ಎತ್ತರಕ್ಕೆ ಬೆಳೆಯಲು ಜಾಣನೆಂಬ ಅಹಂಗೆ ಪೆಟ್ಟಾಗಲೇ ಬೇಕು..: ನಾಗರಾಜ್. ಮುಕಾರಿ (ಚಿರಾಭಿ)

 

nagaraj-mukari

     
ನಾಲ್ಕನೇ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿ ಇದ್ದಿದ್ದು ಒಬ್ಬರೇ ಮಾಸ್ತರು. ಅವರು ನನ್ನ ಜೀವನದಲ್ಲಿ ನೆನಪಿಟ್ಟು ಕೊಳ್ಳುವಂತಹ ವ್ಯಕ್ತಿತ್ವದವರು. ಅದು ನನ್ನ ನೆಚ್ಚಿನ ಕೊಟ್ರಪ್ಪ ಮಾಸ್ತರು. ಅವರೊಬ್ಬರೇ ಕನ್ನಡ, ವಿಜ್ಞಾನ, ಸಮಾಜ ಮತ್ತು ಗಣಿತ ಪಾಠವನ್ನು ಅತೀ ಸಂತೋಷವಾಗಿ ಹೇಳಿಕೊಡುತ್ತಿದ್ದುದು. ತಿಂಗಳಿಗೊಮ್ಮೆ ಪರೀಕ್ಷೆ, ಗರಿಷ್ಟ ಅಂಕ ಇಪ್ಪತೈದು. ಸರಿಸುಮಾರು ಎಲ್ಲಾ ವಿಷಯಗಳಲ್ಲೂ ಇಪ್ಪತ್ತರ ಮೇಲೆಯೇ ಗಳಿಸಿದ ನೆನಪು ನನಗೆ, ಅದಕ್ಕೆಂದೇ ಒಮ್ಮೆ ತರಗತಿಯ ಮಾನಿಟರ್ ಅದದ್ದೂ ಉಂಟು. 

ಹಾಗೆಯೇ ಇರಲು ಒಂದು ದಿನ ‘ಸ್ವಾತಂತ್ರೋತ್ಸವ ಆಚರಣೆಯ ಅಂಗವಾಗಿ ಈ ವರ್ಷ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಯಾರಾದರು ಪ್ರಬಂಧ ಬರೆಯುವವರಿದ್ದರೆ..ಕೊಟ್ರಪ್ಪ ಮಾಸ್ತರ್‍ಹತ್ತಿರ ಹೆಸರುಕೊಡಿ’ ಎಂದು ಹೇಳಿ ಸುಲೋಚನ ಮೇಡಂ ಹೊರಟುಹೋದರು. ನಮಗೋ ಪ್ರಬಂಧವೆಂದರೇನು ಗೊತ್ತೇ ಇರಲಿಲ್ಲ.. ಆಗ ಕೊಟ್ರಪ್ಪ ಮಾಸ್ತರ್ ‘ನಿಮಗೆ ಒಂದು ವಿಷಯ ಕೊಡ್ತಾರೆ ಅದರ ಬಗ್ಗೆ ಬರೀಬೇಕು, ಯಾರ್ ಚೆನ್ನಾಗಿ ಬರೀತಾರೆ ಅವ್ರೀಗೆ ಬಹುಮಾನ’ ಎಂದಾಕ್ಷಣ ‘ಸಾರ್ ಯಾ ವಿಷ್ಯ..’ ಎಂದೆ, ‘ಅದು ಅವತ್ತೇ ಗೊತ್ತಾಗುತ್ತೋ..’ ಎಂದು ನನ್ನ ಕುತೂಹಲಕ್ಕೆ ಬ್ರೇಕ್ ಹಾಕಿದರು. ಮತ್ತು ನನ್ನ ಹೆಸರನ್ನೂ ಬರೆದು ಕೊಂಡರು.

ನಾನೋ ಕ್ಲಾಸ್ ಮಾನಿಟರ್ ಸ್ಪರ್ಧೆಯಲ್ಲಿ ಭಾಗವಹಿಸದಿದ್ದರೆ ಹೇಗೆ? ಹಾಗಾಗಿ ನನ್ನದೂ ಒಂದು ಕೈ ಹಾಕಿದೆ. ನನ್ನ ಕಾಂಪಿಟೇಷನ್ ತರಗತಿಯ ಎಲ್ಲಾ ವಿದ್ಯಾರ್ಥಿಗಳ ಜೊತೆ ಇರಲಿಲ್ಲ.. ಇದ್ದಿದ್ದು ಕೇವಲ ನಿರು, ಶಿವಲೀಲಾ ಮತ್ತು ಪೂರ್ಣಿಮಾ ಈ ಮೂವರ ಜೊತೆ ಮಾತ್ರ ಏಕೆಂದರೆ ಅವರೂ ಎಲ್ಲಾ ಪರೀಕ್ಷೆಗಳಲ್ಲಿ ಇಪ್ಪತೈದಕ್ಕೆ ಇಪ್ಪತ್ತರ ಮೇಲೆ ತೆಗೆದವರು.
ಅವತ್ತಿನ ದಿನ ಬಂದೇ ಬಿಟ್ಟಿತು.. ವಿಷಯ ಬಲು ರೋಚಕವಾಗಿತ್ತು.

“ತೆಂಗಿನಮರ”
ಪ್ರಬಂಧ ಬರೆಯಬೇಕಾದದ್ದು ಇದರ ಮೇಲೆ ಏನೆಂದು ಬರೆಯಬಹುದು..? ನಮ್ಮ ಮನೆಯ ಹತ್ತಿರ ತೆಂಗಿನ ಮರವಿಲ್ಲ ಮತ್ತು ನಮ್ಮ ತೆಂಗಿನತೋಟವಂತೂ ಇಲ್ಲವೇ ಇಲ್ಲ. ಅಂತೂ ಅವರು ಕೊಟ್ಟ ರೂಲ್ಡ್ ಹಾಳಿಯ ಮೇಲೆ ನನಗೆ ತೋಚಿದ್ದನ್ನು ಬರೆದು ಕೊಟ್ಟೆ. ನನ್ನ ತ್ರಿಮಿತ್ರರೂ ಬರೆದು ಕೊಟ್ಟಾಯಿತು.

ಎಲ್ಲರಂತೆ ನಾನೂ ನಿರುಗೆ ಕೇಳಿದೆ ‘ನಿರು..ನೀ ಎಷ್ಟು ಬರೆದೆ?’ ಅದಕ್ಕೆ ‘ನಾನು ಹದಿನಾಲ್ಕು ಲೈನ್ ಬರೆದಿದ್ದೇನೆ’  ಎಂದ, ನನಗೋ ತುಂಬಾ ಬೇಸರವಾಯಿತು. ಕಾರಣ ನಾ ಬರೆದದ್ದು ಕೇವಲ ಹದಿಮೂರುವರೆ ಲೈನ್ ಮಾತ್ರ, ಹಾಗಾಗಿ ನಿರುಗೆ ಪಕ್ಕಾ ಬಹುಮಾನ ಎಂದು ಮನೆ ಕಡೆಗೆ ನೆಡೆದೆ.

ಸ್ವಾತಂತ್ರ್ಯ ದಿನಾಚರಣೆ ನಮಗಂತೂ ಖುಷಿಯೋ ಖುಷಿ.. ಏಕೆಂದರೆ  ಬೆಳಿಗ್ಗೆ ಹತ್ತಾದರಾಯಿತು, ಕಾರ್ಯಕ್ರಮ ಮುಗಿದ ನಂತರ ನಮಗೂ ಶಾಲೆಗೂ ಸಂಬಂಧವಿಲ್ಲದಂತೆ ಓಡಿ ಹೋಗುತ್ತಿದ್ದೆವು. ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಊರಿನ ಹಿರಿಯ ನಾಗರೀಕರೂ, ಸ್ವಾತಂತ್ರ ಹೋರಾಟಗಾರರೂ ಆದ ಸನ್ಮಾನ್ಯ ಶ್ರೀ ಶಂಕರ ಗೌಡರು. ಅಧ್ಯಕ್ಷರಾಗಿ ಶ್ರೀ ಕುಬೇರಪ್ಪ ಶಾಲೆಯ ಮುಖ್ಯೋಪಾಧ್ಯಾಯರು. ಏಳರಿಂದ ಎಂಟು ಊರೆಲ್ಲಾ ಪ್ರಭಾತ್‍ಫೇರಿ ಮುಗಿಸಿದ ನಂತರ ಅತಿಥಿಗಳ ಭಾಷಣ ಕೇಳುವುದಕ್ಕೆ ಕುಳಿತಿದ್ದೆವು.  ದೇಶಭಕ್ತಿ ಹಾಡಾದ ನಂತರ ಭಾಷಣ ಶುರುವಾಯಿತು. ಆದರೆ ನನಗೆ ಯಾವುದರ ಮೇಲೂ ಅಷ್ಟೊಂದು ಆಸಕ್ತಿ ಇರಲಿಲ್ಲ ಒಂದನ್ನು ಬಿಟ್ಟು ಅದುವೇ ಪಕ್ಕದ ಟೇಬಲ್ ಮೇಲೆ ನೀಟಾಗಿ ಜೋಡಿಸಿಟ್ಟ ಬಹುಮಾನಗಳು ಅದರಲ್ಲೂ ಆ ‘ಪ್ಲೈವುಡ್’ (ರೈಟಿಂಗ್ ಪ್ಯಾಡ್) ಆದರೆ ನನಗೆ ಸಿಗಬೇಕಲ್ಲಾ..? ಯಾವ ಕ್ರೀಡೆಯಲ್ಲೂ ಬಹುಮಾನ ಬಂದಿರಲಿಲ್ಲ. ಪ್ರಬಂಧ ಬರೆದದ್ದು ನೆನಪೇ ಇರಲಿಲ್ಲ. ಹಾಗಾಗಿ ಭಾಷಣ ಮುಗಿದ ನಂತರ ಬಹುಮಾನ ತೆಗೆದುಕೊಳ್ಳುವವರನ್ನ  ನೋಡುತ್ತಾ ಕುಳಿತುಕೊಂಡೆ.

ಈಗ ನಾಲ್ಕನೇ ತರಗತಿಯ ಪ್ರಬಂಧ ಸ್ಪರ್ಧೆಯ ವಿಜೇತರು ಎಂದು ಹೇಳಿದಾಗಲೂ ನನಗೇನೂ ಅನಿಸಲಿಲ್ಲ, ಆದರೆ ‘ಮೊದಲನೇ ಬಹುಮಾನ..ಮುಕಾರಿ ನಾಗರಾಜ್’ ಎಂದೊಡನೆ ಮೈಯಲ್ಲಾ ರೋಮಾಂಚನವಾಯಿತು. ನೆಲದಿಂದ ಮೇಲೆದ್ದವನೇ ನನ್ನ ನಿಕ್ಕರಿನ ಹಿಂದೆ ಹತ್ತಿದ ಧೂಳನ್ನು ಕೊಡುವುತ್ತಾ ವೇದಿಕೆ ಹತ್ತಿರ ಓಡಿದೆ..!
ಅದೇ “ ರೈಟಿಂಗ್ ಪ್ಯಾಡ್ “ ಬಹುಮಾನ..!

