ಎತ್ತ ಸಾಗುತ್ತಿದ್ದೇವೆ ನಾವು?: ಸಹನಾ ಪ್ರಸಾದ್

ಪ್ರತಿದಿನ ದೃಶ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಜನರ ನುಡಿಗಳಲ್ಲಿ, ಹೆಂಗಸರ ಮೇಲೆ ದೌರ್ಜನ್ಯ, ಮಾನಭಂಗ ಇತ್ಯಾದಿಗಳ ಸುದ್ದಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಸಮೀಕ್ಷೆಗಳ ಪ್ರಕಾರ, ನಮ್ಮ ಮೆದುಳು ಕೆಲವು ಶಬ್ಢಗಳು, ವಿಷಯಗಳನ್ನು ತಕ್ಷಣ ಗುರುತಿಸುತ್ತಂತೆ. ಆದುದರಿಂದಲೇ ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳನ್ನು ಅತ್ಯಂತ ಆಸಕ್ತಿಯಿಂದ(!!) ರೋಚಕವಾಗಿ ಚಿತ್ರಿಸುತ್ತಾರೆ. ಅದರಲ್ಲಿ ಅವರ ಕಾಳಜಿ, ಕಳಕಳಿಗಿಂತ ಸುದ್ದಿಯನ್ನು ಜನರ ಮನಸ್ಸಿಗೆ ಹೊಡೆಯುವಂತೆ ಸೃಷ್ಟಿಸುವುದೇ ಉದ್ದೇಶ. ದೌರ್ಜನ್ಯದ ಘಟನೆಗಳು ನಡೆದಾಗ ನಮ್ಮ ಮನ ರೊಚ್ಚಿಗೇಳಬೇಕು, ಕಷ್ಟಪಡಬೇಕು. ಆಗ ಉಂಟಾದ ಹಿಂಸೆಯಿಂದ ನಮ್ಮ ಮನಸ್ಸಲ್ಲಿ ಒಂದು ನಿಲುಮೆ ಜನ್ಮತಾಳಬೇಕು. ಮತ್ತೊಮ್ಮೆ ಈ ರೀತಿ ಘಟನೆ ನಡೆಯದಂತೆ ತಡೆಯುತ್ತೇನೆ ಎಂಬ ನಿರ್ಧಾರ ಮನಸ್ಸಿನಲ್ಲಿ ಮೂಡಬೇಕು, ಆ ರೀತಿಯಲ್ಲಿ ನಡೆದುದ್ದನ್ನು ಜನರೆದುರು ಇಡುವುದು ಮಾಧ್ಯಮಗಳ ಕರ್ತವ್ಯ. ಚಲನ ಚಿತ್ರಗಳಲ್ಲಿ ಸಾಮಾನ್ಯವಾಗಿ ಇಂತಹ ಸನ್ನಿವೇಶಗಳನ್ನು ಬಹಳ ಕೆಟ್ಟದಾಗಿ ಚಿತ್ರಿಸುವುದು ಕಾಣಬಹುದು.

ಇತ್ತೀಚಿಗೆ ತೆಲಂಗಾಣದಲ್ಲಿ ನಡೆದ ಘಟನೆಯನ್ನು, ಅದು ರಿಪೋರ್ಟ್ ಆದ ತಕ್ಷಣವೇ ಯಾವುದೋ ಪೋರ್ನ್ ಜಾಲತಾಣದಲ್ಲಿ ಸುಮಾರು 800 ಜನ ಹುಡುಕಿದಾರಂತೆ, ಅದರ ವೀಡಿಯೊ ಏನಾದರೂ ಸಿಗುತ್ತ ಎಂದು. ಇದರಲ್ಲಿ ತಿಳಿಯುತ್ತೆ ಕೆಲವು ಜನದ ಮನಸ್ಥಿತಿ ಹೇಗಿದೆ ಎಂದು. ಕೆಲವರು ಮರುಗಿದರೆ, ಕೆಲವರು ಇದರಲ್ಲಿ ತಮ್ಮ ಖುಷಿಯನ್ನು ಹುಡುಕುತ್ತಾರೆ. ಯಾಕೆ ಹೀಗೆ? ಕೆಲವರ ದುಃಖ ಕೆಲವರ ಖುಶಿಗೆ ಮೂಲವಾಗಬಹುದೇ? ಆಷ್ಟು ಕೆಳಮಟ್ಟಕ್ಕೆ ಇಳಿದಿದ್ದೇವೇ ನಾವು?

ದ್ರೌಪದಿ ವಸ್ತ್ರಾಪಹರಣವನ್ನು ಟೀವಿ, ಸಿನೇಮಾದಲ್ಲಿ ಇವತ್ತಿಗೂ ಜನರು ಅತ್ಯಾಸಕ್ತಿಯಿಂದ ನೋಡುತ್ತಾರೆ, ಅದರಲ್ಲಿ ಪ್ರಧಾನ ಪಾತ್ರಧಾರಿ ಕೃಷ್ಣನಾಗುವುದಕ್ಕೆ ಮಾತ್ರ ಯಾರಿಗೂ ಮನಸ್ಸಿಲ್ಲ. ಒಬ್ಬಾಕೆ ತಮ್ಮ ಅನುಭವ ಹಂಚಿಕೊಳ್ಳುತ್ತಾ ಹೇಳಿದ್ದಾರೆ, ನಾನು ರಸ್ತೆಯಲ್ಲಿ ಒಬ್ಬಳೇ ಹೋಗುತ್ತಿದ್ದೆ, ಜನಜಂಗುಳಿ ಇದ್ದ ರಸ್ತೆ, ಎಲ್ಲಾರೂ ತಮ್ಮ ಪಾಡಿಗೆ ತಾವು ಓಡಾಡುತ್ತಿದ್ದರು, ಒಬ್ಬಾತ ನನ್ನನ್ನು ಹಿಂಬಾಲಿಸಿ ಕಿರುಕುಳ ಕೊಡಲು ಶುರು ಮಾಡಿದ, ನಾ ಹಿಂತಿರುಗಿ ಅವನನ್ನು ಬೈದೆ. ಅದನ್ನು ಕೇಳಿಸಿಕೊಂಡು ಕೂಡ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಅಷ್ಟು ಜನರಿದ್ದೂ ಸಹ ನಾ ಒಬ್ಬಂಟಿಯಾದೆ. ಇದು ನಡೆದಿದ್ದು ನಮ್ಮ ಬೆಂಗಳೂರಿನಲ್ಲಿ, ಜನ ತುಂಬಿದ ಪ್ರದೇಶದಲ್ಲಿ. ಈ ಲೇಖನದ ಶೀರ್ಷಿಕೆ ” ನನ್ನ ಮಾತು ನೀವು ಕೇಳಬೇಕಾದರೆ ನನ್ನ ಮಾನಭಂಗವಾಗಬೇಕೇ”. ಯಾಕೀ ಮನೊಭಾವ ನಮಗೆ? ಒಂದು ಅಹಿತಕರವಾದ ಘಟನೆ ನಡೆದರೆ ಅದರ ಫೊಟೊ ಹೊಡೆಯುವುದಕ್ಕೆ ಮುಂದಾಗುವ ಬಹಳಷ್ಟು ಜನ ಅದನ್ನು ತಡೆಯಲು ಕಿರುಬೆರಳೂ ಎತ್ತುವುದಿಲ್ಲ.

