ಪ್ರೀತಿ ಪ್ರೇಮ

ಎದೆಯೊಳಗೆ ನದಿಯೊಂದು ಹರಿಯುತಿದೆ ಪ್ರೀತಿಯ ಹೊತ್ತು: ನಾಗರಾಜ್ ಹರಪನಹಳ್ಳಿ

 

 

 

 

 

* ಆವತ್ತು ಬೆಳದಿಂಗಳ ರಾತ್ರಿ. ಅಕ್ಟೋಬರ್ ತಿಂಗಳ ಒಂದು ದಿನ. ಸರಿಯಾಗಿ ನೆನಪಿಲ್ಲ. ದಂಡೆಯಲ್ಲಿದ್ದ ಜನ ಮನೆಗೆ ಮರಳಿಯಾಗಿತ್ತು. ಕತ್ತಲನ್ನು  ತನ್ನೊಳಗೆ ಹೀರಿದ ಬೆಳದಿಂಗಳು ಮೆರೆಯುತ್ತಿತ್ತು. ಒಂದೊಂದೆ ನಕ್ಷತ್ರಗಳು ಮಿನುಗುತ್ತಿದ್ದವು. ಸಣ್ಣಗೆ ಮೊರೆಯುತ್ತಿತ್ತು ಕಡಲು. ಬೆಳದಿಂಗಳಿಗೆ ನಾದ ಹರಡಿದಂತಿತ್ತು. ರವೀಂದ್ರನಾಥ ಟ್ಯಾಗೋರ ಹೆಜ್ಜೆಯಿಟ್ಟು ಓಡಾಡಿದ ದಂಡೆಯಲ್ಲಿ  ನಾನು ಎಷ್ಟೋ ಗಂಟೆಗಳ ಕಾಲ ಕುಳಿತಿದ್ದವನು ಜನ ಮರೆಯಾಗುತ್ತಿದ್ದಂತೆ, ದಂಡೆಯ ಮೇಲೆ ಒರಗಿಕೊಂಡೆ. ಆಕಾಶಕ್ಕೆ  ಮುಖಮಾಡಿ. ಆಕಾಶವನ್ನ ದಿಟ್ಟಿಸಿ ನೋಡುವುದೇ ಸೊಗಸು. ಅದು ಬೆಳದಿಂಗಳ ರಾತ್ರಿಯಲ್ಲಿ. ನನ್ನ ಈ ಹುಚ್ಚುತನ ನಿಮಗೆ ಏನನಿಸುತ್ತಿದೆಯೋ ಗೊತ್ತಿಲ್ಲ. ನಾನಂತು ಬೆಳುದಿಂಗಳ ಸವಿಯುವುದೇ ಹೀಗೆ. ಹಾಗೆ ಬದುಕಿನ ನೆನಪುಗಳು ಅರಿವಿಲ್ಲದೇ ಇಣುಕತೊಡಗಿದವು ಭಾವ ಜಗತ್ತಿನಲ್ಲಿ. 

 ತುಂಬಾ ದಿನಗಳ ನಂತರ ಆಕೆ ಸಿಕ್ಕಳು. ದಿನ ಅಂದ್ರೆ ದಿನವಲ್ಲ. ವರ್ಷಗಳೇ ಉರುಳಿಹೋಗಿದ್ದವು. ಸರಿ ಸುಮಾರು ಇಪ್ಪತ್ತೆರಡು ವರ್ಷ. ಒಲವು ಗುಪ್ತಗಾಮಿನಿಯಾಗಿರುತ್ತದೆ. ಅದು ಯಾವಾಗ ಬೇಕಾದ್ರು ತೆರೆದುಕೊಳ್ಳಬಹುದು. ಎಲ್ಲಿ ಬೇಕಾದ್ರೂ ಕುಡಿಯೊಡೆಯಬಹುದು ಎಂಬುದಕ್ಕೆ ಆಕೆಯ ಒಲವು ಸಾಕ್ಷಿಯಾಯಿತು., ಇದೆಲ್ಲಾ ಹೀಗಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಆಕೆಯೂ ಅಂದು ಕೊಂಡಿರಲಿಲ್ಲ. ಹೀಗೆ ಸಮಾರಂಭಕ್ಕೆ ಹೋದಾಗ ಅಚಾನಕ್ ಆಗಿ ಸಿಕ್ಕಿದ್ದು.

