ಪಂಜು-ವಿಶೇಷ

‘ಎಲ್ಲಾ ನ್ಯೂನತೆಗಳಾಚೆ ಮನಸ್ಸು ಜೀವಿಸಲಿ’: ದಿವ್ಯ ಆಂಜನಪ್ಪ

ಆ ತಾಯಿ ದಿನವೂ ತನ್ನ ಮಗುವನ್ನು ಶಾಲೆಗೆ ಕರೆದೊಯ್ಯುತ್ತಿದ್ದಳು. ಮಗುವಿಗೆ ಇನ್ನೂ ಮೂರುವರೆ ವರುಷಗಳು. ಒಂದೇ ಬಸ್ಸಿನ ಪ್ರಯಾಣಿಕಳಾಗಿ ನಾನು ಸಹ ಆಗಾಗ ಇವರನ್ನು ಗಮನಿಸುತ್ತಿದ್ದೆನು. ಮಗುವಿಗೆ ಇನ್ನೂ ಸರಿಯಾಗಿ ನಾಲಿಗೆ ಹೊರಳದು, ಕಿವಿಯೂ ತುಸು ಮಂದವೇ. ಹಾಗಾಗಿ ಆಕೆ ಒಂದು ವಿಶೇಷ ಅಗತ್ಯಯುಳ್ಳ ಶಾಲೆಗೆ ಸೇರಿಸಿದ್ದರು. ಮಗು ಮುದ್ದು ಮುದ್ದುಗಿದ್ದು ಬಸ್ಸಿನ ಎಲ್ಲರ ಗಮನವನ್ನು ಸೆಳೆದಿತ್ತು. ಹಾಗೆಯೇ ಅಕ್ಕಪಕ್ಕದವರನ್ನು ಮುಟ್ಟಿ ಮುಟ್ಟಿ ಮಾತನಾಡಿಸಿ ನಕ್ಕು ಮನ ಗೆದ್ದಿತ್ತು. ಮಗುವಿನ ಮುಗ್ಧತೆಯು ಅದರ ನ್ಯೂನತೆಯನ್ನು ನಮ್ಮೆಲ್ಲರ ಮನಗಳಿಂದ ಮರೆಮಾಚಿಬಿಟ್ಟಿತ್ತು. ಒಂದಷ್ಟು ಹೊತ್ತು ಸುಮ್ಮನೆ ಆ ತಾಯಿ ಮತ್ತು ಮಗುವನ್ನು ನೋಡುತ್ತಾ ಕುಳಿತೆ, ಆ ತಾಯಿ ತನ್ನ ಸುತ್ತಲಿನ ಜಗವನ್ನೇ ಮರೆತು ತನ್ನ ಮಗುವನ್ನು ಮುದ್ದಿಸುತ್ತ್ಳಿದ್ದಳು. ಎಷ್ಟು ಪ್ರೀತಿ?! ಏನೇನೋ ತುಂಟತನದಿ ಮಾತನಾಡಿಸುತ್ತ ಮಗುವನ್ನು ನಗಿಸುತ್ತಿದ್ದಳು. ಮಗುವಿನ ಸ್ವಚ್ಛಂದ ನಗುವಿನಲ್ಲಿ ತನ್ನೆಲ್ಲಾ ನೋವನ್ನು ಮರೆಯುತ್ತಿದ್ದಳೋ ಏನೋ ಆ ತಾಯಿ; ಮನಸ್ಸಿಗೆ ತುಸು ಘಾಸಿ ಎನಿಸಿತು. ತನ್ನ ಮಗುವು ಎಲ್ಲರಂತೆ ಮಾತನಾಡಿ, ಕೇಳುವಂತ್ತಿದ್ದರೆ ಎಷ್ಟು ಚಂದವಿತ್ತೋ ಆ ತಾಯಿಗೆ. ಮುಂದೆ ಅವರ ನಿಲ್ದಾಣದಲ್ಲಿ ಇಳಿದು ಹೋದರು. ಇದಾದ ಎಷ್ಟೊ  ತಿಂಗಳುಗಳ ನಂತರ ಮತ್ತೆ ಕಂಡಾಗ; ಸೌಮ್ಯವಾಗಿದ್ದ ಮಗುವು ಈಗ ಹೆಚ್ಚು ಹಟಮಾರಿಯಾಗಿದೆ. ಕಿವಿಗೆ ಅಳವಡಿಸಿದ ಹಿಯರಿಂಗ್ ಏಡ್ನಿಂದ ಚೆನ್ನಾಗಿ ಕೇಳುತ್ತಿದ್ದು ಮಾತನ್ನು ಆಡುತ್ತಲಿದೆ ಆದರೆ ಏನೋ ತುಸು ಒರಟುತನವಿದ್ದಂತೆ ಭಾಸವಾಯಿತು. ತಾಯಿಯ ಮಾತನ್ನು ಈಗ ಕೇಳುತ್ತಿಲ್ಲ; ಆ ಅಮ್ಮನಿಗೋ ಬಹಳ ಆತುರವಾಗಿದೆ. ಬೇಗ ಬೇಗನೆ ಎಲ್ಲವನ್ನೂ ಮಗುವು ಕಲಿತುಬಿಡಬೇಕು. ಈಗ ಮುದ್ದಿಗೆ ಸಮಯವಿಲ್ಲ. ಬಸ್ ಪ್ರಯಾಣದ ದಾರಿಯುದ್ದಕ್ಕೂ ಈಗ ಅವರದು ಬರೀ ಪಾಠವೇ ಆಗಿದೆ. ಅವರು ಬಸ್ ಹತ್ತಿದಾಗಿನಿಂದ ಇಳಿವವರೆಗೂ ಒಂದೇ ಏರು ದ್ವನಿ!. ಅವರ ಮಾತನ್ನು ಮಗುವು ಕೇಳುತ್ತಿಲ್ಲ; ಅವರ ಜೋರು ಮಾತುಗಳಿಗೆ ಬಸ್ಸಿನ ಜನರೆಲ್ಲರೂ ಕಿರಿಕಿರಿಗೊಳ್ಳುತ್ತಿದ್ದರು. ಅವರು ಇಳಿದು ಹೋದ ನಂತರ ಬಸ್ಸಿನ ಚಾಲಕರು ಹೇಳಿದ ಮಾತಿಗೆ ನನಗೋ ಎದೆ ಝಲ್ಲೆಂದು ಹೋಯ್ತು. ''ಆ ಮಗುಗೆ ಕಿವಿ ಕೇಳಿ ಮಾತಾಡುತ್ತೋ ಇಲ್ವೋ ಆದರೆ ಆಯಮ್ಮ ಹೀಗ್ ಹೊಡ್ಕೊಂಡ್ ಹೊಡ್ಕೊಂಡ್ ಇವರೇ ಬೇಗ ಹೋಗ್ಬಿಡ್ತಾರೆ"!… ಮನಸ್ಸಿಗೇಕೋ ಬಹಳ ಬೇಸರವೆನಿಸಿತು. 

ಅಂಗವಿಕಲತೆ ಎಂಬುದು ಹುಟ್ಟಿನಿಂದಲೋ ಇಲ್ಲವೆ ಕೆಲವು ಆಕಸ್ಮಿಕ, ಅಪಘಾತಗಳಿಂದಲೋ ಬರುವುದುಂಟು. ವಿಕಲತೆಗಳನ್ನು ಹೀಗೆ ಹೇಳಬಹುದು; ದೃಷ್ಠಿ ದೋಷ, ಶ್ರವಣ ದೋಷ, ವಾಕ್ ದೋಷ (ಮಾತು ಬಾರದಿರುವುದು), ಬುದ್ದಿ ವಿಕಲತೆ ಇಲ್ಲವೆ ಮಂದ ಬುದ್ದಿ, ದೈಹಿಕ ವಿಕಲತೆ (ಮೂಳೆ ವಕ್ರತೆ ಇತ್ಯಾದಿ), ಬಹುವಿಕಲತೆ, ಕಲಿಕೆಯಲ್ಲಿ ಹಿಂದುಳಿದವರು ಎಂದು ಗುರ್ತಿಸಲಾಗಿದೆ. ಮಗುವೊಂದು ಒಂಭತ್ತು-ಹತ್ತು ತಿಂಗಳಿನಲ್ಲಿ ಶಬ್ದವಾದಲ್ಲಿ ತಿರುಗಿ ನೋಡದೆ ಉಳಿವುದು ಮುಂದುವರೆದರೆ ಅದಕ್ಕೆ 'ಶ್ರವಣ ದೋಷ'ವಿರುವ ಸಂಭವವಿದೆ. ಜಾಗೃತರಾಗಿ ಚಕಿತ್ಸೆಯನ್ನು ಪ್ರಾರಂಭಿಸಿದ್ದಲಿ ಮಗುವು ಶೀಘ್ರದಲ್ಲಿ ಗುಣಮುಖವಾಗಲೂ ಬಹುದು. ವಯಸ್ಕರಾದಾಗ ಎಲ್ಲರಂತೆಯೇ ಜೀವನವನ್ನೂ ಸಾಗಿಸಬಹುದಾಗಿದೆ. ಕಿವಿ ಕೇಳುವುದು ನಿಂತಲ್ಲಿ ಅಲ್ಲಿ ಮಾತನ್ನು ಆಲಿಸುವ ಸಾಮರ್ಥ್ಯವಿಲ್ಲದೆ 'ಮಾತು' ಕಲಿಯಲೂ ಸಹ ಮಗುವಿಗೆ ಸಾಧ್ಯವಾಗುವುದಿಲ್ಲ. 'ದೃಷ್ಠಿ ದೋಷ' ತದನಂತರದ ವಯಸ್ಸಿನಲ್ಲಿ ಮಾತ್ರ ಕಂಡಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಶಾಲೆಗೆ ಹೋಗುವಂತಹ ಇಲ್ಲವೆ ಮಾತನಾಡುವಂತಹ ಮಕ್ಕಳಲ್ಲಿ ಈ ದೋಷವನ್ನು ಕಂಡುಕೊಳ್ಳವರು. ಉಳಿದಂತೆ ಹಿರಿಯರ ಗಮನಕ್ಕೆ ಬರುವುದು ತೀರಾ ವಿರಳ. 'ಬುದ್ದಿ ವಿಕಲ್ಯ'ವು ಆರಂಭಿಕ ಎರಡು ಮೂರನೇ ವಯಸ್ಸಿನಲ್ಲಿ ಅರಿವಿಗೆ ಬರುವಂತಹುದು. ಇತರೆ ಮಕ್ಕಳಂತೆ ಮಾನಸಿಕ ಬೆಳವಣಿಗೆಯನ್ನು ತೋರದಿದ್ದ ಸಂದರ್ಭದಲ್ಲಿ ಶಂಕಿಸಬಹುದಾಗಿದೆ. ಎಲ್ಲರಿಗೂ ತಮ್ಮ ಮಕ್ಕಳು ಸ್ವಸ್ಥರಾಗಿದ್ದಾರೆಂಬ ಭಾವವಿರುತ್ತದೆ. ಆಕಸ್ಮಿಕವಾಗಿ ಗಮನಕ್ಕೆ ಬಂದಾಗಲೇ ಅವರು ಎಚ್ಚೆತ್ತುಕ್ಕೊಳ್ಳುವರು. ಅದಲ್ಲದೆ ಸ್ವಯಂ ಇಚ್ಛೆಯಿಂದಲೂ ಮಕ್ಕಳಿಗೆ ಈ ಕುರಿತು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಹುಟ್ಟಿನಿಂದಲೇ ಬೆಳವಣಿಗೆಯಲ್ಲಿ ದೋಷವಿದ್ದು; ಮೂಳೆಗಳು ವಕ್ರವಾಗಿ ಬಾಗಿ 'ದೈಹಿಕ ಅಂಗವಿಕಲತೆ'ಯು ಉಂಟಾಗಬಹುದು. ಇನ್ನು ಕಲಿಕೆಯಲ್ಲಿ ಹಿಂದುಳಿದವರು ಎಂದಾಗ; ಎಷ್ಟೇ ಕಷ್ಟಪಟ್ಟು ತಮ್ಮ ಮಗುವು ಓದಿದರೂ, ಇನ್ನಿಲ್ಲದೆ ಶ್ರಮಪಟ್ಟರೂ ಅದೇಕೋ ಪರೀಕ್ಷೆಗಳಲ್ಲಿ ಏನೂ ಬರೆಯದೆ ಬರುತ್ತಾನೆ/ತ್ತಾಳೆ ಎನ್ನುವ ಪೋಷಕರ ಆತಂಕ್ಕಕ್ಕೆ ಮಗುವಿನ ಪರಿಸ್ಥಿತಿಯ ಅಂದಾಜಿರುವುದಿಲ್ಲ. ಇದನ್ನೇ ನಾವು ಕಲಿಕೆಯಲ್ಲಿ ಹಿಂದುಳಿಯುವಿಕೆಗಳೆಂದು ಶಾಲಾ ಹಂತಗಳಲ್ಲಿ ಗುರ್ತಿಸಲಾಗುತ್ತದೆ. ಮತ್ತೆ ಮತ್ತೆ ಆಲಿಸುವುದು, ಓದುವುದು ಮತ್ತು ಬರೆಯುವುದು. ವಸ್ತಗಳನ್ನು ಮುಟ್ಟಿ ನೋಡಿ ಕಲಿವುದು, ಚಿತ್ರ-ಚಲನ ಚಿತ್ರಗಳನ್ನು ವೀಕ್ಷಿಸಿ ಅರ್ಥ ಮಾಡಿಕೊಳ್ಳುವುದು, ಹೆಚ್ಚಿನ ಪುನರಾವರ್ತನೆಯೇ ಇದಕ್ಕೆ ಪರಿಹಾರ. ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಮೇಲೆ ಕಂಡ ಎರಡಕ್ಕೂ ಹೆಚ್ಚಿನ ನ್ಯೂನತೆಗಳು ಒಬ್ಬರಲ್ಲೇ ಕಂಡುಬಂದಲ್ಲಿ ಅದನ್ನು 'ಬಹುವಿಕಲತೆ'ಯೆಂದು ಹೇಳಲಾಗುವುದು.

ಹುಟ್ಟಿನಿಂದಲೂ ಆರೋಗ್ಯವಾಗಿದ್ದು ನಂತರದ ದಿನಗಳಲ್ಲಿ ಯಾವುದೋ ಒಂದು ಅಪಘಾತದಿಂದಲೂ ಈ ಮೇಲಿನ ಯಾವುದೇ ವಿಕಲತೆಯುಂಟಾಗಬಹುದು. ಅನುವಂಶೀಯತೆಯಿಂದಲೂ ಕೆಲವು ಬಾಧಿಸಬಹುದು. ಇವುಗಳಲ್ಲದೆ ರೋಗಗಳಿಗೆ ತುತ್ತಾಗಿಯೂ ವಿಕಲತೆಯುಂಟಾಗಬಹುದು. ಉದಾ; ಪೋಲಿಯೋ. ಉಚಿತ ಸಂದರ್ಭದಲ್ಲಿ ಔಚಿತ್ಯ ಚಿಕಿತ್ಸೆ/ಲಸಿಕೆಗಳನ್ನು ನೀಡದ ಕಾರಣ ಮಕ್ಕಳು ಮುಂದೆ ಅಸಾಮಾನ್ಯ ಸ್ಥಿತಿಗಳಿಂದ ಧೃತಿಗೆಡುವಂತಾಗುತ್ತದೆ. 

ನ್ಯೂನತೆಯುಳ್ಳ ಮಕ್ಕಳ ಇಂತಹ ಸ್ಥಿತಿಗೆ ತಂದೆ-ತಾಯಿಯರೂ ಸಹ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹತಾಶರಾದ ಪೋಷಕರೆದುರು ಮತ್ತೂ ಜರ್ಜರಿತರಾದ ಮಕ್ಕಳನ್ನು ಸಮಾಜದಲ್ಲಿ ಅಂದು 'ಕುರುಡ', 'ಕಿವುಡ', 'ಮೂಗ', 'ಕುಂಟ', 'ಹುಚ್ಚ/ಚ್ಚಿ' ಎಂದೋ ಕರೆಯುವ ಕುಹುಕವಿತ್ತು. ಅದೊಂದು ಗತ ಕಾಲ. ಆ ರೀತಿಯ ಮಾನಸಿಕವಾಗಿ ಹಿಂಸಿಸುವ ಯಾವ ಪರ್ಯಯ ಪದವನ್ನೂ ಕರೆಯುವಂತಿಲ್ಲ. ಇದು ಎಷ್ಟೊ ಜನರಿಗೆ ಇನ್ನೂ ಅರಿವಿಗೆ ಬಂದಿಲ್ಲವೇನೋ ಎಂದೆನಿಸುತ್ತದೆ. ಅಸಹಾಯಕರಿಗೆ ಸಹಾಯದ ಹಸ್ತ ಚಾಚೋಣ ಸಾಧ್ಯವಿದ್ದರೆ; ಇಲ್ಲದಿರೆ ಅವರಂತೆ ಅವರನ್ನು ಹಿಂಸಿಸದೆ ಬಿಟ್ಟುಬಿಡೋಣ. ಜರಿದು ನೋಯಿಸಿ ಅಮಾನವೀಯತೆಯ ಮೆರೆವುದು ಬೇಡ. 

ಸರ್ಕಾರದಿಂದ ಅನೇಕ ಸವಲತ್ತುಗಳಿವೆ ಎಂದು ನಾವು ಕೇಳಿರುವುದುಂಟು. ಮೀಸಲಾತಿಗಳಿವೆ ಎಂಬುದೂ ಕೂಡ ಗೊತ್ತು. ಆದರೂ ಅದನ್ನು ಪಡೆಯಲು ಅವರು ಅದೆಷ್ಟು ಪರದಾಡಬೇಕೆಂದು ಅವರಿಂದಲೇ ಕೇಳಿ ತಿಳಿಯಬೇಕು. ಕೆಲವೊಂದು ಸಂದರ್ಭದಲ್ಲಿ ಕೇಳಿ ಬಂದ ಆಕ್ರೋಶ; ''ನನಗೆ ಇಂತಹ ನ್ಯೂನತೆಯಿದೆ ಸರ್ಟಿಫೈ ಮಾಡಿಕೊಡಿ ಎಂದು ಹೋಗಿದ್ದೆ; ಪರೀಕ್ಷಿಸಿ ಅಂತಹ ಪರ್ಸೆಂಟೇಜಿನಲ್ಲಿ ಏನಿಲ್ಲ, ನಿಮಗೆ ಈ ಮೀಸಲಾತಿ/ಸೌಕರ್ಯ ದೊರಕದು, ಎಂದು ಹೇಳಿ ನಮ್ಮನ್ನು ಹೊರಗಟ್ಟಿದರು'' ಆಕಸ್ಮಿಕವಾಗಿ ಕಾಲ್ಬೆರಳುಗಳನ್ನು ಕಳೆದುಕೊಂಡ ವೃದ್ಧೆಯ ನೋವಿದು. ದೃಷ್ಟಿ ದೋಷವಿರುವ ಒಬ್ಬ ಹುಡುಗನನ್ನು ಆ ಪೋಸ್ಟಾಫೀಸಿನಲ್ಲಿ ಸಲಹೆಗಾರನಾಗಿ ಕೂರಿಸಲಾಗಿತ್ತು. ಅದರೊಟ್ಟಿಗೆ ಅವರು ಟೋಕನ್ ಮಿಶನ್ ಹತ್ತಿರ ಕುಳಿತು ಬಂದವರಿಗೆ ಸಂಬಂಧಪಟ್ಟ ಕೌಂಟರಿನ ಟೋಕನ್ ಕೂಡ ಕೊಡುತ್ತಿದ್ದರು. ಯುವಕರಿಗಲ್ಲದಿದ್ದರು ಬಹು ಸಂಖ್ಯೆಯಲ್ಲಿ ಬರುವ ವೃದ್ಧರಿಗೆ ಇದು ಬಹಳ ಸಹಕಾರಿಯೇ ಆಗಿತ್ತು. ಆದರೂ ಅದೇ ಪೋಸ್ಟಾಫೀಸಿನ ಯುವ ಕೆಲಸಗಾರ ಆತನ ಹಿಂದೆ ಮಾತನಾಡುತ್ತಾನೆ, ''ಈ ಕುರುಡನಿಗೊಂದು ಸಂಬಳ ವೇಸ್ಟು, ಒತ್ತುತ್ತಾನೆ ಟೋಕನ್ ಕೊಡ್ತಾನೆ, ಇಷ್ಟೇ ಅವನ ಕೆಲಸ,, ಹ್ಹ ಹ್ಹ ಹ್ಹ " ಎಂದು ಗ್ರಾಹಕರ ಮುಂದೆಯೇ ನಗುತ್ತಾನೆ. ವಿದ್ಯಾವಂತರಾಗಿ ಒಂದು ಇಲಾಖೆಯಲ್ಲಿ, ಒಂದು ಸಮೂಹದಲ್ಲಿ ಒಬ್ಬ ಮಾನವೀಯ ವ್ಯಕ್ತಿಯಾಗಿ ನೆಡೆದುಕೊಳ್ಳಲಾರದವರು ಅದು ಯಾವ ರೀತಿಯ ಓದಿದವರೋ?! ಎನಿಸಿಬಿಟ್ಟಿತು. ಹಾಗೆಯೇ ಮೊನ್ನೆ ಮೊನ್ನೆಯಷ್ಟೇ ದೂರದರ್ಶನದ ಖಾಸಗಿ ಚಾನಲ್ನೊಂದರಲ್ಲಿ ಪ್ರಸಾರವಾದ "ವೀಕೆಂಡ್ ವಿತ್ ರಮೇಶ್''ನಲ್ಲಿಯೂ ಒಂದಿಬ್ಬರು ತೀವ್ರ ಅಂಗವಿಕಲರ ಸಂದರ್ಶನ-ಸಂವಾದ ಕಾರ್ಯಕ್ರಮವು ''ನ್ಯೂನತೆಯು ಸಾಧನೆಗೆ ತೊಡಕೇ ಅಲ್ಲ'' ಎಂಬುದಕ್ಕೆ ಇಂಬು ನೀಡಿತ್ತು. ಅಂತಹವರನ್ನು ಗುರ್ತಿಸಿ ಗೌರವಿಸಿತ್ತು. ಇದೊಂದು ಸಮಾಜದ ಉತ್ತಮ ನಡೆ ಎನ್ನುವ ಹರ್ಷವಿದೆ. ಸವಲತ್ತುಗಳು ಏನೇ ಇರಲಿ ಆದರೆ ಅವರು ಕಳೆದುಕೊಂಡಿರುವ, ಕಳೆದುಕೊಳ್ಳುತ್ತಿರುವ ಜೀವನದ ಸುಂದರ ಕ್ಷಣಗಳನ್ನು ನಾವ್ಯಾರೂ ಅವರಿಗೆ ನೀಡಲಾರೆವು. ಅಂತಹವರನ್ನು ನೋಡಿ ಹೀಯಾಳಿಸುವುದು ಬೇಡ, ಅವರ ಸವಲತ್ತಿಗೆ  ಕರುಬುವುದೂ ಬೇಡ. ವಿದ್ಯೆ ಹೆಚ್ಚಿದಷ್ಟೂ ನಮ್ಮಲ್ಲಿ ಅಹಂ ಕರಗಿ ಸರಳತೆಯು ಮೆರೆಯಬೇಕು. ಅದುವೇ ಸಂಪೂರ್ಣ ಜೀವನ. 

ಪ್ರಕೃತಿಯಲ್ಲಿ ಹಲವು ಜೀವಿಗಳಿವೆ. ಕೆಲವು ಪ್ರಬಲವಾದರೆ ಮತ್ತೆ ಹಲವು ದುರ್ಬಲವು, ಒಂದನ್ನೊಂದು ತಿಂದು ಬದುಕುವ ರೀತಿಗೆ 'ಪ್ರಾಣಿಗಳು' ಎಂದು ಕರೆದುಬಿಟ್ಟೆವು. ತನ್ನ ಬುದ್ದಿವಂತಿಕೆಯಿಂದ, ಮಾತನಾಡುವ ಕಲೆಯಿಂದ, ಭಾವನೆಗಳಿಂದ ಉಳಿದ ಎಲ್ಲಾ ಪ್ರಾಣಿಗಳಿಗಿಂತ 'ಮಾನವ' ಶ್ರೇಷ್ಠನೆಂದು ಎನಿಸಿಕೊಂಡಿದ್ದಾನೆ. ಅದರಂತೆ ತನ್ನದೇ ಸಂಕುಲದಲ್ಲಿ ಹೀಗೆ ಹುಟ್ಟಿಕೊಂಡ ಬಲಹೀನರು, ಹಿಂದುಳಿದವರು, ವಿಶೇಷ ಅಗತ್ಯವುಳ್ಳವರನ್ನು ಹೇಗೆ ಮತ್ತು ಏಕೆ ದೂರವಿಟ್ಟು ತನ್ನಲ್ಲೇ ತಾ ಭೇದವೆಸಗುತ್ತಾನೆ. ಚಿಂತನಾಶಕ್ತಿಯುಳ್ಳ ಮನುಜನು ಮಾನವೀಯತೆಯನ್ನಪ್ಪಿಕೊಳ್ಳಲಿ…. 

ಬೆಳಕು ಮತ್ತು ಕ್ರಾಂತಿಯ ಸೂಚಕ 'ಪಂಜು', ಒಂದು ಸಾಹಿತ್ಯಾತ್ಮಕ ಅಂತರ್ಜಾಲ ವಾರ ಪತ್ರಿಕೆ. ೨೦೧೩ ಜನವರಿಯಲ್ಲಿ ಪ್ರಾರಂಭವಾದ ಪತ್ರಿಕೆಗೆ ಎರಡು ವರ್ಷದ ಸಂಭ್ರಮ. ತನ್ನ ನೂರನೇ ಸಂಚಿಕೆಯನ್ನು ಹೊತ್ತು ತರುತ್ತಿರುವ ಉತ್ಸಾಹ. ಈ ಸಂದರ್ಭದಲ್ಲಿ ವಿಶೇಷ ಅಗತ್ಯವುಳ್ಳವರ ಕುರಿತಾಗಿ ಹೊರಡಿಸುತ್ತಿರುವ ಈ ಸಂಚಿಕೆ, ಪಂಜು ಪ್ರಜ್ವಲಿಸಿ ಹೊರಚಿಮ್ಮಿದ ಒಂದು ಕ್ರಾಂತಿ ಕಿಡಿ ಎಂದರೆ ತಪ್ಪಾಗಲಾರದು. ಪತ್ರಿಕೆಯ ಯಶಸ್ಸಿಗೆ ಶುಭ ಕೋರುತ್ತಾ ಧನ್ಯವಾದಗಳೊಂದಿಗೆ,


ದಿವ್ಯ ಆಂಜನಪ್ಪ
೧೯/೧೨/೨೦೧೪ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

8 thoughts on “‘ಎಲ್ಲಾ ನ್ಯೂನತೆಗಳಾಚೆ ಮನಸ್ಸು ಜೀವಿಸಲಿ’: ದಿವ್ಯ ಆಂಜನಪ್ಪ

 1. ದಿವ್ಯ ಅವರೇ….ಉತ್ತಮ ಲೇಖನ. ಒ೦ದ೦ತೂ ನಿಜ. ಈಗೆಲ್ಲಾ ಮಾನವೀಯ ನಡವಳಿಕೆಯ ಜನರ ಸ೦ಖ್ಯೆ ಹೇಚ್ಚಾಗಿದೆ. ಕಾಮುಕ ಶೋಷಕರನ್ನು ಹೊರತುಪಡಿಸಿ ಸಾಮಾನ್ಯ ಜನರು ನ್ಯೂನತೆ ಇರುವವರನ್ನು ಗೌರವಿಸುವ ಪ್ರವೃತ್ತಿ ಬೆಳೆಸಿಕೊ೦ಡಿದ್ದಾರೆ ಎನಿಸುತ್ತೆ.

  1. ತಮ್ಮ ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್ 🙂 

 2. Hats off To you.. divya medam.. Samaja dha So called Buddi Jeevi gala kannu tereyuva prayatna madiddiri.. Tumba dina gala nantara ondu olleya, artical odida santhosha vayitu..
  Sunil Raj M’lore

 3. ಈ ಸಂಚಿಕೆಯಲ್ಲಿ ನಿಮ್ಮ ಲೇಖನ ಬಹಳ ಆರ್ಥಪೂರ್ಣ ಅನ್ನಿಸುತ್ತಿದೆ. ಕೈ ಕಾಲು ಸರಿಯಿದ್ದು ಹೃದಯ ಹೀನರು ಓದಿ ಒಂದಿಷ್ಟು ನಿಮ್ಮ ಬರಹ ಓದಿ ಕಲಿಯಬೇಕಿದೆ. ಎಲ್ಲಾ ಪ್ರಾಣಿಗಳಿಗಿಂತ 'ಮಾನವ' ಶ್ರೇಷ್ಠನೆಂದುಕೊಂಡು ಮಾನವನೇ ಹೀನ ಕೆಲಸ ಮಾಡುವ ಈ ದಿನಗಳಲ್ಲಿ ಒಂದಿಷ್ಟು ಇಂತಾಹ ಬರಹವನ್ನಾದರೂ ಓದಿ ತಮ್ಮನ್ನು ತಾವು ಸುಧಾರಿಸಬೇಕಿದೆ. ಇವತ್ತು ವಿಕಲ ಚೇತನರ ಹೆಸರಲ್ಲಿ ದುಡ್ದು ಮಾಡುವ ಏಷ್ಟೋ ಕಟುಕರಿರಿಗೆ ನಿಮ್ಮ ಬರಹ ಪಾಠ ವಾಗಲಿ. ಮುಂದೆಯೂ ಒಳ್ಳೆಯ ಬರಹ ಮೂಡಿ ಬರಲಿ.

  1.  🙂  …..

   ತಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು ಸರ್,, 🙂

 4. Nice. Namma naduvene iro vishesha chetanara bagge amaanaveeya vaagi nadedukollo janara bagge odi besaravaytu 🙁 avrige bekirodu aasare alla. koncha samaya mattu koncha sahanubhooti ashte

 5. ಒಂದು ಒಳ್ಳೇಯ ಬರಹ. " ಪ್ರಾಣಿಗಳೇ ಗುಣದಲಿ ಮೇಲು ಮಾನವ ಅದಕ್ಕಿಂತ ಕೀಳು " ಅನ್ನುವುದು ನಿತ್ಯ ಸತ್ಯ , ಉಪಕಾರ ಮಾಡುವುದಂತೂ ಇಲ್ಲಾ ಆದರೆ ಹೀಗಳೆದು ಮಾತನಾಡುವುದು ಮಾತ್ರ ಬಿಡುವುದಿಲ್ಲಾ, ನಾಚ್ಚಿಗ್ಗೇಡು ಜನ್ಮ ಬಿಡಿ.  ಅಂಗವಿಕಲರೇ ಬಹು ಸಂಖೆಯಲ್ಲಿ ಸಾಧನಾಶೀಲ ವ್ಯಕ್ತಿಗಳು, ತಮ್ಮ ವಿಕಲತೆಯನ್ನೆ ಅಸ್ತ್ರವಾಗಿ ಬಳಸಿ ದೊಡ್ಡ ಸಾಧನೆಗಳನ್ನು ಮಾಡುತ್ತಾರೆ. ಅವರಿಗಿರುವ ಛಲ ಸಾಮಾನ್ಯ ಜನರಿಗಿರುವುದಿಲ್ಲ. ಕೈ ಕಾಲು ಗಟ್ಟಿ ಇದ್ದು, ಮೈ ಮುರಿದು ದುಡಿಯುವುದು ಬಿಟ್ಟು, ವಿಕಲರಂತೆ ನಟಿಸಿ ಭಿಕ್ಷೆ ಬೇಡುವವರು. ಯಾರಿಗೆ ಅನ್ನಬೇಕೊ, ಯಾರಿಗೆ ಅನ್ನಬಾರದೊ ತಿಳಿಯದು. ಈ ವಿಷಯದ ಬಗ್ಗೆ ನಿಮ್ಮ ಆಳವಾದ ಚಿಂತನೆ ಚೆನ್ನಾಗಿ ಮೂಡಿಬಂದಿದೆ. 

Leave a Reply

Your email address will not be published. Required fields are marked *