ಎಮಿಲಿ ಎಂಬ ಅಮಲು: ಮಹೇಂದ್ರ ಎಂ. ನವೋದಯ


೧೯ನೇ ಶತಮಾನದ ಇಂಗ್ಲೀಷ್ ಸಾಹಿತ್ಯದಲ್ಲಿನ ಮಹಿಳಾ ಲೇಖಕಿಯರಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದವರಲ್ಲಿ ಎಮಿಲಿ ಬ್ರಾಂಟೆ ಕೂಡ ಒಬ್ಬರು. ಜುಲೈ ೩೦, ೧೮೧೮ ರಂದು ಜನಿಸಿ, ತೀರಾ ಸಂಕ್ಷಿಪ್ತವಾಗಿ ೩೦ ವರ್ಷಗಳ ಕಾಲ ಬದುಕಿದರೂ ಅವರ ಸಾಹಿತ್ಯ ಕೊಡುಗೆ ಅನನ್ಯ ಮತ್ತು ಅಜರಾಮರ. ಎಮಿಲಿ ಬೆಳೆದದ್ದು ದೂರದ ಇಂಗ್ಲೆಂಡ್, ಬರೆದದ್ದು ಇಂಗ್ಲೀಷ್ ನಲ್ಲಿ, ಎಮಿಲಿ ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ಕಠಿಣ ಸ್ವಭಾವದ ನೆಂಟನಬ್ಬೊಳ ಮನೆಯಲ್ಲಿ ಬೆಳೆದಳು. ಹೆಚ್ಚು ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ. ಆಕೆ ಯಾರೊಂದಿಗೂ ಬೆರೆತವಳಲ್ಲ, ಒಂಟಿತನವೇ ಅವಳ ಜಗತ್ತು. ಆ ಜಗತ್ತಿನಿಂದಲೆ ಸೃಷ್ಠಿಯಾದ ಒಂದು ಸಾಹಿತ್ಯಕ ಪರಂಪರೆ ವಿಕ್ಟೋರಿಯನ್ ಸಾಹಿತ್ಯ ಬರವಣಿಗೆಯ ಸ್ಫೂರ್ತಿ ಸೆಲೆಯಾಯಿತು. ಎಮಿಲಿ ಕಟ್ಟಿಕೊಟ್ಟ ಆ ಮಾಯಾಜಗತ್ತಿನಲ್ಲಿ ಅತ್ಯಂತ ಭಾವೋದ್ರಿಕ್ತ ಪರಂಪರೆಯಿದೆ, ಅದರಿಂದಲೇ ಏನೋ ಆಕೆಯ ವುದರಿಂಗ್ ಹೈಟ್ಸ್ ಇಲ್ಲಿಯವರೆಗೂ ಒಂದು ಶ್ರೇಷ್ಠ ಕಾದಂಬರಿಯಾಗಿರುವುದು. ವುದರಿಂಗ್ ಹೈಟ್ಸ್ ಓದಿದ ಅಸಂಖ್ಯಾತ ಓದುಗರು ಅದರಲ್ಲಿನ ಪಾತ್ರಗಳಾಗಿ ಹೋಗಿದ್ದಾರೆ, ಮಿಂದಿದ್ದಾರೆ ಹಾಗೆಯೇ ಅನುಭವಿಸಿದ್ದಾರೆ. 

ಎಮಿಲಿ ಹುಟ್ಟಿದ್ದು ಯಾರ್ಕಶೈಯರ್ ಇಂಗ್ಲೆಂಡಿನ ತಾರ್‍ನಂಟನ್ ಎಂಬ ಪ್ರದೇಶದಲ್ಲಿ. ತಂದೆ ರೆವರೆಂಡ್ ಪ್ಯಾಂಟ್ರಿಕ್ ಬ್ರಾಂಟೆ ಯಾರ್ಕಶಯರ್‌ನಲ್ಲಿ ಪಾದ್ರಿಯಾಗಿ ಸೇವೆಸಲ್ಲಿಸುತ್ತಿದ್ದರು. ಎಮಿಲಿ ಬ್ರಾಂಟೆಗೆ ಒಬ್ಬ ಅಕ್ಕ, ಅಣ್ಣ ಮತ್ತು ತಂಗಿಯರಿದ್ದರು. ಅಣ್ಣನದು ಬೇರೆ ಪ್ರಪಂಚವಾದರೆ, ಅಕ್ಕ-ಷಾರ್ಲೊಟ್ ಬ್ರಾಂಟೆ, ಎಮಿಲಿ ಬ್ರಾಂಟೆ, ಮತ್ತು ತಂಗಿ-ಅನ್ನೆ ಬ್ರಾಂಟೆಯರದೆ ಒಂದು ಪ್ರಪಂಚ. ಎಮಿಲಿ ತನ್ನ ಮನೆಯ ಶಾಂತತೆಯಲ್ಲಿ ಜೀವನವನ್ನು ನೆಮ್ಮದಿಯಿಂದ ನಡೆಸುತ್ತಿದ್ದಳು. ಹಾಗೆಯೇ, ಚಾರ್ಲೊಟ್ ಮತ್ತು ಅನ್ನೆ ಕೂಡ. ಯಾವುದೇ ಗೋಜಿಗು ಹೋಗದೆ, ನೆರೆಯವರೊಂದಿಗೂ ಬೆರೆಯದೆ ತಾನಯ್ತು ತನ್ನ ಪಾಡಾಯ್ತು ಎಂದು ಕವಿತೆಗಳ ಬರೆಯುತ್ತ ’ಗೊಂಡಲ್ ಸಾಗಾ ಮತ್ತು ಸೈಕಲ್’ ಎಂಬ ಅತ್ಯುತ್ತಮ ಕವನ ಸಂಕಲನವನ್ನೇ ತಯಾರಿಸಿಬಿಟ್ಟಿದ್ದಳು. 

೧೮೨೬ ರ ಜೂನ್ ತಿಂಗಳಲ್ಲಿ ತನ್ನ ತಂದೆ ರೆವರೆಂಡ್ ಪ್ಯಾಟ್ರಿಕ್ ಬ್ರಾಂಟೆ ನೀಡಿದ ಅವಶ್ಯವಲ್ಲದ ಮರದ ಸೈನಿಕರ ಸೆಟ್ (insignificant wooden soldiers set) ಉಡುಗೊರೆ ಆಕೆಯ ಕಾಲ್ಪನಿಕ ಮತ್ತು ಸಾಹಿತ್ಯ ಪ್ರತಿಭೆಯನ್ನು ಉತ್ತೇಜಿಸಿತು. ಅವುಗಳ ನೆರವಿನಿಂದಲೆ ಸಾಕಷ್ಟು ಕಾಲ್ಪನಿಕ ಕವಿತೆಗಳು ಹುಟ್ಟಿಕೊಂಡವು. ಇದು ಚಾರ್ಲೊಟ್ ಮತ್ತು ಅನ್ನೆ ಬ್ರಾಂಟೆಗೂ ಅನ್ವಯಿಸುತ್ತದೆ. ಆ ಸಮಯದಲ್ಲಿ ಷಾರ್ಲೊಟ್ ಮತ್ತು ತಮ್ಮ ಬ್ರಾನ್ವೆಲ್ ಬ್ರಾಂಟೆ ’ಅಂಗ್ರೀಯಾ’ ಬರೆದರು. ಹಾಗೆಯೇ, ಎಮಿಲಿ ಮತ್ತು ಅನ್ನೆ ’ಗೊಂಡಲ್’ ಎಂಬ ಕವನ ಸಂಕಲನ ರಚಿಸಿದರು.

ಎಮಿಲಿ ತೀರಾ ನಾಚಿಕೆ ಸ್ವಭಾವದವಳು, ಹಾಗೇ ಬರೆದದ್ದನೆಲ್ಲ ಪತ್ರಿಕೆ, ಮ್ಯಾಗಜೀನ್ ಅಥವಾ ಜರ್ನಲ್‌ಗಳಿಗೆ ಕಳುಹಿಸಿದವಳಲ್ಲ. ಚಾರ್ಲೊಟ್ ಮತ್ತು ಅನ್ನೆಯ ಬಲವಂತಕ್ಕೆ ಮೂವರೂ ತಮ್ಮ ಹೆಸರು ಬದಲಾಯಿಸಿಕೊಂಡು ಕಳುಹಿಸಲಾರಂಭಿಸಿದರು. ಇದರ ಪರಿಣಾಮವಾಗಿಯೆ ಇಂದು ’ಕರರ್, ಎಲಿಸ್ ಮತ್ತು ಅಕ್ಟನ್ ಬೆಲ್ ಕವಿತೆಗಳು’ ಎಂಬ ಪುಸ್ತಕ ಅಪರೂಪಕೊಮ್ಮೆ ಕಾಣಸಿಗುವುದು. ೧೮ನೇ ಮತ್ತು ೧೯ನೇ ಶತಮಾನ, ತೀರಾ ಸಂಕುಚಿತ ಘಟ್ಟ, ಮಹಿಳೆಯರ ಹಕ್ಕುಗಳ ಹತ್ತಿಕ್ಕಿದ ಕಾಲಘಟ್ಟ. ಯಾವೊಬ್ಬ ಮಹಿಳೆಯೂ ತನ್ನ ಭಾವನೆಗಳ ವ್ಯಕ್ತಪಡಿಸಲು ಆಗದೆ ತನ್ನಲ್ಲೆ ಅದುಮಿಟ್ಟುಕೊಂಡು ಬದುಕಿದ ವಿಕ್ಟೋರಿಯನ್ ಮಹಿಳೆಯರ ಕರಾಳ ಶತಮಾನ. ಇಷ್ಟೆಲ್ಲ ಕಷ್ಟ-ಕಾರ್ಪಣ್ಯಗಳ ನಡುವೆ ಎಮಿಲಿ ತನ್ನ ವೈಯುಕ್ತಿಕ ನೆಲೆಗಟ್ಟಿನಲ್ಲಿ ಸೃಷ್ಟಿಸಿದ  ಪವಾಡ ತನ್ನೆಲ್ಲ ಓದುಗರನ್ನು ನಿಬ್ಬೆರಗಾಗಿಸುತ್ತದೆ ಮತ್ತು ಆಕೆಯ ಕವನಗಳು, ಬರೆದ ಒಂದು ಕಾದಂಬರಿ (ವುದರಿಂಗ್ ಹೈಟ್ಸ್) ಬೇತಾಳರಂತೆ ಕಾಡುತ್ತವೆ.

’ವುದರಿಂಗ್ ಹೈಟ್ಸ್’ (೧೮೪೭)

ಈ ಕಾದಂಬರಿಯೊಂದು ಸಾಹಿತ್ಯಿಕ ಅಚ್ಚರಿ, ೧೯ನೇ ಮತ್ತು ೨೦ನೇ ಶತಮಾನದಲ್ಲಿ ಒಬ್ಬ ಮಹಿಳೆ ಹೀಗೂ ಬರೆಯಲೂ ಸಾಧ್ಯವ ಎಂದು ವಿಮರ್ಶಕರು, ಓದುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ ಕೃತಿ. ಅಸಾಮಾನ್ಯ ಪ್ರೀತಿ ಮತ್ತು ಸೇಡು ತುಂಬಿರುವ ಈ ಕಥೆ ಅನೇಕಾನೇಕ ಸಾಹಿತ್ಯ ಫ್ರಭೆಯನ್ನು ಭೇದಿಸಿದ ಅಭಿಮನ್ಯು. ಕಾದಂಬರಿಯ ಎರಡು ಮುಖ್ಯ ಪಾತ್ರಗಳಾದ ಹೀತ್‌ಕ್ಲಿಫ್ ಹಾಗೂ ಕ್ಯಾಥರೀನ್‌ರ ಪ್ರೇಮ ಕೆಲಮಂದಿಗೆ ಉದಾಹರಣೆಯಾದರೆ, ಇನ್ನೂ ಹಲವರಿಗೆ ಕಸಿವಿಸಿ ಮತ್ತು ಕಿರಿಕಿರಿಯ ಕೇಂದ್ರಬಿಂದು. ಬ್ರಾಂಟೆ ಈ ಕಾದಂಬರಿಗೆ ಗಾತಿಕ್ ಕಾದಂಬರಿ ಪ್ರಕಾರದ ಭಯಾನಕತೆ ಮತ್ತು ನಿಗೂಢತೆ, ಪ್ರತ್ಯೇಕ ಸೆಟ್ಟಿಂಗ್, ಒಂದು ರೋಮಾಂಟಿಕ್ ಕಾದಂಬರಿಯ ಭಾವೋದ್ರಿಕ್ತ ಪಾತ್ರಗಳು, ವಿಕ್ಟೋರಿಯ ಕಾಲದ ಸಾಮಾಜಿಕ ಟೀಕೆ ಎಲ್ಲಾವನ್ನು ಸೇರಿಸಿ ಈ ಎಲ್ಲಾ ಸಂಪ್ರದಾಯಗಳ ರೂಪಾಂತರಗೊಳಿಸುತ್ತಾಳೆ. ಅಸಾಮಾನ್ಯ ಪ್ರೀತಿ ಮತ್ತು ಸೇಡು ತುಂಬಿರುವ ಈ ಕಥೆಯಲ್ಲಿ, ಬ್ರಾಂಟೆ ಅಗತ್ಯ ಭಾವನೆ (essential feelings) ಮತ್ತು ನಾಗರಿಕ ಸಮಾಜದ ನಡುವಣ ಸಂಘರ್ಷವನ್ನು ಪ್ರದರ್ಶಿಸಿದ ಕಾರಣಕ್ಕೆ ’ವುದರಿಂಗ್ ಹೈಟ್ಸ್’ ಲಿಟರರಿ ಕ್ಲಾಸಿಕ್ ಆಗಿದ್ದೆಂದೂ ಅಭಿಪ್ರಾಯಪಡುತ್ತಾರೆ ಹಲವು ವಿಮರ್ಶಕರು. ಅದರಿಂದಲೇ ಇಂಗ್ಲೀಷ್ ಸಾಹಿತ್ಯದ ಮೇರು ವಿಮರ್ಶಕ ಹಾರಲ್ಡ್ ಬ್ಲೂಮ್ ಹೀಗೆ ಹೇಳಿದ್ದು (Wuthering Heights is as Unique and idiosyncratic a narrative as Moby-Dick, and like Melville’s masterwork breaks all the confines of genre.) ಹಾರಲ್ಡ್ ಬ್ಲೂಮ್ ’ವುದರಿಂಗ್ ಹೈಟ್’ ಕುರಿತು ತನ್ನ ಪುಸ್ತಕದಲ್ಲಿ ದಾಖಲಿಸಿದ್ದು ಖುಷಿಯಾಯ್ತು ಆದರೆ ಅದನ್ನು (ವುದರಿಂಗ್ ಹೈಟ್ಸ್) ನಂತರದ ಕೃತಿ (ಮೊಬಿ-ಡಿಕ್) ಗೆ ಹೋಲಿಸಿದ್ದು ಯಾಕೋ ಸರಿ ಅನಿಸಲಿಲ್ಲ. 

’ವುದರಿಂಗ್ ಹೈಟ್’ ಎಂಬ ಶೀರ್ಷಿಕೆ ಒಂದು ಮನೆಯ ಹೆಸರು. ಮನೆಯ ಯಜಮಾನ ಅರ್ನ್‌ಷಾ, ಒಬ್ಬ ದೊಡ್ಡ ಜಮಿನ್ದಾರ. ಅಕಸ್ಮಾತಾಗಿ ತನಗೆ ಸಿಕ್ಕ ಮಗುವನ್ನು ಮನೆಗೆ ತಂದು ಆತನಿಗೆ ಹೀತ್‌ಕ್ಲಿಫ್ ಎಂದು ಹೆಸರಿಡುತ್ತಾನೆ. ಅರ್ನ್‌ಷಾ ಮತ್ತು ತನ್ನ ಮಗಳು ಕ್ಯಾಥರೀನ್, ಹೀತ್‌ಕ್ಲಿಫ್‌ನ ತುಂಬಾ ಹಚ್ಚಿಕೊಳ್ಳುತ್ತಾರೆ, ಇದನ್ನೆಲ್ಲ ಗಮನಿಸುತ್ತಿದ್ದ ಮನೆಯ ಮಗ ಹಿಂಡ್ಲೆಗೆ ಸಹಜವಾಗಿಯೇ ಅಸೂಯೆ ಮತ್ತು ಅಸಮಾಧಾನವಾಗುತ್ತದೆ. ಅರ್ನ್‌ಷಾನ ಅಕಾಲಿಕ ಮರಣದಿಂದ ಯಜಮಾನನಾದ ಹಿಂಡ್ಲೆ, ಹೀತ್‌ಕ್ಲಿಫ್‌ನನ್ನು ಗುಲಾಮನಂತೆ ಕಾಣಲು ಮುಂದಾಗುತ್ತಾನೆ. ಈ ರೀತಿಯ ದ್ವೇಷ ಬೆಂಕಿಯಂತೆ ಹಬ್ಬಿ ಹಲವರ ಅನಾಗರೀಕ ಸ್ವಭಾವಕ್ಕು ಹಾಗೂ ಸಾವಿಗೂ ಮುಖ್ಯ ಕಾರಣವಾಗುತ್ತದೆ. 

ಪ್ರೀತಿಯೆಂಬ ಮಾಯೆ ಹೀತ್‌ಕ್ಲಿಫ್‌ನ ಜೀವನದಲ್ಲು ಅನೇಕಾನೇಕ ಅಲ್ಲೋಲ-ಕಲ್ಲೋಲಗಳನ್ನು ಸೃಷ್ಟಿಸಿಬಿಡುತ್ತದೆ. ಕ್ಯಾಥರೀನ್ ಕಡೆಗಿನ ಇವನ ಅಸಾಮಾನ್ಯ ಪ್ರೀತಿ ವುದರಿಂಗ್ ಹೈಟ್ಸ್ ಮನೆಯಲ್ಲಿ ಸುನಾಮಿಯನ್ನೆ ತಂದು ಅನೇಕರ ಜೀವನದಲ್ಲಿ ಚೇತರಿಸಿಕೊಳ್ಳಲಾಗದ ಬಿರುಗಾಳಿಯನ್ನೆ ಎಬ್ಬಿಸಿಬಿಡುತ್ತದೆ. ಹೀತ್‌ಕ್ಲಿಫ್ ತುಂಬಾ ಒರಟು ಸ್ವಭಾವದವನು ಏನನ್ನೂ ಅಷ್ಟು ಕೂಲಂಕುಷವಾಗಿ ತಿಳಿಯಬೇಕು ಎಂಬ ಸಾಮಾನ್ಯ ಜ್ಞಾನವು ಇಲ್ಲದ ಮುಗ್ದ. ಆತ ಬೆಂಕಿಯಂತೆ ತುಂಬಾ ಬಿಸಿ. ಒಂದರ್ಥದಲ್ಲಿ ಬಿಸಿ-ರಕ್ತದ ಯುವಕ. ಅವನ ಸ್ವಭಾವ ಚಂಡಮಾರುತಕ್ಕಿಂತಲು ಕಠೋರ. ಆದ್ದರಿಂದಲೇ, ಕ್ಯಾಥರೀನ್ ವಿಕ್ಟೋರಿಯನ್ ಸಮಾಜದಲ್ಲಿನ ’ನಯವಂತ’ ಲಿಂಟನ್‌ನ ಆರಿಸಿಕೊಂಡು ಜೀವನ ಭದ್ರತೆ ಕಲ್ಪಿಸಿಕೊಳ್ಳುತ್ತಾಳೆ. ಮೊದಲಿಗೆ, ಕ್ಯಾಥರೀನ್ ಹೀತ್‌ಕ್ಲಿಫ್‌ನ ಆ ಸ್ವಭಾವಗಳನ್ನು ನೋಡಿ ಅಕರ್ಷಿತಳಾದರು ತನ್ನ ಜೀವನಾವಲಂಬನೆಗೋಸ್ಕರ ಲಿಂಟನ್‌ನ ಆರಿಸಿ ಹೀತ್‌ಕ್ಲಿಫ್‌ಗೆ ಒಂದು ರಿತೀಯ ಮೋಸ ಮಾಡುತ್ತಾಳೆ. ಹೀತ್‌ಕ್ಲಿಫ್‌ನಿಂದ ಆಕರ್ಷಿತಳಾಗಿ ಲಿಂಟನ್‌ನನ್ನು ಮದುವೆಯಾಗುವ ಕ್ಯಾಥರೀನಳಿಗೆ, ಬಹುಮಂದಿ ಮನುಷ್ಯರಂತೆ ಎರಡು ಬಗೆಯ ಬದುಕು ಬೇಕು- ನಿಸರ್ಗದ ಶಕ್ತಿ ಚೈತನ್ಯಗಳು ಬೇಕು, ಅಂತೆಯೇ, ನಾಗರಕತೆಯ ನಯ ಭದ್ರತೆಗಳೂ. ನಿಸರ್ಗಕ್ಕೆ ಹೀತ್‌ಕ್ಲಿಫ್ ರೂಪಕವಾದರೆ, ನಾಗರೀಕತೆಯ ಕಣಿವೆಗೆ ಲಿಂಟನ್.

ಈ ಎಲ್ಲಾ ಬೆಳವಣಿಗೆಯಿಂದ ಮನನೊಂದು, ತಾನೂ ಲಿಂಟನ್‌ನಂತೆಯೇ ಶ್ರೀಮಂತನಾಗಬೇಕು, ಸೇಡು ತೀರಿಸಿಕೊಳ್ಳಬೇಕೆಂದು ಮನೆಬಿಟ್ಟು ಹೋಗುತ್ತಾನೆ. ನಂತರದ ದಿನಗಳಲ್ಲಿ, ಲಿಂಟನ್‌ನ ಜೂಜಲ್ಲಿ ಸೋಲಿಸಿ ಅವನ ಆಸ್ತಿಯನ್ನು ಪಡೆದು, ಅವನನ್ನು ಕುಡುಕನನ್ನಾಗಿ ಮಾಡಿ ಸಾಯುವಂತೆ ಮಾಡುತ್ತಾನೆ. ಲಿಂಟನ್‌ನ ತಂಗಿ ಇಸಬೆಲಳನ್ನು ಒಲಿಸಿಕೊಂಡು, ಮದುವೆಯಾಗಿ ಚಿತ್ರಹಿಂಸೆ ನೀಡುತ್ತ ವಿಕೃತ ಸಂತೋಷಪಡುತ್ತಾನೆ.  ಇನ್ನೊಂದೆಡೆ, ಕ್ಯಾಥರೀನ್ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಸಾಯುತ್ತಾಳೆ. ಹದಿನೈದು ವರ್ಷಗಳ ನಂತರ, ಹೀತ್‌ಕ್ಲಿಫ್, ಇಸಬೆಲಳಿಂದ ತನಗೆ ಹುಟ್ಟಿದ ಎರಡನೇ ಪೀಳಿಗೆಯ ಲಿಂಟನ್‌ನನ್ನು ಅನಾಗರೀಕನನ್ನಾಗಿ ಬೆಳೆಸುತ್ತಾನೆ. ಹೀಗೆ ಹೀತ್‌ಕ್ಲಿಫ್‌ನ ಧ್ವೇಷ ಮುಂದಿನ ಪೀಳಿಗೆಗೂ ಚಾಚುತ್ತದೆ. ಈ ಪೀಳಿಗೆಯಲ್ಲಿ ಹಲವರು ಸಾಯುತ್ತಾರೆ. ಆದರೆ ತೀರಿ ಹೋಗಿದ್ದ ಕ್ಯಾಥರೀನ್ ಈಗ ಹೀತ್‌ಕ್ಲಿಫ್‌ನ ಮನಸ್ಸನ್ನು ಆವರಿಸುತ್ತಾಳೆ.

ನಂತರದಲ್ಲಿ, ಹೀತ್‌ಕ್ಲಿಫ್‌ನ ಜೀವನಕ್ಕೆ ಮುಪ್ಪಿಡಿದು ಮಂಕಾದಾಗ ತನ್ನೆಲ್ಲ ಕ್ರೌಯದ, ಪ್ರೀತಿ-ಪ್ರೇಮ ಹಾಗೂ ಧ್ವೇಷಗಳ ಮನವರಿಕೆಯಾಗುವಷ್ಟರಲ್ಲಿ ಎಲ್ಲವೂ ಮುಗಿದಿರುತ್ತದೆ. ಯಂಗ್ ಲಿಂಟನ್ ಹಾಗೂ ಯಂಗ್ ಕ್ಯಾಥರೀನ್ ಇದೆಲ್ಲದರ ನಡುವೆ ಸಹಜ ಸ್ಥಿತಿಗೆ ಮರಳಿ ಹೊಸ ಜೀವನ ಕಟ್ಟುವ ಸಮಯಕ್ಕೆ ಕಾದಂಬರಿ ಕೊನೆಯಾಗುತ್ತದೆ. ಇಲ್ಲಿ ಆಗಾಗ ಬರುವ ಲಾಕ್‌ವುಡ್ ಮತ್ತು ನೆಲ್ಲಿಡೀನ್‌ರ ಅಮೋಘ ನಿರೂಪಣೆ ಕಥೆಗೆ ಸೋಗಸಾದ ಲಯವನ್ನು ನೀಡಿದೆ. ಬದುಕಿಗೆ ವಿಶಿಷ್ಟ ಸ್ಪಂದನ, ಪಾತ್ರಗಳು, ಸನ್ನಿವೇಶ, ಕ್ರಿಯೆಗೆ ಜೋಡಿಸಿದ ಸ್ಥಳಗಳು, ವರ್ಣನೆ, ಶೈಲಿ ಎಲ್ಲ ಅದ್ಬುತವಾಗಿ ಹೊಂದಿಕೊಂಡ ಕಾದಂಬರಿ ’ವುದರಿಂಗ್ ಹೈಟ್’ ಎನುತ್ತಾರೆ ವಿಮರ್ಶಕರು. 
-ಮಹೇಂದ್ರ ಎಂ. ನವೋದಯ

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Mohammed Muzammil
Mohammed Muzammil
9 years ago

Really worth reading..specially helpfull ro readers from kannada back ground, they can easily undsdstand rhe life and works of Emily Bronte, Goos work indeed.

Mohammed Muzammil
Mohammed Muzammil
9 years ago

Really worth reading..specially helpfull to readers from kannada back ground, they can easily understand the life and works of Emily Bronte, Good work indeed.

priyanka.c
priyanka.c
9 years ago

Thank you sir. it is very helpful. we can understand easily in our mother tongue, more than reading in English.

Nataraj
Nataraj
9 years ago

ತುಂಬಾ ಚೆನ್ನಾಗಿದೆ ಸರ್ ನಿಮ್ಮ ಲೇಖನ, ಕನ್ನಡದಲ್ಲಿ ಬರೆದಿದ್ದು ಮತ್ತಷ್ಟು ಉಪಕಾರಿಯಾಗಿದೆ. 

mahendra
mahendra
9 years ago

Thank you guys for that valuable suggestion.

5
0
Would love your thoughts, please comment.x
()
x