ಲೇಖನ

ಎಲ್ಲಿ ಹೋದವು ಆ ದಿನಗಳು?: ಗೌರಿ. ಚಂದ್ರಕೇಸರಿ

ಗುರುವಿಗೊಬ್ಬ ಯೋಗ್ಯ ಶಿಷ್ಯ, ಶಿಷ್ಯನಿಗೊಬ್ಬ ಜ್ಞಾನಿಯಾದ ಗುರು ಇವೆರಡೂ ಲಭ್ಯವಾಗುವುದು ಅವರಿಬ್ಬರ ಅದೃಷ್ಟವೆಂದೇ ಹೇಳಬೇಕು. ವಿದ್ಯಾರ್ಥಿಗಳ ಜ್ಞಾನದಾಹವನ್ನು ನೀಗಿಸುವ ಗುರು ನಿರ್ಧಿಷ್ಟ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿಕೊಂಡಿರಬೇಕಾಗುತ್ತದೆ. ಸತತ ಪರಿಶ್ರಮಿಯಾಗಿರಬೇಕಾಗುತ್ತದೆ. ತಾವು ಬೋಧಿಸುವ ವಿಷಯದ ಕುರಿತು ತುಡಿತವನ್ನು ಹೊಂದಿರಬೇಕಾಗುತ್ತದೆ. ಅಂದಾಗಲೇ ಅದನ್ನು ಮತ್ತೊಬ್ಬರೊಂದಿಗೆ ಪ್ರಸ್ತುತಪಡಿಸಬಹುದು ಹಾಗೂ ಚರ್ಚಿಸಬಹುದು.‘ಗುರು’ ಎಂಬ ಶಬ್ದವೇ ಕತ್ತಲೆಯನ್ನು ಹೊಡೆದೋಡಿಸುವುದು ಎಂಬ ಅರ್ಥವನ್ನು ಹೊಂದಿದೆ.

ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದಿದ ನಾನು ಪ್ರಸಿದ್ಧ ಸಾಹಿತಿಗಳು, ವಿಮರ್ಶಕರು, ವಾಗ್ಮಿಗಳು, ಭಾಷಾ ಪಾರಂಗತರನ್ನು ಗುರುಗಳನ್ನಾಗಿ ಪಡೆದದ್ದು ನನ್ನ ಅದೃಷ್ಟವೆಂದೇ ಹೇಳಬೇಕು. ಇಪ್ಪತ್ತು ವರ್ಷಗಳು ಸಂದರೂ ಪ್ರತಿಯೊಬ್ಬ ಶಿಕ್ಷಕರ ಹೆಸರೂ, ಅವರು ಬೋಧಿಸಿದ ವಿಷಯವಿನ್ನೂ ಅಚ್ಚಳಿಯದೇ ನೆನಪಿನಲ್ಲಿವೆ. ಅವರಿಗೆ ಬೋಧನೆಯಲ್ಲಿ ಹಲವಾರು ವರ್ಷಗಳ ಅನುಭವವಿದ್ದರೂ ಪ್ರತಿನಿತ್ಯ ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲೋ ಇಲ್ಲಾ ತಮ್ಮ ಕೊಠಡಿಗಳಲ್ಲಿ ಕುಳಿತು ಅದ್ಯಯನ ಮಾಡುವಂತಹ ಶಿಕ್ಷಕರಿದ್ದರು. ಒಬ್ಬ ಪರಿಪೂರ್ಣ ಶಿಕ್ಷಕರಾಗಿ ವಿದ್ಯಾರ್ಥಿಗಳ ಎದುರು ನಿಂತು ಅಂದಿನ ಶಿಕ್ಷಕರು ಬೋಧಿಸುತ್ತಿದ್ದರು. ಅದರಂತೆಯೇ ನಮಗೆ ತಿಳಿಯದ ಎಷ್ಟೋ ಸಮಸ್ಯೆಗಳಿಗೆ ಅವರು ಉತ್ಸಾಹದಿಂದ ತಾಳ್ಮೆಯಿಂದ ಉತ್ತರಿಸುವ ಮನೋಭಾವದವರಾಗಿದ್ದರು. ಶಿಕ್ಷಕ ವೃತ್ತಿಯನ್ನು ಪೂಜನೀಯವಾಗಿ ಕಾಣುವಂತಹವರಾಗಿದ್ದರು. ತಮ್ಮ ವೃತ್ತಿಯ ಬಗ್ಗೆ ಸಂತೃಪ್ತಿಯನ್ನು ಹೊಂದಿದವರಾಗಿದ್ದರು. ಅದೇರೀತಿ ಹೊಸದಾಗಿ ಶಿಕ್ಷಕರಾಗಿ ನೇಮಕ ಗೊಂಡವರಲ್ಲೂ ಆ ಪ್ರಬುದ್ಧತೆ ಕಂಡು ಬರುತ್ತಿತ್ತು.