ನನ್ನ ಖುಷಿಗೆ ಎಲ್ಲೆಯೇ ಇಲ್ಲದಂತಾಯಿತು, ಅತೀವ ಸಂತಸದಿಂದ ಕಾರ್ಯಕ್ರಮ ಮುಗಿದ ನಂತರ ಮನೆಗೆ ಓಡಿದೆ. ದಾರಿಯುದ್ದಕ್ಕೂ ಯಾರಾದರೂ ನನ್ನ ಕಡೆ ನೋಡಿದರೆ ನನ್ನ ಬಹುಮಾನದ ಕಡೆಗೆ ನೋಡುತ್ತಾರೇನೋ ಎನ್ನುವ ಕುತೂಹಲ ಮತ್ತು ಅದರ ಬಗ್ಗೆಯೇ ಕೇಳಲಿ ಎನ್ನುವ ಆಸೆ. ಸ್ವಲ್ಪ ಕೇಳಿದರೆ ಸಾಕು ನನ್ನ ಸಾಧನೆಯ ಮಹಾಪರ್ವವನ್ನೇ ಅವರ ಮುಂದಿಡುತ್ತಿದ್ದೆ. ನಾನೂ ಹಲವರಂತೆ ಜಾಣ ಎನ್ನುವುದಕ್ಕೆ ಇಷ್ಟೆಲ್ಲಾ ಪೀಠಿಕೆ ಹಾಕಬೇಕಾಯಿತು. ಜಾಣ ಎಂದಮೇಲೆ ಅ ವಯಸ್ಸಿನಲ್ಲಿ ಸ್ವಲ್ಪ ಗತ್ತು ಇದ್ದೇ ಇರುತ್ತದೆ. ಅದೇ ಗತ್ತಿನಲ್ಲಿದ್ದ ನನಗೆ ಏನಾಯಿತು ಅನ್ನೋದನ್ನ ನೋಡೋಣ.

ನಮ್ಮ ಮನೆಯ ಹತ್ತಿರವೇ ಇದ್ದ  ನನ್ನ ಗುರುಗಳು ಮಹಾಲಿಂಗಪ್ಪನವರು. ಅವರ ಮತ್ತು ನಮ್ಮ ಮನೆ ಎದಿರು ಬದಿರು ಅಂತಾನೇ ಹೇಳಬಹುದು. ಅವರು ಶಾಲೆಯಲ್ಲಿ ಪಾಠ ಮಾಡುವುದರ ಜೊತೆಗೆ ಮನೆಯಲ್ಲಿ ಟ್ಯೂಷನ್ ಸಹ ಹೇಳುತ್ತಿದ್ದರು. ಹಾಗಾಗಿ ನಾನೂ ಟ್ಯೂಷನ್ ಗೆ ಹೋಗಲೇ ಬೇಕಾಗಿತ್ತು. ಅವರಿಲ್ಲದ ವೇಳೆ ಗಣಿತದ ಬಗ್ಗೆ ನಾನೇ ಅಲ್ಲಿಗೆ ಬರುತ್ತಿದ್ದ ಹುಡುಗರಿಗೆ ಹೇಳಿಕೊಡುತ್ತಿದ್ದೆ. ಆ ಕೆಲಸಕ್ಕೆ ಅವರಿಂದ ಪ್ರಸಂಶೆಯೂ ಸಿಗುತ್ತಿತ್ತು. ಅವರಿಗೆ ಸ್ವಂತ ಮಕ್ಕಳು ಆಗ ಇರಲಿಲ್ಲದ್ದಕ್ಕೆ ನಾನೇ ಅವರ ಮನೆಗೆಲಸದಲ್ಲಿ ಮಹಾಲಿಂಗಪ್ಪ ಗುರುಗಳ ಪತ್ನಿಯವರಿಗೆ ಸಹಾಯ ಮಾಡುತ್ತಿದ್ದೆ. ಹಾಗಾಗಿ ಅವರೊಂದಿಗೆ ಹೆಚ್ಚು ಸಲಿಗೆಯಿಂದಲೇ ಇದ್ದೆ. ಆದರೆ ವಿಚಿತ್ರವಾಗಿದ್ದು..

ಒಮ್ಮೆ ಶಾಲೆಯ ಕಟ್ಟೆಯ ಮೇಲೆ ಕುಳಿತು ಕಾಲನ್ನು ಅಲ್ಲಾಡಿಸುತ್ತಾ ಬಾಯಲ್ಲಿ ಬಬಲ್‍ಗಮ್ ಜಗಿಯುತ್ತಾ ನನ್ನ ಸ್ನೇಹಿತರು ಆಡುತ್ತಿದ್ದ ಖೋ-ಖೋ ಆಟ ನೋಡುತ್ತಿದ್ದಾಗ ಅಚಾನಕ್ ಆಗಿ ಅಲ್ಲಿಗೆ ಬಂದರು ಮಹಾಲಿಂಗಪ್ಪ ಗುರುಗಳು ಮತ್ತು ರಾಜಣ್ಣ ಗುರುಗಳು. ನಾನು ಅವರನ್ನು ನೋಡುತ್ತಿದ್ದಂತೆ ಒಂದು ಚಿಕ್ಕ ಸ್ಮೈಲ್ ಕೊಟ್ಟು ಆಟದ ಕಡೆ ತಿರುಗಿದೆ. ನನ್ನ ಹತ್ತಿರ ಬಂದವರೇ ‘ಟಪಾರ್’ ಎಂದು ಕೆನ್ನೆಗೆ ಬಾರಿಸಿ ಹೊರಟೇ ಹೋದರು. ನನಗೋ ಆಶ್ಚರ್ಯದ ಜೊತೆಗೆ ಕೋಪ ಮತ್ತು ನಾಚಿಕೆಯೂ ಆಯಿತು. ನನ್ನ ಸಮಾನ ವಯಸ್ಸಿನ ಹುಡುಗಿಯರೂ ಅಲ್ಲಿ ಖೋ-ಖೋ ಆಡುತ್ತಿದ್ದಾರೆ. ಎಲ್ಲರಿಗೂ ಏನಾಯಿತೆಂದು ಗೊತ್ತಾಗಲೇ ಇಲ್ಲ. ನನಗೇ ಗೊತ್ತಾಗದಿದ್ದಾಗ ಬೇರೆಯವರಿಗೆ ಹೇಗೆ ಗೊತ್ತಾಗಬೇಕು ಹೇಳಿ. ನನ್ನ ಮೆಚ್ಚಿನ ಗುರುಗಳು ಅವರ ಪಟ್ಟದ ಶಿಷ್ಯನೇ ಎಂದು ನನ್ನ ಸಹಪಾಠಿಗಳು ಹೇಳುತ್ತಿರುವಾಗ ಹೀಗೆ ಆಗಿದ್ದಾದರೂ ಹೇಗೆ ಗೊತ್ತಾಗಲೇ ಇಲ್ಲ. ಅದೇ ಸಿಟ್ಟಿನಲ್ಲಿ ಮನೆಗೆ ಬಂದೆ.

ಸಾಯಂಕಾಲದವರೆಗೆ ಅವರ ಮತ್ತು ನನ್ನ ಮುಖಾಮುಖಿ ಆಗಲೇ ಇಲ್ಲ. ನಾನು ಆ ಸಿಟ್ಟಿನಿಂದ ಹೊರ ಬಂದಿರಲೇಇಲ್ಲಾ.. ಸಾಯಂಕಾಲವಾದ್ದರಿಂದ ಎಲ್ಲರೂ ಟ್ಯೂಷನ್‍ಗೆ ಹೋಗುತ್ತಿದ್ದರು. ನಾನಂತೂ ಟ್ಯೂಷನ್‍ಗೆ ಹೊಗುವುದಿರಲಿ ಟ್ಯೂಷನ್‍ನ ಬಗ್ಗೆ ಯೋಚನೆ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದೆ. ಮನೆಯಲ್ಲಿಯೇ ಓದುತ್ತಾ ಕುಳಿತೆ, ಪುಸ್ತಕದಲ್ಲಿದ್ದ ವಿಷಯ ಯಾವುದೂ ತಲೆಗೆ ಹೋಗುತ್ತಿರಲಿಲ್ಲ ಆದರೂ ಪುಸ್ತಕದ ಮೇಲೆ ನನ್ನ ಕಣ್ಣು.. ಮನಸು ಮಾತ್ರ ಆ ಹೊಡೆತದತ್ತ.

ದಿನಾಲೂ ಆರು ಗಂಟೆ ಸಮಯಕ್ಕೆ ಸರಿಯಾಗಿ ಟ್ಯೂಷನ್‍ನಲ್ಲಿ ಇರುತ್ತಿದ್ದ ನನ್ನನ್ನು ಮನೆಯಲ್ಲಿಯೇ ಓದುವುದನ್ನ ನೋಡಿ 
‘ಯಾಕೆ ಟ್ಯೂಷನ್ ಇಲ್ವಾ..?’ ಎಂದರು ತಂದೆ. 
‘ಅಯ್ಯೋ ಎಲ್ಲರೂ ಹೋಗ್ತಾಇದ್ದಾರೆ..!’ ಎಂದು ಹಿಂದಿನಿಂದಲೇ ತಾಯಿ ಹೇಳಿದರು. ನಾನೇನು ಮಾತನಾಡದೇ ಹಾಗೆಯೇ ಸುಮ್ಮನಿದ್ದೆ. ‘ಎ..ಅಲ್ನೋಡು..ವೀರೇಶ್ ಬಂದಿದ್ದಾನೆ’ ಎಂದು ಹೇಳಿದಳು ತಾಯಿ. 
‘ಅಮ್ಮಾ ನಾಗರಾಜ್‍ನ ಮಾಸ್ತರು ಕರೀತಿದ್ದಾರೆ..ಬರದಿದ್ದರೆ ಒದ್ದು ಕರ್ಕೊಂಡು ಬಾ ಅಂಥ ಹೇಳಿದ್ದಾರೆ’ ಎಂದು ಹೇಳಿ ನನ್ನನ್ನು ಶತಾಯಗತಾಯ ಕರೆದುಕೊಂಡು ಹೋಗಲೇ ಬೇಕೆನ್ನುವಂತೆ ನಿಂತಿದ್ದ.
‘ಹೋಗು ಟ್ಯೂಷನ್‍ಗೆ..’ ಎಂದು ತಂದೆ ಹೇಳಿದರು
‘ಇಲ್ಲಾ..ನಾನು ಇಲ್ಲಿಯೇ ಓದುತ್ತೇನೆ.. ಟ್ಯೂಷನ್ ನನಗೆ ಬೇಡ’ ಎಂದರೂ, ನನಗೆ ಮನಸ್ಸಿಲ್ಲದಿದ್ದರೂ ಮನೆಯವರ ಬೈಗೆಗಳ ತಡೆಯಲಾರದೆ ಗುರುಗಳ ಮನೆಯ ದಾರಿ ಹಿಡಿದೆ. ಸಿಟ್ಟು ಕೋಪ ಎರಡನ್ನೂ ಜೊತೆಯಲ್ಲಿ ಕರೆದೊಯ್ದೆ.
‘ಯಾಕೋ..ಏನಾಯ್ತು ಟ್ಯೂಷನ್‍ಗೆ ಬರ್ಲೇ ಇಲ್ಲಾ..?’ ಗುರುಗಳು ನಾರ್ಮಲ್ಲಾಗಿಯೇ ಕೇಳಿದರು. 
‘ಏನಿಲ್ಲಾ ಸಾರ್ ಸುಮ್ಮನೇ..’ ಎನ್ನುತ್ತಾ ಮೂಲೆಯಲ್ಲಿಯೇ ನಿಂತೆ.
‘ಇರ್ಲಿಬಾರೋ ಕುತುಗೋ..ಹೌದು ಬೆಳಿಗ್ಗೆ ನಾನ್ಯಾಕೆ ಹೊಡ್ದೆ ಗೊತ್ತಾ..’ ಎಂದೊಡನೇ ಮತ್ತೇ ಟೆಂಪರೇಚರ್ ಏರಿತು ನನಗೆ ಆದರೆ ಏನು ಮಾಡುವುದು. 
‘ಇಲ್ಲಾ ಸಾರ್’ ಎನ್ನುತ್ತಾ ತಲೆ ತಗ್ಗಿಸಿದೆ.
ತಾವು ಮುಂದುವರೆಸಿದರು..

‘ನೋಡು.. ನೀನು ಎಷ್ಟೇ ಬುದ್ಧಿವಂತ ಆಗಿರ್ಬಹುದು, ಪರೀಕ್ಷೆಯಲ್ಲಿ ಎಲ್ಲರಿಗಿಂತ ಹೆಚ್ಚು ಮಾಕ್ರ್ಸ ತಗೀಬಹುದು, ಆದ್ರೆ..ನಿನ್ನಲ್ಲಿ ದೊಡ್ಡವರ ಮೇಲೆ ಗೌರವ ಇಲ್ಲದಿದ್ರೆ ಎಲ್ಲವೂ ವ್ಯರ್ಥ.. ನೀನೇ ಒಮ್ಮೆ ಯೋಚ್ನೆಮಾಡು ನಾನು ಮತ್ತು ರಾಜಣ್ಣರು ಬರ್ತಾ ಇದ್ರೇ ನೀನು ಕಾಲ್ಮೇಲೆ ಕಾಲ್ ಹಾಕ್ಕೊಂಡು.. ಚಿಂಗಮ್ ತಿನ್ನುತ್ತಾ ಹಲ್ ಕಿಸಿತಾ ಇದಿ, ಎದ್ದು ನಿಂತು ನಮಸ್ಕಾರ ಮಾಡಬೇಕಂತಾ ಸ್ವಲ್ಪನೂ ಗೊತ್ತಿಲ್ಲಾ ನಿನಗೆ, ಯಾರಾದರೂ ನೋಡಿದ್ರೆ.. ಇದೇನಾ ನಿಮ್ಮ ಮೇಸ್ಟ್ರು ಕಲಿಸಿದ್ದು ಅಂತಾ ನಮ್ಮನ್ನ ಕೇಳುತ್ತಾರೆ..’ ಎಂದು ಮಾರುದ್ದಾ ಹೇಳುತ್ತಾ ಹೊರಟು, ತಾವು ಹೊಡೆದಿದ್ದಕ್ಕೆ ಸಮರ್ಥನೆ ಕೊಡುತ್ತಾರೆ ಎಂದುಕೊಂಡೆ ಆದರೆ ಅದು ಸಮರ್ಥನೆ ಆಗಿರದೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಇರಬೇಕಾದ ಕನಿಷ್ಟ ಗುಣವೆಂದು ಅವರ ಪೂರ್ಣಮಾತು ಆಲಿಸಿದ ನಂತರವೇ ಗೊತ್ತಾಗಿದ್ದು. 

ಬಹುಶ: ಅಂದಿನ ಪೆಟ್ಟು ಜಾಣ ಎಂಬ ಅಹಂನಿಂದ ಹೊರಬಂದು ವಿನಯದಿಂದಿರಲು ಸಹಾಯವಾಯಿತೇನೋ…?

-ಶ್ರೀ. ನಾಗರಾಜ್. ಮುಕಾರಿ (ಚಿರಾಭಿ)
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x