ಎಂದೂ ಬಾಡದ ಮಂದಾರ: ಸುಂದರಿ ಡಿ,

ಮುಳುಗಿ ಉಸಿರುಕಟ್ಟುವ ಅತಿಯಲಿ ಬದುಕಲೋಸುಗವೇ ನಗೆಗಡಲ ಆಳದಿಂದ ಮೇಲೆದ್ದು ಬಂದು ಅದರಲಿ ತೇಲಿದ ಆ ದಿನಗಳ ಅದೆಂತು ಮರೆಯಲು ಸಾಧ್ಯ! ಆ ಸವಿದಿನಗಳ ಮರೆಯುವುದಾದರೂ ಏತಕ್ಕೇ.. ಮರೆಯಬಾರದು. ಏಕೆಂದರವು ಲಾಡುವಿನಲಿ ಸಿಗುವ ಕರ್ಬೂಜದ ಬೀಜಗಳಂತೆ, ಛಳಿಯಲಿ ಆಗ ತಾನೇ ಹದವಾಗಿ ಹುರಿದು ಬೆಲ್ಲದೊಡನೆ ಮೆಲ್ಲಲೆಂದೇ ಕೊಟ್ಟ ಕಡಲೇ ಬೀಜದಂತೆ, ಬಿರಬಿಸಿಲ ದಾರಿಯಲಿ ಹೊಂಗೆಯ ನೆರಳೊಂದು ಸಿಕ್ಕಂತೆ, ದಣಿದ ಜೀವಕೆ ನೀರುಮಜ್ಜಿಗೆಯ ನಿರಾಳವಾಗಿ ಕುಡಿಯಲು ಅವಕಾಶ ಸಿಕ್ಕಂತೆ ಇವುಗಳ ಅನುಭವಿಸದ ಭವಿ ಯಾರಿದ್ದಾರು!.

ಬಿದ್ದು ಬಿದ್ದು, ಎದ್ದು ಬಿದ್ದು ನಕ್ಕು ಸುಸ್ತಾದ ಕಾಲವದು… ಆ ನಗುವ ತೀವ್ರತೆಯ ತಡೆಯಲಾಗದೇ ಬಿದ್ದು ನಕ್ಕು ಮುಕ್ಕಾಗುತ್ತಿದ್ದೆವು ನಕ್ಕು ಮುಕ್ಕಾದರೂ ಆ ಸ್ಥಿತಿಗೆ ಒಂದು ಸೌಂದರ್ಯವಿತ್ತು. ಅದು ಸಹಜವಾಗಿಯೇ ಅರಳಿದ ಹೂವಿನಂತೆ, ತನ್ನ ಕರುಳಲೇ ಹದವಾಗಿ ಮಾಗಿದ ಹಣ್ಣಿನಂತೆ ಅದರ ರುಚಿಯೇ ಬೇರೆ ಬಿಡಿ.

ನಗುವಿಗೆ ಮತ್ತೊಂದು ಹೆಸರೇ ನಾವಾಗಿ ಪಂಚಕನ್ಯೆಯರೆಂದೇ ಕರೆಸಿಕೊಂಡು ಓದುವುದರಲ್ಲೆಂದೂ ಹಿಂದೆ ಬೀಳದ, ನಗುವಿನಲೆಂದೂ ಮುಂದಿರುವ ಮೊದಲ ಬೆಂಚಿನ ಗೆಳತಿಯರಾದ ನಾವು ಹೆಚ್ಚು ಬೈಸಿಕೊಂಢಿದ್ದು, ಮತ್ತು ಹಲವರ ಕಣ್ಣಲ್ಲಿ ಗುರುತಿಸಿಕೊಂಡಿದ್ದೂ ಕೂಡಾ ಸದಾ ನಗುವ ಕಾರಣಕ್ಕಾಗಿಯೇ ಹೌದು. ಆದರೆ ಅತೀ ಹೆಚ್ಚು ಅಂಕ ಗಳಿಸುವ ಗುಂಪು ಸದಾಕಾಲ ನಮ್ಮದಾಗಿರುತ್ತಿತ್ತು ಅದರಲ್ಲೂ ನನ್ನದೇ ಆಗಿರಬೇಕೆಂಬ ತುಡಿತ ಪಂಚತಾರೆಯರದೂ ಆಗಿದ್ದ ಕಾರಣ ನಾವು ನಗುವಿನಲಿ ಎಬ್ಬಿಸಿದ್ದ ಮತ್ತು ಎಬ್ಬಿಸುತ್ತಲೇ ಇದ್ದ ಧೂಳನ್ನು ಸಹಿಸದ ಅಸಹನೆಯ ಬೇನೆ ತಣ್ಣಗಾಗುತ್ತಿದ್ದುದೂ ಆ ಓದುವ ಕಾರಣಕ್ಕಾಗಿಯೇ ಎಂಬುದು ಸತ್ಯಸ್ಯ ಸತ್ಯ.

