ಕಾವ್ಯಧಾರೆ

ಎರಡು ಕವಿತೆಗಳು: ಸಂತೆಬೆನ್ನೂರು ಫೈಜ್ನಟ್ರಾಜ್, ಶ್ರೀಧರ ನಾಯಕ

 

 

 

 

 

ನಾಳೆಯ ಕತೆ       

ಸುಮ್ಮನಿರುವುದಕ್ಕಿಂತ 

ಏನಾದರೂ ಹೇಳಿ ಬಿಡು

’ನಾಳೆ’ ಬಂದಿತೋ ಇಲ್ಲವೋ….

ಎದಯ ತಲ್ಲಣ

ಕಣ್ಣ ನೀರು

ಹೃದಯದ ಮಾತು

ಗಳ ಮುಚ್ಚಿಡಬೇಡ

’ಇಂದೇ’ ಹೊರಹಾಕು ನಾಳೆ

ಕಂಡವರ್‍ಯಾರು?

 

ಕಳೆದುದ ಹುಡುಕಿಯೇನು

ಸುಖ ಗೆಳತಿ; ಎಲ್ಲರೂ ಏನಾದರೊಂದು

ಕಳೆದು ಕೊಂಡೇ ಇರ್ತಾರೆ

ನನ್ನಂತೆ, ನಿನ್ನಂತೆ!

ಇರುವುದ ಕಂಡು ಸುಖಿಸು ’ನಾಳೆ’

ಗಳಿಗೆ ನಿಟ್ಟುಸಿರೇಕೆ?

ಏನಾದರೂ ಮಾಡುತಿರು ಎಂಬ

ಮಾತಂತೆ ಹಾಡು

ಮನದ ಹಾಡು, ಕವಿತೆ ಕೇಳು

ಹೂ ಹಿಡಿ, ಮರಮುಟ್ಟು ಹಳೆಯ

’ಧೂಳು’ ಕೊಡವಿಬಿಡು ನಾಳೆ

ನಿನ್ನದೋ, ಯಾರದೋ?

ಕೈಲಿರೋದು ನಮ್ದು ಕಾಯೋದು

ಯಾರ ಪಾಲೋ… ಯಾರು

ಯಾರಿಗೋ ? ’ನಾಳೆ’ ಕಂಡವರಿಲ್ಲ

ಬೆಳಕ ಉಂಡವರಿಲ್ಲ;

ಎದೆಯ ಕವಿತೆಯಂತೆ ಧುತ್ತನೆ

ಎದುರಾಗೋ ತಿರುವಿನಂತೆ!

-ಸಂತೆಬೆನ್ನೂರು ಫೈಜ್ನಟ್ರಾಜ್

 

 

 

 

 

 

 

ಡಬ್ಬಗಳು

1

ಕ್ಯೂ ನಿಂತಿವೆ ಡಬ್ಬಗಳು

ಕೆಲವು ಗೋಲಾಕಾರ,

ಇನ್ನು ಸಿಲಿಂಡರಿನಾಕಾರ

ಮತ್ತೆ ಕೆಲವು ಚೌಕಾಕಾರ.

ಗೋಲಾಕಾರದ ಡಬ್ಬಗಳಾಗಲೀ

ಸಿಲಿಂಡರಿನಾಕಾರದ ಡಬ್ಬಗಳಾಗಲೀ

ಉರುಳುವದಿಲ್ಲ.

ಚೌಕಾಕಾರದ ಡಬ್ಬಗಳು ಉರುಳುತ್ತವೆ

ಪಗಡೆಯಾಟದ ದಾಳಗಳಂತೆ;

ಸದ್ದು ಮಾಡುತ್ತವೆ ಚಿನಕುರಳಿ ಪಟಾಕಿಯಂತೆ.

2

ತುಂಬಿದ ಕೊಡ ತುಳುಕುವುದಿಲ್ಲ

ಎಂಬುದು ಗಾದೆಮಾತು.

ತುಂಬಿದ್ದು ತುಳುಕಲೇಬೇಕು

ಎಂಬುದು ವಾಸ್ತವದ ಮಾತು.

ತುಂಬಿದ್ದು ತುಳುಕುವಾಗ

ಕ್ಯೂ ನಿಂತ ಡಬ್ಬಗಳೇನೂ

ತಮ್ಮ ಒಡಲು ತುಂಬಿಕೊಳ್ಳುವದಿಲ್ಲ.

ಹಾಗೆಂದು ಅವು ತುಂಬಿವೆ

ಎಂದು ಅರ್ಥವಲ್ಲ!

ಅವೆಲ್ಲವೂ ಖಾಲಿಡಬ್ಬಗಳು.

ಸದ್ದು ಮಾಡುತ್ತ

ತಮ್ಮ ಅಸ್ತಿತ್ವ ತೋರಿಸಿಕೊಳ್ಳುವುದಷ್ಟೇ

ಅವುಗಳ ಉದ್ದೇಶ.

3

ಖಾಲಿ ಡಬ್ಬಗಳ ಕ್ಯೂದಲ್ಲಿ

ತುಂಬಿದ ಡಬ್ಬಗಳು

ಬರಿಗಣ್ಣಿಗೆ ಕಾಣುವದಿಲ್ಲ

ಒಳಗಣ್ಣು ತೆರೆದಾಗ

ಎಲ್ಲ ಖುಲ್ಲಂಖುಲ್ಲಾ!!

-ಶ್ರೀಧರ ನಾಯಕ

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಎರಡು ಕವಿತೆಗಳು: ಸಂತೆಬೆನ್ನೂರು ಫೈಜ್ನಟ್ರಾಜ್, ಶ್ರೀಧರ ನಾಯಕ

  1. ಡಬ್ಬಗಳು ಕವಿತೆಯ ವ್ಯಂಗ್ಯ ಮೊನಚು..ಈ ಕವಿತೆಯನ್ನು ಸದಾಶಿವಗಡ ಕಾಲೇಜಿನ ಸಮಾರಂಭದಲ್ಲಿ  ವಾಚಿಸುವಾಗ  ನಾನಿದ್ದೆ ಎಂಬುದೇ ನನಗೆ ಖುಷಿ.  ಬರೆಯುತ್ತಿರಿ.

  2. ಎರಡು ಕವಿತೆಗಳು ಚೆನ್ನಾಗಿವೆ … ಫೈಜ್ ಮತ್ತು ಶ್ರೀಧರ್ ಅವರಿಗೆ ಅಭಿನಂದನೆಗಳು….

Leave a Reply

Your email address will not be published. Required fields are marked *