ನಿಮ್ಮ ಪ್ರಕಾರ ಅತ್ಯುತ್ತಮ ನಿರ್ದೇಶಕರು ಯಾರು ಅಂತ ಯಾರನ್ನಾದ್ರೂ ಕೇಳಿ. ಥಟ್ ಅಂತ ಉತ್ತರ ಸಿಗುತ್ತೆ ನಿಮ್ಗೆ – ಪುಟ್ಟಣ್ಣ ಕಣಗಾಲ್ ಅಂತಲೋ, ಸತ್ಯಜಿತ್ ರೇ ಅಂತಲೋ, ಸ್ಪೀಲ್ಬರ್ಗ್, ಕ್ಯೂಬ್ರಿಕ್, ಬರ್ಗ್ಮನ್, ನೋಲನ್ ಅಂತಲೋ – ಅವರವರ ಆಸಕ್ತಿ, ಅಭಿರುಚಿ, ವಯೋಮಾನ, ಚಿತ್ರವೈವಿಧ್ಯಗಳ ಪರಿಚಯಕ್ಕೆ ತಕ್ಕಂತೆ ಉತ್ತರಿಸುತ್ತಾರೆ. ಅದೇ ನಿಮ್ಮ ಪ್ರಕಾರ ಅತ್ಯಂತ ಕಳಪೆ ನಿರ್ದೇಶಕ ಯಾರು ಅಂತ ಕೇಳಿ ನೋಡಿ, ತಕ್ಷಣ ಉತ್ತರ ಕೊಡೋದು ಕಷ್ಟ ಆಗುತ್ತೆ. ಆದರೆ ಬಹಳಷ್ಟು ಚಿತ್ರಪ್ರೇಮಿಗಳು ಹಾಗು ವಿಮರ್ಶಕರ ಪ್ರಕಾರ ಆ ಬಿರುದಿಗೆ ಪಾತ್ರನಾಗೋ ಒಬ್ಬ ವ್ಯಕ್ತಿ ಇದ್ದಾನೆ. ಅವನೇ ಎಡ್ ವುಡ್ ಜೂನಿಯರ್.
ಎಡ್ ವುಡ್ ಅರವತ್ತರ ಮತ್ತು ಎಪ್ಪತ್ತರ ದಶಕಗಳಲ್ಲಿ ಕಡಿಮೆ ಬಜೆಟ್ ನ ಸೈನ್ಸ್ ಫಿಕ್ಷನ್, ಹಾರರ್ ಚಿತ್ರಗಳನ್ನ ನಿರ್ದೇಶಿಸಿದ್ದಾನೆ. ಕೆಟ್ಟ ಕಥೆ, ಕಡಿಮೆ ಗುಣಮಟ್ಟದ ತಾಂತ್ರಿಕತೆ, ಕಳಪೆ ಸ್ಪೆಷಲ್ ಎಫೆಕ್ಟ್ಸ್, ತನ್ನಷ್ಟೇ ತಿಕ್ಕಲು ಗೆಳೆಯರ ನಟನೆ ಇರುವ ಚಿತ್ರಗಳನ್ನು ತೆಗೆದು ಇಷ್ಟೊಂದು ಪ್ರಸಿದ್ಧಿ ಪಡೆದಿದ್ದಾನೆ. ಕಳಪೆತನಕ್ಕಾಗಿ ಕೊಡುವ ಪ್ರಶಸ್ತಿಯಾದ “ಗೋಲ್ಡನ್ ಟರ್ಕಿ ಅವಾರ್ಡ್” ಅನ್ನು 1980 ರಲ್ಲಿ ಈತನಿಗೆ ಕೊಡಲಾಗಿದೆ. “ಸೋ ಬ್ಯಾಡ್ ಇಟ್ಸ್ ಗುಡ್” ಅನ್ನೋ ಕೆಟಗರಿ ಇವನದ್ದು – ಅಯ್ಯಪ್ಪ ಇಷ್ಟು ಕೆಟ್ಟದಾಗಿ ತೆಗೆದಿದ್ದಾನಲ್ಲ, ಅದ್ನ ನೋಡಿ ನಕ್ಕು ಮಜಾ ತಗೊಬೋದು ಅನ್ನೋ ಥರ!
