ಬಾಳ ದಾರಿಯಲಿ ಬಂದು ಹೋಗುವವರಾರು,
ಕೈ ಹಿಡಿದು ಜೊತೆಗೂಡಿ ಮುಂದೆ ಸಾಗುವವರಾರು,
ಬರುವೆನೆಂದವರೀಗ ಬಿಟ್ಟು ಹೋಗುತಿರಲು,
ಮನದಿ ಮುಡಿತು ಪ್ರಶ್ನೆ "ಇಲ್ಲಿ ನನ್ನವರಾರು?"
ಪ್ರಾಣ ಪಣವಿಟ್ಟು ನಾ ಹೋರಾಡುತಿರುವಾಗ,
ಜನರ ನಿಯಮಕ್ಕೆಂದೂ ಎದೆಗುಂದದಿರುವಾಗ,
ನನ್ನನು ತೊರೆದು ಹೋಗುವವರನು ನೋಡಿ,
ಮತ್ತೆ ಮುಡಿತು ಪ್ರಶ್ನೆ "ಇಲ್ಲಿ ನನ್ನವರಾರು?"
ಮನಸೊಂದು ಬಯಸುವುದು ಅಪರಾಧವೇನಲ್ಲ,
ಬಯಸಿದ್ದು ಪಡೆಯುವುದು ಹುಡುಗಾಟವೂ ಅಲ್ಲ,
ಬಯಸಿ ಪಡೆದವರಿಂದು ಕೇಳುತಿಹರು ನನ್ನನ್ನು,
"ಜೊತೆಯಾಗಿ ಉಳಿಯೋಕೆ ನೀನು ನನಗ್ಯಾರು?"
ಕಣ್ಣಂಚಿನ ಹನಿ ಕೇಳು, ತುಟಿಯಂಚಿನ ನಗು ಕೇಳು,
ಮರೆಯಲ್ಲಿ ಮರುಗುತಿಹ ಆ ನಿನ್ನ ಮನ ಕೇಳು,
ಉಸಿರೊಂದಿಗೊಡಗೂಡಿ ಪಿಸುಮಾತಲಿ ಹೇಳುವವು,
"ನನಗೆ ನೀನಾರು, ನಿನಗೆ ನಾನ್ಯಾರು"
-ನಾ"ನಲ್ಲ"
ಒಮ್ಮುಖ ಪ್ರೇಮಿ
ಎದೆಯ ತೊಟ್ಟಿಲಲಿ
ಮುದ್ದಾಗಿ ಸಲಹಿದ ಕನಸುಗಳು
ಕರಟಿಹೋಗುತಿಹ ವೇದನೆಗೆ
ಮುಲಾಮು ಕೇಳುವಂತಿಲ್ಲ ನಿನ್ನ ಬಳಿ…
ಏಕೆಂದರೆ ನಾನು…ಒಮ್ಮುಖ ಪ್ರೇಮಿ.
ನೀ ಬಾರದ ದಾರಿಯಲಿ
ಕಾದು, ಅಲೆದು, ಬಸವಳಿದು,
ವೆಚ್ಚ ಮಾಡಿದ ಕ್ಷಣಗಳಿಗೆ
ಲೆಕ್ಕ ಕೇಳುವಂತಿಲ್ಲ ನಿನ್ನ…
ಏಕೆಂದರೆ ನಾನು… ಒಮ್ಮುಖ ಪ್ರೇಮಿ.
ನನಗಾಗಿಯೇ ಬಂದಂತೆ ಬಂದು
ಮರೆಯಾಗಿ ಹೋದ ನಿನ್ನ
ಹುಡುಕುವಂತಿಲ್ಲ ಎಲ್ಲೂ…
ಏಕೆಂದರೆ ನಾ….ಒಮ್ಮುಖ ಪ್ರೇಮಿ.
ಯಾರದೋ ಮಾಲೆಯಲಿ ಸೇರಿಹೋದ
ನನ್ನ ಹಂಬಲದ ಹೂವೇ ನಿನ್ನ
ಕೇಳುವಂತಿಲ್ಲ ನಾ ಕಾರಣ…
ಏಕೆಂದರೆ ನಾನು …ಒಮ್ಮುಖ ಪ್ರೇಮಿ.
ಉಸಿರಿನ ಜಪವ, ತಾಳ್ಮೆಯ ತಪವ,
ಕಂಡೂ ಕಾಣದಾದ ಕಣ್ಮಣಿಯೇ ನಿನ್ನ
ಮರೆಯುವಂತಿಲ್ಲ ನಾ ಎಂದೂ…
ಏಕೆಂದರೆ ನಾ….ಒಮ್ಮುಖ ಪ್ರೇಮಿ.
-ವಿನಾಯಕ ಅರಳಸುರಳಿ,
chennagide sir