ಒಮ್ಮೊಮ್ಮೆ..
ಜಾಗೃತಾವಸ್ಥೆಯೊಂದು ರಾಜ್ಯ,
ನಂಬಿಕೆಯ ನಿರಂಕುಶಪ್ರಭುತ್ವ.
ಅನಭಿಷಿಕ್ತ ದೊರೆ, ಸರಾಗ ಆಳ್ವಿಕೆ.
ಎಲ್ಲೋ ಒಮ್ಮೊಮ್ಮೆ ಪರಿಸ್ಥಿತಿ
ದಂಗೇಳುತ್ತವೆ, ಪಟ್ಟ ಅಲ್ಲಾಡುತದೆ,
ಕಿರೀಟವುರುಳಿ ಮೀಸೆ ಮಣ್ಣುಮುಕ್ಕಾಗಿ….
ಹೊರಗಿಷ್ಟೆಲ್ಲ ಆದರೂ ಒಳಸುಳಿಯಲೆಲ್ಲೋ
ಅದೇ ರಾಜನುಳಿಯುತಾನೆ,
ಅಹಿತಕಾಲದ ಹೆಜ್ಜೆಗೆ
ಯತ್ನದ ಗೆಜ್ಜೆ ತೊಡಿಸುತಲೇ
ಸಕಾಲ ಪ್ರಕಟನಾಗುತ್ತಾನೆ.
ಸ್ವಪ್ನಸಾಮ್ರಾಜ್ಯದಲೆಲ್ಲ ಬುಡಮೇಲು
ತಟ್ಟೆಯ ಕಾಳು ಬಿಟ್ಟು
ಭ್ರಮನಿರಸನದ ಗೊಬ್ಬರಗುಂಡಿಯಲಿ
ಅಪನಂಬಿಕೆಯ ಹುಳಕೆ ಕೆದಕುವ
ಕೋಳಿಕನಸ ರಾಜ್ಯಭಾರ.
ಒಮ್ಮೊಮ್ಮೆ ಸಂತೃಪ್ತ, ಒಮ್ಮೊಮ್ಮೆ ಅಲ್ಲ.
ಭಯಸಂಶಯ ಕೆಡುಕೆದುರು ನೋಡುತಾವೆ
ಚಂದ್ರನೂ ಸೂರ್ಯನಂತುರಿಯುತಾ,
ತಾರೆಸಾಲು ಮಿಂಚೆರಗಿದಂತೆರಗುತಾ,
ಮನೆ ಸೆರೆಮನೆ, ಪ್ರೀತಿ ಕೊರಳುರುಳು
ಅನ್ನ ಕಸವಾಗಿ, ಚಿನ್ನ ಕಪ್ಪಾಗುತ್ತವೆ
ಮತ್ತಲ್ಲೇ ಅಂಥವೇ ಕೆಲ ಹೊತ್ತಲಿ
ಕೊಲುವವ ಗುಂಡಿಯಿಂದೆತ್ತುತಾ,
ತಿರುಗಿಹೋದವ ಮರಳಿ, ಪ್ರೀತಿಸುತಾ,
ಹಸಿವೆ ತುಂಬಿದೊಡಲ ತೇಗಾಗುತಾ,
ಕೊನೆಗಳೆಲ್ಲ ಆರಂಭಕೆ ಬೆಸೆಯುತಾ,
ಒಣಮರದಲಿ ಬಣ್ಣ ಬೆಳೆಯುತ್ತವೆ,
ಖಾಲಿ ಮನಸ ತುಂಬುತ್ತವೆ.
ಹೀಗೇ…
ಕಪ್ಪು ಬಿಳುಪೆನಿಸಿ, ಬಿಳುಪು ಕಪ್ಪೆನುತಾ
ಕನಸು,
ಕಪ್ಪು ಕೆಡುಕಲ್ಲ, ಬಿಳಿಯಷ್ಟೇ ಹಿತವಲ್ಲವೆನುತಾ
ನಂಬಿಕೆ,
ಬಾಳನಾಳುತ್ತವೆ.
-ಅನುರಾಧ ಪಿ. ಸಾಮಗ
ನಿನ್ನದೇ ನಿರೀಕ್ಷೆಯಲಿ…….
ಸೋಜಿಗವದು ನೀ ನನಗೊಲಿದ ಪರಿ
ಸೋಕುವ ಚಳಿಗಾಲವು ಅಲ್ಲ ಆಗ
ಇನ್ನೇನೋ ವಸಂತನು ಬಂದಿರಲಿಲ್ಲ
ಹುಣ್ಣಿಮೆಯ ಚಂದಿರನು ಕರೆದಿರಲಿಲ್ಲ
ಇಬ್ಬನಿಯು ಜೇನಾಗುವ ಹೊತ್ತು
ಉದ್ಭವಿಸಿದೆ ನೀನು !
ಇಳಿದು ಬಂದೆಯೋ ಸೆಳೆದುಕೊಂಡೇನೋ ತಿಳಿಯೇ
ವೇಗದಲ್ಲಿ ಧುಮುಕಿದ ನಿನ್ನ ಎದೆಗಪ್ಪಿಕೊಂಡೆ
ಸಾಗರವ ಬಯಸದೆ ನನ್ನೊಳಗೆ ಮನೆಮಾಡುವೆನೆಂದೆ
ಮನದ ಸರೋವರದಲಿ ತೊರೆ ತೊರೆಯಾಗಿ ತುಂಬಿಕೊಂಡೆ
ನಿನ್ನಾಳದಲಿ ನಾ ದಿನ ಮಿಂದೆ..ತೇಲಾಡಿದೆ..ಈಜಾಡಿದೆ
ಲೀಲಜಾಲದಲಿ ವಿಹರಿಸಿದೆ..ನಿನ್ನಲ್ಲೇ ಪಸರಿಸಿದೆ
ಸುಪ್ತಳಾಗಿ ಆವರಿಸಿ ಗುಪ್ತಗಾಮಿನಿಯಾದೆ
ಗುಟ್ಟು ಬಚ್ಚಿಡಲು ಮನಸ್ಸು ಹೊಕ್ಕು ಕುಕ್ಕಿದೆ
ಹಿಗ್ಗಿನಲಿ ತುಳುಕುತಿದ್ದೆ !.
ನಿನ್ನ ಹರಿವು ನಿಲ್ಲಲಿಲ್ಲವೋ ನನ್ನ ಕಟ್ಟೆಯಲ್ಲಿ ಬಿರುಕೋ
ಮೆಲ್ಲನೇ ಸೋರಿದುದು ತಿಳಿಯಲೇ ಇಲ್ಲ !
ಸುಳಿವಿಲ್ಲದೇ ನೀ ಬತ್ತುತ್ತಿರೆ !
ಇಂದೇಕೋ ನಿನ್ನಯ ಬರವೇ ಇಲ್ಲ
ಗೆಜ್ಜೆ ಸದ್ದೇ ಇಲ್ಲ ಲಜ್ಜೆಯ ನೋಟವೇ ಇಲ್ಲ
ಸದ್ದಡಗಿದೆ ಗುನುಗುಡುವ ಮನಸ್ಸು ಸ್ತಬ್ಧ
ಹಿತವೆನಿಸಿದ ಒಂದೊಂದು ಗಳಿಗೆ ಇಂದು ಅಹಿತವೇ?
ಎಂದಾದರೊಂದುದಿನ ಮನ ಬದಲಿಸಿ ಬರುವೆ
ಮತ್ತೆಲ್ಲಾ ನೆನಪುಗಳ ಮೂಟೆ ಹೊತ್ತು ತರುವೆ
ಸಿಕ್ಕುಗಳ ಬಿಡಿಸುತ್ತಾ ಸಗ್ಗದಲ್ಲಿ ಒಂದಾಗಲಾದರೂ
ಬರುವೆ….ಸುಗ್ಗಿಯಲಿ ಕಾಯುವೆ !
Kavanagaleradu ishtavaadavu dhanyavaadagalu…..
ಚೆನ್ನಾಗಿದೆ