 ‘ಗೊತ್ತಾಯಿತಾ ? ಯಾರು ಹೇಳಿ ನೋಡೋಣ.’ ನನ್ನ ಪ್ರಶ್ನೆ ಸಹಿತ ಪ್ರೀತಿ ತುಂಬಿದ ಕಣ್ಣೋಟಕ್ಕೆ ಬಂದ ಉತ್ತರ

‘ ಇಲ್ಲ, ಗೊತ್ತಾಗಲಿಲ್ಲ’ ಎಂದು . 

 ನಾನು ನಿಮ್ಮ ಜೂನಿಯರ್. ಲೈಬ್ರರಿಯಲ್ಲಿ ಕಿಡಕಿ ಬದಿಗೆ ಖಾಯಂ ಆಗಿ ಗಂಟೆಗಟ್ಟಲೆ ಕುಳಿತು ಓದುತ್ತಿದ್ದೆನಲ್ಲಾ ಆ ಹುಡುಗ. ನಿಮಗೆ ಒಮ್ಮೆ  ಮಧುರಚೆನ್ನರ ಪುಸ್ತಕ ಹುಡುಕಿ ಕೊಟ್ಟಿದ್ದೆ ನೆನಪಾಯ್ತಾ? ಅಂದೆ. 

 ಓಹೋ !!? ಆಯ್ಯೋ ನೀನಲ್ಲಾ….ಗೊತ್ತಾಯಿತು ಬಿಡು. ನಮ್ಮ ಸೈನ್ಸ ಡಿಪಾರ್ಟಮೆಂಟನ ಚಾಕ್ಲೆಟ್ ಹೀರೋ. ಆಹಾ!! ಒಂದ್ಚೂರು ದಪ್ಪಾ ಆಗಿದ್ದಿ ಬಿಟ್ಟರೆ ಸ್ವಲ್ಪನೂ ಬದಲಾಗಿಲ್ಲ ನೋಡು ನೀನು. ಇನ್ನು ಸ್ವಲ್ಪ ಬಣ್ಣ ಹೆಚ್ಚಾಗಿದೆ ಎಂದ್ಲು ಆಕೆ. 

ಹಾಗೆ ಮಾತು ಮುಂದುವರಿಯಿತು. ಹತ್ತಿರದಲ್ಲೇ ಇದ್ದ ಹೊಯ್ಸಳ ಕೆಫೆಯಲ್ಲಿ ಕಾಫಿ ಹೀರುತ್ತಾ ಮಾತುಗಳು ಪಯಣಿಸಿದವು.  ಮಾತು ‘ಅದೇ ಪ್ರೀತಿಸಿ ಮದ್ವೆ ಆದದ್ದು, ಆರು ವರ್ಷಗಳ ನಂತರ ಕೆಲಸ ಸಿಕ್ಕಿದ್ದು, ಎರಡು ಮಕ್ಕಳಾದದ್ದು, ಪ್ರೀತಿಸಿದ ಹುಡುಗ ಮಕ್ಕಳಾದ ನಂತರ, ಅವನಿಗೂ ಕೆಲಸ ಅಂತ ಸಿಕ್ಕ ನಂತ್ರ ಆತ ಬದಲಾದದ್ದು, ಹಾಗೂ ಹೀಗೂ ಬದುಕಿನ ಸೂತ್ರ ನಡೆಯುತ್ತಿರುವುದನ್ನ ಕತೆಯಾಗಿಸಿದಳು ಆಕೆ. ನಾನು  ಸಹ ಬದುಕಿನ ಸರಿ ತಪ್ಪು ನಿರ್ಧಾರಗಳನ್ನು ವಿನಿಯಮ ಮಾಡಿಕೊಂಡಾಯಿತು. ಮಾತು ಮುಗಿಯುವ ಹೊತ್ತಿಗೆ ಕತೆ ಕಾವ್ಯವಾಗಿ ಮಾರ್ಪಟ್ಟಿತ್ತು. 

ಸೋ ‘ ನಾನು ಹೊರಡಬೇಕು. ೫ ತಾಸು ಪಯಣ. ಮತ್ತೆ ಸಿಗುತ್ತೇನೆ ’ ಎಂದು  ಹೊರಟು ನಿಂತಾಗ ‘ ನಿನ್ನ ನಂಬರ್  ಕೊಡು ಮಾರಾಯ, ಕಾಲ್ ಮಾಡುವೆ ಅಂದ್ಲು ಆಕೆ’ ಆಯ್ತು ಎಂದು ಪರಸ್ಪರರು ಕಣ್ಣಲ್ಲಿ ಕೃತಜ್ಞತೆ ಹೇಳಿ ಹೊರಟೆವು.

 ಅಂದಿನಿಂದ ಆರಂಭವಾದ ಸ್ನೇಹ ಬಂಧ ಮುಂದೆ ‘ನದಿಯಾಗಿ ಹರಿಯಬಹುದು ಪ್ರೀತಿಯ ಹೊತು’ ಅಂತಾ ತಿಳಿದಿರಲಿಲ್ಲ. ಆದ್ರೆ ಹಾಗಾಯಿತು . ಅದು ದಿನವೂ ವಿಸ್ತರಿಸಿಕೊಳ್ಳತೊಡಗಿತು. ನದಿ ಹರಿಯುವಂತೆ .ಜೊತೆಗೆ ಕಷ್ಟಸುಖ, ತಮಾಷೆ , ಹರಟೆ, ಕಾವ್ಯ, ಬರಹ ಮುಂತಾದ ವಿಷಯಗಳು ವ್ಯಾಪಿಸಿಕೊಳ್ಳತೊಡಗಿದವು. ಕಾಳಜಿ ಪ್ರೀತಿಯಾಗಿ ಮಾರ್ಪಟ್ಟಿತ್ತು.  ಅದು ಜೀವಸೆಲೆಯಾಗಿತ್ತು. ಇಬ್ಬರು ದಿನವೂ ಮಾತನಾಡದೆ ಇರಲಾರೆವು  ಎಂಬಷ್ಟರ ಮಟ್ಟಿಗೆ ಸ್ನೇಹ ಬೆಳೆದುನಿಂತಿತು. ಜೊತೆಗೆ  ಬದುಕಿನ ಪಲ್ಲವಿಗಳು ತೆರೆದುಕೊಂಡಿವೆ. ಎಲ್ಲ ಭಾವಬಿಂದುಗಳು ಅಲ್ಲಿ ಇಲ್ಲವೆಂದೇನಲ್ಲ.  ಒಂದು ಕ್ಷಣದ ಸಂತೈಸುವಿಕೆ, ಒಂದು ಕ್ಷಣದ ಭಾವಬಿಂದು ಸೇರುವಿಕೆ ಚೆಲುವು  ಮಾತ್ರ ಅನುಭವಿಸಿದವರಿಗೆ ಗೊತ್ತು.  ಭಾವನಾತ್ಮಕ ಬಿಂದುಗಳ ಬೆಸುಗೆಯಿಂದ ಹುಟ್ಟಿದ ಜೀವಸೆಲೆ ಮುಂದೆ ನದಿಯಂತೆ ನಿರಂತರವಾಗಿ ಹರಿಯತೊಡಗಿದೆ ಇಬ್ಬರಲ್ಲೂ. 

………..

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *