ಪ್ರವಾಸ-ಕಥನ

ಎಪ್ಪತ್ತೇಳು ಮಲೆಯ ಸುಂದರ ಪ್ರವಾಸಿ ತಾಣ ಮಲೆಯ ಮಹದೇಶ್ವರ ಬೆಟ್ಟ: ವಸಂತ ಬಿ ಈಶ್ವರಗೆರೆ


ಅಮೂಲ್ಯ ಸಸ್ಯರಾಶಿ, ಜೀವರಾಶಿಗಳಿಂದ ತುಂಬಿದಂತ ಪ್ರದೇಶ, ಬಿಸಿಲಿನ ಕಿರಣಗಳು ಭುವಿಗೆ ಸೋಂಕದಂತಿರುವ ದಟ್ಟ ಕಾನನ, ಒಂದಾನೊಂದು ಕಾಲದಲ್ಲಿ ಕುಖ್ಯಾತ ನರಹಂತಕ ಕಾಡುಗಳ್ಳ ವೀರಪ್ಪನ್ ಆಶ್ರಯ ತಾಣವೂ ಆಗಿದ್ದ ಪ್ರವಾಸಿ ತಾಣವೇ, ಮಲೆಯ ಮಹದೇಶ್ವರ ಬೆಟ್ಟ.

ಒಂದು ಕಾಲದಲ್ಲಿ ವೀರಪ್ಪನ್ ಅಡಗುತಾಣವಾಗಿದ್ದಾಗ, ಮಲೆಯಮಹದೇಶ್ವರ ಬೆಟ್ಟಕ್ಕೆ ಬರೋದಕ್ಕೆ ಜನರು ಭಯ ಪಡುತ್ತಿದ್ದರು. ಸಂಜೆ 6 ಗಂಟೆಯ ನಂತ್ರ ಕೊಳ್ಳೆಗಾಲದಿಂದ, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗವ ಮಾರ್ಗವನ್ನ ಮುಚ್ಚಲಾಗುತ್ತಿತ್ತು. ಆದರೇ ಆ ಕಾಲ ಹಿಂದೆ ಸರಿಸು, ನರಹಂತಕ ವೀರಪ್ಪನ್ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿ ಈಗ, ಅದೆಲ್ಲ ದಂತಕತೆಯಷ್ಟೇ. 

ಮಹದೇಶ್ವ ನೆಲೆಸಿರುವ ಮಲೆಮಹದೇಶ್ವರ ಬೆಟ್ಟವನ್ನ ಮಾದೇಶನ ಬೆಟ್ಟ, ಮಹದೇಶ್ವರಗಿರಿ, ಎಂ,ಎಂ ಹಿಲ್ಸ್ ಎಂದೆಲ್ಲಾ ಕರೆಯುತ್ತಾರೆ. ಕೊಳ್ಳೆಗಾಲದ ಪೂರ್ವದಿಕ್ಕಿಗೆ ಇರೋ ಈ ಪ್ರದೇಶ, ಒಂದು ಪವಿತ್ರ ಯಾತ್ರಾಸ್ಥಳದ ಜೊತೆಗೆ, ಪ್ರವಾಸಿಗರನ್ನ, ಪ್ರಕೃತಿ ಪ್ರಿಯರನ್ನ ಆಕರ್ಷಿಸುವ ಸುಂದರ ತಾಣ. ಈ ಮಹದೇಶ್ವರ ಬೆಟ್ಟವನ್ನ ಏರುವ ದಾರಿ ಅಷ್ಟು ಸುಗಮವಾದ ದಾರಿ ಅಲ್ಲ. ಹಾವು ಹೇಗೆ ತೆವಳಿಕೊಂಡು ಹೋಗುತ್ತದೋ, ಹಾಗೆ ಈ ಬೆಟ್ಟ ಹತ್ತುವ ರಸ್ತೆ ಇದೆ. ಹೀಗೆ ಇರುವ ದಾರಿಯನ್ನ ಸರ್ಪದ ದಾರಿ, ಬಸವನ ದಾರಿ ಎಂದೆಂಲ್ಲ ಈ ಭಾಗದ ಜನರು ಕರೆಯುವುದು ಉಂಟು.

