ಕಾವ್ಯಧಾರೆ

ಎರೆಡು ಕವಿತೆಗಳು:ಅನುರಾಧ ಸಾಮಗ ಹಾಗೂ ಪ್ರೇಮಾಶ್ರೀ

 

ಕಣ್ಣೀರಿಗೂ, ಎದೆಯ ಆರ್ದ್ರತೆಗೂ

ಒಪ್ಪಿಗೆ ಮುದ್ರೆಯ ಪ್ರಮಾಣ ಪತ್ರವೇ?!

ಅವು ತಮ್ಮ ಸಾಬೀತು ಪಡಿಸಬೇಕೇ?..

ಸ್ಪಂದನಕಿಲ್ಲಿ ಜಾತಿಯಗ್ನಿಪರೀಕ್ಷೆಯ ಪಾಡು

ನಿಜಭಾವಕೆ ಬಂಜೆಯ ಹೆರಿಗೆಬೇನೆಯ ಪಟ್ಟ

 

ರಕ್ತಮಾಂಸಗಳೊಂದೇ, ದೇಹಗೂಡೊಂದೇ

ವಾಸವಲ್ಲಿ ನೂರಾರು ಹಕ್ಕಿಯಂಥ ಭಾವಗಳಿಗೆ.

ಬಣ್ಣ, ಗಾತ್ರ, ಕೂಗಷ್ಟೇ ಬೇರೆಬೇರೆ,

ಹಾರಾಟ ಜನ್ಮಸಿದ್ಧಹಕ್ಕು ಹಕ್ಕಿ ಜನ್ಮಕೆ.

ನೀ-ನಾನೆಂಬ ನಿರ್ಬಂಧವಿಲ್ಲದ ಸ್ವಚ್ಛಂದ ಚಲನೆ.

 

ಶೋಷಣೆಗೆದುರು ನಿಂತವರೇ,

ಘೋಷಣೆ, ಬಾವುಟದಾಸರೆಯಿರದಲ್ಲೂ,

ಯಾವ ಜೀವ-ಬಂಧುವಿನದಾದರೂ,

ಹಸಿವೆ-ದಾರಿದ್ರ್ಯಕೆ, ದಮನ-ಅಸಮಾನತೆಗೆ

ಸಾವು-ನೋವಿಗೆ ಒಳಗಿಲ್ಲೆಡೆ ಕರಗುತದೆ..

ಅನ್ಯಾಯಕೆ ಒಳಗೆಲ್ಲೆಡೆ ಮರುಗುತದೆ,

ದಬ್ಬಾಳಿಕೆಗೆ ಒಳಗೆಲ್ಲೆಡೆ ಕೆರಳುತದೆ,

ಕರಗುವ, ಕೆರಳುವ, ಮರುಗುವ ಮಿಡಿತಕೆ

ಜಾತಿಯಿಲ್ಲ, ಬಣ್ಣವಿಲ್ಲ, ಹೆಸರೂ ಇಲ್ಲ….

 

ಭಾಗವಾಗದಿರಿ, ಮನದಿಂದ ಮನಕೆ ಸೇತುವಿದೆ,

ಮುರಿಯದಿರಿ, ಅಂತಃಕರಣವಿಲ್ಲದೆಡೆಯಿಲ್ಲ..

ನಿಜಸ್ಥಿತಿಯ ಆಪಾದನೆಯಡಿ ಹುಗಿಯದೆ,

ನಿನ್ನೆಯನೆಳತಂದು ಇಂದಿಗೆ ಗೂಬೆ ಕೂರಿಸದೆ

ಬನ್ನಿ ಕೈಯ್ಯೆತ್ತಿ ಜೈ ಎನ್ನುವಾ, ಧಿಕ್ಕಾರ ಬೇಡ

ಪ್ರೀತಿ ಮುನ್ನಡೆಸಲಿ, ಸಂಶಯ-ದ್ವೇಷ ಬೇಡ…

~ಅನುರಾಧ ಸಾಮಗ


 

   ವರ್ಗ



ಹೊಸ ನೀರು, ಹೊಸ ಗಾಳಿ,

ಹೊಸ ಮಣ್ಣು, ಕುಡಿಯೊಡೆದು

ಚಿಗುರಿ ಹಸನಾಗಿರಲು

ಮತ್ತೆ ವರ್ಗ                                                               

ಹಿತಮನಗಳನು ತಟ್ಟಿ

ನೆನಪುಗಳ ಬುತ್ತಿ 

ಬೇರು ಕೀಳುವ ಗಾಯ

ಗುರುತಿರದ ದೂರದೂರಲಿ

ಬೇರೂರುವ ಅನಿವಾರ್ಯ 

ತೆರೆಯಲಲ್ಲೊಂದು  ಕದ

ಆತಂಕ ಬಿಗಿತಗಳ ಕೋಟೆ

ರಾಶಿ ಅನುಭವಗಳ ಮೂಟೆ

ಪಕಳೆಯರಳಿಸುತ ಹೊಸ

ತನವನರಸುವ  ಮನ 

ಸ್ನೇಹ ಕೊಳಲನೂದುತ

ಮಾಲೆ ಸೇರಬಯಸುವ

ಮತ್ತೆ ಕಳಚಿ ತೆರಳಲಿರುವ

ನಾವು ಬಿಡಿ ಹೂವುಗಳು 



ತರ್ಕವಿಲ್ಲ, ಸರದಿಯಿಲ್ಲ

ಕಟ್ಟಕಡೆಯ ವರ್ಗಕೆ

ಎಲ್ಲವನೂ ಎಲ್ಲರನೂ

ಬಿಟ್ಟು, ದೇಹ ಕಳಚಿ

ಕೊನೆಪಯಣ ಮೇಲಕೆ

ಪಾಪ ಪುಣ್ಯ ಲೇಪದೊಂದಿಗೆ

ಈ ಸರ್ಗದಲಿ ನಾವು ನೀವು

ಎಲ್ಲರೂ ಒಂಟಿ ಪಯಣಿಗರು

                           ~ಪ್ರೇಮಾಶ್ರೀ
ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಎರೆಡು ಕವಿತೆಗಳು:ಅನುರಾಧ ಸಾಮಗ ಹಾಗೂ ಪ್ರೇಮಾಶ್ರೀ

Leave a Reply

Your email address will not be published. Required fields are marked *