ನಾವು ಬಸ್ಸಿನಲಿ ಕಾಲೇಜಿಗೆ ಹೋಗುತ್ತಿದ್ದುದೇ ವಿರಳ. ಇನ್ನು ವಾಪಸ್ ಮನೆಗೆ ಬರುವಾಗಲಂತೂ ಕೇಳುವುದೇ ಬೇಡ! ನಾವು ಬರುತ್ತಿದ್ದ, ಹೋಗುತ್ತಿದ್ದ ಬಸ್ಸು ಖಾಸಗಿ ಬಸ್ಸು. ಸರ್ಕಾರಕ್ಕೂ ನಮಗೂ ಆಗ ಆಗಿಬರುತ್ತಿರಲಿಲ್ಲ. ಹಾಗಾಗಿ ನಾವು ಅಘೋಷಿತವಾಗಿಯೇ ಆ ಕಡೆಗೆ ಮುಖ ಮಾಡಲಿಲ್ಲ. ನಾವು ನಿಂತ ಕಾಲ್ತುದಿಗೆ ಸರ್ಕಾರಿ ಬಸ್ಸು ಬಂದು ನಿಂತರೂ ನಾವು ಬೇರೆಡೆಗೆ ಮುಖಮಾಡಿ ಮೌನವಾಗಿಯೇ ಆ ಬಸ್ಸು ಬ್ರಿಟೀಷರದೆಂಬಂತೆ ಧಿಕ್ಕರಿಸುತ್ತಿದ್ದೆವು. ನಾವು ಏರುತ್ತಿದ್ದ ಖಾಸಗಿ ಬಸ್ಸು. ಹಳೆಯದಾದರೂ ʼನವದುರ್ಗʼ ಎಂದೇ ಕರೆಸಿಕೊಂಡು, ಹಣೆಯಲೂ ಅದೇ ಹೆಸರನ್ನು ಅಂಟಿಸಿಕೊಂಡು ಮಕ್ಕಳು ಬರೆದ ಬಸ್ಸಿನ ಚಿತ್ರದಂತೆ ಕಿಟಕಿಯಾಕೃತಿಯನ್ನು ಮಾತ್ರವೇ ಇರಿಸಿಕೊಂಡು ಕಿಟಕಿಗಳ ಮುಚ್ಚಲು ಗಾಜೆಂಬ ಗೋಜಿನ ಗೊಡವೆಗೆ ತನ್ನನ್ನು ಎಂದೂ ಒಗ್ಗಿಸಿಕೊಳ್ಳದೆ ತನ್ನ ಮುಖಭಾಗಕ್ಕಷ್ಟೇ ಗೀಚು ಗೀಚಾದ ಗಾಜೆಂಬ ಕನ್ನಡಕಧಾರಿಯಾಗಿ ವಾಯುಪುತ್ರನಂತೆ ಬಸ್ಸಿನ ಒಳಗೂ ಹೊರಗೂ ಸುಯ್ಯೆಂದು ಬೀಸುವ ಗಾಳಿಯಲೇ ತೇಲಿ ನವದುರ್ಗೆಯರ ಶಕ್ತಿಪಡೆದು ಧೂಳೆಬ್ಬಿಸಿ ಬರುತ್ತಿದ್ದ ಬಸ್ಸಿಗೆ ನಾವು ಕ್ರಮಿಸಬೇಕಿದ್ದ ಆರು ಕಿಲೋಮೀಟರ್ ತಲಪಲು ಅದೆಷ್ಟು ಸಮಯ ಬೇಕು ಹೇಳಿ!

ಬಸ್ಸು ಊರಿನ ತುದಿ ತಲುಪಿದರೆ ಅಲ್ಲಿಂದ ಊರಿಗೆ ನಡೆದು ಹೋಗಲು ಹತ್ತು ನಿಮಿಷ ಸಾಕಿತ್ತು ಆದರೆ ನಾವು ಲೋಕದ ಉಸಾಬರಿಯ ಬಗೆಗೆ ಮಾತಾಡಿ, ಚಿಂತಿಸಿ, ನಕ್ಕು ನಲಿಯಲು ಆ ಸಮಯ ಸಾಲುತ್ತಲೇ ಇರಲಿಲ್ಲ. ಹಾಗಾಗಿ ಆರು ಕಿಲೋಮೀಟರ್ ನಡೆದೇ ಬರುತ್ತಿದ್ದೆವು. ಆ ಕಾಲ್ನಡಿಗೆ ಇಂದಿನ ರಾಜಕಾರಣಿಗಳ ನಡಿಗೆಯಂತಲ್ಲ ಬದಲಿಗೆ ಬರೋಬ್ಬರಿ ಐದು ವರ್ಷಗಳ ನಿರಂತರ ಕಾಲ್ನಡಿಗೆ. ಬಸ್ಸು ಏರಲು ಪರೀಕ್ಷೆಯೇ ಬರಬೇಕು, ಇಲ್ಲವೇ ನಮ್ಮಲ್ಲಿ ಯಾರಿಗಾದರೂ ಆರೋಗ್ಯ ಕೈಕೊಡಬೇಕು. ಇಲ್ಲವೇ ಕಾಲೇಜಿಗೆ ಎಲ್ಲರನ್ನು ಹೊರಡಿಸಿಕೊಂಡು ಹೋಗುವಲ್ಲಿ ತಡವಾಗಬೇಕು. ಅಥವಾ ಕಾಲೇಜಿನಲಿ ತಡವಾಗಿರಬೇಕು. ಇವಾವುವೂ ಆಗದ ಹೊರತು ನಾವು ನಡಿಗೆಯ ಬಿಟ್ಟವರಲ್ಲ. ಆದರೆ ಆ ಐದು ವರ್ಷಗಳಲಿ ತುಂಬಾ ಕಡಿಮೆ ಇದ್ದ ಪಾಂಡವಪುರ ಮತ್ತು ನಮ್ಮೂರು ದೇವೇಗೋಡನಕೊಪ್ಪಲಿನ ದಾರಿ ಮಾನಸಗಂಗೋತ್ರಿಯಲಿ ಎಂ.ಎ ಮುಗಿಸಿ ಬಿ.ಇಡಿ ಪದವಿಯ ಸಲುವಾಗಿ ಪಾಂಡವಪುರ ವಿಜಯ ಕಾಲೇಜಿಗೇ ಮತ್ತೆ ಸೇರುವುದರೊಳಗಾಗಿ ದಾರಿಯೂ ಬದಲಾಗದೆ, ರಸ್ತೆಯ ದಿಕ್ಕೂ ಬದಲಾಗದೇ ಇದ್ದರೂ ನಮ್ಮೂರಿನಿಂದ ಪಾಂಡವಪುರ ಬಹಳ ದೂರವೇ ಆಗಿತ್ತು. ಅದಾರ ಕೈಚಳಕವೋ ನಾಕಾಣೆ! ಹಾಗಾಗಿಯೇ ನಾನು ಮತ್ತೆ ಆ ದಾರಿಯಲಿ ನಡೆಯಲಾಗಲಿಲ್ಲ. ಕಾರಣ ಪಂಚಕನ್ಯೆಯರ ಗುಂಪಲಿ ನಾನೊಬ್ಬಳೇ ಬಿ.ಇಡಿ ಪದವಿಗೆ ಸೇರಿದ ಮೇಲೆ ಅಕ್ಷರಶಃ ಹಿಂಡಗಲಿದ ಆನೆಯಂತಾದುದರಲಿ ಎರಡು ಮಾತಿಲ್ಲ. ಏಕೆಂದರೆ ಒಂದನೇ ತರಗತಿಯಿಂದ ಬಿ.ಎ ಪೂರೈಸುವವರೆಗೆ ಜೊತೆಗಿದ್ದ ಪಂಚಕನ್ಯೆಯರು ನಾವು. ಹೀಗಿರುವಾಗ ಮೈಲಿಗಳಲ್ಲದಿದ್ದರೂ ಒಂಟಿತನದ ಕಾರಣದಿಂದಾಗಿ ದಾರಿ ದೂರಾದುದರಲಿ ಅಚ್ಚರಿಯಿಲ್ಲ.

ಕಾಲೇಜಿಗೆ ಹೋಗುವ – ಬರುವ ದಾರಿಯೋ ಈಗಿನಂತೆ ದ್ವಿಪಥ ರಸ್ತೆಯೋ ಅಥವಾ ಚತುಷ್ಪಥ ರಸ್ತೆಯೋ ಆಗಿರದೆ ಒಂದು ಬಸ್ಸು ಬರುತ್ತಿದ್ದರೆ ಪಕ್ಕದಲ್ಲಿ ಮತ್ತೊಂದು ಬಸ್ಸು ಹೋಗಲು ಅಸಹನೀಯವೇ ಆಗಿ ಪರಸ್ಪರ ಬಾಗಿಕೊಂಡು ವಾಹನಗಳು ಹೋಗಬೇಕಾಗಿದ್ದ ಸ್ಥಿತಿ ಅಂದಿನದು. ಈ ಕಿರಿದಾದ ರೋಡಲಿ ನಾವು ಐದು ಮಂದಿ ಮತ್ತು ನನ್ನಕ್ಕ ಮಂಜುಳೆಯ ಗೆಳತಿಯರಿಬ್ಬರೂ ಸೇರಿ ಎಂಟುಜನ ಆ ರೋಡಿನಲಿ ಗಜಗಾಂಭೀರ್ಯ ನಡೆಗೂ ನಾಚಿಕೆಯಾಗುವಂತೆ ನಡೆದು ಬರುತ್ತಿದ್ದೆವು. ಇಬ್ಬಿಬ್ಬರು ಒಂದು ಸಾಲಲಿ ಹೋದರೆ ನಾಲ್ಕು ಸಾಲಾಗುತ್ತದೆ. ಆಗ ಮಾತಾಡುವ ಮಾತು, ತಮಾಷೆ ಉಳಿದ ಸಾಲುಗಳಿಗೆ ತಲುಪದೇ ಆಗುತ್ತಿದ್ದ ನಗೆನಷ್ಟಕ್ಕೆ ಹೆದರಿ ಬರಿಯ ಎರಡೇ ಸಾಲುಗಳಾಗಿ ಮಾಡಿಕೊಂಡು ಒಂದೊಂದು ಸಾಲಲಿ ನಾಲ್ಕು ಮಂದಿಯಂತೆ ನಡೆಯುತ್ತಿದ್ದ ಪರಿ ಹೇಗಿತ್ತೆಂದರೆ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಆನೆಗೇ ಮೊದಲ ಪ್ರಾಶಸ್ತ್ಯ ಅದು ಹೋದ ನಂತರವೇ ಹಿಂದಿದ್ದ ಉಳಿದವರು ಬರಲು ಸಾಧ್ಯ ಅಂಬಾರಿ ಹೊತ್ತ ಆನೆಯನೂ ಹಿಂದಿಕ್ಕಿ ಮುಂಬರಲು ಸಾಧ್ಯವಿಲ್ಲ ಹಾಗೆಯೇ ನಮ್ಮ ಹಿಂದೆ ಬರುವ ವಾಹನಗಳೂ ಅತೀ ಹೆಚ್ಚು ಹಾರನ್ ಬಳಸಿ ನಮ್ಮನ್ನು ಹಿಂದಿಕ್ಕಲು ಪ್ರಯತ್ನಿಸಿ ವಿಫಲವಾಗಿದ್ದೂ ಉಂಟು ಏಕೆಂದರೇ ಮಾತಾಡುತ್ತಲೇ ಅದಾವ ಮಾಯದಲೋ ನಾಲ್ಕರ ಎರಡು ಗುಂಪು ಒಂದೇ ಸಾಲಾಗಿ ಒಬ್ಬರ ಪಕ್ಕ ಒಬ್ಬರಂತೆ ಎಂಟೂ ಜನರು ನಡೆದು ಹೋಗುತ್ತಿದ್ದೆವು.

ಈ ನಮ್ಮ ನಡಿಗೆಯ ಪರಿಯ ಕಂಡು ಬೈಗುಳವೆಂಬ ಬಿರುದಾವಳಿಗಳ ದಯಪಾಲಿಸದವರೇ ಮಹಾಪಾಪಿಗಳು. ಸೈಕಲ್ ಸವಾರರು, ಸ್ಕೂಟರ್ ಸವಾರರು, ಆಗೊಮ್ಮೆ ಹೀಗೊಮ್ಮೆ ಹೋಗುತ್ತಿದ್ದ ಕಾರುಗಳ ಚಾಲಕರು, ಆಟೋ ಚಾಲಕರು, ಜಟಕಾ ಗಾಡಿಯವರು, ಬಸ್ಸಿನಲ್ಲಿ ಜೋರಾಗಿ ಹಾರನ್ ಮಾಡಿ ಹಿಂಬದಿಯ ಡೋರಿನಲಿ ನಿಂತ ಕಂಡಕ್ಟರ್ನ ಕೈಗಳೇ ಅಸಹನೆಯ ಚಿಹ್ನೆಯಂತಾಗಿ ಆ ಚಿಹ್ನೆಯೂ ಬಿರುದಾವಳಿಯ ಭಾಗವೇ ಆಗಿತ್ತು. ನನಗಿನ್ನೂ ನೆನಪಿದೆ ಒಮ್ಮೆ ಲಾರಿ ಚಾಲಕ ತನ್ನ ಲಾರಿಯನೇ ನಮ್ಮಿಂದ ಹೇಗೋ ನುಸುಳಿಕೊಂಡು ಬಂದು ಮುಂದೆ ನಿಲ್ಲಿಸಿ ನಮಗೆ ಮರ್ಯಾದಾ ಗೌರವಗಳನು ಮಾತಿನಲೇ ತೋರಿದ್ದೂ ಉಂಟು. ಹೀಗಿರುತ್ತಿತ್ತು ನಮ್ಮ ರಾಜ ನಡಿಗೆ. ಅಲ್ಲಲ್ಲ ಅದು ರಾಣಿಯರ ನಡಿಗೆ, ಯುವರಾಣಿಯರ ನಡಿಗೆ. ಆ ಕಾರಣಕ್ಕಾಗಿಯೇ ನನ್ನ ತಮ್ಮ ಮಧು ನೀವೆಲ್ಲಾ ನಡೆದು ಬರುವುದು ಹಿಂದೆಯಿಂದ ಕುಡಿದು ಚಿತ್ತಾಗಿ ಗಟ್ಟಿಹೆಜ್ಜೆಗಳನಿಡಲಾಗದೇ ತೂರಾಡುವ ಕುಡುಕರಂತಿರುತ್ತದೆ ಎಂದಿದ್ದು. ಎಲ್ಲಾ ಚಾಲಕರು, ಕಡೆಗೆ ಲಾರಿ ಚಾಲಕನೂ, ನನ್ನ ತಮ್ಮನೂ ಬೈದದ್ದೂ ನಮಗೆ ನಗುವಿಗೆ ವಸ್ತುವಾಗಿ ನಕ್ಕೆವೇ ಹೊರತು ಬೇರೇನೂ ಆಗಲಿಲ್ಲ. ಅದೆಂತಾ ವಿಶಾಲ ಹೃದಯಿಗಳು ನಾವು!!!! .

