ನನ್ನ ಒಲವೆ ಹೇಳೇ ಚೆಲುವೆ ಪ್ರೀತಿಯೊಂದೆ ಗೆಲ್ಲದೇ
ನಾನು ನೀನು ಕೂಡಿ ಕಳೆದ ಬದುಕೆ ನಮ್ಮ ಕಾಯದೇ
ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉಂಟೆ ಬಾಳಲಿ
ಕೊಟ್ಟದೆಷ್ಟೋ ಪಡೆದದೆಷ್ಟೋ ನಮ್ಮ ನಂಟೆ ಹೇಳಲಿ
ಜಯತೀರ್ಥ ಎಂಬುವರ ಕವಿವಾಣಿಯನ್ನು ನಾನು ಡೈರಿಯಲ್ಲಿ ಬರೆದಂದಿನಿಂದ ಅದೆಷ್ಟು ಬಾರಿ ಓದುತ್ತಿರುತ್ತೇನೋ ನನಗೆ ತಿಳಿಯದು. ಬೆಟ್ಟದಷ್ಟು ಇಷ್ಟಪಟ್ಟ ಈ ಸಾಲುಗಳಿಂದ ನನ್ನ ಹೃದಯಕ್ಕೆ ಏನೋ ಅರಿವಾಗದ ಆಪ್ತತೆ ಮತ್ತು ಕಕ್ಕುಲತೆ. ಇದಕ್ಕೊಂದು ಬಲವಾದ ಕಾರಣವಿದೆ. ನನ್ನ ಮದುವೆಯ ಆಮಂತ್ರಣ ಪತ್ರಿಕೆಗೆ ಪತ್ರಕರ್ತ ಗೆಳೆಯರೊಬ್ಬರಿಂದ ಸಲಹೆ ಮತ್ತು ಕವಿವಾಣಿಯನ್ನು ಕೇಳಿದಾಗ ಸಿಕ್ಕಿದ ಸಾಲುಗಳಿವು. ಇವೀಗ ನನಗೆ ಕೇವಲ ಸಾಲುಗಳು ಮಾತ್ರವಲ್ಲ ಜೀವಬಂಧನದ ನೆರಳಾಗಿವೆ. ಕಣ್ಣುರೆಪ್ಪೆ ಪೋಷಿಸಿದ ಪ್ರೀತಿಯನ್ನು ನಿಯತ್ತಿನಿಂದ ಪೋಣಿಸುತ್ತಾಹೋಗಲು ಈ ಸಾಲುಗಳು ಜೀವಜಲವಾಗಿದೆ. ಆಮಂತ್ರಣ ಪತ್ರಿಕೆಗೆ ಇಂತಹ ಅಧ್ಬುತ ಸಾಲುಗಳು ಬಿದ್ದ ಮೇಲೆ ಕೊಟ್ಟದೆಷ್ಟೋ ಪಡೆದದೆಷ್ಟೋ ನಮ್ಮ ನಂಟು ಹೇಳಬೇಕು ತಾನೆ? ನನ್ನ ಗೆಳತಿಯರ ಮದುವೆಗೆ ಉಡುಗೊರೆ ಕೊಡುವಾಗ ಶುಭಾಶಯ ಕೋರಿ ಈ ರೀತಿಯ ಸಾಲುಗಳನ್ನು ಬರೆಯುವುದು ನನಗೆ ಬಲು ಸಂತಸದ ವಿಚಾರ. ಉಡುಗೊರೆಗಿಂತ ಇಂತಹ ಸಾಲುಗಳನ್ನು ಮೆಚ್ಚಿದವರೆ ಹೆಚ್ಚು. ನನ್ನ ಈ ರೀತಿಯ ಹಾರೈಕೆಯಿಂದ ಅವರ ಪ್ರೀತಿ ಬೆಚ್ಚಗಿರುತ್ತೆ ಎಂಬ ಹುಚ್ಚು ಹುರುಪು. ಮದುವೆಯಾದ ಮೇಲೆ ಮುಂಚಿನಂತಹ ಪ್ರೀತಿ ಇರಲ್ಲ ಕಣೇ ಅಥವ ಪ್ರೀತಿಗೆ ಸಮಯವೇ ಇಲ್ಲ ಕಣೇ ಎನ್ನುವ ಗೆಳತಿಯರ ಮಾತಿಗೆ ನಾನು ತುಟಿಯಂಚಲ್ಲಿ ಸಣ್ಣಗೆ ನಗುತ್ತೇನೆ! ಇರುತ್ತೆ ಕಣೇ ಎಂದು ಅವರಿಗೆ ಕೇಳಿಸದಂತೆ ನಾನು ಹೇಳುತ್ತೇನೆ. ಮೌನದಲ್ಲಿ ಮಾತಾಗುವ ಪಕ್ಷಿ ಸಂಕುಲಕ್ಕೆ ನನ್ನ ಪ್ರೀತಿ ಅರುಹುತ್ತೇನೆ!ಯಾಕೆಂದರೆ ಈ ಗೆಳತಿಯರು ಮದುವೆಯಾಚೆಗಿನ ನಿಷ್ಕಲ್ಮಶ ಪ್ರೀತಿನ ನಂಬಲ್ಲ ನೋಡಿ..! ಮನಸು ಮನಸುಗಳ ಪಿಸುಮಾತಿಗೆ ವಿವಾಹ ಬಂಧನ ಅತ್ಯುತ್ತಮ ವೇದಿಕೆ ಎಂಬುದನ್ನು ಯಾರ್‍ಜೊತೆ ಹಂಚಿಕೊಳ್ಳಲಿ?
ಬೆಳಗಾಗೆದ್ದು ಉರಿಸಿದ ಬೆಂಕಿಯೊಂದಿಗೆ ಸುಟ್ಟುಹೋಗುವ ಕನಸುಗಳಿಂದಾಗಿ ನಿಮ್ಮ ಪ್ರೀತಿ ಎಲ್ಲಿ ಉಳಿಯುತ್ತೆ?ಮಿಲನ ಮಹೋತ್ಸವದಲ್ಲೇ ಕಣ್ಬೆಳಕು ತೋರಿ ಬೆಳಗಾದರೆ ಕತ್ತಲಾಗುವ ಹೊಂಗಿರಣಗಳ ನಡುವೆ ಪ್ರೇಮ ಇರುತ್ತಾ? ಎಂದು ಕಿಚಾಯಿಸುವ ಗೆಳತಿಗೆ ಉಸಿರಿನಲ್ಲೇ ನಕ್ಕು ಹಗುರಾಗುತ್ತೇನೆ. ಗಂಡನ ಕಾಯುವಿಕೆಯೊಂದಿಗೆ ಆತನ ನವಿರು ಬೆವರನ್ನು ಆಸ್ವಾದಿಸುವ ನನ್ನೆದೆಯಲ್ಲಿ ಪ್ರೀತಿ ಬೆಚ್ಚಗೆ ಮನೆಮಾಡಿದ್ದನ್ನು ವಿವಾಹದಾಚೆಗಿನ ಅಚ್ಚ ಪ್ರೀತಿಯ ನಂಬದೆ ಇರೋ ನಿಮ್ಗೆಲ್ಲಾ ಹೇಗೆ ಹೇಳಲಿ? ಯಾವಗಲೂ ನೀರಿನಲ್ಲಿರುವ ಮೀನಿಗೆ ಬಾಯಾರಿಕೆ ಆಗುತ್ತಾ? ಅದು ನೀರು ಕುಡಿಯುತ್ತದೆಯೋ, ಇದಕ್ಕೆಲ್ಲಾ ಎಲ್ಲಿದೆ ಉತ್ತರ? ಇದ್ದರೆ ನಮ್ಮ ಪ್ರೀತಿಗು ಉತ್ತರ ಇದೆ ಅರ್ಥವು ಇದೆ! ಉಳಿಸಿದ ಸಮಯವನ್ನು ಅಕ್ಷರಗಳ ಸುಪ್ಪತ್ತಿಗೆಯಲ್ಲಿ ಕಳೆಯುವ ಜಾಯಮಾನದ ನನಗೆ ಪ್ರೀತಿಸಲು ಬಿಡುವು ಬಿಗಡಾಯಿಸಿದೆ ಎಂದಾಗ ನಗುವ ನನ್ನ ಆತ್ಮಸಖಿಗೆ ಚಂದದ ಕಥೆಯನ್ನು ಕರೆ ಮಾಡಿ ತಿಳಿಸುತ್ತೇನೆ. ಎಳೆಎಳೆಯಾಗಿ ಮಳೆಯಂತೆ ತಂಪನ್ನೀಯುವ ನನ್ನ ಕಥನ ಕುಸುರಿಗೆ ಶರಣೆಂದು ಅಲ್ಲಿಂದಲೇ ಸೊಂಟಕ್ಕೆ ಚಿವುಟುತ್ತಾಳೆ! ಕಳೆದ ವಸಂತಗಳ ಚೆಲುವೆಲ್ಲಾ ಒಟ್ಟುಗೂಡಿ ಈಗ ಮನಸೊಳಗೆ ಮುನಿಸುಗಳ ಹಸಿ ಪ್ರೀತಿ ಎಂದರೆ…..!? ನಾನು ಸೇರಿದಂತೆ, ನನ್ನೊಡಲ ಮಿಹಿರ ಜತನದಿಂದ ಕಾಪಿಟ್ಟ ಲಕ್ಷಾಂತರ ಪದಗಳು ಭಾವಗೀತೆಯಾಗಿ ಹಾಡಿದ ಮಳೆಬಿಲ್ಲು ಹಿಂದಿನಂತೆ ಇಂದಿಗು ಮಿಂಚುತ್ತಿದೆ. ಮುಂದೆಯು ಬಿಕ್ಕಟ್ಟುಗಳ ನೆಪಗಳನ್ನು ಬದಿಗಿರಿಸಿ ಬಿಸಿ ಪ್ರೀತಿಯನ್ನು ಆರಲು ಬಿಡದಂತೆ ಜನ್ಮಾಂತರಕ್ಕೆ ಕೈ ಹಿಡಿದು ನಡೆಸುತ್ತೇನೆ ಪ್ರಾಮಿಸ್ ಗೆಳತಿ….
ಏಖಮುಖ ನಿರ್ಧಾರಗಳನ್ನು ಸೆರೆಹಿಡಿಯುವ ನಮ್ಮಿಬ್ಬರ ಒಂದೇ ತೆರನಾದ ಆಲೋಚನೆಗಳು ಈಗ ನಿನ್ನ ನಿಲುವುಗಳಲ್ಲಿ ಯಾಕೆ ವಿಮುಖವಾಗಿದೆ ಗೆಳತೀ? ವಿವಾಹ ಬಂಧನದ ಪ್ರೀತಿಗೆ ನೀವೆಲ್ಲಾ ಯಾಕೆ ರಾಜಿಯಾಗುವುದಿಲ್ಲ ಎಂಬುವುದು ನಿಗೂಢವಾಗಿದೆ. ನನ್ನದೆ ಕವನದ ಸಾಲೊಂದು ಹೇಳುವೆ ಕೇಳು "ತೊಡಗಿಸಿಕೊಂಡರದೆಷ್ಟು ಸಲೀಸು ನೋಡಿ! ನನ್ನಿರುವಿಕೆಗೆ ಕಾದಂತೆ ಈ ಅಡುಗೆ ಮನೆಯ ಸಂಧಿ, ಗೊಂದು, ಡಬ್ಬಗಳು ಪರಮಾಪ್ತವಾಯಿತೆನಗೆ/ ಸಾಸಿವೆ ಸಿಡಿದ ಪರಿಗು ಬೆಚ್ಚಿ ಬೀಳುವ ಕನಸುಗಳು ಸಾವರಿಸಿಕೊಂಡಾಗಿವೆ.” ನಿರ್ಜೀವ ಅಡುಗೆ ಮನೆಗೆ ಹೊಂದಿಕೊಂಡ ನಮಗೆ ಮತ್ತಿನ್ನೇನು ತೊಡಕು ಹೇಳು? ಕಾಯಾ, ವಾಚ , ಮನಸಾ ತೊಡಗಿಸಿಕೊಂಡರೆ ಗಂಡನ ಸಖ್ಯವೆ ಅಧ್ಬುತ ಅಲ್ವೇ? ಮೊನ್ನೆ ತಾನೆ ಸಿಲ್ಲಿ ಕಾರಣಕ್ಕೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಗೆಳತಿಗೆ ಹಲವು ರೀತಿಯಲ್ಲಿ ಹೇಳಿ ಸಮಜಾಯಿಷಿಕೆ ನೀಡಿದ್ದೇನೆ. ಬಿಡುವಿಲ್ಲದ ಕೆಲಸದ ನಡುವೆಯು ದಕ್ಕಿಸಿಕೊಂಡ ಪ್ರೀತಿಯನ್ನು ಉಳಿಸಿಕೊಂಡ ರೀತಿಯನ್ನು ಹೇಳಿದ ವೈಖರಿಗೆ ಆಕೆ ಡಿವೋರ್ಸ್ ಅರ್ಜಿಯನ್ನು ಹಿಂತೆಗೆಯುವಳೆಂದು ನಂಬಿದ್ದೇನೆ. ಕಾರಣವೆ ಇಲ್ಲದೆ ಪ್ರೀತಿ ಶುರುವಿಟ್ಟು ಹಲವು ಕಾರಣ ನೀಡಿ ಅದೇ ಪ್ರೀತಿಯನ್ನು ದಿಕ್ಕರಿಸುವುದು ಪ್ರಜ್ಣಾವಂತ ಮನುಜನ ಲಕ್ಷಣ ಖಂಡಿತ ಅಲ್ಲ. ಪ್ರಜ್ಣಾವಂತ ನಾಗರಿಕನ ನೆಲೆಯಲ್ಲಿ ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳುವುದು ಬಹು ದೊಡ್ಡ ಕರ್ತವ್ಯ. ಉದ್ಯೋಗದೊಂದಿಗೆ ಈ ದಿಶೆಯಲ್ಲು ಭಡ್ತಿ ಹೊಂದುತ್ತಾ ಹೋಗುವುದೇ ನಿಜವಾದ ಜೀವನ ಭಾಂಧವ್ಯ ಗೆಳತಿ.
******