ಇದೆಲ್ಲಾ ಮಾಧ್ಯಮದವರ ತಪ್ಪು ಮಾತ್ರವೇ? ಇಂತಹುದನ್ನು ಬಾರಿ ಬಾರಿ ತೋರಿಸಿ, ಎತ್ತಿ ಹಿಡಿದು ನಮ್ಮ ಮನಸ್ಸಿನ ಭಾವನೆಗಳನ್ನು ಜೋಮು ಹಿಡಿಯುವಂತೆ ಮಾಡಿದ್ದಕ್ಕೆ? ನಿತ್ಯ ಸಾಯೋರಿಗೆ ಅಳೋರು ಯಾರು ಎನ್ನುವಂತೆ ನಾವು ಇಂತಹ ಆಗುಹೋಗುಗಳಿಗೆ ಸ್ಪಂದಿಸದೆ ನಮ್ಮ ಪಾಡಿಗೆ ನಾವು ಇದ್ದುಬಿಡುವುದಕ್ಕೆ? ನಮ್ಮ ಮನಸ್ಸು ಕೆಲವು ವಿಷಯಗಳಿಗೆ ಉದಾಸೀನ ತಾಳುವುದಕ್ಕೆ? ಮೊಟ್ಟಮೊದಲಿಗೆ ಸಮಸ್ಯೆ ನಮ್ಮಲ್ಲಿಯೇ ಇದೆ ಎಂದು ನಮಗರಿವಾಗಬೇಕು. ಮೊದಲೆಲ್ಲಾ ಮನೆಯಲ್ಲಿ, ಶಾಲೆಯಲ್ಲಿ ಕೆಲವೊಂದನ್ನು ಬಿಡಿಸಿ ಹೇಳುತ್ತಿರಲಿಲ್ಲ. ಮಕ್ಕಳು ಅವರಾಗವರೇ ಅರಿತುಕೊಂಡು ಕೆಲವನ್ನು ಮಾಡುತ್ತಲೇ ಇರಲಿಲ್ಲ. ಒಳ್ಳೆ, ಸುಸಂಸ್ಕೃತ ಪರಿವಾರದಿಂದ ಬಂದಿರುವ ಯಾರೂ ಹೆಂಗಸರನ್ನು ಚುಡಾಯಿಸುವುದು, ಕಿರುಕುಳ ಕೊಡುವುದು ಮಾಡುತ್ತಿರಲಿಲ್ಲ, ಅದರಲ್ಲೊ ಬೇರೆ ಮನೆ ಹೆಂಗಸರನ್ನು. ಕೆಲವರು ತಮ್ಮ ಮನೆ ಹೆಣ್ಣುಮಕ್ಕಳನ್ನು ಕೀಳಾಗಿ ಕಂಡರೂ ಹೊರಗಡೆ ತಮ್ಮ ಮನಸ್ಸಿನ ವಿಕೃತಿಗಳನ್ನು ಸಮಾಜಕ್ಕೆ ಹೆದರಿ ಮುಚ್ಚಿಟ್ಟುಕೊಳ್ಳುತ್ತಿದ್ದರು. ಇಂತಹ ಘಟನೆಗಳು ನಡೆಯುತ್ತಿದ್ದುದು ಬಹಳ ಕಡಿಮೆ. ಕೆಲವರು ಇದಕ್ಕೆ ಹೆಣ್ಣು ಮಕ್ಕಳು ಹೊರಗೆ ಜಾಸ್ತಿ ಓಡಾಡುವುದು, ಹೆಣ್ಣಿಗೆ ಶಿಕ್ಷಣ ದೊರೆತಿರುವುದು ಇದಕ್ಕೆಲ್ಲಾ ಕಾರಣ ಎನ್ನಬಹುದು.