ಯಾರ ಯಾವ ಮಾತಿಗೂ ನಮ್ಮ ನಗುವೆಂಬ ಮಂದಾರವ ಬಾಡಿಸಲು ಆಗಲೇ ಇಲ್ಲ. ನಾವು ಹೀಗೆ ಸಾಲಾಗಿ ನಡೆದು ಹೋಗುವುದ ಕಂಡು ನಮ್ಮೂರಿನ ಹುಡುಗರು ಚಟಾಕು, ಪಾವು, ಅರ್ಧಸೇರು, ಮುಕ್ಕಾಲುಸೇರು, ಸೇರು ಎಂದು ಕರೆದು ರೇಗಿಸುತ್ತಿದ್ದ ಸಂಗತಿಯೂ ತಿಳಿಯಿತು. ಅದೂ ನಗೆಗೆ ವಸ್ತುವಾಯಿತೇ ಹೊರತು ಬೇಸರಕ್ಕೆ ಅದೊಂದು ಕಾರಣ ಎಂದು ಎಂದೂ ನಮಗೆ ಅನಿಸಲೇ ಇಲ್ಲ. ಏಕೆಂದರೇ ಕ್ರಮವಾಗಿ ವೇದಾವತಿ, ಸರಸ್ವತಿ, ಜ್ಯೋತಿ, ಸುಂದರಿ ಎಂಬ ಹೆಸರಿನ ನಾನು ಮತ್ತು ಲೋಲ ಈ ಐದೂ ಜನ ಆ ಅಳತೆಯ ಬಟ್ಟುಗಳಂತೆಯೇ ಇದ್ದೆವೆಂಬಲ್ಲಿ ಯಾವ ಸಂಶಯವೂ ಇಲ್ಲ. ನಮಗೆ ಆ ಎಲ್ಲಾ ಸಂಗತಿಗಳು ನಗುವಿಗೆ ವಸ್ತುವಾದವು ಅಷ್ಟೇ.

ನಮ್ಮ ನಗೆಯೇ ಅಸಹನೀಯವಾದವರು ನಮ್ಮೆದುರು ಸರಿದಾಗ ಪ್ರಯತ್ನಪೂರ್ವಕವಾಗಿ ನಮ್ಮ ಹಲ್ಲುಗಳ ಜಾಹೀರಾತನ್ನು ಕೆಲ ಸೆಕೆಂಡುಗಳ ಕಾಲ ನಿಲ್ಲಿಸಿರುತ್ತಿದ್ದೆವು. ಆದರೆ ಆ ವ್ಯಕ್ತಿ ಮುಂದೆ ಸರಿದ ಮರು ಕ಼್ಷಣವೇ ನಮ್ಮ ನಗು ಅದೆಷ್ಟು ಜೋರಾಗಿರುತ್ತಿತ್ತೆಂದರೇ ಕೆ.ಆರ್.ಎಸ್ ಡ್ಯಾಂ ನ ಬಾಗಿಲುಗಳನ್ನೆಲ್ಲಾ ಬಂಧಿಸಿಟ್ಟು ನೀರು ಹಾಯಿಸಲು ನಾಲೆಯ ಎಲ್ಲಾ ಬಾಗಿಲುಗಳನು ಏಕಕಾಲಕ್ಕೆ ಏಕಾಏಕಿ ತೆರೆದರೆ ನೀರು ನುಗ್ಗುವ ರಭಸ ಹೇಗಿರುತ್ತಿತ್ತೋ ಹಾಗೆ ನಮ್ಮ ತಡೆದ ನಗುವಿನ ಹೊರಹಾಕುವ ಕ್ರಿಯೆಯಿರುತ್ತಿತ್ತು. ಆ ತತ್ ಕ್ಷಣದ ನಗೆಜಲಪಾತದ ಭೋರ್ಗರೆತವು ಮುಂದೆ ಸಾಗಿಹೋದವರನ್ನೂ ತಲುಪಿ ಅವರು ಹಿಂತಿರುಗಿ ನೋಡುವಂತೆ ಮಾಡಿ ಅದುವರೆಗೆ ಅವರ ಮುಂದೆ ನಗದಂತೆ ಹಾಗೋ- ಹೀಗೋ, ಹೇಗೇಗೋ ಪ್ರಯತ್ನಪಟ್ಟು ನಟಿಸಿದ್ದೂ ಅಲ್ಲಿಗೆ ವ್ಯರ್ಥವಾಗುತ್ತಿತ್ತು. ಆ ಪರಿಯ ನಗೆ ನಮ್ಮದಾಗಿತ್ತು.