ಇತ್ತೀಚೆಗೆ ಆ ದಿನಗಳು ಎಲ್ಲಿ ಹೋದವು ಎಂಬ ನಿರಾಸೆ ಇಣುಕುತ್ತದೆ.ಅಂಥ ಅಮೂಲ್ಯ ದಿನಗಳು ಆ ಶಿಕ್ಷಕರ ನಿವೃತ್ತಿಯೊಂದಿಗೇ ಮುಗಿದು ಹೋದವೇನೋ ಎಂದು ಬೇಸರವಾಗುತ್ತದೆ. ಎಂಜಿನಿಯರ್, ಡಾಕ್ಟರ್ ವೃತ್ತಿಯತ್ತ ಮುಖ ಮಾಡುತ್ತಿರುವ ಪ್ರತಿಭಾವಂತರು ಒಂದೆಡೆಯಾದರೆ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡವರು ವಿದೇಶದ ಮೋಹಕ್ಕೆ ಸಿಲುಕಿ ರೆಕ್ಕೆ ಕಟ್ಟಿಕೊಂಡು ಹಾರಿಬಿಡುತ್ತಾರೆ. ಇಲ್ಲಿ ಸಲ್ಲಬೇಕಾದವರು ಇನ್ನೆಲ್ಲಿಯೋ ಸಲ್ಲುತ್ತಾರೆ. ಸ್ನಾತಕೋತ್ತರ ಪದವಿ ಮುಗಿಸಿ ಶಿಕ್ಷಕ ವೃತ್ತಿಯ ಬೇಟೆಯಲ್ಲಿರುವವರು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆಯೋ ಇಲ್ಲಾ ಅಥಿತಿ ಉಪನ್ಯಾಸಕರಾಗಿಯೋ ಅನುಭವಕ್ಕೋಸ್ಕರ ಶಿಕ್ಷಕರಾಗುತ್ತಾರೆ. ಇದು ಎಲ್ಲಾ ಕಾಲೇಜುಗಳಲ್ಲಿನ ಇತ್ತೀಚಿಗಿನ ಪರಿಸ್ಥಿತಿ. ಜ್ಞಾನದ, ಅದ್ಯಯನದ, ಅನುಭವದ ಕೊರತೆ ಇರುವ ಇಂಥ ಉಪನ್ಯಾಸಕರಿಂದ ಇಂದಿನ ವಿದ್ಯಾರ್ಥಿಗಳು ಏನನ್ನುತಾನೇ ನಿರೀಕ್ಷಿಸಲು ಸಾಧ್ಯ.? ವಿಷಯ ಜ್ಞಾನವಿದ್ದರೂ ಕಲಿಸುವ ಕೌಶಲ್ಯ, ತಂತ್ರಗಾರಿಕೆ ಇಲ್ಲದವರು, ವೇದಿಕೆಯ ಭಯವಿರುವ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದ್ದಾರೆ. ಇವರ ಆಯ್ಕೆ ಪ್ರಕ್ರಿಯೆ ಕೂಡ ಕೇವಲ ಇವರ ಅಂಕಪಟ್ಟಿಗೆ ಸೀಮಿತವಾಗಿರುತ್ತದೆ. ಕೆಲವೊಮ್ಮೆ ಶಿಫಾರಸುಗಳ ಪ್ರಭಾವದಿಂದಲೂ ಆಯ್ಕೆಗಳು ನಡೆಯುತ್ತವೆ. ಇಲ್ಲಿ ಬಲಿಪಶುಗಳಾಗುವುದು ವಿದ್ಯಾರ್ಥಿಗಳು ಹಾಗೂ ಪಾಲಕರು.

ಇಂದಿನ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವಿಲ್ಲ, ಏಕಾಗ್ರತೆ ಇಲ್ಲ. ಶಿಕ್ಷಕರನ್ನು ಟೀಕಿಸುವುದು, ಉಪನಾಮಧೇಯಗಳಿಂದ ಕರೆಯುವುದು, ಅವನು/ಅವಳು ಎಂಬ ಏಕವಚನಗಳಿಂದ ಸಂಬೋಧಿಸುವುದು ಸಾಮಾನ್ಯವಾಗಿದೆ. ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಟ್ಯೂಷನ್ ಕ್ಲಾಸುಗಳಿಂದ ಕಾಲೇಜಿನ ಮಹತ್ವ, ಗಾಂಭಿರ್ಯ ಇಂದು ನಶಿಸಿ ಹೋಗುತ್ತಿವೆ. ಕೇವಲ ಎಂಜಾಯ್ ಮಾಡಲು, ಹಾಜರಾತಿಗಾಗಿ ಮಾತ್ರ ಎನ್ನುವಷ್ಟರ ಮಟ್ಟಿಗೆ ಕಾಲೇಜು ಸೀಮಿತವಾಗಿವೆ.ಹಿಂದೆ ಶಿಕ್ಷಕ ವೃತ್ತಿಗಿದ್ದ ಗೌರವ, ಭಯ, ಭಕ್ತಿಗಳು ದಿನಗಳೆದಂತೆ ಇಳಿಮುಖವಾಗುತ್ತಿದೆ. ಈ ವೃತ್ತಿಯನ್ನು ಪ್ರೀತಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಗುರುಕುಲ, ಗುರು-ಶಿಷ್ಯ ಪರಂಪರೆಯನ್ನು ಹೊಂದಿದ ದೇಶ ನಮ್ಮದು. ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಿದವರು ನಾವು. ಬೋಧಿಸುವ ಶಿಕ್ಷಕ ವೃತ್ತಿಯು ಎಲ್ಲ ವೃತ್ತಿಗಳಿಗಿಂತ ಮಿಗಿಲಾದದ್ದು. ಅದರಿಂದ ಸಿಗುವ ಆತ್ಮತೃಪ್ತಿ ಇನ್ನಾವ ವೃತ್ತಿಯಲ್ಲಿಯೂ ಇರಲಿಕ್ಕಿಲ್ಲ. ಗುರಿ ಮುಂದೆ, ಗುರು ಹಿಂದೆ ಎಂಬ ಉಕ್ತಿಯಂತೆ ಉತ್ತಮ ಗುರು ಯೋಗ್ಯ ಶಿಷ್ಯರಿದ್ದಲ್ಲಿ ಕಳೆದು ಹೋದ ಆ ದಿನಗಳು ನಮ್ಮ ಮುಂದಿನ ತಲೆಮಾರಿಗೂ ದೊರಕಬಹುದೇನೋ.
ಗೌರಿ.ಚಂದ್ರಕೇಸರಿ,


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *