ಯಾವುದೇ ಕೃತಿಯೊಂದನ್ನು ಓದುವಾಗಲೂ ನನ್ನನ್ನು ಬಹುವಾಗಿ ಸೆಳೆಯೋದು ಆ ಕೃತಿಯಲ್ಲಿ ಚಿತ್ರಿತವಾಗುವ ಸ್ತ್ರೀ ಪಾತ್ರಗಳ ಪರಿಭಾವನೆಗಳು.
ಈ ನಿಟ್ಟಿನಲ್ಲಿ “ಹಾಡ್ಲಹಳ್ಳಿ ನಾಗರಾಜ್” ಸರ್ ಅವರ “ನಿಲುವಂಗಿಯ ಕನಸು ” ಕಾದಂಬರಿಯಲ್ಲಿಯೂ ನನ್ನ ಗಮನ ಸೆಳೆದ ಪ್ರಮುಖ ಸ್ತ್ರೀ ಪಾತ್ರಗಳು ಎರಡು, ಒಂದು”ಅವ್ವ” ನದು ಮತ್ತೊಂದು “ಸೀತೆ” ಯದು.ಇವರಿಬ್ಬರೂ ಇಡೀ ಕಾದಂಬರಿಯಲ್ಲಿ ಹಸಿರಿನೊಂದಿಗೆ ಜೀವ ಬೆಸೆದು ಮಾತನಾಡುವ ಸ್ತ್ರೀ ತತ್ವದ ಸಂಕೇತಗಳಾಗೇ ನನಗೆ ಕಂಡು ಬರುತ್ತಾರೆ.
ಕೃಷಿ ಎಂದ ತಕ್ಷಣ ಅದ್ಯಾಕೋ ನನಗೆ ರೈತ ಪುರುಷನ ಚಿತ್ರ ಕಣ್ಮುಂದೆ ಬರೋದೇ ಇಲ್ಲ,, ನನ್ನ ಕಣ್ಣಿಗೆ ಕಟ್ಟೋದು ರೈತ ಮಹಿಳೆಯ ಚಿತ್ರವೇ ಮೊದಲು.
ಬಹುತೇಕ ಕೃಷಿ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು ಹೆಣ್ಣೇ,,ಕೃಷಿ ಹುಟ್ಟಿದ್ದೇ ಮಹಿಳೆಯಿಂದ,ಬೇಟೆಗೆ ಹೋಗುತ್ತಿದ್ದ ಪುರುಷನಿಗಿಂತ ಕುಟುಂಬ ಕಟ್ಟುವ ಹಿನ್ನೆಲೆಯಲ್ಲಿ ನೆಲೆ ನಿಂತ ಕಡೆಯೇ ಉತ್ತುವ, ಬಿತ್ತುವ ಬೇಸಾಯ ಪದ್ದತಿ ಶೋಧವಾದದ್ದೇ ಮಹಿಳೆಯಿಂದ. ಹಸಿರು ರಸವನ್ನ ಅನ್ನ ರಸವಾಗಿಸಿ ಉಣಬಡಿಸುವ ಕೆಲಸದ ವರೆಗಿನ ಬಹುತೇಕ ಕೃಷಿ ಚಟುವಟಿಕೆಗಳಲ್ಲಿ ಅತೀ ಹೆಚ್ಚು ಭಾಗಿ ಹೆಣ್ಣೇ. ಹಾಗಾಗಿ ಈ ಎರಡು ಪಾತ್ರಗಳನ್ನು ಕಾದಂಬರಿಯ ಬಹುಮುಖ್ಯ ಒಳಹನ್ನಾಗಿ ಲೇಖಕರು ಭಾವಿಸಿದಂತೆಯೇ ನನಗೆ ಕಂಡುಬರುತ್ತದೆ.
ಈ ಅಂಶಗಳು, ಕಾಡನ್ನು ಕೃಷಿ ಭೂಮಿಯಾಗಿಸಲು ಜೀವ ತೇಯ್ವ ಅವ್ವನ ಸಾಹಸ,ಏಲಕ್ಕಿ ತೋಟ ಮಾಡುವಲ್ಲಿ ಅವಳ ಕಾಳಜಿಯಲ್ಲಿ ಕಾಣುತ್ತದೆ ಹಾಗೆಯೇ ಗೊಬ್ಬರ ಚೆಲ್ಲುವಲ್ಲಿ,ಮಣ್ಣನ್ನು ಹದಗೊಳಿಸುವಲ್ಲಿ ಸೀತೆ ತೋರುವ ತಾದ್ಯಾತ್ಮತೆಯಲ್ಲೂ ಕಂಡುಬರುತ್ತದೆ.
ಕಾದಂಬರಿಯ ಮುಖ್ಯ ಪಾತ್ರ ‘ಸೀತೆ’ ಹಳ್ಳಿಗಾಡಿನ ಕುಟುಂಬಗಳ ಬದುಕನ್ನೇ ಬದುಕಿದವಳು,ಸನ್ನಿವೇಶಗಳ ಒತ್ತಡ, ಆತ್ಮಪರಿವೀಕ್ಷಣೆ ಎರಡೂ ಸೇರಿ, ತನ್ನ ಹಿನ್ನೆಲೆಯನ್ನು, ಸ್ವಭಾವವನ್ನು ಮೀರಿದವಳು. ಸುಂದರ ಕುಟುಂಬದ ಕತೆ, ಅದರ ಗೃಹಿಣಿ ‘ಸೀತೆ’,ಅವಳಿಗೆ ಮಗಳನ್ನು ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸುವ ಮತ್ತು ತನಗಾಗಿ ಒಂದು ನಿಲುವಂಗಿ( ನೈಟಿ)ಯನ್ನು ಕೊಳ್ಳುವ ಆಸೆ. ಇವುಗಳ ಪೂರೈಕೆಗೆ ಅವರಿಗಿರುವ ಏಕೈಕ ಆಧಾರ ಕೃಷಿ ಯ ಆದಾಯ.
ಕಾದಂಬರಿಯ ಆರಂಭದಲ್ಲಿ ಆಕೆಯ ಕನಸುಗಳು,ಬದುಕಿನೆಡೆಗಿನ ಆಶಾವಾದ ಚಿತ್ರಿತವಾದರೆ,ಅರ್ಧ ಭಾಗದ ನಂತರ, ಈಕೆಯ ಪಾತ್ರ, ಮತ್ತವಳ ಸಣ್ಣ ಸಣ್ಣ ಆಸೆಗಳು, ಸಮಚಿತ್ತ ನಡವಳಿಕೆ, ದೈಹಿಕ ಶ್ರಮಕ್ಕೆ ಹೆದರದ ಗಟ್ಟಿತನ ಇತ್ಯಾದಿಗಳು ಕಥನದಲ್ಲಿ ಮುನ್ನೆಲೆಗೆ ಬರುತ್ತದೆ.
ಇಡೀ ಕಾದಂಬರಿಯಲ್ಲಿ ‘ಅವ್ವ’ ನನ್ನನ್ನ ಬಹುವಾಗಿ ಸೆಳೆದ ಪಾತ್ರ,ಹೊಟ್ಟೆಪಾಡಿಗಾಗಿ ಇದ್ದ ತುಂಡು ಭೂಮಿಯನ್ನು ಉಳಿಸಿಕೊಳ್ಳಲು ಆಕೆ ಒದ್ದಾಡುವ ಪರಿ ಓದುಗರ ಮನಸ್ಸನ್ನು ಕಲಕುತ್ತದೆ, ಸಾವಕಾಶ ಆಕ್ರಮಿಸುತ್ತದೆ. ಆಕೆಯೇನೂ ಆದರ್ಶವಾದಿಯಲ್ಲ, ಸಮಾಜ ಸುಧಾರಕಿಯಲ್ಲ. ಸಾಮಾನ್ಯ ವ್ಯಕ್ತಿತ್ವದ ಆದರೆ ಗಟ್ಟಿಗಿತ್ತಿ ಮನೆ ಯಜಮಾನಿಯ ರೀತಿ ಸಾಕ್ಷಾತ್ಕಾರ ಕಂಡುಕೊಂಡವಳು. ಪ್ರಧಾನ ಪಾತ್ರ, ಪ್ರಧಾನ ಭೂಮಿಕೆಯಿಂದಾಚೆಗೂ ಬೆಳಗುವ ಮುಖ್ಯವಾದ ಆಯಾಮವೊಂದು ಈ ಪಾತ್ರದ ಮೂಲಕ ಪ್ರಕಟವಾಗುತ್ತದೆ ಮತ್ತು ಕೃಷಿ ಬದುಕಿನ,ಅರಣ್ಯ ನಾಶದ ಹೀನ ವಿಷ ವರ್ತುಲದ ಕರುಣಾಜನಕ ಚಿತ್ರವನ್ನು ಕಣ್ಮುಂದೆ ಬಿಚ್ಚಿಡುತ್ತದೆ.