ನನಗೆ ಸಿನಿಮಾ ಬಗ್ಗೆ ಅಥವಾ ಸಿನೆಮಾ ವ್ಯಕ್ತಿಗಳ ಬಗ್ಗೆ ತೆಗೆದಿರುವ ಸಿನಿಮಾಗಳ ಮೇಲೆ ಪ್ರೀತಿ ಹೆಚ್ಚು. ಈತನ ಜೀವನಚರಿತ್ರೆಯನ್ನು ಆಧರಿಸಿ 1994ರಲ್ಲಿ ಟಿಮ್ ಬರ್ಟನ್ “ಎಡ್ ವುಡ್” ಎನ್ನುವ ಸಿನಿಮಾ ತೆಗೆದಿದ್ದಾನೆ. ಈ ವಿಲಕ್ಷಣ ನಿರ್ದೇಶಕನ ಅಪರೂಪದ ಕಥೆ ಎಲ್ಲೂ ಅವನನ್ನು ಹೀಯಾಳಿಸುವ ಅಥವಾ ತಮಾಷೆ ಮಾಡುವ ದಾರಿಯಲ್ಲಿ ಹೋಗದೆ, ಆ ಚಿತ್ರಕರ್ಮಿಯ ಹಿಂದೆ ಇರುವ ಒಬ್ಬ ಮನುಷ್ಯನ ಬಗ್ಗೆ ತಿಳಿದುಕೊಳ್ಳುವ ಒಂದು ಪ್ರಾಮಾಣಿಕ ಪ್ರಯತ್ನ ಆಗಿದೆ. ಇಡೀ ಚಿತ್ರ ಬ್ಲಾಕ್ ಅಂಡ್ ವೈಟ್ ಅಲ್ಲಿ ಸುಂದರವಾಗಿ ಚಿತ್ರೀಕರಿಸಲಾಗಿದೆ. ಎಡ್ ವುಡ್ ಪಾತ್ರದಲ್ಲಿ ಜಾನೀ ಡೆಪ್ಪ್ ದು ನಗು ತರಿಸುತ್ತಲೇ, ಹೃದಯಕ್ಕೆ ತಾಗುವ ಲೀಲಾಜಾಲವಾದ ಸಹಜ ಅಭಿನಯ.
ಚಿತ್ರ ಶುರುವಾಗುವುದೇ ಎಡ್ ನಿರ್ದೇಶಿಸಿದ ಒಂದು ನಾಟಕದೊಂದಿಗೆ. ಕೇವಲ ಮೂರೋ ನಾಲ್ಕೋ ಪ್ರೇಕ್ಷಕರು, ಸೋರುತ್ತಿರುವ ಚಾವಣಿ ಇರುವ ನಾಟಕರಂಗ, ನೋಡಲಸಾಧ್ಯ ಎನ್ನುವ ಗುಣಮಟ್ಟದ ನಾಟಕ. ಮರುದಿನ ಪತ್ರಿಕೆಯಲ್ಲಿ ತೀವ್ರ ಟೀಕೆಗಳಿಂದ ಕೂಡಿದ ವಿಮರ್ಶೆ. ಅವನ ಇಡೀ ತಂಡ ಇದನ್ನು ಓದಿ ಕುಗ್ಗಿಹೋಗುತ್ತಿದ್ದರೆ, ಎಡ್ ಮಾತ್ರ “ಕಾಸ್ಟ್ಯೂಮ್ಸ್ ಸಹಜವಾಗಿತ್ತು” ಎನ್ನುವ ಒಂದೇ ಒಂದು ಪಾಸಿಟೀವ್ ವಾಕ್ಯವನ್ನು ಪದೇ ಪದೇ ಓದಿ ತುಂಬಾ ಸಂತೋಷ ಪಡುತ್ತಾನೆ. ತಾವು ಮಾಡುತ್ತಿರುವ ಕೆಲಸ ತುಂಬಾ ಉತ್ತಮ ಅಂತ ಎಲ್ಲರನ್ನೂ ಹುರಿದುಂಬಿಸುತ್ತಾನೆ.
ಎಡ್ ನ ಮಹದಾಸೆ ಚಲನಚಿತ್ರವನ್ನು ನಿರ್ದೇಶಿಸುವುದು. ಅದೇ ವೇಳೆಗೆ ನಿರ್ಮಾಪಕ ಜಾರ್ಜ್ ವೀಸ್ ಒಬ್ಬ ಟ್ರಾನ್ಸ್ ವೆಸ್ಟೈಟ್ (ಹೆಂಗಸರ ಉಡುಪು ಧರಿಸೋ ಖಯಾಲಿ ಇರುವವ) ನ ಬಗ್ಗೆ ಚಿತ್ರ ಮಾಡಲು ಯೋಚಿಸುತ್ತಿರುತ್ತಾನೆ. ಎಡ್ ಅವನನ್ನು ಮೀಟ್ ಮಾಡಿ ಈ ಚಿತ್ರವನ್ನು ನಿರ್ದೇಶಿಸಲು ತಾನೇ ಅತ್ಯಂತ ಸೂಕ್ತ ನಿರ್ದೇಶಕ ಎಂದು ಹೇಳುತ್ತಾನೆ. ಅದು ಹೇಗೆ ಅಂತ ಕೇಳಿದಾಗ ತಾನು ಅಲ್ಲಿಯವರೆಗೆ ಯಾರಿಗೂ ಹೇಳಿರದ ಖಾಸಗಿ ರಹಸ್ಯವನ್ನು ಬಯಲು ಮಾಡುತ್ತಾನೆ. ಅದೇನೆಂದರೆ ತನಗೆ ಕೂಡ ಹೆಂಗಸರ ಉಡುಪು ಧರಿಸುವ ಖಯಾಲಿ ಇದೆ, ತನ್ನ ಅನುಭವದಿಂದ ಚಿತ್ರಕ್ಕೆ ನೈಜತೆ ತರಲು ಸಹಾಯವಾಗುತ್ತದೆ ಎಂದು ಹೇಳುತ್ತಾನೆ. ನಿರ್ಮಾಪಕ ಇದನ್ನು ನಂಬದಿದ್ದಾಗ ತಾನು ವಿಶ್ವ ಮಹಾಯುದ್ಧದಲ್ಲಿ ಭಾಗಿಯಾಗಿದ್ದಾಗಲೂ ಹೀಗೆ ಧರಿಸಿದ್ದೆ, ನನಗೆ ತುಂಬಾ ಭಯ ಇದ್ದದ್ದು ನಾನು ಯುದ್ಧದಲ್ಲಿ ಸತ್ತು ಹೋದರೆ ಅಂತ ಅಲ್ಲ, ನಾನು ಅಕಸ್ಮಾತ್ ಗಾಯಗೊಂಡು ಶುಶ್ರೂಷೆ ಮಾಡುವವರಿಗೆ ನನ್ನ ಗುಟ್ಟು ಗೊತ್ತಾಗಿ ಹೋದರೆ ಅಂತ ವಿವರಿಸುತ್ತಾನೆ. ನಿರ್ಮಾಪಕ ಕನ್ವಿನ್ಸ್ ಆಗಿ ಇವನಿಗೆ ಚಾನ್ಸ್ ಕೊಡುತ್ತಾನೆ. ಆದರೆ ಚಿತ್ರ ಫ್ಲಾಪ್ ಆಗುತ್ತದೆ. ಆದರೆ ನಿರ್ದೇಶನ ಮಾಡುವ ಉತ್ಸಾಹ, ಸಿನಿಮಾದೆಡೆಗಿನ ಪ್ರೀತಿ ಸ್ವಲ್ಪವೂ ಕಮ್ಮಿ ಆಗಿರೋಲ್ಲ.
ಚಿತ್ರದ ಅತ್ಯಂತ ಇಷ್ಟವಾಗುವ ಭಾಗ ಎಂದರೆ ಎಡ್ ಮತ್ತು ಬೆಲಾ ಲುಗೊಸಿ ಸ್ನೇಹ. ಬೆಲಾ ಲುಗೊಸಿ ಹಳೇ ಸಿನಿಮಾಗಳಲ್ಲಿ ಡ್ರಾಕುಲಾ ಪಾತ್ರಗಳಿಂದ ಪ್ರಸಿದ್ಧನಾಗಿದ್ದು ಈಗ ಬೇಡಿಕೆ ಕಳೆದುಕೊಂಡಿರುವ ಹಳೆಯ ನಟ. ಖಿನ್ನತೆಯಿಂದ ಕುಡಿತ ಹಾಗು ಮಾದಕ ವಸ್ತುಗಳ ಸೇವನೆಯಲ್ಲಿ ಕಳೆದು ಹೋಗಿದ್ದ ಬೇಲಾಗೆ ಎಡ್ ಗೆಳೆತನ ಸಂತಸವನ್ನು ತರುತ್ತದೆ. ಒಬ್ಬ ಎಲ್ಲರಿಂದಲೂ ಹೀಯಾಳಿಸಲ್ಪಡುವ ನಿರ್ದೇಶಕ, ಇನ್ನೊಬ್ಬ ಯಾರಿಗೂ ಬೇಡವಾದ ಹಳೇ ನಟ – ಎಂಥಾ ಜೋಡಿ! ಬೆಲಾಗೆ ತನ್ನ ಬಗ್ಗೆ ಕೇರ್ ಮಾಡುವ, ತನ್ನ ಮಾತುಗಳನ್ನು ಆಲಿಸುವ ಗೆಳೆಯ ಸಿಕ್ತಾನೆ, ಎಡ್ ಗೆ ತನ್ನ ಚಿತ್ರಕ್ಕೆ ಒಬ್ಬ ಸ್ಟಾರ್! ಮಾಂಸದ ಪ್ಯಾಕಿಂಗ್ ಉದ್ದಿಮೆದಾರ ಒಬ್ಬ ಎಡ್ ನ ಮುಂದಿನ ಚಿತ್ರ “ಬ್ರೈಡ್ ಆಫ್ ದಿ ಮಾನ್ಸ್ಟರ್” ಚಿತ್ರ ನಿರ್ಮಿಸಲು ಮುಂದೆ ಬರುತ್ತಾನೆ – ಅವನ ಮಗ ಹೀರೋ. ಜೊತೆಗೆ ಇದೇ ಬೆಲಾ, ಸ್ವೀಡಿಷ್ ಕುಸ್ತಿಪಟು ಟಾರ್ ಜಾನ್ಸನ್, ವ್ಯಾಮ್ಪೈರ ಹೀಗೆ ಯಾರ್ಯಾರನ್ನೋ ಹಾಕೊಂಡು ಚಿತ್ರ ತೆಗೆದೇ ಬಿಡ್ತಾನೆ. ನೀವು ಊಹಿಸಿದಂತೆ ಚಿತ್ರ ಮತ್ತೆ ತೋಪು, ಥೀಯೇಟರ್ ಲಿ ಇವನನ್ನು ನೋಡಿದ್ದ ಜನ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ. ಇದೇ ಖಿನ್ನತೆಯಲ್ಲಿ ಬೆಲಾ ಸಾಯುತ್ತಾನೆ.
