ರಾಧೆ…
ನನ್ನ ನೆನಪಿಗಾಗಿ
ನವಿಲು ಗರಿಯನೊಂದನಿಟ್ಟುಕೊ
ನಿಂಗೆ ಬೇಸರವಾದಾಗ
ನಿನ್ನ ಮಡಿಲಾಗಿ
ಮನದ ಮಿದುವಾಗಿ
ನಿನಗೆ ಚೈತನ್ಯ ತಂದೇನು
ರಾಧೆ…
ನನ್ನ ನೆನಪಿಗಾಗಿ
ಕೊಳಲನೊಂದಿಟ್ಟುಕೊ
ನಿಂಗೆ ನೋವಾದಾಗ
ನಿನ್ನ ಇನಿಯನಾಗಿ
ಇನಿಯನ ಒಡಲಾಗಿ
ನಿನಗೆ ನಲಿವು ತಂದೇನು
ರಾಧೆ…
ನನ್ನ ನೆನಪಿಗಾಗಿ
ಮುಡಿಗೆ ಹೂವಂದನಿಟ್ಟುಕೊ
ನಿಂಗೆ ಹಿತವಲ್ಲದ ಸಮಯದಿ
ನಿನ್ನ ಗೆಳಯನಾಗಿ
ಹಿತೈಸಿಯಾಗಿ
ನಿನಗೆ ಆತ್ಮಸಖನಾದೆನು.
–ಸುಮಿತ ಮೇತ್ರಿ, ಹಲಸಂಗಿ
ಬಿಳಿಹಾಳೆಯ ತುಂಬಾ
ಅಕ್ಷರಗಳ ಎರಚಿ ಕುಂತೆ
ನಿನಗೊಂದು ಪ್ರೇಮ ಪತ್ರವ
ಬರೆಯುವ ಶುರುವಿಗೆ
ಏಕೋ ಸರಿಯೆನಿಸಲಿಲ್ಲ
ಹಾಳೆಯ ಹದಿನಾರು ಚೂರಾಗಿಸಿ
ಕಸದ ಬುಟ್ಟಿಯ ಬಾಯಿಗೆಸೆದೆ
ಮತ್ತೊಮ್ಮೆ,
ಹೊಸದೊಂದು ಕಾಗದ, ಅದೇ ಲೇಖನಿ
ಈ ಬಾರೀ ತುಂಬಾನೇ ಯೋಚಿಸಿ
ಶುಭ್ರ ನೀಲಾಕಾಶದ ಹೊಳೆವ ಚುಕ್ಕಿಗಳ
ಕಿತ್ತು ತಂದು
ಹಾಳೆಯ ತುಂಬಾ ಅಂಟಿಸಿದೆ
ಆದರೂ ಏನೋ ಕೊರತೆ
ಚಂದಮಾಮನು ಕೈಗೆ ಸಿಗದೇ
ತಪ್ಪಿಸಿಕೊಂಡಿದ್ದ
ಉಂಡೆಗಟ್ಟಿದ ಹಾಳೆ
ಮತ್ತೊಮ್ಮೆ ಕಸದ ಬುಟ್ಟಿಗೆ
ಮತ್ತೊಂದು ಕಾಗದ
ಈ ಬಾರೀ ಹೊಸದೊಂದು
ಬಣ್ಣದ ಲೇಖನಿ
ತುಂಬಾ ಮುತುವರ್ಜಿಯಿಂದ
ನೂರೊಂದು ಹೂವುಗಳ ತಂದು
ಕಾಗದದ ತುಂಬಾ ಹರಡಿದೆ
ಪರಿಮಳವು
ತಂಗಾಳಿಯ ಹುಡುಕಿ ಹೋಗಿತ್ತು
ಮತ್ತೊಮ್ಮೆ ಕಾಗದ ಹದಿನಾರು ಚೂರು
ಪ್ರೇಮ ಪತ್ರದಲ್ಲಿ
ಬರೀ ಅಕ್ಷರಗಳು ಮತ್ತು
ಕೊರತೆಗಳೇ
ನಾನಿರುವುದಿಲ್ಲ, ನೀನಿರುವುದಿಲ್ಲ
ಮತ್ತು ನಾವಿರುವುದಿಲ್ಲ
ಕೊನೆಗೊಂದು ನಿಶ್ಚಯವಾಯ್ತು
ನಿನ್ನ ಕಣ್ಣ ಕಾಗದದ ಮೇಲೆ
ನನ್ನ ಮನದ ಅಕ್ಷರಗಳ ಇಳಿಸಬೇಕು
ನಾಳೆ ನಿಮ್ಮನೆಯ ಬೀದಿಗೆ ಬರುವೆ
ನೀನು ಅಂಗಳದಲ್ಲಿ ರಂಗೋಲಿ ಬರೆವಾಗ
ನಿನ್ನೆದುರು ನಿಂತು, ಕಣ್ಣಿಗೆ ಕಣ್ಣಿಟ್ಟು
ಹೇಳಿಬಿಡುವೆ:
ಹೇ… ಹುಡುಗಿ
ನಿನ್ನ ನಾನು ತುಂಬ ತುಂಬಾನೇ ಪ್ರೀತಿಸುವೆ..
ಎಷ್ಟೆಂದರೇ-
'ಇಡೀ ಜಗತ್ತೇ ನಿನ್ನನ್ನು ದ್ವೇಷಿಸಲಿ
ನಿನಗಷ್ಟೂ ಪ್ರೀತಿಯ
ನಾನೊಬ್ಬನೇ ಕೊಡಬಲ್ಲೇ…'
-ನವೀನ್ ಮಧುಗಿರಿ
ಪ್ರೀತಿಯ ಮಿಡಿತವನ್ನು ಬಣ್ಣಿಸಿದ ಪರಿ ಬಹಳ ಇಷ್ಟವಾಯಿತು
ಚೆನ್ನಾಗಿವೆ… ಕವಿತೆಗಳು……ನವೀನ್ ಮತ್ತು-ಸುಮಿತ ಮೇತ್ರಿ ಈರ್ವರಿಗೂ ಅಭಿನಂದನೆಗಳು.
ಸುಂದರ ಕವಿತೆಗಳು.
ತುಂಬಾ ಸುಂದರವಾದ ಕವಿತೆಗಳು
ಸುಂದರವಾದ ಕವಿತೆಗಳು
eradoo kavithegalu super… manada mugilaleega baree preetiya chittare kachaguli idutive….
Thank you Naveen bhai and sumith..
ಬೆಳೆಯುವ ಸಿರಿ ಮೊಳಕೆಯಲ್ಲಿ,ಸುಂದರ ಕವಿತೆಗಳು
[…] https://www.panjumagazine.com/?p=6356 Share this:TwitterFacebookGoogleLike this:Like Loading… […]