ಹೆಚ್ಚು ನಗುವ ಕಾರಣಕ್ಕಾಗಿಯೇ ಬಿ.ಎ ಪದವಿ ವ್ಯಾಸಂಗದ ಸಮಯದಲಿ ಲೋಲಳಿಂದ ನನ್ನನ್ನು ಬೇರಾಗಿಸಿ ಮತ್ತೊಂದು ಡೆಸ್ಕ್ನಲ್ಲಿ ಕೂರಿಸುವಲ್ಲಿ ಸಫಲರಾಗಿ ಆ ವಿಷಯದಲಿ ಗೆದ್ದಿದ್ದ ನಮ್ಮ ಗುರುಗಳಾದ ಬಿ.ಎನ್. ನಾರಾಯಣಗೌಡರು ನನ್ನ ನಗುವನ್ನು ನಿಲಿಸುವಲ್ಲಿ ಸೋತಿದ್ದರು. ಭೂಗೋಳಶಾಸ್ತ್ರ ಬೋಧಿಸುತ್ತಿದ್ದ ಈರೇಗೌಡರು ಇಷ್ಟು ನಗುವ ಜೀವಿ ಈ ಭೂಗೋಳದಲ್ಲಿಯೇ ಇರಲು ಸಾಧ್ಯವಿಲ್ಲ ಎಂದು ಭಾವಿಸಿ ತರಗತಿಯಿಂದಲೇ ಹೊರಕಳಿಸಿದ್ದರು. ಈ ಒಂದು ಕಾರಣಕ್ಕಾಗಿ ಅತ್ತಿದ್ದು ನನಗೆ ನೆನಪು. ಇದನ್ನು ಬಿಟ್ಟರೆ ಪರೀಕ್ಷೆಯಲಿ ಒಂದು ಅಂಕಕ್ಕೋ, ಹೆಚ್ಚೆಂದರೇ ಐದು ಅಂಕಕ್ಕೋ ಉತ್ತರ ತಪ್ಪಾಗಿ ಅಥವಾ ಗೊತ್ತಿಲ್ಲದ ಕಾರಣಕ್ಕಾಗಿ ಬಿಟ್ಟಾಗ ಅಳುತ್ತಿದ್ದ ಪ್ರಮಾಣವ ನೀವೇನಾದರೂ ನೋಡಿದ್ದರೆ ಅದ ಕಂಡು ನೀವು ನಗುತ್ತಿದ್ದಿರಿ ಬಿಡಿ. ಹಾಗಿತ್ತು ನಗೆಯೊಡಲ ಅಳು!.

ಇದೀಗ ನೆನಪಾಗುತಿದೆ ಪ್ರೌಢಶಾಲೆಯಲಿ ನನಗೆ ಓದೆಂದರೆ ಅಷ್ಟಕ್ಕಷ್ಟೇ ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರಗಳ ಭೇದವರಿಯದ, ಗಣಿತದ ನೋಟ್ ಪುಸ್ತಕವೇ ಕಳೆದುಹೋದರೂ ಭಯಬೀಳದೇ ನಿರಾತಂಕವಾಗಿ ಎಸ್. ಎಸ್. ಎಲ್. ಸಿ. ಪರೀಕ್ಷೆಯ ಬರೆದ ಕಾಲವದು. ಆ ಸಮಯದಲಿ ಯಾವಾಗಲೂ ಚಿತ್ರನಟಿ ಮಾಲಾಶ್ರೀ ಅವರನೇ ಲೆಕ್ಕದ ಹಣ್ಣು ಮಾರುವ, ಇಲ್ಲವೇ ಕೊಳ್ಳುವ ಹುಡುಗಿಯಾಗಿ ನಮ್ಮ ಕಣ್ಮುಂದೆ ನಿಲಿಸಿ ಗಣಿತ ಬೋಧನೆ ಮಾಡುತ್ತಿದ್ದ ದಿವಂಗತ ಹನುಮಂತೇಗೌಡರು ನಾನು ಹೆಚ್ಚು ನಗುತ್ತಿದ್ದ ಕಾರಣಕ್ಕಾಗಿ ಅವರು ಕೂರುತ್ತಿದ್ದ ಕೊಠಡಿಗೆ ಕರೆಸಿ ಮುಂದೊಂದು ದಿನ ಅಳುತ್ತೀಯ ಆಗ ನನ್ನ ನೆನಪುಮಾಡಿಕೋ ಎಂದು ಬೈದು ತಮ್ಮ ಅಸಹನೆಯನ್ನು ಹೊರಹಾಕಿದ್ದರು. ಆದರೆ ಅವರ ಭವಿಷ್ಯ ನಿಜವಾಗಲಿಲ್ಲ. ಏಕೆಂದರೆ ಕಷ್ಟಗಳೆಂದೂ ನನ್ನ ನಗುವನ್ನು ಕೊಲ್ಲಲಾಗಲಿಲ್ಲ. ಏಕೆಂದರೆ ಹಾಸ್ಯಗುಣಧರ್ಮ ಬರುವುದೂ ಅಷ್ಟು ಸುಲಭವಲ್ಲ ಇನ್ನು ಬಂದಮೇಲೆ ಹೋಗಲಾದೀತೆ!?

ಪಿ.ಯು.ಸಿ ಗೆ ಸೇರಿದಾಗ ರಮೇಶ್ ಎಂಬ ಅರ್ಥಶಾಸ್ತ್ರ ಉಪನ್ಯಾಸಕರ ಮೋಟಿವೇಷನ್ ಸ್ಪೀಚ್ ನನಗೆ ಅದಾವ ಶಕ್ತಿಯ ತುಂಬಿತೋ ಅಂದಿನಿಂದಲೇ ಓದಿನಲ್ಲಿ ಹಿಂದೆ ಎಂಬ ಮಾತು ಮರೆತೋಯಿತು. ರಮೇಶ್ ಅವರ ಪಾಠದ ನಡುವೆ ನಾನು ಮತ್ತು ಲೋಲ ಪರಸ್ಪರರ ಬದಲಾದ ಒಂದೊಂದು ಚಪ್ಪಲಿಯನೇ ಧರಿಸಿ ಆರಾಮಾಗಿ ಇಡೀದಿನ ತರಗತಿ, ಆಟದ ಮೈದಾನದಲಿ ಓಡಾಡಿದ್ದೆವು….ನಮ್ಮ ನಗು, ನಗೆಗೆ ಕಾರಣ, ನಗೆಗೆ ಬೇಕಾದ ಮಾತು ಅದು ಹೇಗೋ ನಮ್ಮ ಬುಟ್ಟಿಯಲಿ ಬಂದು ಬೀಳುತ್ತಿತ್ತು.

ಈ ನಮ್ಮ ನಗೆ ಗುಂಪಿಗೆ ಕಿರಣ್, ಚಿನ್ನು, ಶಂಕರ್, ನಾಗರಾಜು, ಮಂಜುನಾಥ್, ನಮ್ಮೆಲ್ಲರನು ಅಗಲಿದ ಸುಧಾಕರ್, ಪದವಿ ಹಂತದಲಿ ಸೇರಿದರು. ಮಂಜುನಾಥ್ ಹೆಸರು ಕರೆಯಲೂ ಕ಼ಷ್ಟವಾಗುತಿದೆ ಕಾರಣ ನಾವಾತನಿಗಿಟ್ಟ ಹೆಸರು ʼಗೊಂದ್ಲʼ. ಮಾತು ಮಾತಿಗೂ ಅದು ಹೊಂದಿಕೆಯಾಗಲಿ ಬಿಡಲಿ “ ಏ ಗೊಂದ್ಲ ಮಾಡ್ಕಬೇಡಿ “ ಅಂತ ಆತ ಅಂದೂ…. ಅಂದೂ…. ಕಡೆಗೆ ಆತನ ಹೆಸರೇ ಗೊಂದ್ಲ ಅಂತಾಯಿತು. ಆಗ ಆತ ಗೊಂದ್ಲ ಎಂಬ ಪದವನು ಮತ್ತೆ ಬಳಸುವುದನೇ ನಿಲಿಸಿದ. ಆದರೆ ಸ್ನೇಹಿತರೆಲ್ಲ ಸಿಕ್ಕಾಗ ಅಕಸ್ಮಾತ್ ಮಂಜು ಸಿಕ್ಕಿದ್ದ ಅಂತೇನಾದರೂ ಹೇಳಿದರೆ ನಮಗೆ ಅರೆಕ್ಷಣ ಗೊಂದ್ಲ ಆಗುತ್ತೆ. ಆಗ ನೆನಪಾಗುತ್ತೇ ಓ ಗೊಂದ್ಲ ಸಿಕ್ಕಿದ್ನ ಅಂತಾ!!!!

ಆದರೆ ಪದವಿಯ ಹಂತದಲಿ ನಾವೆಂದೂ ನಗದ ಒಂದು ತರಗತಿ ಎಂದರೆ ಅದು ನೆಚ್ಚಿನ ಗುರುಗಳಾದ ಚಿಕ್ಕಮರಳಿ ಬೋರೇಗೌಡ ಅವರ ತರಗತಿ. ಅವರು ವಿದ್ಯಾರ್ಥಿಗಳನೂ ಬೈಯ್ಯಲು ಕಾಲಾವಕಾಶ ತೆಗೆದುಕೊಂಡು ಯೋಚಿಸಿ ಬೈದು ತಿದ್ದುತ್ತಿದ್ದರು. ಆ ಸಹನೆ ತಾಳ್ಮೆಯು ನಮಗೆ ಸಿದ್ಧಿಸಲೇ ಇಲ್ಲ ಬಿಡಿ. ಆದರೆ ವಾರಕ್ಕೊಮ್ಮೆಯೋ ಅಥವಾ ಎರಡುಬಾರಿಯೋ ಅವರ ತರಗತಿಯಲಿ ಏನೋ ವಿಷಯವನು ಹೇಳಿ ನಗುತ್ತಿದ್ದರು. ನಾನು ಲೋಲ ಸದಾ ಪಕ್ಜದಲ್ಲಿಯೇ ಕುಳಿತುಕೊಳ್ಳುತ್ತಿದ್ದುದು ಪಕ್ಕಾ. ಹಾಗಾಗಿ ಆಗ ಲೋಲಳಿಗೆ “ ಲೋ ಸರ್ ನಗ್ತಿದಾರೇ ಇದೇ ಒಂದು ಚಾನ್ಸ್ ನಕ್ಕುಬಿಡು ಅಂದೆ. ಅದಕ್ಕಾಕೆ ಅವರ ಜೋಕ್ ನಗು ಬರ್ತಿಲ್ವೇ ಅಂದಿದ್ದಕ್ಕೆ ನಮ್ಮ ಯಾವುದಾದರೂ ಹಳೆಯ ಜೋಕನ್ನೇ ನೆನೆದು ನಕ್ಕುಬಿಡೋಣ ಅಂದೇ “ ಆ ಮಾತೇ ಜೋಕಾಗಿ ಅಂದಿನಿಂದ ಅದೇ ಕಾಯಕ ಮುಂದುವರಿಯಿತು.

ಹೀಗೆ ವೆಂಕಟೇಶ್, ಚಿಕ್ಕಸಿದ್ದೇಗೌಡರು, ಚಂದ್ರಶೇಖರಯ್ಯ, ಸುಜಾತ, ವಿಶಾಲಾಕ್ಷಿ, ಪಾರ್ವತಿ, ಗೋವಿಂದೇಗೌಡ, ನೀ.ಗಿರೀಗೌಡ, ನಂಜುಂಡಯ್ಯ, ಪಾರ್ಥಸಾರಥಿ, ಮೊದಲಾದವರ ಗರಡಿಯಲಿ ಪಳಗಿದ ನಾವುಗಳು ಪಕ್ಕೆಂದು ನಕ್ಕ ಕ಼್ಷಣಗಳನು ಎಣಿಸಿದರೆ ಬಹುಶಃ ನಮ್ಮ ಜೀವಿತಾವಧಿಯ ಹಲವು ವರ್ಷಗಳಷ್ಟು ಕಾಲ ನಗಲು ಮತ್ತು ಓದಲು ಮಾತ್ರವೇ ಬಳಸಿದೆವೆಂಬುದೇ ಸತ್ಯ. ಈಗಲೂ ನಮ್ಮೆಲ್ಲರಲಿ “ ಹಾಸ” ಸ್ಥಾಯಿಭಾವ ಸದಾ ಜಾಗೃತವಾಗಿಯೇ ಇರುತ್ತದೆ. ನಗುವಿನ ಮಹತ್ತನ್ನು ತಿಳಿದ ನಾವು “ನಗದ ದಿನವೇ ನಷ್ಟವಾದ ದಿನ” ಎಂದು ನಂಬಿದವರು. ನಗದಿಗಿಂತ ನಗುವಿಗೇ ಬೆಲೆ ಕೊಟ್ಟ ಕಾರಣ ನಮ್ಮ ನಗುವೆಂಬ ಮಂದಾರ ಇಂದೂ ಬಾಡದಂತಿದೆ.

-ಸುಂದರಿ ಡಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x