ಅದೇ ವೇಳೆಗೆ ಎಡ್ ಗೆ ಕ್ಯಾಥಿಯ ಪರಿಚಯ ಆಗುತ್ತದೆ. ಆಕೆ ಇವನನ್ನು ಇವನೆಲ್ಲಾ ವಿಲಕ್ಷಣಗಳ ಸಮೇತ ಒಪ್ಪಿ ಪ್ರೀತಿಸುತ್ತಾಳೆ. ಅದೇ ಸಮಯದಲ್ಲಿ ಎಡ್ ರೆನಾಲ್ಡ್ಸ್ ಎಂಬ ಚರ್ಚ್ ಲೀಡರ್ ಗೆ ತನ್ನ ಚಿತ್ರ ನಿರ್ಮಿಸುವಂತೆ ಕನ್ವಿನ್ಸ್ ಮಾಡ್ತಾನೆ. ಈ ಚಿತ್ರದಿಂದ ತುಂಬಾ ಲಾಭ ಮಾಡಿ ಅದರಿಂದ ನಿಮ್ಮ ಧಾರ್ಮಿಕ ಚಿತ್ರ “12 ಅಪೋಸ್ಲ್ಸ್” ತೆಗಿಬೋದು ಅಂತ ನಂಬಿಸ್ತಾನೆ. “ಪ್ಲಾನ್ 9 ಫ್ರಮ್ ಔಟರ್ ಸ್ಪೇಸ್” ಚಿತ್ರದ ಚಿತ್ರೀಕರಣದ ವೇಳೆ ರೆನಾಲ್ಡ್ಸ್ ಜೊತೆ ಭಿನ್ನಾಭಿಪ್ರಾಯ ಉಂಟಾಗಿ ಸೆಟ್ ಇಂದ ಹೊರನಡಿತಾನೆ.
ಈ ಬೇಜಾರಿನಲ್ಲಿ ಬಾರ್ ಒಂದಕ್ಕೆ ಹೋದಾಗ ಅಲ್ಲಿ ತನ್ನ ನೆಚ್ಚಿನ ನಿರ್ದೇಶಕ ಆರ್ಸನ್ ವೆಲ್ಸ್ ಸಿಗುತ್ತಾನೆ. ಆರ್ಸನ್ ವಿಶ್ವವಿಖ್ಯಾತ ನಿರ್ದೇಶಕ, ತನ್ನ ಇಪ್ಪತ್ತಾರನೇ ವಯಸ್ಸಿನಲ್ಲೇ “ಸಿಟಿಜನ್ ಕೇನ್” ಅಂತಹ ಮಹಾನ್ ಚಿತ್ರ ತೆಗೆದ ಪ್ರತಿಭೆ. ಪ್ರತಿಭೆ, ಸಾಧನೆ, ಕಲಾತ್ಮಕತೆ ಎಲ್ಲಾದರಲ್ಲೂ ಎಡ್ ಗೆ ತದ್ವಿರುದ್ಧ, ಆದರೂ ಇಬ್ಬರ ಅನುಭವಗಳೂ ಒಂದೇ – ತಮ್ಮ ಐಡಿಯಾ ಬಗ್ಗೆ ನಂಬಿಕೆ ತೋರದ ಸಿನಿಮಾ ಮಂದಿ, ಮೂಗು ತೂರಿಸುವ ನಿರ್ಮಾಪಕರು, ಕಲಾವಿದರ ಆಯ್ಕೆಯಲ್ಲಿ ಸ್ವಾತಂತ್ರ್ಯ ಸಿಗದಿರುವುದು ಹೀಗೆ. ಕಡೆಗೆ ಆರ್ಸನ್ ಮುತ್ತಿನಂತಹ ಮಾತು ಹೇಳುತ್ತಾನೆ – “ನೀನು ಬೇರೆಯವರ ಕನಸುಗಳನ್ನು ನನಸು ಮಾಡೋಕೆ ಅಂತ ಹುಟ್ಟಿಲ್ಲ, ನಮ್ಮ ಕನಸುಗಳಿಗೋಸ್ಕರ ಹೊಡೆದಾಡೋದು ನಿಜವಾಗ್ಲೂ ವರ್ತ್ ಇಟ್” ಈ ಮಾತುಗಳಿಂದ ಉತ್ತೇಜಿತನಾಗಿ ಎಡ್ “ಪ್ಲಾನ್ 9” ಅನ್ನು ತನಗೆ ಬೇಕಾದ ರೀತಿಯಲ್ಲಿ ತೆಗೆಯುತ್ತಾನೆ! ಇದು “ಸಾರ್ವಕಾಲಿಕ ಕೆಟ್ಟ ಚಿತ್ರ” ಅಂತ ಆಗಿದ್ದು ಬೇರೆ ಮಾತು!
ಪ್ರಪಂಚದಲ್ಲಿ ಒಂದು ಪರ್ಸೆಂಟ್ ಮಾತ್ರ ಏನಾದರೂ “ಮಾಡುವ” ಜನ. ನಾವೆಲ್ಲರೂ ತೊಂಭತ್ತೊಂಭತ್ತು ಪರ್ಸೆಂಟ್ ಅಲ್ಲಿ ಇರುವವರು. ನಾವು ಏನೂ ಮಾಡದಿದ್ದರೂ ಬೇರೆಯವರ ಟೀಕೆ ಮಾಡುವುದರಲ್ಲಿ, ತಪ್ಪು ಕಂಡುಹಿಡಿಯುವುದರಲ್ಲಿ, ಖಂಡಿಸುವುದರಲ್ಲಿ ನಿಸ್ಸೀಮರು. ತೊಂಭತ್ತೊಂಭತ್ತು ಪರ್ಸೆಂಟ್ ಅಲ್ಲಿ ನಾವೇ ಉತ್ತಮರು ಎಂದು ಬೀಗುವ ನಾವುಗಳು ಒಂದು ಪರ್ಸೆಂಟ್ ನ ತಳದಲ್ಲಿರುವವರಿಗಿಂತ ಕಮ್ಮಿನೇ ಆಲ್ವಾ? ಎಡ್ ನ ಸಿನಿಮಾ ಎಡೆಗಿನ ಪ್ರೀತಿ, ತನ್ನ ಕನ್ನಸ್ಸನ್ನು ಸಾಕಾರಗೊಲಿಸಬೇಕೆಂಬ ಅದಮ್ಯ ಉತ್ಸಾಹ, ತನ್ನ ಸುತ್ತಮುತ್ತಲಿನ ಜನಗಳನ್ನೂ ಹುರುದುಂಬಿಸುವ ಆ ಹುಮ್ಮಸ್ಸು – ನಾವು ಕಲಿಯಬಹುದಾದ್ದು ಎಷ್ಟೊಂದು ಇದೆ ಆಲ್ವಾ?
–ವಾಸುಕಿ ರಾಘವನ್
ನಮ್ಮ ಥ್ರಿಲ್ಲರ್ ಮಂಜು ಥರದವನು ಅನ್ಸುತ್ತೆ!
ಹೌದು! ಇವನು ನಮ್ಮ ಸಾಯಿಕುಮಾರ್, ಥ್ರಿಲರ್ ಮಂಜು, ಅರುಣ್ ಪಾಂಡ್ಯನ್ ಇವರೆಲ್ಲರ ತಾತ! 🙂
ಚೆಂದದ ಬರಹ ಸಹೋದರ. ಒಬ್ಬ ಹೊಸ ವ್ಯಕ್ತಿಯ ಪರಿಚಯ ನನಗಾಯಿತು.
ಧನ್ಯವಾದಗಳು. ನಿಮಗೆ ಇಷ್ಟ ಆಯಿತೆಂದು ತಿಳಿದು ಖುಷಿಯಾಯ್ತು!
ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಲೇಖನ ತಾನಾಗಿಯೇ ಓದಿಸಿಕೊಂಡು ಹೋಯಿತು ಅಂದರೆ ಅತಿಶಯೋಕ್ತಿ ಅಲ್ಲ.
ಧನ್ಯವಾದಗಳು.
ಚಿತ್ರ ನೋಡಿದಾಗಲೆಲ್ಲ ನಗು ಉಕ್ಕಿ ಉಕ್ಕಿ ಬರುತ್ತದೆ. ನಗೆಪಾಟಲೀ ಎಡ್ ವುಡ್. ಅ೦ದ ಹಾಗೆ ಪ್ಲಾನ್ 9 ಚಿತ್ರ ಕಲ್ಟ್ ಫೇಮಸ್ಸು. ಎಷ್ಟು ಕೆಟ್ಟದಿರಬಹುದೆ೦ಬ ಕೆಟ್ಟ ಕುತೂಹಲ ಇದೆ. ಸಮಯ ಸಿಕ್ಕಾಗ ಟೊರೆ೦ಟ್ ಇಳಿಸಿ ನೋಡಬೇಕು. ನಿಮ್ಮದು ಒಳ್ಳೆಯ ಕೆಲಸ