ಪಂಜು-ವಿಶೇಷ

ಎರಡು ಕಿರು ಲೇಖನಗಳು: ಹೆಚ್.ಕೆ. ಶರತ್, ಸಂದೇಶ್ ಎಲ್. ಎಂ.

ಬದುಕಿನ ಬುಡದಲ್ಲಿ ಅದೆಷ್ಟು ದ್ವಂದ್ವಗಳು?

ಮಡುಗಟ್ಟಿದ ಮೌನ. ಮಾತಿನ ಮನೆಯಲ್ಲಿ ಸೂತಕ. ಸಂತಸ ಹೊತ್ತು ಮೆರೆಯುತ್ತಿದ್ದ ಮನಸ್ಸು ನೀರವತೆಯ ದಡದಲ್ಲಿ ನಿಸ್ತೇಜವಾಗಿ ಕೂತಿದೆ. ಅಕಾರಣವಾಗಿ ಬದುಕು ಬೇಸರವೆನಿಸಿದೆ.

ಎಲ್ಲದಕ್ಕೂ ಕಾರಣ ಹುಡುಕುವ ಬುದ್ಧಿಗೆ ಸವಾಲೊಡ್ಡುವ ಅಕಾರಣಗಳ ನಡುವಲ್ಲಿ ಬದುಕಿನ ಬಹುದೊಡ್ಡ ಸಡಗರವಿದೆ. ಹಾದಿ ಬದಿಯಲ್ಲಿ ಕಣ್ಣಿಗೆ ಬಿದ್ದ ಅವಳನ್ನು ಆವಾಹಿಸಿಕೊಳ್ಳುವುದರಲ್ಲಿ ಇರುವುದು ಕೇವಲ ಅಕಾರಣ.

ಎಲ್ಲವನ್ನೂ ಲೆಕ್ಕಾಚಾರದ ತಕ್ಕಡಿಯೊಳಗೆ ತೂಗಲು ಸಾಧ್ಯವಾದರೆ ಬದುಕು ಸಿದ್ಧ ಮಾದರಿಯೊಳಗೆ ಸಮಾಧಿಯಾದಂತಲ್ಲವೇ?

ತಿಕ್ಕಲುತನ ಮೈಗಂಟಿಸಿಕೊಳ್ಳದೇ ಹೋದರೆ ಮನಸು ಹಗುರಾಗಿಸಿಕೊಳ್ಳುವುದು ಹೇಗೆ? ಗಾಂಭೀರ್ಯದ ತೆಕ್ಕೆಯಲ್ಲಿರುವುದು ಹುಸಿ ಶ್ರೇಷ್ಠತೆ ಅಲ್ಲವೇ? ಇದ್ದಕ್ಕಿದ್ದಂತೆ ತೆರೆದುಕೊಳ್ಳುವ ಬಾಂಧವ್ಯದ ಬಾಗಿಲುಗಳನ್ನು ಏಕೆ ಮುಚ್ಚಬೇಕು?

ಒಳಗೆ ಒಳ್ಳೆತನವಿದ್ದರೂ ಅದು ಹೊರ ಬರುವಷ್ಟರಲ್ಲೇ ಘಟಿಸುವ ಅವಘಡಗಳಿಗೆ ತಡೆಯೊಡ್ಡುವವರಾರು? ಏನೂ ಇಲ್ಲವೆನಿಸುವ ಜಾಗದಲ್ಲೂ ಏನೇನೋ ಇರಬಹುದಲ್ಲವೇ? ಅವಳ ಮಾತಲ್ಲಿರುವ ಮಾಧುರ್ಯಕ್ಕೆ ಅವನೊಬ್ಬ ಮಾತ್ರ ಕಿವಿಯಾಗುವ ಸೋಜಿಗವೇ ಪ್ರೀತಿ ಇರಬಹುದೇ?

ಲೆಕ್ಕಾಚಾರದಲ್ಲೇ ಬದುಕಿನ ಸಂಭ್ರಮ ಕಂಡುಕೊಳ್ಳಲು ಹೊರಟವರಿಗೆ ಆಸ್ಪತ್ರೆಯ ಬೆಡ್ಡುಗಳ ಮೇಲೆ ಮಲಗಿಕೊಂಡು ಸಾವಿಗೆ ಸಮೀಪವಾಗುವಾಗ ಬದುಕಿನ ಹೊಸ ಸಾಧ್ಯತೆ ಕಣ್ಮುಂದೆ ಬಂದು ಜ್ಞಾನೋದಯವಾಗಬಹುದೇನೋ?

ನಾನು ಚಿಂತಿಸುವುದಿಲ್ಲ. ಹೀಗೆ ಅಂದುಕೊಳ್ಳುವುದೇ ಒಂದು ಚಿಂತನೆ ಅಲ್ಲವೇ? ಮಾಡಲು ಅಸಂಖ್ಯ ಕೆಲಸಗಳಿವೆ. ಮಾಡಬೇಕೆನಿಸಿದಾಗ ಪುರುಸೊತ್ತಿರುವುದಿಲ್ಲ. ಖಾಲಿ ಕೂತಾಗ ಮಾಡುವ ಮನಸ್ಸಾಗುವುದಿಲ್ಲ. ಬದುಕಿನ ಬುಡದಲ್ಲಿ ಅದೆಷ್ಟು ದ್ವಂದ್ವಗಳಿವೆ?

ಮಾತು ಮಾತಿಗೂ ಆವರಿಸಿಕೊಳ್ಳುವ ವಾಸ್ತವದ ಛಾಯೆ ಅಸಲಿಗೂ ವಾಸ್ತವವೇ ಆಗಿರುತ್ತದೆಯೇ? ಭ್ರಮೆ ಮತ್ತು ವಾಸ್ತವದ ಸೃಷ್ಟಿಕರ್ತರು ನಾವೇ ಅಲ್ಲವೇ?

ಜ್ಞಾನ ಅಮೂರ್ತ. ತಂತ್ರಜ್ಞಾನ ಮೂರ್ತ. ಅಮೂರ್ತ ಮತ್ತು ಮೂರ್ತತೆಯ ನಡುವೆ ಮತ್ತೇನೊ ಇರಬಹುದಲ್ಲವೇ?

ಸಾಧ್ಯತೆಗಳ ಬೆನ್ನತ್ತಿ ಹೊರಟರೆ ಬದುಕು ಮತ್ತಷ್ಟು ಆಪ್ತವಾಗುತ್ತದೆ. ನಾವೇ ನಿರ್ಮಿಸಿಕೊಂಡ ಸಮಾಜ ಎಷ್ಟೋ ಸಾಧ್ಯತೆಗಳ ಹಾದಿ ಮುಚ್ಚಿದೆ.

ಕಾಣದ ಸತ್ಯಕ್ಕೆ ನಾವಿಟ್ಟ ಹೆಸರು ದೇವರು. ಬರಿ ದೇವರಷ್ಟೆ ಇದ್ದಿದ್ದರೆ ತೊಂದರೆ ಇರುತ್ತಿರಲಿಲ್ಲ. ಧರ್ಮ, ಜಾತಿ, ಆಚಾರ, ಅನಾಚಾರಗಳೆಲ್ಲವೂ ಸೇರಿ ಬದುಕಿನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಿವೆ.

ನಾವು ಸರಿ ಎಂದುಕೊಂಡದ್ದು ಎಷ್ಟೋ ಬಾರಿ ಹಾಗಿರುವುದಿಲ್ಲ. ಕ್ರೌರ್ಯ ಯಾವಾಗಲೂ ಆರ್ಭಟಿಸುವುದಿಲ್ಲ. ತಣ್ಣಗೂ ಇರುತ್ತದೆ. ನದಿಯ ಸ್ಪರ್ಶಕ್ಕೆ ಮೈಯೊಡ್ಡಿ ನುಣುಪಾದ ಕಲ್ಲು ಬಂಡೆಯ ಎದೆಯೊಳಗೆ ನಿತ್ಯ ಪುಳಕ.

ಹೆಚ್ ಕೆ ಶರತ್

*****


ಪಿಣಕಿ ಪ್ರೇಮ ಪ್ರಸಂಗ
ಪಿಣಕಿ ಕೊಂಯ್ಯನ ಕೇಳ್ಡ… "ಡೋ, ಏನೋ ಲವ್ವು ಗಿವ್ವು ಅಂತಿದ್ದೆ, ಏನಲಾ ಸಮಾಚಾರ?"
"ಅಯ್ಯೋ ಹೋಗುಡೋ, ಆವೆಣ್ಣು ನನ್ನ ಬಿಟ್ಟೋಗಿ ಸ್ಯಾನೇ ದಿನ ಆಯ್ತು, ಹೆಣ್ಮಕ್ಕ ಬಿಟ್ ಓಗ್ಬೇಕಾರೇ ಕಾರಣ ಹೇಳಿರೇ?"
"ಸರೋಯ್ತು ಯೋಳು ಏನಾಯ್ತು ಅಂತ? ಸಲ್ಯೂಶನ್ ಕಂಡಿಡ್ಯಮಾ" ಅಂದ ಪಿಣಕಿ.

ಕೊಂಯ್ಯ ಸುರು ಹಚ್ಕಂಡ, "ಅವತ್ತು ಕೋಲ್ಡ್ ಕಾಫೀ ಕುಡಿಯೋಕೆ ಹೋಗಮಾ ಅಂದ್ಲು,
ಅಯ್ಯೋ ಹೋಗಮ್ಮೇ, ಕಾಪಿ ಅಂದ್ರೆ ಬಿಸಿ-ಬಿಸಿ ಇರ್ಬೇಕು,
ಆ ಬೊಡ್ಡೆತ್ತವು, ಸಕ್ರೇನು ಮಿಕ್ಸ್ ಮಾಡಕಿಲ್ಲ, ಏನು ಇಲ್ಲ!
ಬಾ ನಂ ಕೇರಿ ಬೋರನ ಅಂಗಡೀಲಿ ಬೈಟೂ ಕಾಪಿ ಕುಡಿಸ್ತೀನಿ, ಸೂಪರಾಗಿ ಇರ್ತೈತೆ ಅಂದೆ…"

ಪಿಣಕಿ: ಅಯ್ಯೋ ನಿನ್ ಎದೆ ಸೀಳ, ಆಮೇಲೆ?

"ಇನ್ನೊಂದಿನ ಬರ್ಗರ್ ತಿನ್ನಕೆ ಹೋಗನ ಅಂದ್ಲು,
ಅಲ್ಲೇನಿದ್ದು ಬೆಡ್ಡ ಕತ್ತರಿಸಿಬುಟ್ಟು, ಮದ್ಯಕ್ಕೆ ಉದ್ದಿನವಡೆಯ ಅಪ್ಪಚ್ಚಿ ಮಾಡಿ ಹಾಕ್ಕೊಡ್ತಾರೆ, ಅದುಕ್ಕೆ ಅಲ್ಲಿಗೋಬೇಕೆ?
ಊಟ ಅಂದ್ರೆ ಹಿಟ್ಟು-ಬಸ್ಸಾರು. ಬ್ರೆಡ್ ನಾ ಯಾವಾಗ್ಲುವೇ ಉಸಾರಿಲ್ದಿದ್ದಾಗ ಮಾತ್ರ ಕಮ್ಮೀ ತಿನ್ನದು ಅಂದೆ.."

ಪಿಣಕಿ: ಅಯ್ಯೋ ನಿನ್ ಹೆಣ ನಾಯಿತಿನ್ನ, ಆಮೇಲೆ?

"ಆಮೇಲೆ ಇನ್ನೊಂದಿನ, ಡಿಸ್ಕ್ ಗೆ ಹೋಗಣ ಅಂದ್ಲೂ,
ಅಯ್ಯೋ ದೇವರೆ, ಅಲ್ಲಿ ಎಲ್ರೂವೆ, ಎಣ್ಣೆ ಹೊಡುದ್ಬುಟ್ಟಿ, ದೆವ್ವ ಮೆಟ್ಕೊಂಡೋರಂಗೆ ಕುಣಿತಾರಂತೆ. 
ಅಲ್ಲಿಗೆಲ್ಲಾ ಬ್ಯಾಡಾ.. ಬರೋ ವಾರ ನಮ್ಮೂರ್ನಾಗೆ ಮಾರಿ ಹಬ್ಬ ಐತೆ, ಬಾ ಅಲ್ಲಿ ಕುಣಿತ ಹಾಕಣ!
ದುಡ್ಡಿಲ್ಲ, ಕಾಸಿಲ್ಲ, ಆ ತಮಟೆ ಏಟ್‌ಗೆ, ಜಗ್ಗಿಚಕಡಿ,… ಜಗ್ಗಿಚಕಡಿ 
ಅಂತ ಕುಣುದ್ರೆ, ಆ ಮಾರವ್ವನೇ ಹಂಗೆ ಎದ್ದು ಬರ್ಬೇಕು.. ಅಂದೆ"

ಪಿಣಕಿ, "ಇನ್ನೂ ಆ ಯಮ ನಿನ್ ಹಿಡ್ಕಂಡುಹೋಗಿಲ್ವಲ್ಲಾ?" ಅಂತ ಹಿಂದ್ ಹಿಂದೆ ಓಡುಸ್ಕಂಡ್ ಬರೋಕೆ ಸುರು ಮಾಡ್ದ. 

"ಇವನ ಕೈಗೆ ಸಿಕ್ಕುದ್ರೆ ಅಷ್ಟೇಯಾ, ಇವತ್ತೇ ನನ್ ತಿಥಿ" ಅಂತ ಅನ್ಕಂಡು ಕೊಂಯ್ಯ ಒಡಕ್ ಸುರು ಹಚ್ಕಂಡ…..

-ಸಂದೇಶ್ ಎಲ್ ಎಂ

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಎರಡು ಕಿರು ಲೇಖನಗಳು: ಹೆಚ್.ಕೆ. ಶರತ್, ಸಂದೇಶ್ ಎಲ್. ಎಂ.

Leave a Reply

Your email address will not be published.