ಸ್ಥಳ ಪುರಾಣದ ಪ್ರಕಾರ, ಮಲೆಮಹದೇಶ್ವರ ಬೆಟ್ಟದಲ್ಲಿ ಆನೆಮಲೆ, ಜೇನುಮಲೆ, ಕಾನುಮಲೆ, ಪಷೆಮಲೆ, ಪವಳಮೆಲೆ, ಪೊನ್ನಾಚಿಮಲೆ, ಮತ್ತು ಕೂಗುಮಲೆ ಎಂಬ ಮಲೆಗಳು ಸೇರಿ ಒಟ್ಟು ಇಲ್ಲಿ 77 ಮಲೆಗಳು ಇದ್ದಾವೆ. ಈ ಬಗ್ಗೆ ಸವಿವರವಾದ ಮಾಹಿತಿ ದೊರೆತಿರುವ ಜೊತೆಗೆ, ಹಾಡುಗಬ್ಬಗಳಾದ ಜಾನಪದದ ಹಲವು ಪ್ರಕಾರಗಳಲ್ಲಿಯೂ ಇದು ಬಿಂಬಿತವಾಗಿದೆ.

ಇಂತಹ ಐತಿಹಾಸಿಕ ಕೊಂಡಿಯನ್ನ ಬೆಸೆದ ಬೆಟ್ಟದ ಮೇಲೆ ನೆಲೆಸಿರು ದೇವರೇ, ಶ್ರೀ ಮಹದೇಶ್ವರ. ಮಲೆ ಮಹದೇಶ್ವರ ದೇವಸ್ಥಾನ ಶಿವಾಲಯವಾಗಿದ್ದು, ಅಪಾರ ಸಂಖ್ಯೆಯ ಭಕ್ತರನ್ನ ಕರ್ನಾಟಕ ಸೇರಿದಂತೆ, ಹೊರರಾಜ್ಯದಿಂದಲೂ ಹೊಂದಿದೆ. ಹಾಗೇ ಈ ಭಾಗದ ಜನರ ಮನೆದೇವರೂ ಹೌದು. 

ಮಲೆಯ ಗಿರಿವಾಸನ ಹಿಂದಿರುವ ಐತಿಹ್ಯ ಕತೆ
ಮಲೆಮಹದೇಶ್ವರ ಇಲ್ಲಿನ ಬೆಟ್ಟಕ್ಕೆ ಬಂದು ನೆಲೆಸಿದ ಬಗ್ಗೆ ಈ ಭಾಗದ ಜನರಲ್ಲಿ ಹಲವು ಐತಿಯ್ಯ, ಪುರಾಣ ಕತೆಗಳು ಜನಜನಿತವಾಗಿವೆ. ಅದರಲ್ಲಿ ಒಂದು, ಮಹದೇಶ್ವರ ಸ್ವಾಮಿ, 17ನೇ ಶತಮಾನದಲ್ಲಿ ಜೀವಿಸಿದ್ದ ಮಹಾನ್ ಮಹಿಮಾ ಪುರುಷ ಎಂಬುದು, ಇತಿಹಾಸದ ದಾಖಲೆಗಳಿಂದ ತಿಳಿದು ಬರುವ ವಿಚಾರ ವಾದರೇ, ಮತ್ತೊಂದು, ಸುಮಾರು 600 ವರ್ಷಗಳ ಹಿಂದೆ ಈ ಮಹದೇಶ್ವರ ಬೆಟ್ಟಕ್ಕೆ ಮಲೆಯ ಮಹದೇಶ್ವರ ಬಂದು ನೆಲೆಸುತ್ತಾನಂತೆ. ಬೆಟ್ಟದಲ್ಲಿ ನೆಲೆನಿಂತು, ಸುಧೀರ್ಘ ತಪಸ್ಸನ್ನ ಆಚರಿಸಿ, ದಿವ್ಯ ಶಕ್ತಿಯನ್ನ ಪಡೆದು ಕೊಂಡನಂತೆ. ಮುಂದೆ ತನ್ನ ಈ ದಿವ್ಯ ಶಕ್ತಿಯಿಂದ ಜನರ ಕಷ್ಟಗಳನ್ನ ನಿವಾರಿಸುತ್ತಾ ಇಲ್ಲಿಯೇ ಲಿಂಗರೂಪದಲ್ಲಿ ನೆಲಸಿಬಿಟ್ಟ ಎಂಬುದು ಇಲ್ಲಿನ ಜನರು ಹೇಳುವ ಜಾನಪದ ಕತೆಯೊಂದರಿಂದ ತಿಳಿಯಬಹುದು. 
ಈ ಕತೆಯ ಜೊತೆಗೆ ಮಹದೇಶ್ವರನ ಮೂಲ ಜನ್ಮ ಸ್ಥಳ ಕರ್ನಾಟಕದ ಬೇವಿನಕೊಲ್ಲಿ. ಆದರೇ ಈ ಬಗ್ಗೆ ಖಚಿತ ಮಾಹಿತಿಯ ದಾಖಲೆಗಳು ಲಭ್ಯವಿಲ್ಲ. ಅದೇನೇ ಆದರೂ ಅಸಮಾನ್ಯವಾದ ಲೌಕಿಕ ಶಕ್ತಿಯನ್ನ ಹೊಂದಿರು ಮಲೆಯ ಮಹದೇಶ್ವರ, ಕಷ್ಟವೆಂದು ಬರುವ ಭಕ್ತರ ಕಷ್ಟಗಳನ್ನ ಪರಿಹರಿಸುವ ಭಕ್ತೋದ್ದಾರಕನೆಂದು ಕರೆಯಲಾಗುತ್ತಿದೆ. 

ಇಂತಹ ಇತಿಹಾಸ ಪುರುಷ, ಮಹಾನ್ ಮಹಿಮಾವಂತ ಮಹದೇಶ್ವರ ತನ್ನ ಭಕ್ತರನ್ನ ಪರೀಕ್ಷೆ ಮಾಡಲು ಮೊದಲು ಸಕಲ ಐಶ್ವರ್ಯಗಳನ್ನ ನೀಡುತ್ತಾನಂತೆ. ಆನಂತ್ರ ತಾನು ಜಂಗಮನ ವೇಶದಲ್ಲಿ ಭಿಕ್ಷೆ ಬೇಡಲು ಅದೇ ಭಕ್ತರ ಮನೆಗೆ ಹೋಗುತ್ತಾನಂತೆ. ಆಗ ಏನಾದರೂ ಭಕ್ತರು ಭಿಕ್ಷೆ ನೀಡದೇ ಅವಮಾನಿಸಿದಾರೇ, ಅಂತವರ ಮೇಲೆ ಉರಿಯುವ ಕೆಂಡವಾಗಿಬಿಡುತ್ತಾನಂತೆ. ಕೊನೆಗೆ ಆ ಭಕ್ತನನ್ನು ನಾಶಮಾಡಿ ಬಿಡುತ್ತಾನಂತೆ ಎಂಬ ಮತ್ತೊಂದು ನಂಬಿಕೆಯು ಇಲ್ಲಿ ಜನಜನಿತ.

ಕೆಲವು ಸಂದರ್ಭದಲ್ಲಿ ತಾನು ನಾಶಮಾಡಿದ ಭಕ್ತನು ಧರ್ಮ ಪ್ರಿಯನು, ಉತ್ತಮ ನಡಾವಳಿಯ ವ್ಯಕ್ತಿ ಎಂಬುದೇನಾದರೂ ತಿಳಿದು ಬಂದರೇ, ಅಂತಹ ಭಕ್ತನು ಸತ್ತು ಸ್ಮಶಾನದಲ್ಲಿ ಹೆಣವಾಗಿದ್ದರೂ ಅವನನ್ನ ಇದೇ ಮಲೆಯಮಹದೇಶ್ವರ ಬದುಕಿಸುತ್ತಾನೆಂಬ ಹಲವು ಬಗೆಯ ಕತೆಗಳು ಈ ಭಾಗದಲ್ಲಿ ಪ್ರಸಿದ್ದಿ. ಈ ಎಲ್ಲಾ ಐತಿಹ್ಯ,ಪುರಾಣ ಕತೆಗಳು ಮಲೆಮಹದೇಶ್ವರನ ಬಗ್ಗೆ ಇದ್ದು, ಇವೆಲ್ಲಾ ಇಂದಿಗೂ ‘ಗುಡ್ಡರು’ ಎನ್ನುವಂತಹ ಹಾಡುಗಾರರು ಹಾಡುತ್ತಾರೆ. ಇವರು ಹಾಡುವಾಗ ಮಹದೇಶ್ವರನ ಮಹಾತ್ಮೆಯಲ್ಲಿನ ‘ಸಂಕಮ್ಮನ ಸಾಲು’ ಕುರಿತು ಎಂದೂ ಹಾಡುವುದಿಲ್ಲ. ಕೇವಲ ಮಹದೇಶ್ವರ ಈ ಮೊದಲಿನ ಐತಿಹ್ಯ ಕತೆಯನ್ನ ಹಾಡುವುದಷೇ ಇವರ ಪ್ರಧಾನ ಭಾವವಾಗಿಯಂತೆ.

ಜಗತ್ತಿನ ಎರಡನೇ ಮಹಾದೊಡ್ಡಕಾವ್ಯ ಮಲೆಮಹಾದೇಶ್ವರನ ಕಾವ್ಯ
ಇನ್ನೂ ಇಂತಹ ಮಲೆಯ ಮಹದೇಶ್ವರನ ಬಗ್ಗೆ ಹಲವು ವಿದ್ವಾಂಸರು ಜಾನಪದ ಗಾಯಕರಿಂದ ಹಾಡುಗಳನ್ನ ಸಂಗ್ರಹಿಸಿ, ಕೃತಿಗಿಳಿಸಿದ್ದಾರೆ. ಈ ಮಲೆಮಹದೇಶ್ವರನ ಮಹಾಕಾವ್ಯ ದೊಡ್ಡ ಮಹಾಕಾವ್ಯಗಳು ಎಂದರೇ, ಇಡೀ ಜಗತ್ತಿನಲ್ಲಿಯೇ ಫಿನ್‍ಲ್ಯಾಂಡಿನ ಕಲೇವಾಲ ಮೊದಲ ಅತೀ ದೊಡ್ಡ ಮಹಾಕಾವ್ಯವೆನಿಸಿದರೇ, ಎರಡನೇಯದೇ ಮಲೆಮಹದೇಶ್ವರನ ಮಹಾಕಾವ್ಯ.

ಈ ಮಲೆಮಹದೇಶ್ವರನ ಮಹಾಕಾವ್ಯ ಹಲವು ಜನಪದೀಯ ಸಾಲುಗಳನ್ನ ಒಳಗೊಂಡಿದೆ. ಅದರಲ್ಲಿ ಪ್ರಮುಖವಾಗಿ ಬರುವ ಶ್ರವಣಯ್ಯನಸಾಲು, ಕುಂತೂರು ಮಠದ ಸಾಲು, ಜುಂಜೇಗೌಡನ ಸಾಲು, ಬೇವಿನಹಟ್ಟಿ ಕಾಳಮ್ಮನ ಸಾಲು ಮತ್ತು ಸುಂಕಮ್ಮನ ಸಾಲುಗಳ ಪ್ರತಿ ಸಾಲಿನಲ್ಲೂ, ಮಲೆಯ ಮಹದೇಶ್ವರನ ಒಂದೊಂದು ಮಹಿಮೆಯನ್ನ ಹೇಳುತ್ತಾ ಹೋಗುತ್ತವೆ.

ಹೋಗೋದು ಹೇಗೆ..?
ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದಲ್ಲಿ ಇರುವ ಮಹದೇಶ್ವರ ಬೆಟ್ಟವು, ಕೊಳ್ಳೆಗಾಲದಿಂದ 50 ಕಿ.ಲೋ ಮೀಟರ್ ಹಾಗೂ ಮೈಸೂರಿನಿಂದ ಹೊರಟರೇ, 150 ಕಿ.ಲೋ.ಮೀಟರ್ ದೂರವಾಗುತ್ತದೆ. ಬೆಟ್ಟ, ಕಡಿದಾದ ರಸ್ತೆ, ಗಿರಿಶೃಂಗಗಳ ವಿಹಂಗಮ ನೋಟದಲ್ಲಿ ಸಾಗುವ ನಿಮ್ಮ ಪ್ರಯಾಣ, ತಂಪು ತಂಪು, ಕೂಲ್ ಎಂಬಂತೆ ಸಾಗುತ್ತದೆ. ಇಲ್ಲಿಗೆ ಬಸ್ಸು, ರೈಲು ಮತ್ತು ವಾಯಸಾರಿಗೆ ವ್ಯವಸ್ಥೆ ಬಳಸಿ ಹೋಗಬಹುದು. ಜೊತೆಗೆ ನಮ್ಮ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಿಂದ ಸಾರಿಗೆ ವ್ಯವಸ್ಥೆ ಲಭ್ಯ. ಹಾಗೇ ಬೆಂಗಳೂರಿನಿಂದ ಚಾಮರಾಜನಗರ ಮಾರ್ಗವಾಗಿ ನೀವು ಈ ಮಲೆಯ ಮಹದೇಶ್ವರ ಬೆಟ್ಟಕ್ಕೆ ಹೋಗಬಹುದು. ಸೋ ನೀವು ಒಮ್ಮೆ ಹೋಗಿ ಬನ್ನಿ, ಭಕ್ತಿಯಿಂದ ಮಲೆಯ ಮಹದೇಶ್ವರನಿಗೆ ನಮಿಸಿ ಬನ್ನಿ. ಬಟ್ ಬೀ ಅರ್ಲ, ಟೇಕ್ ಕೇರ್, ಹ್ಯಾಪಿ ಜರ್ನಿ. 

-ವಸಂತ ಬಿ ಈಶ್ವರಗೆರೆ
 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಎಪ್ಪತ್ತೇಳು ಮಲೆಯ ಸುಂದರ ಪ್ರವಾಸಿ ತಾಣ ಮಲೆಯ ಮಹದೇಶ್ವರ ಬೆಟ್ಟ: ವಸಂತ ಬಿ ಈಶ್ವರಗೆರೆ

Leave a Reply

Your email address will not be published. Required fields are marked *