ಎಲೆಕ್ಷನ್ನು: ಸಿದ್ದರಾಮ ತಳವಾರ, ದಾಸ್ತಿಕೊಪ್ಪ

shidram talawar
ಕೇರಿಯ ಜನ ಕಂಗಾಲಾಗಿದ್ದರು. ಗೋಡೆಯಲ್ಲಿದ್ದ ಗೂಟ ಸುಮ್ಮನೆ ತೆಗೆದು ಅದೆಲ್ಗೋ ಬಡ್ಕೊಂಡ್ರು ಅನ್ನೋ ಹಾಗೆ ಇದೆಲ್ಲಾ ನಮ್ಗೆ ಬೇಕಿತ್ತಾ ಅಂತ ಕೇರಿಯ ಹೆಣ್ಣು ಮಕ್ಕಳೆಲ್ಲಾ ಗುಸು ಗುಸು ಪಿಸು ಪಿಸು ಮಾತಾಡಲು ಶುರು ಮಾಡಿದ್ದರು. ಇರೋದಕ್ಕೆ ಸರಿಯಾದ ಸೂರಿಲ್ಲಾ ಕುಡಿಯೋದಕ್ಕೆ ನೀರಿದ್ರೂ ಕೇರಿಯಾಚೆ ಹೋಗಿ ಹಿಡ್ಕೊಂಡ ಬರೋ ಧೈರ್ಯ ಇಲ್ಲಾ. ಮನೇಲಿರೋ ಮುಟಗಿ ಹಿಟ್ಟು ಖಾಲಿ ಆಗಿರೋದ್ರಿಂದ ಮೂರು ದಿನದ ತಂಗಳ ರೊಟ್ಟಿಯನ್ನೇ ನೆನೆಸಿಕೊಂಡು ತಿನ್ನೋ ಟೈಮ್ ಬಂದೈತಿ. ಕೂಸುಗಳಿಗೆ ಹಾಲು ಕುಡಿದೇವಂದ್ರೂ ನಮ್ಮ ಹೊಟ್ಟೆಗ್ ಹಿಟ್ಟಿದ್ರೇ ತಾನೇ ಎದಿಯಾಗ್ ಹಾಲ್ ಬರೋದು ಅಯ್ಯೋ ಶಿವ್ನೇ ಅದೆಂಥಾ ಗತೀ ತಂದೆಪ್ಪಾ ನಮ್ಮ ಮನೆ ಗಂಡಿಸ್ರೀಗ್ ಅದೇನ್ ದೆವ್ವ ಮೆಟ್ಗೊಂತೋ ಅಂತ ಜೋಪಡಿ ಗೌರವ್ವ ಎದೆ ಎದೆ ಬಡ್ಕೊಂಡ ಅಳೋಕ ಶುರು ಮಾಡಿದ್ದು ನೋಡಿ ಕೇರಿ ಹೆಂಗಸ್ರೆಲ್ಲಾ ಹುಣಸೇ ಗಿಡದ ಕರೆಮ್ಮನ ಹತ್ತಿರ ಕೂತು ಆಕೆಗೆ ಸಮಾಧಾನ ಮಾಡ್ತಿದ್ರು. 
    
ಹಿಟ್ಟಿ ಬೀಸೋ ಗಿರಣಿಗೆ ಹೋಗೋ ಹಾಗಿಲ್ಲ, ಇರೋ ಒಂದು ಬಸಯ್ಯ ಸ್ವಾಮಿ ಕಿರಾಣಿ ಅಂಗಡೀಗ್ ಹೋಗ್ಬೇಕಂದ್ರೂನು ಕೇರಿ ಹಿತ್ಲಲ್ಲಿ ಬೇಲಿ ಹಚ್ಚೀರೋದ್ರಿಂದ ಹೋಗೋ ಹಾಗಿಲ್ಲಾ. ಧೋ ಅಂತ ಮಳೆ ಸುರೀತಿದ್ರೂ ಚುಮಣಿ ಬುಡ್ಡೀಲಿ ಚುಮಣಿ ಎಣ್ಣೆ ತೀರೀದ್ರೋದ್ರಿಂದ ಕತ್ಲಲ್ಲೇ ಕಾಲ ಕಳೀಬೇಕಾದ ಸ್ಥಿತಿ ಕೇರಿ ಹೆಣ್ ಮಕ್ಳು ಚಿಕ್ಕ ಚಿಕ್ಕ ಮಕ್ಳಿಗೆಲ್ಲಾ ಬಂದಿತ್ತು. ಯಾವುದೇ ದೈನಂದಿನ ಉಪಯುಕ್ತ ವಸ್ತುಗಳು ಬೇಕಾದ್ರೂ ನಾಲ್ಕು ಕಿಲೋ ಮೀಟರ್ರು ದೂರದ ಊರನ್ನೇ ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ ಆ ಕೇರಿಯವರದಾಗಿತ್ತು. ಮನೆ ಗಂಡಸ್ರೆಲ್ಲಾ ಊರ ಹೊರಗೆ ಕಾಲಿಡೋ ಹಾಗಿಲ್ಲಾ. ತಂಬಿಗೆ ತಗೊಂಡ ಹೋದ್ರೂನೂವೆ ಪೋಲಿಸಪ್ಪ ಜೊತೆಗೆ ಬರ್ತಾನೆ ನಾವೆಲ್ಲ ಹೇಗ್ ಬದುಕೋದು ಅಂತ ಸಾಂವಕ್ಕ ತನ್ನ ರಾತ್ರಿಯ ಕಷ್ಟ ಹೇಳ್ಕೊಳ್ಳುತ್ತಿದ್ದಾಗ ಇತರೆ ಹೆಂಗಸರೂ ಅದಕ್ಕೆ ಹೂಂಗುಡುತ್ತಿರುವುದ ಕಂಡು ಬಂತು. ಒಟ್ಟಾರೆ ಕೇರಿಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿ ಕೇರಿಯ ಜನ ಅದ್ವಾನವಾಗಿದ್ದಂತೂ ಎದ್ದು ಕಾಣುತ್ತಿತ್ತು.
    
“ ಬೆಳಕ ಹರೀದ್ರೆ ಎಲೆಕ್ಷನ್ನು ಮೂರು ವಾರದಿಂದ ಇದ್ನೆಲ್ಲಾ ನೋಡಿ ನೋಡಿ ನಮ್ಗಂತೂ ಸಾಕಾಗ್ ಹೋಗಿದೆ ಗೌಡ್ರನ ಯಾರಾದ್ರೂ ಎದುರ ಹಾಕೋತಾರಾ ನಿಮ್ಗೆ ಬುದ್ದಿ ಇಲ್ಲಾ ಆ ದುರಗಪ್ಪನ ಬೆನ್ನು ಹತ್ತಿ ಹೊಟೆಗ್ ಏನ್ ಹೇಲ್ ತಿನ್ನೂದೈತಿ ಅಂವಾ ಏನ್ ಕೊಡಾಂಗಿಲ್ಲಾ ಕಿಸಿಯಾಂಗಿಲ್ಲಾ ಮಕ್ಕಳ ಹಸವು ನೋಡಾಕಾಯ್ತಿಲ್ಲಾ ಗೌಡತಿ ಮನೀಗ್ ಹೋಗಿ ನಾಕ್ ತಂಗಳ ರೊಟ್ಟಿ ಇಸ್ಕೊಂಡ ಬರ್ತೀನಿ ಅದೇನಾಗುತ್ತೋ ಆಗ್ಲೀ “ ಅಂತ ಇರಪಣ್ಣನ ಹೆಂಡತಿ ಗಂಡನಿಗೆ ಆವಾಜ್ ಹಾಕುತ್ತಿದ್ದಳು. “ ಬೆಳಕ್ ಹರೀಲಿ ತಡಿ ನಮ್ ದುರಗ ಆರಿಸಿ ಬರ್ತಾನ ಅವರ ಮುಕಳ್ಯಾಗ ಗೂಟ ಹೊಡದಂಗಾತೈತಿ ನಮ್ದು ಸ್ವಲ್ಪ ಹವಾ ಗೊತ್ತಾಗ್ಲೀ ಆ ಮಕ್ಕಳಿಗೆ ” ಅಂತಾ ಧಿಮಾಕಿನ ಉತ್ತರ ಕೊಟ್ಟ ಇರಪನ್ನನ ನೋಡಿ ಅವನ ಆತ್ಮವಿಶ್ವಾಸಕ್ಕೆ ಹೆಂಡತಿ ಮೆಚ್ಚಿದ್ದೂ ಉಂಟು. ಕೇರಿ ಗಂಡಸರೆಲ್ಲಾ ಕ್ಯಾನವಾಸ್ ಮಾಡಿ ಸುಸ್ತಾಗಿ ರಾತ್ರೀ ಎಂಟಕ್ ಮನೀಗ್ ಬಂದು ನಮ್ಮ ಗುಡಿಸಲ ಮುಂದ ಜಮಾ ಆದ್ರು. “ ನೋಡ ಎಜ್ಜ ಎಲೆಕ್ಷನ್ನೀಗ್ ಕೈ ಹಾಕಿದ್ದಂತೂ ಆಗೇತಿ ಹ್ಯಾಂಗೂ ನಮ್ಮ ಮಲ್ಲಪ್ಪಜ್ಜಾನ ಅಂಜಿಸಿ ನಾಮಿನೇಶನ್ ಹಿಂದಕ್ ತಗೋಂಡಾರು ಆ ಮಕ್ಕಳು ನಾನಂತೂ ಹಿಂದಕ್ ಸರಿಯೋ ಮಾತೇ ಇಲ್ಲಾ ಐದ್ ಸಾವ್ರ ರೊಕ್ಕ ಕೊಡತೇನ್ ಮಗನ ತಗೋಂಡ ಊರ ಬಿಡ್ ಅಂತ ಧಮಕೀ ಹಾಕಿದ್ರೂ ನಿನ್ ರೊಕ್ಕ ತಂದ್ ನನ್ನ ಶೆಂಟಕ್ ಕಟ್ ನಮ್ಮ ಕೇರಿ ಮಂದಿ ನನ್ನ ಮ್ಯಾಗ ವಿಶ್ವಾಸ ಇಟಗೊಂಡಾರ ನಾವೂ ಏನಾದ್ರೂ ಮಾಡೂನ ಬರೀ ಅವರಿಗೆ ಡೊಗ್ಗೂದ ಬ್ಯಾಡ ಅಂತ ನಂಗ ಬೆಂಬಲ ಕೊಟ್ಟಾರ ನಾ ಏನ ಆದ್ರೂ ನಾಮಿನೇಶನ್ ಹಿಂದಕ್ ತಗೋಳ್ಳುದಿಲ್ಲಾ ಏನಾಕ್ಕೇತಿ ಆಗ್ಲೀ ಅಂತ ಮಾರೇಗೌಡಗ ಮಾತಾಡಿ ಬಂದೀನಿ. ಇದ್ರಾಗ ನಾ ಗೆಲ್ತೀನೋ ಬಿಡ್ತೀನೋ ಆದ್ರ ನಿಮ್ ವಿಶ್ವಾಸ ಅಂತೂ ನಾ ಮರ್ಯಾಂಗಿಲ್ಲಾ “ ಅಂತ ದುರಗ ಮಾತು ಪ್ರಾರಂಭಿಸಿದ.
    
ಒಳಗೊಳಗ ಅಂಜಿಕಿ ಇದ್ರೂ ಚಿಗಿರ ಮೀಸೀ ಹುಡಗೋರ ಅದಾರು ಇವರಾದ್ರೂ ಸ್ವಂತ ದುಡದ ನಾಕ್ ರೊಕ್ಕ ಗಳಿಸ್ಲೀ ಎಷ್ಟ ದಿನಾ ಅಂತ ನಮ್ಮಗತೇನ ಸಗಣಿ ಬಳಕೋತ ಜೀತಾ ಇರಬೇಕು ಅಲಾ? ಇವ್ರಾದ್ರೂ ತಂತಮ್ಮ ಕಾಲಮ್ಯಾಲ್ ನಿಂತ ನಾಕ್ ದುಡ್ಡ ಮಾಡ್ಕೋರಿ ನಮ್ ಜನಕ ಮನೀ ಮಾರ ಕೊಡಸ್ರೀ,,, ನಾವು ಅವರ ಮುಂದ ಕೈ ಒಡ್ಡೂದನ್ನ ಯಾವಾಗ ನಿಲ್ಲಸ್ತೀವೋ ಆವಾಗ ನಾವು ಪಾರಾದಂಗ,,, ತಿಳೀತಿಲ್ಲೋ ? ಏನೋ ಮಾಡಾಕತೇರಿ ಎಲ್ಲಾರೂ ಒಂದಾಗಿ ಮಾಡ್ರೀ ಒಂದಾಗಿ ಇರ್ರೀ ಅಂತ ಗಂಗಪ್ಪ ಅಜ್ಜಾ ಎಲ್ಲಾರಿಗೂ ತಿಳಿ ಹೇಳಿದ. “ ಊರಾನ ಮುಸುಲ್ರು ನಮಗ್ ಸಪೋರ್ಟ ಮಾಡ್ತೀನಂತ ಹೇಳಿದಾರು ಹುಸೇನಸಾಬ ಕಾಕಾಗ ನಿನ್ನೇ ಭೇಟಿ ಮಾಡೀನಿ ಅವ್ನೂ ನಾಕ್ ಬೈದು ಬುದ್ದಿ ಹೇಳಿದ ನಿಂಗ್ಯಾಕ್ ಬೇಕಿತ್ತಲೇ ಮಂಗ್ಯಾನ ಮಗನ ಕಮ್ಮಂಗ್ ದುಡ್ಕೋತ ಇದ್ರೀ ಇರ್ಬೇಕಿಲ್ಲಾ ಈ ಎಲೆಕ್ಷನ್ನು ಪಲೆಕ್ಷನ್ನು ನಮ್ಮಂತಾವ್ರಿಗಲ್ಲಾ ಲೇ ಮಂಗ್ಯಾ ಅಂತ ನಾಕ್ ಮಾತ ಹೇಳಿದ ಆಮ್ಯಾಗ ನನ್ನ ಮಾತನ್ನೂ ಕೇಳಿದ ನಂತ್ರ ನಿಂದ ಖರೇ ಐತೀಲೆ ತಮ್ಯಾ ಹೋಗು ನಮ್ಮ ಮಂದೀಗೂ ನಾನ್ ಹೇಳ್ತೀನಿ ಸಂಜೀಕಡೆ ಆಜಾ ಆಗೂ ಮುಂದ ಮಸೂತಿಗೆ ಕರಿಸಿ ಎಲ್ಲಾರಿಗೂ ಹೇಳ್ತೀನಿ ಅಂತ ಹೇಳ್ಯಾನ “ ದುರಗ ಮಾತು ಮುಂದುವರೆಸಿದ.
    
“ ಗೌಡ್ರು ಇರೂಮಟ ನಮ್ ಊರಿಗೆ ಪೋಲೀಸ್ರು ಬರೂದಿಲ್ಲಾ ನಮಗೆಲ್ಲಾ ಅವ್ರ ಪೋಲಿಸ್ರು ಅವ್ರ ಕಾನೂನು ನಾಕ್ ಬೂಟಗಾಲಿಲೇ ಒದ್ದು ಬುದ್ದೀ ಹೇಳಿದ್ರ ಮುಗೀತಿತ್ತ ಅಂತಾದ್ರಾಗ ಯಾವತ್ತೂ ಊರಿಗೆ ಬರದ ಪೋಲಿಸ್ರು ಈ ಹೊಲ್ಯಾ ಹಡಿಸಿಮಕ್ಕಳ ಕಿತಾಬಜ್ಜಿಯಿಂದ ಊರಿಗ್ ಕಾಲೀಡುವಂಗ್ ಆತ ನೋಡ್ರಲೇ ಈ ಮಕ್ಕಳದ ಎಷ್ಟ ಸೊಕ್ಕಾರ ಇರಬೇಕಂತೀನಿ ನಾ “ ಅರಳೀ ಕಟ್ಟೆಗೆ ಕೂತು ಶೆರೆ ಮಾರೂ ನಾಗಪ್ಪನ ಅಂಗಡ್ಯಾಗ ಈ ಮಾತುಗಳು ಹಂಗ ಕೇಳಿ ಬರ್ತಿದ್ದು. “ ಊರ ಮಂದಿಗೆಲ್ಲಾ ಆ ಇಬ್ರು ಹಿರಿ ಮನಸ್ಯಾರ ಎಷ್ಟ ಚಲೋ ಇದ್ರು ಎಪ್ಪಾ ಎವ್ವಾ ನ್ನದ ಮಾತಾಡ್ತಿರ್ಲಿಲ್ಲಾ ಈ ಮಕ್ಕಳಿಗೆ ಕಿಮ್ಮತ್ತ ಕೊಡೂದ ಗೊತ್ತಿಲ್ಲಾ. ಮ್ಯಾಲ ಯಾವ್ದೂ ಕೆಳಗ್ ಯಾವ್ದೂ ಅನ್ನೂದನ್ನ ಮರತು ಹಂಗ ಚಾದಂಗಡಿಗೂ ರಬ್ತಾಉ ಸೆರೆದಂಗಡಿಗೂ ಬರ್ತಾರೂ ಹಜಾಮರ ಅಂಗಡಿಗೂ ಬರ್ತಾರ್ಲೇ ಈಗೀಗ ನಾಕ್ ಮಂದಿ ಸಾಲಿ ಕಲತ್ತಾರ ಅಂತ ಅವ್ರಿಗಂತೂ ದೊಡ್ಡಾವ್ರ್ಯಾರ ಸಣ್ಣವ್ರ್ಯಾರ ಗೊತ್ತ ಇಲ್ಲ. ಈ ಅಂಬೇಟಕರ್ ಇವರಿಗೆ ಬಾಳ ಸವಲತ್ತ ಕೊಟ್ಟ ತಪ್ಪ ಮಾಡ್ಯಾನ್ ಇಲ್ದಿದ್ರ ಜೀತ ಇದ್ದ ಸಾಯ್ಬೇಕಿತ್ತ ಇವ್ರೆಲ್ಲಾ ಜಾತಿ ಗೊತ್ತಿಲ್ಲಾ ಕುಲಾ ಗೊತ್ತಿಲ್ಲಾ ಮೈ ಮ್ಯಾಲ ಬರ್ತಾವ ಹಂಗ “ ಅಂತ ತಪೇಲಿ ಬಸಯ್ಯ ಹೊಟ್ಯಾನ ಸಂಕಟ ತೋಡ್ಕೋಂಡ.
    
ಕಾನೂನಿನ ಪ್ರಕಾರ ಸಾಮಾನ್ಯ ಪುರುಷ ಸೀಟಿಗೆ ಹರಿಜನರೂ ಎಲೆಕ್ಷನ್ನಿಗೆ ಕುಂಡ್ರಬಹುದು ಅಂತ ಯಾಂವಗ ಹೋಟ್ ಹೆಚ್ಚ ಬೀಳ್ತಾವೋ ಅಂವ ಗೆಲ್ತಾನ ಅದಕ್ ಕೇರಿಯ ದುರಗ ಊರ ಹಿರಿಯ ಮಾರೇಗೌಡನ ವಿರುದ್ದ ಎಲೆಕ್ಷನ್ನಿಗೆ ಕುಂತಾನ ಒಂದ ವಾರದಿಂದ ಮನೀ ಮನೀಗ್ ಹೋಗಿ ಸೈಕಲ್ ಗುರುತಿಗೆ ಹೋಟ್ ಹಾಕ್ರೀ ಅಂತ ಕಾಲ್ ಬಿದ್ದ ಬರಾತಾನ ಈ ಮಗಾ ನಮ್ ಕಾಲ ಹಿಡಿಯೂದಕ್ಕೂ ಕಿಮ್ಮತ್ತಿಲ್ಲಾ. ಇಂವಗ ಗೌಡ್ರು ಹ್ಯಾಂಗ ಮಾಡ್ತಾರ ನೋಡಕೊಂತ ಇರ ಅಂತ ಊರ ಮಂದಿಯೆಲ್ಲಾ ದುರಗನ ಎದೆಗಾರಿಕೆಯನ್ನು ಪರೋಕ್ಷವಾಗಿ ಹೊಗಳುತ್ತಿದ್ದರು. ರಾತ್ರಿಯೆಲ್ಲಾ ಕೇರಿ ಮಂದಿ ಮೀಟಿಂಗ್ ಮುಗಿಸಿ ದುರಗ ಮಾತು ಮುಗೀಸೋ ಮುಂಚೆ “ ನೋಡ್ರೀ ಅಕ್ಕಾಗೋಳ್ರ್ಯಾ ಚಿಗವ್ವಗೋಳ್ರ್ಯಾ ಎಮ್ಮ ಎಜ್ಜ ಮಾವ ನಾಳಿ ಎಲ್ಲಾರೂ ಈ ಸೈಕಲ್ ಗುರ್ತಿಗೆ ಹೋಟ್ ಹಾಕ್ಬೇಕು. ಅದನ್ ಬಿಟ್ಟ ಯಾವ್ದಕ್ಕೂ ಹೋಟ್ ಹಾಕ್ಬ್ಯಾಡ್ರೀ ಮತ್ತ ನಿಮಗೆಲ್ಲಾ ಕೈ ಮುಗೀತೀನಿ ” ಅಂತ ಮಾತು ಮುಗಿಸಿದ.
    
ದಲಿತ ಕೇರಿಯ ದುರಗ ಊರ ಗೌಡ್ರ ವಿರುದ್ದ ಎಲೆಕ್ಷನ್ನಿಗೆ ನಿಂತದ್ದು ಯಾರೂ ಒಪ್ಪೋಕ ಆಗದಿದ್ರೂ ಈ ದುರಗನ ಮೊಂಡು ಹಠ, ಧೈರ್ಯ ಊರಿನ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಇದೂವರೆಗೆ ಬರೀ ಅವಿರೋಧ ಆಯ್ಕೆಯಾಗಿ ಗೌಡರ ಸಮ್ಮತಿಯ ಮೇರೆಗೆ ಪಂಚಾಯತಿ ಆಡಳಿತ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ನಮ್ಮ ಊರಿನದ್ದಾದರೂ ಈಗ ಎಲೆಕ್ಷನ್ ಆಗದ ಊರಲ್ಲಿಯೇ ಗೌಡರ ವಿರುದ್ದ ದಲಿತನೊಬ್ಬ ಸ್ಪರ್ಧೆ ಮಾಡುತ್ತಿರುವುದರಿಂದ ನಮ್ಮ ಊರು ಮತ್ತೊಂದು ದಾಖಲೆಗೆ ಸಾಕ್ಷಿಯಾಗಿತ್ತು ಅಲ್ಲದೇ ಸರ್ಕಾರಿ ದಾಖಲೆಗಳಲ್ಲಿ ಶಾಂತ ಊರು ಅಂತಾ ದಾಖಲಾಗಿದ್ದ ಈ ಊರಲ್ಲಿ ದಲಿತ ದುರಗನಿಗೆ ಹಾಗೂ ಕೇರಿ ಜನರಿಗೆ ಪೋಲಿಸ್ ಪ್ರೊಟೆಕ್ಷನ್ನು ಕೊಟ್ಟ ಸರ್ಕಾರ ಆವಾಗಿನಿಂದಲೇ ನಮ್ಮ ಊರಿನ ಒಂದು ವಾರ್ಡನ್ನು ಅತೀ ಸೂಕ್ಷ್ಮ ಮತಗಟ್ಟೆ ಅಂತ ಬೋರ್ಡ ಒತ್ತಿಬಿಟ್ಟಿದ್ದರು. 
    
ಊರಿನ ಜನರೆಲ್ಲಾ ಅತೀ ಉತ್ಸುಕತೆಯಿಂದ ಕಾಯುತ್ತಿದ್ದ ಎಲೆಕ್ಷನ್ ಬೆಳಕಾಯಿತು. ರಾತ್ರಿಯೆಲ್ಲಾ ನಾಗಪ್ಪನ ಶೆರೆ ಕುಡಿದು ವಾಂತಿ ಸಂಡಾಸು ಹತ್ತಿದ್ದ ಅದೇಷ್ಟೋ ಗಂಡಸರು ಮೇಲೆ ಏಳದ ಹಾಗೆ ನಶೆಗೆ ದಾಸರಾಗಿದ್ದರು. ಒಂದಿಷ್ಟು ಜನ ಅದರಲ್ಲಿ ತಲೆ ಹಿಡಿದು ಮತ್ತೇ ಶರೆದ ಆಸೆಗೆ ವೋಟು ಹಾಕುವ ಐಡಿಯೊಂದಿಗೆ ಕಾಯುತ್ತ ನಿಂತಿದ್ದರು. ಗೌಡರಿಗೆ ಎಲ್ಲಿಲ್ಲದ ಆತ್ಮವಿಶ್ವಾಸ ಕೇರಿಯ ಜನರಿಗೆ ಭಯ ಎಲೆಕ್ಷನ್ ಮುಗಿದ ಮೇಲೆ ಬದುಕುವುದು ಹೇಗೆ ಅನ್ನೋ ಚಿಂತೆಯಲ್ಲೇ ಮತಗಟ್ಟೆಗೆ ಆಗಮಿಸಿದ ಮತದಾರರೆಲ್ಲಾ ಒಂದೇ ಸ್ಥಾನಕ್ಕೆ ನಡೆದ ಎಲೆಕ್ಷನ್ನಿಗೆ ವೋಟ್ ಹಾಕಿ ಮನೆಗೆ ನಡೆಯುತ್ತಿದ್ದರು. ಕೆಲವರು ದುರಗನಿಗೆ ಕೈ ಕುಕುತ್ತಿದ್ದುದ ಕಂಡು ಗೌಡರ ಕಡೆಯವನು ಗುರಾಯಿಸುತ್ತಿದ್ದನಾದರೂ ಪ್ರಜಾಪ್ರಭುತ್ವದ ತಾಕತ್ತು ಆತನನ್ನು ಸುಮ್ಮನೆ ಕೂಡುವಂತೆ ಮಾಡಿತ್ತು. ಮಧ್ಯಾಹ್ನದ ಹೊತ್ತಿಗಾಗಲೇ ವೋಟಿಂಗ್ ಮುಗಿದಿತ್ತಾದರೂ ಸಂಜೆಯವರೆಗೆ ಕಾದು ಕೂತ ಚುಆವಣಾ ಸಿಬ್ಬಂದಿ ಸಂಜೆ ಒಟ್ಟು ಮತಗಳನ್ನು ಎಣಿಕೆ ಮಾಡಿ ಫಲಿತಾಂಸಕ್ಕೆ ಅಣಿಯಿರಿಸಿ ಪುಕಾರಿಸುವುದಾಗಿ ಮೈಕಿನಲಿ ಘೋಷಿಸಿದರು.
    
ದುರಗ ಹಾಗೂ ಕೇರಿಯ ಜನರಿಗೆ ಅಂಜಿಕೆಯಿತ್ತಾದರೂ ಇಷ್ಟಾದರೂ ಧೈರ್ಯ ಮಾಡಿದೆವಲ್ಲಾ ಎಂಬ ಸಮಾಧಾನ ಇತ್ತು. ಜೊತೆಗೆ ಮುಂದೆ ಬದುಕುವ ಬಗ್ಗೆಯೂ ಚಿಂತೆ ಕಾಡುತ್ತಿತ್ತು. ಚುನಾವಣಾ ಸಿಬ್ಬಂದಿ ಇಬ್ಬರನ್ನೂ ಕರೆದು ಕೈ ಕೈ ಮಿಲಾಯಿಸಿ ಸ್ಪರ್ಧೇಯ ಫಲಿತಾಂಸ ಈಗಷ್ಟೇ ಹೇಳುವೆವು. ಎಲ್ಲರೂ ಸಮಾಧಾನದಿಂದ ಇರಬೇಕು ಶಾಂತಿಯನ್ನು ಯಾರೂ ಕದಡಬಾರದು ಅಂತಾ ಪೋಲೀಸಿನವ ಪುಕಾರಿಸಿದ. ಗೌಡರಿಗೂ ಎದೆ ಢವ ಢವಗುಡುತ್ತಿದ್ದಾದರೂ ತೋರಿಸಲು ಹಿಂಜರಿಯುತ್ತಿದ್ದ. ಅದೇ ದುರಗನಿಗೆ ಗೆದ್ದರೂ ಅಷ್ಟೇ ಸೋತರೂ ಅಷ್ಟೇ ಕುಸ್ತಿಯ ಕಣದಲ್ಲಿ ಹುಲಿಯೊಂದಿಗೆ ಕದನಕ್ಕಿಳಿದ ಹೆಮ್ಮೆ ನನ್ನದು ಎನ್ನುವ ಸಮಾಧಾನವಿತ್ತು. ಎಲ್ಲರೂ ಕಾಯುತ್ತಿರುವ ಕುತೂಹಲ ಫಲಿತಾಂಶ ಹೊರಬಂದಿತ್ತು. ಗೌಡರು ನಲವತ್ತು ಮತಗಳಿಂದ ಗೆದ್ದಿದ್ದಾರೆ ಎಂತಾ ಪುಕಾರಿಸಿದ ಕೂಡಲೇ ಗೌಡರ ಬೆಂಬಲಲಿಗರೂ ಕೇಕೆ ಹಾಕಿ ಗುಲಾಲು ತೂರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ದುರಗ ಹಾಗೂ ಬೆಂಬಲಿಗರು ನಸುನಗುತ್ತಲೇ ಕೇರಿಯತ್ತ ಮುಖ ಮಾಡಿದರು.
-ಸಿದ್ದರಾಮ ತಳವಾರ, ದಾಸ್ತಿಕೊಪ್ಪ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಚಂದ್ರಶೇಖರ ಮಾಡಲಗೇರಿ.
ಚಂದ್ರಶೇಖರ ಮಾಡಲಗೇರಿ.
7 years ago

ಚಂದದ ಕತೆ. ಶುಭಹಾರೈಕೆಗಳು…ಲೇಖಕರಿಗೂ ಮತ್ತು ಪಂಜು ಬಳಗಕ್ಕೂ…

1
0
Would love your thoughts, please comment.x
()
x