ಆದರೆ ಕಾಲ ಬದಲಾದಂತೆ ಎಲ್ಲರೂ ಬದಲಾಗಲೇಬೇಕು ಅಲ್ಲವೇ? ಮೊದಲಂತೆ ನಾವು ಹಸಿಬಿಸಿ ತಿಂದು ಓಡಾಡಿಕೊಂಡಿಲ್ಲ, ಅದೇ ರೀತಿ ಹೆಣ್ಣು ಕೂಡ ಅಡುಗೆ ಮನೆ ಬಿಟ್ಟು ಹೊರಗಡೆ ಓಡಾಡುವುದು ಕೂಡ ಸರಿಯಾದುದೇ. ಅದಕ್ಕವಳು ಶಿಕ್ಷೆ ಅನುಭವಿಸಬೇಕಿಲ್ಲ. ಸುತ್ತ ಮುತ್ತ ಇರುವ ಜನರ ಮನೋಭಾವ ಬದಲಾದರೆ ಸಾಕು. ಒಂಟಿ ಹೆಣ್ಣಿಗೆ ಸಮಾಜ ಕೊಡುವ ಕಿರುಕುಳ ಕಂಡು ಹೆದರಿ ಇವತ್ತಿಗೂ ಬಹುತೇಕ ಪರಿವಾರಗಳಲ್ಲಿ ಹೆಣ್ಣು ಮಕ್ಕಳ ಮದುವೆಯಾದರೆ ಸಾಕು ಎಂದು ಹಪಹಪಿಸುತ್ತಾರೆ. ಮದುವೆಯೇ ಪರಮಗುರಿಯಾಗಿಸಿಕೊಂಡು ಸುಮಾರು ಹೆಣ್ಣುಗಳೂ ಜೀವಿಸುವುದಕ್ಕೆ ಇದೂ ಒಂದು ಕಾರಣ.
ಎಷ್ಟು ಬೇಕೆಂದರಷ್ಟು ಮುಕ್ತವಾಗಿ ಸಿಗುವ ನೀಲಿ ಚಿತ್ರಗಳು, ವೀಡಿಯೊ ಕ್ಲಿಪ್ಗಳು ಜನರ ಮನಸ್ತಿತಿ ಹದಗೆಡಿಸಿರುವುದಕ್ಕೆ ಕಾರಣವಿರಬಹುದು. ಕೆಲವೊಮ್ಮೆ ಕೆರಳುತ್ತಿದ್ದ ಭಾವನೆಗಳು ಈಗ ಯಾವಾಗ ಬೇಕಾದರೂ ಇಂತಹದನ್ನು ನೋಡಿ ಕೆರಳಬಹುದು. ಹೆಂಡತಿ, ಸಂಸಾರ ಬಿಟ್ಟು ನಗರಗಳಿಗೆ ವಲಸೆ ಬರುವುದು, ಅಲ್ಲಿನ ಕಷ್ಟ ಕಾರ್ಪಣ್ಯ ಸಹಿಸಲಾಗದೆ ಅದರಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುವುದು ಕೂಡ ಕಾರಣವಿರಬಹುದು.
ಹುಡುಕುತ್ತಾ ಹೋದರೆ ಬಹಳಷ್ಟು ನೆಪಗಳು ಸಿಗಬಹುದು.

ಒಂದು ಪರಿವಾರದಲ್ಲಿ ಗಂಡುಮಕ್ಕಳಿಗೆ ತಂದೆತಾಯಿ ಎಷ್ಟರ ಮಟ್ಟಿಗೆ ಒಳ್ಳೆಯ ಯೋಚನೆ, ವರ್ತನೆಗಳನ್ನು ತುಂಬಿಕೊಡುತ್ತಾರೆ ಎನ್ನುವುದು , ಶಾಲೆ ಕಾಲೇಜುಗಳಲ್ಲಿ ಪರೋಕ್ಷವಾಗಿ ಕಲಿಸಿಕೊಡುವ ವಿಷಯಗಳೂ ಬಹು ಮುಖ್ಯ. ಒಳ್ಳೇ ಸಮಾಜ ನಿರ್ಮಿತವಾಗಬೇಕಾದರೆ ಎಲ್ಲರ ಸಹಕಾರ ಬೇಕೇ ಬೇಕು. ಒಂದು ಪೀಳಿಗೆ ಇನ್ನೊಂದು ಪೀಳಿಗೆಗೆ ಒಳ್ಳೆಯ ವಿಷಯಗಳನ್ನು ತಿಳಿಸಿಕೊಡಬೇಕಾದರೆ, ಹಿರಿಯ ಪೀಳಿಗೆಗೆ ಅಂತರಾತ್ಮದ ದನಿ ಜೋರಿರಬೇಕು. ಎಷ್ಟೇ ಪ್ರಲೋಭನೆ ಇರಲಿ, ಮನಸ್ಸಿನ ಮೇಲೆ ಹಿಡಿತ, ತಪ್ಪು ದಾರಿ ತುಳಿಯುವುದಿಲ್ಲ ಎಂಬ ಗಟ್ಟಿ ಮನಸ್ಸು ಇರಬೇಕು. ಹೆಣ್ಣು ಮಕ್ಕಳನ್ನು ಪೂಜ್ಯ ಭಾವನೆಯಿಂದ ನೋಡುವುದು ಹುಟ್ಟಿನಿಂದಲೇ ಬರಬೇಕು, ಇದರ ಜತೆ ಒಳ್ಳೆಯ ನೋಟ, ಯೋಚನೆಗಳು ಬೆಳೆಸಿಕೊಳ್ಳಲು ಪುಸ್ತಕ, ಮಾಧ್ಯಮಗಳು, ಅವು ಪಾಲಿಸುವ ನೀತಿಗಳು ಮುಖ್ಯವಾಗುತ್ತದೆ.

ಸಹನಾ ಪ್ರಸಾದ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x