ತಿದ್ದೆವು.
ಆ ದಿನ ಬಂತು. ಗುರುಗಳು ಹೇಳಿದಂತೆ ಎಲ್ಲರೂ ಅವತ್ತು ಶುಭ್ರವಾಗಿ ಸ್ನಾನ ಮಾಡಿ ಹಣೆಗೆ ನಾಮ ಧರಿಸಿ ಶ್ವೇತ ವಸ್ತ್ರದಾರಿಗಳಾಗಿ ಹೆಗಲ ಮೇಲೊಂದು ಕೇಸರಿ ವಸ್ತ್ರ ಹಾಕಿಕೊಂಡು ಬಂದು ಕುಳಿತಿದ್ದರು. ಭಜನೆ, ಹೋಮ, ಹವನಗಳು ಮುಗಿದಾದ ಮೇಲೆ ಗಾಯತ್ರಿ ಮಂತ್ರೋಪದೇಶ ಮಾಡಿಸಲಾಯಿತು. ನಂತರ ಗುರುಗಳು ಕೇಸರಿ ದಾರವೊಂದನ್ನು ಕಟ್ಟಿ ಇದು ಗುರುಬಂಧನದ ದಾರ. ಈ ದಾರವನ್ನು ಕಟ್ಟುವ ಉದ್ದೇಶವೆಂದರೆ ಶರಣ ಸತಿ ಲಿಂಗಪತಿ ಎಂಬ ಅಕ್ಕ ಮಹಾದೇವಿಯ ವಚನದಂತೆ ಇನ್ನು ಮುಂದೆ ನಿವೆಲ್ಲರೂ ನಿಮ್ಮ ಗುರುಗಳಿಗೆ ಹೆಂಡತಿಯರಾಗಿಬೇಕು. ಗುರುಗಳು ಇಲ್ಲಿಯವರೆಗೆ ಕಲಿಸಿಕೊಟ್ಟದ್ದನ್ನೆಲ್ಲ ಪಾಲಿಸುವುದರ ಜೊತೆಗೆ ಇಲ್ಲಿ ಕಲಿತಿದ್ದನ್ನು, ಮತ್ತು ದೇವರ ದರ್ಶನವಾಗುವುದನ್ನು ಯಾರ ಮುಂದೆಯೂ ಹೇಳಬಾರದು ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಿದ್ದರು. ದೇವರ ದರ್ಶನಕ್ಕಾಗಿ ಹಾತೊರೆಯುತ್ತಿದ್ದ ಯಂಕಟೇಶಿ ಮತ್ತು ಗುರು ತಾಳಿ ಕಟ್ಟಿಸಿಕೊಂಡು ಗುರು ಪತ್ನಿಯಂತೆ ನಾಚಿ ಕುಳಿತೆವು.
ಗುರುಬಂಧ ಕಟ್ಟಿಸಿಕೊಂಡಾದ ಮೇಲೆ ಅವತ್ತಿನ ಬ್ರಹ್ಮೋಪದೇಶಕ್ಕೆ ಬಂದಿದ್ದ ದೊಡ್ಡ ಗುರುಗಳೊಬ್ಬರಿಂದ ಗುಪ್ತ ಮಂತ್ರೊಪದೇಶವಾಯಿತು. ನಂತರ ಗುರುಗಳ ಶಿಷ್ಯನೊಬ್ಬನ ಯಂಕಟೇಶಿ ಮತ್ತು ನನ್ನನ್ನು ಕಣ್ಣಿಗೆ ಬಟ್ಟೆ ಕಟ್ಟಿ ಒಂದು ಗುಡಿಯಂತಹ ರೂಮೊಳಕ್ಕೆ ಕರೆದುಕೊಂಡು ಹೋದರು. ರೂಮಿನಲ್ಲಿದ್ದ ಮೇಜಿನ ಕಡೆ ಕೈ ತೋರಿಸಿದ ಶಿಷ್ಯೋತ್ತಮ ಆ ಟೇಬಲ್ ಮುಂದೆ ಹೋಗಿ ನಿಂತಕೊಂಡು ದೇವರ ಸಾಕ್ಷಾತ್ ದರ್ಶನವನ್ನು ಪಡಕೋರಿ ಎಂದ. ಶಿಷ್ಯೋತ್ತಮನ ಆದೇಶವನ್ನೆ ಗುರುವಿನ ಆದೇಶವೆಂದು ಪಾಲಿಸಿದ ನಾವಿಬ್ಬರು ಟೇಬಲ್‌ಮುಂದೆ ಹೋಗಿ ನಿಂತು ಕಾದೆವು ಆದರೂ ನಮಗೆ ದೇವರ ದರ್ಶನವಾಗಲ್ಲಿಲ್ಲ. ನಿರಾಶನಾದ ನಾವು ಮತ್ತೆ ಶಿಷ್ಯೋತ್ತಮನ ಕಡೆ ನೋಡಿದೇವು.
ಶಿಷ್ಯೋತ್ತಮ ಅಲ್ಲಿ ಟೇಬಲ್ ಮೇಲಿರುವ ಕನ್ನಡಿಯೊಳಗ ನಿಮ್ಮ ಮುಖ ನೊಡಕೊಳ್ರಿ ಎಂದ. ನಾವಿಬ್ಬರೂ ಒಬ್ಬರಾದ ಮೇಲೆ ಒಬ್ಬರು ಕನ್ನಡಿಯೋಳಗ ಹಣಿಕಿ ಹಾಕಿದೆವು. ಅಲ್ಲಿ ನಮ್ಮ ಮೊಡವಿ ಬಕ್ಕಿ ತುಂಬಕೊಂಡಿದ್ದ ಹುಳುಕು ಮುಖವೇ ಕಾಣಿಸಿ ಮತ್ತೆ ಶಿಷ್ಯೋತ್ತಮನತ್ತ ಅಸಹನೆಯಿಂದ ನೋಡಿದೆವು. ಆತ ಕನ್ನಡಿಯೊಳಗೆ ಕಾಣುವ ಮುಖವೆ ದೇವರ ಮುಖ ಎಂದ. ಕನ್ನಡಿ ಕಡೆ ನೋಡುತ್ಲೆ ಗಾಬರಿಯಿಂದ ಆಂ ಅನಕೋತ ಬಾಯಿ ತೆರೆದಾಗ ಕನ್ನಡಿಯೋಳಗಿನ ದೇವರು ಸೈತ ಗಾಬರಿಗೊಂಡು ತನ್ನ ಹಳದಿ ಹಲ್ಲುಗಳನ್ನು ತೋರಿಸಿತು. ಇವನೌನ, ನಮ್ಮ ಹಾಳು ಮುಖ ನೋಡಿಕೊಳ್ಳಾಕ ೭೫೦ ರೂಪಾಯಿಗಳನ್ನು ಖರ್ಚು ಮಾಡಬೇಕಾಯಿತಲ್ಲ ಎಂದು ಬೆಸರಿಸಿಕೊಂಡ ನಾವಿಬ್ಬರು ಗುರು ಶಿಷ್ಯೋತ್ತಮನನ್ನು ಬೈಯಕೋತ ಹೊರಬಂದಿದ್ದೆವು.
ಎಲ್ಲರೂ ತಮ್ಮ ತಮ್ಮ ದೇವರಗಳ ದರ್ಶನ ಮಾಡಿಕೊಂಡು ಸಭಂಗಣಕ್ಕೆ ಬಂದು ಕುಳಿತರು. ಗುರಗಳು ಕವಿ.ಜಿ.ಎಸ್.ಶಿವರುದ್ರಪ್ಪನವರ ‘ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೋಳಗೆ’ ಎಂದು ಹಾಡು ಹಾಡಿಸಿ ದೇವರು ಅಲ್ಲೆಲ್ಲಿಯೂ ಇಲ್ಲ ಅವನಿರುವುದು ನಿಮ್ಮೊಳಗೆ ಎಂಬುದನ್ನು ಮನದಟ್ಟು ಮಾಡಿಸಿದರು. ಗುರುಗಳ ಪ್ರವಚನ ಮುಗಿದಾದ ಮೇಲೆ ಎಲ್ಲರೂ ತಮ್ಮ ತಾವೆ ಆರತಿ ಮಾಡಿಕೊಂಡರು. ಆಮೇಲೆ ‘ಪರಸ್ಪರ ದೇವೋಭವ’ ಕಾರ್ಯಕ್ರಮ ಸುರುವಾಗಿ ಪ್ರತಿಯೊಬ್ಬರು ಪ್ರತಿಯೊಬ್ಬರಿಗೂ ಮಂಗಳಾರುತಿ ಮಾಡಿ ಕಾಲಿಗೆ ಬಿದ್ದು ನಮಸ್ಕಾರ ಮಾಡತೊಡಗಿದರು. ನಾವಿಬ್ಬರು ಮುಜಗರದಿಂದ ಮುಖ ಮುಖ ನೋಡಿಕೊಳ್ಳುತ್ತಲೆ ಪರಸ್ಪರರ ಕಾಲಿಗೆ ಬಿದ್ದೆವು.
ಒಬ್ಬ ಸಾಮಾನ್ಯ ಮನುಷ್ಯನಿಗೆ ಪ್ರತಿಯೊಬ್ಬರು ಕಾಲಿಗೆ ಬೀಳುತ್ತಿರಬೇಕಾದರೆ ಹೆಂಗಾಗಬಾರದು. ಆತ ಮಾಡಿದ ಪಾಪಗಳೆಲ್ಲವೂ ನೆಪ್ಪಿಗೆ ಒಮ್ಮೆಲೆ ಒಕ್ಕರಿಸಿ ಪಶ್ಚಾತಾಪವಾಗುತ್ತದೆ. ಆತ ಇನ್ಮುಂದೆ ಇಂತಹ ಪಾಪಗಳನ್ನು ಮಾಡುವುದಿಲ್ಲ ಎಂದು ಶಪತ ಮಾಡುತ್ತಾನೆ. ಈ ಬದಲಾವಣೆ ಎಲ್ಲ ಶಿಬಿರಾರ್ಥಿಗಳಂತೆ ನಮ್ಮಲ್ಲೂ ಸ್ವಲ್ಪ ದಿನ ಉಳಕೊಂಡಿತ್ತು.
* * * * *
ಹೀಗೆ ಕನ್ನಡಿಯಲ್ಲಿ ನಮ್ಮ ಮುಖ ನಾವೆ ನೋಡಿಕೊಂಡು ನಾವೆ ದೇವರೆಂದು ಜ್ಞಾನೋದಯವನ್ನು ಪಡೆದುಕೊಂಡ ದಿನಗಳಲ್ಲೆ ನಮಗೆ ಎಸ್‌ಎಫ್‌ಐ, ಸಿಪಿಎಂ ಸಂಘಟನೆಗಳ ಸಂಪರ್ಕ ಬಂದದ್ದು. ಆಮೇಲೆ ಅಲ್ಲಿನ ಸಂಗಾತಿಗಳ(ಕಾಮ್ರೆಡ್) ಸಂಗದಿಂದ ದೇವರಗಳ ಸ್ಪಷ್ಟ ಕಲ್ಪನೆ ದೊರೆಯತೊಡಗಿತು.
ಗುರುಗಳು ದೇವರು ನಮ್ಮೊಳಗಡೆಯೆ ಇದ್ದಾನೆ ಎಂದು ಹೇಳಿದ್ದರು. ದೇವರು ಎಂಬುದೆಲ್ಲ ಬರಿ ಸುಳ್ಳು ಬೂಟಾಟಿಕೆ. ಅದನ್ನೆಲ್ಲ ನಂಬಿ ದೇವರು ಧರ್ಮಕ್ಕಾಗಿ ವ್ಯರ್ಥವಾಗಿ ಅಮೂಲ್ಯ ಹಣ ಮತ್ತು ಸಮಯವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಸಮಾಜದಲ್ಲಿನ ಜಾತಿ, ಧರ್ಮಾಂಧತೆ ಮುಂತಾದ ಕೊಳೆಗಳನ್ನು ಕಿತ್ತೆಸೆದರೆ ನಾವು ಆಗ ಸಾಮಾನ್ಯರ ಕಣ್ಣಲ್ಲಿ ನಿಜವಾಗಲೂ ದೇವರಾಗುತ್ತೇವೆ ಎಂಬುದನ್ನು ಮನದಟ್ಟು ಮಾಡಿಸಿದ್ದರು. ಆಸ್ತಿಕ ನಾಸ್ತಿಕತೆಗಳ ಅಡ್ಡಗೋಡೆಯ ಮೇಲಿದ್ದ ನಾವು ಸಂಗಾತಿಗಳ ಒಡನಾಟದಿಂದ ಪೂರ್ತಿಯಾಗಿ ನಾಸ್ತಿಕತೆಯ ಕಡೆ ವಾಲಿಬಿಟ್ಟಿದ್ದೆವು.
ಬಿ.ಎ.ಡಿಗ್ರಿ ಥರ್ಡ್ ಕ್ಲಾಸಿನಲ್ಲಿ ಪಾಸು ಮಾಡಿದ ಮೇಲೆ ಮುಂದೆನು ಮಾಡಬೇಕೆಂದು ಗೊತ್ತಾಗದೆ ದಾರಿ ಕಾಣದಂತಾಗಿತ್ತು. ತಾನೊಬ್ಬ ದೊಡ್ಡ ಎಡಪಂಥೀಯ ನಾಯಕನಾಗಿ ಬೇಳೆಯಬೆಕೆಂದೆ ಪಟ್ಟು ಹಿಡಿದಿದ್ದ ಯಂಕಟೇಶಿ ನಮ್ಮನ್ನೆಲ್ಲ ತಮ್ಮ ಪ್ರೋ.ರಂಗದಾಸರ ಹತ್ತಿರ ಹೋದ. ಆ ದಿನಗಳಲ್ಲಿ ಅಂತರ್ಜಾತಿಯ ಮದುವೆಗಳನ್ನು ಮಾಡಿಸುವಲ್ಲಿ ದೊಡ್ಡ ಹೆಸರು ಮಾಡಿದ್ದರು ಪ್ರೋ.ರಂಗದಾಸ್. ಗುರುಗಳು ಇವರಿಗೆ ಸಾಕಷ್ಟು ಎಡಪಂಥೀಯವಾದ ಮತ್ತು ನಾಸ್ತಿಕವಾದಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಹೇಳಿಯಾದ ಮೇಲೆ ‘ಈಗ ಪಶ್ಚಿಮ ಬಂಗಾಳದಲ್ಲಿ ನಮ್ಮದೆ ಸರಕಾರ ಐತಿ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲಿಯೂ ನಮ್ಮ ಸರಕಾರ ಬಂದರೆ ಆಗ ನಿಮ್ಮಂತಹ ಹುಡುಗರು ಎಷ್ಟಿದ್ದರೂ ಸಾಲಂಗಿಲ್ಲ. ಈಗ ಊರಿ ಹೋಗ್ರಿ. ಎನ ಇದ್ದರೂ ನಿಮ್ಮ ಧೋರಣೆ ಬದಲಾಯಿಸಿಕೊಳ್ಳಬೇಡಿ ಈ ಪುಸ್ತಕಗಳನ್ನು ಓದ್ರಿ ಎಂದು ಲೋಹಿಯಾ, ಮಾರ್ಕ್‌ರವರ ಓದಿ ಎಂದು ಕೆಲವು ಪುಸ್ತಕಗಳನ್ನು ಕೊಟ್ಟು ಸಾಗ ಹಾಕಿದ್ದರು.
ಈ ದರಿದ್ರ ಹಳ್ಳಿಗಳೊಳಗೆ ನಮಗೆ ಹೊರಾಟ ಮಾಡುವಂತಹ ಸಂದರ್ಭಗಳೆ ಸಿಗವಲ್ಲು ಅಲ್ಲೊ ಎಂದು ಯಂಕಟೇಶಿ ಕೊರಗುತ್ತಿದ್ದ. ಮಗನೆ ನಿ ಹೊರಾಟ ಮಾಡಲಿ ಅಂತ ಹಳ್ಳಿ ಒಳಗ ಏನಾದರೂ ಗದ್ದಲ ಆಗಲಿ ಅಂತ ಬಯಸತಿಯಲ್ಲಲೆ. ಒಂದು ಕೆಲಸ ಮಾಡು, ಆ ಬ್ರಾಹ್ಮಣರ ಹುಡುಗಿ ಲತಾನ ರೇಪು ಮಾಡು ನಾವು ನಿನಗ ಆ ಹುಡುಗಿನ ಮದುವಿ ಮಾಡಸತಿವಿ ಎಂದು ನಾವು ಗೆಳೆಯರು ಅವನನ್ನು ಅಣಕಿಸಿತ್ತಿದೆವು. ರೇಪು ಮಾಡೋದು ಬ್ಯಾಡಲೇ. ಆ ಪುರಾತನ ಕಾಲದ ತಿಮ್ಮಪ್ಪನ ಗುಡಿಯನ್ನು ಹ್ಯಾಂಗಾರ ಮಾಡಿ ಬೀಳಿಸಿ ಬಿಡೋನು. ಆಗ ಈ ಮಬ್ಬ ನನ್ನ ಮಕ್ಕಳು ಪೂಜಿ ಮಾಡಾಕ ದೇವರ ಇಲ್ಲದಕ್ಕಾದರೂ ಪೂಜಿ ಮಾಡೋದು ಬಿಟ್ಟು ಪ್ರಗತಿಪರಾಗ್ತಾರ ಎಂದು ರೇಗುತ್ತಿದ್ದ.
ಇದೆ ವೇಳೆಯಲ್ಲಿ ನಾನು ಪತ್ರಿಕೋದ್ಯಮದಲ್ಲಿಯೂ ಹುಚ್ಚು ಬೆಳೆಸಿಕೊಂಡದ್ದರಿಂದ ಮತ್ತು ಮಾಡಲಿಕ್ಕೆ ಒಂದು ಕೆಲಸ ಬೇಕಾಗಿದ್ದುದರಿಂದ ಹೋರಾಟದ ಗೆಳೆಯರನ್ನು ಮಧ್ಯದಿಲ್ಲಿಯೆ ಬಿಟ್ಟು ಬೆಂಗಳೂರಿಗೆ ಪಲಾಯನ ಮಾಡಬೇಕಾಯಿತು. ಆದರೆ ಮಾಡಲೆನು ಕೆಲಸವಿಲ್ಲವೆಂದು ಸುಮ್ಮನಿರದ ಯಂಕಟೆಶಿ ಮದುವೆಯಾಗಲೊಪ್ಪದ ಅಂತರ್ಜಾತಿಯ ಹುಡುಗ ಹುಡುಗಿಯರನ್ನು ಮದುವೆಗೆ ಪ್ರೇರೇಪಿಸುವುದು, ಕೆಟ್ಟ ರಾಹುಕಾಲದಲ್ಲಿ ಶುಭ ಮಹೋರ್ತದ ಕಾರ್ಯಕ್ರಮಗಳನ್ನು ನಡೆಸಲು ಪ್ರಚೋದನೆ ನೀಡಿ ಜನರಿಂದ ಬೈಯಸಿಕೊಳ್ಳುವುದು ಮಾಡುತ್ತಾ ತಮ್ಮ ಹೋರಾಟದ ಬಿಸಿಯನ್ನು ಆರಿಸಿಕೊಳ್ಳುತ್ತಿದ್ದರು.
* * * * *
ಹೀಗೆ ಯಂಕಟೇಶಿಯೊಂದಿಗಿನ ಘಟನೆಗಳನ್ನು ನೆನಪಿನ ಪದರಿನಿಂದ ಹೆಕ್ಕಿಕೊಂಡು ಮೆಲುಕು ಹಾಕುತ್ತಾ ಕೊರ್ರ ಬಸುವಿನೊಂದಿಗೆ ನಾನು ಜೋಡದೇವರ ಗುಡಿ ಹಂತ್ಯಾಕ ಬಂದಿದ್ದೆವು. ಮಗದ್ದವ್ವ ಮತ್ತು ದಾವಲ್ ಮಲಿಕ್‌ರ ದರ್ಗಾ ಮತ್ತು ಮಗದ್ದವ್ವನ ಗುಡಿಗಳೆ ನಮ್ಮೂರಲ್ಲಿ ಜೋಡ ಗುಡಿಗಳೆಂದು ಪ್ರಸಿದ್ಧಿಯಾಗಿದ್ದವು. ಅವೆರಡರ ಗೋಡೆಗಳು ಒಂದಕ್ಕೊಂದು ಅಂಟಿಕೊಂಡದ್ದರಿಂದ ಮತ್ತು ದರ್ಶನಕ್ಕೆ ಬಂದವರು ಎರಡು ಮಂದಿರಗಳ ದರ್ಶನ ತೊಗೊಂಡು ಹೋಗುವುದು ನಮ್ಮೂರಲ್ಲಿನ ಅಲಿಖಿತ ರೂಡಿಯಾಗಿತ್ತು. ನಮಗೆ ದೇವರ ಬಗ್ಗೆ ನಂಬಿಕೆ ಇರದಿದ್ದರೂ ಕೂಡ ಈ ಧರ್ಮಗಳ ಸಮನ್ವಯತೆಯನ್ನು ಮೆಚ್ಚಿಕೊಂಡಿದ್ದೆವು.
ಜೋಡಗುಡಿಗಳ ಗೋಪುರಗಳತ್ತ ನೋಡಿದಾಗ ನನಗೆ ದಿಗಿಲಾಯಿತು. ಅಲ್ಲಿ ಆ ಗೋಪುರಗಳು ನೆಮಸಮವಾಗಿದ್ದವು. ಹಸಿರು ಸೀರೆಯುಟ್ಟ ಮಗದವ್ವ ಮತ್ತು ಹಸಿರ ಹೊದಿಕೆಯೊಳಗೆ ಮಲಗಿದ್ದ ಘೋರಿಗಳೆರಡು ಮಳೆಯ ಅರ್ಭಟದ ಮುಂದೆ ತಮ್ಮ ದೇವರ ಆಟವನ್ನು ನಡೆಸಲು ಹೋಗಿ ಸೋತು ಸುಣ್ಣವಾಗಿ ನೆಲಕ್ಕುರುಳಿದ್ದವು. ಅನ್ಯಧರ್ಮಗಳ ದೇವರುಗಳೆರಡು ಪರಸ್ಪರ ಮುಖ ನೊಡಿಕೊಳ್ಳುತ್ತಾ ಬಯಲಲ್ಲಿ ನಿಂತಿದ್ದವು.
ಈ ಮುಸ್ಲಿಂರು ನಮ್ಮ ಈ ಕಗ್ಗಾಡ ಊರಿಗೆ ಹ್ಯಂಗ ಬಂದರು ಅನ್ನೋದಕ್ಕ ಊರ ಕುಲಕನ್ಯಾರು ಒಂದು ಕಥಿ ಹೇಳ್ತಿದ್ದುದು ಆ ಸಂದರ್ಭದಲ್ಲಿ ನನಗೆಕೋ ನನಪಿಗೆ ಬಂತು. ಈ ಹಿಂದ ಬೀದರ್‌ನ್ಯಾಗ ಆದಿಲ್‌ಶಾಹಿಗಳು ದರ್ಬಾರ ಇದ್ದಾಗ ‘ಎಲ್ಲ ಹಳ್ಳಿಗೋಳಾಗ ನಮ್ಮ ಜನ ಇರಬೇಕು ಎಂದು ಆಜ್ಞೆ ಹೊರಡಿಸಿ ಒದೊಂದು ಮುಸ್ಲಿಂ ಕುಟುಂಬಗಳನ್ನು ಒಂದೊಂದು ಹಳ್ಳಿಗೆ ಹೋಗುವಂತೆ ಎಲ್ಲ ದಿಕ್ಕಿಗೂ ಕಳುಹಿಸಿದಿರಂತ. ಹಂಗ ಊರಿಗೆ ನಮ್ಮೂರಿಗೆ ಬಂದಿದ್ದ ಮೂವರ ಹೆಂಡಿರ ಒಬ್ಬ ಸಾಬು ಒದೊಂದು ಹೆಂಡಿರಿಂದ ಒಂದೊಂದು ಡಜನ್ ಹಡೆದು ತನ್ನ ಧರ್ಮದವರನ್ನು ಕೊಳ್ಳಿ ಪಿಳ್ಳಿಗಳಂಗ ಊರ ತುಂಬಾ ಹಬ್ಬಿಸಿದನಂತ. ಕಾಲಾನುಕ್ರಮದಲ್ಲಿ ನಮ್ಮೂರಿಗೆ ಬಂದಿದ್ದ ಸೂಪಿ ಸಂತರೊಬ್ಬರು ತೀರಕೊಂಡಾಗ ಅವರ ದರ್ಗಾ ಕಟ್ಟಿಸಲು ಜಾಗ ಕೊಡ್ರಿ ಅಂತ ಮುಸಲರು ಊರ ದೇಸಾಯರ ಹಂತ್ಯಾಕ ಬಂದರಂತೆ. ದೇಸಾಯರು ಊರ ಕುಲಕಣ್ಯಾರ ಕೂಡ ಮಾತಾಡಿದಾಗ ಅವರು ದನ ತಿನ್ನೂ ಸಾಬರ ದರ್ಗಾಕ ಊರಾಗ ಜಾಗ ಕೋಡುದು ಬ್ಯಾಡ ಅನಕೊಂಡು ಊರ ಹೊಲ್ಯಾರ ಓಣ್ಯಾಗ ಜಾಗ ಕೊಡ್ರಿ ಅಂತ ಸಲಹೆ ಕೊಟ್ರಂತ. ಹಿಂಗಾಗಿ ಮಗದವ್ವನ ಗುಡಿ ಹಂತ್ಯಾಕ ಸ್ವಲ್ಪ ಜಾಗ ಸಿಕ್ಕಾಗ ಅಲ್ಲಿ ಮುಸಲರು ಬಾಳ ಹಿಗ್ಗಿನಿಂದ ದಾವಲ್ ಮಲಿಕ್‌ರ ದರ್ಗಾ ಕಟ್ಟಿಸಿದರಂತ.
ಮುದೊಂದು ದಿನ ಊರ ದುರಗವ್ವನ ಪುಜಾರಿ ಮೈಮಾಲ ಅವ್ವ ಬಂದು ದಾವಲ್ ಮಲಿಕ್ ಅಂದ್ರ ನನ್ನ ತಮ್ಮ ಅಂವ. ನನ್ನ ದರ್ಶನಕ ಬಂದವರೂ ಅವನ ದರ್ಶನ ಪಡಿಬೇಕು ಮತ್ತ ಮುಸ್ಲಿಂರು ನನ್ನ ದರ್ಶನಕ್ಕ ಬರಬೇಕು ಎಂದು ಹೆಳಿಕೆ ಕೊಟ್ಲಂತ ಹಿಂಗಾಗಿ ದಲಿತರೆಲ್ಲ ದರ್ಗಾದ ದರ್ಶನ ಪಡಿಯೋದು ಮುಸ್ಲಿಂರೆಲ್ಲ ತಮ್ಮ ಹಬ್ಬದಾಗ ಮಗದವ್ವನ ದರ್ಶನ ಪಡೆಯೋದು ಇಲ್ಲಿಯವರೆಗೂ ನಡಕೊಂಡು ಬಂದಿತ್ತು.
ಈಗ ನೋಡಿದರ ಎರಡು ಗುಡಿಗಳು ಒಂದರ ಮ್ಯಾಲ ಒಂದು ಬಿದ್ದು, ಅಣ್ಣ ತಂಗಿ ದೇವರುಗಳು ಬಯಲೊಳಗೆ ಬಯಲಾಗಿದ್ದರು. ದೇವರುಗಳೆಲ್ಲ ಒಂದೆ ಎನ್ನುವುದನ್ನು ಸಾಬಿತುಪಡಿಸುವಂತೆ ಎರಡು ದೇವ ಮಂದಿರಗಳ ಪಡಿಗಲ್ಲು ಹಾಗೂ ಮಣ್ಣು ಒಂದರ ಮ್ಯಾಲೊಂದು ಬಿದ್ದು ಏಕಗೊಂಡಿದ್ದವು.
ಸರ್ವಧರ್ಮ ಸಹಿಷ್ಣುತೆಯನ್ನು ಇಲಿಯವರೆಗೆ ಸಾರಿಕೊಂಡು ಬಂದಿದ್ದ ಮತ್ತು ತಮ್ಮ ಅಳಿವಿನಲ್ಲಿಯೂ ಎರಡು ಮಂದಿರಗಳು ಒಟ್ಟಿಗೆ ಬಿದ್ದು ಎರಡು ಧರ್ಮದ ದೇವರುಗಳು ಕಷ್ಟ ಸುಖಗಳಲ್ಲಿಯೂ ಒಂದಾಗಿದ್ದವು. ದಲಿತ ಹಾಗೂ ಮುಸ್ಲಿಂ ಮುಖಂಡರು ಕುರಿತು ಸಣ್ಣ ಸಭೆಯನ್ನು ಮಾಡಿ ತಮ್ಮ ತಮ್ಮ ಗುಡಿಗಳ ಕಲ್ಲು ಮಣ್ಣು ಹಂಚಿಕೊಂಡು ತಮ್ಮ ತಮ್ಮ ಗುಡಿಗಳನ್ನು ರಿಪೇರಿ ಮಾಡಿಕೊಳ್ಳಲು ನಿರ್ಧರಿಸಿದರು.
ಆದರೆ ಮುಸ್ಲಿಂರನ್ನು ಊರು ಬಿಟ್ಟು ಓಡಿಸಲಿಕ್ಕೆ ಇದೊಂದು ಒಳ್ಳೆಯ ಅವಕಾಶವೆಂದು ಕೆಲವು ಹಿಂದೂ ಸಂಘಟನೆಗಳ ಚೆಲಾಗಳು ದಲಿತರನ್ನು ಮುಸ್ಲಿಂರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುವುದಕ್ಕಾಗಿ ಹವಣಿಸಿದರು. ದರ್ಗಾದ ಮತ್ತು ದೇವಸ್ಥಾನಗಳ ಕಲ್ಲು ಮಣ್ಣಿನ ನೆಪ ಮಾಡಿಕೊಂಡು ಜಗಳ ಹಚ್ಚಿ ಮುಸ್ಲಿಂರನ್ನು ಊರ ಹೊರಗಾಗಬೇಕೆಂದು ಹವಣಿಸುತ್ತಿದ್ದರು. ‘ಸಾಬಿಗಳು ನಿನ್ನೆ ರಾತ್ರಿ ಮಗದವ್ವನ ಗುಡಿಯ ಕಲ್ಲುಗಳನ್ನು ಕದ್ದು ತಮ್ಮ ದರ್ಗಾದ ಕಲ್ಲುಗಳೊಂದಿಗೆ ಸೇರಿಸಿಕೊಂಡ್ರು’ ಎಂದು ದಲಿತ ಕೇರಿಯಲ್ಲಿ ಸುದ್ದಿ ಹಬ್ಬಿಸಲು ಯತ್ನಿಸಿದರು. ಆದರೆ ಇವರ್‍ಯಾರಿಗೂ ಕಿವಿಗೊಡದೆ ದಲಿತ ಮತ್ತು ಮುಸಲರ ಹಿರ್‍ಯಾರು ತಮ್ಮ ತಮ್ಮಲ್ಲೆ ಸಮಸ್ಯೆ ಬಗೆ ಹರಿಸಿಕೊಂಡದ್ದನ್ನು ಕೊರ್ರ ಬಸು ನನಗೆ ಸಾಧ್ಯಂತವಾಗಿ ವಿವರಿಸಿದ.
* * * * *
ಇವನೌನ ಮಳಿ ಹೊಡತ್ತಕ ಕಲ್ಲುಗುಂಡಿನಂತ ಈ ಮನಿಗೋಳು ಹ್ಯಾಂಗ ಬಿದ್ವು? ನಾನು ಈ ಮಳಿ ದಾಳಿ ತಿಳಕೊಬೇಕಾಗಿತ್ತು.
ಮಳಿ ಪ್ರಾರಂಭ ಆದಗಿನಿಂದ ಹಿಡಿದು ಮನಿಗೊಳು ಬಿಳುವವರೆಗಿನ ಘಟ್ಟಗಳನ್ನು ಬಸ್ಸು ತನ್ನ ಜವಾರಿ ಭಷೆಯಲ್ಲಿ ವಿವರಿಸಿಕೊತ ನಡೆದ. ಐತ್ವಾರ ಚಾಲೂ ಆದ ಮಳಿ ಈದು ರಾತ್ರಿ ಐದು ಹಗಲು ಹಣಿಯುತ್ತಲೆ ಇತ್ತು. ಒಮ್ಮೊಮ್ಮೆ ಸೋತಂತೆ ನಿದಾನಕ್ಕೆ ಅಲ್ಲೊಂದು ಅಲ್ಲೊಂದು ಹಣಿ ಉದುರಿದರೆ ಮತ್ತೊಮ್ಮೆ ಗುಡುಗು ಸಿಡಿಲುಗಳೊಂದಿಗೆ ಮಿಂಚಿ ಪೋತ್ಕರಿಸುತ್ತಿತ್ತು. ಐದು ದಿನಗಳವರೆಗೂ ಸೂರ್‍ಯಾ ಕಾಣಲಾರದ್ದಕ್ಕ ಹಗಲಾವ್ಯವದು ರಾತ್ರೆಇ ಯಾವದು ಅಂತ ಗೊತ್ತಾಗಲಾರಂದಗ ಕತ್ತಲ ಕಾರ್ಮೋಡ.
ಮುಗಲಿನ ಮುಖುಳಿ ಹರದೈತನಲೇ ಇವನೌನ ಎಂದು ಗಂಡಸರು ಬೈಯಕೋತ ಮುಗಿಲಕಡೆ ನೋಡಿದ್ರ. ಹೆಣ್ಣಮಕ್ಕಳು ಹಾಂನ ಮಳಿ ಹೊರಗ ಹೋಗಿ ಹೇತೆನಂದ್ರ ಬೆಚ್ಚನ ಜಾಗ ಇಲ್ಲದಂಗ ಮಾಡೆತಿ ಅಂತಿದ್ರು. ಕರೆವಂದ್ರ. ಒಬ್ಬೊಬ್ಬರು ಹೇಲಾಕ ಅಂತ ಹಿತ್ತಿಲಕ ಹೋದ್ರು ಹೇಲಾಕ ಜಾಗ ಇರಲಾರದನ ನಿಂತ ನಿಂತಲ್ಲೆ ಹೇತ ಬರತದ್ರು. ಎಷ್ಟೊ ಜನರು ಚರರಿಗೆತೊಗೊಂಡು ಹೊರಗ ಹೋಗಲಾರದನ ತಮ್ಮ ಮನಿಗಳ ಬಚ್ಚಲದಾಗನ ಕುಂಡಿ ಎತ್ತಿ ಪುದು ಪುದು ಎನಿಸಿ ಆಮ್ಯಾಲ ನೀರು ಹಾಕತಿದ್ರು. ನೀರು ಹೇಲು ಏಕಾಗಿ ಬಚ್ಚಲ ಮೋರ್‍ಯಾಗಿಂದ ಅಂಗಳಕ ಬಂದು ಊರೆಲ್ಲಾ ಹೇಲ ವಾಸನಿ ನಾರಾಕ ಹತ್ತು.
ಹೊಲದಾಗಿನ ಒಡ್ಡಗೊಳೆಲ್ಲಾ ತುಂಬಿ ಹರಿಯುತ್ತಿದ್ದುದರಿಂದ ಜನ ಎಲ್ಲ ತಾವು ತೇಲಕೊಮಡು ಹೋಗ್ತಿವೋ ಅಂತ ಅಂಜಿಕೊಂಡು ಗಿಡ ಏರಿ ಕುಂತಿದ್ರು. ಊರ ಅಗಸಿಯೊಳಗಿನ ಹಗೆವುಗಳೆಲ್ಲ ಕುಸಿದು ರಾಡಿನೀರು ಒಳಹೊಕ್ಕಿತ್ತು. ಮನಿ ಅಟ್ಟದೊಳಗಿನ ಕಾಳು ಮೊಳಕಿ ಒಡಿದಿದ್ವು. ಮನಿಗಳ ಜಂತಿಗಳೆಲ್ಲ ಸೋರಾಕ ಚಾಲೂವಾಗಿ ಮನಿಗಳೆಲ್ಲ ತ್ಯಾವ ಆಗಿದ್ವು. ಜನಕ್ಕ ತಮ್ಮ ತಮ್ಮ ಮನಿಗೊಳೊಳಕೂ ಕುಂಡ್ರಲಿಕ್ಕಾಗದೆ ರಗ್ಗ ಹೊಚಗೊಂಡು ಮಲ್ಲಕ್ಕೊಂಡು ಬಿಡತಿದ್ರು.
ಹಿಂಗ ಮಲಕ್ಕೊಂಡ ಒಂದ ರಾತ್ರಿ ದಡ್‌ದಡಲ್ ಅಂತ ಮನಿಗೊಳು ಬಿಳಾಕ ಹತ್ತಿದ್ವು. ಬಿದ್ದ ಮನಿಯವರು ತಮ್ಮ ಮಗ್ಗಲ ಮನಿಗೆ ಹೋಗಿ ಜನಾ ಎಲ್ಲಾ ಜಾತಿ ಮರತು ಏಕಾದ್ರು. ಇಂತಾ ಮನ್ಯಾಗ ತಿಮ್ಮಪ್ಪನ ಗುಡಿ ಪೌಳ್ಯಾಗ ನೀರು ಹೊಕ್ಕೊಂಡೈತಿ ನೀರು ಹೊರಾಗ ಚೆಲ್ಲಾಕ ಬರ್ರೆಪೋ ಅಂತ ವಾಲಿಕಾರ ಸಿದ್ದ ಚೀರಕೋತ ಹೊಂಟ. ತಮ್ಮ ತಮ್ಮ ಮನಿ ಬಿಳೂ ಖಬರಿಲ್ಲದ ಜನ ಎಲ್ಲ ದೇವರ ಗುಡಿಯಾನ ನರು ತೆಗಿಯಾಕಹೊಂಟ್ರು. ಇನ್ನೂ ಗುಡಿ ಮುಟ್ಟಿರಲಿಲ್ಲ. ಆಗಲೆ ದಡ್ ದಡ್‌ಲ್ ಅಂತ ಗುಡಿ ಗೋಪುರನೂ ಜನರ ಕಣ್ಣ ಮುಂದ ಉರುಳಿತು ಎಂದು ಹೇಳಿ ಮುಗಿಸುದರೊಳಗ ನಾವು ಸಂಘದ ಕೊಣಿಯೊಳಗ ಇದ್ದವು.
* * * * *
ದರೆಗಟ್ಟಿಯಂತಹ ಕುಗ್ರಾಮದಲ್ಲಿ ಯಂಕಟೇಶಿ ಕೂಡ ಕಾಲೇಜು ಓದಿದ್ದ ಐದಾರು ಹುಡುಗರು ಮಾತ್ರ (ನನ್ನನ್ನು ಸೇರಿಸಿ)ಅವನ ಯುವಸೇನೆಗೆ ಮೇಂಬರ್ರಾಗಿದ್ದರು. ಅವರೆಲ್ಲರೂ ಯಂಕಟೇಶಿ ಮಾತುಗಳಿಗಾಗಿ ಸಂಗದ ಪುಟ್ಟಕೊಣೆಯಲ್ಲಿ ಜಿಡ್ಡುಗಟ್ಟಿದ ಜಮಾಖಾನೆಯೊಂದನ್ನು ಹಾಸಿಕೊಂಡು ಕುಳಿತಿದ್ದರು. ಊರನ್ನು ಜಡತ್ವದ ಸಂಸ್ಕೃತಿಯಲ್ಲಿ ಮುಳುಗಿಸಿದ್ದ ಬೀರ ದೇವರ ಗುಡಿ ಬಿದ್ದು ತಮ್ಮ ಸೇನೆಗೆ ಕ್ರಾಂತಿ ಮಾಡಲು ಒಂದು ಸದವಕಾಶವನ್ನು ಒದಗಿದ್ದಕ್ಕಾಗಿ ಯಂಕಟೇಶಿ ತುಂಬಾ ಖುಷಿಯಲ್ಲಿದ್ದಂತೆ ನನಗೆ ಕಂಡು ಅದೆ ಖುಷಿಯಲ್ಲಿ ಮಾತಾಡತೊಡಗಿದ. ತಾನು ಚಾರ್ವಾಕ ಸಂಘಟನೆಯ ಹೆಡ್ಡಾಪೀಸಾದ ಬೆಂಗಳೂರಿಗೆ ಫೋನು ಮಾಡಿದ್ದಾಗಿಯೂ ತಮ್ಮೂರಿನ ಹನುಮಪ್ಪ ದೇವರ ದುಸ್ಥಿತಿಯನ್ನು ವಿವರಿಸಿದ್ದಾಗಿಯೂ ಹೇಳಿದ. ಜೊತೆಗೆ ತಮ್ಮೂರಿನ ಬಡ ಬಗ್ಗರ ಮನೆಗಳು ಬಿದ್ದಿರೋದನ್ನು ಚಾರ್ವಾಕ ಯುವ ಸೇನೆಯ ಒಕ್ಕೂಟದ ಅದ್ಯಕ್ಷರ ಮನಕರಗುವಂತೆ ಹೆಳಿದ್ದಾಗಿಯೂ ತಿಳಿಸಿದ. ಅಧ್ಯಕ್ಷರು ಕೂಡ ಸಂತೋಷಗೊಂಡು ಬಡಬಗ್ಗರಿಗೆ ಅನುಕೂಲವಾಗುವ ಯೋಜನೆಯೊಂದುನ್ನು ರೂಪಿಸಿ ಕಳುಹಿಸಿ ಕೊಡಬೇಕೆಂದು ತಮ್ಮ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನಲ್ಲಿ ಮನೆ ಮನೆಗೂ ಅಡ್ಡಾಡಿ ಬಂದು, ಕಾಳು ಸಂಗ್ರಹಿಸಿ ಹಾಗೂ ದೇಣಿಗೆಯನ್ನು ಎತ್ತಿ ಕಳುಹಿಸಿಕೊಡುದಾಗಿ ಮಾತು ಕೊಟ್ಟಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ.
ಆದ್ದರಿಂದ ಇಂದು ಎಲ್ಲ ನಮ್ಮ ಸೇನೆಯವರನ್ನು ಸಭೆ ಕರೆಯಬೆಕಾಯಿತು ಎಂದು ಸಭೆಯ ಉದ್ದೇಶವನ್ನು ತಿಳಿಸಿದ. ‘ಈ ಉರಾನ ಬಡಬಗ್ಗರಿಗೆ ತಮ್ಮ ಸಂಘ ಹ್ಯಾಂಗ ಆಸ್ರ ಆಗಬೌದು, ಅನ್ನೋದರ ಬಗ್ಗೆ ಯುವ ಸೈನಿಕರು ವಾಲಿಕಾರ ಸಿದ್ದ ಬಂದು ಚೇರಮನ್ರು ತಿಮ್ಮರಾಯಪ್ಪ ಕರಿಯಾಕ ಹತ್ಯಾರ’ ಎಂದ.
ಹಂಗ ನೋಡಿದ್ರ ಎಸ್‌ಎಸ್‌ಎಲ್‌ಸಿವರೆಗೂ ಈ ತಿಮ್ಮರಾಯಿನೂ ನಮಗ ಕ್ಲಾಸಮೇಟ್ ಆಗಿದ್ದ. ಓದಿ ಬರಿಯಾಕ ನಾಲ್ಕಕ್ಷರ ಬರದಿದ್ರೂ ಕ್ಲಾಸಿನ ಮೊನಿಟರ್ ಆಗಬೇಕು ಅನಕೊಂಡು ಆವಾಗಿನಿಂದಲೂ ರಾಜಕೀಯ ಮಾಡತಿದ್ದ. ಮಾಸ್ತರರಿಗೆ ತಮ್ಮ ಹೊಲದಾಗ ಬೆಳಿತಿದ್ದ ಕಬ್ಬು, ಶೆಂಗಾ, ಹುರಗಡ್ಲಿ ತಂದುಕೊಟ್ಟು ಮಾಸ್ತರರನ್ನು ನನ್ನ ಕಿಸೆದಾಗ ಇಟ್ಟಕೊಂಡಿನಿ’ ಅಂತಿದ್ದ. ತಿಮ್ಮರಾಯಿ ಸಹಜವಾಗಿಯೆ ಮೇಲು ಜಾತಿಯವನಾದ್ದರಿಂದ ಮತ್ತು ಕೆಳಜಾತಿಯ ಯಂಕಟೇಶಿಯಂತಹ ಹುಡುಗರನ್ನು ತನ್ನ ಹಂತ್ಯಾಕ ಬಿಟಕೊತಿರಲಿಲ್ಲವಾದ್ದರಿಂದ ಮೊದಲಿನಿಂದಲೂ ಯಂಕಟೇಶಿ ತಂಡಕ್ಕೂ ಮತ್ತು ತಿಮ್ಮರಾಯಿಗೂ ಆಗಿಬರುತ್ತಿರಲಿಲ್ಲ. ಕಳೆದ ಗ್ರಾಮ ಪಂಚಾಯತಿಯಲ್ಲಿ ತನ್ನ ಜಾತಿ ಹಾಗೂ ಹಣದ ಬಲದಿಂದ ತಿಮ್ಮರಾಯಿ ಗೆದ್ದುಬಂದಿದ್ದ.
ವಾರಿಗೆಯಲ್ಲಿ ತನ್ನ ವಯಸ್ಸಿನವನೇ ಆದ ತಿಮ್ಮರಾಯಿ ಪಂಚ್ಯಾತಿ ಚೇರಮನ್ ಆದಾಗ ಸಹಜವಾಗಿಯೆ ಗೆಳೆಯ ಯಂಕಟೇಶಿಗೆ ಸಂಕಟ ಆಗಿತಿತ್ತು. ಈಗ ತಿಮ್ಮರಾಯಿ ಕರೆಯ ಕಳುಹಿಸಿದ್ದರಿಂದ ಆ ಸಂಕಟ ಈಗ ಮತ್ತೊಮ್ಮೆ ಮರುಕಳಿಸಿದಂತಾಗಿ ಒಮ್ಮೆಲೆ ಸಿಟ್ಟು ನೆತ್ತಿಗೆ ಬಂದು ನನಗ ಅಲ್ಲಿಗೆ ಬರಾಕ ಆಗಂಗಿಲ್ಲ. ಬೇಕಾದರ ಇಲ್ಲಿಗೆ ಬರಾಕ ಹೇಳು ಎಂದು ಬಿಟ್ಟ.
* * * * *
ಈ ಕಡೆ ಯಂಕಟೇಶಿ ಮಿಟೀಂಗ್ ನಡೆಯುವ ವ್ಯಾಳೆದಾಗ ಆ ಕಡೆ ಗ್ರಾಮ ಪಂಚ್ಯಾತಿ ಚೇರಮನ್ ರಡ್ಡೇರ ತಿಮ್ಮರಾಯಿ ಊರ ಹಿರ್‍ಯಾರನ್ನು ಮತ್ತು ಮೆಂಬರ್‌ಗಳನ್ನು ಸಭ ಕರೆದಿದ್ದ. ಮುರುಕೊಂಡು ಬಿದ್ದಿದ್ದ ತಿಮ್ಮಪ್ಪ ದೇವರ ಗೋಪುರದ ಹಂತ್ಯಾಕಿನ ಬನ್ನಿಗಟ್ಟಿ ಮ್ಯಾಲ ಮೇಲು ಕುಲದವರೆಲ್ಲ ಕುತಕೊಂಡ್ರು. ಮಾದರ ದುರಗಪ್ಪ ದಾಸರ ದರೆಯಪ್ಪ ಮುಸಲರ ಡೋಂಗ್ರೆಪ್ಪ ಬನ್ನಿಗಟ್ಟಿ ಕೆಳಗ ಕುಂತಿದ್ರು.
‘ನೋಡ್ರೆಪಾ ನಾವ ಈ ಹಿಂದ ಮಾಡಿರೊ ತಪ್ಪಿನಿಂದ ಊರ ತಿಮ್ಮಪ್ಪನ ಗುಡಿ ಮುರುಕೊಂಡು ಬಿಳುವಂಗಾತು. ನಮ್ಮ ನಮ್ಮ ಮನಿನೂ ಬಿದ್ದಾವ ಕರೆ. ಆದ್ರ ನಮ್ಮ ಮನಿಗೊಳಿಗೆ ಸರಕಾರ ರೊಕ್ಕ ಕೊಡತೈತಿ ನಾವು ಕಟ್ಟಿಸಿಕೊಬೌದು ಆದ್ರ ತಿಮ್ಮಪ್ಪನ ಗುಡಿ ಕಟ್ಟಿಸೋರ್‍ಯಾರು. ತಿಮ್ಮಪ್ಪ ಅಂದ್ರ ಬೆಂಕಿ ಕೆಂಡ ಇದ್ದಾಗಾಂವ. ಅದಕ್ಕ ಗುಡಿ ಕಟ್ಟಿಸೂದು ತರಾತೂರಿ ಐತಿ ಏನಂತಿರಿ. ಎಂದು ಮೀಟಿಂಗ್ ಚಾಲು ಮಾಡಿದ.
ಹುಡುಗ ಚಲೋ ಮಾತಾಡತಾನ ಎಂದು ಕೆಲವರು ಕುಂತಕೊಂಡಲ್ಲೆ ಶಹಬ್ಬಾಸಗಿರಿ ಕೊಟ್ರು. ತಿಮ್ಮಪ್ಪನಿಗೆ ಚಾಟು ಆಗುವಂಗಾತು ಅಂತ ವೆಂಕಯ್ಯ ಪುಜಾರಿಗೆ ಖುಷಿಯಾಗಿ ‘ನೀವು ಮಾತಾಡೋದು ಬರೊಬ್ಬರಿ ಐತಿ ಚೇರಮನ್ರ. ನಾನು ಮುಂಚೆನ ಹೇಳಿದ್ನಿ. ಗುಡಿ ಸೋರತೈತಿ ರಿಪೇರಿ ಮಾಡೋಣು ಅಂತ. ಆದ್ರ ನನ್ನ ಮಾತ ಕೇಳಲಿಲ್ಲ. ನಾವು ನಮ್ಮ ನಮ್ಮ ಮನಿ ಕಟಗೊಂಡು ನಮ್ಮ ಮನಿಯಾಗ ಉಳದ್ರ, ಊರ ಗುಡಿ ಕಟ್ಟುವರ್‍ಯಾರು? ಈಗಾಗಲೇ ಅಕ್ಕ ಪಕ್ಕದ ಉರಾವ್ರಿಗೆ ಗುಡಿ ಬಿದ್ದುದು ಗೊತ್ತಾಗಿ ನಗಾಕಂತ್ಯಾರಂತ. ಅದಕ್ಕ ಈಗ ಬಿಡೋದು ಬಿಟ್ಟು ಗುಡಿ ಕಟ್ಟು ಕೆಲಸ ಮಾಡೂದು ಬೇಸಿ’ ಅಂದು ಯಾರಾದರೂ ನನಗೂ ಶಹಬ್ಬಾಸ ಅನಬೌದು ಅನಕೊಂಡು ಹುಳ್ಳಹುಳ್ಳಗೆ ನಕ್ಕೋತ ಮಂದಿ ಕಡೆ ನೋಡಿದ.
‘ಆದ್ರ ಗುಡಿ ಕಟ್ಟು ರೋಕ್ಕಕ ಏನ ಮಾಡೂನು?’ ತಳವಾರ ಗದ್ದೆಪ್ಪ ಪ್ರಶ್ನಿಸಿದ.
‘ದೇವರ ಕೆಲಸಂದ್ರ ದೇವರ ದಾರಿ ತೋರಸತಾನ. ನಾವು ಕೆಲಸ ಸುರು ಮಾಡೋನು’ ಅಂದ ಬಡಿಗೇರ ಈರಪ್ಪ.
‘ಸಾಲಿ ಕೋಲಿ ಕಟ್ಟಸಬೇಕಂತ ಸಂಘದ ಹುಡುಗರು ಊರಾಗ ಹಾದು ಹೋಗೋ ಮೈನಿಂಗ್ ಟ್ರಕ್‌ಗಳಿಂದ ಪಟ್ಟಿ ಎತ್ತತ್ತಿದ್ರಲಾ. ಆ ರೊಕ್ಕ ಈಗ ೮೭ಸಾವಿರ ರೂ. ಆಗೇತಿ.ಅದನ್ನು ಇಸಕೊಂಡು ಕೆಲಸ ಚಾಲೂ ಮಾಡೂನು. ಎಮ್ಮೆಲ್ಲಿಯವರು ತಮ್ಮ ಫಂಡಿನಿಂದ ಸ್ವಲ್ಪ ದುಡ್ಡು ಕೊಡತಿವಿ ಅಂತ ಹೇಳ್ಯಾರ. ಮತ್ತ ಊರಾಗಿನ ಎಲ್ಲ ಮನಿಗಳಿಗೆ ಸ್ವಲ್ಪ ಸ್ವಲ್ಪ ಪಟ್ಟಿ ಹಾಕೂನು. ಇದಕ್ಕೇನ ಅಂತಿರಿ ಹಿರ್‍ಯಾರು? ಅತಿ ವಿನಯದಿಂದಲೆ ಮಾತಾಡುತ್ತ ತಿಮ್ಮರಾಯಿ ರಡ್ಡೇರ ಶೇಖರಪ್ಪನ ಕಡೆ ನೋಡಿ ಅವರಿಂದ ಕಣ್ಣಿನಿಂದ ಮಚ್ಚುಗೆ ಸ್ವೀಕರಿಸಿದ
ನಂದ ೫೦೦ ರೂ.ಬರಕೊಳ್ರಿ ತಿಮ್ಮಪ್ಪನ ಗುಡಿ ಕೆಲಸ ಅಂದ್ರಅಲ್ಲಾನ ಕೆಲಸ ಇದ್ದಾಂಗ’ ಯಾವಾಗಲೂ ಅಂರ್ಜೆಂಟ್ ಮಾಡುವ ಅಂಗಡಿ ಡೊಂಗ್ರಿಸಾಬ ಕೆಳಗಿನಿಂದಲೆ ಐದು ನೂರು ರೂ.ತೆಗೆದ. ರಡ್ಡೇರ ಶೇಕಪ್ಪ ಪಟ್ಟಿ ಬರೆದುಕೊಳ್ಳಲು ತನ್ನ ಸಣ್ಣ ಹೊತ್ತಿಗೆಯೊಂದನ್ನು ಕಿಸಿಯಿಂದ ತೆಗೆದ. ಉಳಿದವರೆಲ್ಲ ತಮ್ಮ ತಮ್ಮ ಕೈಲಾದಷ್ಟು ದುಡ್ಡನ್ನು ಬರೆಸಿದರು. ತಿಮ್ಮರಾಯಿ ವಾಲಿಕಾರ ಸಿದ್ದನಿಗೆ ತಳವಾರ ಯಂಕಟೇಶಿಯನ್ನು ಪಂಚ್ಯಾತಿ ಆಪೀಸಿಗೆ ಕರಕೊಂಡು ಬಾ ಎಂದು ಸೂಚಿಸುತ್ತಾ ಕುಳಿತಲ್ಲಿಂದಲೆ ಮುಖದಾಗ ನಗು ಬರಸಕೊಂಡು ಊರ ಹಿರ್‍ಯಾರಿಗೆ ಕೈಮುಗಿಯುತ್ತಾ ಎದ್ದುನಿಂತ.
* * * * *
‘ಢನ್.. ಡನ್.. ಹನುಮದೇವರ ಎಲ್ಲರೂ ಪಟ್ಟಿ ಕೊಡಬೇಕಂತಪೋ ಢನ್…’ ಎಂದು ತಳವಾರ ಸಿದ್ದ ಕುರುಬರು, ಗಾನ್ಯಾಗಾರು ದಾಸರು, ಮುಸಲರು, ಓಣಿಗಳೋಳಗ ಕಚಿಪಿಚಿ ಹುದಲು ತುಳಕೊಂಡು ಬಿದ್ದ ಮನಿ ದಾಟಕೊಂಡು ಡೊಂಗ್ರ ಸಾರಕೋತ ತಳವಾರ ಓನಿಗೂ ಬಂದ. ಮನಿಬಿದ್ದು ಬಟ್ಟ ಬಯಲಾಗಿದ್ದ ಮಣ್ಣಿನ ಗುಂಪಿ ಮ್ಯಾಲ ತನ್ನ ನೆಗ್ಗಿದ ಆಲುಮಿನಿ ಪಾತ್ರೆಗಳನ್ನು ಇಟುಕೊಂಡು ಕುಳಿತಿದ್ದ ಬಡಿಗೇರ ರಿಂದಮ್ಮಜ್ಜಿ ‘ನಮ್ಮನ್ನ ಕಾಯೋ ಹನುಮಪ್ಪ ತನಗ ನೆರಳ ಮಾಡಕೊಂಡನಲಾ ಅಷ್ಟ ಸಾಕು’ ಅನಕೊಂಡು ಕೈಮುಗಿದಳು.
ಯಂಕಟೇಶಿಯ ಪೊಗರಿನ ಮಾತು ಕೇಳಿ ತಿಮ್ಮರಾಯಿ ಅಕ್ಷರಶ: ಉರಿದು ಹೋದರೂ ಇದು ಊರು ಕೆಲಸ ಮೇಲಾಗಿ ಊರ ಹನುಮಪ್ಪನ ಕೆಲಸವೆಂದು ನೆನಪಾಗಿ ಒಳಗಡೆಯೇ ಹಲ್ಲು ಮಸೆಯುತ್ತಾ ಯಂಕ್ಟೇಶಿಯ ಸಂಘದ ರೂಮಿಗೆ ತಾನೇ ಪಾದ ಬೆಳೆಸಿದ.
ನಗು ನಗುತ್ತಲೆ ಮಾತನಾಡಿದ ತಿಮ್ಮರಾಯಿ ಊರ ಹನುಮಪ್ಪನ ದುಸ್ಥಿತಿಯನ್ನು ವಿವರಿಸಿಯಾದ ಮೆಲೆ ವೆನಿಂಗ್ ಲಾರಿಗಳಿಂದ ಸಂಗ್ರಹಿಸಿದ್ದ ದಂಡದ ಹಣವನ್ನು ಕೂಡಗುಡಿ ಜೀರ್ಣೋಧ್ಧಾರ ಕೆಲಸಕ್ಕೆ ಬಳಸಬೇಕೆಂದು ತೀರ್ಮಾಣಿಸಿರುವುದು ತಿಳಿಸಿ ಆ ಹಣವನ್ನು ಕೊಡಬೇಕೆಂದು ಹೇಳಿದ. ನಾವು ರಾತ್ರಿಯೆಲ್ಲ ಕಣ್ಣಿಗೆ ನೀರ ಬಿಟಗೊಂಡು ಕಷ್ಟಪಟ್ಟು ಸಂಗ್ರಹಿಸಿದ್ದ ಹಣವನ್ನು ಈ ನನ್ನ ಮಗನ ಕೈಗೆ ಹಾಕಾಬೇಕಾ ಎಂದು ಯಂಕಟೇಶಿ ಒಳಗಡೆ ಕಾರ ಕಲಿಸಿದಂತಾಯಿತು.
ಆದರೂ ನಿದಾನವಾಗಿ ತನ್ನ ಯುವ ಸಂಘದ ದ್ಯೆಯೋದ್ದೇಶಗಳನ್ನು ತಿಳಿಸಿ ಈ ಹಣವನ್ನು ಊರಿನ ನಿರ್ಗತಿಕರಿಗಾಗಿ ಬಳಸಲು ಸಂಘ ತಿರ್ಮಾನಿಸಿದೆ. ಮೇಲಾಗಿ ಕಲ್ಲು ರೂಪದಲ್ಲಿರುವ ದೇವರಿಗೆ ಗುಡಿ ಕಟ್ಟಿಸೋದಕ್ಕಿಂತ ಜೀವರೂಪದಲ್ಲಿರುವ ಪಾತರದ ನಿಂಗವ್ವ ಸೂಲಗಿತ್ತಿ ಬೂಬವ್ವರಂಥಹ ಆಸರಾಗೋದು ಬೇಸಿ ಅಂತ ಸಂಘದ ದ್ಯೆಯೋದ್ದೇಶ ಆಗೈತಿ. ಹಿಂಗಾಗಿ ಸ್ವಾರಿ ತಿಮ್ಮರಾಯಿ ನಾವು ರೊಕ್ಕ ಕೊಡೋದಿಲ್ಲ ಎಂದು ಎಂದು ನೆರವಾಗಿ ಹೇಳಿಬಿಟ್ಟ ಯಂಕಟೇಶಿ. ಆ ರೊಕ್ಕ ಹ್ಯಾಂಗ ಇಸಕೋಬೇಕಂತ ನನಗೂ ಗೊತೈತಿ ಅನಕೊಂಡು ಬದಗ್ಗನೆ ಎದ್ದು ತನ್ನ ಹಿಂಬಾಲಕರೊಂದಿಗೆ ಹೋಗೆಬಿಟ್ಟ.
ತಿಮ್ಮರಾಯಿ ಹೋದಮೇಲೆ ಮತ್ತೆ ಮಿಟಿಂಗ್ ಕರೆದ ಯಂಕಟೇಶಿ.
ನಾವ್ಯಾರು ಪಟ್ಟಿ ಕೊಡೋದು ಬ್ಯಾಡ ಎಂದ ಯಂಕಟೇಶಿ.
ಹಂಗ ಮಾಡೋದು ತೆಪ್ಪ ಆಕ್ಕೆತಿ. ಈಗ ಲಾರಿ ಹಣ ಕೊಡೂದಿಲ್ಲ ಅಂದದ್ದಕ್ಕ ತಿಮ್ಮರಾಯಿ ಉರಕೊಂಡು ಹೋಗ್ಯಾನ, ಮೇಲಾಗಿ ಇದು ಊರ ಹನುಮಪ್ಪನ ಕೆಲಸ. ಊರವರು ಅವನ ಬೆನ್ನಿಗದಾರ. ನಾವೆನೂ ನಮ್ಮ ಲಾರಿ ಹಣ ಕೊಡೂದಿಲ್ಲ ಅಂದಿವಿ. ಸರಿಯಾತು. ಆದ್ರ ನಮ್ಮ ಓಣಿಯವರು ಪಟ್ಟಿಕೋಡುದು ಬ್ಯಾಡ ಅಂದ್ರ ತಪ್ಪಾ ಆಕೈತಿ. ಮೊದಲ ತಿಮ್ಮರಾಯಿ ಗಾಯಗೊಂಡ ಹಾವಿನಂಗ ಆಗ್ಯಾನ. ಯುವ ಸೇನೆಯ ಹುಡುಗರಿಂದ ಮುಂದಾಗುವ ಉಪದ್ವಾಪವನ್ನು ಅರಿತು ನಾನು ಸಣ್ಣಗೆ ಎಚ್ಚರಿಕೆ ನೀಡಿದೆ.
ನಿನು ಹುಬ್ಬಳಿ ಸೇರಕೊಂಡು ಬಾಳ ದಿನ ಆಗೇತಿ. ನಿನಗ ನಮ್ಮ ಸಂಘದ ಉದ್ದೇಶಗಳು ಅರ್ಥಆಗಿಲ್ಲ ಅಂತ ಅನಕೋತಿನಿ. ಮಳಿ ಬಂದ ಎಲ್ಲ ಬಳಕೊಂಡು ಹೋಗಿರೋ ಹೊತ್ತಿನ್ಯಾಗ ಊರ ಜನರಿಗೆ ಎಲ್ಲಿ ಪಟ್ಟಿಕೋಡಾಕ ಆಕೈತಿ. ನೀನ ಸ್ವಲಪ ವಿಚಾರ ಮಾಡು. ಅವನೌನ ದೇವರ ಸೂ ಮಗ. ದೇವರಿದ್ರ ಪಾಪ ಸೂಲಗಿತ್ತಿ ಬೂಬವ್ವ , ಕಣ್ಣಾನ ಹಳ್ಳಾ ತೇಗಿಯೋ ಮುದಕರ ಮನಿಗಳನ್ನು ಯಾಕ ಬಿಳತಿದ್ವು. ಯಂಕಟೇಶಿ ಅಕ್ಷರಶಃ ಸಿಟ್ಟಿಗೆದ್ದಿದ್ದ.
ಹಂಗಾರ ಗುಡಿಯಾಗ ದೇವರ ಇಲ್ಲ ಅಂತಿ? ನನಗೆ ಇನ್ನೂ ಅನುಮಾನವಿತ್ತು.
ನನ್ನ ಕೇಳಿದರ ದೇವರು ನಾವ ದೆವ್ವನೂ ನಾವ. ಯಾರ ಸಮಾಜಕ್ಕೆ ಒಳೆದು ಮಾಡ್ಯಾರ ಅವರ ದೇವರು ಮತ್ತ ಯಾರು ಕೆಟ್ಟದ್ದ ಮಾಡ್ತಾರ ಅವರ ದೆವ್ವ. ದೇವರು ಅನ್ನೊದು ಅವರವರ ನಂಬಿಕೆಗೆ, ಭವಕ್ಕೆ ಬಿಟ್ಟಿರೋದು. ದೇವರ ದರ್ಶನದ ಬಗ್ಗೆ ಸಾಕಷ್ಟು ಕಟ್ಟು ಕಥೆಗಳನು ಪವಾಡಗಳನ್ನು ಹೇಳತಾರ. ಆದ್ರ ದೇವರು ಇಲ್ಲಿಯವರೆಗೂ ಯಾರಿಗೂ ಬೇಟ್ಟಿ ಆಗಿಲ್ಲ ಅನ್ನೋದು ಅಷ್ಟ ಸತ್ಯ. ದೇವರ ಧರ್ಮಗಳನ್ನು ಮುಂದಿಟ್ಟುಕೊಂಡು ಮೇಲ್ವರ್ಗದವರು ಕೆಳವರ್ಗದವರನ್ನು ತುಳಿಯುವದಕ್ಕೆ ಬಳಸಕೋತಾರ. ಹುಟ್ಟುವ ವಿಕಸಿಸುವ, ನಶಿಸುವ, ನಿಸರ್ಗ ಪ್ರಕ್ರಿಯೆಯನ್ನ ದೇವರ ಕ್ರಿಯೆ ಎಂದು ಹೇಳುತ್ತಾ ಸಾಮಾನ್ಯ ಜನರ ಕಿವಿ ಮ್ಯಾಲ ಹೂವು ಮುಡಿಸೋದು ತಲತಲಾಂತರದಿಂದಲೂ ಬೆಳಕೊಂಡು ಬಂದೈತಿ. ಹಿಂಗಾಗಿ ನಮ್ಮ ಊರ ಹೊರಗ ದೇವರ ಹೆಸರಲ್ಲೆ ಹೊಲಗೇರಿಗಳು ಪ್ರಾರಂಭ ಆದದ್ದು. ಭವೋದ್ವೇಗಕ್ಕೆ ಒಳಗಾಗಿದ್ದ ಯಂಕಟೇಶಿ ತನ್ನ ನಾಸ್ತಿಕ ವಾದದ ಕುರಿತು ಪುಟ್ಟ ಭಷಣವನ್ನೆ ಕೊರೆದ.
ಅವನ ಹಸಿಬಿಸಿಯ ಮಾತುಗಳಿಂದ ಮರುಳಾದ ಬ್ಯಾಡರ ಗೊವಿಂದ ನಾನಂತ್ರೂ ನಮ್ಮ ಓಣ್ಯಾಗ ಪಟ್ಟಿ ತ್ತಾಕ ಬಿಡೋದಿಲ್ಲ. ಯಾಂವ ಬರತಾನ ಬರಲಿ ಎಂದು ಹಲ್ಲು ಮಸೆದ.
ಹಿಂಗ ಒಬ್ಬೊಬ್ಬರ ಹೊಗಿ ತಡೆದರ ತಿಮ್ಮರಾಯಿನ ತಡೆಯಾಕ ಆಗೋದಿಲ್ಲ. ನಾವು ಎಲ್ಲರೂ ಒಂದಾಗಿ ಪಟ್ಟಿ ಎತ್ತೋದನ್ನ ಪ್ರತಿಭಟಿಸೋನು ಎಂದ ಯಂಕಟೇಶಿ.
ಇದನನೆಲ್ಲ ಕೆಳುತ್ತಾ ಕುಳಿತಿದ್ದ ಸತ್ಯಣ್ಣ ಯಂಕಟೇಶಿ ಹೆಳೋದು ಸರಿಐತಿ. ಆದ್ರ ಈಗ ದೇವರು ಎಂಬ ಪೊಳ್ಳುತನದ ವಿರುದ್ಧ ಪ್ರತಿಭಟಸಲು ಇನ್ನೂ ಕಾಲ ಪಕ್ವ ಆಗಿಲ್ಲ ಅಂತ ನನಗನಿಸತೈತಿ. ಇವತ್ತು ಯಾರ ಮನಿ ಕಳಕೊಂಡು ನಿರ್ಗತಿಕರಾಗಿರೋ ಪಾತರದ ನಿಂಗವ್ವ, .. ಅರನ್ನು ಹೋಗಿ ಕೇಳಿದರು ಅವರು ನಮಗ ಮನಿ ಕಟ್ಟಿಸಲಿಕ್ಕೂ ಅಷ್ಟ ಐತಿ ಹನುಮಪ್ಪಗ ಗುಡಿ ಕಟ್ಟಿಸರಿ ಅಂತ ಹೆಳತಾರ. ನಾವ ಯಾರ ಬಗ್ಗೆ ಬಡಿದಾಡತಿವೋ ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಬರೋವರೆಗೂ ನಮ್ಮಂತಹ ಹೋರಾಟಗಾರರಿಗೆ ಸೋಲಾಗತೈತಿ. ಅದಕ್ಕ ನನಗ ಪಟ್ಟಿ ಎತ್ತೋರನ್ನ ತಡೆಯೋದು ಸರಿಯಲ್ಲ ಅಂತ ಅನಸತೈತಿ.
ನೀ ಹೇಳು ಮಾತಿಗೆ ಕಬಲ ಆಕ್ಕೆನಿ. ಆದ್ರ ಕಾಲ ಯಾವಾಗ ಪಕ್ವವಾಗೋದು. ನಾವು ಹಿಂಗ ಪಟ್ಟಭದ್ರ ಹಿತಾಶಕ್ತಿಗಳು ಹೆದರಕೋತ ಹೋದ್ರ ಕಾಲ ಈಗ ಹ್ಯಾಂಗ ಐತೋ ಮುಂದನೂ ಹಾಂಗ ಬಿದ್ದಿರತೈತಿ. ನಾವ ಈಗ ಹೋರಾಟ ಆರಂಭಿಸಿದರ ಮುಂದಿನ ಪಿಳಿಗೆಗಾದ್ರೂ ಅನುಕೂಲ ಆಕ್ಕೆತಿ. ಇಂತಹ ಸಣ್ಣ ಸಣ್ಣ ಪ್ರತಿಭಟನೆಗಳೆ ಕಾಲವನ್ನು ಹಣ್ಣ ಮಾಡತಾವು.
‘ಮಾತಾಡೋದು ಸಾಕಿನ್ನ. ಮಾತಿಗೆ ಮೊದಲು ಕೆಲಸ ಮಾಡೂನು. ನಾಳೆ ಬ್ಯಾಡರ ಓಣ್ಯಾಗ ತಿಮ್ಮರಾಯಿ ಬಂಟರು ಪಟ್ಟಿ ಎತ್ತಾಕ ಬರತಾರ. ಅಲ್ಲಿ ಹೋಗಿ ತಡೆಯೋನು’ ಎಂದು ಪಿಂಜಾರ ಮಾಬು ಪ್ರತಿಭಟನೆಗೆ ತಾನು ಸಜ್ಜುಗೊಂಡಿರೋದನ್ನ ಉತ್ಸಾಹದಿಂದಲೇ ವ್ಯಕ್ತಪಡಿಸಿದ
ಆದ್ರ ಒಂದು ಮಾತು ನಮ್ಮವರ್‍ಯಾರು ತಿಮ್ಮರಾಯಿ ಬಂಟರ ಮ್ಯಾಲ ಕೈ ಮಾಡೋನು ಬ್ಯಾಡ. ನಮ್ಮ ಸಂಘದ ದ್ಯೆಯೋzಶದಂತೆ ಎಲ್ಲರೂ ಅಹಿಂಸಾತ್ಮಕವಾಗಿಯೆ ಹೋರಾಡೂನು.
ಈಗ ಸರಿ ಈ ಚರ್ಚಾ ಇಷ್ಟಕ್ಕ ಸಾಕು ಈಗ ಮತ್ತೊಂದು ಮುಖ್ಯಾವದ ವಿಷಯಯಂದ್ರ ಬೆಂಗಳೂರಿನ ಚಾರ್ವಾಕ ಸಂಸ್ಥೆಯವರು ಒಂದು ಸಣ್ಣ ಪೋನು ಮಾಡದ್ರೂ ಅಂತ ನಾ ನಿಮಗ ಮೊದಲ ತಿಳಿಸಿದ್ದೆ. ನಾಳೆ ಶುಕ್ರವಾರ ಸಂಜಿಕ ಬೆಂಗಳೂರಿನಿಂದ ಚಾರ್ವಾಕ ಸಂಸ್ಥೆಯ ೧೫ ಜನ ಕಾರ್ಯಕರ್ತರು ಒಂದು ಮಿನಿಡೋರ್ ಗಾಡಿಯೊಳಗ ತಾವು ಬೆಂಗಳೂರಿನದಾನಿಗಳಿಂದ ಸಂಗ್ರಹಿಸಿರುವ ಅಕ್ಕಿ, ಗೋದಿ, ಬೆಳೆ, ತಗಡ ಸೀಟು ಹೇರಕೊಂಡು ಬರಾಕಹತ್ಯಾರ. ನಾವು ಅವರನ್ನು ಎದುರುಗೊಂಡು ಎಲ್ಲ ವಸ್ತುಗಳು ಸರಿಯಾದ ನಿರ್ಗತಿಕರಿಗೆ ತಲುಪಿಸೋನು ಎನ್ನುತ್ತಾ ಯಂಕಟೇಶಿ ಮಿಟಿಂಗ್ ಮುಗಿಸಿದ.
* * * * *
ಅಂದುಕೊಂಡಂತೆ ಬುಧವಾರ ಸಂಜೆ ತಿಮ್ಮರಾಯಿಯ ಹುಡುಗರು ಮತ್ತು ಕೆಲವು ಗ್ರಾಮ ಪಂಚಾಯತಿ ಮೆಂಬರ್‌ಗಳು ಅವತ್ತು ಬ್ಯಾಡರ ಓಣಿಯನ್ನು ಪ್ರವೇಶ ಮಾಡಿದರು. ತಮಣ್ಣನ ಮನೆಯಿಂದ ಪ್ರಾರಂಭಿಸಿ ನಾಲ್ಕೆದು ಮನೆಗಳನ್ನು ದಾಟಿಕೊಂಡು ಗೋವಿಂದನ ಮನೆಗೆ ಬಂದ ಪಟ್ಟಿ ಎತ್ತುವವರು ಅಲ್ಲಿಯೆೇ ಮೇಲೆ ಕುಳಿತಿದ್ದ ಯಂಕ್ಟೇಶಿಯ ಟೀಮನ್ನ ಲೆಕ್ಕಿಸದೆ ‘ಒಳಗ ಯಾರಾದಿರಿ’ ಎಂದು ತೊಲ ಬಾಗಿಲ ಹತ್ರ ಹೋಗಿ ಒಳಗಡೆ ಹಣಿಕೆ ಹಾಕಿದರು.
ಯಾರು ಅನಕೋತ ಹೊರಬಂದ ಗೊವಿಂದನ ಅವ್ವ ಇಲ್ಲ ಯಪ್ಪ ನಮ್ಮ ಹಿರ್‍ಯಾ ಹೊರಗೋಗ್ಯಾನ ಅನ್ನುತ್ತಿರುವಾಗಲೇ ಅಲ್ಲಿಗೆ ಯಂಕಟೇಶಿ, ಗೋವಿಂದ ಮತ್ತು ಅವರ ಸಂಗಡಿಗರು ಬಂದರು. ಇವರನ್ನು ನೊಡಿ ಪಟ್ಟಿ ಎತ್ತುವವರು ಕಂಗಾಲಾಗುತ್ತಿರಬೇಕಾದರೆ ಗೋವಿಂದ ‘ನಮ್ಮುವ ನಮಗ ರಗಡ ತ್ರಾಸ ಅದಾವ. ನಾವ ಪಟ್ಟಿ ಕೋಡೋದಿಲ್ಲ’ ಎಂದ. ನೋಡ ತಮ್ಮಾ ಇದು ಊರ ಕೆಲಸ ಹಂಗನ್ನಬ್ಯಾಡೋ ಎಂದ ವಯಸ್ಸಾದ ಒಬ್ಬ ಮೆಂಬರ್. ಕೋಡಾಕ ಅಗಂಗಿಲ್ಲ ಅಂದ್ರ ಅಗಾಂಗಿಲ್ಲ ಕಾಕಾ. ಸಿಟ್ಟಿನಿಂದ ಮತ್ತೊಮ್ಮೆ ಒದರಿದ ಗೋವಿಂದ.
ನಡ್ರೆಪಾ ಮುಂದಲ ಮನಿಗೆ. ಹುಡುಗರ ಕೂಡ ಎನು ಮಾತು. ಅವರಪ್ಪ ಬಂದಾಗ ಕೇಳೂನು. ಎಂದು ಅಜ್ಜ ಆಗುವ ಜಗಳ ತಪ್ಪಿಸಲಿಕ್ಕೆ ಅವಸರ ಮಾಡಿದ. ಆದರೆ ‘ಯಂಕಟೇಶಿ ಗೊಂವಿಂದನ ಮನಿ ಅಷ್ಟ ಅಲ್ಲ. ಇಲ್ಲಿ ಎಲ್ಲರೂ ಬಡ ಬಗ್ರ ಅದಾರ. ಹಿಂಗಾಗಿ ಯಾರ ಮನಿಯಾಗೂ ಪಟ್ಟಿ ಎತ್ತಾಕ ನಾವ ಬಿಡೋದಿಲ್ಲ’ ಯಂಕಟೇಶಿ ಪಟ್ಟು ಹಿಡಿದ. ಅಷ್ಟೊತ್ತಿಗಾಗಲೆ ಪಟ್ಟಿ ಎತ್ತುವವರಲ್ಲಿ ಒಬ್ಬಾಂವ ಓಡಿ ಹೊಗಿ ತಿಮ್ಮರಾಯಿಗೆ ಸುದ್ದಿ ಮುಟ್ಟಿಸಿದ.
ಇಂತ ವ್ಯಾಳೆಕ್ಕಾಗಿಯೆ ಕಾಯ್ದು ಕುಳಿತಿದ್ದ ತಿಮ್ಮರಾಯಿ ಮತ್ತು ಅವನ ಹಿಂಬಾಲಕರು ಗೋವಿಂದನ ಮನೆಕಡೆ ದಾಬುಗಾಲು ಹಾಕುತ್ತ ಓಡೋಡಿ ಬಂದರು. ತಿಮ್ಮರಾಯಿ ಓಡಾಕ ಹತ್ಯಾನಂದ್ರ ಎನೋ ದೊಡ್ಡ ಹಕಿಕತ್ ಇರಬೌದು ಅನಕೊಂಡು ತಮ್ಮ ಬಿದ್ದ ಮನೆಗಳನ್ನು ಅಲ್ಲಿಯೆ ಬಿಟ್ಟು ತಿಮ್ಮರಾಯಿ ಬೆನ್ನಿಗೆ ಬಿದ್ದರು.
‘ಆ ನನ್ನ ಮಗಂದು ತಳವಾರ ಯಂಕಂದು ಬಾಳ ಆಗೇತಿ. ಗುಡಿ ಕಟ್ಟಸಾಕ ಪಟ್ಟಿ ಕೋಡಪಾ ಅಂದ್ರ ತನ್ನ ಗುಡಿ ತಾ ಉಳಿಸಿಕೊಳ್ಳಲಾರದ ಹನುಮಪ್ಪ ನಮ್ಮೂರಿಗೆ ಬ್ಯಾಡ ಅಂತ ಹನುಮಪ್ಪನ ಬೈತಾನ. ಇವತ್ತ ಐತಿ ಆ ಮಗಂದ’ ಎಂದು ಒದರಾಡುತ್ತಲೆ ತನ್ನ ಬೆನ್ನಿಗೆ ಬಿದ್ದವರನ್ನು ಜಗಳಕ್ಕೆ ಹುರಿದುಂಬಿಸುತ್ತ ಯಂಕಟೇಶಿಯ ತಪ್ಪುಗಳನ್ನು ಜನರಿಗೆ ಮನದಟ್ಟು ಮಾಡತೊಡಗಿದ. ಜನ ಕೂಡ ಊರ ಹನುಮಪ್ಪಗ ಬೈಯ್ಯೋ ಆ ಯಂಕಗ ಒಂದ ಗತಿ ಕಾಣಿಸೇಬಿಡೂನು ಎನ್ನುತ್ತಾ ತಿಮ್ಮರಾಯಿಯನ್ನು ಬೆಂಬಲಿಸುತ್ತಾ ಅವನ ಬೆನ್ನು ಹತ್ತಿದರು.
ಬರುತ್ತಿರುವಾಗಲೆ ಬಿದ್ದ ಮನೆಗಳ ಗೊಡೆಗಳಿಂದಲೆ ಹಿಡಿಗಲ್ಲುಗಳನ್ನು ತೆಗೆದುಕೊಳ್ಳುತ್ತಾ ಮನೆಗಳ ಜಂತಿಯ ಕಟ್ಟಿಗೆಗಳನ್ನು ಕಿತ್ತುಕೊಳ್ಳತ್ತಲೆ ಜನ ತಿಮ್ಮರಾಯಿಯ ಹಿಂದೆ ಓಡತೊಡಗಿತು. ಗೊವಿಂದನ ಮನಿ ಕಟ್ಟಿ ಮ್ಯಾಲ ಪ್ರತಿಭಟನೆಗೆ ಕುಳಿತಂತೆ ಕುಳಿತಿದರ್‍ದ ಯಂಕಟೇಶಿ ಮತ್ತು ಅವನ ಗೆಳೆಯರ ಮೆಲೆ ಗುಂಪು ಒಮ್ಮೆಲೆ ದಾಳಿ ಮಾಡಿ ಕಲ್ಲು ಕಟ್ಟಿಗೆಗಳಿಂದ ಜಜ್ಜತೊಡಗಿತು. ತಲೆಯಿಂದ ರಕ್ತ ಕೆಳಗಿಳಿಯುತ್ತಿರುಬೇಕಾದರೆ ಯಂಕಟೇಶಿಗೆ ಸತ್ಯಣ್ಣ ಕಾಲ ಪಕ್ವವಾಗಿಲ್ಲ ಮಾತು ನೆನಪಿಗೆ ಬರತೊಡಗಿತು.
* * *
chennagide kathe……..ishtavaaytu…sir
ishtavaytu
ಕಥೆ ಅದ್ಭುತ.