ಇವೆರಡೂ ಪಾತ್ರಗಳನ್ನ ಕಟ್ಟಿಕೊಡುವಲ್ಲಿ ಲೇಖಕರು ಎರಡು ಆಯಾಮಗಳನ್ನ ತೆರೆದುಕೊಟ್ಟಂತೆ ನನಗೆ ಭಾಸವಾಗುತ್ತದೆ,
ಮೊದಲನೆಯದು ,,,
ಮಾರುಕಟ್ಟೆಯ ಪುರುಷ ರಾಜಕಾರಣ ನಮ್ಮೆದುರು ತೆರೆದು ಇಟ್ಟಿರುವ ಅಸಂಬದ್ಧ ವಾದ ಕುರೂಪ ರಚನೆಯ ಬಗ್ಗೆ ಲೇಖಕರ ನೋಟ ಏನಿದೆ ಅದು ಇವತ್ತಿನ ಕಾಲಕ್ಕೂ ಮಹಿಳೆಗೆ ನಿಲುಕುವ ನಿಟ್ಟಿನಲ್ಲಿ ಬಹಳಷ್ಟೇನೂ ಬದಲಾಗಿಲ್ಲ, ಈ ಚಿಂತನೆಯಲ್ಲಿ ಕಾದಂಬರಿಯು ಸ್ತ್ರೀ ಕೃಷಿಯಲ್ಲಿ ದುಡಿಮೆಗಷ್ಟೇ ಸೀಮಿತವಾಗದೇ ಅದರಾಚೆಗೂ ಬೆಳೆಯಬೇಕಾದ ಅಗತ್ಯವನ್ನ ಸೂಚ್ಯವಾಗಿ ತಿಳಿಸಿದಂತೆ ಕಂಡುಬರುವುದು.
ಎರಡನೆಯದು,,,
ಹೆಣ್ಣು ಎಂದಾಕ್ಷಣ ಚಂದ ಚಂದದ ಭೋಗವಸ್ತುಗಳನ್ನು ಕೊಂಡು ಸ್ಟೈಲ್ ಮಾಡುತ್ತಾ,ದುಂದು ವೆಚ್ಚ ಮಾಡುವವರ ಪ್ರತಿನಿಧಿ ಅಲ್ಲ,,, ಒಂದಿಡೀ ಕುಟುಂಬದ ಬೆಳವಣಿಗಾಗಿ ಕೇವಲ ಸಣ್ಣಾತಿ ಸಣ್ಣದು ಅನಿಸುವ ಆಸೆಯಾದ ಒಂದು ನೈಟಿಯನ್ನೂ ಕೊಳ್ಳಲಾಗದೆ ಬರಿಕೈಯಲ್ಲಿ ಮನೆಗೆ ಹಿಂದಿರುಗುವಂತಹ ಸಂದರ್ಭದಲ್ಲೂ, ಗಂಡನಿಗಾದ ಬೇಸರದ ಬಗ್ಗೆ, ಮುಂದಿನ ಕಾರ್ಯಗಳ ಬಗ್ಗೆ ಚಿಂತಿಸುವ ದೃಢ ಚಿತ್ತವನ್ನು ಹೊಂದಿದವಳೂ, ಆಶಾವಾದಿಯೂ,ಗಟ್ಟಿಗಿತ್ತಿಯೂ ಆಗಿರುತ್ತಾಳೆ ಎಂಬುದನ್ನು ಕಟ್ಟಿಕೊಟ್ಟಿದ್ದಾರೆ ಅನ್ನುವುದು.
ಕಾಣದ ಸಿಡಿಗಾಳನು ಉಗುರುಗಣ್ಣಲಿ ಆಯ್ದು ತಂದು,
ಗುಟ್ಟು ಕಲ್ಲು ಗೊಟರಿನಲಿ ಕುಟ್ಟಿ ಕಾಯಿಸಿದ ಅಂಬಲಿ ಒಂದೇ ಗುಟುಕು,
ಒಂಬತ್ತು ಬಾಯಿಗಳು ತೆರೆದು,ಯಾವ ಬಾಯಿಗೆ ಅಂಬಲಿ! ಯಾವ ಬಾಯಿಗೆ ಸೆರಗು?
ದಿಟ ದಾಯಾದಿಯ ಮಕ್ಕಳಿಗೆ ಅಂಬಲಿಯನೆ ಕುಡಿಸಿ,
ತಾನೆತ್ತ ಮಕ್ಕಳಿಗೆ ತಣ್ಣೀರನೆ ಕುಡಿಸಿ,
ತನ್ನ ಕಣ್ಣೀರನು ತಾನೆ ಕುಡಿದುಕೊಂಡಳು ತಾಯಿ,
ಕಂಕುಳ ಕೂಸಿಗೆ ಎದೆಹಾಲು ಬತ್ತದಿರಲೆಂದು.
ಸಹೋದರರೊಬ್ಬರು ಹೇಳಿದ ಈ ಕವನ ಇಡೀ “ನಿಲುವಂಗಿಯ ಕನಸು” ಕಾದಂಬರಿಯಲ್ಲಿ ಜೀವತಳೆದಂತೆ ನನಗೆ ಭಾಸವಾಗುತ್ತದೆ.
ಕೃಷಿಯನ್ನೇ ಜೀವನಾಧಾರದ ಮೂಲ ಕಾರ್ಯ ಮಾಡಿಕೊಂಡ ಒಬ್ಬ ಸಾಮಾನ್ಯ ಮಹಿಳೆಯ ಅತಿ ಸಣ್ಣ ಆಸೆಯೊಂದರ ಪೂರೈಕೆಯೆಂಬ,ಅತಿ ಸಾಮಾನ್ಯ ವಿಷಯವೇನೋ ಎಂದು ಕೆಲವರಿಗೆ ಅನಿಸಬಹುದಾದ ವಿಷಯವನ್ನು ‘ನಿಲುವಂಗಿ’ ಯ ಮೆಟಾಫರ್ ಆಗಿ ತೆಗೆದುಕೊಂಡು, ಆಕೆಯ ಸಾಂಸಾರಿಕ ಏಳುಬೀಳುಗಳ ಹಿನ್ನೆಲೆಯಲ್ಲಿ ಪರಿಶೀಲಿಸುವ ಪ್ರಯತ್ನವನ್ನು ಹಾಡ್ಲಹಳ್ಳಿ ನಾಗರಾಜ್ ಸರ್ ಇಲ್ಲಿ ಮಾಡಿದ್ದಾರೆ. ಕೃಷಿ ಜೀವನದ ಕಾದಂಬರಿಗಳ ಪಟ್ಟಿಗೆ ಈ ಕಾದಂಬರಿ ಸೇರುತ್ತದೆ. ವೃತ್ತಿ ಪ್ರಪಂಚ, ವ್ಯಾಪಾರ ಪ್ರಪಂಚ, ಬೇಸಾಯಗಾರರ ಜಗತ್ತು, ಈ ಕಾದಂಬರಿಯ ಪ್ರಧಾನ ಭೂಮಿಕೆ. ಶ್ರಮದ ಪರಿಕಲ್ಪನೆ ಬದಲಾದ ರೀತಿ, ಶ್ರಮಿಕರ ಜೀವನದ ಹೊಸ ಬವಣೆಗಳು ಕಾದಂಬರಿಯ ಒಂದು ಹಂತದಲ್ಲಿ ಕೇಂದ್ರದಲ್ಲಿವೆ.
ಜಗತ್ತು ಅದೆಷ್ಟೇ ವೈಜ್ಞಾನಿಕವಾಗಿ ಬೆಳೆದರೂ ಕೂಲಿಕಾರರ ಶ್ರಮವಿನ್ಯಾಸ ಮಾತ್ರ ಈ ಜಗತ್ತಿನಲ್ಲಿ ಬದಲಾಗುವುದಿಲ್ಲ,ವೃತ್ತಿಯ ಬೇಕು-ಬೇಡಗಳು ಮಾತ್ರ ಬದಲಾಗುತ್ತವೆ. ಹೀಗಾಗಿ ಈ ಹಿನ್ನೆಲೆಯುಳ್ಳ ಕಾದಂಬರಿಗೆ ಬಹುಮುಖೀ ಆಯಾಮಗಳಿವೆ.
ಹಲವು ಭಿನ್ನ ಅನುಭವ ವಲಯಗಳಿಗೆ ಸೇರಿದ ಕಾದಂಬರಿಯನ್ನು ನಾಗರಾಜ ಸರ್ ಸರಳ ಸುಂದರ ಮತ್ತು ನೇರವಾಗಿ ಕಟ್ಟಿಕೊಟ್ಟಿದ್ದಾರೆ. ಸೀತೆ, ಚಿನ್ನಪ್ಪ, ಹೊನ್ನೇಗೌಡ, ಅವ್ವ,ಕತ್ತೆ ಯ ಪಾತ್ರಗಳ ಹಿನ್ನೆಲೆಯಲ್ಲಿ ಲೇಖಕರು ತೋರುವ ಸೃಜನಶೀಲ ಸೋಜಿಗ ಬಹಳ ಗಮನಾರ್ಹವಾದದ್ದು. ಕೃಷಿಯ ಹೊರತಾದ ಭಿನ್ನ ಕಸುಬುದಾರನಾಗಿ ಕಾದಂಬರಿಯಲ್ಲಿ ವಿಲನ್ ಪಾತ್ರದಂತೆ ಬೃಹತ್ತಾಗಿ ಎದೆ ಕಲಕುವ ಮತ್ತೊಂದು ಪಾತ್ರ ‘ಕತ್ತೆರಾಮ’ನ ಪಾತ್ರ.ಊರಿಗೊಂದು ಬೃಹತ್ ತಿಪ್ಪೆಗುಂಡಿ ಇರುವಂತೆ ಇವನು.ಶ್ರಮವಿಲ್ಲದ ಮೋಸಗಾರಿಕೆಯೇ ಬದುಕಾದ, ಬಂಡವಾಳಶಾಹಿ ಶೈಲಿಯನ್ನು ಇವನಲ್ಲಿ ಲೇಖಕರು ಪರಿಚಯಿಸುತ್ತಾರೆ. ದುರಾಸೆ ಮತ್ತು ಲಂಪಟತೆ ಸದಾ ಕಾಲಕ್ಕೂ ವಿಸ್ತರಿಸುವ ಜಾಯಮಾನಗಳಾಗಿದ್ದು, ದೊಡ್ಡೂರಿನಲ್ಲಿ ಮುಂದೆ ಜರುಗುವ ಬದಲಾವಣೆಗಳ ದೃಷ್ಟಿಯಿಂದ ಮತ್ತು ಅಧ್ಯಯನಕ್ಕೆ ಆಯ್ದುಕೊಂಡಿರುವ ವಿಷಯ ವ್ಯಾಪ್ತಿಯ ದೃಷ್ಟಿಯಿಂದ ಈತನ ಪಾತ್ರ ವಿವರಗಳು ತುಂಬಾ ಮುಖ್ಯ.ಕೊಂಚ ಚಾಲಾಕಿತನ ಇದ್ದವರು ಕಾಳಸಂತೆಯ ವ್ಯಾಪಾರದಲ್ಲಿ ಹೇಗೆ ಅಮಾಯಕರ ಸುಲಿಗೆಗೆ ತೊಡಗುತ್ತಾರೆ? ಮೋಸ-ತಟವಟ ಅರಿಯದ ಮುಗ್ಧ ಜನ ಮತ್ತವರ ಕನಸುಗಳು ಇವನ ಬಲೆಗೆ ಹೇಗೆ ಸಿಕ್ಕುತ್ತಾ ಹೋಗುತ್ತವೆ ಎನ್ನುವುದರ ಸ್ಟ್ರಾಂಗ್ ಅಭಿವ್ಯಕ್ತಿ ಲೇಖಕರಿಂದ ಈ ಪಾತ್ರ ಮುಖೇನ ಆಗಿದೆ.
ಇನ್ನು ಪ್ರಗತಿಪರ ರೈತ, ಯುವಜನತೆಯ ಪ್ರತಿನಿಧಿ ಅನಿಸುವ ‘ಹೊನ್ನೇಗೌಡ’ನ ಪಾತ್ರದ ಮೂಲಕ ಲೇಖಕರು ಯಾವುದೇ ವೃತ್ತಿ ಅಥವಾ ವ್ಯವಸಾಯದಲ್ಲಿದ್ದರೂ, ಒಂದು ಸ್ತರದ ಸಂವೇದನಾಶೀಲತೆ ತುಂಬಿದ ದುಡಿಮೆ ಶೈಲಿಯಿಂದ ಎಂತಹ ಕಾಲದಲ್ಲೂ ಮನುಷ್ಯ ಸಾರ್ಥಕವಾದ ಬದುಕನ್ನು ನಡೆಸಬಹುದು ಎಂಬುದನ್ನು ಹೇಳಿ ಓದುಗರನ್ನು ಒಪ್ಪಿಸುತ್ತಿರುವಂತಿದೆ. ಜೊತೆಜೊತೆಗೇ ಅಂತಹ ವ್ಯಕ್ತಿತ್ವದವನೂ ವ್ಯವಸ್ಥೆಯ ಸುಳಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುವುದಾದರೆ ರೈತರ ಬದುಕಿನ ಬವಣೆ ಅದಿನ್ನೆಷ್ಟು ತೀವ್ರವಾದದ್ದು ಎಂಬ ಚಿಂತನೆಗೆ ನಮ್ಮನ್ನು ಹಚ್ಚದೇ ಇರದು.
ಯಾವುದೇ ಕಾದಂಬರಿ ನಿರ್ದಿಷ್ಟ ಕಾಲಮಾನದಲ್ಲಿ ಜನ ಬದುಕುವ ರೀತಿಯನ್ನು ಹೇಳಬೇಕು,”ನಿಲುವಂಗಿಯ ಕನಸು” ಹಾಗೆ ಹೇಳುತ್ತದೆ ಕೂಡ,ಮುಂದಿನ ತಲೆಮಾರಿನ ಓದುಗರು ಕೃತಿಗಳನ್ನು ಓದುವಾಗ, ಕಾಲ, ಜೀವನದ ಕಷ್ಟ-ನಷ್ಟಗಳು ಏನೂ ಬದಲಾಗೇ ಇಲ್ಲವಲ್ಲ ಎಂಬ ಭಾವನೆಯನ್ನೂ ಮೂಡಿಸುತ್ತದೆ.
ಜೀವನಕ್ಕೆ ಚಿಂತನೆಯನ್ನು ತೊಡಿಸಬೇಕೋ ಅಥವಾ ಜೀವನದಿಂದ ಉದ್ಭವವಾದ ಚಿಂತನೆಯ ಮೂರ್ತರೂಪವನ್ನು ಕಾದಂಬರಿಯಲ್ಲಿ ದಕ್ಕಿಸಿಕೊಳ್ಳಬೇಕೋ ಎಂಬುದೇ ಮೂಲ ಸಮಸ್ಯೆ ಎಂಬ ವೈಚಾರಿಕ ಲಹರಿ ಕಾದಂಬರಿಯ ಮೂಲ ತಿರುಳು ಎಂದೆನ್ನಬಹುದು.ಈ ಮೂಲ ತಿರುಳಿಗೆ ಸಪೋರ್ಟಿವ್ ಆಗಿ ಉಳಿದೆಲ್ಲಾ ಪಾತ್ರಗಳಿವೆ.
ಇಷ್ಟಲ್ಲದೆ ನನಗೆ ಇಷ್ಟವಾದದ್ದು ನಾಗರಾಜ್ ಸರ್ ರವರಿಗಿರುವ ಹಾಸ್ಯಪ್ರಜ್ಞೆ. ಫ್ಯಾಮಿಲಿ ಪ್ಲಾನಿಂಗ್ ಪ್ರಕರಣ, ವಿಷ ಕುಡಿದವರಿಗೆ ಹೇಲನ್ನು ಕುಡಿಸುವ ಸಂದರ್ಭ, ಕತ್ತೆರಾಮನ ಕತೆ ಗಳಲ್ಲಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ.
ಇನ್ನು ಕೊನೆಯದಾಗಿ ಈ ಕೃತಿಯು ಇವತ್ತಿನ ಕಾಲಕ್ಕೆ ಏನನ್ನ ಹೇಳುತ್ತೆ? ರೈತರು ತಮಗಿರುವ ಬವಣೆಗಳ ನೆರಳಲ್ಲೇ ಬದುಕನ್ನೂ ಕಟ್ಟಿಕೊಂಡು, ಬೆಳೆಯಲೂ ಬೇಕಾದಾಗ ಎದುರಿಸುವ ಎಲ್ಲ ತಲ್ಲಣಗಳನ್ನೂ ತಣ್ಣಗೇ ಕಟ್ಟಿಕೊಡುವ ಕಾದಂಬರಿಯು ಮನಸ್ಸು ತರಗುಡುವಂತೆ ಮಾಡುತ್ತದೆ.
ಇಂದಿನ ಯುವಜನಾಂಗದ ಮುಂದೆ ಮ್ಯಾತಮ್ಯಾಟಿಕ್ಸ್,ಸೈನ್ಸ್,ಮ್ಯಾನೇಜ್ಮೆಂಟ್ ಇತ್ಯಾದಿಗಳು ಮಾತ್ರ ಶಿಲೆಯಲ್ಲಿ ಕಲಿಸಬೇಕಾದ ಅಂಶಗಳು ಎಂಬುದಾಗಿ ಬಿಂಬಿತವಾದ ಪಠ್ಯ ಮತ್ತು ಶಿಕ್ಷಣ ಪದ್ಧತಿ ನಮ್ಮಲ್ಲಿದೆ. ಕೃಷಿಯ ಮಹತ್ವದ ಬಗ್ಗೆ ತಿಳಿಸುವ ಅದೆಷ್ಟು ಕೃತಿಗಳು ಬಂದಿವೆ? ಮತ್ತು ಅವೆಷ್ಟು ಯುವಜನಾಂಗದ ಕಣ್ಣಿಗೆ ಬೀಳುತ್ತವೆ?,ಅಥವಾ ಬೀಳಿಸುವಂತಹ ಕಾರ್ಯಗಳು ಎಷ್ಟರಮಟ್ಟಿಗೆ ಆಗ್ತಿವೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡರೆ ಹೌದು ಇಂತಹ ಪಠ್ಯವಿಷಯದ ಕೊರತೆ ಇದೆ ಅನಿಸದೇ ಇರದು, ಇದಕ್ಕೆ ಉತ್ತರವಾಗಿ ನಿಲುವಂಗಿಯ ಕನಸು ನಮ್ಮೆದುರು ಬಹುಮುಖ್ಯ ಪಠ್ಯವಾಗಿ ನಿಲ್ಲುತ್ತದೆ,ಅದನ್ನ ಎಲ್ಲರ ಮಸ್ತಿಷ್ಕಕ್ಕೆ ತಲುಪಿಸುವ ಕೆಲಸ ನಡೆಯಬೇಕಿದೆ.
ಅ-ಅರಸ ಎಂದು ಹೇಳಿಕೊಡದೆ, ಅ- ಅರ ಎಂದು ಹೇಳಿಕೊಡಲು ಆರಂಭಿಸಿ ನೇಗಿಲು,ಕೃಷಿಭೂಮಿ,ಪಾಣಿ-ಪಟ್ಟೆ,ಒಕ್ಕಲು,ಕಾಳು-ಕಡ್ಡಿ,ಆಹಾರ,ಅನ್ನ ಇತ್ಯಾದಿಗಳ ಮೂಲಕ ಎಲ್ಲಾ ರೀತಿಯ ವಿಜ್ಞಾನ, ಗಣಿತ,ಸಮಾಜವನ್ನೂ ಕೃಷಿ ಹೇಗೆ ತನ್ನಲ್ಲಿ ಹಾಸು ಹೊಕ್ಕಾಗಿಸಿಕೊಂಡಿದೆ ಎಂಬುದನ್ನ ಹೇಳುವ ಇಂತಹ ಕೃತಿಗಳು ಪಠ್ಯವಾಗಬೇಕಿದೆ.ಇವತ್ತಿನ ಕಾಲದ ಅವಶ್ಯಕ ಶಿಕ್ಷಣವಾದ ಮಣ್ಣಿನ ಗುಣಮಟ್ಟದ ಅರಿವು,ನೆಲದ ಫಲವತ್ತತೆ ಹೆಚ್ಚಳದ ಗಮನ,ಸಸ್ಯ ಸಂಬಂಧಿ ಬಯಾಲಜಿ-ಬಾಟ್ನಿ,ಕೀಟನಾಶಕ ಇತ್ಯಾದಿ ಹಾವಳಿಗಳ ಅರಿವು ಮೂಡಿಸುವ ರಸಾಯನಶಾಸ್ತ್ರ, ಮಾರುಕಟ್ಟೆ, ಬೆಲೆ ನಿಗದಿ, ಬ್ಯಾಂಕ್,ಸಾಲ ಇತ್ಯಾದಿ ತಿಳಿಸುವ ಅರ್ಥಶಾಸ್ತ್ರ ಇವೆಲ್ಲವೂ ಕೃಷಿಯಲ್ಲೇ ಬೆರೆತಿರುವ ಬಗೆಯನ್ನೂ,ಅವೆಲ್ಲವೂ ಕಲಿಕೆಗೆ ಬೇಕೇ ಬೇಕಾದ ಅಂಶಗಳೇ ಎಂಬುದನ್ನು ಹೇಳುವ ಕಾದಂಬರಿಯು ಓದುಗರ ಚಿಂತನೆಯ ಮೇಲೆ ಬೆಳಕು ಚೆಲ್ಲುತ್ತಾ ಸಾಗುತ್ತದೆ ಮತ್ತು ಇದಕ್ಕಿಂತ ಮುಖ್ಯವಾಗಿ ಸಂಘಜೀವಿಯಾದ ಮಾನವ ಪರಸ್ಪರ ಆಸರೆಯಾಗಿ ಬದುಕಬೇಕು ಮತ್ತು ಸರ್ಕಾರದ ಯೋಜನೆಗಳು ಬಡವರ ಅಭಿವೃದ್ಧಿಯ ನೆಲೆಯುಳ್ಳವಾಗಿರಬೇಕು,ಆಳುವವರಿಗೆ,ಬಂಡವಾಳ ಶಾಹಿಗಳಿಗೆ ಮಾನವೀಯ ಮೌಲ್ಯಗಳು ಇರಲೇಬೇಕು ಎಂಬ ಅಷ್ಟೂ ಅಂಶಗಳನ್ನು ಕಾದಂಬರಿಯು ಪ್ರತೀ ಪಾತ್ರ ಮತ್ತು ಘಟನೆಗಳ ಮುಖೇನ ನಮ್ಮ ಅರಿವಿಗೆ ತರುತ್ತಾ ಸಾಗುತ್ತದೆ ಈ ದೃಷ್ಟಿಯಿಂದ ಕೃತಿಯು ಯುವಜನತೆಯನ್ನ ತಲುಪಬೇಕಾದ್ದು ತುರ್ತು.
ಒಟ್ಟಾರೆ ಇತ್ತೀಚೆಗೆ ಇಷ್ಟು ಸರಳವಾಗಿ ಕೃಷಿ ಬದುಕಿನ ಬವಣೆಗಳನ್ನು ತೆರೆದಿಟ್ಟ ಮತ್ತೊಂದು ಕಾದಂಬರಿ ಬಹುಶಃ ಬಂದಿಲ್ಲವೆಂದೇ ಭಾವಿಸುತ್ತೇನೆ. ಇಂತಹದೊಂದು ಸುಂದರ ದೃಷ್ಯ ಕಾವ್ಯ ವನ್ನು ಕಟ್ಟಿಕೊಟ್ಟ ಹಾಡ್ಲಹಳ್ಳಿ ನಾಗರಾಜ್ ಸರ್ ರವರಿಗೆ ನಿಜಕ್ಕೂ ಅಭಿನಂದನೆಗಳು ಸಲ್ಲಬೇಕು.
–ದಾಕ್ಷಾಯಿಣಿ
ಹೌದು ನೀವು ಹೇಳಿದ ಹಾಗೆ ಪಠ್ಯಪುಸ್ತಕದಲ್ಲಿ ಮಣ್ಣಿನ ಬಗ್ಗೆ ಮರಗಳ ಬಗ್ಗೆ ವ್ಯವಸಾಯದ ಬಗ್ಗೆ ಪ್ರಾಣಿ-ಪಕ್ಷಿಗಳ ಬಗ್ಗೆ ಅಳವಡಿಸಿಕೊಳ್ಳಬೇಕು..