ಕಾವ್ಯಧಾರೆ

ಎರಡು ಕವಿತೆಗಳು: ಮಹಿ, ಅಕುವ

 

 

 

 

 

ಭ್ರೂಣ

ಆಗಷ್ಟೇ ಕಿತ್ತು ಬಿದ್ದ ಗಾಳಿಪಟ, ಹೊಟ್ಟೆಯೊಳಗೆ ನುಲಿವ ಸಂಕಟ 
ಜೀವ ಪ್ರಕ್ರಿಯೆಗೆ ಅನುಗೊಳ್ಳುವ ದೇಹ 
ರಕ್ತಮಯ  ತೊಡೆಗಳ ನಡುವೆ ಚಿಗುರುವ ಚಿಟ್ಟೆ ಮೊಟ್ಟೆ 
ದಿನಕಳೆದಂತೆಲ್ಲಾ ಬಟ್ಟೆಯಂತೆ ದೇಹ 
ಒಗೆದು ಹರಡುವ ಬಯಕೆ 
ದಾರಿತಪ್ಪದೇ ಅಮ್ಮನ ಎದೆಗವಿತು ಆಶ್ರಯ 
ಪ್ರತಿ ಹುಡುಗನಲ್ಲು ಕಾಡುವ ರೋಮಿಯೋ 
ಥೇಟ್ ಕ್ಲಿಯೊಪಾತ್ರಳದ್ದೆ ನೃತ್ಯ ನಡಿಗೆಗೆ 
ಜಂಬದ ಕೊಂಬು ಹಾರು ಕೂದಲ ಮೇಲೆ 
ಮಿಗ್ ವಿಮಾನದ್ದೆ ವೇಗ  ಸ್ಕೊಟಿಗೆ 
ಹಾದಿಗಳ ಹಾದು, ಹಳ್ಳ ಕೊಳ್ಳಗಳ  ದಾಟಿ ಓಡುವ 
ಹುಮ್ಮಸ್ಸಿನಲ್ಲಿ ಕರೆಯುವುದ ಮರೆತಳು "ಕರುಣಾಳು ಬಾ ಬೆಳಕೇ"
ಮುಗಿಲ ಮಾರಿಗೆ ತುಂಬಿದ ರಾಗ ಕೆಂಪಿನ ಸಮಯ 
ಕಳ್ಳ ಬೆಕ್ಕೊಂದು ದಾರಿಗಡ್ಡ 
ಹಾವಾದಳು ಫುತ್ಕರಿಸಿ ಹೂ ಆದಳು 
ದುಂಬಿ ಮುಖವೆಲ್ಲ ಉನ್ಮತ್ತ.. ಮಧುಮತ್ತ 
ಕಿವಿ ತುಂಬಾ ಇಂಪಾದ  ಕಾಮಗಾನ 
ಮೈಮರೆತ ಕ್ಷಣಕ್ಕೆ ನೋವ ಮೀರಿ 
ಹೊಮ್ಮಿದ ಸುಖದ ಕಡಲ ಆಳುವ ರತಿ!!
ಹಾವು ಕಚ್ಚಿದ ಜಾಗವೆಲ್ಲಾ ನೀಲಿ 
ಮಾನಿನಿ ನರಳುತಾಳೆ ಈಗ 
ಮೊಬೈಲು ಸಂದೇಶಗಳಲ್ಲಿ 
ಮುಖಪುಸ್ತಕದ ಚಿತ್ರಗಳಲ್ಲಿ 
ಮಾಳ ಬೆಕ್ಕಿನ ಕಥೆಯ ಯಾರು ನಂಬುತ್ತಿಲ್ಲ 
ಹಗಲು ಮಲಗಿದ ಮೇಲೆ ಮಂದ ಬೆಳಕಿನಲ್ಲಿ 
ಚಿಗುರು ಮೊಲೆಗಳ ನಡುವೆ ಉಗುರ
ಗುರುತ ನೋಡುತಾಳೆ … ಮತ್ತಷ್ಟು ಸ್ವಗತ 
ಐ ಪಿಲ್ಲಿನ ಸಂಗತ್ಯದಲ್ಲಿ ಇಳಿದುಹೋದ 
ಗುಟ್ಟೊಂದನ್ನು ಬಚ್ಚಿಟ್ಟು ಮಲಗಿದವಳಿಗೆ
 ರಾತ್ರಿ ಎಲ್ಲಾ ಪೊರೆ ಬಿಟ್ಟ ಕನಸು!!
ಬೆಳಗೆದ್ದಾಗ ಕಂಡದ್ದು  ಬೆನ್ನಿಗೆ ಅಂಟಿಕೊಂಡ 
ಪಾತರಗಿತ್ತಿಯ ಬಣ್ಣ ಬಣ್ಣದ ರೆಕ್ಕೆಗಳು!!
ನೀವು ನೋಡಿದಿರಾ??

