ಕಾವ್ಯಧಾರೆ

ಎರಡು ಕವಿತೆಗಳು: ಆನಂದ ಈ. ಕುಂಚನೂರ, ವಿ.ಎಸ್ ಶ್ಯಾನಭಾಗ್

ನಿನ್ನ ಕರುಣೆಯ ಬಿಂಬ

ನಿಶೆಯ

ಕರುಣೆಯಿಂದೊಡಮೂಡಿದ

ಬೆಳಗಿನುದಯರವಿಯ ಕಂಡ

ಇಬ್ಬರೂ

ಬಂಗಾರದ ಹಣೆಯ ಮುದದಿ

ಮುತ್ತಿಕ್ಕಿ

ಕಣ್ತುಂಬಿಕೊಂಡ ಅವನು

ಹಗಲ ವ್ಯಾಪಾರಕೆ

ಸಜ್ಜಾದ ಸಿಪಾಯಿ-

ಯಾದರೆ ಇತ್ತ ಇವಳು

ಇರವೆಡೆ ಸಿಂಗಾರ

ಸೂಸುವ ಸಿರಿದಾಯಿ

 

ಬದುಕ ಬೆನ್ನಿಗಂಟಿಸಿ

ಹೊರಟರವನು

ಪುರುಷ

ಭೂಷಣವೆನ್ನಕ್ಕ

ಕಾರ್ಯಕಾರಣ

ಅದಕಾರಣ

ಕಾರ್ಯದೊಳಗಾನು

ತೊಡಗಿ

ಬಿರುಬಿಸಿಲೆನ್ನದೆ

ದುಡಿವ ಬಡಗಿ

ತೊಳಲಿ ಬಳಲಿಕೊಂಬದೆ

ಬಳಲಿ ಅಳಲುಕೊಂಬದೆ

ಮರಳಿ ಸಂಜೆ ಸ್ವಗೃಹ

ಹೊಕ್ಕು

ಸತಿಯ ಮಂದಹಾಸಕೆ

ಮನಸೋತು

ಎಲ್ಲ ಬವಣೆಯ

ಹಿಂದಿಕ್ಕಿ

ಮೀಸೆಯಂಚಲಿ ನಕ್ಕು

ಪ್ರಸನ್ನನಾಗುವನು

ನಿಜ ಶಶಿ.

ಅವಳೂ ನಗುವಳು.

 

ಒಳಗಾಡುವ ಕಾಯಕದಿ

ತನ್ನ ತಾ ಮರೆತು

ಧರ್ಮಕಾರಣ

ನಿಮಿತ್ತದಲಿ

ಸರಿಸಿ ಎಲ್ಲ ಸೆಡವು

ಹೈರಾಣುಗಳ

ಸೀರೆಯಂಚಲಿ ಸೊಂಟಕೆ

ಕಟ್ಟಿ

ಬೆಡಗು ಬಿನ್ನಾಣಕೆ

ಜೋಪಾನ ಸೆರಗ

ಹೊದ್ದಿಸಿ

ಕಾಯುವಳು ನೈದಿಲೆ

ತನ್ನ ಚಂದ್ರನ ಬರವಿಗೆ

ಹರವಿಕೊಳುವಳು ಬಾನ

ಷೋಡಶಿಯಾಗೆ

 

ತನ್ನ ಕಿನ್ನರಿಯ

ಅಂತರಂಗ ಹುಡುಕುವ

ಚಂದ್ರ

ಬೆಳುದಿಂಗಳ ಹರಡಿ

ಒಡನೆ ಮೂಡುವವು ಒಲವ

ಸೂಸುವ

ಸಹಸ್ರ ಭಾವ ಚಿಕ್ಕಿ!

ಅವಳೊಡಲಲಿ ಅವನು

ಅವನನುರಾಗ ಬೆಳಕಲಿ

ಅವಳು

ಇಡಿಯ ರಾತ್ರಿ ಮಿಕ್ಕಿ

ಹೋಗುವರು

ಚಿಕ್ಕೆ ನಗುವವು

ಮತ್ತೆ ಬೆಳಗೆದ್ದು

ಬೆರಗಾಗಿ ಕಾಣುವರು-

ನಿಶೆಯ

ಕರುಣೆಯಿಂದೊಡಮೂಡಿದ…

-ಆನಂದ ಈ. ಕುಂಚನೂರ

 

 

 

 

 

 

 

//ವಿವರಣೆ//

ನನಗೂ ಗೊತ್ತು

ಪ್ರೀತಿ ಎನ್ನುವುದು ಪ್ರಯೋಗವಲ್ಲ

ಪರಿಚಾರಿಕೆಯಲ್ಲಿ ಬಿಡಿಸುವ ಪ್ರಮೇಯವಲ್ಲ

 

ನನಗೂ ಗೊತ್ತು

ಕಾಯುತ್ತಾ ಕು0ತು ಮೌನ

ಸಹಿಸುವುದು ಅಷ್ಟು ಸುಲಭವಲ್ಲ

ಅಪೇ಼ಕ್ಷಿಸುವ ಕರೆಗ0ಟೆಯ

ಕರ್ಕಷ ಧ್ವನಿಯ ಹಾಗೆ

 

ಕಳೆದರಾತ್ರಿಗೆ ಸಾಕ್ಷಿ ಬೇಕು ಎ0ದರೆ ಹೇಗೆ

ಬೇರು ಇಳಿದಿಳಿದು ಕೆಳಕ್ಕೆ

ಮೇಲೆ ಹೋರಬೇಕು ಭಾರ

ಪ್ರೀತಿ ಎ0ದರೆ ಪುಸ್ತಕದ ನವಿಲುಗರಿಯ ಹಾಗೆ

ಮರಿ ಹಾಕುವವರೆಗೆ ಕಾಯಬೇಕು

ಜತನಮಾಡಿ.

 

ಇಷ್ಟವಾಗುವ ಮಾತುಗಾಳ ಮಧ್ಯೆ

ಅಷ್ಟಿಷ್ಟು ಬೆರಳು ನರಳುವುದು ಉ0ಗುರಕ್ಕೆ

ಕಳೆದದ್ದು ಕೂಡುವ ಗಳಿಗೆಗಳಲಲ್ಲಿ

ಕ್ಷಣದಷ್ಟು ಕಾಲ ಬೇಡಲಿಲ್ಲ

ಶಕು0ತಳೆಗೆ ಎಚ್ಚರದ ಗ0ಟೆ ಹೊಡೆಯಲಿಲ್ಲ

 

ನೀನೂ ಒಪ್ಪಿದ್ದೆ ಕಣೆ

ಪ್ರೀತಿ ವಿವರಣೆ ಬೇಡುವ ಗಿರಣಿಯಲ್ಲ

ವರದಿಯೂ ಅಲ್ಲ ಸರದಿಯೂ ಅಲ್ಲ

ಪರಿದಿಯಲ್ಲದ ಎಲ್ಲವನ್ನು ಬಲ್ಲ ಮುಗ್ಧ ಎ0ದ

ಬುದ್ದ ಉದ್ಬುದ್ಧ?

 

ನೀನೇ ಹಚ್ಚಿದ ಬೆಳಕಲ್ಲಿ

ಹೆಕ್ಕು ಬಾ ಹಾಕಿದ ಬಿದ್ದ ಹವಳಗಳ

ಕಡಿದ ದೋರ ಹಿಡಿದು

ಹವಳಗಳು ಹೊಸ ದೋರ ಬೇಡುವುದಿಲ್ಲ

ಹಳೆದೋರ ಹವಳಗಳ ಕಟ್ಟುವುದಿಲ್ಲ

ವಿ.ಎಸ್ ಶ್ಯಾನಭಾಗ್

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಎರಡು ಕವಿತೆಗಳು: ಆನಂದ ಈ. ಕುಂಚನೂರ, ವಿ.ಎಸ್ ಶ್ಯಾನಭಾಗ್

Leave a Reply

Your email address will not be published. Required fields are marked *