ಚಿಕ್ಕಂದಿನಲ್ಲಿ ನನಗೆ ನಿದ್ದೆಯಲ್ಲಿ ನಡೆದಾಡುವ (Sleep walking) ಖಾಯಿಲೆ ಇತ್ತು. ಹಾಗೆ ರಾತ್ರಿ ಅಡ್ಡಾಡಿದ್ದು ಬೆಳಿಗ್ಗೆ ಎದ್ದಾಗ ನನಗೆ ನೆನಪೇ ಇರುತ್ತಿರಲಿಲ್ಲ. ಆ ನನ್ನ ಖಾಯಿಲೆಯಿಂದ ತುಂಬಾ ಕಷ್ಟ ಅನುಭವಿಸಿದವಳು ನನ್ನಮ್ಮ. ಮಗ ಹೀಗೆ ಒಂದು ರಾತ್ರಿ ಎದ್ದು ಹೊರಗೆ ಹೋಗಿಬಿಟ್ಟರೆ ಎನು ಗತಿ ಅಂತ ಮನೆಯ ತಲಬಾಗಿಲಿಗೆ ಹಾಗು ಹಿತ್ತಲ ಬಾಗಿಲಿಗೆ ಒಳಗಿನಿಂದ ಕೀಲಿ ಹಾಕಿ ಮಲಗುತ್ತಿದ್ದಳು. ನಾನು ಎದ್ದು ಅಡ್ಡಾಡುತ್ತಿದ್ದೆನೆ ವಿನಃ ಕೀಲಿ ತೆಗೆದು ಹೊರಗೆ ಹೋಗುತ್ತಿರಲಿಲ್ಲ, ಅದೊಂದು ವಿನಾಯತಿ ನೀಡಿತ್ತು ಆ ಖಾಯಿಲೆ! ಅದು ಕ್ರಮೇಣ ಕಡಿಮೆಯಾಯಿತು. “ಎಲ್ಲರೂ ಮಲಗಿದ್ದಾಗ ಅವನೊಬ್ಬನೆದ್ದ ಅವನೇ ಬುದ್ಧ…” ನನ್ನಲ್ಲಿ ಬುದ್ಧನ ಅಂಶಗಳಿವೆ ಅಂತ ಹೀಗೇ ತಮಾಷೆಗೆ ಕೊಚ್ಚಿಕೊಳ್ಳುತ್ತಿದ್ದೆ. ಆದರೆ ಹಾಗೆ ನಾನು ಎದ್ದು ಅಡ್ಡಾಡಿದಾಗಲೆಲ್ಲ ಟಕ್ ಅಂತ ಎಚ್ಚರಗೊಳ್ಳುತ್ತಿದ್ದವಳು ಮಾತ್ರ ನನ್ನಮ್ಮ, ಹೆಸರಿಗೆ ಮಾತ್ರ ನಾನು ಬುದ್ಧ! …
ಆದರೆ ಅಮೆರಿಕೆಯಲ್ಲಿ ಇದ್ದಾಗಲಂತೂ ಇದು ಮತ್ತೆ ಅಕ್ಷರಶಃ ಸತ್ಯ ಆಗಿತ್ತು. ನಿದ್ದೆಯಲ್ಲಿ ಅಡ್ಡಾಡುವ ಕಾಯಿಲೆ ಆಗ ಇರಲಿಲ್ಲವಾದರೂ, ಭಾರತದಲ್ಲಿ ಎಲ್ಲರೂ ಮಲಗಿದ್ದಾಗ ನಾನು ಅಲ್ಲಿ ಎದ್ದು ಕೂತಿದ್ದೆ! ಅಲ್ಲಿ ಕತ್ತಲು ಇದ್ದಾಗ ನಾನಿದ್ದ ದೇಶದಲ್ಲಿ ಬೆಳಕು ಎಂಬುದು ಪ್ರಕೃತಿಯ ಸಹಜ ವಿಸ್ಮಯದ ಕಾರಣದಿಂದ. ಆದರೆ ನಾನು ಮಾನಸಿಕವಾಗಿಯೂ ಎದ್ದು ಕೂಡುವುದಕ್ಕೆ ಅಮೆರಿಕೆ ನನಗೆ ತುಂಬಾ ಸಹಾಯ ಮಾಡಿದ್ದು ಹೌದು. ನಿಜ ಹೇಳಬೇಕು ಅಂದರೆ ಒಲ್ಲದ ಮನಸ್ಸಿನಿಂದ, ನನಗೆ ಅರಿವಿಗೆ ಬರದಂತೆಯೇ ನಾನು software ಲೋಕಕ್ಕೆ ಬಂದಿದ್ದು. ಒಂದು ರೀತಿಯಲ್ಲಿ ಪ್ರವಾಹದ ಜೊತೆಗೆ ತೇಲುತ್ತ ಹೋದಂತೆ ಅದು ನನ್ನನ್ನು ಅಮೆರಿಕೆಯವರೆಗೆ ಕರೆ ತಂದಿತ್ತು. ನನಗೆ ಮೊದಲಿನಿಂದಲೂ ಏನಾದರೂ ಸ್ವಂತವಾಗಿ ಮಾಡಬೇಕು ಹಾಗೂ ನನ್ನ ಬದುಕನ್ನು ವಿಭಿನ್ನವಾಗಿ ರೂಪಿಸಿಕೊಳ್ಳಬೇಕು ಎನ್ನುವ ಕನಸು. ನೌಕರಿಯೇ ಜೀವನದ ಅಧಾರ ಎಂದು ನಂಬಿ ಬದುಕುತ್ತಿದ್ದ ಮಧ್ಯಮ ವರ್ಗದಲ್ಲಿ ಬೆಳೆದಿದ್ದ ನನಗೆ ಅಪ್ಪನಿಗೆ ಬೇಜಾರು ಮಾಡದೇ, ಬೇರೇನೂ ಮಾಡಲು ತೋಚದೆ ಅಥವಾ ಧೈರ್ಯ ಸಾಲದೇ ಈ IT ಎಂಬ ಬಲೆಯಲ್ಲಿ ಸಿಲುಕಿ ಹೇಗೆ ಹೊರಗೆ ಬರಬೇಕು ಎಂದು ಅರಿಯದೆ ಒದ್ದಾಡುತ್ತಿದ್ದೆ.
ಚಿಕ್ಕವನಿದ್ದಾಗ ಲಕ್ಷ್ಮೇಶ್ವರದ ನಮ್ಮ ಓಣಿಯಲ್ಲಿ ಗೆಳೆಯರ ಬಳಗದೊಂದಿಗೆ ಕೆಲವು ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದೆ. ಅವೆಲ್ಲವೂ ಕ್ರಮೇಣ ನನ್ನ ವ್ಯಕ್ತಿತ್ವ ರೂಪಿಸಿದ್ದವೇನೋ. ಒಮ್ಮೆ ಗೆಳೆಯರ ಬಳಿಗೆಲ್ಲ ದುಡ್ಡು ಸಂಗ್ರಹಿಸಿ ಒಂದು ಬ್ಯಾಂಕ್ ವ್ಯವಸ್ಥೆ ಜಾರಿಗೆ ತಂದಿದ್ದೆ. ನಾಲ್ಕಾಣೆ, ಹತ್ತು ಪೈಸೆ , ಐದು ಪೈಸೆಗಳಿಗೆ ಇನ್ನೂ ಬೆಲೆಯಿದ್ದ ದಿನಗಳವು. ಹುಡುಗರು ಎಷ್ಟೋ ಜನ ನನ್ನ ಬ್ಯಾಂಕ್ ಅಲ್ಲಿ ಹಣ deposit ಇಟ್ಟಿದ್ದರು. ಆ ಹಣವನ್ನು ಏನು ಮಾಡಬೇಕು ಅನ್ನೋದು ಗೊತ್ತಿರಲಿಲ್ಲವಾದರೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ನನಗೆ ಗೊತ್ತಿದ್ದಷ್ಟು ಅನುಕರಿಸುತ್ತಿದ್ದೆ. ಹುಡುಗರು ಹಣ ಇಡೋರು ಹಾಗೂ ಬೇಕಾದಾಗ ನನ್ನ ಬಳಿಯಿಂದ ತೆಗೆದುಕೊಂಡು ಹೋಗೋರು. ಅದಕ್ಕೊಂದು ಲೆಕ್ಕದ ಪುಸ್ತಕವನ್ನೂ ಇಟ್ಟಿದ್ದೆ. ಅದೊಂದು ತರಹ ಸ್ವಿಸ್ ಬ್ಯಾಂಕ್ ಆಗಿತ್ತು. ಹುಡುಗರೂ ತಮ್ಮ ಅಪ್ಪ ಅಮ್ಮಂದಿರಿಗೆ ಗೊತ್ತಿಲ್ಲದೇ ಇಡುತ್ತಿದ್ದರೇನೋ. ಅದೂ ಅಲ್ಲದೆ ನನ್ನ ಅಪ್ಪ ಅಮ್ಮನಿಗೂ ಇದು ಗೊತ್ತಿರಲಿಲ್ಲ. ಆದರೆ ಈ ಒಂದು ಬ್ಯಾಂಕಿನ ಆಟವನ್ನು ಎಂಜಾಯ್ ಮಾಡುತ್ತಿದ್ದೆನೆ ಹೊರತು ಅದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ. ಹುಡುಗರಿಗೆಲ್ಲ ಒಂದು ಒಳ್ಳೆಯ ವ್ಯವಸ್ಥೆ ಮಾಡಿಕೊಟ್ಟಿದ್ದೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದೆ. ಆದರೆ ಎಷ್ಟು ದಿನ ಮುಚ್ಚಿಡಲಾದೀತು? ಕೊನೆಗೂ ಅಮ್ಮನಿಗೆ ವಿಷಯ ಗೊತ್ತಾಗಿ ಸರಿಯಾಗಿ ಬೈದು ಎಲ್ಲರ ದುಡ್ಡು ವಾಪಸ್ಸು ಕೊಡಿಸಿದಳು. ಅಲ್ಲೊಂದಿಷ್ಟು ಲೆಕ್ಕದಲ್ಲಿ ಹೆಚ್ಚುಕಡಿಮೆ ಆಗಿ ಕೈಯಿಂದ ಕೊಡುವ ಸ್ಥಿತಿಯೂ ಬಂದಿತ್ತು. ದೊಡ್ಡ ಮೊತ್ತವಾಗಿರಲಿಲ್ಲವಾದರೂ ಒಟ್ಟಿನಲ್ಲಿ ನನ್ನ ಬ್ಯಾಂಕಿಂಗ್ ಉದ್ಯಮ ಸ್ಥಗಿತಗೊಂಡಿತ್ತು!
ನನಗೆ ಯಾವುದೇ ವ್ಯಾಪಾರಸ್ಥನನ್ನು ನೋಡಿದಾಗಲೂ ನಾನೂ ಅವರಂತೆ ಆಗಬೇಕು ಅನಿಸೋದು. ನಮ್ಮ ಮನೆಯಲ್ಲಿ ಆ ವಾತಾವರಣ ಇರಲಿಲ್ಲವಾದರೂ ನಾನು ಬೆಳೆದ ಊರು ಲಕ್ಷ್ಮೇಶ್ವರದ ಪರಿಸರ ನನ್ನನ್ನು ಕ್ರಮೇಣ ಹಾಗೆ ರೂಪಿಸಿತೇನೋ. ಆ ಊರು ಚಿಕ್ಕದಾದರೂ ಅದೊಂದು ವಾಣಿಜ್ಯನಗರಿ. ಸುತ್ತ ಮುತ್ತಲ ಹಳ್ಳಿಗಳಿಂದ ಜನ ಏನೇ ಬೇಕಾದರೂ ಅಲ್ಲಿಗೇ ಬರೋರು. ಹುಬ್ಬಳ್ಳಿಗೆ ಛೋಟಾ ಮುಂಬೈ ಅನ್ನುತ್ತಿದ್ದ ಹಾಗೆ ಲಕ್ಷ್ಮೇಶ್ವರಕ್ಕೆ ಛೋಟಾ ಹುಬ್ಬಳ್ಳಿ ಅಂತಿದ್ದರು. ನನ್ನ ತುಂಬಾ ಗೆಳೆಯರ ಅಪ್ಪಂದಿರ ಅಂಗಡಿಗಳು ಅಲ್ಲಿ ಇದ್ದವು. ನನ್ನ ಸೋದರ ಮಾವನದೂ ಎಲೆಕ್ಟ್ರಿಕ್ ಅಂಗಡಿ ಇತ್ತು. ಅದೇ ಊರಲ್ಲಿ ನಲವತ್ತು ವರ್ಷಗಳಿಂದ ಇನ್ನೂ ಬಿಸಿನೆಸ್ ಮಾಡುತ್ತಿದ್ದಾರೆ. ಆ ಅಂಗಡಿಯಲ್ಲಿ ನಾನು ಆಗಾಗ ಹೋಗಿ ಕೂಡುತ್ತಿದ್ದೆ. ಗಿರಾಕಿಗಳಿಗೆ ಸಾಮಾನು ಕೊಡುವುದು, ದುಡ್ಡು ಎಣಿಸಿ ಗಲ್ಲೇ ಪೆಟ್ಟಿಗೆಯಲ್ಲಿ ಇಡುವುದು, ಮಾಮ ಇಲ್ಲದಾಗ ಆ ಗಲ್ಲೇ ಪಕ್ಕಕ್ಕಿದ್ದ ಕುರ್ಚಿಯಲ್ಲಿ ಕೂಡುವುದು ಇವೆಲ್ಲ ನನಗೆ ತುಂಬಾ ರೋಮಾಂಚನಕಾರಿ ವಿಷಯಗಳಾಗಿದ್ದವು. ಹಾಗೆ ಅಲ್ಲಿ ಕೂತಾಗಲೆಲ್ಲ ನಾನೂ ಮುಂದೆ ಹೀಗೆ ಒಂದು ಅಂಗಡಿ ಇಡಬೇಕು ಅನಿಸೋದು. ಮುಂದೆ SSLC ಓದುತ್ತಿದಾಗ ನಮ್ಮ ಓದಿಗೆ ಸಹಾಯ ಮಾಡಲು “ಬಂಧು ಮ್ಯಾಗಜಿನ್” “ವಿಕ್ರಮ” ಎಂಬಂತಹ ಗೈಡ್ ಗಳು ಬರುತ್ತಿದ್ದವು. ಮುಂದೆ ನಾನೂ ಹೀಗೆಯೇ ಒಂದು ಮ್ಯಾಗಜಿನ್ ಮಾಡಬೇಕು ಅಂತ ಕನಸು ಕಾಣುತ್ತಿದ್ದೆ. ಅದಕ್ಕೊಂದು ಹೆಸರನ್ನು ಕೂಡ ತಲೆಯಲ್ಲಿ ಇಟ್ಟುಕೊಂಡಿದ್ದೆ…
ಲಕ್ಷ್ಮೇಶ್ವರದಲ್ಲಿ ಇದ್ದಾಗಲೇ ಇನ್ನೊಂದು ಸಲ ಗಾಳಿಪಟ ಮಾಡಿ ಮಾರಬೇಕು ಅನ್ನುವ ಯೋಚನೆ ನನಗೆ ಬಂತು. ವಾರಿಗೆಯಲ್ಲಿ ನನಗಿಂತ ಚಿಕ್ಕವನಾದ ಅದರ್ಶನಿಗೂ ಆ ಮಾತು ಹೇಳಿದೆ. ಅವನೂ ತಯಾರಾದ. ಇಬ್ಬರೂ ಸೇರಿ ಪಟಕ್ಕೆ ಬೇಕಾಗುವ ಹಾಳೆ, ಬಿದಿರು, ದಾರ ಹಾಗೂ ಅಂಟು ಎಲ್ಲವನ್ನೂ ತಂದೆವು. ಅವನೇ ನನ್ನ ಜೀವನದ ಮೊದಲ ಬಿಸಿನೆಸ್ ಪಾರ್ಟ್ನರ್! ಪಟಗಳನ್ನು ತಯಾರು ಮಾಡಿ, ನನಗೆ ಗೊತ್ತಿದ್ದ ಅಂಗಡಿಗೆ ಹೋಗಿ ೨೫ ಪೈಸೆಗೆ ಒಂದರಂತೆ ಎಷ್ಟೋ ಪಟಗಳನ್ನು ಮಾರಿ ಲಾಭ ಗಳಿಸಿದ್ದೆವು. ನನಗೆ ಈ ಎಲ್ಲ ಘಟನೆಗಳು ಎಷ್ಟು ಚೆನ್ನಾಗಿ ನೆನಪಿದೆ ಅಂದರೆ ಅವೊಂದು ಸಿನೆಮಾ ದೃಶ್ಯಗಳ ಮಾದರಿಯಲ್ಲಿ ಸ್ಮೃತಿ ಪಟಲದಲ್ಲಿ ಈಗಲೂ ಹರಿದಾಡುತ್ತವೆ! ಮುಂದೊಮ್ಮೆ ಯಾವಾಗಲೋ ಆದರ್ಶ ಫೋನ್ ಮಾಡಿ ಅದನ್ನು ಮತ್ತೆ ನೆನಪಿಸಿದ್ದ. ಇದರಿಂದ ತಾನೂ ಕೂಡ ಸ್ಪೂರ್ತಿಗೊಳಗಾಗಿ ಉದ್ಯಮಿ ಆದೆ ಅಂತ ಅವನು ಹೇಳಿದಾಗ ನನಗೆ ತುಂಬಾ ಖುಷಿ ಆಗಿತ್ತು. ನನ್ನಿಂದ ಒಬ್ಬ ಸ್ಪೂರ್ತಿಗೊಳಗಾದ ಎಂದರೆ ಏನು ಕಡಿಮೆಯೇ? ಆದರೆ ನಾನು ಮಾತ್ರ ಇನ್ನೂ ಬಲೆಯಲ್ಲಿ ಸಿಲುಕಿ ಒದ್ದಾಡುತ್ತೆ. ಇದರಿಂದ ಹೊರಗೆ ಬರಬೇಕು ಬಹು ಬೇಗ ಅನ್ನುವ ತುಡಿತ ಅಮೇರಿಕೆಯಲ್ಲಿದ್ದಾಗ ತುಂಬಾ ಜಾಸ್ತಿ ಆಗತೊಡಗಿತು. ಪ್ರವಾಹದೊಂದಿಗೆ ಈಜಿದ್ದು ಸಾಕು ಇದು ನನ್ನ ಕೊನೆಯ ನೌಕರಿ ಆಗಬೇಕು ಹಾಗೂ ಭಾರತಕ್ಕೆ ಹೋದ ಕೂಡಲೇ ನನಗೆ ಇಷ್ಟವಾಗಿದ್ದನ್ನು ಮಾಡಲೇಬೇಕು ಅಂತ ಧೃಡ ನಿರ್ಧಾರ ಮಾಡಿದ್ದೆ. ಈ ನಿರ್ಧಾರ ಹಿಂದೆ ತುಂಬಾ ಸಲ ಮಾಡಿದ್ದರೂ ಆಗಿದ್ದಷ್ಟು ಧೈರ್ಯ ಮೊದಲೆಲ್ಲ ಇದ್ದಿರಲಿಲ್ಲ.
ಈ ತರಹದ ಯೋಚನೆ ಇದ್ದದ್ದರಿಂದ ಚಿಕ್ಕಂದಿನಿಂದಲೂ ಆ ನನ್ನ ಯೋಚನಾ ಲಹರಿಗೆ ಪೂರಕವಾದ ಪುಸ್ತಕಗಳನ್ನೇ ನಾನು ಹೆಚ್ಚಾಗಿ ಓದುತ್ತಿದ್ದೆ. ಅಂತಹ ಪುಸ್ತಕಗಳಲ್ಲೇ ನನಗೆ ತುಂಬಾ ಇಷ್ಟವಾಗುತ್ತಿದ್ದವು ಉದ್ಯಮಶೀಲ ವ್ಯಕ್ತಿಗಳ ಅತ್ಮಕತೆಗಳು ಹಾಗೂ ವ್ಯಕ್ತಿತ್ವ ರೂಪಿಸುವ ಬಗ್ಗೆ ಬರೆದ ಪುಸ್ತಕಗಳು. ನಾನು ತುಂಬಾ ಪ್ರೀತಿಯಿಂದ ಓದಿದ ಪುಸ್ತಕಗಳಲ್ಲಿ ಒಂದು “Bring out the magic out of your mind” ಎಂಬ ಸೂಪ್ತ ಮನಸ್ಸಿನ ಮಂತ್ರಿಕತೆಯ ಬಗ್ಗೆ Al Koran ಎಂಬ ಜಾದೂಗಾರ ಬರೆದ ಪುಸ್ತಕ. ಮನಸ್ಸಿದ್ದಲ್ಲಿ ಮಾರ್ಗ ಅನ್ನುವ ತತ್ವವನ್ನು ಆ ಪುಸ್ತಕದ ತುಂಬಾ ಬೇರೆ ಬೇರೆ ವಿಧದಲ್ಲಿ ಹೇಳಲಾಗಿದೆ. ಅದನ್ನು ಓದಿ ಹಾಗೂ ನನ್ನ ಅನುಭವಗಳ ಮೂಲಕ, ನಾವು ಮನಃಪೂರ್ವಕವಾಗಿ visualize ಮಾಡಿಕೊಂಡರೆ ಯಾವುದೇ ಒಂದು ಕನಸು ನನಸಾಗುವುದರಲ್ಲಿ ಸಂಶಯವೇ ಇಲ್ಲ ಅನ್ನುವುದು ನಾನು ಅರಿತುಕೊಂಡಿದ್ದೆ. ಆ ಪುಸ್ತಕವನ್ನು ಎಷ್ಟೋ ಸಲ ಓದಿದ್ದೇನೆ. ಪ್ರತಿ ಸಲವೂ ನನ್ನಲ್ಲಿ ಒಂದು ಹುರುಪು ತುಂಬಿದೆ ಆ ಮಾಂತ್ರಿಕ ಪುಸ್ತಕ. ನನ್ನ ಮನಸ್ಸೆಂಬ ಮಾಂತ್ರಿಕನನ್ನು ಮುಂದಿನ ಸಾಹಸಗಳಿಗೆ ಸಜ್ಜುಗೊಳಿಸಿದ್ದು ಅ ಪುಸ್ತಕವೇ! ಅದರ ಜೊತೆ ತುಂಬಾ ಪುಸ್ತಕಗಳು ನನಗೆ ಪ್ರಭಾವಿಸಿದರೂ ಇಷ್ಟದ ಕೆಲವೇ ಕೆಲವುಗಳಲ್ಲಿ ಒಂದು ಏಷಿಯಾದ ಮೊತ್ತ ಮೊದಲ ecotel ಕಟ್ಟಿದ ವಿಠಲ ಕಾಮತ್ ಅವರ “ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ” ಎಂಬ ಅದ್ಭುತ ಆತ್ಮ ಕಥನ. ನಾನು ಅಮೆರಿಕೆಗೆ ಬಂದಿದ್ದು ಕೂಡ ಅಂತಹ ಒಂದು visualization ಹಾಗೂ ಅತ್ಮಬಲದ ಪ್ರಭಾವದಿಂದಲೇ ಆಗಿತ್ತು…
–ಗುರುಪ್ರಸಾದ ಕುರ್ತಕೋಟಿ
ಮುಂದುವರಿಯುವುದು…
ನಿಮ್ಮ ಲೇಖನ ಓದಿದೆ. ಸಂತಸ ಆಯಿತು.ನನ್ನ ಬಾಲ್ಯದ ಘಟನೆಗಳು ನೆನಪಿಗೆ ಬಂತು.ನಿದ್ದೆಯಲ್ಲಿ ನಡೆಯುವುದು ಅಲ್ಲ.ಬ್ಯಾಂಕು.ಶೆಟ್ಟರ ಅಂಗಡಿಗಳಲ್ಲಿ ಈ ವ್ಯವಸ್ಥೆ ಇತ್ತು.ನಮಗೆ ಕೊಡುತ್ತಿದ್ದ ಕಾರ್ಡ್ ಬೆಲೆ ಸಹ ನಮ್ಮಿಂದ ಪಡೆದು,ಕೊನೆಗೂ ನಾವು ಕಟ್ಟುತ್ತಿದ್ದ ಹಣದ instalment ಒಂದು ಎಕ್ಸ್ಟ್ರಾ ಕೊಡುತ್ತಿದ್ದರು.ಮರಳಲ್ಲಿ ಆಡುತ್ತಿದ್ದ ನಮಗೆ ಯಾರೋ ಬೀಳಿಸಿ ಕೊಂಡ ಪುಡಿ ಹಣ ಅದೃಷ್ಟದ ಭಾಗ್ಯ ಎಂದು ಭಾವಿಸುತ್ತಿದ್ದು, ಎಲ್ಲಾ ನೆನಪಿಗೆ ಬಂದು,ಹಸನ್ಮುಖ ಅದೆ.good ನಿಮ್ಮ ಬರವಣಿಗೆ ಚೆನ್ನಾಗಿದೆ.💐💐💐
ನಿಮ್ಮಆ ಬಾಲ್ಯ ಜೀವನ ಟಿವಿ ಪರದೆಯ ಕಥೆಯಂತಿದ್ದರು, ಓದುಗರನ್ನು ಕುತೂಹಲದಿಂದ ಕಟ್ಟಿ ಹಾಕುವ ತಾಕತ್ತಿದೆ ಸರ್..!
ಬಹಳ ಕುತೂಹಲಕಾರಿಯಾಗಿದೆ.
ಶ್ರೀಧರ್ ಸರ್, ನನ್ನ ಬರಹ ನಿಮ್ಮ ಬಾಲ್ಯವನ್ನು ನೆನಪಿಸಿದ್ದು ಕೇಳಿ ಖುಷಿ ಆಯ್ತು. ಬಾಲ್ಯದ ನೆನಪುಗಳೇ ಹಾಗೆ.. ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!
ಕಿರಣ್, ನಿಮ್ಮ ಅನಸಿಕೆ ಕೇಳಿ ಸಂತಸವಾಯ್ತು. “ಸೆಲ್ಫಿ” ರಹಿತವಾಗಿದ್ದ ನಮ್ಮ ಬಾಲ್ಯದ ದಿನಗಳು ಈಗಲೂ ಅಚ್ಚಳಿಯದಂತೆ ಮನಸ್ಸಿನ ಪರದೆಯ ಮೇಲೆ ಮೂಡುತ್ತವೆ. ಅದನ್ನು ಬರಹದ ಮೂಲಕ ನಿಮಗೆ ತೋರಿಸಿದ ಖುಷಿ ನನ್ನದು. ಪ್ರತಿಯೊಂದಕ್ಕೂ ಸೆಲ್ಫಿ, ಫೋಟೋ ತೆಗೆದುಕೊಂಡೆ ನೆನಪಿನಲ್ಲಿಡಬೇಕಾದ ಪರಿಸ್ಥಿತಿ ಇರುವ ಈಗಿನ ಕಾಲದ ಮಕ್ಕಳಿಗೆ ಆ ತರಹದ ನೆನಪುಗಳು ಮುಂದೆ ಬಂದಾವೆಯೇ? ಗೊತ್ತಿಲ್ಲ!
ಕಾರ್ಲೋ ಸರ್, ಓದಿ ಮೆಚ್ಚಿ ಯಾವಾಗಲೂ ಬೆನ್ನು ತಟ್ಟುವ ನಿಮಗೆ ಧನ್ಯವಾದಗಳು! 🙂
ಆಪ್ತವಾದ ಬರಹ.ಜೀವನದ ಅನುಭವವೇ ಸಾಹಿತ್ಯ.
ಆಪ್ತವಾದ ಬರಹ. ಜೀವನದ ಅನುಭವವೇ ಸಾಹಿತ್ಯ.
ನಾಗರೇಖಾ ಅವರೇ,
ನನ್ನ ಬರಹ ನಿಮಗೆ ಇಷ್ಟವಾಗಿದ್ದು ಕೇಳಿ ಖುಷಿಯಾಯ್ತು! ಹೌದು ನೀವು ಹೇಳಿದ್ದು ಅಕ್ಷರಶಃ ಸತ್ಯ 🙂
[…] (ಇಲ್ಲಿಯವರೆಗೆ) […]
ಅರ್ಥಪೂರ್ಣ ಲೇಖನ.ಉತ್ತಮ ಸಾಹಿತ್ಯ.ಓದಿಸುತ್ತ ಹೋಗುತ್ತೆ.ಆಲ್ ದಿ ಬೆಸ್ಟ್.ಸಹೋದರ.