"ಮಹಿ"

 

 

 

 

 

 

ಅಮ್ಮ 

ಮುದ್ದಿಟ್ಟ ಹಸಿ ಮುತ್ತು  ಇನ್ನು ಮಾಸಿಲ್ಲ 
ಬಾಯಿಗಿಟ್ಟ ಅರ್ತಿಯ ತುತ್ತಿನ್ನು ಇಳಿದಿಲ್ಲ 
ತೀಡಿಟ್ಟ ಕಾಡಿಗೆ ಇನ್ನೂ ಕುಂದಿಲ್ಲ 
ತಿದ್ದಿಟ್ಟ ಅಕ್ಷರಗಳು ಇನ್ನು ಮರೆತಿಲ್ಲ 

ದೂರವಿದ್ದಷ್ಟು ಹತ್ತಿರದೆ ನೆನಪಾಗುವಳು 
ಕಣ್ಣಂಚಿನಲಿ ನೀರುರಿಸಿ  ಮರೆಯಾಗುವಳು
ಎದೆ ಭಾರವ ಹಗುರಾಗಿಸುವಳು 
ಸಂತತ ಹಿಂದೆ ಬೆನ್ನ ತಟ್ಟುವಳು  !
 
ಭಾಷೆ ತಿಳಿಯದ ದೂರದ  ಊರಲ್ಲಿ 
 ಕಾಯುತಿದ್ದವು ಅವಳ  ಆಶೀರ್ವಾದದ ಪತ್ರಗಳು  
ನಮಿಸಿ ಜಪಿಸಿದಾಗ ಮನದೊಳಗೆ ಮೂಡಿ ಮಾಯ 
ಕರೆದು  ಸಂತೈಸಿ ಮತ್ತೆ  ಹುರಿದುಂಬಿದಳು 

ದಾರಿ ಸೋತು ದಿಕ್ಕೆಟ್ಟಾಗ ಬೆಳಕು ಹಿಡಿದಳು 
ಮೌನ ಮುರಿದು ಜೀವನದ ತತ್ತ್ವ  ಸಾರಿದಳು 
ಸೋತು ಮಡಿಲ ಸೇರಿದಾಗ ಮತ್ತೆ ತಾಯಾದಳು 
ಹೊತ್ತು ಹೊತ್ತಿಗೂ ಬಿಡದೆ ಕಾಡಿದಳು !  

ಸಿಕ್ಕುಗಳ ಜೀವನದಲಿ ಜಟಿಲತೆಯ ಸುಳಿಯಲಿ 
ನಿಸ್ಸಾರ ಬಂಡಿಯದು ಉರುಳುತಿರಲು 
ಲವಲವಿಕೆ ಬುಗ್ಗೆಯಾಗಿ ಮನೆಯಿಡಿ ನಡೆದಾಡಿ 
ಮನದ  ಚೇತನಕೆ  ಸ್ಪೂರ್ತಿಯಾದಳು …. 

ಅಮ್ಮನನು ಬಣ್ಣಿಸಲು ತಿಳಿಯೆ 
ಭಗವಂತ ನೀ ಬಂದು ಕಲಿಸು  ಆ ಪರಿಯೇ  !!

– ಅಶೋಕ್ ಕುಮಾರ್ ವಳದೂರು ( ಅಕುವ)

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *