ಎರಡು ಕನಸುಗಳು: ಚೈತ್ರಾ ವಿ.ಮಾಲವಿ

ಕನಸು-ಒಂದು (೧೫-೧೧-೨೦೧೭)ಶುಕ್ರವಾರ
     ಅವತ್ತು ಮುಂಜಾನೆ ಚಹಾ ಮಾಡಲು ಅಡುಗೆ ಮನೆಗೆ ಹೋದ ಗಂಗಾ, ಗ್ಯಾಸ್ ಸ್ಟವ್ ಹಚ್ಚಲು ಪರಿತಪಿಸುತ್ತಿದ್ದಳು, ಮೂರು, ನಾಲ್ಕು ಬಾರಿ ಲೈಟರಿನಿಂದ ಟಕ್, ಟಕ್ ಅಂತ ಅಂದರೂ ಸ್ಟವ್ ಹತ್ತಲಿಲ್ಲ. ಟಕ್ ಟಕ್ ಸದ್ದು ಕೇಳಿದ ಕೂಡಲೇ, ಪಡಸಾಲೆಯಲ್ಲಿ ಟೀವಿ ನೋಡುತ್ತಿದ್ದ ಅವಳ ಮಾವ ಕಿರಣ್ ಅಡುಗೆ ಮನೆಗೆ ಹೋದ. ಕಿರಣ್ ನ ದೊಡ್ಡಕ್ಕನ ಮಗಳು ಈ ಗಂಗಾ.  ಅವಳನ್ನು ನೋಡಿ, “ಹೇ..ಮಬ್ಬು, ಈ ಕಡೆ ಬಾ..ಇಲ್ಲಿ. ಇಷ್ಟು.. ಗ್ಯಾಸ್ ಹಚ್ಚೋಕೆ ಬರೋಲ್ವ ನಿಂಗೆ?” ಎನ್ನುತ್ತಾ..ಅವಳ ಕೈಯಿಂದ ಲೈಟರ್ ನ್ನು ಕಸಿದುಕೊಂಡು, ತಾನು ಹಚ್ಚಲು ಹೋದ. ಆದರೆ ಅವನೂ ಟಕ್ ಟಕ್ ಅನ್ನಿಸಿದರೂ ಸ್ಟವ್ ಅವನ ಮಾತು ಕೇಳಲಿಲ್ಲ. ಅಲ್ಲೇ ನಿಂತಿದ್ದ ಗಂಗಾ, ತನ್ನ ಬಾಯಿಗೆ ಕೈಯನ್ನು ಅಡ್ಡಯಿಟ್ಟು ನಗತೊಡಗಿದಳು. ಕಿರಣ್ ಅವಳು ನಗುವುದನ್ನು ಕಂಡು ಗುರಾಯಿಸಿದನು. ಗ್ಯಾಸ್ ಖಾಲಿಯಾಗಿರಬಹುದಾ? ಎನ್ನುತ್ತಾ..ಸಿಲಿಂಡರ್ ನ್ನು ತನ್ನ ಎಡ ಕೈಯಿಂದ ಅಲುಗಾಡಿಸಿದನು. ತುಂಬಿದ ಸಿಲಿಂಡರ್ ಅನಿಸುತ್ತೆ. ಮತ್ತೇ ಟಕ್ ಟಕ್ ಅನ್ನಿಸಿದನು. ಉರಿ ಹತ್ತಲಿಲ್ಲ. ಅಡುಗೆ ಮನೆಯಲ್ಲಿ ಇವರಿಬ್ಬರ ಸಾಹಸವನ್ನು ನೋಡುತ್ತಾ.. ಪಡಸಾಲೆಯ ನೆಲ ಒರೆಸುತ್ತಿದ್ದ ಭಾರತಿ, ಒಳ ಹೋದಳು.
     ಅಡುಗೆ ಮನೆಗೆ ಬಂದ ಭಾರತಿ, “ಅಬ್ಬ..ಅದು ಏನು ಮಾವ..ಸೊಸೆನೋ, ಒಂದು ಗ್ಯಾಸ್ ಸ್ಟವ್ ಹಚ್ಚೋಕೆ ಬರೊಲ್ಲ ಅಂದ್ರೆ ಯಾರಾದ್ರೂ ನಗ್ತಾರೆ ಅಷ್ಟೇ.” ಎನ್ನುತ್ತಾ..ಕಿರಣ್ ಕೈಯಿಂದ ಲೈಟರ್ ಇಸ್ಕೊಂಡು, ಗ್ಯಾಸ್ ಸ್ಟವ್ ಹಚ್ಚಿದಳು. ಅದು ಭಾರತಿಯ ಮಾತು ತೆಗೆದು ಹಾಕುವುದಿಲ್ಲ ಎನ್ನುವಂತೆ. ಒಂದೇ ಸಲಕೆ ಸ್ಟವ್ ಹತ್ತಿಕೊಳ್ತು. ಅಲ್ಲೇ ನಿಂತಿದ್ದ ಗಂಗಾ, ಮನಸ್ಸಾರೆ ತನ್ನ ಎರಡೂ ಕೈಯಿಂದ ಚಪ್ಪಾಳೆ ತಟ್ಟಿದಳು. ಕಿರಣ್ ಕಡೆ ತಿರುಗಿ “ನೋಡಿದ್ಯಾ..ಮಾವ. ನಮ್ಮ ಅಕ್ಕ ಹೇಗೆ, ನಿನಗಿಂತ ಗ್ರೇಟ್ ಅಲ್ವಾ” ಎಂದು ಮಾವನನ್ನು ಕೀಟಲೇ ಮಾಡಿದಳು. ಅದಕ್ಕೆ ಅವನು, “ಹೌದೌದು..ನಿಮ್ಮ ಅಕ್ಕನೇ ತುಂಬಾ ಗ್ರೇಟ್.” ಎನ್ನುತ್ತಾ..ತನ್ನ ಬಲ ಕೈಯಿಂದ, ಭಾರತಿಯ ಮೃದುವಾದ ಎಡ ಕೆನ್ನೆಗೆ ಹುಸಿ ಏಟನ್ನು ಕೊಟ್ಟನು. ಕಿರಣ್ ಕೊಟ್ಟ ಹುಸಿ ಏಟಿಗೆ ಭಾರತಿ ನಲುಗಿದಳು. ‘ಅಕ್ಕ, ಅದು ಹೇಗೆ, ಸ್ಟವ್ ಹತ್ತಿಕೊಳ್ತು. ನಾವಿಬ್ಬರೂ ಎಷ್ಟು  ಬಾರಿ ಹಚ್ಚಿದರೂ  ಹತ್ತಲಿಲ್ಲ! ಎಂದು ಆಶ್ಚರ್ಯ ಪಡುತ್ತಾ ಕೇಳಿದಳು ಗಂಗಾ. ಅದಕ್ಕೆ ಭಾರತಿ, ‘ನಾನು ಯಾರು ಹೇಳು?ಈ ಮನೆ ಸೊಸೆ” ಎಂದು ಚೂರು ಬಿಲ್ಡಪ್ ಕೊಟ್ಟಳು.
****
ಕನಸು-ಎರಡು (೧೫-೫-೨೦೧೮)ಮಂಗಳವಾರ
   ಅವತ್ತು ಕಿರಣ್ ಮತ್ತು ಭಾರತಿಯ ಮದುವೆ ಹಿಂದಿನ ದಿನ. ಮನೆಯಲ್ಲಿ  ಸಂಭ್ರಮ. ಬಂಧುಗಳ ಓಡಾಟ. ಆದರೆ ಭಾರತಿ ಮತ್ತು ಕಿರಣ್ ಮಧ್ಯೆ ಒಂದಿಷ್ಟು ಹುಸಿ ಮುನಿಸು. ಅವತ್ತು ಇಬ್ಬರೂ ಪರಸ್ಪರ ಮಾತನಾಡದೇ ಗರಂ ಆಗಿದ್ದರು. ಯಾಕೋ.. ಅವನು ತುಂಬಾ ಭಾವುಕನಾಗಿದ್ದನು. ಮನೆಯ ಹೊರಗಡೆ ಕಟ್ಟೆಯ ಮೇಲೆ ತನ್ನ ಬಾಲ್ಯ ಗೆಳಯನ ಜೋಡಿ ಸುಮ್ಮನೆ ಕುಳಿತುಕೊಂಡಿದ್ದನು ಕಿರಣ್. ಅವರಿಬ್ಬರೂ ಅಲ್ಲಿ ಕುಳಿತಿರುವುದನ್ನು ನೋಡಿದ ಭಾರತಿ, ಅವರತ್ತ ನಡೆದಳು. ಅವಳು ಅಲ್ಲಿ ಹೋಗಿ ಕುಳಿತುಕೊಂಡರೂ..ಅವನು ಇವಳತ್ತ ತಿರುಗಲಿಲ್ಲ, ಒಂದಿಷ್ಟು ಮಾತನಾಡದೇ ಹಾಗೆಯೇ ಕುಳಿತುಕೊಂಡಿದ್ದನು. ಇವನ ಗೆಳಯ ಬೇರೊಬ್ಬ ಗೆಳಯನ ಜೊತೆ ಮಾತನಾಡುತ್ತಿದ್ದನು. ಕಿರಣ್ ಮಾತನಾಡದೇ ಇದ್ದಾಗ, ಅವಳಿಗೆ ಕೆಂಡದಂತಹ ಕೋಪ ಬಂದಿತ್ತು. ಅವನು ಅವಳತ್ತ ತಿರುಗದೇ ಅಲ್ಲಿಂದ ಎದ್ದು ಹೊರ ನಡೆದನು. ಇವಳು ಅವನು ಹೋಗುವುದನ್ನೇ ನೋಡುತ್ತಿದ್ದಳು.
   ಸ್ವಲ್ಪ ಸಮಯದ ನಂತರ, ಅವಳು ಎದ್ದು ಬಂದಳು. ಅವನು ಅಲ್ಲಿ ಕಾಣದೇ ಇದ್ದಾಗ, ಅವಳು ಒಂದೊಂದೆ ಹೆಜ್ಜೆ ಇಡುತ್ತಾ ಹೋಗುತ್ತಿದ್ದಳು. ರಸ್ತೆಯ ಪಕ್ಕದಲ್ಲೇ ನಿಂತಿದ್ದ ಕಾರನ್ನು ಗಮನಿಸದೇ ಮುಂದೆ ನಡೆಯುತ್ತಿದ್ದಾಗ, ಆಕಸ್ಮಿಕವಾಗಿ ಅವಳು ತನ್ನ ಬಲ ಪಕ್ಕಕ್ಕೆ ತಿರುಗಿದಾಗ, ಅವನು ಕಾರಲ್ಲಿ ಕುಳಿತಿರುವುದನ್ನು ಕಂಡು, ವಾಪಾಸ್ಸಾಗಿ, ತಾನು ಕಾರಿನ ಹಿಂದಿನ ಸೀಟಿನ ಬಾಗಿಲು ತೆಗೆದು ಕುಳಿತುಕೊಂಡಳು. ಅವನು ಕಾರಿನ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದನು.  ಅವಳು ಬಂದು ಹಿಂದಿನ ಸೀಟಿನಲ್ಲಿ ಕುಳಿತಿರುವುದನ್ನು ಕಂಡನು. ಅವನು ಏನೂ ಮಾತನಾಡದೇ, ಒಂದು ಕ್ಷಣ ಬಿಟ್ಟು, ತಾನೂ ಹಿಂದಿನ ಸೀಟಿಗೆ ಬಂದು ಕುಳಿತುಕೊಂಡನು. ಇಬ್ಬರೂ ಕಣ್ಣು ಪುಳಕಿಸದೇ ಪರಸ್ಪರ  ನೋಡುತ್ತಿದ್ದರು. ಅವನ ಕಣ್ಣಲ್ಲಿ ಒಂದಿಷ್ಟು ನೀರು ಜಿನುಗಿತ್ತು.“ಯಾಕೋ..ಏನಾಯ್ತು? ನಿನ್ನ ಕಣ್ಣಲ್ಲಿ ನೀರು? ಎಂದು ಅವಳು ಕೇಳಿದ ಕೂಡಲೇ, ಹಾಗೆಯೇ ಅವನು ಅವಳ ತೊಡೆಯ ಮೇಲೆ ಮಲಗಿದನು. ಅವಳಿಗೂ, ಅವನು ತೊಡೆಯ ಮೇಲೆ ಮಲಗಿದ ಕೂಡಲೇ, ಒಂದು ರೀತಿಯ ಸಮಾಧಾನವಾಗಿತ್ತು. ಮನಸ್ಸಿಗೇನೋ ಆಯಿ ಅನಿಸಿತ್ತು. ಭಾರವಾಗಿದ್ದ ಅವಳ ಮನಸ್ಸು ಹಗುರವಾಗಿತ್ತು. ಅವಳ ಕಣ್ಣುಗಳಲ್ಲೂ ಕಣ್ಣೀರು ತುಂಬಿ, ಅವನ ಕೆನ್ನೆಯ ಮೇಲೆ ಎರಡು ಹನಿ ಕಣ್ಣೀರು ನರ್ತನ ಮಾಡಿದವು.
    ಅವನ ಕೆನ್ನೆಯ ಮೇಲೆ ಕಣ್ಣೀರು ಬಿದ್ದ ಕೂಡಲೇ ಎದ್ದ ಅವನು. ಅವಳ ಮುಖವನ್ನು ತಿರುಗಿಸಿ, “ಯಾಕೆ ಅಳ್ತಿದಿಯಾ?”  ಕೇಳಿದನು. ಅವಳು ಅವನ ಎರಡೂ ಕೈಗಳನ್ನು ಹಿಡಿದು, “ನನ್ನ ಜೊತೆ ಮಾತನಾಡದೇ ಇರಬೇಡ್ವೋ? ತುಂಬಾ ನೋವು ಆಗುತ್ತೆ ಕಣೋ? ನೀನು ಮಾತಾಡಿಲ್ಲ ಅಂದ್ರೆ ನನಗೆ ಏನೋ ಕಳೆದುಕೊಂಡಂತೆ ಆಗುತ್ತೆ ಕಣೋ? ಎಂದು ಭಾವುಕಳಾಗಿ ನುಡಿದಳು. ಅವಳ ಮಾತು ಕೇಳಿದ ಕಿರಣ್, “ನನಗೂ ಅಷ್ಟೇ ಕಣೇ. ನಿನ್ನ ಜೊತೆ ಮಾತನಾಡದೇ ಇರೋಕೆ ಆಗಲ್ಲ ಕಣೇ” ಎನ್ನುತ್ತಾ, ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡನು.
-ಚೈತ್ರಾ ವಿ.ಮಾಲವಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x