ಅನಿ ಹನಿ

ಎಲ್ಲಾನು ಮಾಡುವುದು ಹೊಟ್ಟೆಗಾಗಿ .. : ಅನಿತಾ ನರೇಶ್ ಮಂಚಿ


ಕೆಲವು ಪುಸ್ತಕಗಳ ತಲೆಬರಹವೇ ಎತ್ತಿಕೋ ಎಂದು ಕೈ ಚಾಚಿ ಕರೆಯುವ ಮಗುವಿನಂತೆ ಭಾಸವಾಗುತ್ತದೆ. ಬೆಳಗಿನ ಸಮಯದಲ್ಲೇನಾದರೂ ಸುಮ್ಮನೆ ಕಗೆತ್ತಿಕೊಂಡು ಕಣ್ಣಾಡಿಸ ಹೊರಟಿರಾದರೆ ಸಿಕ್ಕಿಬಿದ್ದಿರೆಂದೇ ಅರ್ಥ. ಪುಸ್ತಕ ಎತ್ತಿಕೊಂಡವರು ನನ್ನಂತಹ ಗೃಹಿಣಿಯರಾದರೆ  ಅರ್ಧ ತೊಳೆದ ಪಾತ್ರೆಪಗಡಿಗಳು, ವಾಷಿಂಗ್ ಮೆಶೀನಿನಲ್ಲಿ ನೆನೆದು ಒದ್ದೆಯಾಗಿರುವ ಬಣ್ಣ ಬಿಡುವ ಬಟ್ಟೆ,  ಸ್ಟವ್ವಲ್ಲಿಟ್ಟ ಹಾಲು, ಮಧ್ಯಾಹ್ನದ ಅಡುಗೆ ಎಲ್ಲದಕ್ಕೂ ಎಳ್ಳು ನೀರು ಬಿತ್ತೆಂದೇ ತಿಳಿಯಿರಿ. ಅಕ್ಷರಗಳ ಗುರುತ್ವಾಕರ್ಷಣೆಯೇ ಹೆಚ್ಚಿ ಕೊನೆಯ ಪುಟ ಬರುವಲ್ಲಿಯವರೆಗೆ ನಿಮ್ಮ ಕೈಯಿಂದ ಕೆಳಗಿಳಿಲಾರವು.  ಹಾಗಾಗಬಾರದೆಂಬ ಎಚ್ಚರಿಕೆಯಲ್ಲೇ ಪುಸ್ತಕಗಳನ್ನು ಓದುವ ವೇಳೆ ರಾತ್ರೆಗೆ ಶಿಫ್ಟ್ ಮಾಡಿಕೊಂಡಿದ್ದೇನೆ.ಇತ್ತೀಚೆಗೆ ಓದಿದ ಇಂತಹುದೇ  ಒಂದು ಪುಸ್ತಕ ನಡುರಾತ್ರಿಯವರೆಗಿನ ನಿದ್ರೆಯನ್ನು ಕಸಿಯಲು ಸಫಲವಾಗಿ ಕೊನೆಗೊಂಡಿತ್ತು.

ಸಂಕ್ರಾಂತಿಯ ಎಳ್ಳು ಬೆಲ್ಲದ ಜೊತೆಗೆ ಉಡುಗೊರೆಯಾಗಿ ಮನೆಗೆ ಬಂದ ಪುಸ್ತಕದ ಹೆಸರು ‘ ಎಲ್ಲಾನು ಮಾಡುವುದು ಹೊಟ್ಟೆಗಾಗಿ’. ಖುಷಿಯಾಗಿತ್ತು.ರಾತ್ರೆಯ ಊಟ ಮುಗಿಸಿದ್ದರೂ ಇಷ್ಟದ ಎಳ್ಳುಬೆಲ್ಲವನ್ನು ಬಾಯಿಗೆಸೆದುಕೊಳ್ಳುತ್ತಾ ಕೈಯಲ್ಲೊಂದು ಪುಸ್ತಕ ಹಿಡಿದು ಕಳೆದು ಹೋಗುವ ಕನಸಿನಲ್ಲೇ ಪುಸ್ತಕವನ್ನೆತ್ತಿಕೊಂಡಿದ್ದೆ.  ಬರೆಯುವುದನ್ನೆಲ್ಲಾ ಕಥೆಯಾಗಿಸುತ್ತಾರೋ ಅಥವಾ ಕಥೆಗಳನ್ನೇ ಬರೆಯುತ್ತಾರೋ ಎಂಬ ನನ್ನ ಸಂಶಯ ಪರಿಹರಿಸದ  ಕಥೆಗಾರ ‘ಜೋಗಿ’ ಯವರು ಬರೆದ ಪುಸ್ತಕವಿದು. ಅವರೇ ಹೇಳಿಕೊಂಡಂತೆ ಅನುಭವ ಕಥನ. ‘ಆಟೋಬಯಾಗ್ರಫಿ ಆಫ್ ಅ ರೋಗಿ’. 
ಹದಿನೆಂಟು ಅಧ್ಯಾಯಗಳು ಹದಿನಾಲ್ಕು  ದಿನಗಳ ಕಥೆಯನ್ನೂ, ಆ ಕಥೆಯ ಹಿನ್ನೆಲೆಯನ್ನೂ  ರಸಭರಿತವಾಗಿ ಹೇಳುತ್ತಾ ಹೋಗುತ್ತವೆ. 

ತೂಕ ಇಳಿಸಲೆಂದೇ ಚಿಕಿತ್ಸಾ ಕೇಂದ್ರಕ್ಕೆ ಸೇರಿಕೊಂಡ ಲೇಖಕನ ಮೊದಲ ದಿನಗಳ ಹಳಹಳಿಕೆ ಬರು ಬರುತ್ತಾ ನಮ್ಮ ಶರೀರದ ಬಗೆಗೆ ನಾವು ತೋರಬೇಕಾದ ಪ್ರೀತಿ, ಕಾಳಜಿಯತ್ತ ಬೊಟ್ಟು ಮಾಡುತ್ತದೆ. ದಪ್ಪ ಶರೀರದ  ಡಾಕ್ಟರರೇ ಚಿಕಿತ್ಸಕರಾಗಿ ಬರುವಾಗ ಅವರ ಶರೀರವನ್ನೇ ಸರಿಯಾಗಿಸಲಾರದ ಇವರು ನನಗೇನು ಪರಿಹಾರ ಕಲ್ಪಿಸಿಯಾರು ಎಂಬ ಉಢಾಪೆಯ ದೃಷ್ಟಿಕೋನ ದಿನ ಕಳೆದಂತೆ  ಬದಲಾಗುತ್ತದೆ. ಸುಮ್ಮನೇ ಯೋಚಿಸಿದರೆ ಗಹನವಾಗಿಯೆಂಬಂತೆ ಚಿಂತೆ ಹಚ್ಚಿಕೊಂಡು ಕೊರಗಬೇಕಾದ ಆರೋಗ್ಯ ಸಮಸ್ಯೆಗಳೆಲ್ಲಾ  ಜೋಗಿಯವರ ಪೆನ್ನಿಗೆ ಸಿಕ್ಕಿ ನಗೆ ಉಕ್ಕಿಸುತ್ತಾ ದುಃಖ ಕರಗಿಸಿದರೆ ನಮ್ಮ ದೇಹದ ಕಡೆಗೂ ಗಮನ ನೀಡುವ ಯೋಚನೆ ಹತ್ತಿಸಿಬಿಡುತ್ತದೆ. 

ನಮಗಾಗಿ, ನಮ್ಮ ದೇಹದ ಆರೋಗ್ಯಕ್ಕಾಗಿ ಚಿಕಿತ್ಸೆ ಮಾಡಿಕೊಳ್ಳುತ್ತಾ ಇರುವುದೆಂಬ ಅರಿವಿದ್ದರೂ ಅಂಟಿಕೊಂಡ ಚಟ ಮನುಷ್ಯನ ಆಲೋಚನಾಧಾಟಿಯನ್ನೇ ಹೇಗೆ ಬದಲಾಯಿಸಿಬಿಡುತ್ತದೆ!!  ಸಿಗರೇಟು ಎಳೆಯಲೇಬೇಕೆಂಬ ಬಯಕೆ ಹೇಗೆ ಇನ್ನೊಬ್ಬನನ್ನು ಅಪ್ರಮಾಣಿಕನನ್ನಾಗಿ ಮಾಡಲು ಬಲೆ ಹೆಣೆಯುತ್ತದೆ ಎಂಬುದು ಓದುವಾಗ ನಗು ಉಕ್ಕಿಸಿದರೂ, ಹತ್ತಿಕ್ಕಲಾರದ ಆಸೆಗಳು ಕೀಳುತನಕ್ಕಿಳಿಯುವುದನ್ನು ಪ್ರೇರೇಪಿಸುವುದನ್ನು ನೋಡಬಹುದು. ಸಣ್ಣ ಪ್ರಾಯದವರಿಗಾದರೆ ತಮ್ಮ ಬಗ್ಗೆಯೇ ಇರುವ ಹೆಮ್ಮೆ, ನಿಯತ್ತಿನಿಂದ ದುಡಿಯಬೇಕೆಂಬ ಆಸೆ ಇರುತ್ತದೆ ಎಂದುಕೊಳ್ಳುವ ಲೇಖಕ ಹುಡುಕುವುದು ಜೀವನದ ಭಾರ ಹೊತ್ತು ಬೆನ್ನು ಬಾಗಿರುವವನಿಗೆ. ಹುಡುಕಾಟದ ಫಲದಿಂದ ಆತ ಸಿಕ್ಕಿಯೂ ಬಿಡುತ್ತಾನೆ. ಆತನ ಕೈಗೆ ನೋಟಿನ ಪುಡಿಕೆಯನ್ನು ದಾಟಿಸಿಯೂ ಆಗುತ್ತದೆ. ಆದರೆ ಅದೇ ದಿನ ರಾತ್ರೆಯ ತಲೆ ನೋವು, ಎಚ್ಚರವಾಗಿ ಒಂಟಿಯಾಗಿ ಹೊರಗಲೆದಾಗ ಗಟ್ಟಿಗೊಂಡ ಮನಸ್ಥೈರ್ಯ ಸಿಗರೇಟು ಸೇದದೇ ಅಷ್ಟು ದಿನಗಳನ್ನು ಕಳೆದುಬಿಡಬಲ್ಲೆ ಎಂಬ ಹಠವನ್ನೂ ಹುಟ್ಟಿಸುತ್ತದೆ. 

ವ್ಯವಸ್ಥೆಯೊಂದನ್ನು ಮನುಷ್ಯನ ಆಸೆ ಹಾಳುಗೆಡೆಯುವ ಪರಿಯನ್ನು, ಅದರಿಂದಾಗುವ ಅನಾಹುತಗಳನ್ನು, ನಂಬಿಕೆಯ ಬುನಾದಿ ಅಲುಗುವುದನ್ನು ಕುರಿತು  ವೈದ್ಯಾಧಿಕಾರಿಗಳು ಹೇಳುವ ‘ವ್ಯವಸ್ಥೆಯನ್ನು ಹಾಳು ಮಾಡೋದಿಕ್ಕೆ ಹೋಗಬಾರದು, ವ್ಯಕ್ತಿ ಹಾಳಾದರೂ ಚಿಂತೆಯಿಲ್ಲ’ ಎನ್ನುವ  ಮಾತು ನಮ್ಮನ್ನೂ ಯೋಚಿಸುವಂತೆ ಮಾಡುತ್ತದೆ. 

ಹಸಿದ ಹೊಟ್ಟೆಯ ಬಗ್ಗೆ ಚಿಂತಿಸದಿರದಂತೆ ಮಾಡುವ ಎಲ್ಲಾ ಆಲೋಚನೆಗಳು ಹಸಿವನ್ನು ಕುರಿತೇ ಆಗಿರುವುದು ಸೋಜಿಗ. 

ದಿನ ಕಳೆದಂತೆ ಊಟ ಎನ್ನುವುದು ಹಸಿವು ನೀಗಲಿಕ್ಕೆಂದೇ ಇರುವ ಆಹಾರ ಮಾತ್ರ. ಅದರಲ್ಲಿ ರುಚಿಯನ್ನು ಹುಡುಕುವ ಕಷ್ಟವನ್ನು ಬಿಟ್ಟುಬಿಟ್ಟರೂ ಆರೋಗ್ಯವಾಗಿರುವುದು ಎಂದರೆ ಕೇವಲ ತೆಳ್ಳನೆಯ ಶರೀರ ಹೊಂದಿರುವುದು ಮಾತ್ರವಲ್ಲ ಎಂಬ ಭ್ರಮೆಯನ್ನು ಕರಗಿಸುತ್ತಾ ಹೋಗುತ್ತದೆ. ಹಸಿದಾಗ ಹುಡುಕಿ ಅಲೆದು ಭೇಟೆಯಾಡಿ ಆಹಾರ ಸಂಪಾಧಿಸಿಕೊಳ್ಳುವ ಪ್ರಾಣಿ ವರ್ಗ ಒಂದೆಡೆ ಕಾಡಿದರೆ, ತುತ್ತಿನ ಜೋಳಿಗೆ ತುಂಬಿಸಲು ಮೈ ಮುರಿದು ದುಡಿಯುವ ವರ್ಗದ ನೆನಪುಗಳು ಹಸಿಯಾಗುತ್ತದೆ. 

ಅಗತ್ಯಕ್ಕಿಂತ ಹೆಚ್ಚು ಹಣ, ಅಗತ್ಯಕ್ಕಿಂತ ಹೆಚ್ಚು ಐಶಾರಾಮಿ ವಸ್ತುಗಳನ್ನು ಹೊಂದುತ್ತಾ ಹೋದಂತೆಲ್ಲಾ ಬರಬೇಕಾದ ವಯಸ್ಸಿಗಿಂತ ಮೊದಲೇ ಬಂದು ವಕ್ಕರಿಸಿ ಮುಕ್ಕುವ ಖಾಯಿಲೆಗಳು ಜೀವನವನ್ನು ಬಂಜರಾಗಿಸುವ ಸತ್ಯ,ಒಳಗಿನ ಕೊಳೆ ತೊಳೆದು ಹೋಗಿ ಶರೀರ ಹಗುರಾದ ಹಾಗೆ ಶುದ್ಧವಾದ ಮನಸ್ಸನ್ನು ಇಟ್ಟುಕೊಂಡರೆ ವ್ಯಕ್ತಿಯೊಬ್ಬ ಆರೋಗ್ಯಪೂರ್ಣನಾಗುವ ಸತ್ಯ, ಕೃತ್ರಿಮತೆಗೇ ಇನ್ನಷ್ಟು ಬಣ್ಣ ಬಳಿಯುತ್ತಾ ಸಹಜ ಬದುಕನ್ನೇ ಮರೆತಿರುವ ಸತ್ಯಗಳು ಒಂದೊಂದಾಗಿ ಅನಾವರಣಗೊಳ್ಳುತ್ತಾ ನಿಲ್ಲುತ್ತಿದ್ದಂತೆ ಹೊರಡುವ ದಿನಗಳು ಬಂದುಬಿಡುತ್ತವೆ.ಅಲ್ಪ ಸಮಯದ್ದಾದರೂ ಅಂಟಿಕೊಂಡ ಸ್ನೇಹದ ಕಟ್ಟು, ಅನಿವಾರ್ಯವಾಗಿ ಒಪ್ಪಿಕೊಂಡರೂ ಇಷ್ಟವಾದ ಪರಿಸರ ಇವನ್ನೆಲ್ಲಾ ಬಿಟ್ಟು  ಹೋಗಲೇಬೇಕಾದ ಕ್ಷಣ ಬಂದಾಗ  ಓದುಗರಿಗೂ ‘ಜೋಗಿ’ ಇನ್ನೊಂದಷ್ಟು ದಿನ ಅಲ್ಲಿ ಉಳಿಯಬಾರದೇ ಎಂಬಾಸೆ ಕಾಡುತ್ತದೆ. 

ಓದುವಾಗ ನಗು ಉಕ್ಕಿಸುತ್ತಾ ಟೆನ್ಷನ್ ಕಡಿಮೆಗೊಳಿಸುತ್ತಾ ಓದಿಸುವ ಪುಸ್ತಕ ಓದಿದ ನಂತರ ವೇಯಿಂಗ್ ಮಿಷನ್ನಿನ ಮೇಲೆ ನಿಂತು  ನಮ್ಮ ತೂಕ ನೋಡಿಕೊಳ್ಳುವಂತೆ ಮಾಡುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಹತ್ತಿರ ತಂದಿಟ್ಟ ಎಳ್ಳು ಬೆಲ್ಲದ ಮಿಶ್ರಣ ಮೊದಲಿದ್ದಷ್ಟೇ ಹಾಗೇ ಉಳಿದಿತ್ತು. ಡಬ್ಬಕ್ಕೆ ತುಂಬಿಟ್ಟು ಭರ್ತಿ ಒಂದು ತಂಬಿಗೆ ನೀರು ಕುಡಿದು ಮಲಗಿದವಳ ಕನಸಲ್ಲೆಲ್ಲಾ ತೂಕ ಇಳಿಕೆಯದ್ದೇ ಮಂತ್ರೋಚ್ಚಾರಣೆಗಳು ಕೇಳಿಸುತ್ತಿದ್ದವು.

ಯೋಗರಾಜಭಟ್ಟರು ಮುನ್ನುಡಿಯಲ್ಲಿ ಬರೆದಂತೆ ಮನೋದೈಹಿಕ ಆರೋಗ್ಯದ ಬಗ್ಗೆ ಒಂದಿಷ್ಟು ಚಿಂತಿಸುವಂತೆ ಮಾಡುವುದರಲ್ಲಿ ಈ ಪುಸ್ತಕ ಯಶಸ್ವಿಯಾಗಿದೆ. ಹಗುರವಾಗಿ ಓದಿಸಿಕೊಳ್ಳುತ್ತಾ ಓದಿದ್ದನ್ನು ಅನುಸರಿಸಿದರೆ ಮೈಯನ್ನೂ, ಮನಸ್ಸನ್ನೂ ಹಗುರಗೊಳಿಸುವ ಶಕ್ತಿ ಈ ಪುಸ್ತಕ್ಕಕ್ಕಿದೆ. 
-ಅನಿತಾ ನರೇಶ್ ಮಂಚಿ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಎಲ್ಲಾನು ಮಾಡುವುದು ಹೊಟ್ಟೆಗಾಗಿ .. : ಅನಿತಾ ನರೇಶ್ ಮಂಚಿ

  1. ಇಷ್ಟವಾಯಿತು ಮೇಡಮ್. ನಾನೂ ಓದ್ಬೇಕು ಈ ಪುಸ್ತಕವನ್ನು.

  2. ನಿಮ್ಮ ಬರಹವೂ ಆ ಪುಸ್ತಕದ ಬರಹದಷ್ಟೇ ಚಂದ.

Leave a Reply

Your email address will not be published. Required fields are marked *